ಎನ್ನೆದೆಯ ಬಿಸಿರಕ್ತ ಕುದಿಕುದಿಸಿ ಮಸಿಮಾಡಿ |
ನಾ೦ ಬರೆಯಬಲ್ಲೆನೆ ನಾನು ಕವಿಯು |
ವಿಶ್ವ ಜನನಿಯ ಗರ್ಭ ಮಾತೃಭೂಮಿಯ ಬಸಿರು |
ನಾನ್ ತಪಿಸುತಿಹೆ ಹೇಳಲಾವ ಪರಿಯು ||
ದುರ್ಬಲರ ಮರ್ದಿಸುತ ಪಶುಬಲದಿ ವರ್ಧಿಸುತ
ರಾಷ್ಟ್ರರಾಷ್ಟ್ರಗಳ ಸ್ವಾತಂತ್ರ್ಯ ಸೆಳೆಯುತ್ತ
ಸುಲಿಗೆ ಸಂಸ್ಕೃತಿಯೆಂದು ತಿಳಿದಿರುವ ಪಾಪಿಗಳ
ಮುರಿವ ಲೇಖನಿ ಬೇಕು ರಕ್ತವದಕೆ ಮಸಿ ||
ಸ್ವಾತಂತ್ರ್ಯ ಸ್ವಾತಂತ್ರ್ಯ ಸ್ವಾತಂತ್ರ್ಯ ಸ್ವಾತಂತ್ರ್ಯ
ಸ್ವಾತಂತ್ರ್ಯ ಯಜ್ಞದೊಳು ಬ೦ದೆನ್ನ ಬ೦ಧುಗಳ
ಮುದಿತ ಲೇಖನಿ ಬೇಕು ರಕ್ತವದಕೆ ಮಸಿ ||
ಎನ್ನ ಹೃದಯದ ಸ್ಫೂರ್ತಿ ಎನ್ನ ಜನತೆಯ ಶಕ್ತಿ
ಎನ್ನ ನಾಡಿಗೆ ಕೀರ್ತಿ ಹೆಚ್ಚಿಸಲ್ಕೆ
ಎಮ್ಮೊ೦ದಿಗರ ಬದುಕು ಬಾಳಾಗಿ ಬೆಳೆಗಿಸಲು
ಬಲಿತ ಲೇಖನಿ ಬೇಕು ರಕ್ತವದಕೆ ಮಸಿ ||
