(ಭಾಗ-5) ಪಡುವಣದ ಪ್ರವಾಸ: ಒಂದು ಪ್ರಯಾಣ, ಸಾವಿರ ನೆನಪುಗಳು!

(ಭಾಗ-5) ಪಡುವಣದ ಪ್ರವಾಸ: ಒಂದು ಪ್ರಯಾಣ, ಸಾವಿರ ನೆನಪುಗಳು!

ಅಧ್ಯಾಯ 2

ಅಮೆರಿಕಾ ಪ್ರವಾಸ

ಅಮೆರಿಕಾ ಎಂಬ ಹೆಸರೇ ನಮ್ಮಲ್ಲಿ ರೋಮಾಂಚನ ಉಂಟು ಮಾಡುತ್ತದೆ. ಅಂಥ ಅದ್ಭುತವಾದ ದೇಶ ಅದು. ನಾನು ಹೈಸ್ಕೂಲಿನಲ್ಲಿ ಓದುತ್ತಿರುವಾಗಲೇ ನಮ್ಮ ಭಾವನ ತಂಗಿ ಅಮೆರಿಕಾಗೆ ಮದುವೆಯಾಗಿ ಹೋಗಿದ್ದಳು. ಅವಳು ಊರಿಗೆ ಬಂದಾಗಲೆಲ್ಲಾ ಅಲ್ಲಿಂದ ಅಕ್ಕನಿಗೆ ತುಂಬಾ ಸಾಮಾನು ತರುತ್ತಿದ್ದಳು. ಮಕ್ಕಳಿಗೆ ಡ್ರೆಸ್ ಅಕ್ಕನಿಗೆ ಸೀರೆ, ಭಾವನಿಗೆ ಶರ್ಟು, ವಿದೇಶಿ ಪರ್‌ಪ್ಯೂಮ್, ನೇಲ್ ಪಾಲಿಶ್, ಚಾಕಲೇಟ್ ಸಿಕ್ಕರೂ ವಿದೇಶಿ ಚಾಕಲೇಟ್ ತಿಂದೆವಲ್ಲಾ ಜನ್ಮ ಸಾರ್ಥಕವಾಯಿತು ಎನ್ನುವ ಸಂಭ್ರಮ. ಆಗೆಲ್ಲಾ ಅಮೇರಿಕಾಗೆ ಹೋಗುವವರ ಸಂಖ್ಯೆ ತುಂಬಾನೆ ಕಡಿಮೆ ಇತ್ತು. ಅಮೆರಿಕಾದಲ್ಲಿರುವ ಗಂಡು ಸಿಕ್ಕರೆ ಏನೋ ಹಿಂದಿನ ಜನ್ಮದ ಪುಣ್ಯ ಮಾಡಿರಬೇಕು. ಎನ್ನುತ್ತಿದ್ದರು. ತಂದೆ ತಾಯಿಯರು ಜ್ಯೋತಿಷಿಗಳಲ್ಲಿ ಹೋಗಿ ತನ್ನ ಮಗನಿಗೆ ಅಥವಾ ಮಗಳಿಗೆ ವಿದೇಶಕ್ಕೆ ಹೋಗುವ ಯೋಗ ಇದೆಯಾ? ಎಂದು ಕೇಳುತ್ತಿದ್ದರು. ಆಗ ಆಮೇರಿಕಾದಿಂದ ತುಂಬಾ ಅಪರೂಪಕ್ಕೆ ಬಂದರೆ ಅವರಿಗೆ ಭವ್ಯವಾದ ಸ್ವಾಗತ ಮತ್ತು ಮೃಷ್ಟಾನ್ನ ಭೋಜನ, ದುಬಾರಿ ಉಡುಗೊರೆ ಯಾರಿಗುಂಟು ಯಾರಿಗಿಲ್ಲ. ಆದರೆ ನಾನು ಮಾತ್ರ ಎಂದೂ ಅಮೇರಿಕಾಕ್ಕೆ ಹೋಗಬೇಕೆಂದು ಆಸೆಪಟ್ಟವಳಲ್ಲ. ಅದು ನನ್ನ ಯೋಚನೆಗೂ ನಿಲುಕದ ವಿಷಯವಾಗಿತ್ತು.

ಮುಂದೆ ನಾನು ಬಿ.ಇಡಿ. ಮುಗಿಸಿದೆ. ಒಂದು ಹೆಣ್ಣು ಒಂದು ಗಂಡು ಮಗುವಾಯಿತು. ಇವರ ಗೆಳೆಯ ಅನಿಲ ಗಾಂವಕರ ಅಮೇರಿಕಾದಲ್ಲಿ ಇದ್ದ. ಅವನು ಇವರಿಗೆ ಅಲ್ಲಿಗೆ ಬರುವಂತೆ ಒತ್ತಾಯ ಮಾಡುತ್ತಿದ್ದ. ಅದೇ ರೀತಿ ಇವರಿಗೆ ಅಮೆರಿಕಾ ಹೋಗುವ ಅವಕಾಶ ಎರಡು ಬಾರಿ ಒದಗಿ ಬಂದಿತ್ತು. ಇವರು ಅಮೆರಿಕೆಯ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣಕ್ಕೆ ಹೋಗಬೇಕಾದರೆ ಒಂದು ಕೆಲಸಕ್ಕೆ ರಾಜಿನಾಮೆ ಕೊಡಬೇಕಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ನನ್ನನ್ನು ಮಕ್ಕಳನ್ನು ತವರಲ್ಲಿ ಬಿಟ್ಟು ಹೋಗಲು ಇವರಿಗೆ ಮನಸ್ಸು ಆಗಲಿಲ್ಲ. ಹೀಗಾಗಿ ಬಂದ ಅವಕಾಶವನ್ನು ಬಿಟ್ಟು ಇಲ್ಲಿಯೇ ಕಾಲೇಜು ಅಧ್ಯಾಪಕರಾಗಿ ಕೆಲಸ ಮುಂದುವರೆಸಿದರು.
ನಮ್ಮ ಕೆಲವು ಬಂಧುಗಳು ಅಮೆರಿಕಾ ಹೋಗಿ ಬಂದರು. ಅವರು ಅಮೆರಿಕಾದಲ್ಲಿ ಹಾಗೆ ಹೀಗೆ ಎಂದು ವರ್ಣನೆ ಮಾಡುತ್ತಿದ್ದರು. ನಾನು ಅದನ್ನು ಕೇಳಿ ಸುಮ್ಮನಾಗಿದ್ದೆ.

ಆದರೆ ನಮ್ಮ ಮಕ್ಕಳಿಗೆ ಮಾತ್ರ ತಾವು ಓದಿ ದೊಡ್ಡವರಾಗಿ ನಮ್ಮ ತಂದೆ ತಾಯಿಯರನ್ನು ಅಮೆರಿಕಾಕ್ಕೆ ಬರಮಾಡಿಕೊಳ್ಳಬೇಕು ಎಂಬ ಆಸೆ ಪ್ರಬಲವಾಗಿತ್ತು. ನಾವು ಅವರಿಗೆ ನೀವು ಚೆನ್ನಾಗಿ ಓದಬೇಕು ಎಂಜನಿಯರ್, ಡಾಕ್ಟರ್ ಆಗಬೇಕು ಅಂದರೆ ಮಾತ್ರ ನಿಮ್ಮ ಆಶೆ ಈಡೇರುತ್ತದೆ ಎಂದು ಅವರಿಗೆ ಪ್ರೋತ್ಸಾಹ ನೀಡುತ್ತಿದ್ದೆವು. ಹೀಗಾಗಿಯೋ ಏನೋ ಮಕ್ಕಳಿಬ್ಬರೂ ಚಿಕ್ಕಂದಿನಿಂದಲೇ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಇಷ್ಟಪಡುತ್ತಿದ್ದರು. ಅವರ ಇಷ್ಟದಂತೆ ಇಬ್ಬರೂ ವಿದೇಶದಲ್ಲಿ ನೆಲೆಸಿದ್ದಾರೆ. ನನಗೇನೋ ನಮ್ಮ ದೇಶವೇ ಚೆನ್ನ ಎನಿಸುತ್ತದೆ. ಮಗ ಸತ್ಯಜೀತ ಬೆಂಗಳೂರಿನ ಆರ್. ವಿ. ಎಂಜಿನಿಯರಿಂಗ್ ಕಾಲೇಜಿನಲ್ಲಿ ತನ್ನ ವ್ಯಾಸಂಗವನ್ನು ಮುಗಿಸಿ ಸ್ವಲ್ಪ ದಿನ ವಿಪ್ರೊ ಕಂಪನಿಯಲ್ಲಿ ಕೆಲಸ ಮಾಡಿ, ನಂತರ ಜಿ. ಮೆಟ್ ಎಕ್ಸಾಂ ಕೊಟ್ಟು ಎಮ್.ಎಸ್ ಮಾಡಲು ಅಮೆರಿಕಾಗೆ ತೆರಳಿದ್ದ. ಅಮೆರಿಕಾದ ನ್ಯೂ ಓರ್‌ಲಿಯನ್ಸ್ ಎನ್ನುವಲ್ಲಿ ಇದ್ದನು. ಅದು ಲುಸಿಯಾನಾ ಸ್ಟೇಟ್‌ನಲ್ಲಿ ಬರುತ್ತದೆ. ಆಗಲೇ ಅವನು ಅಲ್ಲಿಗೆ ಹೋಗಿ ಎರಡು ವರ್ಷಗಳು ಕಳೆದಿದ್ದವು. ನನಗಂತೂ ಮಗನನ್ನು ಬಿಟ್ಟಿರುವುದು ಕಷ್ಟವಾಗುತ್ತಿತ್ತು. ಅವನ ಓದು ಮುಗಿಯಲಿ ಎಂದು ಕಾಯುತ್ತಿದ್ದೆ. ಅಷ್ಟಕ್ಕೂ ಅವನ ಜೊತೆ ಇಂಟರ್‌ನೆಟ್‌ನ ಸೈಪ್‌ನಲ್ಲಿ ಅವನೊಡನೆ ಮಾತಾಡುತ್ತಿದ್ದೆ. ಪದೇ ಪದೇ ಪೋನ್‌ನಲ್ಲಿ ಸಹ ಮಾತನಾಡುತ್ತಾ ಇದ್ದೆವು. ಆದರೂ ಮಗನನ್ನು ತಬ್ಬಿ ಮುದ್ದಾಡಬೇಕು, ಮಗ್ಗುಲಲ್ಲಿ ಮಲಗಿಸಿಕೊಳ್ಳಬೇಕು ಎಂಬ ಆಶೆ ಕಾಡುತ್ತಿತ್ತು. ಮಕ್ಕಳು ಎಷ್ಟೇ ದೊಡ್ಡವರಾದರೂ ತಾಯಿಗೆ ಮಾತ್ರ ಅವರು ಇನ್ನೂ ಚಿಕ್ಕವರೇ ತಾನೇ? ಅವನ ಓದು ಮುಗಿಯುತ್ತಿದ್ದಂತೆ ನಾನು ಒಂದು ಸಲ ಭಾರತಕ್ಕೆ ಬಂದು ಹೋಗು ಎಂದು ಹೇಳಿ, ಕಣ್ಣುಂಬಿಕೊಳ್ಳುತ್ತಿದ್ದೆ. ಅದಕ್ಕೆ ಅವನು ಅಮ್ಮಾ ನಾನು ಮೊದಲು ಕೆಲಸ ಹುಡುಕಿಕೊಳ್ಳಬೇಕು. ವೀಸಾ ತೊಂದರೆ ಇರುವುದರಿಂದ ನನಗೆ ಬರಲು ಆಗುವುದಿಲ್ಲ. ನನಗೂ ಸಹ ನಿಮ್ಮನ್ನು ನೋಡಬೇಕೆಂಬ ಆಸೆ ತುಂಬಾ ಆಗುತ್ತಿದೆ. ಭಾರತ ಎಂದ ಕೂಡಲೇ ಮೊದಲಿಗೆ ನನಗೆ ನೆನಪಿಗೆ ಬರುವುದು ನಿಮ್ಮ ಮುಖ, ಅದಕ್ಕೆ ನೀವೇ ಅಮೆರಿಕಾಕ್ಕೆ ಒಂದು ಸಲ ಬನ್ನಿ ಎಂದು ಪದೇ ಪದೇ ಹೇಳುತ್ತಿದ್ದ.

ಅವನು ಓದು ಮುಗಿಸಿ ಕೆಲಸ ಹುಡುಕಲು ಶಿಕಾಗೋ ನಗರಕ್ಕೆ ಬಂದನು. ಮತ್ತು ಬಂದ ಮಾರ್ಚ 2012 ತಿಂಗಳಲ್ಲಿ ಕೆಲಸಕ್ಕೆ ಸೇರಿದನು. ಏಪ್ರಿಲ್ ತಿಂಗಳಲ್ಲಿ ಸಂಬಳ ಕೈಗೆ ಬಂದೊಡನೆ ನಮಗಿಬ್ಬರಿಗೂ ಅನುಕೂಲವಾಗುವ ರೀತಿಯಲ್ಲಿ ಜುಲೈ 24 ಕ್ಕೆ ನಮಗೆ ಟಿಕೇಟ್ ಮಾಡಿಸಿದನು. ಮತ್ತು ಮೇ ತಿಂಗಳಲ್ಲಿ ಅಮೆರಿಕಾದ ಈಸ್ಟ್ ಕೋಸ್ಟ್ ಪ್ರವಾಸ ಮಾಡಲು ಅನುಕೂಲವಾಗುವಂತೆ ಚೈನೀಯರ ಒಂದು ಪ್ಯಾಕೇಜ್ ಟೂರನ್ನು 10 ದಿನಗಳಿಗೆ ಬುಕ್ ಮಾಡಿದನು. ನಾನು ಈ ಮೊದಲು ಅಮೇರಿಕಾದ
ಬಗ್ಗೆ ಜನರ ಬಾಯಿಯಿಂದಲೂ ಮತ್ತು ಪುಸ್ತಕಗಳನ್ನು ಓದಿ ತುಂಬಾ ತಿಳಿದುಕೊಂಡಿದ್ದೆ. ಆದರೆ ಈ ಮೊದಲು ನಾನು ಇಂಗ್ಲೆಂಡ್ ಸ್ಕಾಟ್‌ಲೆಂಡ್ ಎಲ್ಲಾ ನೋಡಿದ್ದರಿಂದ ಅಮೆರಿಕಾ ನೋಡಬೇಕೆನ್ನುವ ಮಹಾದಾಸೆಯೇನೂ ಇರಲಿಲ್ಲ. ಮಗನನ್ನು ನೋಡಬೇಕೆಂಬ ಹಂಬಲ ಮಾತ್ರ ತುಂಬಾ ಇತ್ತು.

ಪೂರ್ವತಯಾರಿ :

ಈ ಮೊದಲು ಇಂಗ್ಲೆಂಡ್ ಪ್ರವಾಸ ಕೈಗೊಂಡ ಅನುಭವವಿದ್ದುದರಿಂದ ಈ ಬಾರಿ ಅಮೇರಿಕಾ ಪ್ರವಾಸದ ತಯಾರಿಗೆ ಕಷ್ಟವೇನೂ ಆಗಲಿಲ್ಲ. ಪಾಸ್ ಫೋರ್ಟ್ ‘ಇದ್ದುದರಿಂದ ಮೇನಲ್ಲಿ ವೀಸಾಕ್ಕೆ ಅರ್ಜಿ ಹಾಕಿದೆವು. ಅದರ ಜೊತೆಯಲ್ಲಿ ಇವರದು ಸರಕಾರಿ ಕೆಲಸವಾದ್ದರಿಂದ ಎರಡು ತಿಂಗಳ ರಜೆ ಮಂಜೂರಾತಿಗೆ ಅರ್ಜಿ ಹಾಕಿದೆವು. ಮೇ ತಿಂಗಳ ಮಗ ಸ್ಪಾನ್ಸರ್ ಪತ್ರ ಮತ್ತು ಅಗತ್ಯ ಕಾಗದ ಪತ್ರಗಳನ್ನು ಕಳುಹಿಸಿದನು. ಮೇ ತಿಂಗಳಲ್ಲಿ ಕೊನೆಯಲ್ಲಿ ವೀಸಾ ಸಂದರ್ಶನಕ್ಕೆ ಚೆನ್ನೈಗೆ ಹೋಗಿ ವೀಸಾ ಕಚೇರಿಯ ಸಮೀಪವಿರುವ ಹೋಟೆಲ್‌ವೊಂದರಲ್ಲಿ ಉಳಿದುಕೊಂಡೆವು. ಮುಂಜಾನೆ ಬೇಗ ಎದ್ದು ಕಾಗದ ಪತ್ರಗಳನ್ನು ವ್ಯವಸ್ಥಿತವಾಗಿ ಜೋಡಿಸಿಕೊಂಡು 7 ಗಂಟೆಗೆ ವೀಸಾ ಆಫಿಸಿಗೆ ಹೋದೆವು. 7.30 ಕ್ಕೆ ನಮ್ಮ ವೆರಿಫಿಕೇಶನ್ ಶುರುವಾಯಿತು. ನನಗಂತೂ ಎದೆ ಡವ ಡವ ಹೊಡೆದುಕೊಳ್ಳುತ್ತಿತ್ತು. ವೀಸಾ ಸಿಗುತ್ತದೆಯೋ ಇಲ್ಲವೋ ಎಂದು ಭಯವಾಯಿತು. ಇವರು ಎಲ್ಲವೂ ಸರಿಯಾಗಿದೆ ಏನು ತೊಂದರೆಯಾಗುವುದಿಲ್ಲ. ನರ್ವಸ್ ಆಗಬೇಡ ಎಂದು ಧೈರ್ಯ ಹೇಳುತ್ತಿದ್ದರು. ಅಲ್ಲಿ ಅವರು ನಮ್ಮ ಬಾಡಿ ಲಾಂಗ್ಜ್ ಮತ್ತು ನಮ್ಮ ಚಲನವಲನಗಳನ್ನು ಗಮನಿಸುತ್ತಾ ಇರುತ್ತಾರಂತೆ ಎಂದು ಸಮಾಧಾನ ಹೇಳಿದರು. ಲಂಡನ್ ವೀಸಾ ಬೆಂಗಳೂರಿನಲ್ಲೇ ಇತ್ತು. ಆಗ ಮಗ ಬೇರೆ ಜೊತೆಯಲ್ಲಿದ್ದ. ಎಲ್ಲರೂ ಕನ್ನಡದವರೇ ಆಗಿದ್ದರು. ಮದ್ರಾಸಿನ ವೀಸಾ ಆಫೀಸಿನಲ್ಲಿ ತುಂಬಾ ಬಿಗಿ ಮತ್ತು ಕಿರಿ ಕಿರಿ ಮಾಡುತ್ತಾರೆ ಎಂದು ಕೇಳಿದ್ದೇ ಹೀಗಾಗಿ ಭಯವಾಗಿತ್ತು. ಕೊನೆಗೂ ನಮ್ಮನ್ನು ಕರೆದರು. ನಮ್ಮ ಸಂದರ್ಶನ ತೆಗೆದುಕೊಳ್ಳುವವನು ಎಳೆ ಪ್ರಾಯದ ಸುಂದರ ನಗುಮೊಗದ ವಿದೇಶಿ ಯುವಕ. ಏಕೋ ಏನೋ ಅವನನ್ನು ಕಂಡ ಮೇಲೆ ಸ್ವಲ್ಪ ಧೈರ್ಯ ಬಂತು. ಅವನು ನಮಗೆ ಕೆಲವು ಪ್ರಶ್ನೆಗಳನ್ನು ಕೇಳಿದನು. ನಾವು ಅದಕ್ಕೆ ಸರಿಯಾಗಿ ಉತ್ತರಿಸಿದೆವು.

ನಾವು ಮೊದಲು ಒಂದು ಸಲ ಲಂಡನ್ನಿಗೆ ಹೋಗಿ ಬಂದಿದ್ದರಿಂದ ಮತ್ತು ಇವರು ಸರಕಾರಿ ಕೆಲಸದಲ್ಲಿ ಇರುವುದರಿಂದ ನಮಗೆ ಹೆಚ್ಚಿನ ಪ್ರಶ್ನೆ ಕೇಳಲಿಲ್ಲ. ಮತ್ತು ಅವನೇ ಯು ಗೋಟ್ ವಿಸಾ ಎಂದು ಹೇಳಿದನು. ಇದರಿಂದ ನಮಗೆ ಸಮಾಧಾನವಾಯಿತು. ಅಂದೇ ಬೆಂಗಳೂರಿಗೆ ಬಂದು ಮಾರನೆಯ ದಿನ ಧಾರವಾಡಕ್ಕೆ ಬಂದೆವು. ಎರಡೇ ದಿನದಲ್ಲಿ ನಮ್ಮ ವೀಸಾ ನಮ್ಮ ಕೈ ಸೇರಿತು. ನಮಗೆ 10 ವರ್ಷದ ವೀಸಾ ಕೊಟ್ಟಿದ್ದರು.

ಅಮೆರಿಕಾದಿಂದ ವಾಪಸ ಬರುವಾಗ ಲಂಡನ್ನಿಗೆ ಮಗಳ ಬಳಿ ಹೋಗಿ ಬರುವುದು ಇದ್ದದ್ದರಿಂದ ನಮಗೆ ಲಂಡನ್ ವೀಸಾ ಸಹ ಪಡೆದುಕೊಳ್ಳಬೇಕಿತ್ತು. ಅದಕ್ಕಾಗಿ ಮತ್ತೆ ನಾವು ಬೆಂಗಳೂರಿಗೆ ಹೋಗಿ ವೀಸಾ ಪಡೆದುಕೊಂಡೆವು. ಬೆಂಗಳೂರಿನಿಂದ ಬರುವಾಗಲೇ ಅಮೇರಿಕಾ ಟೂರಿಸ್ಟಿಗೆ ಹೋಗಿ ಚೆಕ್ ಇನ್ ಮತ್ತು ಕೆರಿ ಬ್ಯಾಗನ್ನು ಖರೀದಿ ಮಾಡಿದೆವು. ಅಮೆರಿಕಾದಲ್ಲಿ ತುಂಬಾ ಜನ ಬಂಧುಗಳು ಮತ್ತು ಗೆಳೆಯರು ಇರುವುದರಿಂದ ಅವರಿಗಾಗಿ ಏನು ತೆಗೆದುಕೊಂಡು ಹೋಗುವುದು ಎಂದು ವಿಚಾರ ಮಾಡಿ ಒಂದು 10 ಕೆ.ಜಿ. ಬ್ಯಾಡಗಿ ಮೆಣಸಿನ ಪುಡಿ ಮಾಡಿಸಿ ಎಲ್ಲರಿಗೂ ಅರ್ಧ ಕೆ.ಜಿ ಯಂತೆ ಮೆಣಸಿನಪುಡಿ ಪ್ಯಾಕ್ ಮಾಡಿಕೊಂಡೆ. ಅದರಂತೆ ಗರಂ ಮಸಾಲಾ ಪುಡಿ, ಶೇಂಗಾ ಚಟ್ನ ಪುಡಿ, ಕಷಾಯ ಪುಡಿ, ಧಾರಾವಾಡ ಪೇಡಾ ಮತ್ತು ಅವರಿಗಾಗಿ ಸಣ್ಣ ಪುಟ್ಟ ಉಡುಗೊರೆಯನ್ನು ತೆಗೆದುಕೊಂಡು ಹೋಗುವುದು ಎಂದು ವಿಚಾರ ಮಾಡಿ ಪಟ್ಟಿ ಮಾಡಿಕೊಂಡೆ ಮತ್ತು ಪ್ರವಾಸದ ಸಮಯದಲ್ಲಿ ಉಪಯೋಗಿಸಲು ಅನುಕೂಲವಾಗುವಂತ ಬಟ್ಟೆಗಳ ಖರೀದಿ ಆಯಿತು. ಹಾಗೆ ಸಣ್ಣ ಪುಟ್ಟ ಕಾಯಿಲೆಗಳು ಬಂದರೆ ಅಲ್ಲಿ ಡಾಕ್ಟರ ನಮ್ಮನ್ನು ಪರೀಕ್ಷೆ ಮಾಡುವುದಿಲ್ಲ. ಅದಕ್ಕಾಗಿ ಹೆಲ್ತ್ ಇನ್ಸೂರೆನ್ಸ್ ಬೇಕಾಗುತ್ತದೆ. ಅದಕ್ಕಾಗಿ ನಾವು ಆರೋಗ್ಯ ವಿಮೆ ಕೂಡ ಮಾಡಿಕೊಂಡಿದ್ದೆವು. ‘ಜ್ವರ, ತಂಡಿ, ತಲೆನೋವು, ಭೇದಿಗೆಂದು ಇಲ್ಲಿಯ ಡಾಕ್ಟರನ್ನು ಸಂಪರ್ಕಿಸಿ ಔಷಧ ತೆಗೆದುಕೊಂಡೆವು. ನಮಗೆ ಒಬ್ಬರಿಗೆ 23 ಕೆ.ಜಿ. ಎರಡು ಬ್ಯಾಗ್ ಒಯ್ಯಲು ಅವಕಾಶವಿತ್ತು. ಅಮೆರಿಕಾದಲ್ಲಿರುವವರ ಸಂಬಂಧಿಗಳು ತಮ್ಮವರಿಗೆ ಕಳಿಸಿದ ಸಾಮಾನುಗಳ ಭಾರವೇ 10 ಕೆ.ಜಿ. ಮೇಲಾಗಿತ್ತು. ನನ್ನ ಮಗನೋ ಹೆಚ್ಚು ಸಾಮಾನು ಮಾಡಿಕೊಳ್ಳಬೇಡಿ.ತೊಂದರೆಯಾಗುತ್ತದೆ ಎಂದು ಪದೇ ಪದೇ ಹೇಳುತ್ತಿದ್ದ. ಮಗಳು ಸಹ ಅಮ್ಮಾನನಗಾಗಿ ಏನೂ ತರುವುದು ಬೇಡ; ಇಲ್ಲಿಯೇ ಬಂದಾಗ ಮಾಡಿಕೊಡುವೆಯಂತೆಎಂದು ಹೇಳಿದ್ದಳು. ಆದರೂ ಬರೀ ತಿಂಡಿಯದ್ದೇ ಎರಡು ಸೂಟಕೇಸ್ ಆಗಿಬಿಟ್ಟಿತ್ತು.ಅಯ್ಯೋ ಎಲ್ಲ ಸಾಮಾನುಗಳನ್ನು ಹೇಗೆ ತೆಗೆದುಕೊಂಡು ಹೋಗುವುದುಏರ್‌ಪೋರ್ಟಿನಲ್ಲಿ ಅಳತೆ ಮಾಡುವಾಗ ತೂಕ ಹೆಚ್ಚಾಗಿ ಸಾಮಾನು ಬಿಸಾಡುವಪರಿಸ್ಥಿತಿ ಬಂದರೆ ಎಂದು ಭಯವಾಗುತ್ತಿತ್ತು. ಆಗ ನಮ್ಮ ಅಕ್ಕ ಎರಡು ದಿನ ಮೊದಲೇಬಂದು ಎಲ್ಲಾ ಸಾಮಾನುಗಳನ್ನು ಚೆನ್ನಾಗಿ ಲೀಕ್ ಆಗದಂತೆ ಪ್ಯಾಕ್ ಮಾಡಿ ಅಚ್ಚುಕಟ್ಟಾಗಿಸೂಟ್‌ಕೇಸ್‌ನಲ್ಲಿ ತುಂಬಿಕೊಟ್ಟರು ಮತ್ತು ಎಲ್ಲ ಪ್ಯಾಕುಗಳ ಮೇಲೆ ಅವರವರಹೆಸರುಗಳನ್ನು ಬರೆದುಕೊಟ್ಟರು. ಪ್ರವಾಸದ ಆರಂಭ ನಾವು ಧಾರವಾಡದಿಂದ ಜುಲೈ23 ರ ರಾತ್ರಿ ಬಸ್ಸಿನಲ್ಲಿ ಮುಂಬಯಿಗೆ ಹೊರಟೆವು. ಬಸ್ಸ್ಟ್ಯಾಂಡಿಗೆ ಅಕ್ಕ ಮತ್ತುನಿತೀಶ ಬಂದಿದ್ದರು. ಇವರ ಗೆಳೆಯರು ಮತ್ತು ಆಫೀಸಿನವರು ಬಂದು ಶುಭಹಾರೈಸಿ ಬೀಳ್ಕೊಟ್ಟರು. ಬೆಳಿಗ್ಗೆ ಮುಂಬಯಿ ತಲುಪಿದಾಗ ನಮ್ಮ ಸಂಬಂಧಿಕರುನಮಗಾಗಿ ಕಾಯುತ್ತಾ ಇದ್ದರು. ನಾವು ಅವರ ಮನೆಗೆ ಹೋಗಿ ವಿಶ್ರಾಂತಿ ತೆಗೆದುಕೊಂಡೆವು.ಮಾರನೆಯ ದಿನ ಬೆಳಿಗ್ಗೆ 4 ಗಂಟೆಗೆ ನಮ್ಮ ವಿಮಾನ ಇತ್ತು. ನಾವು ರಾತ್ರಿ 12 ಗಂಟೆಗೆ
ಮನೆ ಬಿಟ್ಟು ಕಾರಿನಲ್ಲಿ ಇಡೀ ಬಾಂಬೆ ಸುತ್ತಾಡಿಸಿದೆವು. ಅಲ್ಲಿ ನಾವು ತುಂಬಾ ಹಿಂದಿ ಸಿನೇಮಾ ನಟರ ಮನೆಗಳನ್ನು ನೋಡಿದೆವು. ರಾತ್ರಿಯಲ್ಲಿ ಮುಂಬಯಿ ಪಟ್ಟಣ ನೋಡುವುದು ‘ಸ್ವರ್ಗ’ ನೋಡಿದಂತೆ ಅನಿಸುತ್ತಿತ್ತು. ಸುಮಾರು 2 ಗಂಟೆ ಸುಮಾರಿಗೆ ನಮ್ಮನ್ನು ಶಿವಾಜಿ ವಿಮಾನ ನಿಲ್ದಾಣಕ್ಕೆ ಬಿಟ್ಟನು.

ನಾವು ವಿಮಾನ ನಿಲ್ದಾಣದ ಒಳಗೆ ತಳ್ಳುವ ಗಾಡಿಯಲ್ಲಿ ಸಾಮಾನು ತುಂಬಿಕೊಂಡು ಬಂದೆವು, ಮತ್ತು ಚೆಕ್ ಇನ್ ಕೌಂಟರ್‌ಗೆ ಹೋಗಿ ಚೆಕ್ ಇನ್ ಮಾಡಿಸಿಕೊಂಡೆವು. ನಂತರ ಸೆಕ್ಯೂರಿಟಿ ಚೆಕ್ ಮುಗಿಸಿ ಬೋಡಿರ್ಂಗ್ ಪಾಸ್ ತೆಗೆದುಕೊಂಡು ಕುಳಿತೆವು. ಬೆಳಗಿನ ಜಾವ 4.30ಕ್ಕೆ ಮುಂಬಯಿಂದ ಬಹರೇನ್‌ಗೆ ಹೋಗುವ ವಿಮಾನ ಏರಿ ಕುಳಿತೆವು. ಅಲ್ಲಿ ನಮಗೆ ಬಿಜ್‌ನೆಸ್ ಕ್ಲಾಸ್‌ನ್ನು ಕೊಟ್ಟಿದ್ದರು. ನನಗಂತೂ ತುಂಬಾ ನಿದ್ರೆ ಬರುತ್ತಿತ್ತು. ಇನ್ನೇನು ಹಾಯಾಗಿ ಮಲಗಬೇಕು ಎನ್ನುವಷ್ಟರಲ್ಲಿ ಸುಂದರ ಗಗನಸಖಿಯರು ಬೆಳಗ್ಗಿನ ಹೆವಿ ಬ್ರೇಕ್ ಫಾಸ್ಟ್‌ನ್ನು ತಂದರು. ಒಂದರ ಹಿಂದೆ ಒಂದರಂತೆ ಜೂಸು, ಪುಡ್, ಸಲಾಡ್, ಕೇಕ್, ಡ್ರೈಪುಡ್ ಏನು ತಿನ್ನಬೇಕು, ಏನು ಬೇಡ ಎಂದು ತೀರ್ಮಾನ ಮಾಡುವಷ್ಟರಲ್ಲಿ ಇನ್ನೊಂದನ್ನು ತರುತ್ತಿದ್ದರು. ಅಂತೂ ಸ್ವಲ್ಪ ಬೇಗ ತಿಂದು ಮಲಗುವಾ ಎಂದು ಸ್ವಲ್ಪ ಕಣ್ಣು ಮುಚ್ಚುವಷ್ಟರಲ್ಲೇ ಬಹರೇನ ಬಂದು ಮುಟ್ಟಿತು. ಆಗ ಬೆಳಗ್ಗಿನ 7 ಗಂಟೆ. ವಿಮಾನ ಇಳಿದು ಸೆಕ್ಯೂರಿಟಿ ಚೆಕ್ ಮುಗಿಸಿ, ಎರಡು ತಾಸು ಅಲ್ಲಿಯೇ ಸುತ್ತ ಮುತ್ತಲು ಸುತ್ತಾಡಿದೆವು. ಮಗನಿಗೆ ಪೋನ್ ಮಾಡಿ ಮಾತಾಡಿದೆವು. ಮಗ ನಮಗೆ ಕೂತು ಕೂತು ತೊಂದರೆಯಾಗಬಹುದೆಂದು ಕಟ್ ಜರ್ನಿ ಮಾಡಿಸಿದ. ಅದು ನಮಗೆ ಅನುಕೂಲವಾಯಿತು. ನಂತರ ನಾವು ಲಂಡನ್ನಿಗೆ ಹೋಗುವ ವಿಮಾನವನ್ನು ಏರಿದೆವು. ಅಲ್ಲಿಂದ ಲಂಡನ್ನಿಗೆ ನಾಲ್ಕು ತಾಸುಗಳ ಪ್ರವಾಸ, 12ರ ಸುಮಾರಿಗೆ ಲಂಡನ್ ತಲುಪಿದೆವು. ಅಲ್ಲಿ ನಮಗೆ ಒಂದೇ ತಾಸು ಸಮಯವಿತ್ತು. 3 ನೇ ಟರ್ಮಿನಲ್ಲಿನಿಂದ 5 ನೇ ಟರ್ಮಿನಲ್ಲಿಗೆ ಹೋಗಬೇಕಿತ್ತು. ಅದು ತುಂಬಾ ದೂರವಿತ್ತು. ನಮ್ಮನ್ನು ಬಸ್‌ನಲ್ಲಿ ಕರೆದುಕೊಂಡು ಹೋದರು. ಅಲ್ಲಿಂದ ಮುಂದೆ ನಾವು ಕ್ಯೂನಲ್ಲಿ ನಿಂತು ಸೆಕ್ಯೂರಿಟಿ ಚೆಕ್ ಮುಗಿಸಿ, ಮಗಳಿಗೆ ಒಂದು ಫೋನ್ ಮಾಡಿ ಸುಧಾರಿಸಿಕೊಳ್ಳುವಷ್ಟರಲ್ಲಿ ಅಮೆರಿಕಾದ ವಿಮಾನ ರೆಡಿಯಾಗಿತ್ತು. ಅದು ತುಂಬಾ ದೊಡ್ಡದಾದ ವಿಮಾನ. ಲಂಡನ್ನಿನಿಂದ ಅಮೇರಿಕಾ 8 ತಾಸಿನ ಪ್ರವಾಸ. ವಿಮಾನದ ತುಂಬಾ ವಿದೇಶೀಯರೇ ತುಂಬಿದ್ದರು. ಅಲ್ಲಿ ಊಟ ಸಹ ಪೂರ್ತಿ ವಿದೇಶೀಯೇ ಆಗಿತ್ತು. ಊಟ ರುಚಿಸಲಿಲ್ಲ. ಅವರು ನಮಗೊಂದು ಫಾರ್ಮ್‌ ಕೊಟ್ಟು ಕೆಲವು ವಿವರಗಳನ್ನು ತುಂಬಿಕೊಡುವಂತೆ ಹೇಳಿದರು. ಹಾಗೆ ಮಾಡಿದೆವು. ಸಾಯಂಕಾಲ ಸುಮಾರು 7.30 ಸುಮಾರಿಗೆ ಶಿಕಾಗೋ ವಿಮಾನ ನಿಲ್ದಾಣ ತಲುಪಿದೆವು. ಒಂದು ತಮಾಷೆ ಎಂದರೆ ನಮ್ಮ ಸುಮಾರು 24 ಗಂಟೆ ಪ್ರವಾಸದಲ್ಲಿ ಎಲ್ಲಿಯೂ ಕತ್ತಲು ಸಿಗಲಿಲ್ಲ. ಪೂರ್ತಿಯಾಗಿ ಬೆಳಕೇ ಇತ್ತು.

ವಿಮಾನದ ಮೇಲಿನಿಂದ ಕೆಳಗೆ ನೋಡಿದರೆ ಶಿಕಾಗೋ ನಗರ ತುಂಬಾ ಸುಂದರವಾಗಿ ಕಾಣುತ್ತಿತ್ತು.ಎಲ್ಲಿ ನೋಡಿದರಲ್ಲಿ ಹಸಿರೇ ಹಸಿರು. ಪ್ರಕೃತಿ ತನ್ನೆಲ್ಲಾ ಸೌಂದರ್ಯವನ್ನು ಅಮೆರಿಕಾಕ್ಕೆ ಧಾರೆ ಎರೆದಿದೆಯೇನೋ ಎಂಬಷ್ಟು ಸುಂದರವಾಗಿತ್ತು. ವಿಮಾನ ಇಳಿಯುತ್ತಿದ್ದಂತೆ ಆಯಾಸವೆಲ್ಲಾ ಮಾಯವಾಯಿತು. ಮಗನನ್ನು ನೋಡುತ್ತೇನಲ್ಲಾ ಎಂಬ ಉತ್ಸಾಹ ಹೆಚ್ಚಾಯಿತು. ಮಗ ಹೊರಗಡೆ ನಮಗಾಗಿ ಕಾಯುತ್ತಿದ್ದ. ನಾವು ವಿಮಾನದಿಂದ ನೇರವಾಗಿ ಕಟ್ಟಡದೊಳಗೆ ಬಂದೆವು. ಅಲ್ಲಿ ಸೆಕ್ಯೂರಿಟಿ ಚೆಕ್ ಮುಗಿಸಿ, ನಾವು ಚೆಕ್ ಇನ್ ಮಾಡಿದ ಸೂಟ್‌ಕೇಸ್‌ಗಳನ್ನು ಪಡೆದುಕೊಂಡು ವಿಮಾನ ನಿಲ್ದಾಣದ ಹೊರಗೆ ಬಂದೆವು. ನನ್ನ ಕಣ್ಣು ಮಗನಿಗಾಗಿ ಅತ್ತ ಇತ್ತ ಹುಡುಕತೊಡಗಿತು. ಆದರೆ ಅವನು ನಮ್ಮನ್ನು ನೋಡುವ ಆತುರದಲ್ಲಿ ಒಳಗಡೆ ಹೋಗಿ ಹುಡುಕುತ್ತಿದ್ದ. ನಾವು ಹೊರಗಡೆ ಅಂದರೆ ಕಾರು ಓಡಾಡುವ ಜಾಗದಲ್ಲಿ ಬಂದು ನಿಂತಿದ್ದೆವು. ಪೋನ್ ಮಾಡುವಾ ಎಂದರೆ ನಾವು ಇಂಡಿಯಾದಿಂದ ತೆಗೆದುಕೊಂಡು ಬಂದಿದ್ದ ಮೆಟ್ರಿಕ್ಸ್ ಫೋನ್ ನಂಬರ್ ಎಕ್ಟಿವೇಟ್ ಆಗಿರಲಿಲ್ಲ. ಹೀಗಾಗಿ ನಮಗೆ ಮಗನನ್ನು ಸಂಪರ್ಕಿಸುವುದು ಹೇಗೆ ಎನ್ನುವುದು ತಿಳಿಯದೇ ಅತ್ತ ಇತ್ತ ನೋಡುತ್ತಿರಬೇಕಾದರೆ ಅಲ್ಲೇ ಪಕ್ಕದಲ್ಲೆ ಒಬ್ಬ ಸೆಕ್ಯೂರಿಟಿ ಮೆನ್ ನಿಂತಿದ್ದ. ಇವರು ಅವನ ಬಳಿ ಹೋಗಿ ರಿಕ್ವೆಸ್ಟ್ ಮಾಡಿಕೊಂಡು ಅವನ ಫೋನ್ ತೆಗೆದುಕೊಂಡು ಮಗನಿಗೆ ಫೋನ್ ಮಾಡಿ ನಾವಿರುವ ಜಾಗ ಹೇಳಿದೆವು. ಆಗ ನಾವು ಮಗ ಈ ಕಡೆಯಿಂದ ಬರಬಹುದೇನೋ, ಆ ಕಡೆಯಿಂದ ಬರುತ್ತಾನೇನೋ ಎಂದು ಕಣ್ಣರಳಿಸಿ ಆ ಕಡೆ ಈ ಕಡೆ ನೋಡುತ್ತಾ ಇದ್ದರೆ, ಹಿಂದಿನಿಂದ ಯಾರೋ ನಮ್ಮನ್ನು ಗಟ್ಟಿಯಾಗಿ ಅಪ್ಪಿ ಹಿಡಿದಂತೆ ಆಯಿತು. ಹಿಂದಿರುಗಿ ನೋಡಿದರೆ ಮಗ ನಮ್ಮಿಬ್ಬರನ್ನು ಎರಡು ಕೈಯಲ್ಲಿ ತಬ್ಬಿ ಹಿಡಿದಿದ್ದ. ಅಯ್ಯೋ ಆ ಕ್ಷಣ ಮೈ ಜುಮ್ಮೆನಿಸುವ ಅನುಭವ ಈಗಲೂ ನೆನೆದರೆ ಮೈ ರೋಮಾಂಚನವಾಗುತ್ತದೆ. ಮತ್ತು ಕಣ್ಣಲ್ಲಿ ನೀರು ಬರುತ್ತದೆ. ನಮಗಂತೂ ಅವನನ್ನು ಎಷ್ಟು ಮುದ್ದಾಡಿದರೂ ಸಮಾಧಾನವಾಗುತ್ತಿರಲಿಲ್ಲ. ಎರಡು ವರ್ಷದ ಮೇಲೆ ನಮ್ಮನ್ನು ನೋಡಿ ಅವನಿಗೆ ಸ್ವಲ್ಪ ಬೇಸರವಾಯಿತು. ಅಮ್ಮ ಅಪ್ಪ ನೀವಿಬ್ಬರೂ ತುಂಬಾ ಇಳಿದುಹೋಗಿದ್ದೀರಿ. ನಿಮ್ಮ ಆರೋಗ್ಯದ ಬಗ್ಗೆ ಸರಿಯಾಗಿ ಕಾಳಜಿ ವಹಿಸಿಲ್ಲ ಎಂದು ತನ್ನ ಅಸಮಾಧಾನ ವ್ಯಕ್ತಪಡಿಸಿದ. ಆದರೂ ನಮ್ಮನ್ನು ನೋಡಿ ತುಂಬಾ ಖುಷಿಪಟ್ಟನು. ಇವರ ಗೆಳೆಯ ಅನಿಲ ಗಾಂವಕರ ಅಲ್ಲಿ ಪಾರ್ಕಿಂಗ್ ಇಲ್ಲದ ಕಾರಣ ಸ್ವಲ್ಪ ದೂರದಲ್ಲೇ ಕಾರಿನಲ್ಲಿ ಕಾಯುತ್ತಿದ್ದ. ಜೀತು ಪೋನ್ ಮಾಡಿದ ಕೂಡಲೇ ಕಾರು ತೆಗೆದುಕೊಂಡು ಬಂದನು. ಅವನಿಗೂ ನಮ್ಮನ್ನು ನೋಡಿ ತುಂಬಾ ಸಂತೋಷವಾಯಿತು. ಓಡಿ ಬಂದು ಜೀವದ ಗೆಳೆಯನನ್ನು ತಬ್ಬಿಕೊಂಡ. ಅವನು ಸುಮಾರು 33 ವರ್ಷಗಳಿಂದ ಅಮೇರಿಕಾದ ಚಿಕಾಗೋ ನಗರದ ಬಪೇಲೋ ಎನ್ನುವ ಊರಿನಲ್ಲಿ ವಾಸವಾಗಿದ್ದ. ನಮಗೆ ಅಮೇರಿಕಾಗೆ ಬರುವಂತೆ ಗಂಡ ಹೆಂಡತಿ ಇಬ್ಬರೂ ಪದೇ ಪದೇ ಹೇಳುತ್ತಿದ್ದರು. ಸಾನ್ಸರ್ ಮಾಡಿಟಿಕೇಟ್ ಕಳಿಸಲು ಸಹ ಸಿದ್ಧರಿದ್ದರು. ಆದರೆ ನಮಗೆ ಮಕ್ಕಳ ಓದು ಇವರ ಟ್ಯೂಶನ್ ಮಗಳ ಮದುವೆ ಹೀಗೆ ಸರಿಯಾಗಿ ಸಮಯವೇ ಕೂಡಿ ಬಂದಿರಲಿಲ್ಲ.

ನಮ್ಮ ಸಾಮಾನುಗಳನ್ನೆಲ್ಲ ಅವನ ದೊಡ್ಡ ಕಾರಿನಲ್ಲಿ ತುಂಬಿ ಅವರ ಮನೆಯ ಕಡೆ ಹೊರಟೆವು. ನಾನಂತೂ ಯಾವುದೋ ಕಲ್ಪನಾ ಲೋಕದಲ್ಲಿ ಸಂಚರಿಸುತ್ತಿದ್ದಂತೆ ಅನುಭವವಾಗುತ್ತಿತ್ತು. ರಾತ್ರಿಯಾಗಿದ್ದರೂ ಲಕ್ಷಾಂತರ ದೀಪಗಳು ಹಗಲನ್ನಾಗಿಸಿದ್ದವು. ನೂರಾರಲ್ಲ ಸಾವಿರಾರು ಕಾರುಗಳು ಇರುವೆಯಂತೆ ಸಾಲಾಗಿ ಹರಿಯುತ್ತಿದ್ದವು. ಅಮೆರಿಕಾ ಅಮೇರಿಕಾ ಸಿನೇಮಾದ ಜಯಶ್ರೀ ಅವರು ಹಾಡಿದ ಕಾರ್ ಕಾರ್ ಎಲ್ಲೋಡಿದ್ರು ಕಾರ್ ಎಂಬ ಹಾಡು ನೆನಪಾಯಿತು. ಅನಿಲನ ಹೆಂಡತಿ ರೂಪಾ ನಮಗಾಗಿ ಚಹವನ್ನು ಫ್ಲಾಸ್ಕದಲ್ಲಿ ಹಾಕಿ ಕಳಿಸಿದ್ದಳು. ಇವರು ಚಹ ಕುಡಿದರು. ಹಲವು ಕಡೆ ನಾವು ಮೇಲಿನ ರಸ್ತೆಯಲ್ಲಿ ಹೋಗುತ್ತಿದ್ದರೆ ಕೆಳಗಿನ ರಸ್ತೆಯಲ್ಲಿ ಪಂಕ್ತಿಯ ಸಾಲಿನಂತೆ ಕಾರುಗಳು ಓಡಾಡುತ್ತಿದ್ದವು.

ನಾವು ಅನಿಲನ ಮನೆ ತಲುಪುತ್ತಿದ್ದಂತೆ ಅವರ ಮನೆಯ ಮುಂಬಾಗಿಲಿನಲ್ಲಿರುವ ವೆಲ್‌ಕಮ್ ದೇವಾನಂದ ಮತ್ತು ಶಾಲಿನಿ ಎಂಬ ಫಲಕ ನಮ್ಮನ್ನು ಸ್ವಾಗತಿಸಿತು. ಜೊತೆಯಲ್ಲಿ ಅನಿಲನ ತಾಯಿ ಮತ್ತು ಹೆಂಡತಿ ಬಾಗಿಲಲ್ಲಿ ನಮ್ಮನ್ನು ತಬ್ಬಿಕೊಂಡು ಸ್ವಾಗತಿಸಿದರು. ಇದರಿಂದ ನನ್ನ ಹೃದಯ ತುಂಬಿ ಬಂತು. ಬಿಸಿ ನೀರಿನಿಂದ ಸ್ನಾನ ಮಾಡಿ ಸೊಗಸಾದ ಸಾರು ಹುಳಿಗಳಿಂದ ಕೂಡಿದ ಬಿಸಿ ಬಿಸಿ ಊಟ ಮಾಡಿದ ನಾವು ಅಲ್ಲಿ ರಾತ್ರಿ ಒಂದು ಗಂಟೆಯವರೆಗೂ ಹರಟೆ ಹೊಡೆಯುತ್ತಾ ಕುಳಿತೆವು. ಅನಿಲನ ಹೆಂಡತಿಗೆ ಕನ್ನಡ ಬರುತ್ತಿರಲಿಲ್ಲ. ನನಗೆ ಇಂಗ್ಲಿಷ್ ಸರಿಯಾಗಿ ಬರುತ್ತಿರಲಿಲ್ಲ. ಆದರೂ ರೂಪಾ ತಪ್ಪಾದರೂ ಅಡ್ಡಿಯಿಲ್ಲ. ಇಂಗ್ಲೀಷ್‌ನಲ್ಲಿಯೇ ಮಾತಾಡು. ನಾನು ಅರ್ಥ ಮಾಡಿಕೊಳ್ಳುತ್ತೇನೆ ಎಂದಳು. ಹೀಗಾಗಿ ಅವಳ ಜೊತೆ ನನ್ನ ಹರಕು ಮುರುಕು ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದ್ದೆ. ನಮಗಾಗಿ ಅವರು ನಿದ್ದೆಗೆಡುವುದು ನನಗೆ ಇಷ್ಟವಿರಲಿಲ್ಲ. ಅದಕ್ಕಾಗಿ ಎಲ್ಲರೂ ಮಲಗಲು ಎದ್ದು ನಡೆದೆವು. ನಮಗಾಗಿ ಕಾದಿರಿಸಿದ ವಿಶಾಲವಾದ ಸುಂದರವಾದ ಮಲಗುವ ಕೋಣೆಗೆ ಬಂದೆವು. ಅಲ್ಲಿಯೂ ಸಹ ವೆಲ್‌ಕಮ್ ಬೋರ್ಡ್ ನಮ್ಮನ್ನು ಸ್ವಾಗತಿಸಿತು. ನಮ್ಮ ಬೆಡ್ ರೂಮಿಗೆ ಹೊಂದಿಕೊಂಡಂತೆ ಇನ್ನೊಂದು ಚಿಕ್ಕ ರೂಮಿತ್ತು. ಅಲ್ಲಿ ನಮ್ಮ ಸೂಟಕೇಸನ್ನೆಲ್ಲಾ ಇಟ್ಟೆವು. ಅವರ ಮನೆ ತುಂಬಾ ವಿಶಾಲವಾಗಿತ್ತು. ಎರಡು ಹಾಲ್ ಎರಡು ಡೈನಿಂಗ್ ಹಾಲ್‌ಗಳನ್ನೊಳಗೊಂಡ 6 ಬೆಡ್ ರೂಮ್‌ಗಳಿರುವ ಮನೆ. ನಮ್ಮ ಕೋಣೆಯನ್ನು ಸಹ ಅಷ್ಟೇ ಚೆನ್ನಾಗಿ ಜೋಡಿಸಿಡಲಾಗಿತ್ತು. ನಾವಿಬ್ಬರೂ ಅಷ್ಟೇ ಮಗನನ್ನು ಮಧ್ಯದಲ್ಲಿ ಮಲಗಿಸಿಕೊಂಡು ಬೆಳಗಾಗುವವರೆಗೂ ಮಾತಾಡುತ್ತಾ ಕಳೆದೆವು, ಸಮಯದ ಬದಲಾವಣೆಯಿಂದ ನಮಗೆ ರಾತ್ರಿ ನಿದ್ದೆ ಬರಲಿಲ್ಲ. ಜೊತೆಗೆ ಮಗನನ್ನು ಕಂಡ ಸಂಭ್ರಮ, ಎಷ್ಟು ಮುದ್ದಾಡಿದರೂ, ಎಷ್ಟು ಕಣ್ಣುಂಬ ನೋಡಿದರೂ ಮಾತಾಡಿದರೂ ಸಮಾಧಾನವಿಲ್ಲ. ಮಾರನೆಯ ದಿನ ಹಗಲು ಹೊತ್ತಿನಲ್ಲಿ ಚೆನ್ನಾಗಿ ನಿದ್ದೆ ಮಾಡಿದೆವು.

ಮಾರನೆಯ ದಿನ ರವಿವಾರವಾದ್ದರಿಂದ ಅನಿಲ ದಂಪತಿಗಳು ನಮ್ಮನ್ನು ಅವರ ಮನೆಯ ಹತ್ತಿರವಿರುವ ಶಾಪಿಂಗ್ ಮಾಲ್ ಮತ್ತು ಲೈಬ್ರರಿಗೆ ಕರೆದುಕೊಂಡು ಹೋದರು. ಅಲ್ಲಿಯ ಲೈಬ್ರರಿಯ ಕಟ್ಟಡ ತುಂಬಾ ದೊಡ್ಡದಾಗಿತ್ತು. ಈ ಗ್ರಂಥಾಲಯವು ಅನೇಕ ರೀತಿಯ ಪುಸ್ತಕಗಳನ್ನಲ್ಲದೇ ಅಲ್ಲಿ ಫೋಟೋಗ್ರಾಫ್‌ಗಳು, ಪ್ರಿಂಟ್ಗಳು, ಆಡಿಯೋ, ವಿಡಿಯೋ ಕ್ಯಾಸೆಟ್‌ಗಳು, ರೆಕಾರ್ಡ್‌ಗಳು, ಫಿಲ್ಮಗಳನ್ನು ವಿಸ್ತಾರವಾದ ಕಟ್ಟಡಗಳಲ್ಲಿ ಜೋಡಿಸಲಾಗಿತ್ತು. ಅಲ್ಲಿಯ ವಾತಾವರಣ ತುಂಬಾ ನಿಶ್ಯಬ್ದವಾಗಿತ್ತು. ಒಂದು ಸೂಜಿ ಬಿದ್ದರೂ ಶಬ್ದ ಕೇಳಬಹುದಿತ್ತು. ತುಂಬಾ ಜನರು ಅಂದರೆ ಚಿಕ್ಕಮಕ್ಕಳಿಂದ ಹಿಡಿದು ಮುದುಕರವರೆಗೂ ಅಲ್ಲಿ ಕುಳಿತು ಪುಸ್ತಕಗಳನ್ನು ಇಲ್ಲ ವಾರಪತ್ರಿಕೆಗಳನ್ನು ಹೀಗೆ ಏನನ್ನೋ ಓದುತ್ತಾ ಕುಳಿತಿದ್ದರು. ಇಲ್ಲಿ ಯಾರು ಬೇಕಾದರೂ ಗ್ರಂಥಾಲಯದ ಸೇವೆ ಪಡೆಯಬಹುದು. ಆದರೆ ಒಂದು ನಿಬಂಧನೆ, ಗ್ರಂಥಾಲಯಕ್ಕೆ ಪೋಟೋ ಸಹಿತ ಗುರುತಿನ ಕಾರ್ಡ್ ಕೊಡಬೇಕು. ಇಲ್ಲಿ ಗ್ರಂಥಗಳು, ತೂಗು ಪಟಗಳು, ಟೀಶರ್ಟ್, ಮಗ್, ಶೈಕ್ಷಣಿಕ ಸಲಕರಣೆಗಳು ಮಾರಾಟಕ್ಕಿವೆ. ನನಗೆ ಮೆಚ್ಚುಗೆಯಾದದ್ದು ಅಲ್ಲಿನ ಶಿಸ್ತಿನ ಪರಿಸರ, ಮೆಚ್ಚುಗೆಯಾದ ಪುಸ್ತಕವನ್ನು ವಿರಾಮವಾಗಿ ನಿಶ್ಯಬ್ದ ವಾತಾವರಣದಲ್ಲಿ ಮನವಿಟ್ಟು ಓದುವ ವಾತಾವರಣ ನಿರ್ಮಾಣ ಆಗಿರುವುದು. ಬೆಳಿಗ್ಗೆ 8 ರಿಂದ ಸಂಜೆ 8 ರವರೆಗೆ ಗ್ರಂಥಾಲಯ ತೆರೆದಿರುತ್ತದೆ. ತಮಗೆ ಬೇಕಾದ ಪುಸ್ತಕಗಳನ್ನು ಮನೆಗೆ ಒಯ್ದು ನಿಶ್ಚಿತ ಅವಧಿಯಲ್ಲಿ ಹಿಂತಿರುಗಿಸಬಹುದು. ಪ್ರತಿಯೊಬ್ಬರಿಗೂ ಲೈಬ್ರರಿಯ ಪ್ರಯೋಜನ ಪಡೆದುಕೊಳ್ಳಲು ಒಂದು ಕಂಪ್ಯೂಟರೈಸ್ಟ್ ಕಾರ್ಡ್ ಕೊಟ್ಟಿರುತ್ತಾರೆ

By-ಶಾಲಿನಿ ಗಾಂವಕರ್

ಮುಂದಿನ ಭಾಗ ಓದಿ…

Show 1 Comment

1 Comment

Leave a Reply