(ಭಾಗ-3) ಪಡುವಣದ ಪ್ರವಾಸ: ಒಂದು ಪ್ರಯಾಣ, ಸಾವಿರ ನೆನಪುಗಳು!

(ಭಾಗ-3) ಪಡುವಣದ ಪ್ರವಾಸ: ಒಂದು ಪ್ರಯಾಣ, ಸಾವಿರ ನೆನಪುಗಳು!

ಲಂಡನ್ ನಗರದಲ್ಲಿ ಒಂದು ಸುತ್ತು

ಒಂದು ರವಿವಾರ ಅಳಿಯ ಮತ್ತು ಮಗಳ ಜೊತೆ ಲಂಡನ್ ಸಿಟಿ ನೋಡಲು ಹೊರಟೆವು. ಲಂಡನ್ ನಗರದ ಒಂದು ವಿಸ್ಮಯವೆಂದರೆ ಈ ನಗರದ ಪಾತಾಳ ಪ್ರಪಂಚದಾಳಗಳಲ್ಲಿ ಹಗಲು ಇರುಳು ಮಿಂಚಿನ ವೇಗದಲ್ಲಿ ಘಟಸರ್ಪಗಳಂತೆ ಸಂಚರಿಸುವ ಟ್ಯುಬುಗಳೆಂಬ ಹೆಸರಿನ ಸುರಂಗ ರೈಲುಗಳು ಹಲವು ಹಂತಗಳಲ್ಲಿ ಹಾಗೂ ಅಕ್ಕ ಪಕ್ಕದಲ್ಲಿ ಏಕಕಾಲಕ್ಕೆ ಧಾವಿಸುತ್ತವೆ. ಜೊತೆಯಲ್ಲಿ ಅಳಿಯ ಮಗಳು ಇದ್ದುದರಿಂದ ನಮಗೆ ಯಾವ ರೀತಿಯ ತೊಂದರೆಯೂ ಆಗಲಿಲ್ಲ. ಇಲ್ಲದಿದ್ದರೆ ಹೊಸಬರಿಗೆ ದಾರಿ ಬದಲಿಸುವುದು ಒಂದು ಲೈನಿನಿಂದ ಬೇರೊಂದು ಲೈನಿಗೆ ಹೋಗುವುದು ಸ್ವಲ್ಪ ಕಷ್ಟ. ನಾವು ಟ್ಯೂಬ್ ಟ್ರೇನು ಹತ್ತಿ ಲಂಡನ್ ಸಿಟಿ ತಲುಪಿದೆವು. ರೈಲ್ವೆ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿಯೇ ಮೆಡಾಮ್ ಟುಸಾಡ್ ಪ್ರದರ್ಶನ ಶಾಲೆ (ಮ್ಯೂಸಿಯಂ) ಇದೆ. ಇದು ಎಲ್ಲ ಮ್ಯೂಸಿಯಂಗಳಿಗಿಂತ ಭಿನ್ನವಾದದ್ದು ಮತ್ತು ವಿಶಿಷ್ಟವಾದದ್ದು. ಇದೊಂದು ವ್ಯಾಕ್ಸ್ ಮ್ಯೂಸಿಯಂ ಇದರ ಬಗ್ಗೆ ನಾನು ಕೇಳಿ ತಿಳಿದಿದ್ದೆ. ಅದನ್ನು ನೋಡಬೇಕೆಂಬ ಆಕರ್ಷಣೆ ನನ್ನನ್ನು ಒಳಗೆ ಸೆಳೆಯಿತು. ನಾವಿಬ್ಬರೂ ಟಿಕೇಟ್ ತೋರಿಸಿ ಒಳಗೆಹೋದೆವು.

ಇದು ಒಂದು ಪ್ರದರ್ಶನ ಮಾತ್ರವಲ್ಲ, ಅದೊಂದು ದೊಡ್ಡ ವಿದ್ಯಾ ಸಂಸ್ಥೆ. ಇಲ್ಲಿ ಮೇಡಂ ಟ್ಯೂಸಾಡ್ ನಿರ್ಮಿಸಿರುವ ಮೇಣದ ಮೂರ್ತಿಗಳ ಹೊಸತನ ಹಾಗೂ ಸಜೀವ ದೃಶ್ಯ ಇಂದಿಗೂ ದಂಗುಬಡಿಸುವಂತಿದೆ. ಇಡೀ ಮ್ಯೂಸಿಯಂದೊಳಗಿನ ಮೂರ್ತಿಗಳ ಹೊಚ್ಚ ಹೊಸತನ ಇಂದಿಗೂ ಚಕಿತಗೊಳಿಸುತ್ತದೆ. ನಮ್ಮ ಎದುರಿಗೆ ಈ ಕ್ಷಣ ಸುಮ್ಮನೆ ನಿಂತಿರುವ ಈ ಮೂರ್ತಿಗಳು ಇನ್ನೇನು ಇನ್ನೊಂದು ಕ್ಷಣದಲ್ಲಿ ಚಲಿಸಬಹುದೇನೋ ಎಂಬ ಶಂಕೆಯನ್ನು ನೋಟಕರಲ್ಲಿ ಮೂಡಿಸುತ್ತದೆ. ಮೆಡಮ್ ಟುಸಾಡ್ ಒಬ್ಬ ಫ್ರೆಂಚ್ ಮಹಿಳೆ ಅವಳ ಚಿಕ್ಕಪ್ಪ ಮೇಣ ಎರಕ ಹೊಯ್ದು ಮನುಷ್ಯನ ಮೂರ್ತಿಗಳನ್ನು ಮಾಡುವುದರಲ್ಲಿ ಪ್ರವೀಣ. ಇದನ್ನು ಟುಸಾಡ್ ಕರಗತಮಾಡಿಕೊಂಡಳು. ಅದೇ ಲಂಡನ್‌ನಲ್ಲಿ ಇಂದು ಶಾಶ್ವತ ಪ್ರದರ್ಶನವಾಗಿ ಉಳಿದಿದೆ.

ನಾವು ಒಳಗೆ ಹೋದ ಕೂಡಲೇ ಮೊದಲು ಕಣ್ಣಿಗೆ ಬಿದ್ದದ್ದು ಮೆಡಮ್ ಟುಸಾಡ್‌ ಪ್ರತಿಮೆ. ಮುಂದಿನ ಹಾಲ್‌ನಲ್ಲಿ ಜಗತ್ತಿನ ಪ್ರಸಿದ್ದ ವ್ಯಕ್ತಿಗಳು ವಿವಿಧ ಭಂಗಿಗಳಲ್ಲಿ ನಿಂತೋ ಕುಳಿತೋ ನಮಗೆ ದರ್ಶನ ಕೊಡುತ್ತಾರೆ. ಇದನ್ನು ನೋಡಲು ತುಂಬಾ ಜನರು ಬರುತ್ತಾರೆ. ಅಲ್ಲಿ ಇಂಗ್ಲೆಂಡಿನ ರಾಜ-ರಾಣಿಯರು, ರಾಜಕಾರಣಿಗಳು, ಸಾಹಿತಿಗಳು, ವಿಜ್ಞಾನಿಗಳು, ನಟನಟಿಯರು, ಅಮೇರಿಕಾ ದೇಶದ ಅಧ್ಯಕ್ಷರುಗಳು ಬೇರೆ ಬೇರೆ ದೇಶದ ಪ್ರಮುಖ ವ್ಯಕ್ತಿಗಳಿದ್ದಾರೆ. ಅವರ ಮಧ್ಯೆ ನಮ್ಮ ದೇಶದ ಗಾಂಧೀಜಿ, ಇಂದಿರಾ ಗಾಂಧಿ, ನಟರಾದ ಅಮಿತಾಬ್ ಬಚನ್, ಶಾರುಖ್ ಖಾನ, ಸಲ್ಮಾನ ಖಾನ, ಐಶ್ವರ್ಯ ರೈ, ಕ್ರಿಕೆಟ್ ತಾರೆ ತೆಂಡೂಲ್ಕರ್ ಮುಂತಾದವರ ಮೇಣದ ಗೊಂಬೆಗಳಿವೆ. ಆದರೆ ಅದರಲ್ಲಿ ಕೆಲವರ ಮೂರ್ತಿಗಳು ಯಾಕೋ ಅದರ ಆಕೃತಿ, ಸರಿಯಾಗಿ ಗ್ರಹಿಸಿ, ರೂಪಿಸಿದಂತೆ ತೋರುವುದಿಲ್ಲ. ಆದರೆ ಕೆಲವೊಂದು ಮೂರ್ತಿಗಳ ಬಣ್ಣ ಉಡುಗೆ ತೊಡುಗೆ ಭಾವಭಂಗಿ ಎಷ್ಟು ಸಹಜವಾಗಿ ಇದೆ ಎಂದರೆ ಅವು ಜೀವಂತವೊ ಎಂಬ ಭ್ರಮೆ ಹುಟ್ಟಿಸುತ್ತದೆ. ಉದಾ. : ಡಯಾನಾ, ಎಲಿಜಬೆತ್ ರಾಣಿ, ರಾಜಕುಮಾರ ಚಾರ್ಲ್ ಸಂಸಾರ ಮತ್ತು ಒಬಾಮಾ, ಮೈಕಲ್ ಜಾಕ್ಸನ್, ಅಲ್ಲಿ ಸಮಯಕ್ಕೆ ಸರಿಯಾಗಿ ಮೂರ್ತಿಗಳನ್ನು ಬದಲಾಯಿಸುತ್ತಾ ಇರುತ್ತಾರೆ.

ಮುಂದೆ ನಾವು ಹಾರರ್ ಶೋ ನೋಡಲು ಹೋದೆವು. ಅದೊಂದು ಭಯಾನಕ ಕೊಠಡಿ. ಮೆಟ್ಟಿಲಿಳಿದು ನೆಲಮಾಳಿಗೆಗೆ ಹೋಗಬೇಕು. ಅಲ್ಲಿ ಮಬ್ಬುಗತ್ತಲು ಹಾದಿ ಅಲ್ಲಲ್ಲಿ ಸಣ್ಣ ಸಣ್ಣ ದೀಪಗಳನ್ನು ಹಚ್ಚಿಟ್ಟಿರುವುದು ಒಂದು ನಿಗೂಢ ವಾತಾವರಣವನ್ನು ಸೃಷ್ಟಿ ಮಾಡುತ್ತದೆ. ಹಾದಿಯುದ್ದಕ್ಕೂ ರೋದನ ಚಿತ್ಕಾರಗಳು ನಮ್ಮನ್ನು ಭಯಭೀತಗೊಳಿಸುತ್ತವೆ. ಎಲ್ಲಿ ನೋಡಿದರೂ ರಕ್ತಮಯ ಶಿಕ್ಷೆಯ ವಿಧಾನಗಳು. ಕತ್ತಿಯಿಂದ ಅಪರಾಧಿಗಳ ತಲೆಯನ್ನು ಕಡಿಯುವ ವಿಧಾನ ಫ್ರೆಂಚ್ ಮಹಾಕ್ರಾಂತಿಯಲ್ಲಿ ವಿದ್ರೋಹಿಗಳ ತಲೆ ತೆಗೆಯಲು ಬಳಸುತ್ತಿದ್ದ ಜಿಲೊಟಿನ ಯಂತ್ರದ ಒಂದು ಮಾದರಿ ಜತೆಗೆ, ಆಗ ಈ ಜಿಲೊಟಿನ್ ಎಂಬ ತಲೆಗಡುಕ ಯಂತ್ರಕ್ಕೆ ನಿಜವಾಗಿಯೂ ಬಳಸಲಾದ

ಅಲಗುಗಳನ್ನು ಇಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ. ಹಾಗೆಯೇ ಹಲವಾರು ಕೊಲೆಗಾರರ ಚಿತ್ರಗಳು ಇಲ್ಲಿವೆ.

ರುಂಡವಿಲ್ಲದ ಮುಂಡಗಳು, ಮುಂಡವಿಲ್ಲದ ರುಂಡಗಳು ತೂಗಾಡುತ್ತಿವೆ. ಅದರಿಂದ ರಕ್ತ ಇಳಿಯುತ್ತಿದ್ದ ಹಾಗೆ ಕಾಣಿಸುತ್ತದೆ ಮತ್ತು ಇನ್ನು ಕೆಲವು ಕಡೆ ನಿಜವಾದ ಮನುಷ್ಯರೇ ಬಿಳಿಯ ಉಡುಗೆ ತೊಟ್ಟು ಕೂದಲನ್ನು ಕೆದರಿಕೊಂಡು ಮುಖದ ಮೇಲೆ ಭೂತದ ಹಾಗೆ ಬಣ್ಣ ಬಳಿದುಕೊಂಡು ಬಾಯಲ್ಲಿ ರಕ್ತ ಚಿಮ್ಮುತ್ತಾ ಭೂತದ ಹಾಗೆ ಆಡುತ್ತಿರುತ್ತಾರೆ. ನಮ್ಮನ್ನು ನೋಡಿ ಮೈ ಮೇಲೆ ಬಂದಂತೆ ಹೆದರಿಸುತ್ತಾರೆ. ಒಂದು ರೂಮಿನಿಂದ ಇನ್ನೊಂದು ರೂಮಿಗೆ ಹೋಗುವಾಗ ಬಾಗಿಲ ಸಂದಿಯಲ್ಲಿ ಅಡಗಿಟ್ಟುಕೊಂಡು ನಾವು ಬಂದ ಕೂಡಲೇ ಪ್ರತ್ಯಕ್ಷವಾಗಿ ನಮ್ಮನ್ನು ಹೆದರಿಸುತ್ತಿದ್ದರು ನನಗಂತೂ ಇದನ್ನು ಕಂಡು ತುಂಬಾ ಭಯವಾಯಿತು. ಕೆಲವು ಯುವತಿಯರಂತೂ ಭಯದಿಂದ ಕಿರುಚುತ್ತಿದ್ದರು ಮನುಷ್ಯನೊಳಗೆ ಅಡಗಿದ ಹಿಂಸೆಯ ಅಮಾನವೀಯ ಕ್ರೌರ್ಯಗಳ ವಿಶ್ವರೂಪ ದರ್ಶನವನ್ನು ನೋಡಿ ಭಾರವಾದ ಮನಸ್ಸಿನಿಂದ ಹೊರಗೆ ಬಂದೆವು.

ನಂತರ ನಾವು ಲಂಡನ್ ಬ್ರಿಡ್ಜ್ ಥೇಮ್ಸ್ ನದಿ ನೋಡಲು ಹೋದೆವು. ದೂರದಿಂದಲೇ ಥೇಮ್ಸ್ ನದಿ ಹರಿಯುವುದು ಕಾಣುತ್ತಿತ್ತು, ಥೇಮ್ಸ್ ನದಿ ಲಂಡನ್ ನಗರದ ಬಹುದೊಡ್ಡ ಆಕರ್ಷಣೆ. ಇದು ನಗರದ ಹೃದಯ ಭಾಗದಲ್ಲಿ ಪ್ರವಹಿಸುವ ನದಿ. ಇಂಗ್ಲೆಂಡಿನ ಇತಿಹಾಸದಲ್ಲಿ ಅನೇಕ ನೆನಪುಗಳನ್ನು ಬಿಂಬಿಸುವ ಕಾಲದ ಸಂಕೇತವಾಗಿದೆ.

ಇದು ದೇಶದ ವಾಣಿಜ್ಯ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸರಕು ಸಾಗಾಣಿಕೆಯ ಹಡಗುಗಳಿಗೆ ಹಾಗೆ ಪ್ರವಾಸಿಗರ ವಿಹಾರಕ್ಕೂ ತಕ್ಕ ಅನುಕೂಲವಿದೆ. ಲಂಡನ್ ನಗರದಲ್ಲಿಯೇ ಈ ನದಿಗೆ ಸಣ್ಣ ಮೂರು ಸೇತುವೆಗಳಿವೆ. ಅದರಲ್ಲಿ ಲಂಡನ್ ಬ್ರಿಡ್ಜ್ ಎನ್ನುವ ಸೇತುವೆ ಮುಖ್ಯವಾದದ್ದು. ಇದು ಮೊಟ್ಟ ಮೊದಲಿಗೆ ರೋಮನ್ನರ ಕಾಲದಲ್ಲಿ ನಿರ್ಮಾಣಗೊಂಡಿತೆಂದು ಹೇಳಲಾಗಿದೆ. ಅದು ತುಂಬಾ ಎತ್ತರವಾಗಿ ಗಟ್ಟಿಮುಟ್ಟಾಗಿದೆ. ನಾವು ಅದರ ಮೇಲೆ ಹತ್ತಿ ಉದ್ದಕ್ಕೂ ಅಡ್ಡಾಡಿಕೊಂಡು ಬಂದೆವು. ಸಾವಿರಾರು ಟನ್ ತೂಗುವ ಸೇತುವೆಯ ಎರಡು ಭಾಗಗಳು ಕೆಲವೇ ನಿಮಿಷಗಳಲ್ಲಿ ಎತ್ತಲ್ಪಟ್ಟು ಹಡಗುಗಳ ಸಂಚಾರಕ್ಕೆ ಅವಕಾಶ ಕಲ್ಪಿಸುವ ಯಂತ್ರಕೌಶಲ ಮಾತ್ರ ಎಂತಹವರನ್ನೂ ಚಕಿತರನ್ನಾಗಿ ಮಾಡುತ್ತದೆ. ಅಲ್ಲಿಯೇ ನದಿಯಲ್ಲಿ ಸಂಚರಿಸುವ ದೋಣಿ ಲಾಂಚುಗಳು ಸಣ್ಣ ಪುಟ್ಟ ಹಡಗುಗಳು ತೇಲುವುದನ್ನು ನೋಡುವುದು ಮನಸ್ಸಿಗೆ ಸಂತೋಷವನ್ನುಂಟುಮಾಡುತ್ತದೆ. ಅಲ್ಲಿಯೇ ಮುಂದೆ ಹೋದರೆ ವೆಸ್ಟ್-ಮಿನಿಸ್ಟರ್ ಇದೆ. ಇದು ಸಹ ಆಧುನಿಕ ತಂತ್ರಜ್ಞಾನದ ಒಂದು ಅದ್ಭುತವಾಗಿದೆ. ಅಲ್ಲಿಂದ ಮುಂದೆ ಥೇಮ್ಸ್ ನದಿಯ ದಡದಲ್ಲಿರುವ ವೆಸ್ಟ್ ಮಿನಿಸ್ಟರ್ ಎಂದು ಕರೆಯಲಾದ ಲಂಡನ್ನಿನ ಈ ಪರಿಸರದಲ್ಲಿರುವ ಪಾರ್ಲಿಮೆಂಟ್ ಭವನವನ್ನು ನೋಡಲು ಹೋದೆವು ಪಾರ್ಲಿಮೆಂಟ್ ಭವನವಂತೂ ತುಂಬಾ ಸುಂದರವಾಗಿ, ವಿಶಾಲವಾಗಿದೆ.

ವಿಸ್ತಾರವಾದ ಪಾರ್ಲಿಮೆಂಟ್ ಕಟ್ಟಡಕ್ಕೆ ಹೊಂದಿಕೊಂಡಂತೆ ಎತ್ತರವಾಗಿ ಮೇಲೆದ್ದು ಕಾಣುವ ಬಿಗ್ ಬೆನ್ ಗಡಿಯಾರ ಸ್ತಂಭವಂತೂ ಕಾಲದ ಇನ್ನೊಂದು ಚಲನ ಸ್ಥಿತಿಯೋ ಎಂಬಂತೆ ಇರುವ ಥೇಮ್ಸ್ ನದಿಯ ಕಡೆ ನೋಡುವಂತೆ ತೋರುತ್ತದೆ. ಸ್ವಲ್ಪ ದೂರದಲ್ಲಿ ವೆಸ್ಟ್ ಮಿನಿಸ್ಟರ್ ಅಬೆ ಎಂಬ ಹೆಸರಿನ ಅತ್ಯಂತ ಪ್ರಾಚೀನವಾದ ಚರ್ಚು ಇದೆ. ಇಲ್ಲಿ ಇಂಗ್ಲೆಂಡಿನ ರಾಜರುಗಳಿಗೆ ಕಿರೀಟಧಾರಣೆಯಾಗುವುದು ಈ ಚರ್ಚಿನೊಳಗೆ, ಭೋಗ ವೈಭೋಗಗಳ ರಾಜಮನೆತನದವರ ಕಾರ್ಯಕ್ರಮಗಳು ಇಲ್ಲೇ ನಡೆಯುತ್ತದಂತೆ.

ಇಂಗ್ಲೆಂಡಿನ ಪ್ರಸಿದ್ದ ಅದ್ಭುತವಾದ ಲಂಡನ್ ಆಯ್ ನೋಡಲು ಹೋದೆವು. ಕ್ಯೂನಲ್ಲಿ ನಿಂತು ಟಿಕೇಟ್ ತೆಗೆದುಕೊಂಡು ಸೆಕ್ಯೂರಿಟಿ ಚೆಕ್ ಮುಗಿಸಿ ಲಂಡನ್ ಆಯ್‌ನ ಏರಲು ನಿಂತೆವು. ಅದು ಪ್ರಪಂಚದಲ್ಲೇ ದೊಡ್ಡದಾದ ಜಾಯಿಂಟ್ ವೀಲ್ ತರ ಇದೆ. ಅದು ಚಕ್ರಾಕಾರವಾಗಿ ಸುತ್ತುತ್ತಾ ಇರುತ್ತದೆ. ಒಂದೊಂದು ತೂಗುವ ತೊಟ್ಟಿಲುಗಳು ಒಂದು ದೊಡ್ಡ ಮನೆಯ ದೊಡ್ಡ ಹಾಲ್ ಇದ್ದಂತೆ ಇದೆ. ಅದರಲ್ಲಿ ನೂರಕ್ಕಿಂತ ಹೆಚ್ಚು ಜನ ಹಿಡಿಯಬಲ್ಲರು. ಅದು ಸಹ ಥೇಮ್ಸ್ ನದಿಯ ದಡದಲ್ಲಿದೆ. ಅಲ್ಲಿ ನಮಗೆ ಬೇರೆ ಬೇರೆ ದೇಶಗಳಿಂದ ಬಂದ ಪ್ರವಾಸಿಗರು ಪರಿಚಯವಾದರು. ತೊಟ್ಟಿಲುಗಳು ಚಕ್ರಾಕಾರವಾಗಿ ತಿರುಗುತ್ತವೆ. ಅದು ಪೂರ್ತಿ ಮೇಲೆ ಹೋದಾಗ ಇಡೀ ಲಂಡನ್ ಸಿಟಿಯನ್ನು ಕಾಣಬಹುದು. ಅದರಲ್ಲಿ ಕುಳಿತು ತಿರುಗುವುದು ತುಂಬಾ ಮಜಾ ಆಗುತ್ತದೆ.

ಸ್ವಲ್ಪ ಹೊತ್ತಿನಲ್ಲೇ ನಾವು ಇಂಗ್ಲೆಂಡಿನ ರಾಣಿಯ ಬಕಿಂಗ್ ಹ್ಯಾಂ ಅರಮನೆಯ ಎದುರಿಗೆ ಬಂದೆವು. ಅರಮನೆಯ ಕಟ್ಟಡ ಎತ್ತರವಾಗಿ ವಿಶಾಲವಾಗಿ ಇತ್ತು. ಅರಮನೆಯ ಎತ್ತರವಾದ ವಿಶಾಲವಾದ ಗೇಟಿನ ಹೊರಗೆ ಬಹುಸಂಖ್ಯೆಯಲ್ಲಿ ದೇಶ ವಿದೇಶಗಳ ಜನ ನೆರೆದಿದ್ದರು. ಅವರೆಲ್ಲರೂ ನಮ್ಮ ಹಾಗೆ ಅರಮನೆಯ ಮಹಾದ್ವಾರದ ಅಕ್ಕಪಕ್ಕದಲ್ಲಿ ಸಮವಸ್ತ್ರ ಧರಿಸಿ ಶಿಲಾ ಪ್ರತಿಮೆಗಳಂತೆ ನಿಂತ ಕಾವಲಿಗರನ್ನು ಮತ್ತು ಆಗಾಗ ಕಾವಲಿಗರು ಸರದಿ ಬದಲಾಯಿಸುವುದನ್ನು ಬಿಟ್ಟ ಕಣ್ಣುಗಳಿಂದಲೇ ನೋಡುತ್ತಿದ್ದರು. ಟಿಕೇಟ್ ಪಡೆದು ಕೆಲವರು ಕ್ಯೂನಲ್ಲಿ ನಿಂತು ಒಳ ಹೋಗುತ್ತಿದ್ದರು. ಬೆಳಗ್ಗೆಯಿಂದ ಸುತ್ತಾಡಿ ಆಯಾಸವಾದ್ದರಿಂದ ಮಗಳು ಅಳಿಯ ಇನ್ನೊಂದು ಸಲ ಬಂದಾಗ ನೋಡಿದರಾಯಿತು ಎಂದರು. ನಮಗೂ ಅದು ನಿಜವೆನಿಸಿತು.

ಮುಂದೆ ನಾವು ಬಸ್‌ನಲ್ಲಿ ಕುಳಿತು ಲಂಡನ್ ಪೇಟೆಯನ್ನು ಅಡ್ಡಾಡಿದೆವು. ಅಲ್ಲಿನ ಕ್ರಿಕೆಟ್ ಆಟದ ಮೈದಾನ ಮತ್ತು ಟೆನಿಸ್ ಕೋರ್ಟ್ ನೋಡಿದೆವು. ಅದು ಹಚ್ಚ ಹಸಿರಿನ ಉದ್ಯಾನವನ ತುಂಬಾ ವಿಶಾಲವಾಗಿದೆ. ಅಲ್ಲಿ ಹುಲ್ಲಿನ ಹಾಸುಗೆಯಂತೆ ಹಸಿರು ಹುಲ್ಲುಗಳನ್ನು ಬೆಳೆಸಿದ್ದಾರೆ. ಅಲ್ಲಲ್ಲಿ ಕಾಣುವ ಹೂ ಗಿಡಗಳು ಗುಲಾಬಿಚೆಂಡು ಹೂವಿನ ರಾಶಿಗಳೇ ಅಲ್ಲಿವೆ. ಎಷ್ಟು ನೋಡಿದರೂ ಸಮಾಧಾನವಿಲ್ಲ. ಪೂರ್ತಿ ಉದ್ಯಾನ ಸುತ್ತಾಡಲು ಆಗಲಿಲ್ಲ. ರಾತ್ರಿಯಾಯಿತೆಂದು ಮನೆಯ ಹಾದಿ ಹಿಡಿದೆವು.

ನಾವು ಸಾಮಾನ್ಯವಾಗಿ ಹೆಚ್ಚಾಗಿ ಸಂಜೆ ವೇಳೆ ಥೇಮ್ಸ್ ನದಿಯ ದಂಡೆಯ ಉದ್ದಕ್ಕೂ ವಾಕಿಂಗ್ ಹೋಗುತ್ತಿದ್ದೆವು. ಇದು ಲಂಡನ್ ನಗರದ ಬಹುದೊಡ್ಡ ಆಕರ್ಷಣೆ, ನದಿ ದಂಡೆಯ ಮೇಲೆ ನಡೆಯುತ್ತಾ ನದಿಯಲ್ಲಿ ತೇಲುವ ಹಂಸಗಳನ್ನು ಬಾತುಕೋಳಿಗಳನ್ನು ದೋಣಿಯ ವಿಹಾರವನ್ನು ನೋಡುವುದೇ ಒಂದು ಮಧುರ ಅನುಭವ. ಅಲ್ಲಿಯೇ ಇರುವ ರಾಣಿಯ ಹಳೆಯ ವಿಂಡ್‌ಸರ್ ಅರಮನೆ ನೋಡಲು ಹೋಗುತ್ತಿದ್ದೆವು. ಅದು ನಮ್ಮ ಮಗಳ ಮನೆಯಿಂದ ಕಾರಿನಲ್ಲಿ 10 ನಿಮಿಷದ ಪ್ರಯಾಣ. ಅರಮನೆಯ ಬೃಹದಾಕಾರದ ಬಾಗಿಲ ಎದುರಿಗೆ ಸೈನಿಕರ ಮಾರ್ಚ್‌ಪಾಸ್ಟ್‌ಗಾಗಿ ಉದ್ದವಾದ ಪಾತ್‌ವೇ ಇದೆ. ಏನಿಲ್ಲವೆಂದರೂ 2 ರಿಂದ ಮೂರು ಕೀಲೋಮೀಟರ್ ಉದ್ದವಾಗಬಹುದು. ಅಲ್ಲಿ ಹೋಗಿ ವಾಕಿಂಗ್ ಮಾಡುತ್ತಿದ್ದೆವು. ರಸ್ತೆ ತುಂಬಾ ಅಗಲವಾಗಿದೆ. ಸುತ್ತಲೂ ಹಸಿರಾದ ಹುಲ್ಲಿನ ಹಾಸು, ಅಲ್ಲಲ್ಲಿ ಸಾಲು ಮರಗಳು, ಬದಿಗೆ ಹಾಕಿದ ಒರಗು ಪೀಠಗಳ ಮೇಲೆ ಕೂತು ಹಿತವಾದ ತಂಗಾಳಿಯನ್ನು ಸವಿಯಲು ಕುಳಿತ ಮುದುಕರು, ಪ್ರೇಮಿಗಳು, ತಂಪು ಮರದ ಕೆಳಗೆ ಒಬ್ಬರನೊಬ್ಬರು ತಬ್ಬಿಕೊಂಡು ಮಲಗಿರುವ ನಲ್ಲ-ನಲ್ಲೆಯರು ಪ್ರಪಂಚದ ಅರಿವೇ ಇಲ್ಲದೆ ಸಂತೋಷದಲ್ಲಿ ಮುಳುಗಿರುತ್ತಾರೆ.

ಆಕ್ಸಫರ್ಡ ವಿಶ್ವವಿದ್ಯಾಲಯ

ನಾವು ಒಂದು ರವಿವಾರ ಆಕ್ಸ್‌ಫರ್ಡ್ ನೋಡಲು ಹೊರಟೆವು. ಮೊದಲು ನಾವು ಥೇಮ್ಸ್ ನದಿಯ ಬ್ಯಾಕ್ ವಾಟರ್‌ನಲ್ಲಿಯ ಹೌಸ್ ಬೋಟ್ ನೋಡಿದೆವು. ಅಲ್ಲಿ ಜನರು ತುಂಬಾ ಹಣ ಖರ್ಚು ಮಾಡಿ ಸಂಸಾರ ಸಮೇತ ಬಂದು ಬೋಟ ಹೌಸ್‌ನಲ್ಲಿ ಎರಡು ಮೂರು ದಿನ ಉಳಿದು ಮಜಾ ಮಾಡುತ್ತಾರೆ. ಕೆಲವರು ನದಿ ದಂಡೆ ಮೇಲೆ ಕುಳಿತು ಗಾಳ ಹಾಕಿ ಮೀನು ಹಿಡಿಯುತ್ತಾ ಇದ್ದರು.

ಅಲ್ಲಿಂದ ಮುಂದೆ ನಾವು ಜಗತ್ಪಸಿದ್ಧವಾದ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ನೋಡಲು ಹೊರಟೆವು. ಅದೊಂದು ಅತ್ಯಂತ ಹಳೆಯ ಮತ್ತು ಪುರಾತನ ಶೈಲಿಯ ಕಟ್ಟಡ. ಪ್ರಸಿದ್ಧ (ಇದೊಂದು ಕಾಲೇಜು ನಗರ. ಇಲ್ಲಿ ಸುಮಾರು 39 ಇತಿಹಾಸ ಪ್ರಸಿದ್ಧವಾದ ಕಾಲೇಜುಗಳಿವೆ) ಕವಿಗಳು, ಹೆಸರಾಂತ ಲೇಖಕರು, ರಾಜಕಾರಣಿಗಳು ತಮ್ಮ ವಿದ್ಯಾಭ್ಯಾಸವನ್ನು ಇಲ್ಲಿಯೇ ಮುಗಿಸಿದ್ದಾರೆ. ಇಲ್ಲಿಯ ತರಗತಿಯ ಒಂದೊಂದು ಕೋಣೆಗಳೂ ತುಂಬಾ ವಿಶಾಲವಾಗಿವೆ. ಇಲ್ಲಿ ಓದಿದ ಪ್ರಮುಖ ವ್ಯಕ್ತಿಗಳೆಂದರೆ ಲೇಖಕರು, ಕವಿಗಳು, ಹಾಗೂ ನಮ್ಮ ದೇಶಕ್ಕೆ ಬಂದ ಇಂಗ್ಲಿಷ್ ವೈಸರಾಯಗಳ ಹೆಸರುಗಳು ಪೋಟೋ ಸಮೇತ ಇವೆ. ವಿದ್ಯಾಲಯದಲ್ಲೇ ಒಂದು ದೊಡ್ಡ ಚರ್ಚ್ ಇದೆ. ಅಲ್ಲಿಂದ ಮುಂದೆ ಹೋದರೆ ಒಂದು ದೊಡ್ಡ ಮ್ಯೂಸಿಯಂ ಇದೆ. ಮತ್ತು ದೊಡ್ಡ ಲೈಬ್ರರಿ ಇದೆ. ಅದನ್ನು ನೋಡಿ-ವಾಪಸ್ ಲಂಡನ್ನಿಗೆ ಬಂದೆವು.

ಷೇಕ್ಸ್‌ಪಿಯ‌ರ್ ಮನೆ

ಒಂದು ದಿನ ನಾವು ಜಗತ್ಪಸಿದ್ದ ಕವಿ ಮತ್ತು ನಾಟಕಕಾರ ಷೇಕ್ಸ್‌ಪಿಯರ್‌ನ ಊರಿಗೆ ಹೋದೆವು. ಅದು ಇಂಗ್ಲೆಂಡಿನ ನಟ್ಟ ನಡುಭಾಗದಲ್ಲಿ ಏವನ್ ಎಂಬ ಊರಿನಲ್ಲಿ ಇದೆ. ಇದು ಷೇಕ್ಸಪಿಯ‌ರ್ ಜನ್ಮಭೂಮಿ, ಅದೊಂದು ಸಣ್ಣ ಹಳ್ಳಿ. ಅಲ್ಲಿ ಷೇಕ್ಸ್‌ಪಿಯ‌ರ್ ಮನೆ, ಬೀದಿ, ಆಸು-ಪಾಸು ಎಲ್ಲಾ ಹಾಗೆಯೇ ಇದೆ. ಬೀದಿಯ ಹೆಸರುಗಳು ಸಹ ಬದಲಾಗಿಲ್ಲ. ಅದೇ ಹಳೆಯ ಬೀದಿ, ಹಳೆಯ ಮನೆ, ಹಂಚಿನ ಛಾವಣಿ ನಾಲ್ಕು ನೂರು ವರ್ಷಗಳ ಹಿಂದಿನ ಹಳೆ ಮನೆ ನಿಂತಿದೆ. ಅವನ ಮನೆ ಇರುವುದು ಹೆನ್ಸಿಸ್ಟ್ರೀಟಿನಲ್ಲಿ ಅವನ ಬಾಲ್ಯವನ್ನು ಕಳೆದದ್ದು ಇಲ್ಲಿಯೇ, ಮನೆ ದೊಡ್ಡ ದೊಡ್ಡ ಕೋಣೆಗಳಿಂದ ಕೂಡಿದೆ. ಇಟ್ಟಿಗೆ ಮತ್ತು ಕಲ್ಲುಗಳಿಂದ ನಿರ್ಮಿಸಲಾದ ಬೆಂಕಿ ಗೂಡುಗಳಿವೆ.

ಮಲಗುವ ಕೋಣೆಗಳ ಮಂಚಗಳು, ದೊಡ್ಡ ದೊಡ್ಡ ಸಂದೂಕಗಳು, ಹಳೆಯ ಕಾಲದ ದೊಡ್ಡ ದೊಡ್ಡ ಅಡುಗೆಯ ಪಾತ್ರೆಗಳು ಇವೆ. ಷೇಕ್ಸ್‌ಪಿಯರ್ ಹುಟ್ಟಿದ ಕೋಣೆ ಮಹಡಿಯ ಮೇಲಿದೆ. ಅಲ್ಲಿಯೂ ಬೆಂಕಿಯ ಗೂಡಿದೆ. ಕೊಠಡಿಯ ಅಗಲವಾದ ಕಿಟಕಿಯ ಮೇಲೆ ಅಲ್ಲಿಗೆ ಬಂದು ಹೋದ ಪ್ರಮುಖರ ರುಜುವಿನಸಹಿತ ದಾಖಲೆಗಳನ್ನು ತೂಗುಹಾಕಲಾಗಿದೆ. ಅಲ್ಲಿಯೇ ಪಕ್ಕದಲ್ಲಿ ಒಂದು ಮ್ಯೂಸಿಯಂ ಇದೆ. ಅಲ್ಲಿ ಅವನ ಜೀವನದ ಸಾಧನೆಗಳಿಗೆ ಒಂದು ವಸ್ತು ಸಂಗ್ರಹಾಲಯವೇ ಇದೆ. ಅಲ್ಲಿಂದ ಮುಂದೆ ಏವನ್ ನದಿ ತೀರಕ್ಕೆ ಬಂದು ಅದನ್ನು ನೋಡಿಕೊಂಡು ಮನೆಗೆ ಹಿಂತಿರುಗಿದೆವು. ಮನಸ್ಸಿನಲ್ಲಿ ಪ್ರಸಿದ್ದ ಇಂಗ್ಲಿಷ್ ಲೇಖಕನ ಮನೆ ನೋಡಿದ ಹೆಮ್ಮೆ ನನ್ನದಾಗಿತ್ತು.

By-ಶಾಲಿನಿ ಗಾಂವಕರ್

ಮುಂದಿನ ಭಾಗ ಓದಿ…

Show 1 Comment

1 Comment

Leave a Reply