ಪಡುವಣದ ಪ್ರವಾಸ: ಒಂದು ಪ್ರಯಾಣ, ಸಾವಿರ ನೆನಪುಗಳು!

ಪಡುವಣದ ಪ್ರವಾಸ: ಒಂದು ಪ್ರಯಾಣ, ಸಾವಿರ ನೆನಪುಗಳು!

ಪ್ರವಾಸಕ್ಕೆ ಮುನ್ನ…

ನನ್ನ ಮಗಳು ದಂತ ವೈದ್ಯೆ, ಅಳಿಯ ಎಂಜಿನೀಯರು. ಅವರು ಲಂಡನ್ನಿನಲ್ಲಿ ವಾಸವಾಗಿದ್ದಾರೆ; ಅವರು ನಮಗೆ ಲಂಡನ್ನಿಗೆ ಬರುವಂತೆ ಪದೇ ಪದೇ ಹೇಳುತ್ತಾ ಇದ್ದರು. ನಾವೇ, ಹೋದರಾಯಿತು ಎಂದು ಉದಾಸೀನ ಮಾಡುತ್ತಾ ಇದ್ದೆವು. ಮಗಳು ಒಮ್ಮೆ ಊರಿಗೆ ಬಂದಾಗ ‘ಅಮ್ಮ ನಿಮಗೆ ನನ್ನ ಮನೆ ಹೇಗಿದೆ? ಮಗಳು ಹೇಗೆ ಸಂಸಾರ ಮಾಡಿಕೊಂಡಿದ್ದಾಳೆ? ಎಂದು ನೋಡುವ ಆಶೆಯಿಲ್ಲವೇ’ ಎಂದು ಕೇಳಿದಳು. ಇದರಿಂದ ಆಗ ನಮ್ಮ ತಪ್ಪಿನ ಅರಿವಾಯಿತು. ಕೂಡಲೇ ಅಂದರೆ 2009 ಜೂನ್ 21ಕ್ಕೆ ಲಂಡನ್ನಿಗೆ ಹೋಗುವದೆಂದು ನಿರ್ಧರಿಸಿಬಿಟ್ಟೆವು. ಆಗ ನಾವು ಬೆಂಗಳೂರಿನಲ್ಲಿಯೇ ಇದ್ದುದರಿಂದ ಪೂರ್ವ ತಯಾರಿಯಾಗಿ ಮೊದಲೇ ಮನೆ ಮಂದಿಯೆಲ್ಲ ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದೆವು. ಇವರು ಸರಕಾರಿ ಕೆಲಸದಲ್ಲಿ ಇದ್ದುದರಿಂದ ಮೊದಲೇ ರಜೆಗಾಗಿ ಅರ್ಜಿ ಹಾಕಿ ರಜೆಯ ಅನುಮತಿಯನ್ನು ಪಡೆದುಕೊಂಡರು. ಮಗ ….ಎಂಜನೀಯರ್ ಇದ್ದುದರಿಂದ ಇಂಟರನೆಟ್ ಮೂಲಕ ಎಲ್ಲ ವಿಷಯಗಳನ್ನು ತಿಳಿದುಕೊಂಡು ವೀಸಾ ಇಂಟ‌ರ್ ವ್ಯೂಗೆ ಸಮಯವನ್ನು ತೆಗೆದುಕೊಂಡನು. ಅವನೂ ಸಹ ನಮ್ಮ ಜೊತೆ ಲಂಡನ್ನಿಗೆ ಬರುವವನಿದ್ದರಿಂದ ನಾವು ಮೂವರೂ ಗೊತ್ತುಪಡಿಸಿದ ದಿನದಂದು ವೀಸಾಕ್ಕೆ ಹೋದೆವು. ನಾವು ಮೊದಲೇ ಇಂಗ್ಲೆಂಡಿಗೆ ಹೋಗುವ ಮತ್ತು ವಾಪಸ್ಸು ಬರುವ ಟಿಕೆಟನ್ನು ಖರೀದಿಸಿದ್ದರಿಂದ ಮತ್ತು ಇವರು ಸರಕಾರಿ ನೌಕರಿಯಲ್ಲಿ ಇದ್ದದ್ದರಿಂದ ಅದೇ ರೀತಿ ಮಗನೂ ಸಹ ವಿಪ್ರೊ ಕಂಪೆನಿಯಲ್ಲಿ ಕೆಲಸದಲ್ಲಿದ್ದರಿಂದ ವೀಸಾಕ್ಕೆ ಅವರು ಯಾವುದೇ ಕಿರಿಕಿರಿ ಮಾಡಲಿಲ್ಲ. ನಾವು ಹೋಗಿ ಬಂದ 15 ದಿನಕ್ಕೆ ಬೆಂಗಳೂರಿನಿಂದ ವೀಸಾ ಬಂತು.

ಮೇ ತಿಂಗಳಲ್ಲಿ ಊರಿಗೆ ಹೋಗಿ ಮದುವೆ, ಬಂಡಿ- ಹಬ್ಬವನ್ನು ಸಡಗರದಿಂದ ಮುಗಿಸಿದೆವು. ತಿರುಗಿ ಬೆಂಗಳೂರಿಗೆ ಬರುವಾಗ ನಮ್ಮ ಮನೆಯಲ್ಲಿಯೇ ಬೆಳೆದ ಕರಿ ಇಸಾಡ ಮಾವಿನ ಹಣ್ಣನ್ನು ತೆಗೆದುಕೊಂಡು ಬಂದೆವು. ನಮ್ಮ ಅಳಿಯನಿಗೆ ಕರಿ ಇಸಾಡ ಮಾವಿನ ಹಣ್ಣೆಂದರೆ ತುಂಬಾ ಪ್ರೀತಿ, ಆದ್ದರಿಂದ ಬೆಂಗಳೂರಿಗೆ ಬಂದವಳೇ ಮಾವಿನಹಣ್ಣು ಸ್ವಲ್ಪ ಹಣ್ಣಾದ ಕೂಡಲೇ ಅದನ್ನು ಪೇಪರ್‌ನಲ್ಲಿ ಸುತ್ತಿ ಫ್ರಿಜ್‌ನಲ್ಲಿಟ್ಟೆ.

ಇಂಗ್ಲೆಂಡಿನಲ್ಲಿ ನಮ್ಮವರು ಯಾರೂ ಹೆಚ್ಚಾಗಿ ಇರಲಿಲ್ಲವಾದ್ದರಿಂದ ಅಂತಹ ತಯಾರಿ ಏನೂ ಇರಲಿಲ್ಲ. ರಾಮದಾಸ ಅಣ್ಣನ ಮಗಳು ಮತ್ತು ಅಳಿಯ ಮಾತ್ರ ಇದ್ದರು. ಮಕ್ಕಳಿಗಾಗಿ ಸ್ವಲ್ಪ ತಿಂಡಿ-ತಿನಿಸು, ಚಟ್ನಪುಡಿ, ಮಸಾಲೆಪುಡಿ ಇತರೇ ಸಾಮಾನುಗಳನ್ನು ತಯಾರಿ ಮಾಡಿಕೊಂಡೆ. ರಾಮದಾಸ ಅಣ್ಣ, ಪುಷ್ಪಕ್ಕ ಮಗಳಿಗಾಗಿ ಸ್ವಲ್ಪ ಸಾಮಾನುಗಳನ್ನು ಕೊಟ್ಟಿದ್ದರು. ಹೊರಡುವ ದಿನ ಹತ್ತಿರ ಬರುತ್ತಿದ್ದಂತೆ ಹೊಸದಾಗಿ ಖರೀದಿ ಮಾಡಿದ ಸೂಟಕೇಸಿಗೆ ನೆನಪಾದಂತೆ ಒಂದೊಂದೆ ಸಾಮಾನುಗಳನ್ನು ಹಾಕಿಕೊಂಡೆ. ಮಗಳು ಅಳಿಯನಿಗೆ ನಮ್ಮನ್ನು ಕರೆದುಕೊಂಡು ಹೋಗಲು ವಿಮಾನ ನಿಲ್ದಾಣಕ್ಕೆ ಬರಲು ಅನುಕೂಲವಾಗಲೆಂದು ಶನಿವಾರ ಕಿಂಗ್‌ಫಿಶ‌ರ್ ವಿಮಾನಕ್ಕೆ ಟಿಕೆಟ್ ಮಾಡಿಕೊಂಡಿದ್ದೆವು. ನಮ್ಮ ವಿಮಾನ ಶನಿವಾರ ಜೂನ್ 21 ಮಧ್ಯಾಹ್ನ 12ಕ್ಕೆ ಬೆಂಗಳೂರಿನಿಂದ ಹೊರಡುವದಿತ್ತು.

ನನ್ನ ಜೀವನದ ಮೊದಲನೆ ವಿಮಾನ ಪ್ರವಾಸ ಇದಾಗಿತ್ತು. ಇದರ ಬಗ್ಗೆ ತುಂಬಾ ಭಯ ಮತ್ತು ಕುತೂಹಲವಿತ್ತು. ಹಾಗಾಗಿ ನಾನು ಈ ಅನುಭವ ಇದ್ದ ಕೆಲವರಿಗೆ ವಿಮಾನ ಪಯಣದ ಬಗ್ಗೆ ಕೇಳಿದೆ. ಕೆಲವರು ‘ಏನೂ ತೊಂದರೆ ಆಗುವುದಿಲ್ಲ’ ಎಂದರೆ ಇನ್ನೂ ಕೆಲವರು ವಿಮಾನ ಮೇಲೇರುವಾಗ ಸ್ವಲ್ಪ ತಲೆ ತಿರುಗಿದಂತಾಗಿ ‘ವಾಂತಿ ಬಂದಂತೆ ಆಗುತ್ತದೆ’ ಎಂದು ಹೇಳಿದ್ದರು. ನನ್ನ ಯಜಮಾನರೂ ಸಹ ‘ಏನೂ ತೊಂದರೆ ಆಗುವುದಿಲ್ಲ’ ಧೈರ್ಯವಾಗಿರು, ಎಂದು ಪದೇ ಪದೇ ಹೇಳುತ್ತಿದ್ದರೂ ನನಗೆ ಮನಸ್ಸಿನ ಮೂಲೆಯಲ್ಲಿ ಭಯ ಇದ್ದೇ ಇತ್ತು. ಮೇಲಾಗಿ ಒಂದು ಸೂಟ್‌ಕೇಸ್ ತುಂಬಾ ಮಾವಿನ ಹಣ್ಣನ್ನು ತುಂಬಿಕೊಂಡಿದ್ದೆವು. ಎಲ್ಲಿ ಸೂಟಕೇಸ್ ತೆಗೆಸಿ ನೋಡಿ ತಿರಸ್ಕರಿಸಿಬಿಡುತ್ತಾರೋ ಎಂಬ ಭಯವಿತ್ತು. ತಲಾ ಒಬ್ಬರಿಗೆ 25 ಕೆ.ಜಿ. ಭಾರ ಒಯ್ಯಲು ಅನುಮತಿ ಇತ್ತು. ಮತ್ತೆ ಎರಡು ಕ್ಯಾರಿಬ್ಯಾಗ್ ಇದ್ದುದರಿಂದ ಸಾಮಾನುಗಳ ತೂಕದ ಸಮಸ್ಯೆ ಇರಲಿಲ್ಲ. ಹೆಚ್ಚಿಗೆ ಭಾರ ಒಯ್ಯುವ ಅನುಕೂಲ ಕಿಂಗ್ ಫಿಶರ್ ವಿಮಾನದ ವಿಶೇಷ ವ್ಯವಸ್ಥೆ ಆಗಿತ್ತು.

ನಾವು ಶನಿವಾರ ಬೆಳಿಗ್ಗೆ 7.30ಕ್ಕೆ ನಮ್ಮ ಅಕ್ಕ-ಪಕ್ಕದವರಿಗೆಲ್ಲ ‘ಹೋಗಿ ಬರುತ್ತೇವೆ’ ಎಂದು ಹೇಳಿ ವಿಮಾನ ನಿಲ್ದಾಣಕ್ಕೆ ಹೊರಟೆವು. ಕೆಲವು ಬಂಧು-ಬಾಂಧವರು ಪೋನ್ ಮಾಡಿ ಶುಭಾಶಯ ಕೋರಿದ್ದರು. ನಾನಂತೂ ಮನಸ್ಸಿನಲ್ಲಿಯೇ ವಿಘ್ನ ನಿವಾರಕನಾದ ಗಣಪತಿಯನ್ನು ನೆನೆದು ‘ದೇವರೆ, ಯಾವುದೇ ತೊಂದರೆ ಪ್ರಯಾಣದಲ್ಲಿ ಆಗದಿರಲಿ ಎಂದು ಬೇಡಿಕೊಂಡೆ. ಮಗನು ನಮ್ಮನ್ನು ಬೆಂಗಳೂರಿನ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಬಿಟ್ಟನು. ಅವನೊಬ್ಬನನ್ನೆ ಬಿಟ್ಟು ಹೊರಡುವಾಗ ಸ್ವಲ್ಪ ಬೇಸರವಾಯಿತು.

ನಾವು ಕಾರಿನಿಂದ ಇಳಿಯುತ್ತಿದ್ದಂತೆ ಕಿಂಗ್ ಫಿಶರ್ ಏರ್ ಲೈನ್ಸ್‌ನವರು ನಮ್ಮನ್ನು ಬರಮಾಡಿಕೊಂಡು ಅವರ ತಳ್ಳುವಗಾಡಿಯಲ್ಲಿ ನಮ್ಮ ಸಾಮಾನುಗಳನ್ನು ತುಂಬಿಕೊಂಡು ತಮ್ಮ ಜೊತೆಯಲ್ಲಿ ಒಳಗೆ ಕರೆಕೊಂಡು ಹೋದರು. ನಮ್ಮ ಕಾಗದ ಪತ್ರಗಳೆಲ್ಲ ಸರಿಯಿದ್ದರಿಂದ ಒಳಗೆ ಯಾವ ತೊಂದರೆ ಆಗಲಿಲ್ಲ. ನಮ್ಮ ಜೊತೆಯಲ್ಲಿ ಕಿಂಗ್‌ಫಿಶರ್‌ನ ಹುಡುಗನೇ ನಮ್ಮ ಸೂಟ್‌ಕೇಸನ್ನು ಎತ್ತಿ ಹಾಕಿ ಅದರ ತೂಕ ಮಾಡಿ ಸರಿಯಾಗಿದೆ ಎಂದು ಚೆಕ್ ಇನ್ ಮಾಡಿಕೊಟ್ಟನು. ನಂತರ ಸೆಕ್ಯೂರಿಟಿ ಚೆಕ್ ಸಹ ಆಯಿತು. ನಾವು ಬೋರ್ಡಿಂಗ್ ಪಾಸ್ ತೆಗೆದುಕೊಂಡೆವು ಅಲ್ಲಿಯವರೆಗೂ ಆ ಹುಡುಗನು ನಮ್ಮ ಜೊತೆಯಲ್ಲಿಯೇ ಇದ್ದನು. ಇದರಿಂದ ನಮಗೆ ತುಂಬಾ ಸಂತೋಷವಾಯಿತು. ಸರಿಯಾಗಿ ಮಧ್ಯಾಹ್ನ 12 ಗಂಟೆಗೆ ನಾವು ಹೋಗುವ ಬೆಂಗಳೂರು ಟು ಲಂಡನ್ ಕಿಂಗ್ ಫಿಶರ್ ವಿಮಾನ ರೆಡಿಯಾಗಿ ಬಂತು. ನಾವು ವಿಮಾನ ಏರಿ ಕುಳಿತೆವು. ನನ್ನ ಎದೆ ಢವಢವ ಹೊಡೆದುಕೊಳ್ಳುತ್ತಿತ್ತು. ಸೊಂಟಕ್ಕೆ ಬೆಲ್ಟ್ ಕಟ್ಟಿಕೊಂಡು ಕುಳಿತೆವು. ವಾಂತಿ ಬರಬಹುದೇನೋ ಎಂದು ಮುಂಚಿತವಾಗಿ ಕೈಯಲ್ಲಿ ಪ್ಲಾಸ್ಟಿಕ್ ಚೀಲ ಹಿಡಿದುಕೊಂಡಿದ್ದೆ. ಕಿವಿಯನ್ನು ಕಣ್ಣನ್ನು ಗಟ್ಟಿಯಾಗಿ ಮುಚ್ಚಿಕೊಂಡು ಕುಳಿತಿದ್ದೆ. ಯಾವಾಗ ವಿಮಾನ ರನ್‌ವೇನಲ್ಲಿ ಓಡಿ ಮೇಲಕ್ಕೆ ಹಾರಿದ್ದೇ ಗೊತ್ತಾಗಲಿಲ್ಲ. ಯಾವ ತೊಂದರೆಯೂ ಆಗಲಿಲ್ಲ. ಬದಲಾಗಿ ಆಕಾಶದಲ್ಲಿ ಹಕ್ಕಿಯಂತೆ ಹಾರಿದ ಹಾಗೆ ಅನುಭವ ತುಂಬಾ ಖುಷಿ ಕೊಡುತ್ತಿತ್ತು. ಕೂತೂಹಲದಿಂದ ಕಿಟಕಿಯ ಹೊರಗೆ ಗ್ಲಾಸ್ ಮೂಲಕ ಇಣುಕಿ ನೋಡಿದರಂತೂ ವ್ಹಾ! ಸುಂದರವಾದ ಮನಮೋಹಕ ದೃಶ್ಯ ಕಂಡು ಮೈ ರೋಮಾಂಚನವಾಯಿತು. ವಿಮಾನ ಎತ್ತರಕ್ಕೆ ಮುಖ ಮಾಡಿ ಮೋಡಗಳ ಮಧ್ಯೆ ಹಾರುತ್ತಿದ್ದಾಗ ಕೆಳಗಡೆ ಮೋಡಗಳ ರಾಶಿ ಕಣ್ಣು ಹಾಯೆನಿಸುವ ತನಕವೂ ಕಾಣುವ ಹತ್ತಿಯ ರಾಶಿಯಂತೆ ಕಾಣುತ್ತಿತ್ತು, ಅಲ್ಲಲ್ಲಿ ಬಿದ್ದ ಮೋಡಗಳ ರಾಶಿಯನ್ನು ಕಂಡು ಚಿಕ್ಕವರಿರುವಾಗ ಐತಿಹಾಸಿಕ ಸಿನಿಮಾಗಳಲ್ಲಿ ನಾರದನು ಮೋಡದ ರಾಶಿಯ ಮೇಲೆ ‘ನಾರಾಯಣ ನಾರಾಯಣ’ ಎಂದು ಹಾಡುತ್ತ ಬರುವ ದೃಶ್ಯದ ಜೊತೆಗೆ ದೇವತೆಗಳು ಮೇಲಿನಿಂದ ಹೂವಿನ ಮಳೆಗರೆಯುವ ದೃಶ್ಯ ನೆನಪಾಯಿತು.

ನಾನು ನನ್ನ ಸೀಟಿನ ಎದುರಿಗೆ ಇರುವ ಟಿವಿಯಲ್ಲಿ ಸಲ್ಮಾನ್‌ಖಾನ್ ನಟಿಸಿರುವ ‘ದಬಾಂಗ’ ಸಿನಿಮಾ ಹಾಕಿ ಬೆಚ್ಚಗೆ ಅವರು ಕೊಟ್ಟ ಉಲನ್ ಕಂಬಳಿ ಹೊದ್ದು ನೋಡುತ್ತಾ ಕುಳಿತೆ. ಇವರು ಟಿ.ವಿ.ಯಲ್ಲಿ ವಿಮಾನ ಎಷ್ಟು ಎತ್ತರಕ್ಕೆ ಹಾರುತ್ತಾ ಇದೆ.

ಯಾವ ಪಟ್ಟಣದ ಮೇಲೆ ಹಾರುತ್ತಾ ಇದೆ. ಹೊರಗಿನ ಉಷ್ಣತೆ ಎಷ್ಟಿದೆ ಇದನ್ನು ನೋಡುತ್ತಾ ಇದ್ದರು. ಇದರ ಮಧ್ಯೆ ಸುಂದರವಾದ ಗಗನಸಖಿಯರು ಅರ್ಧ ಗಂಟೆಗೊಮ್ಮೆ ಬೇಕಾದ ಹಣ್ಣಿನ ಜ್ಯೂಸ್, ಕಾಫಿ, ಟೀ, ನೀರು ಜೊತೆಯಲ್ಲಿ ‘ಒಣಗಿದ ದ್ರಾಕ್ಷಿ, ಹುರಿದ ಗೋಡಂಬಿ, ಶೇಂಗಾ ತಿನ್ನಲು ಕೊಟ್ಟರು. ಕೆಲವರು ವೈನ್ ಬೀರು ಹೀಗೆ ಹಾಟ್ ಡ್ರಿಂಕ್ಸ್ ಸಹ ತೆಗೆದುಕೊಳ್ಳುತ್ತಿದ್ದರು. ನಾನು ಮಧ್ಯೆ ಮಧ್ಯೆ ಕೆಳಗಡೆ ಹೊರಗಿನ ಸುಂದವಾದ ರಮ್ಯ ದೃಶ್ಯವನ್ನು ನೋಡಿ ಸಂತೋಷಪಡುತ್ತಿದ್ದೆ.

ಸುಮಾರು ಮಧ್ಯಾಹ್ನ ಎರಡು ಗಂಟೆಗೆ ಒಳ್ಳೆಯ ರುಚಿಯಾದ ನಮ್ಮ ದೇಶಿಯ ಊಟವನ್ನು, (ಜೊತೆಯಲ್ಲಿ ಸಿಹಿ) ಕೊಟ್ಟರು ಬೇಕಾದವರಿಗೆ ಕಾಫಿ, ಟೀ ಕೊಟ್ಟರು ನಂತರ ಕಿಟಕಿ ಕವರ್‌ಗಳನ್ನು ಮುಚ್ಚಿ ಕತ್ತಲೆ ಮಾಡಿ ಎಲ್ಲರಿಗೂ ಮಲಗಿಕೊಳ್ಳುವಂತೆ ಹೇಳಿದರು. ನಾವು ಚೆನ್ನಾಗಿ ನಿದ್ದೆ ಮಾಡಿದೆವು. ಅಷ್ಟರಲ್ಲಿ ನನಗೆ ಟಾಯ್‌ಲೆಟ್‌ಗೆ ಹೋಗಬೇಕೆನಿಸಿತು. ಆದರೆ ಅದರ ಬಾಗಿಲು ಹೇಗೆ ತೆಗೆಯುವುದು ಮತ್ತು ಅದನ್ನು ಹೇಗೆ ಉಪಯೋಗಿಸುವುದು ಎಂದು ತಿಳಿಯದೆ ಮೌನವಾಗಿ ಕುಳಿತು ಹಿಂದೆ ಮುಂದೆ ನೋಡುತ್ತಾ ಇದ್ದೆ. ಇದು ನಮ್ಮ ಯಜಮಾನರಿಗೆ ಗೊತ್ತಾಗಿ, ‘ಬಾ ನಾನು ತೋರಿಸಿಕೊಡುತ್ತೇನೆ’ ಎಂದು ಕರೆದುಕೊಂಡು ಹೋಗಿ ಹೇಗೆ ಉಪಯೋಗಿಸುವುದು ಎಂದು ತೋರಿಸಿಕೊಟ್ಟರು.

ಆಗಲೇ ಮೊದಲ ಸಲ ನಾನು ಟಿಶ್ಯು ಕಾಗದ ಉಪಯೋಗಿಸಿದ್ದು ಪ್ಲಶ್ ಮಾಡಿದಾಗ ಬರುವ ದೊಡ್ಡ ಶಬ್ದ ಕೇಳಿ ಭಯವಾಯಿತು. ಬೇಗ ಹೊರಗೆ ಬಂದರೆ ಸಾಕಪ್ಪಾ ಎನಿಸಿ ಹೊರಗೆ ಬಂದೆ. ಆಗಲೇ ಬಾಗಿಲಲ್ಲಿ ಕ್ಯೂನಲ್ಲಿ 2-3 ಜನ ಕಾಯುತ್ತಿದ್ದರು.

ಮತ್ತೆ ಜ್ಯೂಸ್ ಕುಡಿದು ಸ್ನಾಕ್ಸ್ ತಿಂದು ಮುಗಿಸುವಷ್ಟರಲ್ಲಿ ವಿಮಾನದ ಸಿಬ್ಬಂದಿಯೊಬ್ಬರು ಬಂದು ಮೈಕ್‌ನಲ್ಲಿ ‘ನಾವು ಲಂಡನ್ನಿಗೆ ಹತ್ತಿರದಲ್ಲಿ ಇದ್ದೇವೆ. ಇನ್ನು ಸ್ವಲ್ಪ ಹೊತ್ತಿಗೆ ಲಂಡನ್ನಿನ ಹಿತ್ತು ವಿಮಾನ ನಿಲ್ದಾಣ ತಲುಪುತ್ತೇವೆ’ ಎಂದು ಹೇಳಿದರು. ಹೊರಗೆ ನೋಡಿದರೆ ಇನ್ನು ಬಿಸಿಲೇ ಇತ್ತು. ಸೂರ್ಯ ಸುಮಾರು ಮೇಲೆಯೇ ಇದ್ದ. ಇದೇನಿದು ಇಷ್ಟು ಬೇಗ ಬಂದು ಮುಟ್ಟಿದೆವು ಎನಿಸಿ ತುಂಬಾ ಆಶ್ಚರ್ಯವಾಯಿತು. ನಮ್ಮ ಗಡಿಯಾರ ನೋಡಿದರೆ ರಾತ್ರಿ 10 ಗಂಟೆ ತೋರಿಸುತ್ತಿತ್ತು. ವಿಮಾನ ಕೆಳಗೆ ಇಳಿಯತೊಡಗಿತು. ಮತ್ತೆ ನಮಗೆ ಸೊಂಟಕ್ಕೆ ಬೆಲ್ಟ್ ಕಟ್ಟಿಕೊಳ್ಳಲು ಹೇಳಿದರು. ವಿಮಾನ ಕೆಳಗೆ ಇಳಿಯುವಾಗ ಮೇಲಿನಿಂದ ಕೆಳಗೆ ನೋಡುವಾಗ ತುಂಬಾ ಖುಷಿಯಾಗುತ್ತಿತ್ತು. ಎಲ್ಲ ಕಟ್ಟಡಗಳು ಚಿಕ್ಕದಾಗಿ ಬೆಂಕಿ ಪೊಟ್ಟಣಗಳಂತೆ ಕಾಣುತ್ತಿದ್ದವು. ಥೇಮ್ಸ್ ನದಿ ಲಂಡನ್ ಸಿಟಿ ಉದ್ದಕ್ಕೂ ಹರಿಯುತ್ತಿತ್ತು. ಲಂಡನ್ ಬ್ರಿಜ್ ಲಂಡನ್ ಆಯ್ ಚಿಕ್ಕದಾಗಿ ಕಾಣುತ್ತಿತ್ತು. ಅಲ್ಲಲ್ಲಿ ಹಸಿರು ತುಂಬಿದ ಉದ್ಯಾನವನಗಳು ಕಾಣುತ್ತಿದ್ದವು. ಅಲ್ಲಿಯ 6 ಗಂಟೆ ಸಮಯಕ್ಕೆ ನಮ್ಮ ವಿಮಾನ ಹಿತ್ತು ನಿಲ್ದಾಣವನ್ನು ತಲುಪಿತ್ತು. ಇದು ತುಂಬಾ ದೊಡ್ಡ ವಿಮಾನ ನಿಲ್ದಾಣ. ಜಗತ್ತಿನ ಅತಿ ದೊಡ್ಡ ವಿಮಾನ ನಿಲ್ದಾಣಗಳಲ್ಲಿ ಇದೂ ಒಂದು. ಅಲ್ಲಿ ಏನಿಲ್ಲವೆಂದರೂ ಸಾವಿರಾರು ವಿಮಾನಗಳು ನಿಂತಿದ್ದವು. ನಿಮಿಷಕ್ಕೊಂದರಂತೆ ವಿಮಾನಗಳು ಹಾರಿ ಹೋಗುತ್ತಿದ್ದವು ಮತ್ತು ಇಳಿಯುತ್ತಿದ್ದವು. ಇಂಗ್ಲೆಂಡ್ ಮತ್ತು ಭಾರತದ ಸಮಯದಲ್ಲಿ 4.30 ಗಂಟೆಯ ವ್ಯತ್ಯಾಸವಿದೆ. (ಇಂಗ್ಲೆಂಡಿನ ಸಮಯ ಹಿಂದಿದೆ.)

ನಾವು ಎಲ್ಲ ಪ್ರಯಾಣಿಕರ ಹಿಂದಿಂದೆ ಜೊತೆಯಾಗಿ ಬಂದೆವು ಮತ್ತು ಮೊದಲನೆ ಸಲವಾದ್ದರಿಂದ ಅವರನ್ನೇ ಹಿಂಬಾಲಿಸಿ ಕ್ಯೂನಲ್ಲಿ ನಿಂತು ಸೆಕ್ಯೂರಿಟಿ ಚೆಕ್‌ಗೆ ಬಂದೆವು. ಅಲ್ಲಿ ನಮ್ಮ ಸರದಿ ಬಂದಾಗ ‘ಯಾರ ಮನೆಗೆ ಹೋಗುತ್ತೀರಿ? ಯಾಕೆ ಹೋಗುತ್ತೀರಿ? ಎಷ್ಟು ದಿನ ಇರುತ್ತೀರಿ? ಯಾವಾಗ ವಾಪಸ್ ಹೋಗುತ್ತೀರಿ’ ಎಂದು ಮೊದಲಾದ ಪ್ರಶ್ನೆಗಳನ್ನು ಕೇಳಿದರು. ನಾವು ಅವುಗಳಿಗೆ ಸರಿಯಾಗಿ ಉತ್ತರಿಸಿ ಅವರಿಂದ ಓಕೆ ಎಂದ ಮೇಲೆ ಮುಂದೆ ಹೋಗಿ ನಮ್ಮ ಸೂಟ್‌ಕೇಸನ್ನು ಪಡೆದುಕೊಂಡು ಮಗಳಿಗೆ
ಪೋನ್ ಮಾಡಿದೆವು. ನಾವು ಇಂಡಿಯಾದಿಂದಲೇ ಮೊಬೈಲ್ ಮೆಟ್ರಿಕ್ಸ್ ಸಿಮ್‌ನ್ನು ತೆಗೆದುಕೊಂಡು ಬಂದಿದ್ದರಿಂದ ಕೂಡಲೇ ಪೋನ್ ಮಾಡಲು ತೊಂದರೆಯಾಗಲಿಲ್ಲ.

ತಳ್ಳುವ ಗಾಡಿಯಲ್ಲಿ ನಮ್ಮ ಸಾಮಾನು ಇಟ್ಟುಕೊಂಡು ಹೊರದ್ವಾರದ ಮುಖಾಂತರ ಹೊರಗೆ ಬಂದೆವು. ಬಾಗಿಲಲ್ಲಿಯೇ ಮಗಳು ಮತ್ತು ಅಳಿಯ ನಮಗಾಗಿ ಕಾಯುತ್ತಾ ಇದ್ದರು. ಅವರನ್ನು ಕಂಡು ಅಪ್ಪಿಕೊಂಡಾಗ ಖುಷಿಯಾಯಿತು. ಕಾರು ಪಾರ್ಕಿಂಗ್‌ನಲ್ಲಿ ಇದ್ದು ಕಾರ್ ಬಳಿ ಬರುತ್ತಿದ್ದಂತೆ ಸಂಜೆಯಾಗಿ ಚುಮು ಚುಮು ಗಾಳಿ ತಂಪಾಗಿ ಬೀಸುತ್ತಿತ್ತು. ಜೀವನದಲ್ಲಿ ಪ್ರಥಮ ಬಾರಿಗೆ ವಿದೇಶದ ನೆಲದಲ್ಲಿ ಕಾಲೂರಿದ ಸುಂದರ ಅನುಭವದಿಂದ ಮನಸ್ಸು ಆನಂದದಿಂದ ಪುಳಕಗೊಂಡಿತು. ಸುತ್ತ-ಮುತ್ತಲಿನ ವಾತಾವರಣವನ್ನು, ಜನರನ್ನು ಬೆರಗು ಕಣ್ಣುಗಳಿಂದ ನೋಡುತ್ತಿದ್ದೆ. ಕಾರುಗಳು ಸಾಗುವಾಗ ಇರುವೆಗಳು ಸಾಲಾಗಿ ಹರಿದಂತೆ ಭಾಸವಾಗುತ್ತಿತ್ತು. ಅಂತೂ ಮಗಳ ಜೊತೆ ಸಾಮಾನು ತೆಗೆದುಕೊಂಡು ಕಾರಿನ ಬಳಿ ಬಂದು ಮುಟ್ಟಿದೆವು. ಆಗಲೇ ಸೂಟ್‌ಕೇಸಿನಿಂದ ಮಾವಿನ ಹಣ್ಣಿನ ವಾಸನೆ ಮೂಗಿಗೆ ಬಡಿಯುತ್ತಿತ್ತು. ಅಳಿಯ ‘ಕಾರಿನ ಡಿಕ್ಕಿ ತೆಗೆಯುತ್ತ ಮಾವಿನ ಹಣ್ಣಿನ ವಾಸನೆ ತುಂಬಾ ಜೋರಾಗಿದೆಯಲ್ಲ’ ಎಂದು ನಕ್ಕನು. ನಾವು ವಿಮಾನ ನಿಲ್ದಾಣದಿಂದ ಹೊರಗೆ ಬಂದು ಮಗಳ ಮನೆಯ ಹಾದಿ ಹಿಡಿದೆವು. ರಸ್ತೆಯಲ್ಲಿ ಬರುವಾಗ ಅಕ್ಕ-ಪಕ್ಕದಲ್ಲಿ ಬೆಳೆಸಿರುವ ಮರಗಳ ಸಾಲು, ಸ್ವಚ್ಛವಾಗಿರುವ ರಸ್ತೆಗಳು, ರಸ್ತೆಗುಂಟ ಅಲ್ಲಲ್ಲಿ ಇರುವ ಚಿಕ್ಕಚಿಕ್ಕ ಹೂವಿನ ತೋಟಗಳು, ಹುಡುಕಿದರೂ ಎಲ್ಲೂ ಕಾಣದ ಮಣ್ಣು, ಆ ಸ್ವಚ್ಛತೆ ನೋಡಿ ತುಂಬಾ ಆಶ್ಚರ್ಯವಾಯಿತು. ಮಗಳ ಮನೆ ವಿಮಾನ ನಿಲ್ದಾಣದಿಂದ ತುಂಬಾ ದೂರವಿರಲಿಲ್ಲ. ಹೀಗಾಗಿ ಬೇಗನೇ ಮನೆಗೆ ಬಂದು ಮುಟ್ಟಿದೆವು. ಬರುವಾಗಲೇ ಒಂದು ಅಂಗಡಿಗೆ ಹೋಗಿ ಮನೆಗೆ ಬೇಕಾದ ತರಕಾರಿ ಹಣ್ಣು ಇತರೇ ಸಾಮಾನುಗಳನ್ನು ತೆಗೆದುಕೊಂಡು ಮನೆ ತಲುಪಿದೆವು. ಅಲ್ಲಿ ಬಹು ಅಂತಸ್ತಿನ ಕಟ್ಟಡಗಳು ತುಂಬಾ ಕಡಿಮೆ. ಹೊರಗಿನಿಂದ ನೋಡಲು ಎಲ್ಲ ಮನೆಗಳು ಒಂದೇ ರೀತಿಯಾಗಿ ಕಾಣುತ್ತವೆ. ಅಲ್ಲಿ ಮನೆಗಳಿಗೆ ಹೊರಗಡೆ ಸಿಮೆಂಟ್ ಪ್ಲಾಸ್ಟರಿಂಗ್ ಆಗಲಿ ಸುಣ್ಣ-ಬಣ್ಣವಾಗಲಿ ಯಾವುದನ್ನೂ ಮಾಡುವುದಿಲ್ಲ. ಇದರಿಂದ ವಾತಾವರಣ ಕಲುಷಿತ ಆಗದಂತೆ ಸರ್ಕಾರ ಮುನ್ನೆಚ್ಚರಿಕೆ ವಹಿಸಿದೆ. ಆದರೆ ಮನೆಯ ಒಳಗಡೆ ಅವರವರ ಅಭಿರುಚಿ ಮತ್ತು ಅನುಕೂಲಕ್ಕೆ ತಕ್ಕಂತೆ ಅಲಂಕಾರಕ್ಕೆ ಪೀಠೋಪಕರಣಗಳು ವಿವಿಧ ರೀತಿಯ ಲೈಟ್ ಗಳು ಕಾರ್ಪೆಟ್‌ಗಳು ಹೀಗೆ ನಾನಾ ರೀತಿಯಿಂದ ಅಲಂಕರಿಸಿರುತ್ತಾರೆ. ಅಲ್ಲಿ ಸಾಮಾನ್ಯವಾಗಿ ಎಲ್ಲ ಮನೆಗಳಲ್ಲೂ ಬೆಡ್ರೂಮ್ ಮತ್ತು ಬಾತ್‌ ರೂಮ್‌ಗಳು ಮೇಲಿನ ಅಂತಸ್ತಿನಲ್ಲಿ ಇರುತ್ತವೆ. ಕೆಳಗಡೆ ಕೇವಲ ಅಡುಗೆ ಮನೆ ಮತ್ತು ಹಾಲ್ ಇರುತ್ತದೆ. ಅದರ ಹಿಂದೆ ಪುಟ್ಟ ಕೈತೋಟ ಮತ್ತು ಚಿಕ್ಕ ಔಟ್ ಹೌಸ್ ಇರುತ್ತದೆ. ಮಗಳ ಮನೆ ನೋಡಿ ತುಂಬಾ ಸಂತೋಷವಾಯಿತು. ದೇಶದಿಂದ ದೇಶಕ್ಕೆ ಬಂದರೂ ಒಂದು ಚೂರೂ ಆಯಾಸವಾಗಲಿಲ್ಲ.

ಸೂಟ್‌ಕೇಸ ತೆಗೆದು ಮಾವಿನ ಹಣ್ಣು ಏನಾಗಿದೆಯೋ ಎಂದು ನೋಡಿದೆವು ದೇವರ ದಯೆಯಿಂದ ಒಂದು ಹಣ್ಣೂ ಸಹ ಸ್ವಲ್ಪವೂ ಹಾಳಾಗಿರಲಿಲ್ಲ. ಪ್ರೀತಿಯಿಂದ ತಂದ ಹಣ್ಣುಗಳನ್ನು ಆ ದೇವರೇ ರಕ್ಷಿಸಿರಬೇಕು. ಎಲ್ಲ ಸಾಮಾನುಗಳೂ ಸಹ ಸರಿಯಾಗಿದ್ದವು. ನಂತರ ಊಟ ಮಾಡಿ ಮುಗಿಸಿದೆವು. ಅಲ್ಲಿಗೆ ರಾತ್ರಿ 10 ಗಂಟೆಯಾಯಿತು. ಆದರೂ ಇನ್ನೂ ಬೆಳಕು ಇತ್ತು. ರಾತ್ರಿ ಮಲಗಿದಾಗ ಸಹ ಈಗಷ್ಟೇ ಸಂಜೆಯಾಗುತ್ತಿದೆಯೇ ಎನಿಸುತ್ತಿತ್ತು.

ಮಾರನೆಯ ದಿನ ಎಂದಿನಂತೆ ಬೆಳಿಗ್ಗೆ ಎಚ್ಚರವಾಯಿತು. ನಮಗೆ ಯಾವುದೇ ರೀತಿಯ ಸಮಯ ಬದಲಾವಣೆಯ ತೊಂದರೆಯಾಗಲಿಲ್ಲ. ಮಾರನೆಯ ದಿನವೇ ಬೀರಣ್ಣ ಮತ್ತು ಪ್ರತೀಕ ಅವರ ಮನೆಗೆ ಹೋಗಿ ಅವರಿಗಾಗಿ ಕಳಿಸಿದ ಸಾಮಾನು ಮುಟ್ಟಿಸಿ ರಾತ್ರಿ ಅವರ ಮನೆಯಲ್ಲೇ ಊಟ ಮುಗಿಸಿ ಬಂದೆವು. ಅದು ನಮ್ಮ ಹೊರದೇಶದ ಮೊದಲ ಆತಿಥ್ಯವಾಗಿತ್ತು.

By-ಶಾಲಿನಿ ಗಾಂವಕರ್

ಮುಂದಿನ ಭಾಗ ಓದಿ…

Leave a Comment

Comments

No comments yet. Why don’t you start the discussion?

    Leave a Reply