(ಭಾಗ-2) ಪಡುವಣದ ಪ್ರವಾಸ: ಒಂದು ಪ್ರಯಾಣ, ಸಾವಿರ ನೆನಪುಗಳು!

(ಭಾಗ-2) ಪಡುವಣದ ಪ್ರವಾಸ: ಒಂದು ಪ್ರಯಾಣ, ಸಾವಿರ ನೆನಪುಗಳು!

ಸ್ಕಾಟ್‌ಲ್ಯಾಂಡ್ ಪ್ರವಾಸ

ನಮ್ಮ ಮಗಳು ಅಳಿಯ ನಮಗಾಗಿ ಸ್ಕಾಟ್‌ಲ್ಯಾಂಡ್ ಪ್ರವಾಸದ ವ್ಯವಸ್ಥೆ ಮಾಡಿದ್ದರು. ಅದಕ್ಕಾಗಿ ಇಂಡಿಯಾದವರದ್ದೇ ಆದ ಸ್ಟಾರ್ ಟೂರ್‌ನಲ್ಲಿ ನಮ್ಮಿಬ್ಬರ ಟಿಕೇಟ್ ಬುಕ್ ಮಾಡಿದ್ದರು. ಅದು ನಾಲ್ಕು ದಿನದ ಟೂರ್ ಆಗಿತ್ತು. ನಮ್ಮ ಬಸ್ಸು ಎಂಮ್ಲ ಎಂಬ ಪ್ರದೇಶದಿಂದ ಹೊರಡುತ್ತಿತ್ತು. ಇದು ಮಗಳ ಮನೆಯಿಂದ ಸ್ವಲ್ಪ ದೂರವೇ ಇತ್ತು. ಅದಕ್ಕಾಗಿ ಮಗಳು ಅಳಿಯ ನಮ್ಮನ್ನು ಅಲ್ಲಿ ಬಿಟ್ಟು ಹೋದರು. ಅಲ್ಲಿ ಸುಮಾರು ಟೂರಿಸ್ಟ್ ಬಸ್ಸುಗಳು ಇದ್ದವು. ಅಲ್ಲಿಂದ ಅವು ಬೇರೆ ಬೇರೆ ದೇಶಗಳು ಮತ್ತು ಊರುಗಳಿಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಿದ್ದವು. – ಪ್ಯಾರಿಸ್, ಜರ್ಮನ್, ಸ್ವಿಜರ್‌ಲ್ಯಾಂಡ್, ಇಟಲಿ, ಸ್ಪೇನ್ ಹೀಗೆ ನಾನಾ ಕಡೆಗೆ ಹೋಗುತ್ತಿದ್ದವು. ನಾವು ನಮ್ಮ ಟೂರ್ ಗೈಡ್‌ನನ್ನು ವಿಚಾರಿಸಿ ನಮ್ಮ ಬಸ್ಸು ಏರಿ ಕುಳಿತೆವು. ನಮ್ಮ ಬಸ್‌ನಲ್ಲಿ ಸುಮಾರು 40 ಜನರು ಇದ್ದರು. ಅದರಲ್ಲಿ 25 ಜನ ಗುಜರಾತಿಗಳು ಇದ್ದರು. ಉಳಿದವರು ಮಹಾರಾಷ್ಟ್ರ, ಕರ್ನಾಟಕ, ಕೇರಳ, ಮದ್ರಾಸಿನಿಂದ ಒಂದೆರಡು ದಂಪತಿಗಳು ಮಾತ್ರ ಬಂದಿದ್ದರು. ನಮ್ಮ ಬಸ್ ಸ್ಕಾಟ್‌ಲ್ಯಾಂಡ್ ಕಡೆ ಹೊರಟಿತು. ಮಾರ್ಗದ ಇಕ್ಕೆಲಗಳಲ್ಲೂ ಮುಂಜಾನೆಯ ಸಮಯವಾದ್ದರಿಂದ ಮಂಜು ಮುಸುಕಿದಂತೆ ಆಗಿತ್ತು ಮತ್ತು ಮೋಡವಿರುವುದರಿಂದ ಸಣ್ಣಗೆ ಮಳೆ ಬರುತ್ತಿತ್ತು. ಸುತ್ತಲೂ ಮರಗಿಡಗಳು, ಹುಲ್ಲುಗಾವಲುಗಳು ಅದರ ಮೇಲೆ ಮುತ್ತಿನಂತೆ ಕಾಣಿಸುವ ಮಳೆ ಹನಿಗಳು ಮನಸ್ಸಿಗೆ ತುಂಬಾ ಮುದ ಕೊಡುತ್ತಿತ್ತು. ನಾನಂತೂ ಗಾಡಿಯಲ್ಲಿ ಬೆಚ್ಚಗೆ ಕುಳಿತು ಹೊರಗಿನ ಸೃಷ್ಟಿ ಸೌಂದರ್ಯವನ್ನು ಮನಸಾರೆ ಸವಿಯುತ್ತಿದ್ದೆ. ನಾವು ಹೊರಟ ಬಸ್ಸು ಸಹ ತುಂಬಾ ಅನುಕೂಲಕರವಾಗಿತ್ತು. ಚಿಕ್ಕದೊಂದು ಟಾಯ್‌ಲೆಟ್ ಕೂಡ ಇತ್ತು. ಅವಶ್ಯಕತೆ ಬಂದರೆ ನಮ್ಮ ದೇಹಬಾಧೆಯನ್ನು ತೀರಿಸಿಕೊಳ್ಳಬಹುದಿತ್ತು. ಹೊತ್ತು ಹೋದಂತೆ ಪೂರ್ವದಲ್ಲಿ ಬೆಂಕಿಯ ಚೆಂಡಿನಂತೆ ಸೂರ್ಯ ಮೇಲಕ್ಕೆ ಬರತೊಡಗಿದಂತೆ ಎಳೆ ಬಿಸಿಲು ಶುರುವಾಯಿತು. ಮತ್ತು ಮನಸ್ಸಿಗೆ ಮುದ ತುಂಬಿತು.

ದಾರಿ ಮಧ್ಯೆ ತಿಂಡಿ ತಿನ್ನುವ ಸಲುವಾಗಿ ಒಂದು ದೊಡ್ಡ ಮಾಲ್ ಬಳಿ ನಿಲ್ಲಿಸಿದರು. ಮೊದಲು ನಾವು ರೆಸ್ಟ್ ರೂಮ್‌ಗೆ ಹೋಗಿ ಬಂದೆವು. ನಮಗಂತೂ ಎಲ್ಲಿಗೆ ಹೋಗಬೇಕು ಏನು ತೆಗೆದುಕೊಳ್ಳಬೇಕು ಎನ್ನುವುದು ತಿಳಿಯದೇ ಅತ್ತ ಇತ್ತ ನೋಡುತ್ತಾ ನಿಂತೆವು. ನಮ್ಮ ಜೊತೆ ಬಂದವರು ಹೆಚ್ಚಾಗಿ ಸಣ್ಣ ವಯಸ್ಸಿನ ತರುಣರು ಐ.ಟಿ. ಇಂಜಿನಿಯರು ಮತ್ತು ವಿದ್ಯಾರ್ಥಿಗಳಾಗಿದ್ದರಿಂದ ಇದೆಲ್ಲ ಅವರಿಗೆ ಅನುಭವ ಇತ್ತು. ನಮಗೆ ಮೊದಲ ಅನುಭವ. ಹಸಿವೆಯಂತೂ ಆಗಿತ್ತು. ಏನಾದರೂ ತೆಗೆದುಕೊಳ್ಳೋಣ ಎನಿಸಿ ಕೋಸ್ಟಾ ಕಾಫಿ ತೆಗೆದುಕೊಂಡೆವು ಬರೀ ಕಾಫಿ ಬೆಲೆಯೇ 3½ ಪೌಂಡ್. ಅದೂ ಕಹಿ ಕಾಫಿ, ಹಾಲಿಲ್ಲ, ಸಕ್ಕರೆ ಇಲ್ಲ. ನನ್ನ ಹತ್ತಿರ ಅಂತೂ ಒಂದು ಗುಟುಕು ಕುಡಿಯಲು ಆಗಲಿಲ್ಲ. ಇವರು ಸ್ವಲ್ಪ ಕುಡಿದು ಬಿಟ್ಟು ಬಂದರು. ನಂತರ ನಮ್ಮ ಪ್ರಯಾಣ ಸಾಗಿತು.

ಮೊದಲು ನಾವು ಮಾರ್ಗ ಮಧ್ಯೆ ಸರೋವರದಲ್ಲಿ ಕ್ರೂಸ್‌ನಲ್ಲಿ ಒಂದು ತಾಸು ವಿಹಾರ ಹೊರಟೆವು. ನಂತರ ನಮಗೆ ಊಟಕ್ಕೆ ಬಿಟ್ಟರು. ನಮ್ಮ ಜೊತೆ ಬಂದವರೆಲ್ಲಾ ಜೊತೆಯಲ್ಲಿ ಊಟ ತಿಂಡಿ ಕುರುಕಲು ಚಕ್ಕುಲಿ ಅವಲಕ್ಕಿ ಉಂಡಿ ನಿಪ್ಪಟ್ಟು ಹೀಗೆ ಏನೇನೋ ತಂದಿದ್ದರು. ಕೆಲವರು ಅದನ್ನು ತಿಂದರೆ ಕೆಲವರು ಹೊಟೇಲಿಗೆ ಹೋಗಿ ಬೇಕಾದದ್ದನ್ನು ತಿಂದರು. ನಾವು ಮೊದಲನೇ ಬಾರಿ ವಿದೇಶದಲ್ಲಿ ಪ್ರವಾಸ ಹೋಗಿದ್ದರಿಂದ ಇದರ ಬಗ್ಗೆ ಯಾವ ಮುಂದಾಲೋಚನೆಯನ್ನೂ ಮಾಡಿರಲಿಲ್ಲ. ಹಾಗೆ ಎದ್ದು ಬರಿಗೈಯಲ್ಲಿ ಹೊರಟುಬಿಟ್ಟಿದ್ದೆವು. ಆಗ ನಮಗೆ ನಮ್ಮ ತಪ್ಪಿನ ಅರಿವಾಯಿತು. ಇಬ್ಬರಿಗೂ ತುಂಬಾ ಹಸಿವಾಗುತ್ತಾ ಇತ್ತು. ಅಲ್ಲಿ ನಾವು ತಿನ್ನುವಂತಹ ಯಾವ ಆಹಾರವೂ ಕಾಣಲಿಲ್ಲ. ನಾನು ಐಸ್-ಕ್ರೀಮ್ ತಿಂದೆ. ಆದರೆ ಇವರಿಗೆ ಊಟ ಬೇಕಾಗಿತ್ತು. ಇವರಂತೂ ಹಸಿವೆಯಿಂದ ಚಡಪಡಿಸತೊಡಗಿದರು. ಆಗ ನಮ್ಮ ಜೊತೆ ಬಂದಿದ್ದ ತರುಣರು ವಿದೇಶಿ ಆಹಾರ ತಿನ್ನುತ್ತಾ ಇದ್ದರು. ಅವರ ಬಳಿ ಹೋಗಿ ನಮ್ಮ ಸಮಸ್ಯೆ ಹೇಳಿಕೊಂಡೆವು. ಆಗ ಅವರು ಬೇಯಿಸಿದ್ದ ತರಕಾರಿ ಹಾಗೂ ಬೇಳೆ ತೆಗೆದುಕೊಳ್ಳಬಹುದು ಎಂದರು. ಅದರಂತೆ ಅವರಿಗೆ ನಾವು ಥ್ಯಾಂಕ್ಸ್ ಹೇಳಿ ಇವರು ಅದನ್ನೇ ತಿಂದರು.

ಅಲ್ಲಿಂದ ಮುಂದೆ ನಾವು ಪ್ರಸಿದ್ಧ ಇಂಗ್ಲಿಷ್ ಲೇಖಕರಾದ ವರ್ಡ್ಸ್‌ವರ್ ಹುಟ್ಟಿ ಬೆಳೆದ ಊರನ್ನು ನೋಡಿಕೊಂಡು ಮುಂದೆ ಗ್ರೇಟಿನಾ ಗ್ರೀನ್ ಎನ್ನುವಲ್ಲಿಗೆ ಬಂದು ಮುಟ್ಟಿದೆವು. ಬಹಳ ಹಿಂದೆ ಲಂಡನ್ನಿನಲ್ಲಿ ಯುವಕರು 20 ವರ್ಷಕ್ಕೆ ಮೊದಲು ಮದುವೆಯಾಗುವಂತೆ ಇರಲಿಲ್ಲವಂತೆ. ಹಾಗೇನಾದರೂ ಯುವಕ ಯುವತಿಯರು ಮದುವೆಯಾದರೆ ರಾಜ ಮನೆತನದವರಿಂದ ಕಠಿಣ ಶಿಕ್ಷೆಗೆ ಗುರಿಯಾಗಬೇಕಿತ್ತಂತೆ.

ಆಗ ಗ್ರೇಟಿನಾ ಗ್ರೀನ್ ಎಂಬ ಯುವಕ ಯುವತಿಯರು ಒಬ್ಬರನೊಬ್ಬರು ತುಂಬಾ ಪ್ರೀತಿಸುತ್ತಿದ್ದರಂತೆ. ಅವರಿಗೆ ಒಂದಾಗಲೂ ಬ್ರಿಟಿಷರು ಬಿಡಲಿಲ್ಲವಂತೆ. ಅದಕ್ಕಾಗಿ ಅವರು ಈ ಪ್ರದೇಶಕ್ಕೆ ಓಡಿ ಬಂದು ಇಲ್ಲಿ ಮದುವೆಯಾದರಂತೆ. ಇಲ್ಲಿಯ ಜನ ಸಹ ಅವರನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರಂತೆ. ಅದಕ್ಕಾಗಿ ಈ ಊರಿಗೆ ಗ್ರೇಟಿನಾ ಗ್ರೀನ್ ಎಂದು ಹೆಸರು ಬಂದಿದೆ. ಅಲ್ಲಿ ಅವರು ವಾಸಿಸಿದ ಮನೆ ಈಗಲೂ ಸಹ ಇದೆ.

ಅಲ್ಲಿ ಸುತ್ತಮುತ್ತಲೂ ವಿಶಾಲವಾದ ಹುಲ್ಲುಗಾವಲು ಪ್ರದೇಶವಾಗಿದೆ. ಅಲ್ಲಿ ತುಂಬಾ ಕುರಿಗಳನ್ನು ಸಾಕುತ್ತಾರೆ. ಹೀಗಾಗಿ ಈ ಪ್ರದೇಶ ಉಲ್ಲನ್ ಬಟ್ಟೆಗೆ ಪ್ರಸಿದ್ದವಾಗಿದೆ. ಅಲ್ಲಿ ಉಲ್ಲನ್ ಬಟ್ಟೆಯ ದೊಡ್ಡ ದೊಡ್ಡ ಅಂಗಡಿಗಳಿವೆ. ಕೆಲವರು ಶಾಪಿಂಗ್ ಮಾಡಿದರು. ಅಲ್ಲಿ ಮುಂದೆ ಸಾಗಿ ನಾವು ಕತ್ತಲಾಗುತ್ತಿದ್ದಂತೆ ಸ್ಕಾಟ್‌ಲ್ಯಾಂಡ್‌ಗೆ ಬಂದು ಮುಟ್ಟಿದೆವು. ಅಲ್ಲಿ ಜೂನ್ ತಿಂಗಳಾದರೂ ತುಂಬಾ ಚಳಿ ಇತ್ತು. ತುಂಬಾ ತಣ್ಣನೆಯ ಚುಮು ಚುಮು ಗಾಳಿ ಬೀಸುತ್ತಿತ್ತು. ಚಳಿಗಾಲದಲ್ಲಿ ಇಲ್ಲಿ ತುಂಬಾ ಹಿಮ ಬೀಳುತ್ತದೆಯಂತೆ. ನಾವು ಪ್ರೀಮಿಯರ್ ಇನ್ ಎನ್ನುವ ಸುಂದರವಾದ ಭವ್ಯವಾದ ಹೋಟೆಲ್‌ನಲ್ಲಿ ಇದ್ದೆವು. ಸ್ನಾನ ಮಾಡಿ ಫ್ರೆಶ್ ಆದೆವು. ರಾತ್ರಿ ಅದೇ ಹೋಟೆಲ್‌ನಲ್ಲಿ ತುಂಬಾ ಒಳ್ಳೆಯ ನಮಗೆ ಬೇಕಾದಂಥ ಇಂಡಿಯಾದ – ಊಟ ಸಿಕ್ಕಿತು. ಹೊಟ್ಟೆ ತುಂಬಾ ಊಟ ಮಾಡಿ ರೂಮಿಗೆ ಬಂದು ಮಲಗಿಕೊಂಡೆವು.

ಮಾರನೆಯ ದಿನ ಬೆಳಿಗ್ಗೆ ಬೇಗ ಎದ್ದು ರೆಡಿಯಾದೆವು. ರೂಮಿನಲ್ಲಿ ಬಿಸಿ ಬಿಸಿ ನೀರು ಕಾಸಲು ಕೆಟಲು ಹಾಲು ಸಕ್ಕರೆ ಚಹ ಕಾಫಿ ಪುಡಿ ಇದ್ದುದರಿಂದ ನಾವು ಚಹ ಮಾಡಿಕೊಂಡು ಕುಡಿದೆವು. ರೂಮ್‌ನಲ್ಲಿ ಇಸ್ತಿ ಮತ್ತು ಬೈಬಲ್ ಸಹ ಇಟ್ಟಿದ್ದರು. ಬೆಳಗಿನ ತಿಂಡಿಯನ್ನು ಸಹ ಹೋಟೆಲ್‌ನಲ್ಲಿಯೇ ವ್ಯವಸ್ಥೆ ಮಾಡಲಾಗಿತ್ತು. ಎಲ್ಲ ದೇಶ ವಿದೇಶದ ಎಲ್ಲ ತರಹದ ಹಣ್ಣುಗಳನ್ನು, ಹಣ್ಣಿನ ಜೂಸ್ಗಳನ್ನು ಇಟ್ಟಿದ್ದರು. ನಾವು ಹೊಟ್ಟೆ ತುಂಬಾ ತಿಂಡಿ ತಿಂದು ಜೂಸ್ ಕುಡಿದು ಹೊರಟೆವು, ಸ್ಕಾಟ್‌ಲ್ಯಾಂಡ್ ತುಂಬಾ ಸುಂದರವಾದ ಊರು. ಎಲ್ಲಿ ನೋಡಿದರೂ ಹಸಿರಾದ ವಿಶಾಲವಾದ ಕಣ್ಣು ಮುಟ್ಟುವವರೆಗೆ ಕಾಣುವ ಹುಲ್ಲುಗಾವಲುಗಳು ಮತ್ತು ಅಲ್ಲಲ್ಲಿ ಕಾಣುವ ಹಳ್ಳ ಕೊಳ್ಳಗಳು, ಅದಕ್ಕಾಗಿಯೇ ಇದಕ್ಕೆ ಲೇಕ್‌ ಸಿಟಿ ಎಂದು ಕರೆಯುತ್ತಾರೆ. ಮೊದಲು ಇಂಗ್ಲೀಷರು ಯುದ್ಧ ಮಾಡಿ ಇಲ್ಲಿಯ ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿದ್ದಾರಂತೆ. ಮೊದಲು ನಮ್ಮನ್ನು ಅಲ್ಲಿಗೆ ಕರೆದುಕೊಂಡು ಹೋದರು. ಅಲ್ಲಿಂದ ಮುಂದೆ ಸುಂದರವಾದ

ಪ್ರದೇಶಗಳನ್ನು ನೋಡಿಕೊಂಡು ನಂತರ ಕ್ರುಸ್‌ನಲ್ಲಿ ಕರೆದುಕೊಂಡು ಹೋದರು. ಅಲ್ಲಿಯ ಒಂದೊಂದು ಲೇಕ್‌ಗಳು ತುಂಬಾ ತುಂಬಾ ದೊಡ್ಡ ದೊಡ್ಡ ಸರೋವರಗಳಂತೆ ಇವೆ. ಅಲ್ಲಿಂದ ಮುಂದೆ ನಮ್ಮನ್ನು ಊಟಕ್ಕಾಗಿ ಒಂದು ದೊಡ್ಡ ಮಾಲ್ ಮುಂದೆ ನಿಲ್ಲಿಸಿದರು. ನಾವು ಮಾಲ್ ಒಳಗೆಲ್ಲಾ ಸುತ್ತಾಡಿದೆವು. ಏನು ಕೊಳ್ಳಬೇಕೆಂದು ಗೊತ್ತಾಗದೇ ಪೇಚಾಡಿದೆವು. ನಾವು ಅಲ್ಲಿ ಭಾರತೀಯರ ಜೊತೆಗಿದ್ದರೂ ಏಕೋ ಏನೋ ನಾವು ಒಂಟಿ ಎನ್ನುವ ಭಾವನೆ ಬರುತ್ತಿತ್ತು. ಆದರೂ ವಿಚಾರ ಮಾಡಿ ಕಡ್ಲೆ ಹಿಟ್ಟಿನ ಬಜ್ಜಿ ಹಾಗೂ ಸಮೋಸಾ ತೆಗೆದುಕೊಂಡೆವು. ಅದಕ್ಕೆ ಸೂಸೇಜ್ ಎಂದು ಇಂಗ್ಲೀಷ್‌ನಲ್ಲಿ ಬರೆದಿದ್ದರು ಜೊತೆಗೆ ಒಂದು ಜ್ಯೂಸ್ ತೆಗೆದುಕೊಂಡು ಅಲ್ಲಿಯೇ ಪಕ್ಕದಲ್ಲಿ ಇರುವ ಮರದ ನೆರಳಿಗೆ ತಿನ್ನಲು ಕುಳಿತೆವು. ಬಜ್ಜಿಯನ್ನು ಸರಿಯಾಗಿ ಬೇಯಿಸಿರಲಿಲ್ಲ. ಇನ್ನೇನು ಸಮೋಸಾ ತಿನ್ನಬೇಕು ಎನ್ನುವಾಗ ಮಗಳ ಪೋನ್ ಬಂತು. ‘ಏನು ಮಾಡುತ್ತಾ ಇದ್ದೀರಿ ಅಮ್ಮಾ’ ಎಂದು ಕೇಳಿದಳು. ನಾನು ‘ಸಮೋಸಾ ತಿನ್ನುತ್ತಾ ಇದ್ದೇವೆ’ ಎಂದೆ. ಅದಕ್ಕೆ ಅವಳು, ‘ಇಲ್ಲಿ ಸಮೋಸಾ ಸಿಗುವುದಿಲ್ಲ. ಅದಕ್ಕೆ ಸೂಸೇಜ್ ಎನ್ನುತ್ತಾರೆ. ಅದನ್ನು ದನದ ಇಲ್ಲವೆ ಹಂದಿ ಮಾಂಸದಿಂದ ಮಾಡುತ್ತಾರೆ’ ಎಂದಳು. ತಟ್ಟನೆ ಬಾಯಲ್ಲಿಟ್ಟ ಸಣ್ಣ ಚೂರನ್ನು ಉಗಿದೆ ಮತ್ತು ಬರೀ ಜ್ಯೂಸ್ ಕುಡಿದು ಎದ್ದೆವು.

ಸ್ಕಾಚ್ ಫ್ಯಾಕ್ಟರಿ

ನಂತರ ನಾವು ಸ್ಕಾಟ್‌ಲ್ಯಾಂಡ್‌ನಲ್ಲಿರುವ ಪ್ರಸಿದ್ಧವಾದ ಸ್ಕಾಚ್ (ಡ್ರಿಂಕ್ಸ್) ಫ್ಯಾಕ್ಟರಿ ನೋಡಲು ಹೋದೆವು. ಅದು ತುಂಬಾ ವಿಶಾಲವಾದ ಜಾಗದಲ್ಲಿ ಇತ್ತು. ಪರವಾನಿಗೆ ಪಡೆದು ಒಳಗೆ ಹೋದೆವು. ಅದು ಸ್ಕಾಚ್ ತಯಾರಿಸುವ ಫ್ಯಾಕ್ಟರಿ ಆಗಿತ್ತು. ಅಲ್ಲಿ ಅದನ್ನು ಅಂದರೆ ಗೋಧಿಯನ್ನು ಹೆಚ್ಚು ಸಮಯ ನೆನೆಸಿ ಕೊಳೆಸಿ ಯಾವ ಯಾವ ರೀತಿಯಲ್ಲಿ ಹಾಟ್ ಡ್ರಿಂಕ್ಸ್ ತಯಾರಾಗುತ್ತದೆ ಎಂಬುದನ್ನು ನಮಗೆ ವಿವರವಾಗಿ ತಿಳಿಸಿದರು. ನಮ್ಮ ಗೈಡ್ ಇಂಡಿಯಾದವರೇ ಆದ್ದರಿಂದ ನಮಗೆ ಸರಳವಾದ ಇಂಗ್ಲೀಷ್‌ನಲ್ಲಿ ವಿವರಿಸಿದನು. ಆ ಇಂಗ್ಲೀಷ್ ಶರಾಬು ಹಳೆಯದಾದಷ್ಟು ಅದಕ್ಕೆ ತುಂಬಾ ಬೇಡಿಕೆಯಂತೆ. ಅಲ್ಲಿ ನೂರಾರು ವರ್ಷ ಹಳೆಯದಾದ ಮತ್ತು ಸುಂದರವಾದ ಬೇರೆ ಬೇರೆ ವಿನ್ಯಾಸದ ಬಾಟಲಿಗಳಲ್ಲಿ ಶರಾಬನ್ನು ತುಂಬಿಸಿಡಲಾಗಿತ್ತು. ಅಲ್ಲಿ ನಮಗೂ ಸಹ ಒಂದು ನಾಲ್ಕು ಗುಟುಕುಗಳನ್ನು ಕುಡಿಯುವಂತೆ ಕೊಟ್ಟರು. ಎಲ್ಲರೂ ಕುಡಿದರು. ನನಗೇಕೋ ಕುಡಿಯಲು ಮುಜುಗರವಾಯಿತು. ಇವರು ಕುಡಿ ಇದು ಒಂದು ಅನುಭವವಾಗಲಿ ಎಂದು ಒತ್ತಾಯ ಮಾಡಿದರು. ನಾನು ಸ್ವಲ್ಪ ರುಚಿ ನೋಡಿದೆ. ಆದರೆ ಅದು ತುಂಬಾ ಒಗರು ಮತ್ತು ಕಹಿಯಾಗಿತ್ತು. ಗಂಟಲಿನೊಳಗೆ ಇಳಿಸುವುದೇ ಕಷ್ಟವಾಗಿತ್ತು. ಆದರೆ ಕೆಲವು ಜನ ಇದನ್ನೇ ಅಮೃತವೆಂದು ಕುಡಿದು ಇದಕ್ಕಾಗಿ ಮನೆ ಮಠ ಸಂಸಾರ ಆರೋಗ್ಯ ಎಲ್ಲವನ್ನೂ ಹಾಳು ಮಾಡ್ಕೊಳ್ತಾರಲ್ಲ ಎಂದು ಬೇಸರವಾಯಿತು.

ಹೊರಗೆ ವಿಶಾಲವಾದ ಸುಂದರವಾದ ಹೂವಿನ ತೋಟವಿತ್ತು. ಅಲ್ಲಿ ಫೋಟೋ ತೆಗೆದುಕೊಂಡೆವು. ಅಷ್ಟೊತ್ತಿಗೆ ಸಂಜೆಯಾಗತೊಡಗಿತು. ಸಣ್ಣಗೆ ಚಳಿಯಿಂದ ನಡುಗತೊಡಗಿದೆವು. ರೂಮಿಗೆ ಬಂದು ಅಲ್ಲೇ ಒಳ್ಳೆಯ ಊಟ ಮಾಡಿ ಮಲಗಿಕೊಂಡೆವು.

ಎಡಿನ್‌ಬರಾ ಅರಮನೆ

ಮಾರನೆಯ ದಿನ ನಾವು ಎಡಿನ್‌ಬರಾ ಅರಮನೆ ನೋಡಲು ಹೊರಟೆವು. ಮೊದಲು ನಾನು ಎಡಿನ್‌ಬರಾ ಅರಮನೆಯ ಬಗ್ಗೆ ಕೇಳಿದ್ದೆ. ಆದ್ದರಿಂದ ನೋಡುವ ಆಸೆ ಅತಿಯಾಗಿತ್ತು. ಆದ್ದರಿಂದ ಬೆಳಿಗ್ಗೆ ಬೇಗ ಎದ್ದು ಹೊಟೇಲ್‌ನಲ್ಲಿ ಹೊಟ್ಟೆ ತುಂಬಾತಿಂಡಿ ತಿಂದು ಹೋಟೆಲ್ ದಾರಿಯಲ್ಲೇ ಇರುವ ಇಂಡಿಯನ್ ಕಾಲನಿ ನೋಡಿದೆವು. ಅಲ್ಲಿ ಬರೆದಿರುವ ಇಂಡಿಯಾ ಕಾಲನಿ ಎಂದು ಬರೆದ ಬೋರ್ಡ್ ನೋಡಿಯೇ ಬಹಳ ಸಂತೋಷವಾಯಿತು. ಅಲ್ಲಿಂದ ಮುಂದೆ ಎಡಿನ್‌ಬರಾ ಅರಮನೆಗೆ ಹೋದೆವು. ಅದು ಸುಮಾರು ಮುನ್ನೂರು ವರ್ಷಕ್ಕಿಂತ ಹಳೆಯದಾದ ಅರಮನೆ. ಹೊರಗಿನಿಂದ ನೋಡಲು ತುಂಬಾ ಭವ್ಯವಾಗಿತ್ತು, ಹೊರಗಡೆ ಈಗಲೂ ಗಾರ್ಡ್ ಆಫ್ ಆನರ್ ನಡೆಯುತ್ತದೆ. ಪಾಳಿಯಂತೆ ಗಾರ್ಡ ಬದಲಾಗುತ್ತಾ ಇರುತ್ತಾನೆ. ಅಲ್ಲಲ್ಲಿ ನಾವು ಅಲ್ಲಿಯ ಟ್ರೆಡಿಶನಲ್ ಡ್ರೆಸ್ಸೇದ ಸ್ಕಾಟಿಶ್ ಸ್ಕರ್ಟ್ ಧರಿಸಿದ ಗಂಡಸರನ್ನು ನೋಡಿದೆವು. ಕೆಲವರು ಆ ದಿರಿಸು ಧರಿಸಿ ಬೆಗ್‌ಪೈಪರ್ ನುಡಿಸುತ್ತಾ ನಿಂತಿದ್ದರು. ಕೆಲವರು ಅವರಿಗೆ ಹಣವನ್ನು ಹಾಕುತ್ತಿದ್ದರು. ನಾವು ಸಹ ಅವರಿಗೆ ಒಂದು ಪೌಂಡ್ ಹಾಕಿದೆವು. ಮತ್ತು ಪಕ್ಕದಲ್ಲಿ ನಿಂತು ಫೋಟೋ ತೆಗೆಸಿಕೊಂಡೆವು. ನಂತರ ಒಳಗೆ ಹೋದೆವು. ಅರಮನೆ ಹಳೆಯದಾದರೂ ಚೆನ್ನಾಗಿಯೇ ಇತ್ತು. ಒಂದೆರಡು ಕಡೆ ಬಿದ್ದುಹೋಗಿದ್ದರೂ ಸಹ ಅದನ್ನು ಅಲ್ಲಿಯೇ ಅದೇ ಕಲ್ಲಿನಲ್ಲಿ ಮೊದಲಿನಂತೆ ಕಟ್ಟಿದ್ದಾರೆ. ಅಲ್ಲಿ ನಮಗೆ ಕಿವಿಗೆ ಹಾಕಿಕೊಳ್ಳಲು ಒಂದು ಹೆಡ್ ಪೋನ್ ಕೊಟ್ಟಿರುತ್ತಾರೆ. ಮತ್ತು ಕೈಯಲ್ಲಿ ಚಿಕ್ಕ ರೇಡಿಯೋ ಥರ ಇರುತ್ತದೆ. ಅದರ ಬಟನ್ ಒತ್ತಿದ ಕೂಡಲೇ ಅದು ನಾವು ಮುಂದೆ ಹೋದಂತೆ ಅರಮನೆಯ ಎಲ್ಲ ವಿವರಗಳನ್ನು ಅಂದರೆ ಯಾರು ಕಟ್ಟಿಸಿದರು? ಯಾವ ರಾಜ? ಒಳಗಿರುವ ರಾಜ ರಾಣಿಯರ ಚಿತ್ರ ಮಕ್ಕಳ ಚಿತ್ರ ಹೀಗೆ ಅದು ಗೈಡ್ ತರಹ ಹೇಳುತ್ತಾ ಹೋಗುತ್ತದೆ. ಮುನ್ನೂರು ವರ್ಷದ ಹಿಂದಿನ ನೆಲವಾದರೂ ಈಗಿನ ನೆಲದಂತೆ ಕಾಣುತ್ತದೆ. ಅದರ ಮೇಲೆ ಹೊದಿಸಿದ ಕಾರ್ಪೆಟ್ ಸಹ ಚೆನ್ನಾಗಿದೆ. ದೊಡ್ಡ ತೈಲ ಚಿತ್ರಗಳು ಅವರ ಎತ್ತರದ ವ್ಯಕ್ತಿತ್ವ ಮತ್ತು ಗಂಭೀರತೆಯನ್ನು ಎತ್ತಿ ತೋರಿಸುತ್ತವೆ. ಅಲ್ಲಿ ಕೈದಿಗಳನ್ನು ಇರಿಸಿದ ಕೋಣೆಗಳು ಮತ್ತು ಅವರಿಗೆ ಚಳಿಯಲ್ಲಿ ಕಾಯಿಸಿಕೊಳ್ಳಲು ಇಟ್ಟ ಬೆಂಕಿಯ ಗೂಡುಗಳು ಮತ್ತು ಅಧಿಕಾರಿಗಳಿಗೆ ಉಪಯೋಗಿಸಲು ಆ ಕಾಲದಲ್ಲೇ ಕಮೋಡ್‌ಗಳನ್ನಿಟ್ಟಿದ್ದರು. ಕೈದಿಗಳಿಗೆ ಇಂಡಿಯನ್ ರೀತಿಯ ಸಂಡಾಸಗಳಿದ್ದವು. ಅಲ್ಲಿ ಕೈದಿಗಳಿಗೆ ಕೊಡುವ ಆಹಾರ, ಬಟ್ಟೆ ಅವರಿಗೆ ಕೊಡುವ ಶಿಕ್ಷೆ ಇವುಗಳ ವಿವರ ಇದೆ.

ಪಕ್ಕದಲ್ಲೇ ಪ್ರಾರ್ಥನೆಗಾಗಿ ಚರ್ಚ್ ಸಹ ಇದೆ. ಅರಮನೆ ತುಂಬಾ ವಿಶಾಲವಾಗಿ ಬಹಳ ಮಹಡಿಗಳನ್ನು ಹತ್ತಬೇಕಿತ್ತು. ನಾವು ಎಲ್ಲ ಮಹಡಿಗಳನ್ನು ಹತ್ತಲು ಹೋಗಲಿಲ್ಲ. ಮುಖ್ಯವಾದವುಗಳನ್ನಷ್ಟೇ ನೋಡಿಕೊಂಡು ಬಂದೆವು. ಅಷ್ಟಕ್ಕೆ ಸುಮಾರು 3 ರಿಂದ 4 ತಾಸಾಯಿತು.

ಅಲ್ಲಿಂದ ಮುಂದೆ ಕೇಬಲ್ ಕಾರ್ ಹತ್ತಲು ಹೋದೆವು. ಅದು ತುಂಬಾ ಎತ್ತರದಲ್ಲಿ ಇತ್ತು. ಮತ್ತು ಉದ್ದ ಸಹ ಸುಮಾರು 2 ಕಿಲೋಮೀಟರ್‌ಗಳಿಗಿಂತ ಹೆಚ್ಚಿತ್ತು. ಸೀಟು ಸುತ್ತಲು ಭದ್ರತೆಯಿಂದ ಕೂಡಿದ್ದರಿಂದ ಎಲ್ಲೂ ಬೀಳುವ ಭಯವಿರಲಿಲ್ಲ. ಆದ್ದರಿಂದ ಅದರಲ್ಲಿ ಕುಳಿತು ಚಲಿಸುವಾಗ ತುಂಬಾ ಮಜಾ ಬಂತು.ನಾವು ಮೇಲೆ ವಿಹರಿಸುವಾಗಕೆಳಗಡೆ ಮಕ್ಕಳ ಸೈಕಲ್ ರೇಸ್ ನಡೆಯುವುದನ್ನು ನೋಡಿದೆವು. ಮಕ್ಕಳು ತಲೆಗೊಂದು ಹೆಲೈಟ್ ಹಾಕಿಕೊಂಡು ಅಂಕು ಡೊಂಕಾದ ಎತ್ತರ ಮತ್ತು ತಗ್ಗು ಪ್ರದೇಶಗಳಲ್ಲಿ ಸೈಕಲ್ ಹೊಡೆಯುತ್ತಿದ್ದರು. ನಾವು ಸಹ ಅದನ್ನು ನೋಡಿ ಸಂತಸಪಟ್ಟೆವು. ಅಷ್ಟರಲ್ಲಿ ಸಾಯಂಕಾಲವಾಯಿತು. ಅಲ್ಲೆ ಸುತ್ತಮುತ್ತ ಸಣ್ಣ ಪುಟ್ಟ ಶಾಪಿಂಗ್ ಮಾಡಿ ರೂಮಿಗೆ ಹಿಂತಿರುಗಿದೆವು.

ಮಾರನೆಯ ದಿನ ನಾವು ಗ್ಲಾಸ್ಕೊ ಸಿಟಿ ನೋಡಲು ಹೋದೆವು. ಅಲ್ಲಿಂದ ಮುಂದೆ ಹೋಗಿ ಗ್ಲಾಸ್ಕೊ ವಿಮಾನ ನಿಲ್ದಾಣ ನೋಡಿದೆವು. ಅಲ್ಲಿಯೇ ಕೆಲವು ದಿನಗಳ ಹಿಂದೆ ಬಾಂಬ್ ಬ್ಲಾಸ್ಟ್ ಆಗಿತ್ತು. ಗ್ಲಾಸೊನಲ್ಲಿ ನಾವು ಮುನ್ನೂರು ವರ್ಷ ಹಳೆಯದಾದ ಒಂದು ಮನೆಯನ್ನು ನೋಡಿದೆವು. ಈಗಲೂ ಅದು ಸುಸಜ್ಜಿತವಾಗಿಯೇ ಇತ್ತು. ನಂತರ ಅತಿ ಹಳೆಯ ಗ್ಲಾಸ್ಕೊ ಯುನಿವರ್ಸಿಟಿಗೆ ಹೋದೆವು. ಅಂದು ಅಲ್ಲಿ ಕಾನ್ವೆಕೇಶನ್ ಇದ್ದುದರಿಂದ ಮಕ್ಕಳೆಲ್ಲ ಡಿಗ್ರಿ ಪಡೆದ ಸಂತೋಷದಲ್ಲಿದ್ದರು. ಕಟ್ಟಡ ಹಳೆಯಾದರೂ ಅದರ ಕಲಾವಿನ್ಯಾಸ ತುಂಬಾ ಚೆನ್ನಾಗಿತ್ತು. ಅಲ್ಲಿ ಸುಂದರವಾದ ಹೂ ತೋಟವಿತ್ತು. ಅಲ್ಲಿಯೇ ಹತ್ತಿರದಲ್ಲಿ ತುಂಬಾ ದೊಡ್ಡ ಚರ್ಚ್ ಇತ್ತು. ಅದನ್ನು ನೋಡಿದೆವು. ಹೆಚ್ಚಾಗಿ ನಾವು ಇಲ್ಲಿ ಅರಮನೆ ಮತ್ತು ಚರ್ಚ್‌ಗಳನ್ನು ಮತ್ತು ಸುಂದರ ತೋಟಗಳು ವಿಶಾಲವಾದ ಹುಲ್ಲುಗಾವಲುಗಳು ಮತ್ತು ಸರೋವರಗಳನ್ನು ನೋಡಿದೆವು. ಮತ್ತು ಅಲ್ಲಲ್ಲಿ ಸ್ಕಾಟಿಶ್ ಪುರಾತನ ಉಡುಗೆ ತೊಟ್ಟು ಬೇಗ ಪೈಪರ್ ನುಡಿಸುವವರನ್ನು ನೋಡಿದೆವು.

By-ಶಾಲಿನಿ ಗಾಂವಕರ್

ಮುಂದಿನ ಭಾಗ ಓದಿ…

Show 1 Comment

1 Comment

Leave a Reply