ಶಾಪಿಂಗ್ ಮಾಲ್ :
ಅಮೇರಿಕಾದಲ್ಲಿ ನೋಡಬೇಕಾದ ಸ್ಥಳಗಳೆಂದರೆ ವ್ಯಾಪಾರ ಕೇಂದ್ರಗಳು. ಅಲ್ಲಿ ಅವುಗಳನ್ನು ಮಾಲ್‌ಗಳೆಂದು ಕರೆಯುತ್ತಾರೆ. ಇವು ತುಂಬಾ ದೊಡ್ಡದಿರುತ್ತವೆ. ಒಂದೊಂದು ಕಟ್ಟಡ ಮೈಲುಗಳಷ್ಟು ಅಗಲವಿರುವುದು. ಒಂದೊಂದು ಮಾಲ್‌ನಲ್ಲಿ ಮೂರು ನಾಲ್ಕು ಅಂತಸ್ತುಗಳಿರುತ್ತದೆ. ಇವು ಪ್ರತಿಯೊಂದು ಊರಿನ ಪ್ರತಿಯೊಂದು ಮೊಹಲ್ಲಾದಲ್ಲಿ ಎಂತಹ ಸಣ್ಣ ಊರಿನಲ್ಲಾದರೂ ಇಂತಹ ಮಾಲ್‌ಗಳು ಇರುತ್ತವೆ. ಅಲ್ಲಿ ಸಾಲು ಸಾಲಾಗಿ ಅಂಗಡಿಗಳು ಬಟ್ಟೆ ಬರೆ, ಮನೆ ಬಳಕೆಯ ವಸ್ತುಗಳು ಹೇಳಬೇಕೆಂದರೆ ಒಂದು ಗುಂಡು ಸೂಜಿಯಿಂದ ಹಿಡಿದು ಮೋಟಾರು ಕಾರಿನವರೆಗೆ ಅಲ್ಲಿ ಸಿಗುತ್ತದೆ. ಯಾವ ಅಂಗಡಿಗೆ ಬೇಕಾದರೂ ಹೋಗಿ ಏನು ಬೇಕಾದರೂ ಆರಿಸಿಕೊಳ್ಳಬಹುದು. ಪ್ರತಿಯೊಂದು ಸಾಮಾನಿನ ಪ್ರತಿಯೊಂದು ವಿವರವು ತೂಕ.ಅಳತೆ, ಗುಣ, ಬೆಲೆ ಅಲ್ಲೇ ನಮೂದಾಗಿರುತ್ತದೆ. ನಾವು ನಮಗೆ ಬೇಕಾದ ಸಾಮಾನುಗಳನ್ನು ತೆಗೆದುಕೊಂಡು ಕೊನೆಯಲ್ಲಿ ಗಲ್ಲದ ಹತ್ತಿರ ದುಡ್ಡು ಕೊಟ್ಟು ಹೋದರೆ ಆಯಿತು. ಸಾಮಾನು ಹೆಚ್ಚಿದ್ದರೆ ಅಲ್ಲೇ ಇರುವ ನೂಕು ಗಾಡಿಗಳಲ್ಲಿ ತುಂಬಿಕೊಂಡು ತಳ್ಳಿಕೊಂಡು ಕಾರಿನವರೆಗೂ ಹೋಗಬಹುದು.

ಇಂಥ ಕಡೆ ನಮಗೆ ಮುಖ್ಯವಾಗಿ ನಮ್ಮ ಆಕರ್ಷಿಸುವ ಸ್ಥಳಗಳೆಂದರೆ ಬಟ್ಟೆ ಅಂಗಡಿಗಳು, ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಎಲ್ಲರಿಗೂ ಬೇಕಾಗುವ ಎಲ್ಲ ನಮೂನೆಯ ಬಟ್ಟೆಗಳನ್ನು ಸಾವಿರ ಸಾವಿರ ಸಂಖ್ಯೆಯಲ್ಲಿ ನೇತುಹಾಕಿರುತ್ತಾರೆ. ಯಾವಾಗಲೂ ಮಾಲ್‌ಗಳು ಜನರಿಂದ ಕಿಕ್ಕಿರಿದು ತುಂಬಿರುತ್ತವೆ. ನಾವು ಎರಡು ಗಂಟೆಗಳ ಕಾಲ ಸುತ್ತಾಡಿ, ನಮಗೆ ಬೇಕಾಗಿದ್ದ ಸಣ್ಣ ಪುಟ್ಟ ಸಾಮಾನುಗಳನ್ನು ಕೊಂಡುಕೊಂಡು ಮನೆಗೆ ಹಿಂತಿರುಗಿದೆವು. ಮಗ ಅದೇ ದಿನ ಅವರ ಮನೆಗೆ ಹೊರಟುಹೋದನು. ಅವನು ಚಿಕಾಗೋ ಡೌನ್ ಟೌನ್‌ನಲ್ಲಿ ಇರುತ್ತಿದ್ದ. ಸೋಮವಾರ ಅವನು ಕೆಲಸಕ್ಕೆ ಹೋಗಬೇಕಿತ್ತು.
ಸ್ಪಿಂಗ್ ಫೀಲ್ಡ್(Spring Field)

ರೂಪಾ ನಮ್ಮನ್ನು ಒಂದು ದಿನ ಸ್ಪಿಂಗ್ ಫೀಲ್ಡ್‌ಗೆ ಕಾರಿನಲ್ಲಿ ಕರೆದುಕೊಂಡು ಹೋದಳು. ಅವರ ಮನೆಯಿಂದ ಸ್ಟಿಂಗ್ ಫೀಲ್ಡ್‌ಗೆ 32 ತಾಸಿನ ಪ್ರಯಾಣ. ಇದು ಇಲಿನಾಯ್ಸ್ ರಾಜ್ಯದ ಮುಖ್ಯ ಪಟ್ಟಣ. ಇದು ಅಮೇರಿಕೆಯ ಪ್ರಸಿದ್ದ ಅಧ್ಯಕ್ಷರಲ್ಲಿ ಒಬ್ಬರಾದ ಅಬ್ರಾಹಂ ಲಿಂಕನ್ ಇದ್ದ ಊರು, ನಾವು ಹೋಗುವಾಗ ರಸ್ತೆಯ ಅಕ್ಕ ಪಕ್ಕದಲ್ಲಿ ಕಾಣುವ ಸುಂದರ ದೃಶ್ಯಗಳನ್ನು ನೋಡುತ್ತಾ ಹೊರಟೆವು. ಅಮೆರಿಕಾದ ಮತ್ತೊಂದು ಅದ್ಭುತ ಅಲ್ಲಿನ ರಸ್ತೆಗಳು ಒಂದರ ಪಕ್ಕ ಒಂದರಂತೆ ಎಂಟು ವಾಹನಗಳು ಧಾರಾಳವಾಗಿ ಓಡಾಡಲು ಅನುಕೂಲವಾಗುವಂತಹ ರಾಜ ಮಾರ್ಗಗಳು ವಾಹನಗಳು ಒಂದು ದಿಕ್ಕಿನಿಂದ ಹೋಗುವುದಕ್ಕೋ ಇನ್ನೊಂದು ದಿಕ್ಕಿನಿಂದ ಬರುವುದಕ್ಕೋ ವ್ಯವಸ್ಥೆ ಮಾಡಿದ್ದಾರೆ. ಒಂದು ನಿರ್ದಿಷ್ಟ ವೇಗದಲ್ಲಿ ವಾಹನ ಓಡಿಸಬೇಕು. ವೇಗ ಮಿತಿ ಮೀರಿದರೆ ದಂಡ ತೆರಬೇಕಾಗುತ್ತದೆ. ಅಲ್ಲಲ್ಲಿ ಕ್ಯಾಮರಾಗಳನ್ನು ಇಟ್ಟಿರುತ್ತಾರೆ. ಈ ದಂಡಕ್ಕೆ ಎಲ್ಲರೂ ಹೆದರುತ್ತಾರೆ. ಪಕ್ಕದಲ್ಲಿ ಇಂಥ ಊರು ಎಷ್ಟು ಮೈಲಿ ದೂರದಲ್ಲಿದೆ ಎಂಬ ಭಾರಿ ಭಾರಿ ಬೋರ್ಡ್‌ಗಳು ಹೆಜ್ಜೆ ಹೆಜ್ಜೆಗೂ ಕಾಣುತ್ತಿರುತ್ತವೆ. ನಾವು ಸಿಟಿಯ ಗದ್ದಲದಿಂದ ಹೊರಗೆ ಬಂದೆವು. ದಾರಿಗಳುದ್ದಕ್ಕೂ ಮೈಲುಗಳಷ್ಟೇ ವಿಶಾಲವಾದ ಗೋಧಿ ಮತ್ತು ಗೋವಿನ ಜೋಳದ ಹೊಲಗಳು, ಕಣ್ಣು ಮುಟ್ಟುವವರೆಗೆ ನೋಡಿದ ಕಡೆಗೆಲ್ಲ ಭೂಮಿತಾಯಿ ಹಸಿರು ಸೀರೆ ಉಟ್ಟು ನಿಂತಿದ್ದಾಳೇನೋ ಎನ್ನುವಂತೆ ಭಾಸವಾಗುತ್ತಿತ್ತು. ಹೀಗೆ ಸುಮಾರು ನೂರಾರು ಕಿಲೋಮೀಟರ್‌ವರೆಗೂ ಹೊಲಗಳು ಮತ್ತು ಅವರು ಬೆಳೆದ ಧಾನ್ಯಗಳ ರಾಶಿ ಹೊಲಗಳ ಮಧ್ಯೆ ಅಲ್ಲಲ್ಲಿ ಮಾಲೀಕರ ದೊಡ್ಡ ದೊಡ್ಡ ಗೋಡೌನಗಳು ಇವೆ. ಭೌಗೋಳಿಕವಾಗಿ ನಮಗಿಂತ 4 ಪಟ್ಟು ದೊಡ್ಡದಾದ ಅಮೆರಿಕಾದ ಜನಸಂಖ್ಯೆ ನಮ್ಮ ದೇಶಕ್ಕೆ ಹೋಲಿಸಿದರೆ ತುಂಬಾ ಕಡಿಮೆ. ಅಲ್ಲಿಯ ಅಪಾರ ನೈಸರ್ಗಿಕ ಸಂಪನ್ಮೂಲಗಳನ್ನು ಗಮನಿಸಿದ ನನಗೆನಿಸಿತು ಅವರು ತಾವು ಉಪಯೋಗಿಸಿ ಬಿಸಾಡುವಷ್ಟು ಬೆಳೆಯುತ್ತಾರೆ. ಅದನ್ನೇ ಬಡ ದೇಶಗಳಿಗೆ ದಾನ ಮಾಡುತ್ತಾರೆ. ನಮ್ಮಲ್ಲಿ ತೀವ್ರವಾಗಿ ಬೆಳೆಯುತ್ತಿರುವ ಜನಸಂಖ್ಯೆ ನಮ್ಮ ಆರ್ಥಿಕ ಪ್ರಗತಿಯನ್ನು ನುಂಗಿಹಾಕುತ್ತಿದೆ.

ಮೊದಲು ನಾವು ಅಬ್ರಾಹಂ ಲಿಂಕನ್ ಮ್ಯೂಸಿಯಂ ನೋಡಿದೆವು. ನಂತರ ಲಿಂಕನ್‌ನ ಬಗ್ಗೆ ಇರುವ 20 ನಿಮಿಷಗಳ ಸಿನಿಮಾವನ್ನು ನೋಡಿದೆವು. ಅದರಲ್ಲಿ ಲಿಂಕನ್‌ನ ಶಿಕ್ಷಣ, ಅವನು ಕರಿಯರ ಪರವಾಗಿ ಅವರ ಏಳೆಗಾಗಿ ಮಾಡಿದ ಪ್ರಯತ್ನಗಳು, ಅವನ ಪ್ರೇಮ ಪ್ರಕರಣಗಳು, ಮದುವೆ ಮಕ್ಕಳು ಹೀಗೆ ಅವನು ಪ್ರೆಸಿಡೆಂಟ್ ಆದಾಗಿನಿಂದ ಸಾಯುವವರೆಗಿನ ಚಿತ್ರಣವನ್ನು ತೋರಿಸುತ್ತಾರೆ. ಅಲ್ಲಿಂದ ಮುಂದೆ ನಾವು ಲಿಂಕನ್‌ನ ಮನೆ ನೋಡಲು ಹೋದೆವು. ಅದು ಮೂರು ಮಲಗುವ ಕೋಣೆ ಇರುವ ಮನೆ, ಅದನ್ನು ನೋಡಲು ಎಲ್ಲರಿಗೂ ಪ್ರವೇಶವಿದೆ. ಅಲ್ಲಿ ಅವನ ಮಕ್ಕಳು ಉಪಯೋಗಿಸಿದ ಟೇಬಲ್, ಖುರ್ಚಿ, ಹಾಸಿಗೆಗಳನ್ನು ಚೆನ್ನಾಗಿ ಇಟ್ಟಿದ್ದಾರೆ. ಅದೇ ರೀತಿ ಲಿಂಕನ್ ಮಲಗಿದ್ದ ಹಾಸಿಗೆ, ಮಂಚ ಇತರೇ ಸಾಮಾನುಗಳನ್ನು ಜೋಡಿಸಿದ್ದಾರೆ. ಲಿಂಕನ್ 6 ಅಡಿ ಎತ್ತರ ಇದ್ದರಂತೆ. ಆದ್ದರಿಂದ ಅವರ ಮಂಚ ಸಹ ಉದ್ದವಾಗಿದೆ. ಅದೇ ರೀತಿ ಅವರು ಓದುವ ಕೋಣೆ, ಅದೇ ರೀತಿ ಅಡಿಗೆ ಕೋಣೆಯಲ್ಲೂ ಸಹ ಅವರು ಆ ಕಾಲದಲ್ಲಿ ಉಪಯೋಗಿಸುತ್ತಿದ್ದ ಅಡಿಗೆ ಒಲೆ, ಬಳಸಿದ ಪಾತ್ರೆಗಳು, ಊಟಕ್ಕೆ ಬಳಸಿದಂತಹ ಪ್ಲೇಟು, ಗ್ಲಾಸುಗಳನ್ನೂ ಸಹ ಹಾಗೇ ಇಟ್ಟಿದ್ದಾರೆ. ಅದೇ ರೀತಿ ಕೆಲಸದ ಆಳಿನ ಕೋಣೆ, ಡೈನಿಂಗ್ ರೂಮ್, ಸ್ಪಡಿ ರೂಮ್ ನಲ್ಲಿ ಖುರ್ಚಿ, ಟೇಬಲ್ ಲ್ಯಾಂಪುಗಳನ್ನು ಪುಸ್ತಕಗಳನ್ನು ಇಟ್ಟಿದ್ದಾರೆ. ಇದನ್ನೆಲ್ಲಾ ನೋಡುತ್ತಿದ್ದರೆ ಅಲ್ಲಿ ಇನ್ನೂ ಜನರು ವಾಸಿಸುತ್ತಿದ್ದಾರೆನೋ ಎನಿಸುತ್ತದೆ. ಮನೆಯ ಪಕ್ಕದಲ್ಲಿರುವ ಸೇಬು ಹಣ್ಣಿನ ಗಿಡ ಸಹ ಹಣ್ಣುಗಳಿಂದ ತುಂಬಿದೆ. ಒಟ್ಟಿನಲ್ಲಿ ಲಿಂಕನ್ ತುಂಬಾ ಸರಳಜೀವಿಯಾಗಿದ್ದ ಎನ್ನುವುದು ಗೊತ್ತಾಗುತ್ತದೆ. ಲಿಂಕನ್ ಮನೆಯ ಅಕ್ಕಪಕ್ಕದಲ್ಲಿ ಸಹ ಅವರ ಗೆಳೆಯರ ಮನೆಗಳು ಇವೆ. ಅಲ್ಲಿರುವ ಗೈಡ್ ನಮಗೆಲ್ಲವನ್ನೂ ವಿವರಿಸಿ ಹೇಳುತ್ತಿದ್ದನು. ಅಲ್ಲಿ ಮಧ್ಯಾಹ್ನ 2 ಗಂಟೆ ಆಯಿತು. ಹೊಟ್ಟೆ ಚುರುಗುಡಹತ್ತಿತು. ಅಲ್ಲಿಯೇ ಪಕ್ಕದಲ್ಲಿರುವ ಉದ್ಯಾನವನವೊಂದನ್ನು ಪ್ರವೇಶಿಸಿ ನಾವು ತಂದಿದ್ದ ಸ್ಯಾಂಡ್‌ವಿಚ್, ಚಪಾತಿ ಪಲ್ಯ ಎಲ್ಲವನ್ನು ಬಿಚ್ಚಿ ಅಲ್ಲೇ ಇದ್ದ ಕಲ್ಲು ಬೆಂಚಿನ ಮೇಲೆ ಕುಳಿತು ಹೊಟ್ಟೆ ತುಂಬಿಸಿಕೊಂಡೆವು.
ಲಿಂಕನ್ನನ ಸಮಾಧಿಗೆ ಭೇಟಿ ನೀಡಿದೆವು. ಲಿಂಕನ್ ಯುವಕನಾದಾಗಿನಿಂದ ವರ್ಣಭೇದದ ವಿರುದ್ಧ ಹೋರಾಡಿದರು. ಅವರು ಬಿಳಿಯರಾಗಿದ್ದು ಅವರು ಕರಿಯರ ಪರವಾಗಿ ಹೋರಾಡಿದ್ದು ಕೆಲವು ಮುಖಂಡರಿಗೆ ಸರಿಕಾಣಲಿಲ್ಲ. ಅವರು ರಾಷ್ಟ್ರಪತಿಯಾದ
ಮೇಲೆಯೂ ಇದನ್ನೇ ಮುಂದುವರೆಸಿಕೊಂಡು ಹೋಗಿ ತಮ್ಮ ಹೋರಾಟವನ್ನು ಮುಂದುವರೆಸಿದ್ದರು. ಇದರಿಂದಾಗಿ ಅವರು ವಾಷಿಂಗ್ಟನ್ ಡಿ.ಸಿ.ಯಲ್ಲಿ ಕೊಲೆಯಾದರು.
ಆಗ ಅವರ ವಯಸ್ಸು 50ರ ಆಸುಪಾಸಿನಲ್ಲಿರಬೇಕು. ಅವರ ಶವವನ್ನು ಮಾತ್ರ ಅವರ ಸ್ವಂತ ಊರಾದ ಸ್ಟಿಂಗ್ ಫೀಲ್ಡ್‌ಗೆ ತಂದು ಸಮಾಧಿ ಮಾಡಿದ್ದಾರೆ. ಅವರ ಸಮಾಧಿಯ ಮುಂಬಾಗಿಲಿನಲ್ಲಿ ಲಿಂಕನ್ ಅವರ ಕಂಚಿನ ಪ್ರತಿಮೆಯಿದೆ. ಆ ಕಂಚಿನ ಪ್ರತಿಮೆಯಲ್ಲಿರುವ ಲಿಂಕನ್‌ರವರ ಉದ್ದವಾದ ಮೂಗನ್ನು ಮುಟ್ಟಿದರೆ ಅದೃಷ್ಟವಂತೆ. ಹೀಗಾಗಿ ಬಂದ ಪ್ರವಾಸಿಗರೆಲ್ಲಾ ಅದನ್ನು ಮುಟ್ಟಿ ಮುಟ್ಟಿ ಸಾಕಷ್ಟು ತೇದುಹೋಗಿದೆ. ನಿಜವಾಗಿಯೂ ನನಗೆ ಲಿಂಕನ್‌ರವರ ಬಗ್ಗೆ ಅಷ್ಟು ಗೊತ್ತಿರಲಿಲ್ಲ. ಅವರ ಬಗ್ಗೆ ತಿಳಿದುಕೊಂಡ ಮೇಲೆ ನಾನು ಅವರ ಅಭಿಮಾನಿಯಾದೆ. ಅವರ ಸಮಾಧಿಯ ಎದುರು ಸ್ವಲ್ಪ ಸಮಯ ಮೌನವಾಗಿ ನಿಂತು ಕೈ ಮುಗಿದು ನನ್ನ ಭಕ್ತಿ ನಮನ ಅರ್ಪಿಸಿದೆ. ಅಲ್ಲಿಂದ ಮುಂದೆ ಲಿಂಕನ್ ಮುದ್ದಿನ ಹೆಂಡತಿಯ ಸಮಾಧಿ. ಲಿಂಕನ್ ಹೆಂಡತಿ ತುಂಬಾ ಸುಂದರವಾಗಿದ್ದಳು. ಬಡತನದಲ್ಲಿ ಅವಳನ್ನು ಪ್ರೇಮಿಸಿದ್ದರು. ನಂತರ ಮದುವೆಯಾಗಿ ನಾಲ್ಕು ಮಕ್ಕಳ ತಾಯಿ ಆಗಿದ್ದಳು. ಅವಳ ಸಮಾಧಿಗೆ ಕೈ ಮುಗಿದು ಮುಂದೆ ಹೋದರೆ ಅವರ ಮೂರು ಮಕ್ಕಳ ಸಮಾಧಿ ಇತ್ತು. ಇನ್ನೊಬ್ಬ ಮಗ ಮಾತ್ರ ಲಿಂಕನ್‌ರ ಮರಣದ ನಂತರ ಅಪ್ಪನ ಆಸ್ತಿಯನ್ನೆಲ್ಲಾ ಬರೀ 1 ಡಾಲರ್‌ಗೆ ಮಾರಿ ಬೇರೆ ಊರಿಗೆ ಹೋಗಿ ನೆಲೆಸಿದ್ದನಂತೆ. ಮುಂದೆ ಅವನು ಮದುವೆಯಾಗಿ ಅವನಿಗೆ ಒಂದು ಮಗುವಿತ್ತಂತೆ. ಅದೂ ಸಹ ಸತ್ತುಹೋಗಿರುವುದರಿಂದ ಈಗ ಲಿಂಕನ್ ವಂಶಸ್ಥರು ಯಾರೂ ಇಲ್ಲವಂತೆ. ಇದನ್ನು ನಾವು ಅಲ್ಲಿ ವಿಚಾರಿಸಿ ತಿಳಿದುಕೊಂಡೆವು. ಲಿಂಕನ್ ಸಮಾಧಿ ದೊಡ್ಡದಾಗಿ ಗೋಲಾದ ಡೋಮಿನ ಆಕಾರದಲ್ಲಿ ಇದೆ.

ಮುಂದೆ ನಾವು ಅಲ್ಲಿನ ಪಾರ್ಲಿಮೆಂಟ್ ಭವನ ನೋಡಲು ಹೋದೆವು. ಲಿಂಕನ್ ತನ್ನ ರಾಜಕೀಯ ಜೀವನವನ್ನು ಪ್ರಾರಂಭ ಮಾಡಿದ್ದು ಇಲ್ಲಿಂದಲೇ. ಅದೊಂದು ಭವ್ಯವಾದ ಕಟ್ಟಡ, ಅದನ್ನು ತುಂಬಾ ಕಲಾತ್ಮಕವಾಗಿ ವಿನ್ಯಾಸಗೊಳಿಸಲಾಗಿದೆ. ಅದನ್ನು ನೋಡಲು ನಮಗೆ ತುಂಬಾ ಸಮಯ ಬೇಕಾಯಿತು. ಅಲ್ಲಿರುವ ತುಂಬಾ ದಪ್ಪಗಿರುವ ಕಪ್ಪು ಮಹಿಳೆ ಎಂದರೆ ಗೈಡ್ ನಮಗೆ ತೋರಿಸಿದಳು. ಅವಳು ಇಂಗ್ಲೀಷ್‌ನಲ್ಲಿ ತುಂಬಾ ಚೆನ್ನಾಗಿ ವಿವರಿಸುತ್ತಾ ಇದ್ದಳು. ಆದರೆ ಅವರ ಉಚ್ಛಾರಣೆ ನನಗೆ ಸರಿಯಾಗಿ ಅರ್ಥವಾಗಲಿಲ್ಲ. ಅಂತೂ ಎಲ್ಲಾ ಮುಗಿಸಿ ನಾವು ಮನೆಗೆ ಬರುವವರೆಗೆ ರಾತ್ರಿಯಾಗಿತ್ತು.
ಈ ಮೊದಲು ನಾನು ಲಂಡನ್ನಿನಲ್ಲಿ ಇರುವ ಸ್ವಾಮಿ ನಾರಾಯಣ ದೇವಸ್ಥಾನವನ್ನು ನೋಡಿದ್ದೆ. ಇವರ ಗೆಳೆಯ ಅನಿಲ, ಅವರ ತಾಯಿ ಮತ್ತು ನಾವಿಬ್ಬರೂ ಕೂಡಿ ಶಿಕಾಗೋದಲ್ಲಿರುವ ಸ್ವಾಮಿ ನಾರಾಯಣ ದೇವಸ್ಥಾನವನ್ನು ನೋಡಲು ಹೋದೆವು. ಸ್ವಾಮಿ ನಾರಾಯಣ ಸಂತರು ಅವರ ಅನುಚರರು ಅವರನ್ನು ದೇವರ ಅವತಾರವೆಂದು ಭಾವಿಸಿದರು.ಸ್ವಾಮಿ ನಾರಾಯಣ ದೇವಸ್ಥಾನ ದೆಹಲಿ ಮತ್ತು ಲಂಡನ್ನಿನ ತರಹವೇ ಇದೆ. ದೇವಸ್ಥಾನದ ಮುಂಭಾಗದ ಹುಲ್ಲು ಹಾಸಿನ ಮೈದಾನ ತುಂಬಾ ಚೆನ್ನಾಗಿದೆ. ನೀರಿನ ಫೌಂಟೆನ್‌ಗಳು ಸೊಗಸಾಗಿವೆ. ಅಲ್ಲಿ ಹಸುಕರುಗಳ ಮೂರ್ತಿಗಳಿವೆ. ತಂಬಿಗೆಯಲ್ಲಿ ನೀರು ಚೆಲ್ಲುವ ಇಬ್ಬರು ಪ್ರೌಢ ಸ್ತ್ರೀಯರ ಮೂರ್ತಿಗಳು ಬಳಪದ ಕಲ್ಲಿನವು ಇವೆ. ಆನೆ, ಜಿಂಕೆ, ನವಿಲುಗಳನ್ನು ಗರಿಕೆ ಹುಲ್ಲಿನಲ್ಲಿ ನಿರ್ಮಿಸಲಾಗಿದೆ. ಈ ಪ್ರದೇಶದಲ್ಲಿ ಹೆಚ್ಚಾಗಿ ಗುಜರಾತಿಗಳೇ ವಾಸಿಸುತ್ತಾರೆ.

ಒಳಗೆ ಪ್ರವೇಶಿಸುತ್ತಿದ್ದಂತೆ ವಿಶಾಲವಾದ ಒಳಾಂಗಣವಿದೆ. ಕಲಾತ್ಮಕವಾದ ಅಮೃತ ಶಿಲಾಸ್ತಂಭಗಳಿವೆ. ಅವೆರಡಕ್ಕೂ ಸೇರಿದಂತೆ ಮೇಲ್ಬಾಗದಲ್ಲಿ ತೂಗಿ ಹಾಕಿರುವಂತಹ ಹೂ ಮಾಲೆಯಂತೆ ಕಾಣುವ ನಾಜೂಕಿನ ಕೆತ್ತನೆಯ ಕೆಲಸದ ಸುಂದರ ಶಿಲಾಪೆಟ್ಟಿಗೆ ನಮ್ಮನ್ನು ಬೆರಗುಗೊಳಿಸುತ್ತದೆ. ಇಳಿಬಿಟ್ಟಿರುವ ಮುತ್ತಿನ ಝಲ್ಲರಿಗಳು, ಸುಂದರ ಮೇಲ್ಬಾವಣಿಗಳು, ಬಿಡಿಸಿಟ್ಟಿರುವ ಕಲಾಕೃತಿಗಳು, ಕಡೆದು ನಿಲ್ಲಿಸಿರುವ ವಿಗ್ರಹಗಳು, ದೇವಾಲಯದ ಒಳಗೆ ಪೂಜಾ ಮಂಟಪವಿದೆ. ಪೂಜಾ ಮಂಟಪದಲ್ಲಿ ಒಂದರಲ್ಲಿ ಪಾರ್ವತಿ, ಇನ್ನೊಂದರಲ್ಲಿ ಗಣಪತಿ, ಮತ್ತೊಂದರಲ್ಲಿ ಹನುಮಂತ ಹೀಗೆ ಎಲ್ಲಾ ದೇವರ ಮೂರ್ತಿಗಳಿವೆ. ಧ್ಯಾನ ಮಂದಿರದಲ್ಲಿ ‘ಓಂ ನಮೋ ನಾರಾಯಣ’ ಎಂಬ ಮಂತ್ರ ನಿರಂತರವಾಗಿ ನಮ್ಮ ಕಿವಿಗೆ ಮುಟ್ಟಿ ಮನಸ್ಸನ್ನು ಮುದಗೊಳಿಸುತ್ತದೆ. ಗುಜರಾತಿ ಭಕ್ತರ ಸಂಘಟನೆಗೆ ಇದು ಒಳ್ಳೆಯ ಉದಾಹರಣೆ. ಇಲಿನಾಯ್ಸನಲ್ಲಿರುವ ಗುಜರಾತಿಗಳ ವಂತಿಗೆಯಿಂದ ದೇವಾಲಯ ನಿರ್ಮಾಣವಾಗಿದೆ. ಅಲ್ಲಿ ಸ್ವಾಮಿ ನಾರಾಯಣ ಹಾಗೂ ಅವರ ನಂತರದವರ ಚಿತ್ರಗಳಿವೆ. ಸ್ವಾಮಿ ನಾರಾಯಣರು ಅವತಾರ ಪುರುಷರೆನ್ನುವ ನಂಬಿಕೆ ಅಲ್ಲಿ ಪ್ರಚಲಿತದಲ್ಲಿದೆ.
ಅಲ್ಲಿಯೇ ಹತ್ತಿರವಿರುವ ಇವರ ಗೆಳೆಯನಿಗೆ ಅತೀ ಆಪ್ತರಾದ ಯಶವಂತ ಚಿತ್ತಾಲರ ಅಣ್ಣ ನರಹರಿ ಚಿತ್ತಾಲ ಮತ್ತು ಅವರ ಅಣ್ಣನ ಹೆಂಡತಿ ಜಯಶ್ರೀ ಅವರ ಮನೆಗೆ ಅವರನ್ನು ಭೆಟ್ಟಿಯಾಗಲು ಹೋದೆವು. ಅವರು ನಮಗೂ ಸಹ ಪರಿಚಯದವರೇ ಆದ್ದರಿಂದ ನಮಗೂ ಸಹ ಅವರನ್ನು ಭೇಟಿಯಾಗಲು ತುಂಬಾ ಸಂತೋಷವಾಯಿತು. ಅವರೂ ಸಹ ತಮ್ಮ ಊರಿನ ಕಡೆಯವರನ್ನು ಕಂಡು ತುಂಬ ಪ್ರೀತಿಯನ್ನು ವ್ಯಕ್ತಪಡಿಸಿದರು. ಅವರಿಬ್ಬರೂ 80 ವಯಸ್ಸಿಗೆ ಮೇಲ್ಪಟ್ಟವರು. ನರಹರಿ ಚಿತ್ತಾಲರಿಗೆ ಪಾರ್ಕಿನ್‌ಸನ್ ಕಾಯಿಲೆಯಿದೆ. ಅವರು ಅಮೇರಿಕಾದಲ್ಲಿ ನೆಲೆಸಿ 55 ವರ್ಷ ಆಯಿತಂತೆ. ಆದರೂ ಕನ್ನಡವನ್ನು ಮರೆತಿಲ್ಲ. ನಮ್ಮೊಡನೆ ಕನ್ನಡದಲ್ಲಿಯೇ ಮಾತನಾಡಿದರು. ತಮ್ಮ ಊರಾದ ಹನೇಹಳ್ಳಿಯ ಬಗ್ಗೆ ವಿಚಾರಿಸಿದರು. ಅವರ ಅತ್ತಿಗೆ ಸಹ ನನ್ನನ್ನು ತಬ್ಬಿಕೊಂಡು ಮುದ್ದು ಮಾಡಿದರು. ಅವರಿಗೆ ನೆನಪಿನ ಶಕ್ತಿ ಇಲ್ಲ. ಆದರೂ ಕೊಂಕಣಿಯಲ್ಲಿ ಏನೇನೋ ಮಾತನಾಡುತ್ತಿದ್ದರು. ನಾವು ತೆಗೆದುಕೊಂಡು ಹೋದ ಚಪಾತಿ ಪಲ್ಯ, ಪಾಯಸ ಅವರಿಗೆ ಬಡಿಸಿದೆವು. ಅವರು ಪ್ರೀತಿಯಿಂದ ಊಟ ಮಾಡುವುದನ್ನು ನೋಡಿ ತುಂಬಾ ಖುಷಿಯಾಯಿತು. ಅವರಿಗೆ ಸ್ವಂತ ಮನೆಯಿದೆ. ಅವರನ್ನು ನೋಡಿಕೊಳ್ಳಲು ಇಬ್ಬರು ಕೇರ್‌ಟೇಕರ್ ಇದ್ದಾರೆ. ಈಗ ಅವರಿಬ್ಬರೂ ಇಹಲೋಕವನ್ನು ತ್ಯಜಿಸಿದ ವಿಷಯ ತಿಳಿದು ತುಂಬಾ ನೋವು ಮತ್ತು ಬೇಸರವಾಗಿತ್ತು.
By-ಶಾಲಿನಿ ಗಾಂವಕರ್
ಮುಂದಿನ ಭಾಗ ಓದಿ…
