ಪ್ರೌಢಶಾಲೆಗೆ ಭೇಟಿ
ಇವರಿಗೆ ಅಲ್ಲಿಯ ಶಾಲೆಗಳನ್ನು ನೋಡುವ ಬಯಕೆ ಇತ್ತು. ಅದಕ್ಕಾಗಿ ಅನಿಲ ನಮ್ಮನ್ನು ಅವರ ಮಕ್ಕಳು ಓದಿದ ಶಾಲೆಗೆ ಕರೆದುಕೊಂಡು ಹೋದರು. ರೂಪಾನ ತಮ್ಮ ವಿವೇಕನ ಮಕ್ಕಳೂ ಸಹ ಅಲ್ಲಿಯೇ ಓದುತ್ತಿದ್ದರು.
ಅಮೆರಿಕಾ ದೇಶ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದು ಅಲ್ಲಿ ನರ್ಸರಿಯಿಂದ 12 ನೇ ತರಗತಿಯವರೆಗೆ ಉಚಿತ ಶಿಕ್ಷಣ ನೀಡಲಾಗುತ್ತದೆ. ಶಾಲೆಯೇ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಪೂರೈಸುತ್ತದೆ. ಅಲ್ಲಿಯೇ ಪುಸ್ತಕಗಳನ್ನು ಓದಿ ಇಡುವ ವ್ಯವಸ್ಥೆ ಮಾಡಿದೆ. ಶಾಲೆಗಳಿಗೆ ತಮ್ಮದೇ ಆದ ಬಸ್ ವ್ಯವಸ್ಥೆ ಇದೆ. ಉಚಿತವಾಗಿ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವುದು ಮತ್ತು ಬಿಡಲಾಗುವುದು. ಅಲ್ಲಿ ವಿದ್ಯಾರ್ಥಿಗಳ ಬಗ್ಗೆ ಸಂಪೂರ್ಣ ಕಾಳಜಿ ವಹಿಸಲಾಗುವುದು. ನಿರ್ದಿಷ್ಟ ಸ್ಥಳಗಳಲ್ಲಿ ನಿರ್ದಿಷ್ಟ ಸಮಯಕ್ಕೆ ಮಕ್ಕಳನ್ನು ಬಿಡುತ್ತಾರೆ. ಅಲ್ಲಿ ಸಾಮಾನ್ಯವಾಗಿ ಶಾಲೆಯ ವೇಳೆ ಬೆಳಿಗ್ಗೆ 8ರಿಂದ ಮಧ್ಯಾಹ್ನ 2ರವರೆಗೆ ಇಲ್ಲವೆ 4 ರವರೆಗೆ ಇರುತ್ತದೆ. ಅಲ್ಲಿ ಹೆಚ್ಚಿನ ಶಾಲೆಗಳಲ್ಲಿ ಸಹ ಶಿಕ್ಷಣ ವ್ಯವಸ್ಥೆ ಇದೆ. ಗಂಡು ಹೆಣ್ಣಿಗೆ ಪ್ರತ್ಯೇಕವಾದ ಶಾಲೆಗಳಿಲ್ಲ. ಕ್ರೀಡೆಗೆ ಶಾಲೆಯಲ್ಲಿ ಹೆಚ್ಚಿನ ಪ್ರೋತ್ಸಾಹ, ಮಕ್ಕಳ ತಂದೆ ತಾಯಿಯರು ಎಲ್ಲಿ ವಾಸ ಮಾಡುವರೋ ಅಲ್ಲಿಗೆ ಹತ್ತಿರವಿರುವ ಶಾಲೆಗೆ ಸೇರಿಸಬೇಕು. ಅಧ್ಯಾಪಕರು ಶಾಲೆಯಲ್ಲಿ ಹೆಚ್ಚು ಬೋಧಿಸುವುದಿಲ್ಲ. ಮಕ್ಕಳಿಗೆ ಅಭ್ಯಾಸದ ಪಠ್ಯಪುಸ್ತಕಗಳನ್ನು ನೀಡಿ ಅವರೇ ಸ್ವತಃ ಓದಿಕೊಳ್ಳುವಂತೆ ಪ್ರೇರೇಪಿಸುತ್ತಾರೆ. ಶಿಕ್ಷಕರು ಅವರಿಗೆ ವಿವಿಧ ಬಗೆಯ ಪ್ರಾಜೆಕ್ಟ್‌ಗಳನ್ನು ನೀಡುವರು. ಅವುಗಳಿಗೆ ಶಿಕ್ಷಕರ ಮಾರ್ಗದರ್ಶನ ಇದ್ದೇ ಇರುತ್ತದೆ. ತಪ್ಪಿದ್ದಲ್ಲಿ ಶಿಕ್ಷಕರು ಅವರು ಮಾಡಿದ ದೋಷಗಳನ್ನು ತಿದ್ದುವರು. ಮಕ್ಕಳಿಗೆ ಸೂಕ್ತ ಪ್ರೋತ್ಸಾಹ ನೀಡುವರು. ಮಕ್ಕಳಿಗೆ ಅವಶ್ಯಕವಾದ ಪಠ್ಯಪುಸ್ತಕಗಳನ್ನು ಉಚಿತವಾಗಿ ಒದಗಿಸುವರು. ಸಾಂದರ್ಭಿಕ ಗ್ರಂಥಗಳನ್ನು ಓದಲು ಶಿಕ್ಷಕರು ಸಲಹೆ ನೀಡುವರು. ವಿದ್ಯಾರ್ಥಿಯ ಬೌದ್ಧಿಕ ಮಟ್ಟವನ್ನು ಗಮನಿಸಿ ಅವರಿಗೆ ಸಮರ್ಪಕ ಶಿಕ್ಷಣ ನೀಡುವ ವ್ಯವಸ್ಥೆ ಅಲ್ಲಿದೆ. ಅವರು ಕಲಿಕೆಯಲ್ಲಿ ತಾಂತ್ರಿಕ ಜ್ಞಾನದ ಉದಾ:- ಕಂಪ್ಯೂಟರ್ ಬಳಕೆ, ಆಡಿಯೋ ವೀಡಿಯೋ ಬಳಕೆ ಇದೆ. ಅದು ಆ ಏರಿಯಾದ ದೊಡ್ಡಶಾಲೆ, ಶಾಲೆಯ ಸುತ್ತಲೂ ವಿಶಾಲ ವೇದಿಕೆ ಇದೆ.

ಅಲ್ಲಿ ನನಗೆ ಇಷ್ಟವಾದ ಸಂಗತಿಯೆಂದರೆ ಅಲ್ಲಿ ಬುದ್ದಿವಂತ ಮಕ್ಕಳಿಗೆ ಪ್ರತ್ಯೇಕ ಕಲಿಸುವ ವ್ಯವಸ್ಥೆ ಇದೆ. ಆದರೆ ಅಷ್ಟಾಗಿ ಬುದ್ದಿವಂತರಲ್ಲದ ವಿದ್ಯಾರ್ಥಿಗಳಿಗೆ ಅತೀ ಹೆಚ್ಚಿನ ಮುತುವರ್ಜಿ ವಹಿಸಿ ಕಲಿಸುವ ವ್ಯವಸ್ಥೆ ತುಂಬಾ ಒಳ್ಳೆಯದು. ಅಲ್ಲಿನ ಪರೀಕ್ಷಾ ಪದ್ಧತಿಯೂ ನಮ್ಮಲ್ಲಿಗಿಂತ ಭಿನ್ನವಾಗಿದೆ. ಅವರ ಶೈಕ್ಷಣಿಕ ಪ್ರಗತಿ, ಅವರ ವರ್ತನೆ, ನಡೆ, ನುಡಿ, ಆಸಕ್ತಿ ಹವ್ಯಾಸ, ಕಲಿಕಾ ಶ್ರದ್ದೆ ಇವನ್ನು ಪರಿಗಣಿಸಿ ಗ್ರೇಡ್ ಕೊಡುತ್ತಾರೆ. ಮಕ್ಕಳ ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಬೇಕಾದ ಪರಿಸರ ಇಲ್ಲಿದೆ.
ನನಗೆ ಬೇಜಾರು ತಂದ ಒಂದು ವಿಷಯವೆಂದರೆ ಹೈಸ್ಕೂಲ್ ಹಂತದಲ್ಲಿ ಗಂಡು ಹೆಣ್ಣು ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯಲ್ಲಿ ಸಾಕಷ್ಟು ಪ್ರಗತಿಯಾಗಿರುತ್ತದೆ. ಅವರಿಗೆ ಮುಕ್ತ ಶಿಕ್ಷಣ ನೀಡುವುದರಿಂದ ಸಹಪಾಠಿಗಳಲ್ಲಿ ಸ್ನೇಹ ಸಲುಗೆ ಹೆಚ್ಚಿರುತ್ತದೆ. ಸಹಜವಾಗಿ ಆ ವಯಸ್ಸಿನಲ್ಲಿ ಲೈಂಗಿಕ ಆಸಕ್ತಿ ಕವಲೊಡೆದಿರುತ್ತದೆ. ಬಾಯ್ ಫ್ರೆಂಡ್, ಗರ್ಲ್ ಫ್ರೆಂಡ್ ಜೊತೆ ಹುಡುಗ ಹುಡುಗಿಯರ ಒಡನಾಟ ಹೆಚ್ಚು ಮುಕ್ತ ಸ್ಥಿತಿಯಲ್ಲಿರುತ್ತದೆ. ಅವರು ದೈಹಿಕ ಆಕರ್ಷಣೆಗೆ ಒಳಗಾಗಿ ಡೇಟಿಂಗ್ ಸ್ವಚ್ಛಂದ ವಿಹಾರ, ಶುರು ಮಾಡುತ್ತಾರೆ. ಮುಕ್ತ ದೈಹಿಕ ಸಂಪರ್ಕದಿಂದ ಕೆಲವರು ಹೆಣ್ಣು ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಗರ್ಭ ಧರಿಸುತ್ತಾರೆ. ಅದು ಅಂದರೆ ಅವರ ಹಾಗೂ ಅವರಿಗೆ ಹುಟ್ಟಿದ ಮಗುವಿನ ಲಾಲನೆ ಪಾಲನೆ ಸರಕಾರಕ್ಕೆ ಹಾಗೂ ಸಮಾಜಕ್ಕೆ ತೊಂದರೆಯಾಗುತ್ತದೆ. ಹೀಗೆ ದಾರಿ ತಪ್ಪಿದ ಮಕ್ಕಳಿಗೆ ಶಿಕ್ಷಕರು ಮತ್ತು ಪಾಲಕರು ಬುದ್ದಿವಾದ ಹೇಳಬಹುದೇ ಹೊರತು ಶಿಕ್ಷಿಸುವ ಹಕ್ಕಿಲ್ಲ. ಇನ್ನೂ ಕೆಲವರು ತಂದೆ ತಾಯಿಯ ಪ್ರೀತಿಯ ಕೊರತೆಯಿಂದ ನರಳುವ ಮಕ್ಕಳು ಕೆಟ್ಟ ಹಾದಿ ಹಿಡಿಯುವರು. ದುಶ್ಚಟಗಳಿಗೆ ಬಲಿಯಾಗುವರು. ಕುಡಿತ ಮತ್ತು ಮಾದಕ ದ್ರವ್ಯಗಳ ಸೇವನೆಯಿಂದ ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿ ಕಳೆದುಕೊಂಡ ನಿದರ್ಶನಗಳು ಇವೆ. ಹೀಗಾಗಿ ಕೆಲವು ಭಾರತೀಯರು ಹೆಣ್ಣು ಮಕ್ಕಳು ದೊಡ್ಡವರಾದಂತೆ ಅಮೆರಿಕಾ ಬಿಟ್ಟು ಮಕ್ಕಳ ಓದಿಗಾಗಿ ಭಾರತಕ್ಕೆ ಬಂದ ಉದಾಹರಣೆಗಳೂ ಇವೆ.
ಹರೆಯದ ವಿದ್ಯಾರ್ಥಿಗಳಿಗೆ 12 ನೇ ಕ್ಲಾಸಿನ ಪರೀಕ್ಷೆಯಲ್ಲಿ ಪಾಸಾದಾಗ ದೊರೆಯುವ ಸರ್ಟಿಫಿಕೇಟ್ ಅವರ ಬದುಕಿನಲ್ಲಿ ಅತ್ಯಂತ ಮಹತ್ವದ್ದು.
ಉನ್ನತ ಶಿಕ್ಷಣ : 12ನೇ ಕ್ಲಾಸಿನ ಪರೀಕ್ಷೆ ಮುಗಿಸಿದ ಮೇಲೆ ಇಲ್ಲಿಗೆ ಅವರ ಕಲಿಕೆ
ಒಂದು ಹಂತ ಮುಗಿದಂತೆ. ಮುಂದೆ ಕಾಲೇಜಿಗೆ ಸೇರಿ ಹೆಚ್ಚಿನ ಶಿಕ್ಷಣ ಪಡೆಯುವವರು ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ. ನರ್ಸರಿಯಿಂದ 12 ರವರೆಗೆ ಮಾತ್ರ ಉಚಿತ ಶಿಕ್ಷಣ ಆನಂತರದ ಶಿಕ್ಷಣ ದುಬಾರಿಯಾಗುತ್ತದೆ. ಆಗ ಕೆಲವರು ಕೆಲಸಕ್ಕೆ ಸೇರುತ್ತಾರೆ. ಕೆಲವರು ವಯಸ್ಸಿಗೆ ಬಂದಂತೆ ಮನೆ ತೊರೆದು ಸ್ವತಂತ್ರವಾಗಿ ಜೀವಿಸಲು ಹೊರಡುವರು. ಮೆಜಾರಿಟಿಗೆ ಬಂದ ಮಕ್ಕಳ ಶಿಕ್ಷಣ ಜವಾಬ್ದಾರಿ ತಂದೆ ತಾಯಿಯರದಲ್ಲ. ಹೀಗಾಗಿ ಕಾಲೇಜು ಶಿಕ್ಷಣ ಪಡೆಯಬೇಕೆನ್ನುವವರು ಕೆಲಸ ಮಾಡಿಕೊಂಡು ತಮ್ಮ ದುಡಿಮೆಯ ಸ್ವಲ್ಪ ಭಾಗವನ್ನು ಉನ್ನತ ಶಿಕ್ಷಣಕ್ಕೆ ಬಳಸುವರು. ಇವರ ಗೆಳೆಯ ಅನಿಲ ಮತ್ತು ಅವನ ಹೆಂಡತಿ ರೂಪಾ ಬಗ್ಗೆ ಬರೆಯುವುದು ಅತೀ ಮುಖ್ಯ. ರೂಪಾ ಮುಂಬೈನಲ್ಲಿ ಇಂಗ್ಲಿಷ್ ಮಿಡಿಯಮ್‌ನಲ್ಲಿ ಓದಿದವಳು, ಎಮ್.ಎಸ್‌ಸಿ. ಕಂಪ್ಯೂಟರ್ ಸಾಯನ್ಸ್‌ನಲ್ಲಿ ಮಾಡಿದ್ದಳು. ಅಮೆರಿಕಾದಲ್ಲಿ 30 ವರ್ಷ ನೆಲೆಸಿದ್ದರೂ ಸಹ ತುಂಬಾ ಸರಳ ಜೀವಿ ಒಂದು ಚೂರೂ ಜಂಭವಿಲ್ಲ. ಅವಳಿಗೆ ಕನ್ನಡ ಚೂರೂ ಬರುತ್ತಿರಲಿಲ್ಲ. ಆದರಿಂದ ನಾನು ಅವಳ ಜೊತೆ ನನ್ನ ಹರಕು ಮುರುಕು ಇಂಗ್ಲಿಷ್‌ನಲ್ಲಿ ಮಾತಾಡುತ್ತಿದ್ದೆ. ಅವಳೂ ಸಹ ನನಗೆ ಚೆನ್ನಾಗಿ ಸಹಕಾರ ಕೊಡುತ್ತಿದ್ದಳು. ನಾವು ಅಲ್ಲಿಗೆ ಹೋದಾಗ, ಶ್ರಾವಣ ತಿಂಗಳು. ಅವರು ಮಾಂಸಾಹಾರ ತಿನ್ನುತ್ತಿರಲಿಲ್ಲ, ಆದರೂ ಅವಳು ನಮಗಾಗಿ ದಿನಕ್ಕೊಂದು ಮೀನು ಅಡಿಗೆಯನ್ನು ಮಾಡಿ ಪ್ರೀತಿಯಿಂದ ಬಡಿಸುತ್ತಿದ್ದಳು. ಮಧ್ಯೆ ಮಧ್ಯೆ ನಮಗೆ ಸಮಯ ಕಳೆಯಲು ಕುರುಕಲು ತಿಂಡಿ ಮತ್ತು ನಾನಾ ಥರದ ಹಣ್ಣುಗಳನ್ನು ತಿನ್ನಲು ಕೊಡುತ್ತಿದ್ದಳು. ಗಂಡ ಹೆಂಡತಿ ಸೇರಿ ಎಲ್ಲ ಕೆಲಸವನ್ನು ಮಾಡುತ್ತಿದ್ದರೇ ಹೊರತು ನನಗೆ ಯಾವ ಕೆಲಸವನ್ನೂ ಮಾಡಲು ಬಿಡುತ್ತಿರಲಿಲ್ಲ. ಅವರಿಗೆ ಎರಡು ಗಂಡು ಮಕ್ಕಳು ಗೌತಮ ಮತ್ತು ಗೌರವ, ಅವರೂ ಸಹ ತಂದೆ ತಾಯಿಯರಿಗೆ ಕೆಲಸದಲ್ಲಿ ಸಹಾಯ ಮಾಡುತ್ತಿದ್ದರು. ಅಣ್ಣ ತಮ್ಮ ಸರದಿಯಂತೆ ಮನೆಯ ಪಾತ್ರೆಗಳನ್ನೆಲ್ಲಾ ತೊಳೆಯುತ್ತಿದ್ದರು. ನಮ್ಮ ಜೊತೆ ಕುಳಿತು ಮಾತನಾಡುತ್ತಿದ್ದರು. ನಾವು ಅಲ್ಲಿಗೆ ಹೋದಾಗ ಅವರ ಅಜ್ಜಿ ಸಹ ಅಲ್ಲಿಯೇ ಇದ್ದರು. ಆ ಮಕ್ಕಳು ಅಜ್ಜಿಯ ಜೊತೆ ಕುಳಿತು ಕೊಂಕಣಿಯಲ್ಲಿ ಮಾತನಾಡುತ್ತಿದ್ದರು. ಅಜ್ಜಿಗಾಗಿ ರಾಮಾಯಣ ಮತ್ತು ಮಹಾಭಾರತದ ಸಿ.ಡಿ.ಯನ್ನು ಟಿ.ವಿ.ಯಲ್ಲಿ ಬರುವ ಇಂಗ್ಲಿಷ್ ಕಾರ್ಯಕ್ರಮಗಳನ್ನು ಸಹ ಕೊಂಕಣಿಯಲ್ಲಿ ವಿವರವಾಗಿ ಹೇಳುತ್ತಿದ್ದರು. ಅಜ್ಜಿ ಸಾಯಂಕಾಲದಲ್ಲಿ ದೇವರ ಪೂಜೆ ಮಾಡುತ್ತಿದ್ದರೆ ಅಜ್ಜಿ ದೇವರ ಭಜನೆ ಮಾಡುವಾಗ ಮನೆ ಮಂದಿಯೆಲ್ಲ ಬಂದು ಅವರ ಜೊತೆ ತಾವೂ ಭಜನೆ ಮಾಡುತ್ತಾರೆ. ದೇವರಿಗೆ ನಮಸ್ಕರಿಸಿ ಅಜ್ಜಿಯಿಂದ ಪ್ರಸಾದ ಸ್ವೀಕರಿಸುತ್ತಾರೆ. ಮಕ್ಕಳು ಅಮೆರಿಕಾದಲ್ಲೇ ಹುಟ್ಟಿ ಬೆಳೆದವರು. ಅವರ ಈ ಸಂಸ್ಕಾರ ನನಗೆ ತುಂಬಾ ಇಷ್ಟವಾಯಿತು. ರೂಪಾ ಸಹ ಅತ್ತೆಯನ್ನು ತುಂಬಾ ಭಯ ಭಕ್ತಿಯಿಂದ ನೋಡಿಕೊಳ್ಳುತ್ತಿದ್ದಳು. ರಾತ್ರಿ ಅತ್ತೆ ಕಾಲು ನೋವೆಂದರೆ ರಾತ್ರಿ ಅತ್ತೆ ಮಲಗುವ ಮೊದಲು ಅತ್ತೆಯ ಕಾಲು ಒತ್ತಿ ಅತ್ತೆ ಮಲಗಿದ ಮೇಲೆ ತಾನು ಹೋಗಿ ಮಲಗುತ್ತಿದ್ದಳು. ಎಂದೂ ಅತ್ತೆಗೆ ತಿರುಗಿ ಮಾತನಾಡುವುದಿರಲಿ, ಅತ್ತೆ ಎದುರು ಧ್ವನಿ ಎತ್ತಿ ಮಾತಾಡಿದವಳಲ್ಲ, ಅನಿಲ ಸಹ ಬೆಳಿಗ್ಗೆ ಬೇಗ ಎದ್ದು ಅಮ್ಮನಿಗೆ ದೋಸೆ ಚಹ ಮಾಡಿಕೊಡುತ್ತಿದ್ದ. ಅವನು ರೌಷ್ಟ್ರ ಪುಡ್‌ನಲ್ಲಿ ಹಿರಿಯ ವಿಜ್ಞಾನಿಯಾಗಿದ್ದರೂ ಸಹ ಮನೆಯಲ್ಲಿ ತರಕಾರಿ ಬೆಳೆಯುವುದು, ಕಾಯಿಪಲ್ಯ ಹೆಚ್ಚುವುದು. ಚಪಾತಿ ಮಾಡುವುದು, ಹೀಗೆ ಎಲ್ಲ ರೀತಿಯ ಕೆಲಸ ಮಾಡುತ್ತಿದ್ದ. ನನಗಂತೂ ಅಮೇರಿಕಾದಲ್ಲಿ ಇಂತಹ ಸಂಸಾರ ಕಂಡು ಇಷ್ಟವಾಯ್ತು
ಒಮ್ಮೆ ಅಂದರೆ ರೂಪಾ ಪ್ರಥಮ ಬಾರಿಗೆ ಅಮೇರಿಕಾದಿಂದ ನಮ್ಮ ಮನೆಗೆ ಬರುವವಳಿದ್ದಳು. ಅವಳು ಮಾಡರ್ನ ಆಗಿ ಸ್ಟೈಲ್ ಆಗಿ ಬರಬಹುದೆಂದು ನಾನೂ ಸಹ ಚೂಡಿದಾರ ಹಾಕಿಕೊಂಡು ಸ್ವಲ್ಪ ಮೇಕಪ್ ಮಾಡಿಕೊಂಡು ಸ್ಟೈಲ್ ಆಗಿ ರೆಡಿಯಾಗಿದ್ದೆ. ನಮ್ಮ ಮನೆಗೆ ಬಂದ ಅವಳನ್ನು ನೋಡಿ ನಾನು ಪೆಚ್ಚಾದೆ. ಅವಳು ಅಗಲ ಅಂಚಿರುವ ದಪ್ಪ ರೇಷ್ಮೆ ಸೀರೆ ಉಟ್ಟು ಕೈ ತುಂಬಾ ಗಾಜಿನ ಬಳೆ ತೊಟ್ಟು ತಲೆ ತುಂಬಾ ಹೂ ಮುಡಿದುಕೊಂಡು ಅವಳ ಅತ್ತೆ ಗಂಡ ಮಕ್ಕಳ ಜೊತೆ ಬಂದಿದ್ದಳು. ಬಂದವಳೇ ಸೀರೆ ಸೊಂಟಕ್ಕೆ ಸಿಕ್ಕಿಸಿ ನನ್ನ ಜೊತೆಯಲ್ಲಿ ಅಡಿಗೆ ಮನೆಗೆ ಬಂದು ನನ್ನ ಕೆಲಸದಲ್ಲಿ ಸಹಾಯಕ್ಕೆ ನಿಂತಳು. ಅಷ್ಟು ಒಳ್ಳೆಯವಳು ರೂಪಾ, ದಿನಾ ಗಂಡ ಹೆಂಡತಿ ನನ್ನನ್ನು ಪಕ್ಕದಲ್ಲಿರುವ ಶಾಪಿಂಗ್ ಮಾಲ್‌ಗೆ ಕರೆದುಕೊಂಡು ಹೋಗಿ ನಾನು ಪ್ಯಾಂಟ್, ಶರ್ಟ್ ತೆಗೆದುಕೊಂಡು ಧರಿಸುವಂತೆ ತುಂಬಾ ಒತ್ತಾಯ ಮಾಡಿದರು. ನಾಚಿಕೆಯಾಗುತ್ತೆ ನನಗೆ ಇದು ಸಾಧ್ಯವಿಲ್ಲ ಎಂದು ಎಷ್ಟೇ ಕೇಳಿಕೊಂಡರೂ ಬಿಡದೆ ನಾನು ಅವರ ಒತ್ತಾಯಕ್ಕೆ ಕಟ್ಟುಬಿದ್ದು ಪ್ಯಾಂಟ್ ಶರ್ಟ್ ಧರಿಸುವಂತೆ ಮಾಡಿದರು. ಮಾರನೆಯ ದಿನ ನೂಲು ಹುಣ್ಣಿಮೆ ನನ್ನ ಹುಟ್ಟಿದ ದಿನವಾಗಿತ್ತು.
ನೂಲು ಹುಣ್ಣಿಮೆಯ ದಿನ ರೂಪಾ ಮತ್ತು ಅವರ ತಮ್ಮನ ಮನೆಯವರು ಸೇರಿ ಚೆನ್ನಾಗಿ ರಕ್ಷಾ ಬಂಧನವನ್ನು ಆಚರಿಸಿದರು. ಶಾಸ್ತೋಕ್ತವಾಗಿ ರೂಪಾ ತಮ್ಮನ ಹೆಣ್ಣು ಮಕ್ಕಳು ಅನಿಲನ ಗಂಡು ಮಕ್ಕಳಿಗೆ ರಾಖಿ ಕಟ್ಟಿದರು. ರೂಪಾ ಸಹ ತಮ್ಮನ ಜೊತೆಯಲ್ಲಿ ಇವರಿಗೂ ರಾಖಿ ಕಟ್ಟಿದಳು. ಆ ದಿನ ರುಚಿಯಾದ ಹಬ್ಬದಡುಗೆ ಎಲ್ಲರೂ ಸೇರಿ ಮಾಡಿ ಎಲ್ಲರೂ ಜೊತೆಯಲ್ಲಿಯೇ ಊಟಕ್ಕೆ ಕುಳಿತು ಊಟ ಮಾಡಿದೆವು. ನಾವಂತೂ ಇಂಡಿಯಾಗಿಂತಲೂ ಚೆನ್ನಾಗಿ ಅಮೇರಿಕಾದಲ್ಲಿ ರಾಖಿ ಹಬ್ಬದ ಸಂಭ್ರಮ ಆಚರಿಸಿದೆವು. ಎಲ್ಲರೊಟ್ಟಿಗೆ ಫೋಟೋಗಳನ್ನು ತೆಗೆಸಿಕೊಂಡೆವು.
ಇಲಿನಾಯ್ಸ್ ಶೀತಲಳ ಮನೆಗೆ
ಶೀತಲ ನಮ್ಮ ಅಣ್ಣನ ಮಗಳು. ಅವಳು ತನ್ನ ಗಂಡ ಮಕ್ಕಳ ಜೊತೆ ಶಿಕಾಗೋದ ಇಲಿನಾಯ್ಸ್ ನಲ್ಲಿ ವಾಸವಾಗಿದ್ದಾಳೆ. ಅವಳ ಗಂಡ ರಾಜು ಅನಿಲನ ಮನೆಗೆ ಬಂದು ನಮ್ಮನ್ನು ಅವರ ಮನೆಗೆ ಕರೆದುಕೊಂಡು ಹೋದನು. ಜೊತೆಯಲ್ಲಿ ಮಗ ಆರವನನ್ನು ಸಹ ಕರೆದುಕೊಂಡು ಬಂದಿದ್ದನು. ಅವನು ನಮ್ಮನ್ನು ಕಂಡು ಓಡಿ ಬಂದು ತಬ್ಬಿಕೊಂಡನು. ನಮಗಂತೂ ಅವನನ್ನು ಕಂಡು ತುಂಬಾ ಸಂತೋಷವಾಯಿತು. ಅವರ ಜೊತೆ ಶೀತಲಳ ಮನೆಗೆ ಬಂದೆವು. ಶೀತಲ ನಮಗಾಗಿ ಕಾಯುತ್ತಾ ಇದ್ದಳು. ಅವಳ ಮಕ್ಕಳು ಆರವ ಮತ್ತು ಅನುಜ ತುಂಬಾ ಮುದ್ದಾದ ಮಕ್ಕಳು. ನಮ್ಮನ್ನು ತುಂಬಾ ಹಚ್ಚಿಕೊಂಡಿದ್ದರು. ಶನಿವಾರ ಆದ್ದರಿಂದ ನಮ್ಮ ಮಗನೂ ಸಹ ಶೀತಲಳ ಮನೆಗೆ ಬಂದಿದ್ದ. ಶೀತಲ ಮನೆಯಲ್ಲಿ ನಾವು ಬಂದ ದಿನವೇ ರಕ್ಷಾ ಬಂಧನವನ್ನು ಆಚರಿಸಿದರು. ಶೀತಲ ಥರದ
ರುಚಿ ರುಚಿಯಾದ ಅಡುಗೆಯನ್ನು ಮಾಡಿದ್ದಳು. ಮೂರ್ತಿ ಅಣ್ಣ, ಸ್ಮಿತಾ, ಶಶಿ ಅವರನ್ನು ಊಟಕ್ಕೆ ಕರೆದಿದ್ದಳು. ರಾಖಿ ಹುಣ್ಣಿಮೆಯಾದ್ದರಿಂದ ಶೀತಲ ನನ್ನ ಮಗ ಸತ್ಯಜೀತನಿಗೆ ರಾಖಿ ಕಟ್ಟಿದಳು. ರಾಜು ಅಂದು ನನ್ನ ಹುಟ್ಟಿದ ದಿನ ಎಂದು ಹೇಗೋ ತಿಳಿದುಕೊಂಡು ಗುಟ್ಟಾಗಿ ಹೋಗಿ ದೊಡ್ಡ ಕೇಕ್ ತೆಗೆದುಕೊಂಡು ಬಂದನು. ಅಂದು ನಾನು ಜೀವನದಲ್ಲಿ ಪ್ರಥಮ ಬಾರಿಗೆ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡೆ. ಎಲ್ಲರೂ ಊಟ ಮಾಡಿ ತುಂಬಾ ಹೊತ್ತಿನವರೆಗೆ ಊರ ವಿಷಯ ಅದು ಇದೂ ಮಾತನಾಡುತ್ತಾ ಕುಳಿತೆವು. ಅವರು ನಮ್ಮನ್ನು ತಮ್ಮಮನೆಗೆ ಆಮಂತ್ರಿಸಿ, ಅವರ ಮನೆಗೆ ಹೊರಟಾಗ ರಾತ್ರಿ 12 ಗಂಟೆ.
ನೇವಿ ಪಿಯರ್

ಮಾರನೆಯ ದಿನ ರವಿವಾರವಾದ್ದರಿಂದ ರಾಜು ನಮ್ಮೆಲ್ಲರನ್ನು ಕರೆದುಕೊಂಡು ಶಿಕಾಗೋ ಡೌನ್ ಟೌನ್‌ನಲ್ಲಿರುವ ನೇವಿ ಪಿಯರ್‌ಗೆ ನಮ್ಮನ್ನು ಕರೆದುಕೊಂಡು ಹೋದನು. ನೇವಿ ಪಿಯರ್ ಒಂದು ಮನರಂಜನಾ ಸ್ಥಳ, ಇದು ಮಿಚಿಗನ್ ನದಿಯ ದಡದಲ್ಲಿದೆ. ನಾವು ಅದರ ಉದ್ದಕ್ಕೂ ಅಡ್ಡಾಡಿದೆವು. ಮಕ್ಕಳಿಗೆ ಊಟ ಮಾಡಿಸಿ ನಾವು ಊಟ ಮಾಡಿದೆವು. ನಂತರ ಹಾಗೆ ಮುಂದೆ ನಡೆದರೆ ಅಲ್ಲಿ ಒಂದು ದೊಡ್ಡ ಸ್ಟೇಜ್ ಥರದ ವಿಶಾಲವಾದ ಆವರಣ ಇದೆ. ಅಲ್ಲಿ ಕೆಲವೇ ದಿನ ಮಾತ್ರ ಬಾಣ ಬಿರುಸುಗಳನ್ನು ಸುಡುವ ಕಾರ್ಯಕ್ರಮ ಇರುತ್ತದೆಯಂತೆ. ಲೇಕ್‌ನ ಒಂದು ಭಾಗದಲ್ಲಿ ಪಟಾಕಿ ಸುಟ್ಟರೆ ಅದು ಆಕಾಶಕ್ಕೆ ಚಿಮ್ಮಿ ಹಲವು ವರ್ಣಮಯ ಲೋಕವನ್ನು ಸೃಷ್ಟಿ ಮಾಡುತ್ತದೆ. ಈ ಮಧುರ ಕ್ಷಣಕ್ಕಾಗಿ ಎಲ್ಲರೂ ತೆರೆದ ಕಣ್ಣಿನಿಂದ ಈ ದೃಶ್ಯವನ್ನು ನೋಡಿ ಆನಂದಿಸುವರು. ಅಲ್ಲಿ ಮ್ಯೂಸಿಕಲ್ ಪಾರ್ಟಿ ಮತ್ತು ಲೇಟ್ ನೈಟ್ ಪಾರ್ಟಿಗಳು ನಡೆಯುತ್ತವೆಯಂತೆ. ಅಲ್ಲಿ ಇದಕ್ಕಾಗಿಯೇ ಸಾವಿರಾರು ಜನರು ಸೇರಿರುತ್ತಾರೆ. ಈ ದೇಶದ ಜನರು ವಿನೋದಪ್ರಿಯರು, ಹಾಗೂ ಭೋಜನಪ್ರಿಯರು. ಅವರಿಗೆ ತಿನ್ನುವುದರಲ್ಲಿ ದಣಿವೇ ಇಲ್ಲ. ಮನರಂಜನೆ, ಭೋಜನ ಹಾಗೂ ಮಾರುಕಟ್ಟೆ ವ್ಯಾಪಾರ ಇವುಗಳಿಗೆ ತಮ್ಮ ದುಡಿಮೆಯ ಬಹುಭಾಗ ಖರ್ಚು ಮಾಡಿ ಸಂತೋಷಪಡುವರು. ವಯಸ್ಸಾದವರು.
ವಿಕಲಾಂಗರು, ಪುಟ್ಟ ಮಕ್ಕಳನ್ನು ತಳ್ಳುಗಾಡಿಯಲ್ಲಿ ಮತ್ತು ಪೆರಂಬುಲೇಟರ್‌ನಲ್ಲಿ ಕರೆದು ತರುತ್ತಾರೆ. ನೇವಿ ಪಿಯರನ್ನು ನೋಡಿ ಮುಗಿಸಿ. ಇನ್ನು ತಿರುಗಿ ಮನೆಗೆ ಹೋಗಬೇಕು ಎನ್ನುವಷ್ಟರಲ್ಲಿ ಜೋರಾಗಿ ಮಳೆ ಶುರುವಾಯಿತು. ನಾವು ಓಡಿ ಹೋಗಿ ಒಂದು ದೊಡ್ಡ ಮಾಲ್ ಒಳಗೆ ಹೊಕ್ಕೆವು. ಅಲ್ಲಿ ಸಣ್ಣ ಪುಟ್ಟ ಶಾಪಿಂಗ್ ಮಾಡಿ, ಮನೆಗೆ ಹಿಂದಿರುಗಿದೆವು.
ರಾತ್ರಿ ಊಟಕ್ಕೆ ಮೂರ್ತಿ ಅಣ್ಣನ ಮನೆಗೆ ಹೋದೆವು. ಸ್ಮಿತಾ ನಮಗಾಗಿ ಕಾಯುತ್ತಾ ಇದ್ದಳು. ಅವರ ಮನೆಗೆ ಹುಬ್ಬಳ್ಳಿಯಿಂದ ಡಾ. ಗಣೇಶ ಕಿಣಿ ಅವರು ತಮ್ಮ ಹೆಂಡತಿ ಮಕ್ಕಳ ಜೊತೆ ಬಂದಿದ್ದರು. ಅವರು ಮೂರ್ತಿ ಅಣ್ಣನ ತಮ್ಮ ಶಮ್ಮಿಯ ಗೆಳೆಯರಂತೆ ಅವರನ್ನು ಭೇಟಿಯಾಗಿ ತುಂಬಾ ಸಂತೋಷವಾಯಿತು. ಶಮ್ಮಿ ಸಹ ಟಿವಿಯಲ್ಲಿ ಕಾಣಿಸಿಕೊಂಡು ಟಿ.ವಿ.ಯನ್ನು ಆರಿಸಬೇಡಿ, ನನಗೂ ಸಹ ಅಲ್ಲಿ ನಡೆಯುವುದು ಗೊತ್ತಾಗಬೇಕು ನಾನೂ ಸಹ ನಿಮ್ಮ ಜೊತೆ ಮಾತನಾಡುತ್ತೇನೆ ಎಂದು ಹೇಳುತ್ತಿದ್ದ. ಎಲ್ಲರೂ ಊಟ ಮಾಡಿ ಹರಟೆ ಹೊಡೆಯುತ್ತಾ ಕುಳಿತೆವು. ಕೆಲವರು ಜೋಕ್ ಕಟ್ ಮಾಡಿದರೆ ಇನ್ನೂ ಕೆಲವರು ಹಳೆಯ ಹಿಂದಿ ಮತ್ತು ಕನ್ನಡ ಹಾಡುಗಳನ್ನು ಹಾಡಿದರು. ರಾಜು ಮತ್ತು ಗಣೇಶ ಕಿಣಿಯವರ ಹೆಂಡತಿ ತುಂಬಾ ಮಧುರವಾಗಿ ಹಾಡಿದರೆ ಅದಕ್ಕೆ ಶಶಿ ಮತ್ತು ಸ್ಮಿತಾ ದನಿಗೂಡಿಸಿದರು. ನಾವೂ ಸಹ ಹಾಡಿನ ಬಂಡಿ ಆಡಿದೆವು. ಹೀಗೆ ಸಮಯ ಜಾರಿದ್ದೆ ಗೊತ್ತಾಗಲಿಲ್ಲ. ಸಮಯ ನೋಡಿದರೆ ರಾತ್ರಿ 1 ಗಂಟೆಯಾಗಿತ್ತು. ಅವರಿಗೆ ನಮ್ಮನ್ನು ಕಳಿಸುವ ಮನಸಿರಲಿಲ್ಲ. ನಮಗೂ ಹೊರಡುವ ಮನಸ್ಸಿರಲಿಲ್ಲ. ಒಲ್ಲದ ಮನಸ್ಸಿನಿಂದ ಶೀತಲ ಮನೆಗೆ ಬಂದೆವು. ಮಾರನೆಯ ದಿನ ಶೀತಲ ನನ್ನನ್ನು ಶಾಪಿಂಗ್ ಮಾಲ್‌ಗೆ ಕರೆದುಕೊಂಡು ಹೋಗಿದ್ದಳು. ಅದೊಂದು ದೊಡ್ಡ ವ್ಯಾಪಾರಿ ಮಳಿಗೆಗಳ ಸಂಕೀರ್ಣವಾಗಿತ್ತು. ಅಲ್ಲಿ ದೊಡ್ಡ ದೊಡ್ಡ ಮಾಲ್‌ಗಳಿದ್ದವು. ಉದಾ : ವಾಲ್ ಮಾರ್ಟ, ಮಾರ್ಕ ಎಂಡ್ ಸ್ಪೆನ್ಸರ್ ಹೀಗೆ ಮೊದಲಾದವು. ಇಲ್ಲಿ ಮೊಬೈಲ್‌ನಿಂದ ಹಿಡಿದು ಕ್ಯಾಮರಾ, ವಾಷಿಂಗ್ ಮಷಿನ್, ಫ್ರಿಡ್ಜ್ ಏಷ್ಯಾದ ಇತ್ಯಾದಿಗಳನ್ನು ಮಾರಾಟಕ್ಕೆ ಇಡಲಾಗಿದೆ. ಅಮೇರಿಕಾದ ಮಾಲ್‌ಗಳ ವಿಶೇಷ ಏನೆಂದರೆ ಒಮ್ಮೆ ಕೊಂಡ ವಸ್ತುವನ್ನು ಮೂರು ತಿಂಗಳವರೆಗೆ ಬಿಲ್ ಸಮೇತ ಹಿಂದಿರುಗಿಸುವ ಅವಕಾಶವಿರುತ್ತದೆ. ಗ್ರಾಹಕರ ಸೇವೆಗಾಗಿ ಪ್ರತಿಯೊಂದು ಮಾಲ್‌ನಲ್ಲೂ ಮಾರಿದ ಸರಕನ್ನು ಹಿಂದಕ್ಕೆ ಪಡೆಯುವ ಒಂದು ಪ್ರತ್ಯೇಕ ವಿಭಾಗವೇ ಇರುತ್ತದೆ. ಶೀತಲ ನನಗೆ ಬೇಕಾದ ಸಾಮಾನುಗಳನ್ನು ಕೊಡಿಸಿದಳು.

ಇಲಿನಾಯ್ಸ್ಗೆ ಹತ್ತಿರವೇ ವೆಂಕಟೇಶ್ವರ ದೇವಾಲಯ ಭವ್ಯವಾಗಿದೆ. ಅಂದು ಸಂಕಷ್ಟಿ ಆದ್ದರಿಂದ ನನಗೂ ದೇವರ ಮನೆಗೆ ಹೋಗಬೇಕೆಂಬ ಮನಸ್ಸು ಇತ್ತು. ದೇವಸ್ಥಾನದ ಗೋಪುರ ದೂರಕ್ಕೆ ಕಾಣುತ್ತಿತ್ತು. ದೇವಸ್ಥಾನಕ್ಕೆ ಹೋಗಲು ಮೆಟ್ಟಿಲುಗಳಿದ್ದರೂ ಪ್ರವೇಶ ಕೆಳಗಿರುವ ಬಾಗಿಲಿನಿಂದಲೇ, ಹೊರಗೆ ಚಪ್ಪಲಿ ಬಿಟ್ಟು ದೇವರಿರುವ ದೊಡ್ಡ ಹಜಾರಕ್ಕೆ ಬಂದೆವು. ಅಲ್ಲಿ ನಮ್ಮ ಕುಲದೇವರಾದ ವೆಂಕಟೇಶ್ವರ, ಭ್ರಮರಾಂಬ, ಮಹಾಲಕ್ಷ್ಮೀ ಇವರುಗಳ ಜೊತೆ ಶ್ರೀದೇವಿ, ಭೂದೇವಿ, ಸ್ವಾಮಿ ಅಯ್ಯಪ್ಪ, ಗಣಪತಿ, ಸತ್ಯನಾರಾಯಣಸ್ವಾಮಿ, ಹನುಮಾನ್ ಮೊದಲಾದ ದೇವತೆಗಳು ಇರುವರು. ನಾವು ಅಲ್ಲಿ ಹೋದಾಗ ಪೂಜೆ ನಡೆಯುತ್ತಿತ್ತು. ನಾವು ಅಲ್ಲಿ ತುಂಬಾ ಜನ ಕನ್ನಡ ಮಾತನಾಡುವವರನ್ನು ಭೇಟಿಯಾದೆವು. ಭಾರತೀಯರ ಭಕ್ತಿಯ ದೈವಾರಾಧನೆ ಶ್ರದ್ದೆ ಭಕ್ತಿ ನಂಬಿಕೆ ಕಂಡು ನನಗೆ ತುಂಬಾ ಸಂತೋಷವಾಯಿತು. ಅವರು ಅಮೆರಿಕಾದಲ್ಲಿ ನೆಲೆಸಿದ್ದರೂ ತಮ್ಮ ಮೂಲದ ದೈವಭಕ್ತಿಯನ್ನು ಮರೆತಿಲ್ಲ. ತಿರುಪತಿ ತಿಮ್ಮಪ್ಪನ ಎತ್ತರದ ಮೂರ್ತಿ ಆಕರ್ಷಕವಾಗಿದೆ. ನಾವು ಭಕ್ತಿಯಿಂದ ದೇವರಿಗೆ ನಮಸ್ಕರಿಸಿ ಹೊರಗೆ ಬಂದೆವು. ನೆಲ ಅಂತಸ್ತಿನಲ್ಲಿ ಪ್ರಸಾದ ವ್ಯವಸ್ಥೆ ಇದೆ. ನಮಗೆ ಬೇಕಾದನ್ನು ಹಣ ಪಾವತಿಸಿ ಪಡೆಯಬಹುದು. ಅಲ್ಲಿಯೇ ಮುಂದೆ ಬೆಂಗಳೂರಿನ ತಿಂಡಿಗಳ ಮೇಳ ನಡೆದಿತ್ತು. ಅವರು ತಿಂಡಿ ತಿನ್ನಲು ನಮ್ಮನ್ನು ಕರೆಯುತ್ತಾ ಇದ್ದರು. ರಾಜು ಶೀತಲ ನಮಗಾಗಿ ಮತ್ತು ಮಕ್ಕಳಿಗಾಗಿ ಮಸಾಲೆದೋಸೆ, ಪೂರಿ ಪಲ್ಯ, ಐಸ್‌ಕ್ರೀಮ್ ಖರೀದಿ ಮಾಡಿ ತಂದರು. ಅದರ ರುಚಿಯಂತೂ ಬೆಂಗಳೂರನ್ನು ಬಿಟ್ಟು ಹೋಗಿರಲಿಲ್ಲ. ಅದನ್ನು ತಿಂದು ತುಂಬಾ ಖುಷಿಪಟ್ಟೆವು. ತಿರುಗಿ ಬರುವಾಗ ಪಕ್ಕದಲ್ಲಿ ಸ್ವಾಮಿ ವಿವೇಕಾನಂದರ ಕಂಚಿನ ಪ್ರತಿಮೆ ಇತ್ತು. ಅದನ್ನು ಕಂಡು ಒಳಗೆ ಹೋಗಿ ನಮಸ್ಕರಿಸಿ ಬಂದೆವು. ಮಾರನೇ ದಿನ ಮಗನ ಜೊತೆ ಅವರ ಮನೆಗೆ ಹೋಗಬೇಕಿತ್ತು. ಅವನು ಇರುವುದು ಚಿಕಾಗೋ ಡೌನ್ ಟೌನ್‌ನಲ್ಲಿ ಅಂದರೆ ಅದು ಕೆಪಿಟಲ್ ಏರಿಯಾ ಶೀತಲ ಮಕ್ಕಳನ್ನು ಬಿಟ್ಟು ಹೋಗಲು ತುಂಬಾ ಬೇಸರವಾಯಿತು. ಆರವ ನಮ್ಮನ್ನು ತುಂಬಾ ಹಚ್ಚಿಕೊಂಡಿದ್ದ. ಕಾರಲ್ಲಿ ಹೋಗುವಾಗ, ಊಟಕ್ಕೆ ಕೂಡುವಾಗ ಎಲ್ಲ ಅಮ್ಮನ ಜೊತೆ ಎಂದು ನನ್ನ ಬಳಿಯೇ ಕೂಡುತಿದ್ದ. ರಾತ್ರಿ ಸಹ ಅವನಿಗೆ ನಮ್ಮ ಬಳಿ ಮಲಗುವುದು ತುಂಬಾ ಇಷ್ಟ. ಆದರೆ ಅಮೇರಿಕಾದಲ್ಲಿ ಮಕ್ಕಳು ಒಬ್ಬರೆ ಮಲಗಬೇಕು ಹಿರಿಯರ ಜೊತೆ ಮಲಗುವಂತಿಲ್ಲ. ಹೀಗಾಗಿ ಅವನು ರಾತ್ರಿ ಅವನ ರೂಮಿನಲ್ಲಿ ಮಲಗಿ ಬೆಳಗ್ಗಿನ 4 ಇಲ್ಲವೆ 5 ಗಂಟೆಗೆ ಎದ್ದು ಪಕ್ಕದ ರೂಮಿನಲ್ಲಿ ಮಲಗಿರುವ ನಮ್ಮ ಬಳಿ ಬಂದು ನಮ್ಮ ಮಧ್ಯೆ ಮಲಗುತ್ತಿದ್ದ. ಆರವ ತುಂಬಾ ಮೃದು ಸ್ವಭಾವದ ಮುದ್ದು ಮಗು.
By-ಶಾಲಿನಿ ಗಾಂವಕರ್
ಮುಂದಿನ ಭಾಗ ಓದಿ…
