(ಭಾಗ-8) ಪಡುವಣದ ಪ್ರವಾಸ: ಒಂದು ಪ್ರಯಾಣ, ಸಾವಿರ ನೆನಪುಗಳು!

(ಭಾಗ-8) ಪಡುವಣದ ಪ್ರವಾಸ: ಒಂದು ಪ್ರಯಾಣ, ಸಾವಿರ ನೆನಪುಗಳು!

ಚಿಕಾಗೋ ಡೌನ್ ಟೌನ್

ನಾವು ಮಗನ ಜೊತೆ ರೈಲು ನಿಲ್ದಾಣಕ್ಕೆ ಬಂದು ಸಹ ಪ್ರಯಾಣಿಕರ ಜೊತೆ ಕಾದು ನಿಂತೆವು. ಅಲ್ಲಿ ಕೆಲವೇ ಪ್ರಯಾಣಿಕರಿದ್ದರು. ಜನಜಂಗುಳಿ ಇರಲಿಲ್ಲ. ತೀರ ನಿಶ್ಯಬ್ದವಾಗಿತ್ತು. ರೈಲು ಬಂತು ನಾವು ಅದನ್ನು ಏರಿ ಕುಳಿತೆವು. ರೈಲ್ವೆಯ ಜನರ ಸೌಜನ್ಯ ಆ ವ್ಯವಸ್ಥೆ ಅದರ ಹಿಂದಿರುವ ದಕ್ಷತೆ ನಮಗೆ ಅಪರಿಚಿತವಾದದ್ದು. ಬೋಗಿಗಳ ಒಳಗೆ ಎರಡೂ ಬದಿಗೆ ಸುಖಾಸೀನವಾದ ಎರಡೆರಡು ಸೀಟುಗಳ ಸಾಲು, ಶಾಂತವಾದ ವಾತಾವರಣ, ಯಾವುದೇ ನೂಕುನುಗ್ಗಲು ಗದ್ದಲವಿಲ್ಲ. ಮುಂದೆ ಬರುವ ನಿಲ್ದಾಣ ಯಾವುದು ಎಂದು ಮೊದಲೇ ಧ್ವನಿವರ್ಧಕದ ಮೂಲಕ ತಿಳಿಸುತ್ತಾರೆ. ಸ್ಟೇಷನ್ ಬಂದೊಡನೆ ತಾನಾಗಿಯೇ ತೆರೆದುಕೊಳ್ಳುವ ಬಾಗಿಲುಗಳು, ಯಾವ ರೈಲು ಯಾವ ಫ್ಲಾಟ್‌ ಫಾರಂನಿಂದ ಎಷ್ಟು ಹೊತ್ತಿಗೆ ಹೊರಡುತ್ತದೆ ಎಂಬುದನ್ನು ಕಣ್ಣಿಗೆ ಕಾಣಿಸುವ, ಕಿವಿಗೆ ಕೇಳಿಸುವ ವ್ಯವಸ್ಥೆಗಳು ಸಮರ್ಪಕವಾಗಿದ್ದರೂ ಹೊಸದಾಗಿ ಬಂದಂಥ ನಮ್ಮವರಿಗೆ ಸ್ವಲ್ಪ ಭಯವಾಗುವುದು ಸಹಜ. ಏಕೆಂದರೆ ನಮಗೆ ಅವರ ಇಂಗ್ಲಿಷ್ ಉಚ್ಚಾರ ಸರಿಯಾಗಿ ತಿಳಿಯುವುದಿಲ್ಲ. ವಾಪಸ್ಸು ಬರುವಾಗ ನಾವಿಬ್ಬರೇ ಬರಬೇಕಾದ್ದರಿಂದ ನಮ್ಮ ಅನುಕೂಲಕ್ಕಾಗಿ ದಾರಿ ಮಧ್ಯೆ ಸಿಗುವ ಸ್ಟೇಷನ್‌ಗಳ ಹೆಸರನ್ನು ನೆನಪಿಟ್ಟುಕೊಳ್ಳಬೇಕಿತ್ತು. ಮಗನ ಮನೆ ರೈಲ್ವೆ ನಿಲ್ದಾಣದ ಹತ್ತಿರವೇ ಇತ್ತು. ಇದರಿಂದ ನಮಗೆ ಓಡಾಡಲು ಅನುಕೂಲವಾಯಿತು. ಮಗ ಹೊಸದಾಗಿ ಕೆಲಸಕ್ಕೆ ಸೇರಿದ್ದರಿಂದ ನಾಲ್ಕು ಹುಡುಗರ ಜೊತೆ ಒಂದು ದೊಡ್ಡ ಮನೆಯಲ್ಲಿದ್ದ. ನಾವು ಅವನ ಜೊತೆ ಅವನ ರೂಮಿನಲ್ಲೇ ಇದ್ದೆವು. ರೂಮು ವಿಶಾಲವಾಗಿತ್ತು.

ಶಿಕಾಗೋ ದರ್ಶನ

ಅಮೆರಿಕಾದಲ್ಲಿ ಯಾರದೇ ಸಹಾಯವಿಲ್ಲದೇ ಒಬ್ಬರೇ ಓಡಾಡುವುದು ತುಂಬಾ ಕಷ್ಟ. ಹೀಗಾಗಿ ನನ್ನ ಮಗ ಅವನಿಗೆ ಇಂಟರವ್ಯೂ ಇದ್ದರೂ ನಮ್ಮ ಜೊತೆ ಹೊರಡಲು ತಯಾರಾದ. ನಾವು ಮನೆಯಲ್ಲಿಯೇ ತಿಂಡಿ ತಿಂದು ಹೊರಟೆವು. ಅಲ್ಲಿಯ ವಿಶೇಷವೆಂದರೆ ದಿನವಿಡೀ ಸಂಚರಿಸಲು ಅನುಕೂಲವಾಗುವಂತೆ ಡೇ ಟಿಕೆಟನ್ನು ಸಂಬಂಧಪಟ್ಟ ಮಾಲ್‌ಗಳಲ್ಲಿ ಮೊದಲೇ ಪಡೆದುಕೊಳ್ಳಬೇಕು. ಈ ರೈಲಿನ ಟಿಕೇಟನ್ನು ಬಸ್ಸುಗಳ ಪ್ರಯಾಣಕ್ಕೂ ಬಳಸಬಹುದು. ಹೀಗೆ ನಾವು 3 ದಿನ ಬೆಳಿಗ್ಗೆ ಕೊಂಡುಕೊಂಡು 3 ದಿನಗಳ ಕಾಲ ಚಿಕಾಗೋ ನಗರವನ್ನು ಸಂಚಾರ ಮಾಡಿದೆವು. ನಾವು ರೈಲ್ವೆ ನಿಲ್ದಾಣದ ಒಳಗಡೆ ಬಂದೆವು. ಹೊರದಾರಿಯ ನಿಲ್ದಾಣದಲ್ಲಿ ಇರುವ ಏಳೆಂಟು ಗೇಟುಗಳ ಅಡ್ಡ ಕಂಬಿಯ ಮೊದಲ ಸೀಳಿನಲ್ಲಿ ಡೇ ಟಿಕೇಟನ್ನು ತೋರಿಸಿದರೆ ಅದು ಚಕ್ಕನೆ ಅದೇ ಕಂಬಿಯ ಇನ್ನೊಂದು ಸೀಳಿನಲ್ಲಿ ಹೊರಬರುತ್ತದೆ. ಅದನ್ನು ನಾವು ತಟ್ಟನೆ ತೆಗೆದುಕೊಳ್ಳಬೇಕು. ಕೂಡಲೇ ಹೊರಕ್ಕೆ ಹೋಗಲು ರೆಕ್ಕೆಯಾಕಾರದ ತಡೆಗಳು ತೆರೆದುಕೊಂಡು ದಾರಿ ಮಾಡಿಕೊಡುತ್ತವೆ. ನಮಗೆ ಏನಾದರೂ ತೊಂದರೆಯಾದರೆ ಅಲ್ಲೇ ಸ್ವಲ್ಪ ದೂರದಲ್ಲಿ ನಿಂತು ಉಸ್ತುವಾರಿಯಲ್ಲಿ ತೊಡಗಿರುವ ರೈಲ್ವೆ ಇಲಾಖೆಯ ಸಿಬ್ಬಂದಿಯ ಸಹಾಯ ಪಡೆಯಬಹುದು. ಅವನು ನಮ್ಮ ತೊಂದರೆಯೇನೆಂಬುದನ್ನು ತಿಳಿದು ಸಹಾಯ ಮಾಡುತ್ತಾನೆ. ನಾವು ಪ್ಲಾಟ್ಫಾರಂ ಮೇಲೆ ನಿಂತು ಟ್ರೇನಿಗಾಗಿ ಕಾಯತೊಡಗಿದೆವು. ಅಲ್ಲಿ ಟ್ರೇನ್ ಬರುವ ಹಳಿಯ ಲೈನ್‌ಗಳು ಸಹ ನೀಲಿ ಕೆಂಪು ಹಳದಿ ಪರ್ಪಲ್ ಬಣ್ಣಗಳಿಂದ ಕೂಡಿರುತ್ತವೆ. ಆ ಬಣ್ಣಗಳ ಮೇಲಿಂದ ಟ್ರೇನುಗಳು ಎಲ್ಲಿಗೆ ಯಾವಾಗ ಹೋಗುತ್ತವೆ ಎಂಬ ವಿವರಗಳನ್ನು ತಿಳಿದುಕೊಳ್ಳಬಹುದಂತೆ. ಆದರೆ ಅದರ ತಿಳುವಳಿಕೆ ಮತ್ತು ಅನುಭವ ನಮಗಿರಬೇಕು. ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಬೇಕಾದರೆ ಕಡಿಮೆ ಎಂದರೂ 3 – 4 ಸಲ ಟ್ರೇನ್ ಬದಲಾಯಿಸಬೇಕು. ಅದೇ ರೀತಿ ಪ್ಲಾಟ್ ಫಾರ್ಮ್ ಬದಲಾಯಿಸಬೇಕು. ಪದೇ ಪದೇ ಗೇಟಿನ ಅಡ್ಡ ಕಂಬಿಯ ಸೀಳಿನಲ್ಲಿ ಟಿಕೇಟ ಎಂಟರ್ ಮಾಡಬೇಕು. ಗೇಟ್ ತೆರೆದುಕೊಂಡ ಮೇಲೆ ಹೊರಗೆ ಹೋಗಬೇಕು. ಕೆಲವು ಕಡೆ ಹತ್ತಿ ಇಳಿಯಲು ಎಕ್ಸ್‌ ಕಲೇಟರ್‌ಗಳು ಇರುತ್ತವೆ. ಕೆಲವು ಕಡೆ ಇರುವುದಿಲ್ಲ. ಆಗ ಮೆಟ್ಟಿಲುಗಳನ್ನೇ ಹತ್ತಿ ಇಳಿಯಬೇಕಾಗುತ್ತದೆ. ಮೊದಲು ನಾವು ಶಿಕಾಗೋ ನಗರದಲ್ಲಿರುವ ಫೋರ್ ಡಿ ಥಿಯೇಟರ್ ನೋಡಲಹೋದೆವು.

ಅಲ್ಲಿ ನಮಗೆ ಅಂಟಾರ್ಟಿಕಾ ಮಹಾಸಾಗರದಲ್ಲಿರುವ ಪ್ರಾಣಿಗಳು, ಹಿವು ಕರಡಿಗಳು, ಪೆಂಗ್ವಿನ್‌ಗಳ ಮತ್ತು ಜಲಚರಗಳ ಜೀವನ ಚಿತ್ರಣವನ್ನು ತೋರಿಸಿದರು. ಆ ಚಿತ್ರಗಳು ನಮ್ಮ ಎದುರಿಗೆ ಬಂದಷ್ಟು ನೈಜತೆಯಲ್ಲಿ ಕಾಣುತ್ತಿದ್ದವು. ಪ್ರಾಣಿಗಳು ನೀರಿನಲ್ಲಿ ಜಂಪ್ ಮಾಡಿದಾಗ ಸಿಡಿಯುವ ನೀರು ನಮ್ಮ ಮೇಲೆ ಸಿಡಿದು ನಾವು ಅದರ ಅನುಭವವನ್ನು ಸ್ವತಃ ಅನುಭವಿಸುವಂತೆ ಮಾಡಿದ್ದರು. ಪ್ರಾಣಿಗಳು ನಮ್ಮ ಎದುರಿಗೆ ಬಂದಂತೆ ಭಾಸವಾಗುತ್ತಿತ್ತು. ಕ್ರೂರ ಪ್ರಾಣಿಗಳು ಕಚ್ಚಾಡುವಾಗ ಭಯದಿಂದ ವೀಕ್ಷಿಸುತ್ತಿರುವಾಗ ಯಾರೋ ಹಿಂದಿನಿಂದ ನಾವು ಕುಳಿತ ಕುರ್ಚಿಗೆ ಗುದ್ದಿದಂತೆ ಅನುಭವವಾಗುತ್ತಿತ್ತು. ಅಂತೂ ಅಲ್ಲಿ ನಾನು ವಿಚಿತ್ರ ಅನುಭವಗಳನ್ನು ಪಡೆದುಕೊಂಡೆನು. ಅದೊಂದು ಅಮೆರಿಕಾದಲ್ಲೇ ಪ್ರಸಿದ್ಧವಾದ ಶಿಕಾಗೋ ನಗರದಲ್ಲಿರುವ ಅದ್ಭುತವಾದ ಆಕ್ಷೇರಿಯಂ. ಒಳಗೆ ಪ್ರವೇಶಿಸಿದರೆ ಅದೊಂದು ಜಲವಾಸಿ ಪ್ರಾಣಿಗಳ ಅದ್ಭುತ ಲೋಕ. ಅದನ್ನು ನೋಡಲು ಕಡಿಮೆ ಎಂದರೂ ಮೂರರಿಂದ ನಾಲ್ಕು ಗಂಟೆ ಸಮಯ ಬೇಕು. ಅಲ್ಲಿ ವಿವಿಧ ದೇಶಗಳ ವಿವಿಧ ರೀತಿಯ ಆಮೆಗಳು, ಮೀನುಗಳನ್ನು ನೀರಿನ ದೊಡ್ಡ ದೊಡ್ಡ ಕೆರೆಯಲ್ಲಿಟ್ಟಿದ್ದಾರೆ. ಒಂದು ದೊಡ್ಡ ಕೆರೆಯಲ್ಲಿ ಡಾಲಿನ್‌ಗಳನ್ನು ಸಾಕಿ ಅವುಗಳಿಗೆ ಟ್ರೇನಿಂಗ್ ಕೊಟ್ಟು ಅವುಗಳನ್ನು ಆಟ ಆಡಿಸಲಾಗುತ್ತದೆ. ಬೃಹಾದಾಕಾರದ ಕೆರೆಯಂತೆ ಇರುವ ಆಕ್ಟೇರಿಯಂನಲ್ಲಿ ಬೃಹಾದಾಕಾರದ ತಿಮಿಂಗಲಗಳು ಇದೆ. ದೊಡ್ಡ ಆಕಾರದ ಆಮೆಗಳು ಮತ್ತು ಪೆಂಗ್ವಿನ್‌ಗಳು ಇವೆ. ಇದು ಮಿಚಿಗನ್ ನದಿಯ ದಡದಲ್ಲಿ ಇರುವುದರಿಂದ ಆ ನದಿಯ ನೀರನ್ನು ತೆಗೆದುಕೊಂಡು ಇದಕ್ಕೆ ಉಪಯೋಗಿಸಿಕೊಂಡಿರಬೇಕು. ಒಂದು ಕಡೆಯಂತೂ ನೀರು ಸಮುದ್ರದ ತೆರೆಗಳಂತೆ ಬಂದು ಕಲ್ಲಿನ ಬಂಡೆಗಳಿಗೆ ಅಪ್ಪಳಿಸುತ್ತಿರುತ್ತದೆ. ಅದನ್ನು ಹೇಗೆ ಮಾಡಿದರೆನ್ನುವುದು ನನ್ನ ತಲೆಗೆ ಇನ್ನೂ ಹೊಳೆದಿಲ್ಲ. ಅಲ್ಲಿ ನಾನಾ ರೀತಿಯ ಬೇರೆ ಬೇರೆ ದೇಶಗಳ ಜೆಲ್ಲಿ ಫಿಶ್ ಮತ್ತು ಸೆಲ್ ಫಿಶ್‌ಗಳು ನೋಡಲು ಸಿಗುತ್ತವೆ. ಜೆಲ್ಲಿ ಫಿಶ್‌ಗಳು ಬೇರೆ ಬೇರೆ ಬಣ್ಣಗಳಲ್ಲಿ ಸುಂದರವಾಗಿ ಕಾಣುತ್ತಿದ್ದವು. ಒಟ್ಟಿನಲ್ಲಿ ಹೇಳಬೇಕೆಂದರೆ ಈ ದೇಶದಲ್ಲಿ ದೊರೆಯುವ ಎಲ್ಲಾ ವೈವಿಧ್ಯಮಯ ಜಲಸಂಚಾರಿ ಪ್ರಾಣಿಗಳನ್ನು ಅಲ್ಲಿ ಕಲೆ ಹಾಕುವಲ್ಲಿ ಹಾಗೂ ನೈಸರ್ಗಿಕ ಹಿನ್ನೆಲೆಯಲ್ಲಿ ಅವು ಮುಕ್ತವಾಗಿ ಚಲಿಸುವಂತೆ ವ್ಯವಸ್ಥೆಗೊಳಿಸಿರುವ ರೀತಿ ಬೆರಗು ಹುಟ್ಟಿಸುತ್ತದೆ.

ಅಷ್ಟರಲ್ಲಿ ನಮ್ಮ ಹೊಟ್ಟೆ ಚುರುಗುಡಹತ್ತಿತ್ತು. ಮಗನು ಅಲ್ಲಿಯೇ ಹತ್ತಿರವಿರುವ ಹೊಟೇಲಿಗೆ ನಮ್ಮನ್ನು ಕರೆದುಕೊಂಡು ಹೋದನು. ಅದೊಂದು ದೊಡ್ಡ ಹೊಟೇಲುಗಳ ಸಮೂಹ. ಅಲ್ಲಿ ಚೀನ, ಸ್ಪೀಡನ್, ಇಟಲಿ, ಮೆಕ್ಸಿಕೋ ದೇಶದವರು ಇಲ್ಲಿ ಬಂದು
ರೆಸ್ಟೋರೆಂಟ್‌ಗಳನ್ನು ಸ್ಥಾಪಿಸಿ ಹಣ ಮಾಡುತ್ತಿದ್ದಾರೆ. ನಾನು ಭಾರತೀಯ ಹೊಟೇಲುಗಳು ಎಲ್ಲಾದರೂ ಕಾಣುತ್ತದೆಯೇನೋ ಅಂತ ಅತ್ತ ಇತ್ತ ನೋಡಿದೆ. ಎಲ್ಲೂ ಕಾಣಲಿಲ್ಲ. ಇಂಡಿಯಾದವರನ್ನು ಏಕೋ ಇಲ್ಲಿಯ ರೆಸ್ಟೋರೆಂಟ್ ಉದ್ಯಮ ಅಷ್ಟಾಗಿ ಆಕರ್ಷಿಸಲಿಲ್ಲ ಎನಿಸಿತು. ನಮ್ಮ ಉಡುಪಿಯ ಜನ ಏಕೆ ಹಿಂದೆ ಬಿದ್ದಿದ್ದಾರೆ ಎನಿಸಿತು. ಮಗ ನಮ್ಮ ಅಭಿರುಚಿಯನ್ನು ಅರಿತು ಬಂದು ಮೆಕ್ಸಿಕನ್ ಹೋಟೆಲಿಗೆ ಹೋಗಿ ಮೆಕ್ಸಿಕನ್ ಊಟ ತೆಗೆದುಕೊಂಡು ಬಂದ. ಅದರಲ್ಲಿ ಪುರಿಯಂತಿರುವ ಎರಡು ಚಪಾತಿ, ಸ್ವಲ್ಪ ಬೇಯಿಸಿದ ಬೇಳೆಕಾಳು ಮತ್ತು ಸ್ವಲ್ಪ ಅನ್ನ ಇತ್ತು. ಅದಕ್ಕೆ ಉಪ್ಪು ಖಾರ ಏನೂ ಇರಲಿಲ್ಲ. ರುಚಿ ಆಗದಿದ್ದರೂ ಹಸಿವಾದ್ದರಿಂದ ಅದನ್ನೇ ತಿಂದು ಹಸಿವೆ ನೀಗಿಸಿಕೊಂಡೆವು.

ನಂತರ ನಾವು ಮಿಚಿಗನ್ ಸರೋವರದಲ್ಲಿ ಕ್ರೂಸ್‌ನಲ್ಲಿ ಸಂಚಾರ ಹೊರಟೆವು. ಮಗ ಟಿಕೇಟ್ ತೆಗೆದುಕೊಂಡು ಬಂದ. ಅದೊಂದು ವಿಶಾಲವಾಗಿರುವ ಕ್ರೂಸ್. ಅದರಲ್ಲಿ ಸುಮಾರು ನೂರು ಜನರು ಕುಳಿತುಕೊಳ್ಳುವ ವ್ಯವಸ್ಥೆ ಇತ್ತು. ಅಲ್ಲಿ ಸುಂದರವಾದ ಐರಿಷ್ ಮಹಿಳೆಯೊಬ್ಬಳು ಗೈಡ್ ಆಗಿ ನಮಗೆ ಎಲ್ಲಾ ವಿವರ ಕೊಡುತ್ತಿದ್ದಳು. ಆ ಕ್ರೂಸ್ ಮೊದಲು ಮಿಚಿಗನ್ ಸರೋವರದಲ್ಲಿ ಹೋಗುತ್ತದೆ. ಸರೋವರದ ಎರಡೂ ಬದಿಗಳಲ್ಲಿ ದೈತ್ಯಾಕಾರವಾಗಿ ನಿಂತಿರುವ ಬಹು ಮಹಡಿ ಕಟ್ಟಡಗಳನ್ನು ನಮಗೆ ತೋರಿಸುತ್ತಾ ಪ್ರಮುಖವಾದ ಕಟ್ಟಡಗಳ ಬಗ್ಗೆ ವಿವರಣೆ ಕೊಡುತ್ತಿದ್ದಳು. ಅವನ್ನು ಯಾವ ಇಂಜಿನಿಯರ್ ಯಾವ ಇಸವಿಯಲ್ಲಿ ಕಟ್ಟಿಸಿದರು. ಕೆಲವು ಕಟ್ಟಡಗಳನ್ನು ಕಟ್ಟುವಾಗ ನಡೆದಂಥ ಘಟನೆಗಳ ಬಗ್ಗೆ ವಿವರಿಸುತ್ತಿದ್ದಳು. ಒಂದೊಂದು ಬಹುಮಹಡಿಯ ಕಟ್ಟಡಗಳಿಗೆ ಸುಮಾರು ವರ್ಷ ತೆಗೆದುಕೊಂಡ ಉದಾಹರಣೆಗಳೂ ಇವೆ. ಅವಳು ಹೇಳಿದ್ದೆಲ್ಲಾ ನಮಗೆ ತಿಳಿಯುತ್ತಿರಲಿಲ್ಲ. ಮಗ ಕೆಲವೊಂದನ್ನು ನಮಗೆ ತಿಳಿಸಿ ಹೇಳುತ್ತಿದ್ದ. ಹೀಗೆ ಅಕ್ಕಪಕ್ಕದಲ್ಲಿ ತಲೆ ಎತ್ತಿರುವ ಕಟ್ಟಡಗಳನ್ನು ನೋಡುತ್ತಾ ಜಲವಿಹಾರ ಮಾಡುವುದು ತುಂಬಾ ಖುಷಿಯಾಗುತ್ತಿತ್ತು. ಹೀಗೆ ನಾವು ಮುಂದೆ ಹೋಗುತ್ತಾ ಮಿಚಿಗನ್ ಸರೋವರ ಬಿಟ್ಟು ಶಿಕಾಗೋ ನದಿಯಲ್ಲಿ ಮುಂದುವರೆದೆವು. ಮೇಲೆ ಸೇತುವೆ ಇದ್ದು ಜನ ವಾಹನಗಳಲ್ಲಿ ಸಂಚಾರ ಮಾಡುತ್ತಿದ್ದರೆ ನಾವು ಕೆಳಗಡೆಯಿಂದ ದಾಟುವಾಗ ಮಜಾ ಆಗುತ್ತಿತ್ತು. ಹೀಗೆ ನಾವು ಹೋಗಿ ಬರಲು ಎರಡು ತಾಸಾಯಿತು. ಹೀಗೆ ನಾವು ಶಿಕಾಗೋದ ಅತಿ ಎತ್ತರದ ಕಟ್ಟಡಗಳನ್ನು ನೋಡಿದೆವು.

ಸಿಯರ್ಸ್ ಟವರ್:

Skyline of downtown Chicago, USA.

ಮಗ ನಮ್ಮನ್ನು ಸಿಯರ್ಸ್ ಟವರಿಗೆ ಕರೆದುಕೊಂಡು ಹೋದನು. ಶಿಕಾಗೋ ಒಂದು ದೃಷ್ಟಿಯಲ್ಲಿ ಕಾಂಕ್ರೀಟ್ ಕಾಡು ಇದ್ದಂತೆ. ಸುತ್ತ ಮುತ್ತಲೆಲ್ಲಾ ಗಗನಚುಂಬಿ ಕಟ್ಟಡಗಳೇ ತುಂಬಿವೆ. ಈ ಟವರ್ ವಿಶ್ವದಲ್ಲೇ ಪ್ರಸಿದ್ಧವಾದ ಸ್ಥಳಗಳಲ್ಲಿ ಒಂದಾಗಿದೆ. ಇದನ್ನು ಎಲ್ಲಿಸ್ ಟವರ್ ಎಂತಲೂ ಕರೆಯುತ್ತಾರಂತೆ. ಮಾನವನ ಕ್ರಿಯಾಶೀಲತೆಗೆ ಸಾಕ್ಷೀಭೂತವಾಗಿ ನಂತರ ಈ ಬೃಹತ್ ಟವ‌ರ್ ನನ್ನನ್ನು ಆಶ್ಚರ್ಯಚಕಿತಳನ್ನಾಗಿ ಮಾಡಿತು. ಅದನ್ನು ನೋಡುವ ಅನುಭವವೇ ಮಜಾ, ಅದರ ಎತ್ತರವನ್ನು ನೆನೆಸಿಕೊಂಡರೆ ಮೈ ಜುಮ್ಮೆನ್ನುತ್ತದೆ. ಇದು 103 ಅಂತಸ್ತುಗಳನ್ನು ಹೊಂದಿದೆ. ಲಿಪ್ಪನಲ್ಲಿ ಮೇಲಕ್ಕೆ ಹೋಗುವಾಗ ಅದರ ರಭಸಕ್ಕೆ ನನಗೆ ಸಣ್ಣದಾಗಿ ಕಿವಿಯಲ್ಲಿ ನೋವು ಕಾಣಿಸಿತ್ತು. 1974 ರಲ್ಲಿ ಇದನ್ನು ಕಟ್ಟಿ ಮುಗಿಸಿದಾಗ ಇದು ವಿಶ್ವದಲ್ಲಿಯೇ ಎತ್ತರದ ಕಟ್ಟಡವಾಗಿತ್ತಂತೆ. 25 ವರ್ಷಗಳ ಕಾಲ ಈ ಕೀರ್ತಿಯನ್ನು ಉಳಿಸಿಕೊಂಡಿತ್ತಂತೆ. ಮುಂದೆ ಬೇರೆ ದೇಶಗಳಲ್ಲಿ ಇದಕ್ಕಿಂತ ಎತ್ತರ ಕಟ್ಟಡ ನಿರ್ಮಾಣವಾದ ಉದಾಹರಣೆ ಇದೆ. ಬ್ರೂಸ್ ಗ್ರಹಾಂ ಮತ್ತು ಫಜಿಲರ್ ಖಾನ್ ಎಂಬ ಪ್ರತಿಭಾವಂತ ಆರ್ಕಿಟೆಕ್ಟ್‌ಗಳು ಈ ಕಟ್ಟಡದ ವಿನ್ಯಾಸ ಮಾಡಿದ್ದಾರೆ.

“ಈ ಟವರಿನ ಮುಖ್ಯ ಆಕರ್ಷಣೆಯೆಂದರೆ 103 ನೇ ಅಂತಸ್ತಿನಲ್ಲಿರುವ ಸೈಡೆಕ್ ಈ ಟವರಿನ ಮೇಲೆ ತಲುಪಿದಾಗ ಅದೆಷ್ಟು ವಿಶಾಲವಾಗಿದೆ ಎಂಬುದು ಅರಿವಾಯಿತು.

ನೆಲಕ್ಕೆಲ್ಲಾ ಚಿತ್ತಾರದ ಕಾರ್ಪೆಟ್ ಹಾಸಲಾಗಿದೆ. ನಾಲ್ಕು ಗೋಡೆಗಳ ಮೇಲೆ ಅಲ್ಲಿನ ಪ್ರಸಿದ್ಧ ಲೇಖಕರ, ವಿಜ್ಞಾನಿಗಳ, ತಂತ್ರಜ್ಞರ, ನಾಯಕರ ಚಿತ್ರಗಳೊಡನೆ ವಿವರಗಳನ್ನು ಕೊಡಲಾಗಿದೆ. ಟವರಿನ ಸುತ್ತಲೂ ಅಡ್ಡಾಡುತ್ತಾ ನಾಲ್ಕು ದಿಕ್ಕಿನತ್ತ ಕಣ್ಣು ಹಾಯಿಸಿದಾಗ ಬಹು ವಿಸ್ತಾರವಾದ ಪ್ರದೇಶಗಳಲ್ಲಿ ಹಬ್ಬಿ ಬೆಳೆದಿರುವ ಶಿಕಾಗೋ ನಗರದ ಭವ್ಯ ದೃಶ್ಯವನ್ನು ಕಣ್ಣಿನಲ್ಲಿ ತುಂಬಿಕೊಳ್ಳಬಹುದು. ನಾವು ಅಲ್ಲಿಗೆ ಹೋದಾಗ ರಾತ್ರಿ 7-30 ಆಗಿತ್ತು. ಹೀಗಾಗಿ ರಾತ್ರಿಯಲ್ಲಿ ದೀಪದ ಬೆಳಕಿನಲ್ಲಿ ಇಡೀ ಶಿಕಾಗೋ ನಗರ ಬಂಗಾರದ ಬಣ್ಣದಿಂದ ಜಗಮಗಿಸುತ್ತಿತ್ತು. ಅಷ್ಟು ಎತ್ತರದಿಂದ ಕೆಳಗೆ ನೋಡಿದಾಗ ನೆಲದ ಮೇಲೆ ಓಡಾಡುವ ವಾಹನಗಳು ಮಕ್ಕಳು ಆಡುವ ಪುಟಾಣಿ ಕಾರು ಮೋಟರುಗಳಂತೆ ಕಾಣುವವು. 2009 ರಲ್ಲಿ ಸೈಡ್ ಅನ್ನು ಗಾಜಿನ ಬಾಲ್ಕನಿಯಾಗಿ ಪರಿವರ್ತಿಸಲಾಯಿತಂತೆ. ಇದೊಂದು ಅದ್ಭುತ ಕಲ್ಪನೆ. ಅದರ ಒಳಗೆ ಹೋದರೆ ಕೆಳಗಡೆ ಗಾಜಿದ್ದು ಅದರ ಕೆಳಗಿನ ಆಳವಾದ ಖಾಲಿ ಜಾಗ ಭಯ ಹುಟ್ಟಿಸುತ್ತದೆ. ಕೆಳಗೆ ನೋಡಿದರೆ ಗಾಜಿನ ಪಾರದರ್ಶಕತೆಯಿಂದ ಕೆಲವರಿಗೆ ಪ್ರಾಣಭಯವಾಗುತ್ತದೆ. ಆದರೆ ನಾನು ಧೈರ್ಯದಿಂದ ಸೈಡ್ಯಾಕ್ ಮೇಲೆ ಹೋಗಿ ಕುಳಿತು ಮತ್ತು ನಿಂತು ಗಾಜಿನ ಗೋಡೆಗೆ ಒರಗಿ ನಿಂತು ಪೋಟೋ ತೆಗೆಸಿಕೊಂಡೆ. ನಿಜಕ್ಕೂ ಅದೊಂದು ಅದ್ಭುತವಾದ ಅನುಭವ. ಅಲ್ಲಿ ನಿಂತು ನೋಡಿದರೆ ರಮಣೀಯವಾದ ಶಿಕಾಗೋ ನಗರದ ಸುಂದರ ದೃಶ್ಯ ಕಂಡು ಬರುತ್ತದೆ. ಈ ಗಾಜಿನ ಸೈಡೆಕ್ ಸುಮಾರು 4-5 ಮೆಟ್ರಿಕ್ ಟನ್ ತೂಕವನ್ನು ಹೊರಬಲ್ಲ ಸಾಮರ್ಥ್ಯ ಹೊಂದಿದೆ. ಅಲ್ಲಿಂದ ಕೆಳಗೆ ನೋಡಿದರೆ ಶಿಕಾಗೋ ನಗರದ ಮೇಲೆ ನಕ್ಷತ್ರಗಳಲ್ಲಿ ಮನೆ ಮಾಡಿದಂತೆ ಭಾಸವಾಗುತ್ತದೆ. ಹೊರಗಿನಿಂದ ನೋಡಿದರೆ ಸಿಯರ್ ಟವ‌ರ್ ಗಾಜಿನ ಮನೆಯಂತೆ ಕಾಣುತ್ತದೆ. ಇದರ ಮೇಲೆಯನ್ನು ಗಾಜಿನಿಂದಲೇ ಮಾಡಲಾಗಿದೆ. ಈ ರೀತಿಯಲ್ಲಿ ಭಿನ್ನ ಅನುಭವ ಪಡೆದು ಮನೆಗೆ ಹಿಂತಿರುಗುವಾಗ ನಗರದ ಸೌಂದರ್ಯ ಸವಿದೆವು. ಅಲ್ಲಿಯ ಎತ್ತರದೆತ್ತರದ ಕಟ್ಟಡಗಳ ಸೌಂದರ್ಯ ವರ್ಣಿಸಲಸದಳವಾಗಿತ್ತು. ನನಗಂತೂ ಬೆಳಿಗ್ಗೆಯಿಂದ ಒಂದೇ ಸಮನೆ ಓಡಾಡಿ ತುಂಬಾ ಸುಸ್ತಾಗಿತ್ತು. ತುಂಬಾ ರಾತ್ರಿಯಾದ್ದರಿಂದ ಊಟಕ್ಕೆ ಎಲ್ಲೂ ಹೊಟೇಲ್ ಸಿಗಲಿಲ್ಲ. ಮಗನಿಗೆ ತುಂಬಾ ಬೇಸರವಾಗಿತ್ತು. ಪುಣ್ಯಕ್ಕೆ ಒಂದು ಪಂಜಾಬಿ ಹೋಟೆಲ್ ಸಿಕ್ಕಿತು. ಅವರೂ ಸಹ ಬಾಗಿಲು ಮುಚ್ಚಲು ತಯಾರಿ ನಡೆಸಿದ್ದರು. ಆದರೂ ಅವರು ನಮ್ಮನ್ನು ಕಂಡು ಚಪಾತಿ, ಪಲ್ಯ, ಘೀ ರೈಸ್, ಹಪ್ಪಳ ನೀಡಿದ್ದರು. ಹೊಟ್ಟೆ ತುಂಬಾ ಊಟ ಮಾಡಿ ಮನೆಗೆ ಬಂದು ಮಲಗಿದೆವು.

ಮಾರನೆಯ ದಿನ ಬೆಳಿಗ್ಗೆ ಎದ್ದು ತಯಾರಾಗಿ ಡೇ ಟಿಕೇಟನ್ನು ಪಡೆದು ಟ್ರೇನ್ ಹತ್ತಿದೆವು. ಅದೇ ವಾರದಲ್ಲಿ ಮಗನಿಗೆ ನ್ಯೂಯಾರ್ಕ್‌ನಲ್ಲಿ ಇಂಟರವ್ಯೂ ಇತ್ತು. ಅವನು ತಯಾರಾಗಬೇಕಿತ್ತು. ಆದರೂ ಅವನು ನಮ್ಮ ಜೊತೆ ಬರುತ್ತಿದ್ದ. ರಾತ್ರಿಯೆಲ್ಲಾ ಕುಳಿತು ಓದುತ್ತಿದ್ದ. ಟ್ರೇನಿನಲ್ಲಿ ಸಮಯ ಹಾಳು ಮಾಡದೇ ಓದುತ್ತಿದ್ದ. ನಾವು ಮೊದಲು ಲಿಂಕನ್ ಸ್ಟೇಶನ್‌ನಲ್ಲಿ ಇಳಿದು ಪ್ರಸಿದ್ಧವಾದ ಬಹಾಯಿ ಮಂದಿರ ನೋಡಲು ಹೋದೆವು. ಅದೊಂದು ಅರಬ್ಬಿ ಸಂತರ ಮಂದಿರ. ಈ ಥರದ ಮಂದಿರಗಳು ಕೇವಲ 5 -6 ದೇಶಗಳಲ್ಲಿ ಮಾತ್ರ ಇವೆಯಂತೆ. ನಮ್ಮ ಭಾರತದಲ್ಲಿ ದಿಲ್ಲಿಯಲ್ಲಿ ಒಂದು ಮಂದಿರವಿದೆ. ಅದು ಕಮಲದ ಆಕಾರದಲ್ಲಿ ಇರುವುದರಿಂದ ಅದಕ್ಕೆ ಲೋಟಸ್ ಟೆಂಪಲ್ ಎಂದು ಕರೆಯುತ್ತಾರೆ. ಶಿಕಾಗೊದಲ್ಲಿರುವ ಈ ಬಹಾಯಿ ಮಂದಿರ ಶ್ವೇತವರ್ಣದಿಂದ ಕೂಡಿದ್ದು ಡೋಮಿನ ಆಕಾರದಲ್ಲಿ ಇದೆ. ಇಲ್ಲಿಯ ಶಾಂತ ವಾತಾವರಣ ಎಂಥವರನ್ನೂ ತನ್ನ ಕಡೆ ಸೆಳೆಯುತ್ತದೆ. ಇದು ತುಂಬಾ ವಿಶಾಲವಾಗಿ ಸುಂದರವಾಗಿದೆ. ಇಲ್ಲಿ ಇಂಗ್ಲಿಷ್‌ನಲ್ಲಿ ಧಾರ್ಮಿಕ ಪ್ರವಚನಗಳು ನಡೆಯುತ್ತಿರುತ್ತವೆ. ನಾವು ಸ್ವಲ್ಪ ಹೊತ್ತು ಅಲ್ಲಿ ಕುಳಿತು ಅದನ್ನು ಕೇಳಿದೆವು. ಹೊರಗಡೆ ಸುಂದರವಾದ ತೋಟವಿದೆ. ಅಲ್ಲಿ ವಿವಿಧ ರೀತಿಯ ಹೂವಿನ ಗಿಡಗಳಿವೆ.

1920 ರಲ್ಲಿ ಶಿಕಾಗೋ ನಗರಕ್ಕೆ ಬೆಂಕಿ ತಗುಲಿ ಇಡೀ ನಗರ ಸುಟ್ಟುಹೋಯಿತಂತೆ. ಉಳಿದಿದ್ದು ಎರಡು ವಾಟರ್ ಟವರ್ ಮಾತ್ರ. ಮಿಚಿಗನ್ ಅವಿನ್ಯೂನಲ್ಲಿ ಅದನ್ನು ನೋಡಬಹುದು. ಮುಂದೆ ಮರಳಿ ನಗರವನ್ನು ಅತ್ಯಾಧುನಿಕ ರೀತಿಯಲ್ಲಿ ಕಟ್ಟಿದರಂತೆ. ಮಿಚಿಗನ್ ಅವಿನ್ಯೂನಲ್ಲಿ ಮಿಲೇನಿಯಮ್ ಪಾರ್ಕ್ ನೋಡಲು ಹೋದೆವು. ಅಲ್ಲಿ ನಾವು ಭಿನ್ನ ರೀತಿಯ ಒಂದು ಶಿಲ್ಪ ವಿನ್ಯಾಸವನ್ನು ನೋಡಿದೆವು. ಇಡೀ ಶಿಲ್ಪ ಗಾಜಿನಿಂದ ಕೂಡಿದೆ. ಅಲ್ಲಿ ನಮ್ಮ ಬಿಂಬವಷ್ಟೇ ಅಲ್ಲದೇ ಸುತ್ತ ಮುತ್ತಲಿನ ಎತ್ತರದ ಕಟ್ಟಡಗಳ ಬಿಂಬವನ್ನೂ ಕಾಣಬಹುದು. ಅದಕ್ಕೆ ಸೇರಿದಂತೆಯೇ ಗಾರ್ಡನ್ ಇದೆ. ಮುಂದೆ ಮೆಟ್ಟಿಲು ಹತ್ತಿ ಮೇಲೆ ಬಂದರೆ ಮಿಲೇನಿಯಮ್ ಪಾರ್ಕ್‌ನ ಓಪನ್ ಆಡಿಟೋರಿಯಮ್ ಇದೆ. ಅಲ್ಲಿ ಶ್ರೇಷ್ಠ ಸಂಗೀತಗಾರರ ಆರ್ಕೆಸ್ಟ್ರಾಗಳು ನಡೆಯುತ್ತವೆ.

ಆರ್ಟ್ ಇನ್‌ಸ್ಟಿಟ್ಯೂಟ್ :

“ಇದು ನಮ್ಮ ದೇಶದ ಹೆಮ್ಮೆಯ ಪುತ್ರ ವಿವೇಕಾನಂದರು ಶಿಕಾಗೋದಲ್ಲಿ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ಉಪನ್ಯಾಸ ಮಾಡಿದ ಸ್ಥಳ. ಈಗ ಇದು ಆರ್ಟ್ ಇನ್‌ಸ್ಟಿಟ್ಯೂಟ್ ಆಫ್ ಚಿಕಾಗೋ ಎಂದು ಪ್ರಸಿದ್ದಿ ಪಡೆದಿದೆ. ಅದರ ಒಳಗೆ ಪ್ರವೇಶಿಸಿದಾಗ ಒಂದು ಧನ್ಯತಾಭಾವ ನಮ್ಮನ್ನು ಆವರಿಸುತ್ತದೆ. ಸರ್ವಧರ್ಮ ಸಮ್ಮೇಳನವು 11-9-1893 ರಲ್ಲಿ ಶಿಕಾಗೋ ನಗರದಲ್ಲಿ ಇದೇ ಭವನದಲ್ಲಿ ನಡೆಯಿತೆಂಬುದು ಎಲ್ಲರಿಗೂ ತಿಳಿದ ಸಂಗತಿ. ಈ ಕಟ್ಟಡ ಸಂಪೂರ್ಣವಾಗಿ ನವೀಕರಣಗೊಂಡು ಆ ಕಟ್ಟಡದಲ್ಲಿ ಸರ್ವಧರ್ಮ ಸಮ್ಮೇಳನ ನಡೆದುದರ ಬಗ್ಗೆ ಯಾವುದೇ ಕುರುಹುಗಳೂ ಇಲ್ಲ. ಆದರೆ ಅಲ್ಲಿ ಈ ಐತಿಹಾಸಿಕ ಗುರುತಿಗಾಗಿ ಕಂಚಿನ ಸ್ಮಾರಕ ಫಲಕವೊಂದನ್ನು ಆ ಕಟ್ಟಡದ ಗೋಡೆಯೊಂದರಲ್ಲಿ ಭದ್ರಪಡಿಸಿ ಅದರ ನೆನಪು ಉಳಿಯುವಂತೆ ಮಾಡಿರುವರು, ಅಲ್ಲಿಯ ಒಂದು ರಸ್ತೆಗೆ ವಿವೇಕಾನಂದರ ಹೆಸರಿದೆ.

ಬರಾಕ್ ಓಬಾಮ್ ಮನೆ ದರ್ಶನ:

ನಾವು ಟೀಕೆಟನ್ನು ತೆಗೆದುಕೊಂಡು ಬಸ್ಸಿನಲ್ಲಿ ಹೊರಟೆವು. ದಾರಿಯಲ್ಲಿ ನಾವು ಚೆಂಗಿಸ್‌ಖಾನ ಮ್ಯೂಸಿಯಂ ನೋಡಿದೆವು. ಮಿಚಿಗನ್ ಸರೋವರದ ಉತ್ತರದಿಂದ ದಕ್ಷಿಣದ ಕಡೆಗೆ ಪ್ರವಾಸ ಹೊರಟೆವು. ನಾವು ದಾರಿಯುದ್ದಕ್ಕೂ ದೊಡ್ಡ ದೊಡ್ಡ ಮಾಲ್‌ಗಳನ್ನು, ಗಗನಚುಂಬಿ ಕಟ್ಟಡಗಳನ್ನು ನೋಡುತ್ತಾ ಹೊರೆಟೆವು. ನಾವು ಮುಂದೆ ಹೋಗುತ್ತಿದ್ದಂತೆ ವಾಸಿಸುವ ಪ್ರದೇಶ ಪ್ರಾರಂಭವಾಯಿತು. ಅಲ್ಲಿ ರಾತ್ರಿಯ ವೇಳೆ ಕಾರಿನಲ್ಲಿ ಕಾಲು ನಡಿಗೆಯಲ್ಲಿ ಓಡಾಡುವುದು ಅಪಾಯವಂತೆ. ಕುಡಿದ ಅಮಲಿನಲ್ಲಿ ಅವರು ಮನುಷ್ಯರನ್ನು ದೋಚುತ್ತಾರಂತೆ. ಒಮ್ಮೊಮ್ಮೆ ಕೊಲೆ ಮಾಡಲೂ ಹಿಂಜರಿಯುವುದಿಲ್ಲವಂತೆ. ಅಮೇರಿಕಾದಲ್ಲಿ ಕಠಿಣ ಕೆಲಸಗಳಿಗೆ ಕರಿಯರನ್ನು ನೇಮಕ ಮಾಡುತ್ತಾರೆ. ಅವರಿಗೆ ಉನ್ನತ ಸ್ಥಾನ ಮಾನಗಳು ದಕ್ಕದೆ ಇದ್ದರೂ ಗೌರವದ ಬದುಕು ನಡೆಸುವ ಅಗತ್ಯವಾದ ಕೆಲಸಗಳು ಅವರಿಗೆ ದೊರೆಯುವುದರಿಂದ ಅವರ ಬದುಕು ನೆಮ್ಮದಿಯಿಂದ ಕೂಡಿರುವುದನ್ನು ಗಮನಿಸಬಹುದು. ಅವರು ಆಲಸಿಗಳು, ಮೈಗಳ್ಳರು, ವಿಲಾಸಿಗಳು, ಸುಲಭ ಗಳಿಕೆಗಾಗಿ ಕಳ್ಳತನ ಇತ್ಯಾದಿಗಳಲ್ಲಿ ತೊಡಗಿರುತ್ತಾರೆ ಎಂದು ಹೇಳುತ್ತಾರೆ. ಅವರಲ್ಲಿ ಕೆಲವರು ಒಳ್ಳೆಯವರೂ ಇರಬಹುದು. ಜಂಕ್‌ ಫುಡ್, ಮಾಂಸ ಮತ್ತು ಮದ್ಯ ಸೇವನೆಯಿಂದಾಗಿ ಅವರ ದೇಹ ವಿಕಾರವಾಗಿ ಕಾಣುತ್ತದೆ. ನಮ್ಮ ಬಸ್ಸಿನಲ್ಲಿ ಸಹ ತುಂಬಾ ದಪ್ಪಗಿನ ಯುವಕ ಯುವತಿಯರು ಹತ್ತಿ ಇಳಿಯುತ್ತಿದ್ದರು. ಅವರಲ್ಲಿ ಸಣ್ಣಗಿರುವವರಿಗಿಂತ ಎತ್ತರ ಹಾಗೂ ದಷ್ಟಪುಷ್ಟರಾಗಿರುವವರೇ ಹೆಚ್ಚು. ಮಹಿಳೆಯರಲ್ಲಿ ಬಹುಪಾಲು ಧಡೂತಿಯರು. ಅವರನ್ನು ನೋಡುತ್ತಿದ್ದರೆ ನನಗೆ ರಾಮಾಯಣದ ಹಿಡಿಂಬೆ ಮತ್ತು ಶೂರ್ಪನಖಿಯರ ನೆನಪು ಬರುತ್ತಿತ್ತು. ಕೆಲವರಂತೂ
ಬಸ್ಸಿನಲ್ಲಿ ಕುಳಿತು ತಮ್ಮ ಧಡೂತಿ ದೇಹವನ್ನು ಸೀಟಿನಲ್ಲಿ ಚೆಲ್ಲಿ ಮಲಗಿ ಗೊರಕೆ ಹೊಡೆಯುತ್ತಿದ್ದರು. ಬೇರೆಯವರು ನೋಡುತ್ತಾರೆನ್ನೋ ಎನ್ನುವ ಎಗ್ಗು ಸಿಗ್ಗು ಇವರಿಗೆ ಇಲ್ಲ. ಅದೇ ಹಾದಿಯಲ್ಲಿ ಮುಂದುವರೆದು ನಾವು ದೂರದಿಂದಲೇ ಬರಾಕ ಓಬಾಮನು ಪೂರ್ವಾಶ್ರಮದಲ್ಲಿ ನೆಲೆಸಿದ ಮನೆಯನ್ನು – ನೋಡಿದೆವು. ಇವರಲ್ಲಿ ಒಳ್ಳೆಯವರು. ಬುದ್ಧಿವಂತರೂ ಇದ್ದಾರೆ. ವಿದ್ಯಾವಂತರೂ ಇದ್ದಾರೆ. ಉದಾಹರಣೆಗೆ ಬರಾಕ ಒಬಾಮ. ನಾನು ಕೆಲವು ಮಾಲ್‌ಗಳಲ್ಲಿ ಸುಂದರವಾದ ಲಕ್ಷಣವಾದ ಮಹಿಳೆಯರನ್ನು ಕಂಡಿದ್ದೆ. ನಿಜವಾಗಲೂ ಅವರು ಕಪ್ಪಾಗಿದ್ದರು. ತುಂಬಾ ಲಕ್ಷಣವಾಗಿದ್ದರು. ಮತ್ತು ನನ್ನೊಡನೆ ನಗುಮೊಗದಿಂದಲೇ ಮಾತಾಡಿದ್ದರು.

ಮಗನ ಮನೆಯಿಂದ ಶೀತಲಳ ಮನೆಗೆ ವಾಪಸ್ಸಾಗಲು ರೈಲ್ವೆ ಸ್ಟೇಶನ್‌ಗೆ ಬಂದೆವು. ಸ್ಟೇಶನ್‌ನಲ್ಲಿ ಜನ ಜಂಗುಳಿ ಹೆಚ್ಚಾಗಿತ್ತು. ನಮ್ಮ ಕೈಯಲ್ಲಿ ಭಾರವಾದ ಸೂಟಕೇಸ ಇದ್ದಿದ್ದರಿಂದ ಸಹಪ್ರಯಾಣಿಕರು ಖುಷಿಯಿಂದ ಸಹಾಯ ಮಾಡಿದರು. ನನಗೆ ಈ ದೇಶದ ಮಾನವೀಯತೆ ಮೆಚ್ಚುಗೆಯಾಯಿತು. ನಾವು ಸೀಟಿನಲ್ಲಿ ಕುಳಿತಾಗ ಜಾಗ ಇಕ್ಕಟ್ಟಾದರೆ ನೀವು ಆರಾಮಾಗಿ ಕುಳಿತುಕೊಳ್ಳಿ ಎಂದು ಹೇಳಿ ತಾವು ಎದ್ದು ಬೇರೆ ಸೀಟಿಗೆ ಹೋಗಿ ಕುಳಿತುಕೊಳ್ಳುತ್ತಿದ್ದರು. ನಮಗೆ ನಾವು ಇಳಿಯಬೇಕಾದ ಜಾಗದ ಬಗ್ಗೆ ಅಷ್ಟು ಮಾಹಿತಿ ಇಲ್ಲವಾದ್ದರಿಂದ ಪಕ್ಕದ ಸೀಟಿನಲ್ಲಿ ಕುಳಿತಿರುವ ಮಹಿಳೆಯೊಬ್ಬಳನ್ನು ವಿಚಾರಿಸಿದೆವು. ಅದಕ್ಕೆ ಅವಳು ಆ ರೈಲು ಯಾವ ಜಾಗದಲ್ಲಿ ಎಷ್ಟೊತ್ತು ನಿಲ್ಲುತ್ತದೆ. ಎಲ್ಲಾ ಪ್ರದೇಶದ ಒಂದು ಪ್ರಿಂಟೆಂಡ್ ಚಾರ್ಟನ್ನೇ ನಮಗೆ ಕೊಟ್ಟಳು. ಇದರಿಂದ

ನಮಗೆ ನಾವು ಇಳಿಯಬೇಕಾದ ಜಾಗದಲ್ಲಿ ಆರಾಮಾಗಿ ಇಳಿಯಲು ಅನುಕೂಲವಾಯಿತು. ಶೀತಲಳ ಗಂಡ ರಾಜ ತನ್ನ ಮಕ್ಕಳಿಬ್ಬರ ಜೊತೆ ನಮಗಾಗಿ ಕಾಯುತ್ತಿದ್ದ ಮಕ್ಕಳು ಅಮ್ಮ ಬಂದ್ರು ಎಂದು ಖುಷಿಯಿಂದ ಕೂಗಿದರು.

ರಾಜು ನಮ್ಮನ್ನು ನೆಪರವೆಲಿ ಎಂಬುವ ಜಾಗಕ್ಕೆ ಕರೆದುಕೊಂಡು ಹೋಗಿ ಅಲ್ಲಿಯ ಎಡಿನ್‌ಬರೋ ಎನ್ನುವ ಒಂದು ದೊಡ್ಡ ಬಟ್ಟೆ ಅಂಗಡಿಯಲ್ಲಿ ಇವರಿಗೆ ಬೇಕಾದಂಥ ಎರಡು ಮೂರು ಶರ್ಟಗಳನ್ನು ಕೊಡಿಸಿದನು. ಶೀತಲಳ ಮನೆ ಪಕ್ಕದಲ್ಲಿ ಒಂದು ಸಣ್ಣ ಹಳ್ಳ ಹರಿಯುತ್ತದೆ. ಅದರ ಸೇತುವೆ ದಾಟಿ ಮುಂದೆ ಹೋದರೆ ಅದೇ ಆರವನ ಶಾಲೆ. ಅವನು ಸೈಕಲಿನಲ್ಲಿ ಶಾಲೆಗೆ ಹೋಗುತ್ತಿದ್ದನು. ಅವನು ಒಂದು ದಿನ ನಮ್ಮನ್ನು ತನ್ನ ಶಾಲೆ ತೋರಿಸಲು ಕರೆದುಕೊಂಡು ಹೋಗಿದ್ದನು.

ಇನ್ನು ನಮ್ಮ ಅಣ್ಣನ ಅಳಿಯ ರಾಜು ತುಂಬಾ ಒಳ್ಳೆಯವನು ಶೀತಲ ಅಣ್ಣನ ಮಗಳು. ನಾನು ಎತ್ತಿ ಆಡಿಸಿದ ಮಗು ಆದರೆ ರಾಜುವಿನ ಒಡನಾಟ ನಮಗೆ ಹೊಸದು. ಆದರೂ ಅವನು ನಮ್ಮವರು ಎಂದು ನಮ್ಮನ್ನು ತುಂಬಾ ಪ್ರೀತಿಯಿಂದ ನೋಡಿಕೊಂಡನು. ಅವನು ಹೆಂಡತಿಗೆ ಮನೆ ಕೆಲಸದಲ್ಲಿ ನೆರವಾಗುವ ರೀತಿ ಮತ್ತು ಮಕ್ಕಳ ಆರೈಕೆ, ಕಾಳಜಿ ಮಾಡುವುದು. ನನಗೆ ತುಂಬಾ ಇಷ್ಟವಾಯಿತು. ಅವನು ಸರಳವಾದ ಸ್ನೇಹಜೀವಿ,

By-ಶಾಲಿನಿ ಗಾಂವಕರ್

ಮುಂದಿನ ಭಾಗ ಓದಿ…

Leave a Comment

Comments

No comments yet. Why don’t you start the discussion?

    Leave a Reply