ನ್ಯೂ ಜೆರ್ಸಿ ಪ್ರವಾಸ
ನ್ಯೂ ಜೆರ್ಸಿಯಲ್ಲಿ ನಮ್ಮ ಭಾವನ ತಂಗಿ ಪ್ರೇಮಕ್ಕ ಮತ್ತು ಅವಳ ಗಂಡ ಬೀರಣ್ಣ ಇರುತ್ತಿದ್ದರು. ಆದ್ದರಿಂದ ನಾವು ಶಿಕಾಗೋದಿಂದ ನ್ಯೂ ಜೆರ್ಸಿಗೆ ಹೋಗಬೇಕಿತ್ತು. ನಮ್ಮ ವಿಮಾನ 6.20ಕ್ಕೆ ಇದ್ದುದ್ದರಿಂದ ರಾಜು ನಮ್ಮನ್ನು 3 ಗಂಟೆಗೆ ವಿಮಾನ ನಿಲ್ದಾಣಕ್ಕೆ ಬಿಟ್ಟು ಹೋದನು. ಪ್ರಪಂಚದ ಅತಿ ದೊಡ್ಡ ವಿಮಾನ ನಿಲ್ದಾಣಗಳಲ್ಲಿ ಶಿಕಾಗೋದ ಈ ವಿಮಾನ ನಿಲ್ದಾಣವೂ ಒಂದು. ಇಲ್ಲಿ ನೂರಾರು ವಿಮಾನಗಳು ಬಂದು ಹೋಗಿ ಮಾಡುತ್ತಿರುತ್ತವೆ. ಇಂಗ್ಲೀಷ್ ಸರಿಯಾಗಿ ಬಂದರೆ ಯಾರ ಸಹಾಯವೂ ಇಲ್ಲದೆ ಯಾರನ್ನೂ ಕೇಳದೆ ನಾವು ಹತ್ತಿ ಹೋಗಬೇಕಾದ ವಿಮಾನ ಯಾವುದೆಂದು ತಿಳಿದುಕೊಳ್ಳಬಹುದು.

ಪ್ರತಿಯೊಂದು ವಿಮಾನ ಸಂಸ್ಥೆಯ ಮೇಜಿನ ಬಳಿಯೂ ಇಂಥ ವಿಮಾನ ಇಷ್ಟನೆಯ ಗೇಟಿನಿಂದ ಇಷ್ಟು ಗಂಟೆಗೆ ಹೊರಡುತ್ತದೆ ಎಂಬುದನ್ನು ಟೆಲಿವಿಷನ್‌ಗಳಲ್ಲಿ ತೋರಿಸುತ್ತಾರೆ. ಇಷ್ಟನೆಯ ನಂಬರಿನ ಗೇಟು ಇಂಥ ದಿಕ್ಕಿನಲ್ಲಿದೆ. ಇಂಥ ಕಡ ತಿರುಗಿಕೊಳ್ಳಬೇಕು ಎಂಬ ಮಾರ್ಗದರ್ಶನ ಎಲ್ಲಾ ಕಡೆಗಳಲ್ಲಿಯೂ ಇರುತ್ತದೆ. ನಾವು ಚೆಕ್ ಇನ್ ಮುಗಿಸಿ ಬೋಡಿರ್ಂಗ್ ಪಾಸ್ ತೆಗೆದುಕೊಂಡು ನಮ್ಮ ವಿಮಾನ ಯಾವುದೆಂದು ತಿಳಿದುಕೊಂಡು ವಿಮಾನದ ಬರುವಿಕೆಗಾಗಿ ಕಾಯುತ್ತಾ ಕುಳಿತೆವು. ನಮ್ಮ ಮುಂದಿರುವ ಟಿ.ವಿ. ಯಲ್ಲಿ ವಿಮಾನ ತಡವಾಗಿದೆ ಎಂದು ಬರುತ್ತಿತ್ತು. 6.20 ಕ್ಕೆ ಇದ್ದ ವಿಮಾನ 7.20 ಕ್ಕೆ ಎಂದ ನಂತರ 8 ಗಂಟೆಗೆ ಎಂದು ಬಂತು. ಅಷ್ಟರಲ್ಲಿ ನಮ್ಮಿಬ್ಬರಿಗೂ ಹಸಿವಾಗತೊಡಗಿತು. ಅಲ್ಲೇ ಇರುವ ಮೈರ ಡೋನಾಲ್ಡನಲ್ಲಿ ಕ್ರಿಸ್ಪಿ ಚಿಕನ್ ಸೆಂಡ್‌ವಿಚ್ ತೆಗೆದುಕೊಂಡು ತಿಂದು ಜ್ಯೂಸ್ ಕುಡಿದು ಹೊಟ್ಟೆ ತುಂಬಿಸಿಕೊಂಡವು. ಮತ್ತೆ ಬಂದು ಟಿ.ವಿ. ನೋಡಿದರೆ, ಕೆಟ್ಟ ಹವಾಮಾನದ ತೊಂದರೆಯಿಂದ ವಿಮಾನ ಅರ್ಧ ತಾಸು ತಡವಾಗಿದೆ ಎಂದು ಬಂತು. ಕೊನೆಗೂ 9 ಗಂಟೆಗೆ ನಾವು ಹೋಗಬೇಕಾದ ವಿಮಾನ ಬಂತು. ಪ್ರೇಮಕ್ಕನವರು ನ್ಯೂಯಾರ್ಕ್ ವಿಮಾನ – ನಿಲ್ದಾಣದಲ್ಲಿ ನಮಗಾಗಿ ಕಾಯುತ್ತಾ ಇದ್ದರು. ನಾವು ವಿಮಾನ ಏರಿ ಕುಳಿತೆವು. 9-30 ರ ಸುಮಾರಿಗೆ ಬೆಲ್ಟ್ ಕಟ್ಟಿ ಕುಳಿತು ಇನ್ನೇನು ವಿಮಾನ ಹಾರಬೇಕು ಎನ್ನುವಾಗ ವಿಮಾನ ಸಿಬ್ಬಂದಿ ಆಕಾಶದಲ್ಲಿ ಸುಂಟರಗಾಳಿ ಇರುವುದರಿಂದ ವಿಮಾನ ಇಳಿಸಲು ತೊಂದರೆಯಾಗಬಹುದೆಂದು ಪೈಲಟ್ ರಿಸ್ಕ್ ತೆಗೆದುಕೊಳ್ಳಲು ಸಿದ್ಧವಾಗಿಲ್ಲವಾದ್ದರಿಂದ ವಿಮಾನ ಕ್ಯಾನ್ಸಲ್ ಆಗಿದೆ ಎಂದು ಅನೌನ್ಸ್ ಮಾಡಿದರು. ನಮಗಂತೂ ಒಂದು ಸಲ ಏನು ಆಗ್ತಿದೆ ಎಂದೇ ಗೊತ್ತಾಗಲಿಲ್ಲ. ಈ ಅನುಭವ ನಮಗೆ ಮೊದಲನೆಯದು. ನಮ್ಮ ಜೊತೆಯಲ್ಲಿದ್ದ ಸಹ ಪ್ರಯಾಣಿಕರು ಕೂಡಲೇ ಸಮಯ ಪ್ರಜ್ಞೆಯನ್ನು ಉಪಯೋಗಿಸಿ ಎನ್‌ಕ್ವಾಯರಿ ಕೌಂಟರಿಗೆ ಹೋಗಿ ನ್ಯೂ ಯಾರ್ಕ್‌ನ ಉಳಿದ ವಿಮಾನ ನಿಲ್ದಾಣಗಳಾದ ಜೆ. ಎಫ್. ಕೆನಡಿ ವಿಮಾನ ನಿಲ್ದಾಣ ಮತ್ತು ಲೊಗಾಡಿಯಾ ಹೀಗೆ ಬೇರೆ ಬೇರೆ ವಿಮಾನ ನಿಲ್ದಾಣಕ್ಕೆ ಟಿಕೇಟ ಪಡೆದು ಹೊರಟರು. ನಮಗೆ ಅಪರಿಚಿತ ಸ್ಥಳ. ರಾತ್ರಿಯ ಸಮಯ ಬೇರೆ. ತಲೆಗೆ ಆ ಸಮಯದಲ್ಲಿ ಏನೂ ಹೊಳೆಯಲಿಲ್ಲ. ಮೊದಲು ನ್ಯೂ ಯಾರ್ಕ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದ ಪ್ರೇಮಕ್ಕನಿಗೆ ವಿಷಯ ತಿಳಿಸಿದೆವು. ನಮ್ಮಂತೆ ಕೆಲವರು ಕಂಗಾಲಾಗಿ ಅಳುತ್ತಾ ಇದ್ದರು. ಅವರಲ್ಲಿ ಕೆಲವರು ಏಕಾಂಗಿ ಮುದುಕರು, ಗರ್ಭಿಣಿ ಹೆಂಗಸರು ಇದ್ದರು. ಕೊನೆಗೆ ನಾವು ಎನ್‌ಕ್ವಾಯರ್ ಕೌಂಟರಿಗೆ ಹೋದೆವು. ಮತ್ತು ಮಾರನೆಯ ದಿನದ ಟಿಕೇಟನ್ನು ಪಡೆದುಕೊಂಡೆವು. ಅವರು ಒಂದು ದಿನ ನಮಗೆ ಉಳಿಯಲು ಲಾಡ್ಡಿಂಗ್ ವ್ಯವಸ್ಥೆ ಸಹ ಮಾಡಿದ್ದರು. ಅವರ ಈ ವ್ಯವಸ್ಥೆಯಿಂದ ಮನಸ್ಸಿಗೆ ಸ್ವಲ್ಪ ಸಮಾಧಾನವಾಯಿತು. ಆದರೆ ಹೊರಗೆ ಹೋಗುವುದು ಹೇಗೆ ಎಂದು ತಿಳಿಯದೇ ಎಕ್ಸಿಟ್ ಬೋರ್ಡಗಾಗಿ ಹುಡುಕುತ್ತಾ ಇದ್ದೆವು. ಅಷ್ಟರಲ್ಲಿ ರಾಜು, ಶಾಲಕ್ಯ, ದೇವಾನಂದ ಮಾಮ ಎನ್ನುತ್ತಾ ನಮ್ಮ ಬಳಿ ಧಾವಿಸಿ ಬಂದ. ನನಗಂತೂ ಅವನನ್ನು ಅಲ್ಲಿ ಕಂಡು ದೇವರನ್ನು ಕಂಡಷ್ಟು ಸಂತೋಷವಾಯಿತು. – ಜೊತೆಯಲ್ಲಿ ಆಶ್ಚರ್ಯವೂ ಆಯಿತು. ಅವನು ಮತ್ತು ನನ್ನ ಮಗ ಸತತವಾಗಿ ಇಂಟರನೆಟ್‌ನಲ್ಲಿ ವಿಮಾನದ ವಿವರಗಳನ್ನು ನೋಡುತ್ತಾ ಇದ್ದರಂತೆ. ಅವರಿಗೆ ವಿಮಾನ ತಡವಾಗಿದ್ದು ಮತ್ತು ರದ್ದಾಗಿದ್ದ ವಿಷಯ ತಿಳಿದು ಅವರಿಬ್ಬರೂ ಈ ಬಗ್ಗೆ ಚರ್ಚೆ ಮಾಡಿ ಕೂಡಲೇ ರಾಜು ಕಾರು ತೆಗೆದುಕೊಂಡು ನಾವಿದ್ದಲ್ಲಿಗೆ ಹೊರಟು ಬಂದಿದ್ದ. ನಾವು ರಾತ್ರಿ ತಿರುಗಿ ಮನೆ ಮುಟ್ಟಿದಾಗ ರಾತ್ರಿ 1 ಗಂಟೆ. ನಮ್ಮಿಂದ ಅವನಿಗೆ ತೊಂದರೆಯಾಯಿತಲ್ಲ ಎಂದು ನನಗೆ ತುಂಬಾ ಬೇಸರವಾಯಿತು. ಈ ಮೊದಲು ನನ್ನ ಜೀವಮಾನದಲ್ಲಿ ಎಂದೂ ಒಂದು ಬಸ್ ಸಹಿತ ಮಿಸ್ ಮಾಡಿಕೊಂಡಿರಲಿಲ್ಲ. ಅಮೆರಿಕಾದಲ್ಲಿ ವಿಮಾನ ರದ್ದಾಗಿದ್ದು ನನ್ನ ಜೀವನದಲ್ಲಿ ನೆನಪಿರುವಂತಹ ಘಟನೆ.
ಮಾರನೆಯ ದಿನ ನಮಗೆ ರಾಜುವಿಗೆ ಮತ್ತೆ ತೊಂದರೆ ಕೊಡುವುದು ಇಷ್ಟವಿರಲಿಲ್ಲ. ಅದಕ್ಕಾಗಿ ನಾನು ಅವನಿಗೆ ನೀನು ರಜೆ ಹಾಕುವುದು ಬೇಡ ಒಂದು ಟ್ಯಾಕ್ಸಿ ಮಾಡಿಕೊಡು ಎಂದು ಹೇಳಿದೆವು. ಆಯಿತು ಎಂದು ಅವನು ಆಫೀಸಿಗೆ ಹೋಗಿದ್ದ. ನಾವು ಟ್ಯಾಕ್ಸಿಗಾಗಿ ಕಾಯುತ್ತಿದ್ದರೆ ಸರಿಯಾದ ಸಮಯಕ್ಕೆ ರಾಜುವೆ ಬಂದು ನಮ್ಮನ್ನು ವಿಮಾನ ನಿಲ್ದಾಣಕ್ಕೆ ಬಿಟ್ಟನು. ಅಂದೂ ಸಹ ವಿಮಾನ ನಿಲ್ದಾಣ ಡಿಲೇ ಎಂದು ಟಿ.ವಿ. ಯಲ್ಲಿ ಬರುತ್ತಾ ಇತ್ತು. ಅಂತೂ ತಡವಾಗಿಯಾದರೂ ವಿಮಾನ ಬಂತು. ನಾವು ನ್ಯೂ ಜೆರ್ಸಿ ವಿಮಾನ ನಿಲ್ದಾಣ ತಲುಪಿದೆವು. ಪ್ರೇಮಕ್ಕೆ ಬೀರಣ್ಣ ನಮಗಾಗಿ ಕಾಯುತ್ತಾ ಇದ್ದರು. ಒಳಗಡೆ ನಮ್ಮ ಸೂಟ್‌ಕೇಸ್ ಒಂದು ಬರಲು ತಡವಾಯಿತು. ಹೀಗಾಗಿ ಪ್ರೇಮಕ್ಕ ನಾವಿದ್ದಲ್ಲಿಗೆ ಬಂದುಬಿಟ್ಟಿದ್ದಳು. ನಾವು ಮನೆ ತಲುಪಿದಾಗ 11-30. ನಾವು ಸರಿಯಾದ ಸಮಯಕ್ಕೆ ಬರುವುದು ಎಂದು ಬೀರಣ್ಣಣ್ಣನ ತಮ್ಮ ಮಾಬಣ್ಣ ನಮಗೆ ಊಟಕ್ಕೆ ಕರೆದಿದ್ದರು. ಅವರು ಎಲ್ಲಾ ರೆಡಿ ಮಾಡಿಕೊಂಡು ಕಾಯುತ್ತಿದ್ದರು. ಅದರಿಂದ ಅವರಿಗೆ ಬೇಸರ
ಮಾಡಬಾರದು ಎಂದು ರೆಡಿಯಾಗಿ ರಾತ್ರಿ 12 ಗಂಟೆಗೆ ಅವರ ಮನೆಗೆ ಹೋದೆವು. ರಾತ್ರಿ ಅವರ ಮನೆಯಲ್ಲಿ ಊಟ ಮಾಡಿ ಹಿಂದಿರುಗಿದಾಗ ರಾತ್ರಿ 2 ಗಂಟೆ. ಪಾಪ ನಮ್ಮಿಂದ ಪ್ರೇಮಕ್ಕ ಬೀರಣ್ಣಣ್ಣನಿಗೆ ತೊಂದರೆಯಾಯಿತೆಂದು ಮನಸ್ಸಿಗೆ ಕಸಿವಿಸಿಯಾಯಿತು. ಪ್ರೇಮಕ್ಕನ ಮನೆ ತುಂಬಾ ವಿಶಾಲವಾಗಿ ಭವ್ಯವಾಗಿದೆ. ಅದು ಎಷ್ಟು ದೊಡ್ಡದಿದೆ ಎಂದರೆ ಎಷ್ಟೋ ಸಲ ನನಗೆ ನಮ್ಮ ರೂಮಿನ ದಾರಿಯೇ ಗೊತ್ತಾಗುತ್ತಿರಲಿಲ್ಲ. ಮೂರು ಎಕರೆ ಜಾಗದಲ್ಲಿ ಈ ಭವ್ಯವಾದ ಬಂಗಲೆ ತಲೆ ಎತ್ತಿದೆ. ಕೂಲಂಕಷವಾಗಿ ಪರಿಶೀಲಿಸುತ್ತಾ ಒಂದು ಸುತ್ತು ಹಾಕಿದೆ. ಬಹಳ ಸುಂದರವಾದ ಮನೆ. ಅವರು ಹೊರಗಿನ ಸೌಂದರ್ಯಕ್ಕೆ ಒತ್ತು ಕೊಡದೇ ಮನೆಯ ಒಳಗಿನ ಅನುಕೂಲಗಳಿಗೆ ಹೆಚ್ಚಿನ ಗಮನ ಕೊಡುತ್ತಾರೆ. ಆದರೂ ಇವರು ಮನೆಯ ಸುತ್ತಲೂ ಸುಂದರವಾದ ಗಾರ್ಡನ್ ಮಾಡಿದ್ದಾರೆ. ಹುಲ್ಲುಗಾವಲುಗಳನ್ನು ಬೆಳೆಸಿದ್ದಾರೆ. ಅಮೆರಿಕಾ ಭೌಗೋಳಿಕವಾಗಿ ವಿಶಾಲವಾದ್ದರಿಂದ ಮತ್ತು ಜನಸಂಖ್ಯೆ ಕಡಿಮೆ ಇರುವುದರಿಂದ ಭೂಮಿಯ ಬೆಲೆ ಕಡಿಮೆ. ನಮ್ಮಲ್ಲಿಯಂತೆ 30×40, 60×40 ಸೈಟುಗಳು ಇಲ್ಲವೇ ಇಲ್ಲ. ದೊಡ್ಡ ದೊಡ್ಡ ಅಳತೆಯ ಸೈಟುಗಳು:

ಅಮೆರಿಕಾದ ಒಂದು ವಿಶೇಷವೆಂದರೆ ಅಲ್ಲಿನ ಯಾವುದೇ ಕಟ್ಟಡಗಳಾಗಲಿ, ಮನೆಗಳಾಗಲಿ, ಕಂಪೌಂಡುಗಳಾಗಲಿ ಇರುವುದಿಲ್ಲ. ಇದರಿಂದ ಅಲ್ಲಿನ ಪರಿಸರ ವಿಶಾಲವಾಗಿರುತ್ತದೆ ಮತ್ತು ಕಾನೂನಿನ ಪ್ರಕಾರ ಮನೆಗಳು ಮತ್ತು ಕಟ್ಟಡಗಳ ಸುತ್ತ ಕಂಪೌಂಡು ಕಟ್ಟುವಂತೆಯೇ ಇಲ್ಲ. ಸಾಲು ಸಾಲಾಗಿ ಪ್ರಕೃತಿಯ ನಡುವೆ ನಿಂತಿರುವ ಮನೆಗಳನ್ನು ನೋಡುವುದೇ ಚೆಂದ. ಜೊತೆಗೆ ವಿಶಾಲವಾದ ಕಾರ್ ಪಾಕಿರ್ಂಗ್ ಒಳಾಂಗಣವೂ ಅಷ್ಟೇ ಸುಂದರವಾಗಿದೆ. ಹಲವಾರು ಮಲಗುವ ಕೋಣೆಗಳು, ದೊಡ್ಡ ಹಾಲ್, ಡೈನಿಂಗ್ ಹಾಲ್‌ಗಳು ಅಡುಗೆ ಮನೆ ಕೆಳಗಡೆಯಾದರೆ, ಮೇಲಿನ ಅಂತಸ್ತಿನಲ್ಲಿ ಎಲ್ಲ ಮಲಗುವ ಕೋಣೆಗಳು. ಅದಕ್ಕೆ ಹೊಂದಿಕೊಂಡು ಬಾತ್ ರೂಮ್, ಟಾಯ್ಲೆಟ್‌ಗಳು ಮೇಲೆ ಏರಿ ಹೋಗಲು ಎರಡು ಕಡೆ ಮೆಟ್ಟಿಲುಗಳು. ಅವರ ಒಂದೊಂದು ಬಾತ್ ರೂಮುಗಳೇ ನಮ್ಮಲ್ಲಿಯ ಬೆಡ್ ರೂಮ್‌ಗಳಷ್ಟಿದೆ. ಪ್ರೇಮಕ್ಕ ಅದನ್ನು ಅಷ್ಟೇ ಸ್ವಚ್ಛ ಮತ್ತು ಸುಂದರವಾಗಿ ಇಟ್ಟಿದ್ದಾಳೆ.
ಮನೆ ಕಟ್ಟಲು ನಾವು ಮರಳು ಇಟ್ಟಿಗೆ ಮತ್ತು ಸಿಮೆಂಟ್ ಬಳಸಿದರೆ ಅಮೆರಿಕಾದಲ್ಲಿ ಮರದ ಹಲಗೆಗಳನ್ನು ಬಳಸುತ್ತಾರೆ. ಮರವನ್ನು ಉಪಯೋಗಿಸಿ ಮನೆ ಕಟ್ಟುವುದರಿಂದ 10 ರಿಂದ 15 ದಿನದೊಳಗೆ ಒಂದು ಮನೆಯನ್ನು ಕಟ್ಟಿ ಮುಗಿಸಿಬಿಡುತ್ತಾರೆ. ಈ ರೀತಿ ಶೀಘ್ರವಾಗಿ ಮನೆಕಟ್ಟುವ ದೊಡ್ಡ ದೊಡ್ಡ ಕಂಪನಿಗಳೇ ಇವೆ. ಮನೆಯ ವಿನ್ಯಾಸಕ್ಕೆತಕ್ಕಂತೆ ಫ್ಯಾಕ್ಟರಿಯಲ್ಲಿಯೇ ಮರದ ಹಲಗೆಗಳನ್ನು ರಚಿಸಿ ಸ್ಥಳಕ್ಕೆ ತಂದು ಜೋಡಿಸಿರುತ್ತಾರೆ. ಈ ಮರದ ಹಲಗೆ ಗೋಡೆಗಳು ಕೇವಲ 6 ರಿಂದ 9 ಇಂಚುಗಳಿರುತ್ತವೆ. ಈ ಗೋಡೆಗಳ ನಡುವೆ ಬಗೆ ಬಗೆಯ ಕೇಬಲ್ ವಾಯರ್‌ಗಳನ್ನು ಎಳೆದಿರುತ್ತಾರೆ.
ಇಲ್ಲಿ ಎಲ್ಲರ ಮನೆಗಳಲ್ಲಿಯೂ ನೆಲಮಾಳಿಗೆ ಅಥವಾ ಗ್ಯಾರೇಜ್ ಇರುತ್ತದೆ. ಅಲ್ಲಿಯೇ ದೊಡ್ಡದೊಂದು ಎ.ಸಿ. ಯಂತ್ರ ಇಟ್ಟಿದ್ದು ಅದಕ್ಕೆ ಸಂಬಂಧಿಸಿದ ವಾಯರ್‌ಗಳನ್ನು ಹಲಗೆಯ ಗೋಡೆಯ ನಡುವೆ ಎಳೆದಿರುತ್ತಾರೆ. ಬೇಸಿಗೆಯಲ್ಲಿ ತಂಪು ಗಾಳಿ ಮತ್ತು ಚಳಿಗಾಲದಲ್ಲಿ ಬಿಸಿಗಾಳಿಯನ್ನು ಬಳಸುವ ಅವಕಾಶವಿರುತ್ತದೆ. ಅವರ ನೆಲಮಾಳಿಗೆ ಎಷ್ಟು ದೊಡ್ಡದಿದೆ ಎಂದರೆ ಅಲ್ಲಿ ಆರಾಮಾಗಿ ಕ್ರಿಕೇಟ್ ಆಡಬಹುದು. ಅವರ ಮನೆಯ ಪಕ್ಕದಲ್ಲಿ ದಟ್ಟವಾದ ಕಾಡು ಇದೆ. ಸಮಯದ ಕೊರತೆಯಿಂದ ಎಲ್ಲರ ಮನೆಗಳಿಗೆ ಹೋಗಲು ಸಾಧ್ಯವಾಗಿಲ್ಲ. ಕೆಲವೇ ಕೆಲವು ಅತ್ಮೀಯರ ಮನೆಗಳಿಗೆ ಮಾತ್ರ ಹೋಗಿ ಅವರ ಊಟ ಉಪಚಾರಗಳನ್ನು ಮತ್ತು ಉಡುಗೊರೆಗಳನ್ನು ಸ್ವೀಕರಿಸಿದೆವು. ಅವರು ನಮ್ಮನ್ನು ತುಂಬಾ ಪ್ರೀತಿಯಿಂದ ನೋಡಿಕೊಂಡರು. ಅವರು ವರ್ಷವಿಡೀ ತಮ್ಮ ಕೆಲಸ ಕಾರ್ಯಗಳಲ್ಲಿ ಬಿಜಿಯಾಗಿರುತ್ತಾರೆ. ಅವರು ಭಾರತದಿಂದ ಅಪರೂಪಕ್ಕೆ ಬಂದ ಅತಿಥಿಗಳು ವಿವರಿಸುವ ಭಾರತದ, ಅದರಲ್ಲೂ ಊರಿನ ವಿಷಯಗಳನ್ನು ತಿಳಿದುಕೊಳ್ಳುವ ಆಸಕ್ತರಾಗಿರುತ್ತಾರೆ. ಹೀಗಾಗಿ ಅವರು ನಮ್ಮನ್ನು ತುಂಬಾ ಪ್ರೀತಿ ಮತ್ತು ಆತ್ಮೀಯತೆಯಿಂದ ನೋಡಿಕೊಳ್ಳುತ್ತಾರೆ. ನಿಜವಾಗಿಯೂ ನಮಗೆ ಇಂಡಿಯಾದಲ್ಲಿ ಯಾರೂ ಅಷ್ಟು ಪ್ರೀತಿಯಿಂದ ನೋಡಿಕೊಂಡಿರಲಿಲ್ಲ. ನ್ಯೂ ಜೆರ್ಸಿಯಲ್ಲಿ ಒಂದು ದಿನ ಪ್ರೇಮಕ್ಕನ ಜೊತೆ ದೊಡ್ಡ ಶಾಪಿಂಗ್ ಮಾಲ್‌ಗೆ ಹೋಗಿ ಬಟ್ಟೆ ಮತ್ತು ಸಣ್ಣ ಪುಟ್ಟ ವ್ಯಾಪಾರ ಮಾಡಿದೆವು. ಕೊನೇ ದಿನ ಪ್ರೇಮಕ್ಕ ಬೀರಣ್ಣಣ್ಣ ನಮ್ಮನ್ನು ಜರ್ಸಿ ಸಿಟಿಯಲ್ಲಿರುವ ನಮ್ಮ ಅಣ್ಣನ ಇನ್ನೊಬ್ಬ ಮಗಳ ಮನೆಗೆ ಕರೆದುಕೊಂಡು ಹೋದರು. ಅಣ್ಣನ ಮಗಳು ಶಿಲ್ಪನ ಮನೆಯ ಕಟ್ಟಡದಲ್ಲಿಯೇ ನಮ್ಮ ಸಂಬಂಧಿಕರಾದ ದಯಣ್ಣನ ಮಗಳು ಶಿಲ್ಪಾಳು ಇದ್ದಳು. ದಯಣ್ಣ ಮತ್ತು ಅವಳ ಇನ್ನೊಬ್ಬಳು ಮಗಳು, ಹೆಂಡತಿ ಎಲ್ಲ ಅಲ್ಲಿಗೆ ಬಂದಿದ್ದರಿಂದ ನಾವು ಪ್ರೇಮಕ್ಕ ಬೀರಣ್ಣಣ್ಣನ ಜೊತೆ ಹೋಗಿ ಭೆಟ್ಟಿಯಾದೆವು.

ಶಿಲ್ಪಳ ಮನೆ ಹಡ್ನನ್ ನದಿಯ ದಡದಲ್ಲಿದೆ. ಅವರ ಮನೆ 6ನೇ ಅಂತಸ್ತಿನಲ್ಲಿದೆ. ನ್ಯೂಯಾರ್ಕ್ ಸಿಟಿ ತುಂಬಾ ಸುಂದರವಾಗಿ ಕಾಣುತ್ತದೆ. ಅಲ್ಲಿಯೇ ವರ್ಲ್ಡ್ ಟ್ರೇಡ್ ಸೆಂಟರ್ ಉರುಳಿದ ಜಾಗದಲ್ಲಿ ಇನ್ನೊಂದು ಬಹುಮಹಡಿ ಕಟ್ಟಡ ಕಟ್ಟಿದ್ದಾರೆ. ಅದು ಕೆಂಪು ಬಣ್ಣದಿಂದ ಕೂಡಿದ್ದು ರಾತ್ರಿಯ ಬೆಳಕಿನಲ್ಲಿ ಸುಂದರವಾಗಿ ಜಗಮಗಿಸುತ್ತದೆ.
ಶಿಲ್ಪಳ ಮನೆಯಿಂದ ನಮ್ಮ ಪ್ಯಾಕೆಜ್ ಪ್ರವಾಸ ಆರಂಭವಾಯಿತು. ಬೆಳಿಗ್ಗೆ ಬೇಗ ಎದ್ದು ಹೊರಡಲು ತಯಾರಾದೆವು. ಶಿಲ್ಪ ಮತ್ತು ತೇಜಸ್ ನಮ್ಮನ್ನು ಚೆನ್ನಾಗಿ ನೋಡಿಕೊಂಡರು. ಶಿಲ್ಪಳ ಗಂಡ ತೇಜಸ್ ನಮ್ಮನ್ನು ನ್ಯೂ ಯಾರ್ಕಿನ ಲೊಗಾರ್ಡಿಯಾ ವಿಮಾನ ನಿಲ್ದಾಣಕ್ಕೆ ಬಿಟ್ಟನು. ಆಗ ಸಮಯ ಬೆಳಗಿನ 6-30 ಗಂಟೆ ನಮ್ಮ ಟೂರ್ಗಾರ್ಡ್ ನಮಗೆ ಅಲ್ಲಿ ಕಾಯುವಂತೆ ಹೇಳಿದ್ದರು ಮತ್ತು ತಾವು ಬಂದು ನಮ್ಮನ್ನು ಕರೆದುಕೊಂಡು ಹೋಗುವುದಾಗಿ ಹೇಳಿದ್ದರು. 9 ಗಂಟೆಯಾದರೂ ಯಾರೂ ಬರಲಿಲ್ಲ.
ಮಗನಿಗೆ ಫೋನ್ ಮಾಡಿ ಕೇಳಿದಾಗ ಅವರು ವಿಮಾನ ನಿಲ್ದಾಣದ ಒಳಗೆ ನಮಗಾಗಿ ಕಾಯುತ್ತಾ ಇದ್ದಾರೆಂದು ತಿಳಿಯಿತು. ನಾವು ಒಳಗೆ ಹೋದೆವು. ಅಷ್ಟರಲ್ಲಿ ನನಗೆ ಬಾತ್‌ರೂಮಿಗೆ ಹೋಗಬೇಕೆನಿಸಿತು. ನನಗೆ ಒಬ್ಬಳೆ ಹುಡುಕಿಕೊಂಡು ಹೋಗಲು ಭಯ. ಇವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗೋಣವೆಂದರೆ ಜೊತೆಯಲ್ಲಿ ಎರಡು ಮೂರು ಸೂಟ್‌ಕೇಸ್ ಇರುವುದರಿಂದ ಅವನ್ನು ಯಾರ ಬಳಿ ಬಿಟ್ಟು ಹೋಗುವುದು? ಪರಿಚಯದವರು ಯಾರೂ ಇಲ್ಲ. ನನಗೋ ತುಂಬಾ ಅಜೆರ್ಂಟ್ ಆಯಿತು. ಅಂತೂ ಧೈರ್ಯ ಮಾಡಿ ಹೊರಟೆ, ಅತ್ತ ಇತ್ತ ನೋಡುತ್ತಾ ಎಕ್ಸಿಲೇಟರ ಹತ್ತಿ ಒಳಗೆ ಹೋದೆ. ಅಲ್ಲಿಯೇ ಇದ್ದ ಒಂದು ಅಂಗಡಿಯವರ ಹತ್ತಿರ ಹೋಗಿ, ‘ಎಕ್ಸ್ ಕ್ಯೂಸ್ ಮಿ ವೇರ್ ಇಸ್ ರೆಸ್ಟ್ ರೂಂ?’ ಎಂದು ಕೇಳಿದೆ. ಪಾಪ ಅವರು ಒಳ್ಳೆಯವರು ನನಗೆ ಸಹಾಯ ಮಾಡಿದರು. ಅಂತೂ ರೆಸ್ಟ್ ರೂಂ ಸಿಕ್ಕು ಒಳಗಡೆ ಹೋಗಿ ಬಾಗಿಲು ಹಾಕಿಕೊಂಡು ನನ್ನ ಕೆಲಸ ಮುಗಿಸಿಕೊಂಡು ಹೊರಗೆ ಬರುವ ಎಂದು ಬಾಗಿಲ ಚಿಲಕ ತೆಗೆಯಲು ಹೋದರೆ ಚಿಲಕ ತೆಗೆಯಲು ಬರುತ್ತಿಲ್ಲ. ಮೊದಲೇ ಆ ದೇಶದಲ್ಲಿ ಚಿತ್ರ ವಿಚಿತ್ರವಾದ ಚಿಲಕಗಳು. ಎಷ್ಟೇ ಪ್ರಯತ್ನಪಟ್ಟರೂ ಚಿಲಕ ತೆಗೆಯಲಿಲ್ಲ. ಏನು ಮಾಡಬೇಕೆಂದು ತಿಳಿಯಲಿಲ್ಲ. ಇವರಿಗೆ ಪೋನ್ ಮಾಡುವಾ ಎಂದರೆ ನನ್ನ ಬಳಿ ಯಾವುದೇ ಪೋನ್ ಇರಲಿಲ್ಲ. ಇವರು ನನಗಾಗಿ ಹೊರಗಡೆ ಕಾಯುತ್ತಾ ಇದ್ದರು. ಆದರೂ ಧೈರ್ಯಮಾಡಿ ‘ಹಲೋ ಎನಿಬಡಿ ಇಸ್ ದೆರ್? ಫೀಸ್ ಹೆಲ್ಸ್ ಮಿ’ ಎಂದು ಬಾಗಿಲು ಬಡಿಯುತ್ತಾ ಕೂಗಿಕೊಂಡೆ. ಪುಣ್ಯಕ್ಕೆ ಅಲ್ಲಿ ಇಬ್ಬರು ಕೆಲಸಗಾರರು ಟೊಯಲೆಟ್ ಸ್ವಚ್ಛ ಮಾಡಲು ಬಂದವರು ನನ್ನ ಕೂಗು ಕೇಳಿ ಬಾಗಿಲ ತೆರೆದರು. ಮತ್ತು ಈ ರೂಮಿನ ಬಾಗಿಲ ಚಿಲಕ ಮಾತ್ರ ಕೆಲ ದಿನಗಳಿಂದ ಸ್ಟಕ್ ಆಗುತ್ತಾ ಇದೆ. ರಿಪೇರಿ ಮಾಡಿಸಬೇಕು. ಇಂದು ನಿಮ್ಮ ಬ್ಯಾಡ್ ಲಕ್ ನೀವು ಸ್ಟಕ್ ಆಗಿದ್ದೀರಾ ಎಂದರು.. ನಾನು ಅವರಿಗೆ ಥ್ಯಾಂಕ್ಸ್ ಹೇಳಿ ಹೊರಗೆ ಬಂದೆ. ಎಲ್ಲರೂ ರೆಡಿಯಾಗಿ ಹೋಗಲು ನನ್ನನ್ನು ಕಾಯುತ್ತಾ ಇದ್ದರು. ಇವರಂತೂ ಗಾಬರಿಯಾಗಿ ಯಾಕೆ ಲೇಟಾಯಿತೆಂದು ಕೇಳಿದರು. ಹಾಗೆ ಹೋಗುತ್ತಾ ನಡೆದ ವಿಷಯ ತಿಳಿಸಿದೆ.
By-ಶಾಲಿನಿ ಗಾಂವಕರ್
ಮುಂದಿನ ಭಾಗ ಓದಿ…
