ನ್ಯೂ ಯಾರ್ಕ್ ಎಂಬ ಸುಂದರ ನಗರ
ನ್ಯೂಯಾರ್ಕ ಒಂದು ಸುಂದರ ನಗರ, ಇದಕ್ಕೆ ಪ್ರವಾಸಿಗರನ್ನು ಆಕರ್ಷಿಸುವ ಶಕ್ತಿ ಇದೆ. ಎಷ್ಟು ಬಾರಿ ನೋಡಿದರೂ ಮತ್ತೆ ಮತ್ತೆ ನೋಡುವಾಸೆ ಮೂಡುತ್ತದೆ. ನಾವು ಮೊದಲು ಗೌಂಡ್ ಜೀರೋಗೆ ಭೇಟಿ ಇತ್ತೆವು. ಅದು ಮೊದಲು ವರ್ಲ್ಡ್ ಟ್ರೇಡ್ ಸೆಂಟರ್ ಇದ್ದ ಜಾಗ. ಈಗ ಅದೊಂದು ದಂತ ಕಥೆ, ಉಗ್ರರ ದಾಳಿಗೆ ಬಲಿಯಾಗಿ ಬುಡ ಸಮೇತ ಕೆಳಗುರುಳಿ ಸಾವಿರ ಸಾವಿರ ಜನರ ಸಾವಿಗೆ ಕಾರಣವಾಗಿತ್ತು. ಜನರನ್ನು ಕಾಪಾಡಲು ಹೋದ ಸೇನೆಯ ಜನರು ಸಹ ತಮ್ಮ ಪ್ರಾಣವನ್ನು ತೆತ್ತರು. ಆ ಸ್ಥಳದಲ್ಲಿ ಇಂದಿಗೂ ಅವರ ಸ್ಮರಣಾರ್ಥ ನಂದಾದೀಪದ ಥರ ಲೈಟ್ ಹಚ್ಚಿಟ್ಟಿದ್ದಾರೆ. ಸತ್ತವರ ಸಂಬಂಧಿಕರು ಅಲ್ಲಿಗೆ ಬಂದು ಮೇಣದ ಬತ್ತಿಗಳನ್ನು ಹಚ್ಚಿ ತಮ್ಮ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಾರೆ. ನಾವೂ ಸಹ ಒಂದು ನಿಮಿಷ ಕಣ್ಣು ಮುಚ್ಚಿ ಆ ಭೀಕರ ಘಟನೆಯನ್ನು ನೆನಪು ಮಾಡಿಕೊಂಡು ಸತ್ತವರಿಗೆ ನಮ್ಮ ನಮನ ಸಲ್ಲಿಸಿದೆವು. ಅಲ್ಲಿ ಈಗ ಹೊಸ ಕಟ್ಟಡಗಳು ತಲೆ ಎತ್ತಿ ನಿಂತಿವೆ. ಅಲ್ಲಿ ಕೆಲವು ಕಡೆ ಸತ್ತವರ ನೆನಪಿಗಾಗಿ ಗೋಡೆಯ ಮೇಲೆ ಕೆಲವು ದೃಶ್ಯಗಳನ್ನು ಬಿಡಿಸಿದ್ದಾರೆ. ಕೆಲವು ಕುರುಹುಗಳು “ಇನ್ನೂ ಇವೆ. ಅಲ್ಲಿ ರೆಸ್ಕೊಗಾಗಿ ಬಂದು ಪ್ರಾಣ ಬಿಟ್ಟ ಯೋಧರ ಫೋಟೋಗಳಿವೆ. ಇಂದಿಗೂ ಸಾವಿಗೀಡಾದವರ ಸಂಬಂಧಿಕರು ಅಲ್ಲಿಗೆ ಬಂದು ಮೇಣದ ಬತ್ತಿಯನ್ನು ಹಚ್ಚಿ ಮೌನವಾಗಿ ರೋಧಿಸುತ್ತಾರೆ.
ಅಲ್ಲಿಯೇ ಸ್ವಲ್ಪ ಮುಂದೆ ಹೋದರೆ ಒಂದು ಚರ್ಚ್ ಇದೆ. ಅದರ ಹಿಂದೆ ಸತ್ತ ಯೋಧರನ್ನು ಸಮಾಧಿ ಮಾಡಿದ್ದಾರೆ. ನಾವು ಅಲ್ಲಿ ಹೋಗಿ ಕೈ ಮುಗಿದು ಬಂದೆವು. ಚರ್ಚಿನ ಒಳಗಡೆ ಕಮಾಂಡೋಗಳು ಮತ್ತು ಫಾಯರ್ ಡಿಪಾರ್‌ಮೆಂಟ್‌ನ ಯೋಧರು ಸಾಯೋವಾಗ ಧರಿಸಿದ ಸಮವಸ್ತ್ರಗಳನ್ನು ಮತ್ತು ಕ್ಯಾಪ್ ಅವರ ಬೂಟ್‌ಗಳ ಸಮೇತ ಅವರ ನೆನಪಿಗಾಗಿ ಇಟ್ಟಿದ್ದಾರೆ. ‘ಅನ್ ವಿಯರಿಂಗ್ ಸ್ಪಿರಿಟ್ ಹೋಪ್ ಆ್ಯಂಡ್ ಹೀಲಿಂಗ್ ಎಟ್ ಗೌಂಡ್ ಜೀರೋ’ ಎಂದು ಕೆಳಗಡೆ ಬರೆದಿದ್ದಾರೆ. ಎಲ್ಲರ ಸಮಾಧಿಯ ಮೇಲೆ ಸತ್ತವರ ಹೆಸರುಗಳನ್ನು ಬರೆದಿದ್ದಾರೆ. ಇದನ್ನು ನೋಡಿ ಭಾರವಾದ ಮನಸ್ಸಿನಿಂದ ಹೊರಗೆ ಬಂದೆವು. ಮನಸ್ಸಿನಲ್ಲಿಯೇ ದೇವರು ನಿಮ್ಮ ಆತ್ಮಕ್ಕೆ ಶಾಂತಿ ಕೊಡಲೆಂದು ಬೇಡಿಕೊಂಡೆ. ನಾವು ವಾಲ್ ಸ್ಟ್ರೀಟ್ ಮುಖಾಂತರ ಚೈನಾ ಟೌನ್ ಕಡೆ ಹೋದೆವು.
ವಾಲ್ ಸ್ಟ್ರೀಟ್ :

ವಾಲ್ ಸ್ಟ್ರೀಟ್ ಎಂಬುದು ನ್ಯೂಯಾರ್ಕಿನ ಒಂದು ಪ್ರಖ್ಯಾತ ಬೀದಿ. ನ್ಯೂ ಯಾರ್ಕ್ ನಗರದ ಮ್ಯಾನಹಟನ್ ಏರಿಯಾದ ಸುಂದರವಾದ ಬೀದಿ. ಇದನ್ನು ಫೈನಾನ್ಸಿಯಲ್ ಡಿಸ್ಟ್ರಿಕ್ಟ್ ಎಂದು ಕರೆಯುತ್ತಾರೆ. ವಾಲ್ ಸ್ಟ್ರೀಟ್ ಅನ್ನು ‘ಫೈನಾನ್ಸಿಯಲ್ ಕೆಪಿಟಲ್ ಆಫ್ ದಿ ವರ್ಲ್ಡ್’ ಎಂದು ಕರೆಯುತ್ತಾರೆ. ಇಡೀ ವಿಶ್ವದ ಹಣಕಾಸಿನ ವ್ಯವಸ್ಥೆಯನ್ನು ನಿಯಂತ್ರಿಸುತ್ತದೆ. ವಾಲ್ ಸ್ಟ್ರೀಟ್ ಅದೊಂದು ಭವ್ಯವಾದ ಬೀದಿ. ಎಡ ಬಲಗಳಲ್ಲಿ ಅದ್ಭುತವಾದ ಮತ್ತು ಆಕಾಶದೆತ್ತರ ಸುಂದರವಾದ ಕಟ್ಟಡಗಳು. ಅಲ್ಲಿ ವಿಶ್ವದ ಪ್ರಖ್ಯಾತ ಹಣಕಾಸಿನ ಸಂಸ್ಥೆಗಳ ಕಚೇರಿಗಳಿದ್ದು ಫಲಕಗಳು ಫಳ ಫಳ ಹೊಳೆಯುತ್ತಿದ್ದವು. ಷೇರು ಪೇಟೆಯ ವ್ಯವಹಾರಗಳು ನಡೆಯುವುದು ಇಲ್ಲಿಯೇ. ಅಲ್ಲಿ ಬಹುಮಹಡಿ ಕಟ್ಟಡಗಳು ಎಷ್ಟು ಹತ್ತಿರ ಒಂದಕ್ಕೊಂದು ಹತ್ತಿಕೊಂಡಂತೆ ಇವೆ. ಅದರಿಂದ ರಸ್ತೆಯಲ್ಲಿ ಬಿಸಿಲು ಕಡಿಮೆ. ಕಟ್ಟಡಗಳ ಪಕ್ಕದಲ್ಲಿ ಓಡಾಡುತ್ತಿದ್ದರೆ ಮಳೆ ಬಂದರೂ ಮಳೆ ನಮಗೆ ತಾಗುವಂತಿಲ್ಲ ಅಷ್ಟು ಇಕ್ಕಟ್ಟಾಗಿದೆ.
ಚೈನಾ ಟೌನ್ :

ನಾವು ಹೋಗಿದ್ದು ಚೈನಾ ಟೂರಿಸ್ಟ್ ಪ್ಯಾಕೇಜಲ್ಲಿ, ಅದರಲ್ಲಿದ್ದವರೆಲ್ಲಾ ಚೈನಿಯರೇ ಆಗಿದ್ದರು. ಅವರು ಮಲೇಶಿಯಾ, ಸಿಂಗಾಪುರ; ಇಂಡೋನೇಶಿಯಾ, ಕೆನಡಾ, ಸಿಂಗಾಪುರ ಕಡೆಗಳಿಂದ ಬಂದಿದ್ದರು. ಅವರಿಗೆ ಇಂಗ್ಲಿಷ್ ಬರುತ್ತಿರಲಿಲ್ಲ. ಹೀಗಾಗಿ ನಾವು ಅವರೊಡನೆ ಸಂಭಾಷಣೆ ಮಾಡುವುದು ಬಹಳ ಕಷ್ಟವಾಗಿತ್ತು. ಹೀಗಾಗಿ ಬರೀ ನಗುವಿನಲ್ಲೇ ಸಮಾಧಾನಪಟ್ಟುಕೊಳ್ಳಬೇಕಾಗಿತ್ತು. ನಮ್ಮ ಗೈಡ್ ಹೆಸರು ಲೀ. ಅವನಿಗೆ ಇಂಗ್ಲೀಷ್ ಬರುತ್ತಿತ್ತು, ಆದರೆ ಅವನಾಡಿದ ಇಂಗ್ಲೀಷ್ ನಮಗೆ ಸ್ವಲ್ಪವೂ ತಿಳಿಯುತ್ತಿರಲಿಲ್ಲ. ಅವನು ಚೀನೀಯರಿಗೆ ಚೈನಿಸ್ ಭಾಷೆಯಲ್ಲಿ ವಿವರಣೆ ಕೊಡುತ್ತಿದ್ದನು. ಡೀನ ಎನ್ನುವ ಇನ್ನೊಬ್ಬ ಗೈಡ್ ನಮಗೆ ಇಂಗ್ಲೀಷ್ ವಿವರಣೆ ನೀಡುತ್ತಿದ್ದ.
ಅಮೆರಿಕಾದಲ್ಲಿ ತುಂಬಾ ಚೀನೀಯರಿದ್ದಾರೆ. ಹೋದ ಕಡೆಯಲ್ಲೂ ಹಿಂಡು ಹಿಂಡಾಗಿ ಚೀನಿ ಪ್ರವಾಸಿಗರೇ ಕಾಣುತ್ತಾರೆ. ಅವರೊಂದಿಗೆ ಮಾತನಾಡಿ ಚೀನಾದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ನನಗೆ. ಸಮಸ್ಯೆಯೆಂದರೆ ಅವರಿಗೆ ಇಂಗ್ಲೀಷ್ ಬರುವುದೇ ಇಲ್ಲ. ನಮ್ಮಲ್ಲಿ ಇಂಗ್ಲೀಷ್ ಮಾತನಾಡುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಸಾಪ್ಟವೇರ್ ಮತ್ತು ಬಿ.ಪಿ.ಜಿ ಕ್ಷೇತ್ರಗಳಲ್ಲಿ ನಾವು ಚೀನಾಕ್ಕಿಂತ ಗಣನೀಯ ಪ್ರಗತಿ ಸಾಧಿಸಿದ್ದೇವೆ. ಆದರೆ ಕೆಲವು ವಲಯಗಳಲ್ಲಿ ಉದಾ: ಕ್ರೀಡೆಗಳಲ್ಲಿ ಅವರು ನಮಗಿಂತ ತುಂಬಾ ಮುಂದಿದ್ದಾರೆ. ಚೀನೀಯ ಮಹಿಳೆಯರಿಗೆ ಮತ್ತು ಅಮೆರಿಕನ್ನರಿಗೂ ಕೆಲವು ಸಾಮ್ಯಗಳಿವೆ. ಅಮೆರಿಕಾದವರಂತೆ ಚೈನಿಯರ ಬಣ್ಣವೂ ಬಿಳಿ, ಅವರ ಕೂದಲು ಮತ್ತು ಅವರು ಧರಿಸುವ ಬಟ್ಟೆಗಳಲ್ಲೂ ಸಾಮ್ಯತೆ ಇದೆ. ಹೀಗಾಗಿ ಚೈನಿಯರು ಅಮೆರಿಕಾದಲ್ಲಿ ಅವರ ಸಂಸ್ಕೃತಿ ಅವರ ಆಹಾರ ಉಡುಗೆ ತೊಡುಗೆಗಳಲ್ಲಿ ಸೇರಿ ಹೋಗಿದ್ದಾರೆ. ಚೀನಾ ಪ್ರಗತಿ ಸಾಧಿಸಲು ಮತ್ತೊಂದು ಬಹುಮುಖ್ಯ ಕಾರಣ ಅಮೇರಿಕಾ, ಚೀನಾದ ಖಾಸಗೀಕರಣವನ್ನು ವಿದೇಶಿ ಖಾಸಗೀಕರಣ ಎಂದು ಕರೆದರೂ ತಪ್ಪಿಲ್ಲ.
ಚೀನೀಯರ ಮನೋಭಾವ ಕೂಡ ನಮಗಿಂತ ಭಿನ್ನವಾಗಿದ್ದು ಪ್ರಗತಿಗೆ ಪೂರಕವಾಗಿದೆ. ಚೀನೀಯರು ಪರಿಶ್ರಮಕ್ಕೆ ಹೆಸರಾದವರು. ನಾವಾದರೂ ಸೋಮಾರಿಗಳು, ಚೀನೀಯರು ತಮ್ಮ ದೇಶದ ಬಗ್ಗೆ ಅಭಿಮಾನ ಇಟ್ಟುಕೊಂಡಿದ್ದಾರೆ. ನಾವಾದರೂ ನಿರಭಿಮಾನಿಗಳು, ಅವರು ಚೀನಾ ಭಾಷೆ ಬಿಟ್ಟು ಬೇರೆ ಭಾಷೆ ಮಾತಾಡುವುದಿಲ್ಲ.
ಚೈನಾ ಟೌನ್‌ದಲ್ಲಿ ಸುತ್ತಾಡುತ್ತಿದ್ದರೆ ಅಮೆರಿಕಾದಲ್ಲಿದ್ದೇನೆ ಎನಿಸುವುದೇ ಇಲ್ಲ. ಬದಲಿಗೆ ಚೈನಾದ ಯಾವುದೋ ನಗರದಲ್ಲಿದ್ದೇವೇನೋ ಎಂಬ ಭಾವನೆ ಬರುತ್ತದೆ. ಅಲ್ಲಿನ ಮನೆಗಳು ಕೂಡ ಚೈನಿ ಶೈಲಿಯಲ್ಲೇ ಇವೆ. ಅಲ್ಲಿಯ ಅಕ್ಕಪಕ್ಕದ ಎಲ್ಲ ಅಂಗಡಿಗಳು ಮೇಲೂ ಚೈನಿ ಭಾಷೆಯ ಬೋರ್ಡ್‌ಗಳಿವೆ. ಎಲ್ಲಿ ನೋಡಿದರೂ ಚೀನೀಯರು ಓಡಾಡುತ್ತಿರುತ್ತಾರೆ.
ಚೀನೀಯರ ಒಂದು ಉತ್ತಮ ಗುಣವೆಂದರೆ ಅವರ ಸೌಮ್ಯ ಸ್ವಭಾವ. ಅವರು ಯಾವುದೇ ದೇಶಕ್ಕೆ ಹೋದರೂ ಅಲ್ಲಿನವರೇ ಆಗಿಬಿಡುತ್ತಾರೆ. ಬಹಳ ವರ್ಷಗಳ ಹಿಂದೆಯೇ ಇವರೆಲ್ಲ ಅಮೆರಿಕಾ ಬಂದು ಅಲ್ಲಿಯೇ ಬದುಕನ್ನು ಕಂಡುಕೊಂಡಿದ್ದಾರೆ.
ನಮಗೆ ಊಟಕ್ಕೆಂದು ಎರಡು ತಾಸು ಕೊಟ್ಟಿದ್ದರು. ಚೀನೀಯರು ಹಾವು, ಚೇಳು, ಕಪ್ಪೆ ಎಲ್ಲಾ ತಿನ್ನುತ್ತಾರೆ ಎಂದು ತಿಳಿದು ಭಯವಾಗಿ ಅಲ್ಲಿ ನಾವು ಏನೂ ತಿನ್ನಲಿಲ್ಲ. ಶಿಲ್ಪಾ ಬರುವಾಗ ಕೊಟ್ಟಿದ್ದ ಸ್ಯಾಂಡ್‌ವಿಚ್ ತಿಂದು ಜ್ಯೂಸ್ ಕುಡಿದು ಹೊಟ್ಟೆ ತುಂಬಿಸಿಕೊಂಡೆವು. ಅಲ್ಲಿಂದ ಬಸ್ ಏರಿ ಹೊಟೇಲಿಗೆ ಹೊರಟೆವು. ನಾವು ಹೊಟೇಲ್ ಹಿಲ್ಟನ್‌ನಲ್ಲಿ ಉಳಿದುಕೊಂಡೆವು. ಅದು ಫೈವ್ ಸ್ಟಾರ್ ಹೊಟೇಲ್ ಆಗಿತ್ತು. ತುಂಬಾ ದೊಡ್ಡದಾಗಿದ್ದು ಎಕ್ಸಿಕಲೇಟರ ಮತ್ತು ಕಾರಂಜಿಗಳನ್ನೆಲ್ಲಾ ಹೊಂದಿದ್ದು ಸುಸಜ್ಜಿತವಾಗಿತ್ತು. ನಾವು ಅಲ್ಲಿ ಮೂರು ದಿನ ಉಳಿದೆವು.
ಅಟ್ಲಾಂಟಾ ನಗರ :

ಇದು ಅಟ್ಲಾಂಟಿಕ್ ಸಾಗರದಲ್ಲಿ ಎದ್ದು ನಿಂತಿರುವ ಸುಂದರ ನಗರ. ವಿಶಾಲವಾದ ಸಮುದ್ರ ದಂಡೆಯನ್ನು ಇದು ಹೊಂದಿದೆ. ಇಲ್ಲಿ ಎಲ್ಲಿ ನೋಡಿದರೂ ಕೆಸಿನೋ ಆಟ ಆಡುತ್ತಾರೆ. ಮತ್ತು ಪ್ರವಾಸಿಗರನ್ನು ಆಡಲು ಪ್ರೇರೇಪಿಸುತ್ತಾರೆ. ಜನರು ಒಂದು ಸಲ ಸ್ವಲ್ಪ ಹಣ ಸಿಕ್ಕರೆ ಇನ್ನೂ ಸಿಗಬಹುದೇನೋ ಎಂಬ ಭ್ರಮೆಯಲ್ಲಿ ಮತ್ತೆ ಮತ್ತೆ ಹಣ ಹಾಕಿ ಆಡುತ್ತಾರೆ. ಕೆಲವರಿಗೆ ಹಣ ಬಂದರೆ ಬಂತು. ಇಲ್ಲದಿದ್ದರೆ ಇಲ್ಲ. ಇದರಲ್ಲಿ ಕೆಲವರು ಇದ್ದ ಹಣವನ್ನೆಲ್ಲಾ ಹಾಕಿ ಕೈ ಸುಟ್ಟುಕೊಂಡವರು ಇದ್ದಾರೆ. ಇದೊಂದು ಥರ ಗ್ಯಾಂಬ್‌ಲಿಂಗ್, ಅದಕ್ಕಾಗಿ ಈ ಸಿಟಿಯನ್ನು ಗ್ಯಾಂಬ್‌ಲಿಂಗ್ ಸಿಟಿ ಎಂದು ಕರೆಯುತ್ತಾರೆ.
ಇದೊಂದು ಸುಂದರ ನಗರ. ಇಲ್ಲಿ ನಿಮಿಷಕ್ಕೊಂದು ವಿಮಾನ ಬರುತ್ತದೆ ಮತ್ತು ಹೋಗುತ್ತದೆ. ನಮ್ಮ ಜೊತೆ ಹೋದವರು ಕೆಲವರು ಆಡಿದರೂ ನಮಗೆಲ್ಲ ಇದರ ಹುಚ್ಚು ಇಲ್ಲ. ಅದರಿಂದ ನಾವು ಕೊನೆಗೂ ಆಡಲಿಲ್ಲ. ಅಮೆರಿಕಾದ ವೆಸ್ಟ್ ಪೊಯಿಂಟ್ ಆರ್ಮಿ ಅಕಾಡೆಮಿ- ಅಟ್ಲಾಂಟಿಕ್. ಅದೂ ಸಹ ಮಹಾಸಾಗರದ ದಡದಲ್ಲಿದೆ. ಅದರಿಂದ ಅವರಿಗೆ ಶತ್ರುಗಳು ಸಮುದ್ರದ ದಾರಿಯಿಂದ ಬಂದರೆ ಅವರನ್ನು ಎದುರಿಸುವುದು
ಸುಲಭ: ಇಂಗ್ಲೀಷರು ಮೊದಲು ಅಮೆರಿಕಾದ ಮೇಲೆ ದಾಳಿ ಮಾಡಿದ್ದರಂತೆ. ನಾವು ಅಲ್ಲಿ ಒಳಗೆ ಹೋಗಲು ನಮ್ಮ ಗೈಡ್ ಡೀನ್ ಮೊದಲೇ ಅಪ್ಪಣೆ (ಒಪ್ಪಿಗೆ ಪತ್ರ ಪಡೆದುಕೊಂಡಿದ್ದರು. ಒಬ್ಬ ಕಮಾಂಡೋ ನಮ್ಮನ್ನು ಒಳಗೆ ಕರೆದುಕೊಂಡು ಹೋಗಿ ಅಮೇರಿಕಾ ಸೈನ್ಯದ ಬಗ್ಗೆ ಸೈನಿಕರ ಬಗ್ಗೆ ಅವರ ತರಬೇತಿಯ ಬಗ್ಗೆ ವಿವರವಾಗಿ ತಿಳಿಸಿದರು. ಅಲ್ಲಿಯೇ ಹತ್ತಿರದಲ್ಲಿರುವ ಚಾಪೆಲ್ ಚರ್ಚಿಗೆ ಭೆಟ್ಟಿ ನೀಡಿದೆವು. ಅದು ಹಡ್‌ಸನ್ ನದಿ ದಂಡೆಯ ಮೇಲಿದೆ. ಅಲ್ಲಿ ಸೈನ್ಯ ಸುರಕ್ಷತೆಗೆ ಹೆಚ್ಚಿನ ಒತ್ತು ಕೊಟ್ಟಿದ್ದಾರೆ.
ನಾವು ಹೋದಾಗ ಸೈನಿಕರು ತರಬೇತಿಯಲ್ಲಿ ತೊಡಗಿದ್ದರು.
ವುಡ್‌ಬೆರಿ ಮಾರ್ಕೆಟಿಂಗ್ ಸೆಂಟರ್ :

ಇದು ಅತಿ ದೊಡ್ಡದಾದ ವ್ಯಾಪಾರದ ಮಾರಾಟದ ಮಳಿಗೆ, ಒಂದೇ ಕಡೆ ಏನಿಲ್ಲವೆಂದರೂ ನೂರಾರು ಅಂಗಡಿಗಳಿವೆ. ಬೆಳ್ಳಿ ಬಂಗಾರದಿಂದ ಹಿಡಿದು ಗಡಿಯಾರ ಬಟ್ಟೆ ಹೀಗೆ ಎಲ್ಲ ರೀತಿಯ ಸಾಮಾನುಗಳು ಇಲ್ಲಿ ಹೋಲ್‌ಸೇಲ್ ದರದಲ್ಲಿ ಸಿಗುತ್ತವೆ. ನಾನಾ ಥರದ ಚಪ್ಪಲಿ ಅಂಗಡಿಗಳು-ಹೀಗೆ ನಮಗೆ ಏನು ಬೇಕೋ ಅದನ್ನು ವ್ಯಾಪಾರ ಮಾಡಬಹುದು. ಅಂದು ನಾವು ಬೇಗ ಹೊಟೇಲ್ ರೂಮಿಗೆ ಬಂದಿದ್ದೆವು. ನಮಗೆ ಬಿಸ್ಕೆಟ್ ತಿಂದೇ ಹೊಟ್ಟೆ ತಣ್ಣಗೆ ಮಾಡಿಕೊಳ್ಳಬೇಕಿತ್ತು. ಅಂದೇ ಪ್ರೇಮಕ್ಕ ನಮಗೆ ಫೋನ್ ಮಾಡಿ ‘ಹೇಗಿದೆ ಟೂರ್’ ಎಂದು ವಿಚಾರಿಸಿದಳು. ನಾವು ಎಲ್ಲಾ ಸರಿಯಾಗಿದೆ ಆದರೆ ಎಲ್ಲೂ ನಮಗೆ ಇಂಡಿಯನ್ ಊಟ ಸಿಕ್ಕಿಲ್ಲ ಎಂಬುದು ತಿಳಿದು ಅವರಿಗೆ ಬೇಸರವಾಯಿತು. ಅದಕ್ಕಾಗಿ ಅವರು ಸಂಜೆ ನಾವಿದ್ದ ಹೊಟೇಲಿಗೆ ಬಂದರು. ಅದು ನ್ಯೂ ಜೆರ್ಸಿ ಮತ್ತು ನ್ಯೂಯಾರ್ಕ್ ನಡುವೆ ಇರುವುದರಿಂದ ಅವರಿಗೆ ಸ್ವಲ್ಪ ಹತ್ತಿರವೇ ನಾವಿದ್ದ ಸ್ಥಳ. ಅದಕ್ಕೆ ಅವರು ನಮ್ಮನ್ನು ಅವರಿಗೆ ಪರಿಚಯವಿದ್ದ ಒಂದು ಪಂಜಾಬಿ ಹೊಟೇಲಿಗೆ ಕರೆದುಕೊಂಡು ಹೋಗಿ ಒಳ್ಳೆಯ ಊಟ ಕೊಡಿಸಿದರು. ನಮಗೂ ಸಹ ಅವರ ಜೊತೆ ಸ್ವಲ್ಪ ಸಮಯ ಕಳೆದಿದ್ದಕ್ಕೆ ಮತ್ತು ಒಳ್ಳೆಯ ಊಟ ಸಿಕ್ಕಿದ್ದಕ್ಕೆ ಸಂತೋಷವಾಯಿತು.
ನ್ಯೂ ಯಾರ್ಕ್ ನಗರ ಪ್ರದಕ್ಷಿಣೆ
ನಾವು ಬೇಗ ಎದ್ದು ರೂಮಿನಲ್ಲಿಯೇ ಟೀ ಮಾಡಿಕೊಂಡು ಬಿಸ್ಕಟು ಜೊತೆ ಚಹಾ ಕುಡಿದು ರೆಡಿಯಾದೆವು. ಅಂದು ನ್ಯೂಯಾರ್ಕ್ ನಗರ ದರ್ಶನ, ನಾವು ನ್ಯೂ ಯಾರ್ಕ್ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಎಂಪೈರ್ ಸ್ಟೇಟ್ ಭವನದ ಹತ್ತಿರ ಬಂದೆವು. ಮಾನವನ ಎತ್ತರೆತ್ತರಕ್ಕೆ ಏರುವ ಆಸೆಯ ದ್ಯೋತಕವೆಂಬಂತೆ ಅಮೆರಿಕಾದ ನಗರಗಳಲ್ಲಿ ಗಗನಚುಂಬಿ ಕಟ್ಟಡಗಳನ್ನು ಕಾಣಬಹುದು. ನ್ಯೂ ಯಾರ್ಕಿನ ಎಂಪೈರ್ ಕಟ್ಟಡ, ಶಿಕಾಗೋದ ಸಿಯರ್ಸ್ ಕಟ್ಟಡ, ಮಲೇಶಿಯಾದ ಕೌಲಾಲಂಪುರದಲ್ಲಿರುವ ಪೆಟ್ರೋನಾಸ್ ಕಟ್ಟಡ, ದುಬೈನ ಬುರ್ಜ ಕಲೀಫಾ ಕಟ್ಟಡ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದು ಮಾನವನ ಕ್ರಿಯಾಶೀಲತೆಯ ಪ್ರತೀಕ. ಈ ಎಲ್ಲ ಕಟ್ಟಡಗಳನ್ನು ಕಣ್ಣಾರೆ ಕಂಡು ಹತ್ತಿ ಇಳಿದ ಹಮ್ಮೆ ನನ್ನದು.
ಎಂಪೈರ್ ಸ್ಟೇಟ್ ಭವನ 103 ಅಂತಸ್ತುಗಳಿರುವ ಬೃಹತ್ ಕಟ್ಟಡ. ಅಮೆರಿಕಾಕ್ಕೆ ಬಂದವರೆಲ್ಲ ನೋಡಲೇಬೇಕಾದಂಥ ಸ್ಥಳ ಇದು. ನಿಜವಾಗಿಯೂ ಇದು ಗಗನಚುಂಬಿಯೇ ಆಗಿದೆ. ಈ ಕಟ್ಟಡದ ಮುಂದೆ ತಲೆ ಎತ್ತಿ ನೋಡಿದರೆ ಅದರ ಎತ್ತರಕ್ಕೆ ಎದೆ ದಸ್ ಎನ್ನುತ್ತದೆ. ಈ ಕಟ್ಟಡದ ಸುಮಾರು 81 ಮಹಡಿಗಳನ್ನು ವಾಣಿಜ್ಯ ಮಳಿಗೆಗಳಿಗೆ ನೀಡಲಾಗಿದ್ದು ಅದೊಂದು ಬೃಹತ್ ಮಾಲ್‌ನಂತೆ ಗೋಚರಿಸುತ್ತದೆ. ನಮಗೆ 86ನೇ ಅಂತಸ್ತಿನವರೆಗೆ ಹೋಗಲು ಮಾತ್ರ ಅನುಮತಿ ಇದೆ. ಕೆಳಗಿನ ಅಂತಸ್ತಿನಿಂದ 86ನೇ ಅಂತಸ್ತಿಗೆ ಹೋಗಲು ಒಂದು ನಿಮಿಷ ತೆಗೆದುಕೊಳ್ಳುತ್ತದೆ ಈ ಲಿಫ್ಟ್, ಇಲ್ಲಿ 86ನೇ ಅಂತಸ್ತಿನಲ್ಲಿ ಆಬ್ಬರವೇಟರಿ ಇದ್ದು ಅಂತರಿಕ್ಷ ಮತ್ತು ನಕ್ಷತ್ರಗಳನ್ನು ನೋಡಲು ಅನುಕೂಲಗಳನ್ನು ಕಲ್ಪಿಸಲಾಗಿದೆ. ಇಲ್ಲಿ ಸುತ್ತ ಗಾಜಿನ ಗೋಡೆಗಳನ್ನು ನಿರ್ಮಿಸಿ ದೊಡ್ಡ ದೊಡ್ಡ ದುರ್ಬೀನುಗಳನ್ನು ಇಡಲಾಗಿದೆ. ನಾವು ಬೃಹತ್ ದುರ್ಬಿನಿನಿಂದ ಅಂತರಿಕ್ಷ ಮತ್ತು ನ್ಯೂ ಯಾರ್ಕ್ ನಗರದ ದರ್ಶನ ಮಾಡಿದೆವು. ನಾವು ಹೋಗಿದ್ದು ಹಗಲಿನಲ್ಲಿ ಹೀಗಾಗಿ ನಮಗೆ ರಾತ್ರಿಯಲ್ಲಿ ದೀಪಗಳ ಹೊಳಪಿನಲ್ಲಿ ನ್ಯೂ ಯಾರ್ಕ್ ಸೌಂದರ್ಯ ಸವಿಯುವ ಅವಕಾಶ ತಪ್ಪಿತು. ನ್ಯೂಯಾರ್ಕ್ ಎಷ್ಟು ವಿಶಾಲ ನಗರವೆಂದರೆ ಎತ್ತ ನೋಡಿದರೂ ಅದರ ವ್ಯಾಪ್ತಿ ಹಿಗ್ಗುತ್ತಲೇ ಹೋಗುತ್ತದೆ. ನಾವು ಕಣ್ಣು ಹರಿಯುವವರೆಗೂ ನ್ಯೂ ಯಾರ್ಕ್ ನಗರ ವೀಕ್ಷಿಸಿದೆವು. 102ನೇ ಮಹಡಿಯಿಂದ ನೋಡಿದರೆ ಇಡೀ ನ್ಯೂ ಯಾರ್ಕ್ ನಗರದ ವಿಹಂಗಮ ನೋಟ ನಮ್ಮನ್ನು ಬೆರಗುಗೊಳಿಸುತ್ತದೆ. ಹಡ್ಗನ್ ನದಿಯ ಹರಿವು ಇನ್ನೊಂದು ಆಕರ್ಷಣೆ..
By-ಶಾಲಿನಿ ಗಾಂವಕರ್
ಮುಂದಿನ ಭಾಗ ಓದಿ…
