(ಭಾಗ-11) ಪಡುವಣದ ಪ್ರವಾಸ: ಒಂದು ಪ್ರಯಾಣ, ಸಾವಿರ ನೆನಪುಗಳು!

(ಭಾಗ-11) ಪಡುವಣದ ಪ್ರವಾಸ: ಒಂದು ಪ್ರಯಾಣ, ಸಾವಿರ ನೆನಪುಗಳು!

ಸ್ವಾತಂತ್ರ್ಯ ದೇವಿಯ ವಿಗ್ರಹ

ಅಮೆರಿಕಾ ಎಂದ ಕೂಡಲೇ ಮೊದಲು ನೆನಪಿಗೆ ಬರುವುದು ಸ್ವಾತಂತ್ರ್ಯ ದೇವಿಯ ವಿಗ್ರಹ. ನಾವು ಹಾರ್ಬರನ ಸ್ಟೀಮರ್‌ನಲ್ಲಿ ಕುಳಿತು ಸ್ವಾತಂತ್ರ್ಯದ ದೇವಿಯ ವಿಗ್ರಹ ನೋಡಲು ಹೊರಟೆವು. ಇದು ಹಡ್ನನ್ ಮತ್ತು ಈಸರವರಿ ನದಿಗಳ ಸಂಗಮ ದ್ವೀಪ. ಇದು ವಿಶ್ವ ಸ್ವಾತಂತ್ರ್ಯದ ಪ್ರಜಾಪ್ರಭುತ್ವದ ಸಂಕೇತ. ಅಮೆರಿಕಾಕ್ಕೆ ಯಾರೇ ಬಂದರೂ ಇದನ್ನು ನೋಡದೇ ಹೋಗುವುದಿಲ್ಲ. ಇದು ಪ್ರವಾಸಿಗೆರಿಗೆಲ್ಲ ಆಕರ್ಷಣೆಯ ಕೇಂದ್ರಬಿಂದು, ಅದು ನಾವು ಬೋಟನಲ್ಲಿ ಹೋಗುವಾಗ ದೂರದಿಂದಲೇ ಕಾಣುತ್ತದೆ. ನಮ್ಮ ಬೋಟಿನಲ್ಲಿ ಬಹಳಷ್ಟು ಜನ ಇಂಡಿಯಾದ ಪ್ರವಾಸಿಗರಿದ್ದರು. ನಮ್ಮ ಬೋಟ್ ತುಂಬಾ ದೊಡ್ಡದಿತ್ತು. ಅದರಲ್ಲಿ ಸುಮಾರು 100 ರಿಂದ 200 ರವರೆಗೆ ಪ್ರವಾಸಿಗರಿದ್ದರು. ದೋಣಿ ಲಿಬರ್ಟಿ ಆಯ್ಲೆಂಡಿನತ್ತ ಹೋಗುತ್ತಿದ್ದಂತೆ ಪ್ರವಾಸಿಗರ ಉತ್ಸಾಹ ಏರತೊಡಗಿತ್ತು, ಎಲ್ಲರೂ ಅದರ ಫೋಟೋ ತೆಗೆಯಲು ಶುರು ಮಾಡಿದರು. ಈ ವಿಗ್ರಹ ಅಮೆರಿಕನ್ನರ ಹೆಮ್ಮೆಯ ದ್ಯೋತಕವಾಗಿದೆ. ನಾವು ಬೋಟಿನಿಂದ ಇಳಿದು ವಿಗ್ರಹದ ಕಡೆಗೆ ಹೋದೆವು. ಇದೊಂದು ಅದ್ಭುತವಾದ ದೃಶ್ಯ ವಿಗ್ರಹದ ಗಾತ್ರ ಎತ್ತರ ಮತ್ತು ಕುಶಲತೆ ಕಲ್ಪನೆಗೂ ಮೀರಿದ್ದು. ಇದನ್ನು ನೋಡುತ್ತಾ ನನ್ನನ್ನು ನಾನೇ ಮರೆತು ಹೋದೆನು. ಅಮೇರಿಕನ್ನರಿಗೆ ಯುದ್ಧದಲ್ಲಿ ಫ್ರೆಂಚರು ಸಹಾಯ ಮಾಡಿದ್ದರಂತೆ, ಇದರಿಂದ ಎರಡೂ ದೇಶಗಳ ನಡುವೆ ಸ್ನೇಹ ಬೆಳೆಯಿತಂತೆ. ಈ ಸ್ನೇಹದ ಕುರುಹಾಗಿ ಅಮೆರಿಕಾ ಕ್ರಾಂತಿಯ ಶತಮಾನೋತ್ಸವದ ದಿನ (28-10-1886) ಫ್ರಾನ್ಸ್ ದೇಶವು ಈ ಸ್ವಾತಂತ್ರ್ಯ ದೇವಿಯ ಪ್ರತಿಮೆಯನ್ನು ಅಮೇರಿಕಾ ದೇಶಕ್ಕೆ ಬಳುವಳಿಯಾಗಿ ನೀಡಿತ್ತಂತೆ. ಇದನ್ನು ಫ್ರಾನ್ಸ್ ದೇಶದ ಶಿಲ್ಪಿ ಫ್ರೆಡರಿಕ್ ಆನ್‌ಸೆಟ ಬಾಕ್ರೋ ಎಂಬುವನು ನಿರ್ಮಿಸಿದ್ದನಂತೆ. ಇದನ್ನು ಅತೀ ಎತ್ತರದ ವೇದಿಕೆಯ ಮೇಲೆ ಸ್ಥಾಪಿಸಲಾಗಿದೆ. ಇದು ರಾಷ್ಟ್ರೀಯ ಸ್ಮಾರಕವಾಗಿ ಅಂಗೀಕೃತವಾಗಿದೆ. ಈ ವಿಗ್ರಹದ ಬಿಡಿಭಾಗವನ್ನು ತಾಮ್ರದ ತಗಡಿನಲ್ಲಿ ಕೆತ್ತಿ ನಂತರ ಕಬ್ಬಿಣದ ಚೌಕಟ್ಟಿಗೆ ಜೋಡಿಸಲಾಗಿದೆ. ಇದು ಸಡಿಲವಾದ ತುಂಬು ತೋಳಿನ ಉದ್ದದ ನಿಲುವಂಗಿ ಧರಿಸಿದ್ದು ತಲೆಯಲ್ಲಿ ನಕ್ಷತ್ರಾಕಾರದ ಕಿರೀಟವಿದೆ. ಈ ಕಿರೀಟದ ಏಳು ಕಿರಣಗಳು ಏಳು ಸಮುದ್ರಗಳನ್ನು ಮತ್ತು ಏಳು ಖಂಡಗಳನ್ನು ಪ್ರತಿನಿಧಿಸುತ್ತವೆ. ಇದರ ಒಳಭಾಗ ಪೊಳ್ಳಾಗಿದ್ದು ಅದರೊಳಗೆ ಶಿರೋಭಾಗದವರೆಗೂ ಹತ್ತಲು ಇಳಿಯಲು ಮೆಟ್ಟಿಲುಗಳಿವೆ. ಕಿರೀಟದಲ್ಲಿ 25 ಕಿಟಕಿಗಳಿದ್ದು ಅದು ಭೂಮಿಯ ಮೇಲೆ ದೊರೆಯುವ ರತ್ನಗಳನ್ನು ಪ್ರತಿನಿಧಿಸುತ್ತದೆ. ಕಿರೀಟ ಭಾಗವು ನೂರಾರು ಮಂದಿ ನಿಲ್ಲುವಷ್ಟು ವಿಶಾಲವಾಗಿದೆ. ಇದರ ಮೇಲೆ ಹತ್ತಿ ಕಿರೀಟದಲ್ಲಿರುವ ಗಾಜಿನ ಕಿಟಕಿಗಳ ಮೂಲಕ ನ್ಯೂ ಯಾರ್ಕ್ ನಗರವನ್ನು ನೋಡಿದರೆ ಅದ್ಭುತವಾಗಿ ಕಾಣುತ್ತದೆ. ಈ ಪ್ರತಿಮೆ ತನ್ನ ಕೈಯಲ್ಲಿ ಹಿಡಿದಿರುವ ಜ್ಯೋತಿಯು ರಾತ್ರಿಯ ವೇಳೆ ಹಲವಾರು ಮೈಲಿ ದೂರದವರೆಗೂ ಕಾಣುತ್ತದೆ. ಆ ಜ್ಯೋತಿಗೆ ಬಂಗಾರದ ತಗಡಿನ ಹೊದಿಕೆ ಹಾಕಿರುವುದರಿಂದ ಅದರ ಹೊಳಪು ಅತಿಶಯವಾಗಿ ಶೋಭಿಸುತ್ತದೆ. ಈ ಪ್ರತಿಮೆಯ ಸುತ್ತ ಸುಂದರವಾದ ಹೂತೋಟವನ್ನು ನಿರ್ಮಿಸಲಾಗಿದೆ.

ಲಿಬರ್ಟಿ ಐಲ್ಯಾಂಡಿನಲ್ಲಿ ನಿಂತು ನ್ಯೂ ಯಾರ್ಕ್ ನಗರವನ್ನು ನೋಡುವುದು ಕಣ್ಣಿಗೊಂದು ಹಬ್ಬ ಎತ್ತರದೆತ್ತರ ಗಗನಚುಂಬಿ ಕಟ್ಟಡಗಳು ಮನಸ್ಸಿಗೆ ಮುದ ನೀಡುತ್ತವೆ. ಲಿಬರ್ಟಿ ಐಲೆಂಡ್ ಮತ್ತು ಸ್ವಾತಂತ್ರ್ಯ ದೇವಿಯ ವಿಗ್ರಹದ ಸೌಂದರ್ಯ ಸವಿದು ನ್ಯೂ ಯಾರ್ಕ್‌ಗೆ ವಾಪಸ್ಸಾದೆವು.

ನಾವು ಮುಂದೆ ಅಲ್ಲಿಯೇ ಹತ್ತಿರವಿರುವ ಇನ್ನಪಿಡ್ ಸೀ ಆ್ಯಂಡ್ ಸ್ಪೇಸ್ ಮ್ಯೂಸಿಯಂ ನೋಡಲು ಹೋದೆವು. ಅದು ತುಂಬಾ ದೊಡ್ಡದಾಗಿದ್ದು ಅಲ್ಲಿ ಹಲವು ಯುದ್ಧ ವಿಮಾನಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಅಂತರಿಕ್ಷ ಯಾನಗಳ ದೊಡ್ಡ ನೌಕೆಗಳನ್ನು ಇಟ್ಟಿದ್ದಾರೆ. ಹೊರಗಡೆ ಬೃಹದಾಕಾರದ ಯುದ್ಧನೌಕೆಯನ್ನು ಇಟ್ಟಿದ್ದಾರೆ.

ಮುಂದೆ ನಾವು ಜಗತ್ತಿನ ಹೆಮ್ಮೆಯ ಸಂಸ್ಥೆ ಯು. ಎನ್. ಓ. (ಸಂಯುಕ್ತ ರಾಷ್ಟ್ರ ಸಂಘ) ಬಳಿ ಬಂದವು, ನ್ಯೂ ಯಾರ್ಕ್ ಮ್ಯಾನ್ ಹಟ್ಟನ್ ಮಾಯಾ ನಗರಿಯಾಗಿದೆ. ಅಲ್ಲಿರುವ 39 ಅಂತಸ್ತಿನ ಯು.ಎನ್.ಓ. ಬಿಲ್ಡಿಂಗ್ ನೋಡಿದೆವು. ಈ ಕಟ್ಟಡದ ಮುಂಭಾಗದಲ್ಲಿ ಸದಸ್ಯ ರಾಷ್ಟ್ರಗಳ ಧ್ವಜ ಹಾರಾಡುತ್ತಿರುವುದನ್ನು ನೋಡಬಹುದು. ಆ ಧ್ವಜಗಳ ನಡುವೆ ಭಾರತದ ರಾಷ್ಟ್ರಧ್ವಜವು ಹಾರಾಡುತ್ತಿರುವುದನ್ನು ನೋಡಿ ಹೆಮ್ಮೆ ಅನಿಸಿತು. ಅಂತರ್‌ರಾಷ್ಟ್ರೀಯ ಶಾಂತಿ ರಕ್ಷಣೆಯ ಜವಾಬ್ದಾರಿಯನ್ನು ಸಮಸ್ಯೆಗಳನ್ನು ಪರಿಹರಿಸುವ ಕರ್ತವ್ಯಗಳನ್ನು ಯು.ಎನ್.ಓ. ನಿರ್ವಹಿಸುತ್ತದೆ. ಅಲ್ಲಿ ಬಿಗಿಯಾದ ಭದ್ರತೆ ಇರುವದರಿಂದ ನಮ್ಮನ್ನು ಕಟ್ಟಡದ ಒಳಗೆ ಹೋಗಲು ಬಿಡಲಿಲ್ಲ.

ವಾಲ್‌ ಸ್ಟ್ರೀಟ್ ಎಂಬುದು ನ್ಯೂ ಯಾರ್ಕಿನ ಪ್ರಖ್ಯಾತ ಬೀದಿ, ನ್ಯೂ ಯಾರ್ಕ್ ನಗರದ ಮ್ಯಾನ ಹಟ್ಟನ್ ಏರಿಯಾದ ಸುಂದರವಾದ ಬೀದಿ. ಇದು ಇಡೀ ವಿಶ್ವದ ಹಣಕಾಸಿನ ವ್ಯವಸ್ಥೆಯನ್ನು ನಿಯಂತ್ರಿಸುತ್ತದೆ. ಈ ವಾಲ್ ಸ್ಟ್ರೀಟ್. ಅಲ್ಲಿ ಸುತ್ತಮುತ್ತಲು ಆಡ್ಡಾಡಿದೆವು. ವಾಲ್‌ ಸ್ಟ್ರೀಟ್ ಪ್ರವೇಶಿಸುವಾಗಲೇ ನಮಗೆ ಗೂಳಿಯ ಪ್ರತಿಮೆ ಎದುರಾಯಿತು. ಈ ಗೂಳಿ ವಾಲ್ ಸ್ಟ್ರೀಟ್ ಕಡೆಗೆ ಬರುವ ಪ್ರವಾಸಿಗರಿಗೆಲ್ಲಾ ಆಕರ್ಷಣೆಯ ಕೇಂದ್ರ ಬಿಂದು. ಈ ಕರಿ ಬಣ್ಣದ ಬೃಹಾದಾಕಾರದ ಗೂಳಿ ನೋಡಲು ಬಲು ಸುಂದರವಾಗಿದೆ. ಈ ಗೂಳಿ ಶೇರ್ ಮಾರ್ಕೆಟಿನ ಚಿನ್ನೆಯಂತೆ. ಇದನ್ನು ಮುಟ್ಟಿದರೆ ಅದೃಷ್ಟವೆಂದು ಹೇಳುತ್ತಾರೆ. ಎಲ್ಲರೂ ಅದನ್ನು ಮುಟ್ಟಿ ಮುಟ್ಟಿ ಕೆಲವು ಕಡೆ ಬಣ್ಣ ಮಾಸಿದೆ. ನಾವೂ ಸಹ ಅಲ್ಲಿ ನಿಂತು ಫೋಟೋ ತೆಗೆಸಿಕೊಂಡೆವು. ತುಂಬಾ ಪ್ರವಾಸಿಗರು ಫೋಟೋ ತೆಗೆಸಿಕೊಳ್ಳಲು ನಾ ಮುಂದು ನಾ ಮುಂದು ಎನ್ನುವ ದೃಶ್ಯ ಕಾಣುತ್ತಿತ್ತು. ಅಲ್ಲಿ ಜನ ಕಿಕ್ಕಿರಿದು ತುಂಬಿದ್ದರು. ನಾವು ಅಲ್ಲಿಯೇ ಪಕ್ಕದ ಕಟ್ಟಡಗಳನ್ನು ನೋಡುತ್ತ ನಡೆಯುತ್ತಿರಬೇಕಾದರೆ ನ್ಯೂ ಯಾರ್ಕ್‌ನ ಸ್ಟಾಕ್ ಎಕ್ಸ್‌ಚೇಂಜ್ ಕಟ್ಟಡ ಎದುರಾಯಿತು. ಇದು ವಿಶ್ವದಲ್ಲಿಯೇ ಅತಿ ದೊಡ್ಡ ಷೇರು ವಿನಿಮಯ ಕೇಂದ್ರ.

ಅಲ್ಲಿಂದ ಮುಂದೆ ನಾವು ನ್ಯೂಯಾರ್ಕಿನ ಟೈಂ ಸೈರ್‌ನಲ್ಲಿನ ಮೇಡಂ ತುಸ್ಸಾಡ್ ವ್ಯಾಕ್ಸ್ ಮ್ಯೂಸಿಯಂ ನೋಡಲು ಬಂದೆವು. ಅದು ಅಲ್ಲಿನ ಐದು ಅಂತಸ್ತಿನ ಕಟ್ಟಡದಲ್ಲಿ ಮೂರನೆಯ ಅಂತಸ್ತಿನಲ್ಲಿದೆ. ನಾನು ಈ ಮೊದಲು ಲಂಡನ್ನಿನಲ್ಲಿ ವ್ಯಾಕ್ಸ್ ಮ್ಯೂಸಿಯಂ ನೋಡಿದ್ದರಿಂದ ನನಗೆ ಅದನ್ನು ನೋಡಲು ಅಷ್ಟೇನೂ ಆಸಕ್ತಿ ಇರಲಿಲ್ಲ. ಅಲ್ಲಿ ಕೆಲವು ಸೆಲೆಬ್ರೆಟಿಗಳ, ರಾಜಕಾರಣಿಗಳ ಮೇಣದ ಮೂರ್ತಿಗಳನ್ನು ಮಾಡಿ ಇಟ್ಟಿದ್ದರು. ಉದಾ:-ಓಬಾಮನ ಸಂಸಾರ, ಕೆನಡಿ, ಮೈಕಲ್ ಜಾಕ್ಸನ್, ಇಂಡಿಯಾದ ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಸಲ್ಮಾನ್ ಖಾನ್, ಐಶ್ವರ್ಯ ರೈ, ಗಾಂಧೀಜಿ ಹೀಗೆ ನೂರಾರು ಗೊಂಬೆಗಳನ್ನು ಇಟ್ಟಿದ್ದರು. ಇದು ಲಂಡನ್ನಿನ ಮ್ಯೂಸಿಯಂನಂತೆ ಇತ್ತು. ಚೆನ್ನಾಗಿದೆ. ಮೊದಲ ಬಾರಿ ನೋಡುವವರಿಗೆ ಇದು ಒಂದು ಅದ್ಭುತ ಅನುಭವ. ನಾವು ಅಲ್ಲಿ ಬಹಳ ಸಮಯ ಕಳೆಯದೇ ಹೊರಗೆ ಬಂದೆವು. ನಮ್ಮ ಜೊತೆಯವರು ಇನ್ನೂ ಒಳಗಡೆಯೇ ಇದ್ದರು. ನಾವು ಟೈಂ ಸೈರ್‌ನ ಸುತ್ತಮುತ್ತಲು ಅಡ್ಡಾಡಿ ಬಂದರಾಯಿತೆಂದು ಒಂದು ಸುತ್ತು ತಿರುಗಾಡಿದೆವು. ಈ ಪ್ರದೇಶ ನಮ್ಮ ದೇಶದ ಮುಂಬಯಿಯಂತೆ ಜನ ದಟ್ಟಣೆಯ ಪ್ರದೇಶ. ಅಲ್ಲಿಯೂ ಕೆಲವು ಯುವಕರು ಬೋರ್ಡ್‌ಗಳನ್ನು ಹಿಡಿದು ತಮ್ಮ ಬೇಡಿಕೆಗಳಿಗಾಗಿ ಸ್ಟೈಕ್ ಮಾಡುತ್ತಾರೆ. ಇನ್ನೊಂದು ಕಡೆ ಕೆಲ ಹುಡುಗರು ಬ್ಲೂ ಬಾಯ್ಸ್ ಎಂದು ಬೋರ್ಡ್ ಹಾಕಿಕೊಂಡು ಮ್ಯೂಸಿಕ್ ಬ್ಯಾಂಡ್ ನುಡಿಸುತ್ತಿದ್ದರು. ಸಂಗೀತದ ಸವಿಯನ್ನು ಸವಿಯಲು ಜನರು ಗುಂಪಾಗಿ ಸೇರಿದ್ದರು. ಕೆಲವರು ಹಾಡುಗಾರರಿಗೆ ಹಣವನ್ನು ಕೊಡುತ್ತಿದ್ದರು. ಇಲ್ಲಿ ಹಗಲಿಗೂ ರಾತ್ರಿಗೂ ವ್ಯತ್ಯಾಸವೇ ಗೊತ್ತಾಗುವುದಿಲ್ಲ. ರಾಶಿ ರಾಶಿ ವಿದ್ಯುತ್ ದ್ವೀಪಗಳು ವಿಶ್ವದ ಮೂಲೆ ಮೂಲೆಗಳಿಂದ ಬಂದಿರುವ ಬಗೆ ಬಗೆಯ ಹಿನ್ನೆಲೆಯ ವಿವಿಧ ರೀತಿ ಡ್ರೆಸ್‌ಗಳನ್ನು ಧರಿಸಿದ ಜನರನ್ನು ನೋಡುವುದೇ ಒಂದು ಚೆಂದ. ಅಲ್ಲಿ ದೇಶ ಕಾಲಗಳಿಗೆ ಅತೀತರಾಗುತ್ತೇವೆ. ಟೈಂ ಸ್ಟೇರ್‌ನಲ್ಲಿ ಪ್ರಪಂಚದ ಬೇರೆ ಬೇರೆ ದೇಶಗಳಿಂದ ಬಂದಿರುವ ಪ್ರವಾಸಿಗರು ಸ್ವತಂತ್ರವಾಗಿ ಬೆರೆತು ಸಂತಸಪಡುವುದನ್ನು ನೋಡಿದರೆ ಅಷ್ಟು ಖುಷಿಯಾಗುತ್ತದೆ. ಅಲ್ಲಿಯೇ ಸ್ವಲ್ಪ ಹೊತ್ತು ನಿಂತು ರಾತ್ರಿಯಲ್ಲಿ ಸುತ್ತಲಿನ ದೀಪಾಲಂಕಾರವನ್ನು ನೋಡುತ್ತಾ ಆಸ್ವಾದಿಸಿದೆವು. ಇಲ್ಲಿಯೇ ನ್ಯೂ ಇಯ‌ರ್ ಆಚರಣೆ ಜೋರಾಗಿ ನಡೆಯುತ್ತದಂತೆ. ಕೊನೆಗೆ ನಮ್ಮ ಗೈಡ್ ನಮ್ಮನ್ನು ಹುಡುಕುತ್ತಿದ್ದ. ನಾವು ಹಿಲ್ಟನ್ ಹೊಟೇಲ್ ಸೇರಿದಾಗ ರಾತ್ರಿ 10 ಗಂಟೆ. ನನಗಂತೂ ತುಂಬಾ ಸುಸ್ತಾಗಿಹೋಗಿತ್ತು. ಏನನ್ನೂ ತಿನ್ನದೆ ಹಾಗೇ ಮಲಗಿಕೊಂಡ.

ನಮಗೆ ಈ ಚೈನಿಸ್ ಟೂರ್‌ನಲ್ಲಿ ಊಟ ತಿಂಡಿಯದೇ ತೊಂದರೆಯಾಗಿತ್ತು. ಅವರು ಹೆಚ್ಚಾಗಿ ಚೈನಿಸ್ ಊಟ ಸಿಗುವಲ್ಲಿ ನಮಗೆ ಕರೆದುಕೊಂಡು ಹೋಗುತ್ತಿದ್ದರೆ, ಅಲ್ಲಿ ಎಲ್ಲದರಲ್ಲಿಯೂ ಹಂದಿ ದನದ ಮಾಂಸ ಹಾಕುತ್ತಿದ್ದರು. ಅದಕ್ಕಾಗಿ ನಾವು ಪಿಜ್ಜಾ ಕೊರರ್ ಇಲ್ಲವೇ ಮೆಕ್ಟೋನಲ್‌ನಲ್ಲಿ ಹೋದರೆ ಬ್ರೆಡ್ ಆಮೈಟ್ ಮತ್ತು ಪೆನಕೇಕ್ ಸೆಂಡವಿಚ್ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆವು. ನಮಗಂತೂ ಅನ್ನ ತಿಂದರೆ ಮಾತ್ರ ಊಟ ಮಾಡಿದಂತೆ ಆಗುತ್ತಿತ್ತು. ಉಳಿದೆಲ್ಲಾ ತಿಂಡಿಯಂತೆ ಅನಿಸುತ್ತಿತ್ತು.

ಫಿಲಿಡೆಲ್ಪಿಯಾ ನಗರ:

ಅಮೆರಿಕಾದಲ್ಲಿ ಸಮಯಕ್ಕೆ ತುಂಬಾ ಮಹತ್ವ ಕೊಡುತ್ತಾರೆ. ಅವರು ಹೇಳಿದ ಸಮಯಕ್ಕೆ ಸರಿಯಾಗಿ ರೆಡಿಯಾಗಬೇಕಿತ್ತು.

ಮಾರನೆಯ ದಿನ ನಾವು ಬೇಗ ಎದ್ದೆವು. ರೂಮ್ ಖಾಲಿ ಮಾಡಬೇಕಾದ್ದರಿಂದ ಎಲ್ಲಾ ಸಾಮಾನು ತುಂಬಿಕೊಂಡೆವು. ಮತ್ತು ಅಲ್ಲಿದ್ದ ಓವನ್‌ನಲ್ಲಿ ಚಹಾ ಮಾಡಿಕೊಂಡು ನಮ್ಮಲ್ಲಿದ್ದ ಬಿಸ್ಕಿಟ್ ಜೊತೆ ಚಹ ಕುಡಿದು ವಾಷಿಂಗ್ಟನ್ ಡಿ.ಸಿ.ಯ ಕಡೆ ಪ್ರಯಾಣ ಬೆಳೆಸಿದೆವು. ಮಾರ್ಗ ಮಧ್ಯದಲ್ಲಿ ನಾವು ಫಿಲಡೆಲಿಯಾಕ್ಕೆ ಭೆಟ್ಟಿಕೊಟ್ಟೆವು. ಫಿಲಿಡೆಲಿಯಾ ಒಂದು ಸುಂದರ ನಗರ. ಅಲ್ಲಿನ ಬಹುತೇಕ ಕಟ್ಟಡಗಳು ಸಾಂಪ್ರದಾಯಿಕ ವಿನ್ಯಾಸವನ್ನು ಹೊಂದಿವೆ. ಅಲ್ಲಿ ನಾವು ಮ್ಯಾಗ್ನಾಕಾರ್ಟದ ಪ್ರತಿಮೆಯನ್ನು ನೋಡಿದೆವು. ಈ ಐತಿಹಾಸಿಕ ಡಾಕ್ಯುಮೆಂಟ್ರಿ ಸಂವಿಧಾನ ತಯಾರಿಸುವಾಗ ಬಹಳ ಪ್ರಭಾವ ಬೀರಿತು ಎಂದು ನಮ್ಮ ಗೈಡ್ ಹೇಳಿದ. 13ನೇ ಶತಮಾನದಲ್ಲಿ ಕರವಸೂಲಿಗೆ ಸಂಬಂಧಿಸಿದಂತೆ ರಚಿತವಾದ ದಾಖಲೆ ಇದು. ಇಂಗ್ಲೆಂಡಿನ ದೊರೆ ಜಾನ್ ಮತ್ತು ಅವನ ಪೂರ್ವಿಕರು ಜಮೀನುದಾರರಿಂದ ಶ್ರೀಮಂತರಿಂದ ಮತ್ತು ಸರದಾರರಿಂದ ಮನಸೋ ಇಚ್ಛೆ ತೆರಿಗೆ ವಸೂಲಿಯಿಂದ ಎಲ್ಲರಿಗೂ ತೊಂದರೆಯಾಗುತ್ತಿತ್ತು. ಆಗ ರಾಜನು ತೆರಿಗೆ ಪದ್ಧತಿ ಸುಧಾರಣೆಗಾಗಿ ಮೆಗ್ನಾಕಾರ್ಟಾ ಎಂಬ ದಾಖಲೆಯನ್ನು ರೂಪಿಸಿ ಜಾರಿಗೆ ತಂದನು. 18ನೇ ಶತಮಾನದ ಪೂರ್ವಾರ್ಧದಲ್ಲಿ ಅಮೆರಿಕಾದ 13 ರಾಜ್ಯಗಳು ಬ್ರಿಟಿಷರ ವಸಾಹತುಗಳಾಗಿದ್ದವು. ಅಮೆರಿಕಾದ ಸ್ವಾತಂತ್ರ್ಯ ಸಂಗ್ರಾಮದ ಫಲವಾಗಿ ಇವು ಸ್ವತಂತ್ರವಾದವು. ಮೊದಲು ಫಿಲಿಡೆಲ್ಲಿಯ ಅಮೇರಿಕಾದ ಸಂಯುಕ್ತ ರಾಜ್ಯಗಳ ರಾಜಧಾನಿಯಾಗಿತ್ತು. ಅಮೇರಿಕಾದ ಪ್ರಥಮ ಅಧ್ಯಕ್ಷ ಜಾರ್ಜ್ ವಾಷಿಂಗ್‌ಟನ್ 1800 ರಲ್ಲಿ ರಾಜಧಾನಿಯನ್ನು ವಾಷಿಂಗ್‌ಟನ್‌ಗೆ ಸ್ಥಳಾಂತರಿಸಿದ. ಈ ಸ್ವಾತಂತ್ರ್ಯ ಸಂಗ್ರಾಮ ಮೊದಲು ಶುರುವಾಗಿದ್ದು ಫಿಲಡೆಲ್ಪಿಯಾದಲ್ಲಿಯೇ. ಅಂತೆಯೇ ಅದರ ನೆನಪಿಗಾಗಿ ಇಲ್ಲಿ ಸ್ವಾತಂತ್ರ್ಯ ಹಾಲ್ ಮತ್ತು ಸ್ವಾತಂತ್ರ್ಯದ ಗಂಟೆ ಇದೆ. ಇಲ್ಲಿ ಬೃಹದಾಕಾರದ ಸ್ವಾತಂತ್ರ್ಯದ ಗಂಟೆ ಇದೆ. ಇದೊಂದು ಪ್ರವಾಸಿಗರ ಆಕರ್ಷಣೀಯ ವಸ್ತುವಾಗಿದೆ. 30 ಅಡಿ ಎತ್ತರ ಮತ್ತು 12 ಅಡಿ ಸುತ್ತಳತೆ ಹೊಂದಿರುವ ಈ ಸ್ವಾತಂತ್ರ್ಯದ ಗಂಟೆಯ ತೂಕ 900 ಕಿ.ಗ್ರಾಂ ತಾಮ್ರದ ಲೋಹದಿಂದ ತಯಾರಿಸಿರುವ ಇದು ಸದ್ಯ ಬಿರುಕು ಬಿಟ್ಟುಕೊಂಡಿದೆ. ಇದಕ್ಕೆ ನೋಬೆಲ್ಲ ಬೆಲ್ ಆಫ್ ಪೀಸ್ ಎಂದು ಕರೆಯುತ್ತಾರೆ.

ಗೈಡ್ ನಮ್ಮನ್ನು ತಿಂಡಿ ತಿನ್ನಲು ಅಲ್ಲಿಯೇ ಹತ್ತಿರವಿರುವ ಹೊಟೇಲಿಗೆ `ಕರೆದುಕೊಂಡು ಹೋದನು. ಅಲ್ಲಿ ನಮಗೆ ಬಫೆಯಲ್ಲಿ ಒಳ್ಳೆಯ ಪುಡ್ ಸಿಕ್ಕಿತು. ಅಲ್ಲಿ :ನಾನಾ ತರಹದ ಸ್ಯಾಂಡ್‌ವಿಚ್‌ಗಳು, ನಾನಾ ತರಹದ ಹಣ್ಣುಗಳು, ಪ್ಯಾನ್‌ಕೇಕ್‌ಗಳು, ಸಿಹಿ ತಿಂಡಿಗಳು ಇದ್ದವು. ಡಾಲರ್‌ಗಳನ್ನು ಕೊಟ್ಟು ಟಿಕೇಟ ಪಡೆದು ಹೊಟ್ಟೆ ತುಂಬಾ ತಿಂದೆವು. ಫಿಲಡೆಲಿಯಾ ನಗರವನ್ನು ಒಂದು ಸುತ್ತು ಹಾಕಿ ವಾಷಿಂಗ್‌ಟನ್ ಡಿ.ಸಿ. ಯತ್ತ ಹೊರಟೆವು. ಇಲ್ಲಿ ಕೆಲವೊಂದು ಕುಟುಂಬಗಳು ಇಂದಿನ ಆಧುನಿಕತೆಗೆ ಮಾರುಹೋಗದೆ ಟಿವಿ, ಸಿನೇಮಾ, ಗ್ಯಾಸ್ ಇಂಟರ್‌ನೆಟ್ ಬಳಸದೆ ಮಕ್ಕಳಿಗೆ ಮನೆಯಲ್ಲಿ ಶಿಕ್ಷಣ ಕೊಡುವ ಜನರು ಇದ್ದಾರೆ ಎಂದರೆ ಯಾರೂ ನಂಬಲಿಕ್ಕಿಲ್ಲ, ಇದು ವಿಚಿತ್ರವಾದರೂ ಸತ್ಯ.

ವಾಷಿಂಗ್ಟನ್ ಡಿ.ಸಿ.

ಅಮೇರಿಕಾದ ರಾಜಧಾನಿಯಾದ ವಾಷಿಂಗ್ಟನ್ ಡಿ.ಸಿ. ವಿಶಿಷ್ಟವಾದ ನಗರ. ಅಮೇರಿಕಾದ ವೈಶಿಷ್ಟ್ಯತೆ ಏನೆಂದರೆ ಅಲ್ಲಿರುವ ಒಂದೊಂದು ನಗರಗಳೂ ಒಂದೊಂದು ಪ ರೀತಿ ಇವೆ. ಪ್ರತಿಯೊಂದು ನಗರವೂ ತನ್ನದೇ ಆದ ವಿಶಿಷ್ಟ ಗುಣಗಳನ್ನು ಹೊಂದಿದ್ದು ಪ್ರವಾಸಿಗರಿಗೆ ವೈವಿಧ್ಯಮಯವಾದ ಅನುಭವಗಳನ್ನು ನೀಡುತ್ತದೆ. ಇದನ್ನು ಸ್ಮಾರಕಗಳ ನಗರವೆಂದು ಕರೆಯಬಹುದು. ಇಲ್ಲಿ ಅನೇಕ ಸ್ಮಾರಕಗಳು ಮತ್ತು ಮ್ಯೂಸಿಯಂಗಳಿವೆ ಇದೊಂದು ಪ್ರಶಾಂತ ನಗರ, ವಿಶಾಲವಾದ ರಸ್ತೆಗಳು ಚಂದದ ಮನೆಗಳು ಮತ್ತು ಅದ್ಭುತವಾದ ಕಟ್ಟಡಗಳು ಇವೆ. ಜಾರ್ಜ್ ವಾಷಿಂಗ್ಟನ್ ಗೌರವಾರ್ಥ ನಗರಕ್ಕೆ ವಾಷಿಂಗ್ಟನ್ ಎಂದು ಹೆಸರಿಡಲಾಗಿದೆ. ಡಿ.ಸಿ. ಎಂದರೆ ಡಿಸ್ಟಿಕ್ ಆಫ್ ಕೊಲಂಬಿಯ ಎಂದು. ಇದು ಫೋಟೋಮ್ಯಾಕ್ ನದಿಯ ದಡದಲ್ಲಿದೆ. ಸುಮಾರು ರಾಯಭಾರಿ ಕಛೇರಿಗಳು ವಿಶ್ವ ಬ್ಯಾಂಕಿನ ಮುಖ್ಯ ಕಛೇರಿಗಳು ಇಲ್ಲಿವೆ. ಇದು ಅತ್ಯಂತ ಯೋಜಿತ ನಗರ. ಇದರ ವಿನ್ಯಾಸ ತುಂಬಾ ಚೆನ್ನಾಗಿದೆ.

ನಾನು ಅಮೇರಿಕಾದ ಮುಖ್ಯ ನಗರಗಳಾದ ವಾಷಿಂಗ್‌ಟನ್, ಶಿಕಾಗೋ, ನ್ಯೂ ಯಾರ್ಕ್ ಫ್ಲೋರಿಡಾ, ಫಿಲಡೆಲಿಯಾ, ಹೂಸ್ಟನ್, ಯಾಮಿ ನಗರಗಳನ್ನು ನೋಡಿದ್ದೇನೆ. ಇವೆಲ್ಲಾ ಅದ್ಭುತ ನಗರಗಳು, ಆಶ್ಚರ್ಯವೆಂದರೆ ಅಮೇರಿಕಾದ ಪ್ರತಿಯೊಂದು ನಗರದ ವಿನ್ಯಾಸವನ್ನು ಮತ್ತು ರೂಪುರೇಷೆಯನ್ನು ಒಳ್ಳೆಯ ಪ್ರತಿಭಾವಂತ ಆರ್ಕಿಟೆಕ್ಟ್ ವಿನ್ಯಾಸಗೊಳಿಸಿರಬೇಕು. ಆದರೆ ನಮ್ಮಲ್ಲಿ ಇಂಥ ಯಾವುದೇ ಯೋಜನೆಗಳಿಲ್ಲ. ಯದ್ವಾತದ್ವಾ ಬೆಳೆಯುತ್ತಿರುವ ನಮ್ಮ ನಗರಗಳಾದ ಮುಂಬಯಿ, ದೆಹಲಿ, ಬೆಂಗಳೂರು, ಚೆನೈ, ಹೈದರಾಬಾದ್, ಕಲ್ಕತ್ತಾ ಇವುಗಳನ್ನು ನೋಡಿದರೆ ಅವ್ಯವಸ್ಥೆಯ ಆಗರಗಳಾಗಿವೆ. ಒಂದು ಮಳೆ ಬಂದರೆ ಸಾಕುಗಟಾರಗಳೆಲ್ಲ ತುಂಬಿ ರಸ್ತೆಯ ಮೇಲೆ ಅಲ್ಲದೆ, ಕೆಲವು ಕಡೆ ಮನೆಯೊಳಗೆ ನುಗ್ಗಿ ಫಜೀತಿ ಆಗುತ್ತದೆ. ವಿದೇಶಕ್ಕೆ ಭೇಟಿ ನೀಡಿದ ಮಂತ್ರಿಗಳು ಶಾಸಕರು ಏನು ಮಾಡುತ್ತಾರೆ? ಅಲ್ಲಿ ನೋಡಿದ್ದನ್ನು ಇಲ್ಲಿ ಕಾರ್ಯರೂಪಕ್ಕೆ ತರಬಹುದಲ್ಲವೇ?

ನಾವು ಮೊದಲು ಪಾರ್ಲಿಮೆಂಟ್ ಭವನ ನೋಡಲು ಹೋದೆವು. ಇದನ್ನು ಯುನೈಟೆಡ್ ಸ್ಟೇಟ್ಸ್ ಕೆಪಿಟಲ್ ಎಂದು ಕರೆಯಲಾಗುತ್ತದೆ. ಇದು ನಮ್ಮ ಪಾರ್ಲಿಮೆಂಟ್ ಅಥವಾ ಬೆಂಗಳೂರಿನ ವಿಧಾನಸೌಧ ಇದ್ದ ಹಾಗೆ, ಇಲ್ಲಿ ಯುನೈಟೆಡ್ ಸ್ಟೇಟ್ ಕಾಂಗ್ರೆಸ್ ಸಭೆ ಸೇರುತ್ತದೆ.

ವಿಲಿಯಂ ಥಾರ್ನಟನ್ ಎಂಬ ಆರ್ಕಿಟೆಕ್ಟ್ ವಿನ್ಯಾಸಗೊಳಿಸಿರುವ ಕೆಪಿಟಲ್ ಕಟ್ಟಡ ಅದ್ಭುತವಾಗಿದೆ. ಇದರ ವಿಶೇಷ ಆಕರ್ಷಣೆ ಎಂದರೆ ನೆತ್ತಿಯ ಮೇಲಿರುವ ಗುಮ್ಮಟ. ಇದರ ಮೇಲೆ ಸ್ವಾತಂತ್ರ್ಯ ದೇವಿಯ ಮೂರ್ತಿ ಇದ್ದು ಅತ್ಯಂತ ಸುಂದರವಾಗಿದೆ. ಸುಮಾರು 289 ಅಡಿಗಳಷ್ಟು ಎತ್ತರವಿರುವ ಈ ಕಟ್ಟಡ ವಾಷಿಂಗ್‌ಟನ್‌ನಲ್ಲಿಯ 5 ನೇ ಎತ್ತರದ ಕಟ್ಟಡ. ಇಲ್ಲಿ ಪ್ರಮುಖ ಘಟನಾವಳಿಗಳು ಮತ್ತು ಕಾರ್ಯಕ್ರಮಗಳು ನಡೆಯುತ್ತವೆ. ಅಧ್ಯಕ್ಷರ ಪ್ರಮಾಣವಚನ, ಸ್ವಾತಂತ್ರ್ಯ ದಿನ ಸಂಭ್ರಮಾಚರಣೆ ಮತ್ತು ನ್ಯಾಶನಲ್ ಮೆಮೋರಿಯಲ್ ದಿನಗಳು ಮುಂತಾದ ಮಹತ್ವದ ಕಾರ್ಯಗಳು ನಡೆಯುತ್ತವೆ.

ನಮಗೆ ಒಳಗೆ ಹೋಗಲು ಅವಕಾಶವಿರಲಿಲ್ಲ. ಅದರಿಂದ ಹೊರಗಡೆಯಿಂದಲೇ ಒಂದು ಸುತ್ತು ಹಾಕಿ ನೋಡಿದೆವು ಮತ್ತು ಕೆಪಿಟಲ್ ಕಟ್ಟಡದಲ್ಲಿರುವ ಹೂತೋಟದ ಹತ್ತಿರ ನಿಂತು ಫೋಟೋ ತೆಗೆಸಿಕೊಂಡೆವು.

ವಾಷಿಂಗ್ಟನ್ ನಗರವನ್ನು ಸುತ್ತುತ್ತಾ ವೈಟ್‌ ಹೌಸನ್ನು ತಲುಪಿದೆವು. ನಾವು ಹೋಗಿದ್ದು, ಆಗಷ್ಟೇ ತಿಂಗಳಲ್ಲಿ, ಅಲ್ಲಿ ತುಂಬಾ ಬಿಸಿಲಿತ್ತು. ಬಿಸಿಲಲ್ಲಿ ನಡೆಯುವುದು ತುಂಬಾ ಕಷ್ಟವಾಗಿತ್ತು. ಆದರೂ ವೈಟ್‌ ಹೌಸ್ ನೋಡುವ ಖುಷಿಯಲ್ಲಿ ಎಲ್ಲರ ಜೊತೆ ಹೆಜ್ಜೆ ಹಾಕಿದೆ. ಅಮೇರಿಕಾ ಅಧ್ಯಕ್ಷರ ಅಧಿಕೃತ ವಾಸಸ್ಥಳವಾಗಿರುವ ವೈಟ್‌ ಹೌಸ್ ಅನ್ನು ಅತ್ಯಂತ ಸುಂದರ ವಿನ್ಯಾಸಗೊಳಿಸಿದಾತ ಜೇಮ್ಸ್ ಹೋಬಸ್. 1792 ರಿಂದ 1800 ಅವಧಿಯಲ್ಲಿ ಕಟ್ಟಲಾಗಿರುವ ಒಟ್ಟು 6 ಅಂತಸ್ತುಗಳನ್ನು ಹೊಂದಿದೆ. ಮತ್ತು 132 ಕೊಠಡಿಗಳನ್ನು 35 ಸ್ನಾನಗೃಹಗಳನ್ನು ಹೊಂದಿದ್ದು ಅತ್ಯಂತ ವಿಶಾಲವಾಗಿದೆ.

ವಿಶ್ವದ ಬಲಾಡ್ಯ ನಾಯಕ ವಾಸಿಸುವ ಈ ವೈಟ್‌ಹೌಸನಲ್ಲಿ ತೆಗೆದುಕೊಳ್ಳುವ ರಾಜಕೀಯ ಮತ್ತು ಆರ್ಥಿಕ ನಿರ್ಧಾರಗಳು ಪ್ರಪಂಚದಾದ್ಯಂತ ತನ್ನದೇ ಆದ ಪರಿಣಾಮ ಬೀರುತ್ತವೆ. ಅಲ್ಲಿ ಸಹ ನಾವು ನಿಂತು ಕೆಲವು ಫೋಟೋಗಳನ್ನು ತೆಗೆಸಿಕೊಂಡವು.

ಮುಂದೆ ನಾವು ಜಾಫರ್‌ಸನ್ ಮೆಮೋರಿಯಲ್‌ನತ್ತ ಸಾಗಿದೆವು. ಅಮೇರಿಕಾದ ಮೂರನೇ ಅಧ್ಯಕ್ಷರಾದ ಜಾಫರಸನ್ ಸ್ಮರಣೆಗಾಗಿ ನಿರ್ಮಿಸಿರುವ ಈ ಸ್ಮಾರಕ ಅತ್ಯಂತ ಸುಂದರವಾಗಿದೆ. ಪೋಟಮ್ಯಾಕ್ ನದಿಯ ದಡದಲ್ಲಿದೆ. ಈ ಸ್ಮಾರಕವನ್ನು 1939ರಲ್ಲಿ ಪ್ರಾರಂಭಿಸಿ 1947ರಲ್ಲಿ ಪೂರ್ಣಗೊಳಿಸಲಾಯಿತು. ಒಳಗಡೆ 19 ಅಡಿ ಎತ್ತರದ ಮತ್ತು 4336 ಕಿ.ಗ್ರಾಂ. ತಾಮ್ರದ ಲೋಹದಿಂದ ಮಾಡಿದ ಥಾಮಸ್ ಜಾಫರ್‌ಸನ್ನನ ಪ್ರತಿಮೆ ಇದೆ. ಸಾರಕದ ಒಳಭಾಗದ ಗೋಡೆಗಳ ಮೇಲೆ ಜಾಫರ್‌ನ್‌ರ ಬರಹಗಳಿಂದ ಆಯ್ದ ವಾಕ್ಯಗಳನ್ನು ಕೆತ್ತಲಾಗಿದೆ. ಇಲ್ಲಿಯ ವಾತಾವರಣ ತುಂಬಾ ಶಾಂತವಾಗಿದೆ.

ಅಲ್ಲಿಂದ ಸ್ವಲ್ಪ ನಡೆದು ಮುಂದೆ ಹೋದರೆ ಲಿಂಕನ್ ಮೆಮೋರಿಯಲ್ ಸಿಗುತ್ತದೆ. ಲಿಂಕನ್ ಒಳ್ಳೆಯ ಜನ ನಾಯಕ, 1809ರಲ್ಲಿ ಜನಿಸಿ 1865ರಲ್ಲಿ ಮರಣ ಹೊಂದಿದ ಲಿಂಕನ್ ಅಮೇರಿಕಾದ 16 ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿದ್ದ. ಸ್ವಾತಂತ್ರ್ಯವನ್ನು ಯಾರು ಪ್ರೀತಿಸುತ್ತಾರೋ ಅವರು ಲಿಂಕನ್‌ರನ್ನು ಪ್ರೀತಿಸುತ್ತಾರೆ. ಯಾಕೆಂದರೆ ಇವರು ಗುಲಾಮಗಿರಿಯನ್ನು ನಿರ್ನಾಮ ಮಾಡಿ ಸ್ವಾತಂತ್ರ್ಯದ ಮಹತ್ವವನ್ನು ಜಗತ್ತಿಗೆ ಸಾರಿದ ಧೀಮಂತ ನಾಯಕ.

ಶ್ವೇತ ವರ್ಣದ ಮಾರ್ಬಲ್‌ನಲ್ಲಿ ರಚಿಸಿರುವ 19 ಅಡಿ ಎತ್ತರದ ಲಿಂಕನ್‌ರ ಪ್ರತಿಮೆ ಸುಂದರವಾಗಿದೆ. ಇಲ್ಲಿ ಲಿಂಕನ್ನರು ಆರಾಮಾಗಿ ಕುಳಿತಿರುವಂತೆ ಚಿತ್ರಿಸಲಾಗಿದೆ.

ಅವರು ಜೀವಂತವಾಗಿ ಕುಳಿತಿದ್ದಾರೇನೋ ಎನಿಸುತ್ತಿತ್ತು. ಮೇಲೆ ಹೋಗಬೇಕಾದರೆ ಸುಮಾರು ಮೆಟ್ಟಿಲುಗಳನ್ನು ಏರಿ ಹೋಗಬೇಕಾಗುತ್ತದೆ. ಇಲ್ಲಿಂದ ಮುಂದುವರೆದು ಕೊರಿಯನ್ ವಾರ್ ವೆಟರನ್ಸ್ ಮೆಮೋರಿಯಲ್‌ಗೆ ಹೋದೆವು. ಸುಮಾರ ಎರಡೂವರೆ ಎಕರೆ ಪಾರ್ಕಿನಲ್ಲಿ ರೂಪಿಸಿರುವ ಈ ಸ್ಮಾರಕ ಕೊರಿಯಾ ಯುದ್ಧದಲ್ಲಿ ಮಡಿದ ವೀರ ಯೋಧರ ಸ್ಮರಣಾರ್ಥ ನಿರ್ಮಿಸಲಾಗಿದೆ. ಅಮೇರಿಕಾದ ಪಿತಾಮಹ ಎಂದು ಹೆಸರಾದ ಜಾರ್ಜ್ ವಾಷಿಂಗ್ಟನ್‌ನ್ನು ಫಸ್ಟ್ ಇನ್ ವಾರ್, ಫಸ್ಟ್ ಇನ್ ಎಂಡ್, ಫಸ್ಟ್ ಇನ್ ದ ಹಾರ್ಟ್ಸ್ ಆಫ್ ಹಿಸ್ ಕೌಂಟಿಮೆನ್ ಎಂದು ಬಣ್ಣಿಸಲಾಗಿದೆ. ಅಮೇರಿಕಾವನ್ನು ಬ್ರಿಟಿಷರ ದಾಸ್ಯದ ಸಂಕೋಲೆಗಳಿಂದ ಬಿಡಿಸಿದ ಕಮಾಂಡರ್ ಇನ್ ಚೀಫ್ ಆಗಿದ್ದ ವಾಷಿಂಗ್‌ಟನ್ ಅಮೇರಿಕಾದ ಸಂವಿಧಾನದ ರೂವಾರಿಯೂ ಕೂಡ. ಮ್ಯೂಸಿಯಂಗೆ ನಾವು ಹೋದೆವು. 1946 ರಲ್ಲಿ ಪ್ರಾರಂಭವಾದ ಏರ್ ಆ್ಯಂಡ್ ಸ್ಪೇಸ್ ಮ್ಯೂಸಿಯಂ ವಿಮಾನಗಳ ಐತಿಹಾಸಿಕ ಬೆಳವಣಿಗೆಯನ್ನು ಸಚಿತ್ರವಾಗಿ ವಿವರಿಸುತ್ತದೆ. ರೈಟ್ ಸೋದರರು ಬಳಸಿದ್ದ ವಿಮಾನಗಳಿಂದ ಹಿಡಿದು ಇಂದಿನವರೆಗೆ ವಿಮಾನಗಳು ಅಭಿವೃದ್ಧಿಯಾಗುತ್ತಾ ಸಾಗಿ ಬಂದ ಹಾದಿಯನ್ನು ಸೊಗಸಾಗಿ ಪ್ರದರ್ಶನಕ್ಕೆ ಇಡಲಾಗಿದೆ. ಈ ಪರಂಪರೆಯನ್ನು ಕಾಪಾಡಿಕೊಂಡು ಅದರ ಮೂಲಕ ಒಂದು ತಲೆಮಾರಿನ ಜ್ಞಾನವನ್ನು ಮತ್ತು ಸಾಧನೆಯನ್ನು ಮುಂದಿನ ತಲೆಮಾರಿಗೆ ವರ್ಗಾಯಿಸುವುದರಲ್ಲಿ ಅಮೇರಿಕನ್ನರಿಗೆ ಇರುವ ಕಾಳಜಿ ಅದ್ಭುತವಾದದ್ದು. ಅಲ್ಲಿ ಸ್ಪೇಸ್ ಕುರಿತು 30 ನಿಮಿಷಗಳ ಚಲನಚಿತ್ರವನ್ನು ತೋರಿಸುತ್ತಾರೆ. ರಾಷ್ಟ್ರೀಯ ವಾಯು ಮತ್ತು ಬಾಹ್ಯಾಕಾಶ ವಸ್ತು ಸಂಗ್ರಹಾಲಯವನ್ನು ವಿರಾಮವಾಗಿ ನಿಂತು ನೋಡಲು ಇಡೀ ದಿವಸ ಬೇಕು. ಒಂದು ವಿಶಾಲವಾದ ಹಾಲ್‌ನಲ್ಲಿ ವಿಮಾನಗಳನ್ನು ಪ್ರದರ್ಶಿಸಿರುವ ರೀತಿ ನನಗೆ ತುಂಬಾ ಇಷ್ಟವಾಯಿತು. ಕೆಲವು ವಿಮಾನಗಳನ್ನು ನೇತು ಹಾಕಲಾಗಿದೆ. ವೈವಿಧ್ಯಮಯವಾದ ವಿಮಾನಗಳ ಇತಿಹಾಸ ಪ್ರದರ್ಶನಗಳದ್ದೇ ಇನ್ನೊಂದು ಭಾಗ.

ನಮ್ಮ ಗೈಡ್ ಲೀ ಮತ್ತು ಡೀನ್ ನಮ್ಮನ್ನು ನ್ಯಾಶನಲ್ ಮ್ಯೂಸಿಯಂ ಆಫ್ ಅಮೆರಿಕನ್ ಇಂಡಿಯನ್ ಮ್ಯೂಸಿಯಂಗೆ ಕರೆದುಕೊಂಡು ಹೋದರು. ಇದು ಸೆಪ್ಟೆಂಬರ್ 2004 ರಲ್ಲಿ ಉದ್ಘಾಟನೆಗೊಂಡಿತಂತೆ, ನ್ಯಾಶನಲ್ ಮ್ಯೂಸಿಯಂ ಆಫ್ ಅಮೆರಿಕನ್ ಇಂಡಿಯನ್ ಇತಿಹಾಸದ ರಕ್ಷಣೆ ಸ್ಥಳೀಯರ ಅಮೇರಿಕನ್ನರ ಹಾಗೂ ಪಶ್ಚಿಮ ಗೋಳಾರ್ಧದ ಸಮಕಾಲೀನ ಇತಿಹಾಸ ಹಾಗೂ ಸಂಸ್ಕೃತಿಗಳ ಅಧ್ಯಯನಕ್ಕಾಗಿ ಅರ್ಪಣೆಗೊಂಡಿದೆ. ಸ್ಥಳೀಯ ಅಮೇರಿಕನ್ ಶಿಲ್ಪಿಗಳ ತಂಡ ಈ ಕಟ್ಟಡ ವಿನ್ಯಾಸವನ್ನು ಸಿದ್ಧಪಡಿಸಿದೆ. ಬಹುಶಃ ಈ ಕಟ್ಟಡವು ಹೆಚ್ಚು ಪ್ರಸಿದ್ಧವಾಗಿದ್ದು ರಾಷ್ಟ್ರದ ದಾಖಲೆಗಳನ್ನು ಸ್ವಾತಂತ್ರ್ಯದ ಘೋಷಣೆ ರಾಷ್ಟ್ರದ ಸಂವಿಧಾನ ಹಕ್ಕುಗಳ ಮಸೂದೆ ಇತ್ಯಾದಿಗಳನ್ನು ಒಂದೆಡೆ ನೆಲೆಗೊಳಿಸಿ ಪ್ರದರ್ಶಿಸುವ ಒಂದು ಪವಿತ್ರ ಮಂದಿರವಾಗಿದೆ. ಅಲ್ಲಿ ಒಂದೊಂದು ಕೋಣೆಯಲ್ಲಿ ಒಂದೊಂದು ರೀತಿಯ ಹಳೆಯ ಸಾಮಾನುಗಳನ್ನು ಇಡಲಾಗಿತ್ತು. ಪೂರ್ವಜರು ಉಪಯೋಗಿಸಿದ ಸಾಮಾನುಗಳು, ಆಯುಧಗಳು, ಆಭರಣಗಳು, ನಾನಾ ರೀತಿಯ ವಸ್ತುಗಳನ್ನು ಇಟ್ಟಿದ್ದರು. ಕೆಲವು ರೂಮುಗಳಲ್ಲಿನ ಪೇಂಟಿಂಗ್ ಕಲಾಕೃತಿಗಳು ಅದ್ಭುತವಾಗಿದ್ದವು. ನಿಜ ಹೇಳಬೇಕೆಂದರೆ ನನಗೆ ಎಲ್ಲಾ ಅಂತಸ್ತುಗಳನ್ನು ಹತ್ತಿ ನೋಡಲು ಸಾಧ್ಯವಾಗಲಿಲ್ಲ. ತುಂಬಾ ಸುಸ್ತಾಗಿಹೋಗಿತ್ತು. ಹತ್ತಿ ಇಳಿದು ಕಾಲುಗಳು ತುಂಬಾ ನೋಯುತ್ತಿದ್ದವು. ಅದಕ್ಕೆ ಹಾಗೆ ಬಂದು ಬಸ್ಸಿನಲ್ಲಿ ಕುಳಿತುಕೊಂಡೆವು. ಇದೇ ವಾಷಿಂಗ್‌ಟನ್‌ನಲ್ಲಿ 19 ಮ್ಯೂಸಿಯಂಗಳಿವೆಯಂತೆ. ಸಮಯದ ಅಭಾವದಿಂದ ನಮಗೆ ಎಲ್ಲವನ್ನೂ ನೋಡಲು ಆಗಲಿಲ್ಲ.

ವಾಷಿಂಗ್‌ಟನ್‌ನಲ್ಲಿ ನೋಡಲೇಬೇಕಾದ ಪ್ರಮುಖ ಸ್ಥಳಗಳನ್ನು ನೋಡಿಯಾಯ್ತು. ನಂತರ ಪೋಟೋಮ್ಯಾಕ್ ನದಿಯಲ್ಲಿ ದೋಣಿಯಲ್ಲಿ ವಿಹಾರಕ್ಕೆಂದು ಹೊರಟೆವು. ದೋಣಿಯ ಮೂಲಕ ಸಾಗುತ್ತಾ ವಾಷಿಂಗ್ಟನ್ ನಗರವನ್ನು ನೋಡುವುದು ಇದೆಯಲ್ಲಾ ಅದೊಂದು ಸುಂದರ ಅನುಭವ. ನಾವು ಪ್ರತಿಯೊಂದಕ್ಕೂ ಶುಲ್ಕವನ್ನು ಕೊಡಬೇಕಿತ್ತು. ಮೊದಲೇ ಗೈಡ್‌ಗಳು ನಮ್ಮ ಬಳಿಯಿಂದ ಡಾಲರ್ ಸಂಗ್ರಹಿಸಿ ಸಾಮೂಹಿಕವಾಗಿ ಟಿಕೇಟ್ ಪಡೆದುಕೊಳ್ಳುತ್ತಿದ್ದರು. ಪೋಟೋಮ್ಯಾಕ್ಸ್ ನದಿಯು ವಿಶಾಲವಾಗಿ ಪ್ರಶಾಂತವಾಗಿತ್ತು. ದೋಣಿ ಮುಂದೆ ಸಾಗಿದಂತೆಲ್ಲಾ ಭವ್ಯವಾದ ವಾಷಿಂಗ್‌ಟನ್‌ ನಗರ ಸಂಜೆಯ ಹೊತ್ತಿನಲ್ಲಿ ತುಂಬಾ ಚೆನ್ನಾಗಿ ಕಾಣುತ್ತಿತ್ತು. ನೀರಿನಲ್ಲಿ ಮತ್ತು ಅನೇಕ ದೋಣಿಗಳಲ್ಲಿ ಪ್ರವಾಸಿಗರು ವಿಹರಿಸುತ್ತಿದ್ದರು. ನದಿಯಲ್ಲಿ ದೋಣಿಯಲ್ಲಿ ವಿಹರಿಸುತ್ತಿರಬೇಕಾದರೆ ವಾಷಿಂಗ್‌ಟನ್ ವಿಮಾನ ನಿಲ್ದಾಣದ ನೋಟ ಕಂಡುಬರುತ್ತಿತ್ತು. ಅಲ್ಲಿ ಬಂದಿಳಿಯುತ್ತಿದ್ದ ವಿಮಾನಗಳು ಅಲ್ಲಿಂದ ಹೊರಡುತ್ತಿದ್ದ ವಿಮಾನಗಳಿಗೂ ಲೆಕ್ಕವಿರಲಿಲ್ಲ. ಬಹುಶಃ 2-3 ನಿಮಿಷಗಳಿಗೊಮ್ಮೆ ವಿಮಾನ ಬಂದಿಳಿಯುತ್ತಿತ್ತು. ಅಷ್ಟು ಬಿಜಿಯಾಗಿರುವ ವಿಮಾನ ನಿಲ್ದಾಣ ಆಕಾಶದತ್ತ ತಲೆ ಎತ್ತಿ ನೋಡಿದರೆ 3 ರಿಂದ 4 ವಿಮಾನಗಳು ಕೆಳಗಿಳಿಯಲು ಅನುಮತಿಗಾಗಿ ಕಾಯುತ್ತಿದ್ದವು. ಸಂಜೆಯ ಸಮಯವಾದ್ದರಿಂದ ತಂಪಾದ ಗಾಳಿ ಬೀಸುತ್ತಿತ್ತು. ಅದರಿಂದ ನಮ್ಮ ದೋಣಿ ವಿಹಾರ ತುಂಬಾ ಆನಂದಮಯವಾಗಿತ್ತು. ನಾವು ವಿಹಾರ ಮುಗಿಸಿ ಮೆರಿಲೆಂಡ್‌ಗೆ ಬಂದು ಅಲ್ಲಿ ಶೆರಟಾನ್‌ ಹೊಟೇಲ್‌ನಲ್ಲಿ ಉಳಿದುಕೊಂಡೆವು. ಶೆರಟಾನ್ ಹೊಟೇಲ್ ಮೇರಿಲೆಂಡಿನ ಬಾಲ್ಟಿಮೋರನಲ್ಲಿದೆ.

ಅಂದು ನಮಗೆ ತುಂಬಾ ಸುಸ್ತಾದ್ದರಿಂದ ನಾವು ಗಾಢನಿದ್ದೆಗೆ ಜಾರಿದ್ದೆವು, ಸುಮಾರು 12 ಗಂಟೆ ಸುಮಾರಿಗೆ ಫೈರ್ ಅಲಾರ್ಮ ಜೋರಾಗಿ ಕಿರುಚಿಕೊಳ್ಳುತ್ತಿತ್ತು. “ಕೂಡಲೇ ಹೊರಗೆ ಹೋಗಿ ಯಾರೂ ಲಿಫ್ಟ್ ಉಪಯೋಗಿಸಬೇಡಿರಿ ಎಮರ್‌ಜೆನ್ಸಿ ಎಕ್ಸಿಟ್‌ನಿಂದ (emergency exit) ಕೂಡಲೇ ಹೊರಗೆ ಹೋಗಿ ಎಂದು ಒಂದೇ ಸಮನೆ ಹೇಳುತ್ತಲೇ ಇತ್ತು. ನಮಗಂತೂ ಏನಾಗುತ್ತಿದೆ ಅಂತಾನೇ ಗೊತ್ತಾಗಲಿಲ್ಲ. ಆದರೂ ಏನೋ ಆಗಿದೆ ಎಂದು ಬಾಗಿಲು ತೆರೆದು ನೋಡಿದರೆ ಎಲ್ಲರೂ ಉಟ್ಟ ಬಟ್ಟೆಯಲ್ಲೇ ರೂಮಿನಿಂದ ಹೊರಗೆ ಬಂದು ಕೆಳಗಡೆ ಹೋಗುತ್ತಿದ್ದರು. ನಾವು ಸಹ ಚಪ್ಪಲಿಯನ್ನೂ ಹಾಕದೆ ಹೊರಗೆ ಓಡಿ ಬಂದೆವು. ನಾವು ಇದ್ದದ್ದು 6ನೇ ಅಂತಸ್ತಿನಲ್ಲಿ ಲಿಫ್ಟ್ ಉಪಯೋಗಿಸದೇ ಕೆಳಗಡೆ ಹೇಗೆ ಹೋಗುವುದೆಂದು ನಮಗೆ ತಿಳಿಯಲಿಲ್ಲ ಗಾಬರಿಯಾಯಿತು. ಎಮರ್‌ಜೆನ್ಸಿ ಎಕ್ಸಿಟ್ (emergency exit) ಎಲ್ಲಿದೆ ಎಂದು ಗೊತ್ತಾಗಲಿಲ್ಲ. ಆದರೂ ಧೈರ್ಯ ಮಾಡಿ ದಾರಿ ಕಂಡ ಕಡೆ ಮೆಟ್ಟಿಲು ಇಳಿದು
ಕೆಳಗಡೆ ಓಡಿದೆವು. ಪುಣ್ಯಕ್ಕೆ ಅದು ಸರಿಯಾದ ದಾರಿ ಆಗಿತ್ತು. ಮೆಟ್ಟಿಲಿಳಿದು ಕೆಳಗಡೆ ಬಂದು ಮುಟ್ಟಿದೆವು. ಅಷ್ಟರಲ್ಲಿ ಆಗಲೇ ಫೈಯರ್ ಎಂಜಿನ್ನು ಪೊಲೀಸ ಗಾಡಿಗಳು ಬಂದು ನಿಂತಿದ್ದವು. ಪೊಲೀಸರು ಹೊಟೇಲಿನೊಳಗೆ ಎಲ್ಲಿಂದ ಹೊಗೆ ಬರುತ್ತದೆ ಎಂದು ಹುಡುಕುತ್ತಿದ್ದರು. ಎಲ್ಲ ಪ್ರವಾಸಿಗರು ಉಟ್ಟ ಬಟ್ಟೆಯಲ್ಲೇ ಚಪ್ಪಲಿ ಸಹ ಇಲ್ಲದೇ ಕೆಳಗಡೆ ಬಂದು ನಿಂತಿದ್ದರು. ಎಲ್ಲರ ಮುಖದಲ್ಲೂ ಗಾಬರಿ ಎದ್ದು ಕಾಣುತ್ತಿತ್ತು. ಆಗ ಚೆಕ್ ಮಾಡಲು ಮೇಲೆ ಹೋದ ಪೊಲೀಸರು ಕೆಳಗೆ ಬಂದರು. ನಮ್ಮ ಗೈಡ್ ಡೀನನ್ನು ಏನಾಯಿತೆಂದು ವಿಚಾರಿಸಿದಾಗ ಅವನು ನಮ್ಮಲ್ಲಿ ತೊಂದರೆ ಕೊಟ್ಟಿದ್ದಕ್ಕಾಗಿ ಸಾರಿ ಕೇಳುತ್ತಿದ್ದನು. ವಿಷಯ ಏನೆಂದರೆ ಯಾರೋ ಸಿಗರೇಟ್ ಸೇದುವವರು ಸ್ಟೋಕಿಂಗ್ ಜೋನ್ ಬಿಟ್ಟು ಬೇರೆ ಕಡೆ ಸಿಗರೇಟು ಸೇದಿದ್ದರಿಂದ ಅಲ್ಲಿ ಹೊಗೆ ಕಾಣಿಸಿಕೊಂಡು ಫೈಯರ್ ಅಲಾರಂ ಆಗಿದೆ ಎಂದು ಹೇಳಿದನು. ನಾವು ಸಿಗರೇಟ ಸೇದಿದವರನ್ನು ಶಪಿಸುತ್ತಾ ಮೇಲೆ ಹೋಗಿ ಮಲಗಿಕೊಂಡೆವು. ಮಜಾ ಎಂದರೆ ನಮ್ಮ ಜೊತೆ ಪ್ರವಾಸಿಗರಾದ ಮೂರು ಇರಾನ ಹುಡುಗಿಯರಿಗೆ ಮಾತ್ರ ಇದು ಗೊತ್ತೇ ಆಗಲಿಲ್ಲ. ಆರಾಮ ಆಗಿ ಮಲಗಿದ್ದರು. ಬೆಳಿಗ್ಗೆ ಸೇರಿದಾಗ ನಾವು ಹೇಳಿದ ಮೇಲೆಯೇ ಅವರಿಗೆ ಗೊತ್ತಾಗಿದ್ದು. ಹೆಚ್ಚಾಗಿ ಅವರು ಡ್ರಿಂಕ್ಸ್ ಮಾಡಿ ಮಲಗಿರಬೇಕು. ಹೀಗಾಗಿ ಅವರಿಗೆ ಏನೂ ಗೊತ್ತಾಗಲಿಲ್ಲ.

By-ಶಾಲಿನಿ ಗಾಂವಕರ್

ಮುಂದಿನ ಭಾಗ ಓದಿ…

Leave a Comment

Comments

No comments yet. Why don’t you start the discussion?

    Leave a Reply