ಅಕ್ಬರ್ ಬೀರಬಲ್ ಕಥೆಗಳು, ಮಕ್ಕಳಿಗೆ ನೈತಿಕ ಪಾಠ-3

ಅಕ್ಬರ್ ಬೀರಬಲ್ ಕಥೆಗಳು, ಮಕ್ಕಳಿಗೆ ನೈತಿಕ ಪಾಠ-3

3.ವೃತಿಷಜತಿ ಪದಾರ್ಥಾನಾಂತರಃ ಕೋಪ ಹೇತುಃ

ಅಕಬರ ಬೀರಬಲ್ಲರಿಗೂ ಪೂರ್ವ ಜನ್ಮದ ಸ್ಮರಣೆ ಇತ್ತೆಂದು ಹೇಳಿ ಆ ಬಗ್ಗೆ ಒಂದು ಕಥೆಯನ್ನು ಹೇಳುತ್ತಾರೆ. ಅದು ಕೇವಲ ಸ್ವಾರಸ್ಯಮಯವಾದುದರಿಂದ ಇಲ್ಲಿ ನಾವು ಕೊಟ್ಟಿದ್ದೇವೆ.

15ನೇ ಶತಮಾನದಲ್ಲಿ ಬೈಜರ ಎಂಬ ಊರಲ್ಲಿ ಸುಶರ್ಮನೆಂಬ ಒಬ್ಬ ಸದಾಚಾರ ಸಾತ್ವಿಕ ಬ್ರಾಹ್ಮಣನಿದ್ದನು. ಬಡತನದ ಗಾಣದಲ್ಲಿ ಸಿಕ್ಕು ಅವನದು ಇಡೀ ಜೀವನವೇ ಜಿಬ್ಬೆಯಾಗಿ ಹೋಗಿತ್ತು. ದುಡ್ಡನ್ನು ಕಂಡೇನೋ ಇಲ್ಲವೋ ಎನಿಸಿತ್ತು. ಅವನಿಗೆ ಒಬ್ಬ ತಳವಾರ ಜಾತಿಯ ಸುದಾಸನೆಂಬ ಗೆಳೆಯನಿದ್ದನು. ಇವರ ಸ್ಥಿತಿಯೂ ಹೀಗೆಯೇ. ಒಂದು ದಿನ ಸುಶರ್ಮನು ಬಹಳ ಯೋಚಿಸಿ ಒಂದು ನಿರ್ಣಯಕ್ಕೆ ಒಂದು ತನ್ನ ಗೆಳೆಯನಿಗೆ ಅದನ್ನು ಅರುಹಿದನು. “ಸುದ್ಧಾಸರೇ
ಸಾಕು ಈ ಬಡತನದ ಜೀವನ. ಮುಂದಿನ ಜನ್ಮದಲ್ಲಾದರೂ ನನ್ನನ್ನು ಅರಸನನ್ನಾಗಿ ಮಾಡು ದೇವರೇ ಎಂದು ತಪಶ್ಚರ್ಯ ಮಾಡಬೇಕೆಂದು ಆಶೆಯಿದೆ. ಅದಕ್ಕಾಗಿ ನಾನು ಪ್ರಯಾಗಕ್ಕೆ ಹೋಗುವವನಿದ್ದೇನೆ.

“ಆಗಲೀ ಸ್ವಾಮೀ, ಎಲ್ಲಿ ತಾವಿರುವಿರೋ ನಾನು ಅಲ್ಲಿಯೇ ತಪಶ್ಚಯ್ಯ ಕೈಗೊಳ್ಳವೆನು. ನೀವು ಅರಸರಾಗಿರಿ. ನಾನು ನಿಮ್ಮ ಗೆಳೆಯನಾಗಲು ದೇವರನ್ನು ಬೇಡುವೆನು ಎಂದು ಹೊರಡೋಣ” ಎಂದನು.

ಸರಿ ಈರ್ವರೂ ಸರ್ವ ಸನ್ನದ್ಧರಾಗಿ ಹೊರಟರು. ದಾರಿ ನಡೆದು ಕಡೆಗೊಮ್ಮೆ ಪ್ರಯಾಗಕ್ಕೆ ಬಂದರು. ಅಲ್ಲಿ ಇಪ್ಪತ್ನಾಲ್ಕು ವರುಷಗಳವರೆಗೆ ಅಖಂಡ ತಪಶ್ಚರ್ಯ ಕೈಕೊಂಡರು. ದೇವರು ಪ್ರತ್ಯಕ್ಷನಾಗಲಿಲ್ಲ. ಕಡೆಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧರಾದರು. ಆದರೆ ಆತ್ಮಹತ್ಯೆಯು ಮಹಾಪಾಪ! ಮಾಡಬೇಕೇನು? ಯಾರೋ ಓರ್ವ ತಪಸ್ವಿಯು ಹೇಳಿದನು. ತ್ರಿವೇಣಿ ಸಂಗಮದಲ್ಲಿ ಮರಣ ಹೊಂದಿದರೆ ಪಾಪ ತಟ್ಟದೆಂದೂ, ಇಷ್ಟಾರ್ಥ ಫಲಿಸುವದೆಂದೂ ಹಾಗೆ ಪುರಾಣದಲ್ಲಿ ಹೇಳಿದೆಯೆಂದೂ ಇವರೀರ್ವರಿಗೂ ಮನವರಿಕೆ ಮಾಡಿಕೊಟ್ಟನು. ಸುಶರ್ಮ ಸುದಾಸರು ತ್ರಿವೇಣಿ ಸಂಗಮದಲ್ಲಿ ಹಾರಿಕೊಂಡು ಪ್ರಾಣಬಿಟ್ಟರು. ಅವರೇ ಅಕಬರ ಬೀರಬಲ್ಲರಾಗಿ ಜನಿಸಿದರೆಂದು ಕಥೆಯಿದೆ. ಈ ಕಥೆಗೆ ಸಮರ್ಥನೆಯು ಸ್ವಾರಸ್ಯವಾಗಿದೆ.

ಅರಮನೆಯಲ್ಲಿ ಒಂದು ದಿನ ಅಕಬರನು ಬೀರಬಲ್ಲನ ಸಂಗಡ ಹರಟೆ ಹೊಡೆಯುತ್ತಿರುವಾಗ ತಮ್ಮ ಪೂರ್ವ ಜನ್ಮದ ನೆನಪಾಯಿತು.’ ಆಗ ಒಂದು ದಿನ ಬೈಜರದಲ್ಲಿ ತಾನು ಬಡತನದಿಂದ ಬಳಲುತ್ತಿದ್ದಾಗ ಓರ್ವ ಯುವಕನು ತಮ್ಮನ್ನು ಕರೆದು ಊಟ-ಉಪಚಾರಗಳಿಂದ ಸತ್ಕರಿಸಿ ಎಂಟು ದಿನ ತನ್ನ ಮನೆಯಲ್ಲಿಟ್ಟುಕೊಂಡಿದ್ದು ಅಕಬರನು ಬೀರಬಲ್ಲನಿಗೆ ಹೇಳಿದನು.

“ಹೌದು, ಜೀಯಾ, ಆ ಯುವಕನು ಈಗ ಮುದುಕನಾಗಿ ಸತ್ತಿರಬಹುದು.

ಅದ್ದೇಗೆ? ಕನಿಷ್ಟ ಪಕ್ಷದಲ್ಲಿ ನೋಡಿಯಾದರೂ ಬರೋಣ, ನಡೆ. ನಾನು ಅವನ ಋಣದಲ್ಲಿದ್ದೇನೆ. ಆ ಋಣ ತೀರಿಸಬೇಕು. ಒಂದು ವೇಳೆ, ಅವನು ಸತ್ತಿದ್ದರೆ ಅವನ ಮಕ್ಕಳಾದರೂ ಇರಬೇಕು. ಅವರಿಗೆ ದುಡ್ಡು ಕೊಟ್ಟು ಬರೋಣ.”

“ಆಗಲಿ, ಆದರೆ ಈ ಪೋಷಾಕು ಬೇಡ. ಹೋದ ಜನ್ಮದ ಪೋಷಾಕನ್ನೇ ಧರಿಸೋಣ ಅಂದರೆ ಅವರಿಗೆ ನಮ್ಮ ಗುರುತು ಸಿಕ್ಕಿತು.”

ಅಕಬರನು ಬ್ರಾಹ್ಮಣನ ಪೋಷಾಕನ್ನು, ಬೀರಬಲ್ಲನು ತಳವಾರನ ಪೋಷಾಕನ್ನು ಧರಿಸಿ ಬೈಜರಹಳ್ಳಿಗೆ ಬಂದರು. ಅಲ್ಲಿ ತನಗೆ ಊಟ ಹಾಕಿದ ಯುವಕನ ಮನೆಯನ್ನು ಅಕಬರನು ಗುರುತಿಸಿದನು. “ಬೀರಬಲ್ಲ, ಇದೇ ನೋಡು ಆ ಮನೆ” ಎನ್ನುತ್ತ ಒಳಗೆ ಹೋದನು. ಬೀರಬಲ್ಲನು ಹಿಂಬಾಲಿಸಿದನು. ಯುವಕನು ಸತ್ತಿರಲಿಲ್ಲ. ಹಣ್ಣು-ಹಣ್ಣು ಮುದುಕನಾಗಿದ್ದನು. ಇವರನ್ನು ಕಂಡಕೂಡಲೇ “ಯಾರು, ಸುಶರ್ಮ, ಸುದಾಸರೇನು? ಇಷ್ಟು ದಿನ ಎಲ್ಲಿ ಹೋಗಿದ್ದಿರಪ್ಪಾ? ನಿಮ್ಮ ಪ್ರಕೃತಿ ಎಷ್ಟು ಸುಧಾರಿಸಿದೆ?” ಎಂದನು.

ಅಕ ಬರ-ಬೀರ ಬಲ್ಲರಿಗೆ ಹಿಡಿಸಲಾರದಷ್ಟು ಆನಂದವಾದರೂ ಪರಮಾಶ್ಚರ್ಯವಾಯಿತು. ತಮ್ಮ ಪೂರ್ವ ಜನ್ಮದ ಸ್ಮರಣೆಯು ನಿಜವೆಂದು ನಂಬಿದರು. ಹೆಚ್ಚಿಗೆ ಏನೂ ಹೇಳಿಲ್ಲ. ಅಕಬರನೇ ನುಡಿದನು. “ಆಗ ಒಂದಾದೊಂದು ಕಾಲದಲ್ಲಿ ನಾವು ಬಳಲಿ ನಿಮ್ಮಲ್ಲಿಗೆ ಬಂದಾಗ ನೀವು ನಮ್ಮಿಬ್ಬರಿಗೂ ಆದರ ತೋರಿ, ಎಂಟು ದಿನ ಮನೆಯಲ್ಲಿಟ್ಟುಕೊಂಡು ಊಟ ಹಾಕಿದ ಋಣವನ್ನು ಇಂದು ತೀರಿಸಲು ಬಂದಿದ್ದೇವೆ. ದೇವರ ದಯದಿಂದ ನನಗೆ ತುಸುಧನ ಸಂಪಾದನೆಯಾಗಿದೆ. ಇಗೋ ತೆಗೆದುಕೊಳ್ಳಿರಿ” ಎಂದು ಒಂದು ಸಾವಿರ ಮೊಹರನ್ನು ಕೊಟ್ಟನು.

ಮುದುಕನ ಪರಿಸ್ಥಿತಿಯು ಈಗ ತೀರ ಹದಗೆಟ್ಟಿತ್ತು. ಮಕ್ಕಳು ಅವಿವೇಕಿಗಳಾದುದರಿಂದ ಮನೆತನ ಸಾಗುವದೇ ದುಸ್ತರವಿತ್ತು. ಆಗ ಈ ದುಡ್ಡನ್ನು ನೋಡಿ ಮುದುಕನಿಗೆ ಹೊರಸೂಸುವಷ್ಟು ಸಂತೋಷವಾಯಿತು. ಮೇಲಾಗಿ ಜನ್ಮದಲ್ಲಿ ಸಾವಿರ ಮೊಹರನ್ನು ಅವನು ಕಂಡಿರಲಿಲ್ಲ. ಆ ದುಡ್ಡಿನ ರಾಶಿಯನ್ನು ಎದುರಿಗೆ ಇಟ್ಟುಕೊಂಡು “ನಾನು ಧನ್ಯನಾದೆ. ನಾನು ಧನ್ಯನಾದೆ’” ಎಂದೆನ್ನುತ್ತ ನಗತೊಡಗಿದನು. ನಗುನಗುತ್ತಲೇ ಹರುಷವಾಯುವಿನಿಂದ ಪೀಡಿತನಾಗಿ ಉರುಳಾಡಿ ಎಚ್ಚರತಪ್ಪಿ ಕೂಡಲೇ ಮೃತಪಟ್ಟನು. ಅದೇ ದುಡ್ಡಿನಲ್ಲಿ ಅವನ ಅಂತ್ಯಸಂಸ್ಕಾರ ಮೊದಲಾದವುಗಳಾದವು. ಅಕಬರ ಬೀರಬಲ್ಲರು ತಿರುಗಿ ಊರಿಗೆ ಬಂದರು.

ಮುಂದಿನ ಭಾಗ ಓದಿ…

Leave a Comment

Comments

No comments yet. Why don’t you start the discussion?

    Leave a Reply