ಬೀರಬಲ್ಲನ ಕಥೆಗಳು
ಬೀರಬಲ್ಲನು 1518ರಲ್ಲಿ ಕಾಣೋ ಎಂಬ ಗ್ರಾಮದಲ್ಲಿ ಹುಟ್ಟಿದನು. ಇದು ಉತ್ತರ ಹಿಂದೂಸ್ತಾನದಲ್ಲಿ ವಾಯುವ್ಯ ಪ್ರಾಂತದಲ್ಲಿ ಯಮುನಾ ನದಿಯ ದಂಡೆಯ ಮೇಲಿದೆ. ಇವನ ಹೆಸರು ‘ಮಹೇಶ ದಾಸ’ ಎಂದಿತ್ತು. ಇವನು ಬ್ರಾಹ್ಮಣನು. ಸ್ವತಃ ಕವಿಯಿದ್ದು ಅನೇಕ ಕವಿತೆಗಳನ್ನು ಬರೆದಿದ್ದಾನೆ. ಆ ಕಾಲ ದಲ್ಲಿ ಕವಿತೆ ಮುಗಿಯುವಾಗ ತಮ್ಮ ಅಥವಾ ತಮ್ಮ ಇಷ್ಟದೇವತೆಯ ಮುದ್ರಿಕೆ ಹಾಕುವ ಪರಿಪಾಠವಿತ್ತು. ಬೀರಬಲ್ಲನು “ಬ್ರಹ್ಮಲಿಖಾ” ಎಂದು ಮುದ್ರಿಕೆಯನ್ನು ಹಾಕುತ್ತಿದ್ದನು. ಇವನು ಸಂಸ್ಕೃತದಲ್ಲಿ ಅಗಾಧ ಪಾಂಡಿತಯ ದೊರಕಿದ್ದನು. ವೇದಶೃತಿ-ಸ್ಕೃತಿಗಳ ಹೆಚ್ಚಳವನ್ನು ಪರ್ಯಾಯದಿಂದ ಹೇಳಿ ಅಕ್ಟರನಿಗೆ ಬ್ರಾಹ್ಮಣರು ಭೂಸುರರೆಂದು ಆಗಾಗ ಮನವರಿಕೆ ಮಾಡಿಕೊಡುತ್ತಿದ್ದನು.
ಮಹೇಶದಾಸನು ಅಕ್ಟರನ ಕೂಡ ರಣಾಂಗಕ್ಕೆ ಹೋದಾಗ ಅಲ್ಲಿ ಕಲಿತನದಿಂದ ಕಾದಾಡಿದ್ದಕ್ಕಾಗಿ ಅಕಬರನು ಸಂತುಷ್ಟನಾಗಿ ಇವನಿಗೆ ‘ವೀರವರ’ ಎಂಬ ಪದವಿಯನ್ನು ದಯಪಾಲಿಸಿದನು. ಬಂಗಾಲದಲ್ಲಿ ‘ವ’ ಕಾರಕ್ಕೆ ‘ಬ’ ಕಾರವನ್ನು ಉಪಯೋಗಿಸುವ ಪದ್ಧತಿ ಇದೆ. ಆದುದರಿಂದ ‘ವೀರವರೆ’ನು ‘ಬೀರಬರ’ ನಾದನು. ಬೀರಬರನು ಬೀರಬಲ್ಲನಾದುದು ಹೇಗೆಂಬುದು ಮಾತ್ರ ನಮಗೆ ತಿಳಿದು ಬಂದಿಲ್ಲ.
ಬೀರಬಲ್ಲನ ತಂದೆಯ ಹೆಸರು ತಿಳಿದಿಲ್ಲ; ತಾಯಿಯ ಹೆಸರು ‘ಕಾಳಿ ದೇವಿ’ ಬಹಳ ಬಡ ಮನೆತನದಲ್ಲಿ ಬೀರಬಲ್ಲನು ಹುಟ್ಟಿದನು. ವಿದ್ಯಾಭ್ಯಾಸದ ವಿಷಯಕ್ಕೆ ನಿಶ್ಚಿತ ಅಭಿಪ್ರಾಯಗಳಿಲ್ಲ. ಅವನು ಹಿಂದಿ; ಫಾರ್ಸಿ, ಸಕ್ಕದ ಭಾಷೆಗಳಲ್ಲಿ ಪಾಂಡಿತ್ಯ ದೊರಕಿದ್ದನು. ಇವನು ಚಿಕ್ಕಂದಿನಲ್ಲಿ ಕಾಶಿಯಲ್ಲಿ ನೆಲೆಸಿ ಸಂಸ್ಕೃತಾಭ್ಯಾಸ ಮಾಡಿದನು.ಸ್ವತಃ ಬೀರಬಲ್ಲನು ಕಪ್ಪು ಇದ್ದನು. ಇವರ ಹೆಂಡತಿ ಕಪ್ಪು, ಆದರೆ ಮಹಾಸಾಧ್ವ, ಮಹಾಪತಿವ್ರತೆ, ಇವರಿಗೆ ಇಬ್ಬರು ಗಂಡು ಮಕ್ಕಳೂ ಒಬ್ಬಳು ಹೆಣ್ಣು ಮಗಳೂ ಹೀಗೆ ಮೂವರು ಮಕ್ಕಳಿದ್ದರು. ಇವನ ಮುಂದಿನ ಪೀಳಿಗೆಯ ಬಗ್ಗೆ ಏನೂ ತಿಳಿದು ಬಂದಿಲ್ಲ.
ಇನ್ನು ಅಕಬರ ಬೀರಬಲ್ಲರ ಪರಿಚಯದ ಬಗ್ಗೆ ಅನೇಕರು ಅನೇಕ ಕಥೆಗಳನ್ನು ಹೇಳುತ್ತಾರೆ. ಅವುಗಳೆಲ್ಲವನ್ನೂ ನೋಡಲಾಗಿ ನಮಗೆ ಒಂದು ಕಥೆ ನಿಜವಿರಬಹುದೆಂದು ಅನಿಸಿದ್ದರಿಂದ ಅದನ್ನು ಇಲ್ಲಿ ಹೇಳುವೆನು ಮಹೇಶ (ಬೀರಬಲ್ಲ)ನ ತಾಯಿ-ತಂದೆಗಳು ತೀರ ಬಡವರಿದ್ದುದರಿಂದ ಅವರು ಒಂದು ಗುಡ್ಡದ ಓರೆಯಲ್ಲಿ ಗುಡಿಸಲನ್ನು ಕಟ್ಟಿಕೊಂಡು ವಾಸಿಸುತ್ತಿದ್ದರು.
ಅದು ಅಜಮೀರದ ಸನಿಹದಲ್ಲಿ ಹೀಗಿರಲಾಗಿ ಮಹೇಶನು ಅಡವಿಯಲ್ಲಿ ಕಟ್ಟಿದ ಆರಿಸಿ ಉರುವಲಕ್ಕಾಗಿ ತರುವದು ದಿನದ ಕೆಲಸ. ಹೀಗೆ ಒಂದು ದಿನ ಹೋಗಿ ಕಟ್ಟಿಗೆಗಳನ್ನೆಲ್ಲ ಆರಿಸಿ ಕೂಡಿ ಹಾಕಿದಾಗ ಅದನ್ನು ಕಟ್ಟಲಿಕ್ಕೆ ಹಗ್ಗವನ್ನು ತರಲು ಮರೆತಿದ್ದು ಕಂಡು ಬಂದಿತು. ಅಲ್ಲಿಯೇ ಹಳ್ಳದಾಚೆಯಲ್ಲಿ ಗುಡಿಸಲು ಇದ್ದುದರಿಂದ ಒದರಿ ತಾಯಿಗೆ ಹಗ್ಗ ಕಳಿಸಲು ತಿಳಿಸಿದನು. ಮಹೇಶನ ತಾಯಿಯು ಹಗ್ಗ ಕಳಿಸಲು ಯಾರೂ ಇಲ್ಲವೆಂದು ಕೈಸನ್ನೆಗಳಿಂದ ಕೂಡಿದ ಉಚ್ಚ ಸ್ವರದಲ್ಲಿ ಹೇಳಿದಳು. ಅದಕ್ಕೆ ಮಹೇಶನು “ನಾಯಿಯ ಕೊರಳಿಗೆ ಸುತ್ತಿ ಕಳಿಸು” ಎಂದು ಪುನಃ ಕೂಗಿಸಿಕೊಂಡನು. ಆ ಪ್ರಕಾರ ನಾಯಿಯು ಬಂದಿತು. ಆ ಹಗ್ಗವನ್ನು ತೆಗೆದುಕೊಂಡು ಕಟ್ಟಿಗೆಯ ಹೊರೆಯನ್ನು ತಯಾರಿಸಿ ಹೊತ್ತು ತಂದನು. ನಡುವೆ ಹಳ್ಳವೊಂದು ಅಡ್ಡವಿತ್ತು. ಆ ಹಳ್ಳವನ್ನು ಕಟ್ಟಿಗೆಯ ಹೊರೆಯ ಸಹಾಯದಿಂದ ಅದರೊಡನೆಯೇ ಈಸಿ ಪಾರಾಗಿ ಮಹೇಶನು ಮನೆಗೆ ಬಂದನು.
ಈ ವಿಷಯ ನಡೆದಾಗ ಅಕಬರ ಬಾದಶಹನು ಆ ಅಡವಿಗೆ ಬೇಟೆಗಾಗಿ ಬಂದಿದ್ದನು. ಈ ಚಿಕ್ಕ ಹುಡುಗನ ಜಾಣತನದ ಈ ವಿಷಯ ಅವನ ಕಿವಿಗೆ ಬಿದ್ದಿತು. ಇಷ್ಟು ಚತುರನಾದ ಹುಡುಗನನ್ನು ಕಾಣಲು ಬಾದಶಹನು ಇಚ್ಛಿಸಿದನು.ಅಜಮೀರನು ಜಯಪುರದ ನೆರೆಯಲ್ಲಿದೆ. ಜಯಪುರದ ಅರಸನಾದ ರಾಜಾ ಭಗವಾನದಾಸನು ಅಕಬರನ ಸಮೀಪದ ಆಪ್ತನು. ಇವನೇ ಮಹೇಶನನ್ನು ಕರೆದು ಅಕಬರನ ಬಳಿಗೆ ಕರೆದೊಯ್ದನು.
ಬೀರಬಲ್ಲನು ಅಕಬರನ ಆಸ್ಥಾನದಲ್ಲಿ ಇಡಲ್ಪಟ್ಟನು. ಸೇವಕ-ಸೇವ್ಯ ಭಾವದಿಂದಲೇ ಕೆಲಕಾಲ ಸಾಗಿತು. ಅಕಬರನ ತಂದೆ ಮುಸಲ್ಮಾನ ತಾಯಿ ಮೊಗಲಳು, ಸಿಂಧು ಪ್ರಾಂತದಲ್ಲಿ ಹುಟ್ಟಿದರೂ ತನ್ನ ಎಲ್ಲ ಬಾಲ್ಯವನ್ನು ಅಪಘಾನಿಸ್ತಾನದಲ್ಲಿಯೇ ಕಳೆದನು. ಆದರೆ ಬೀರಬಲ್ಲ ಹಿಂದೂ ಬ್ರಾಹ್ಮಣ, ಕಲಿತದ್ದು ಸಂಸ್ಕೃತ, ದರಿದ್ರ. ಹೀಗಿರವಾಗ ಇವರಿಬ್ಬರಲ್ಲಿ ಗೆಳೆತನ ಹುಟ್ಟಲು ಮೊದಲಮೊದಲಿಗೆ ಯಾವ ಸಮಾನತ್ವವೂ ಇರಲಿಲ್ಲ. ಆದರೆ ಅಕಬರನು ಸ್ವತಃ ವಿದ್ಯಾಭ್ಯಾಸ ಮಾಡಿಕೊಂಡವನಲ್ಲದಿದ್ದರೂ ಪಂಡಿತರಿಂದ ಸಕಲರಲ್ಲಿ ವಾದಗಳನ್ನು ಹೂಡಿಸಿ ಸ್ವತಃ ಕೇಳುತ್ತಿದ್ದನು. ಗುಣಗ್ರಾಹಿಯಾಗಿದ್ದನು. ತನ್ನ ತಪ್ಪನ್ನು ಕೂಡಲೇ ಒಪ್ಪಿಕೊಳ್ಳುವ ಸ್ವಭಾವದವನಾಗಿದ್ದನು. ಸಿಟ್ಟಿನಲ್ಲಿದ್ದಾಗ ಅವಮಾನ ಮಾಡಿದವರನ್ನು ಶಾಂತನಾದ ಬಳಿಕ ಹಾಗೆ ಮಾಡಿದ್ದು ಅಯೋಗ್ಯವೆಂದು ಅವನಿಗೆ ಕಂಡರೆ ಅವರನ್ನು ಕೂಡಲೇ ಕರೆಸಿ ಕ್ಷಮೆ ಬೇಡುತ್ತಿದ್ದನು ಬೀರಬಲ್ಲನು ನಿಷ್ಠುರ ಮಾತಿನವನು, ಸತ್ಯವನ್ನು ಅಂಜದೇ ಆಡುತ್ತಿದ್ದನು. ಆದುದರಿಂದ ಅನೇಕ ಸಲ ಬಾದಶಹನು ಇವನಲ್ಲಿ ಕುಪಿತನಾಗಿ ಇವನನ್ನು ಸಭೆಯಿಂದಲೂ, ರಾಜ್ಯದಿಂದಲೂ ಹೊರಗೆ ದೂಡಿಸಿದುದುಂಟು. ಆದರೆ ಅಕಬರನು ಶಾಂತನಾದ ಬಳಿಕ ಪುನಃ ಅವನನ್ನು ಕರೆಸಿ ಸನ್ಮಾನ ಮಾಡಿದುದೂ ಉಂಟು. ಹೀಗಾಗಿ ಸ್ವಾಮಿ ಸೇವಕ ಭಾವವು ಕ್ರಮೇಣ ಕಡಿಮೆಯಾಗಿ ಗೆಳೆಯರಾಗಿ ಅವರಿಬ್ಬರೂ ಕೂಡಿಕೊಂಡಿದ್ದರು.
ಅಕಬರನು 1572ರಲ್ಲಿ ಬೀರಬಲ್ಲನಿಗಾಗಿ ವಾಸಿಸಲು ಒಂದು ಸುಂದರ ವಾದ ಮನೆಯನ್ನು ಫತ್ತೇಪುರ ಸಿಕ್ರಿಯಲ್ಲಿ ಕಟ್ಟಿಸಿಕೊಟ್ಟನು. ಅದು ಈಗಲೂ ನೋಡಲು ನಿಂತಿದೆ. ಅವರೀರ್ವರ ಜೀವನವೇ ಕಥೆಗಳ ರೂಪದಲ್ಲಿ ಬೇರೆ ಬೇರೆ ಜನರಿಂದ ಬೇರೆ ಬೇರೆಯಾಗಿ ಹೇಳಲ್ಪಟ್ಟಿದೆ. ಅವುಗಳನ್ನು ಮುಂದೆ ಹೇಳುತ್ತ ಹೋಗುವೆವು.
ಮುಂದಿನ ಭಾಗ ಓದ