ಆಗಸ್ಟ್ 9 – ರೋಂ ಮತ್ತು ಇಟಲಿ
ಗತಕಾಲದಲ್ಲಿ ಭಾರತದಷ್ಟೇ ವೈಭವದಿಂದ ಮೆರೆವ ರೋಮನ್ ಸಾಮ್ರಾಜ್ಯ ಅಲ್ಲಿ ಬದುಕಿದ್ದ ಜೂಲಿಯಸ್ ಸೀಜರ್ ಚಕ್ರವರ್ತಿ ಆಗಸ್ಟಸ್ ಕಲಾಸಾರ್ವಭೌಮರಾದ ಮೈಕೆಲೆಂಜಲೋ, ಲಿಯೋನಾರ್ಡೋದಾ ವಿನಿ ರಾಫೇಲ್ ಬರ್ನಿನಿ ಗಿಯೋಟೋ ಸಾಹಿತ್ಯ ಮೇರುಗಳಾದ ಚಿಚಿಲೋ ದಾಂತೆ, ಪಿರಾ ಶೆಲೋ ಹೆಸರುಗಳ ದೊಡ್ಡ ಸಮುದಾಯ ಪ್ರಪಂಚದ ಅತ್ಯುನ್ನತ ಕಲೆ ಅರಳಿದ ನೆಲದ ಮೇಲೆ ಇನ್ನೇನು ಕಾಲಿರಿಸುತ್ತೇವೆ. ಎಂದಾಗ ಮನಸ್ಸಿಗೆ ಪುನೀತಭಾವ ಬಿಟ್ಟು ಬೇರೇನೂ ಇರುವುದು ಸಾಧ್ಯವಿತ್ತು?

ರೋಂ ಸಾಮ್ರಾಜ್ಯದ ಇತಿಹಾಸ ತಿಳಿದಿದ್ದರೆ ರೊಂನ ಭಗ್ನಾವಶೇಷ ಹಾಗೂ ಕಲಾಕೃತಿಗಳ ಗುಣ ಗ್ರಹಣ ಮಾಡುವುದು ಸುಲಭವಾಗುತ್ತದೆ. ಕ್ರಿ.ಪೂ. ಎಂಟನೆಯ ಶತಮಾನದಲ್ಲಿ ಕನೈಯಾದ. ರಾಜಕುಮಾರಿಗೆ ರೋಮ್ಯುಲಸ್ ಮತ್ತು ರೇಮಸ್ ಎಂಬ ಅವಳಿ ಮಕ್ಕಳು ಹುಟ್ಟಿದರು. ಈ ಮಕ್ಕಳ ತಂದೆ ರೋಮನರ ಯುದ್ಧ ದೇವತೆ ರ್ಮಾ (ಕನ್ಯ ಕುಂತಿಗೆ ಸೂರ್ಯನಿಂದ ಕರ್ಣ ಹುಟ್ಟಿದ ಎಂಬ ಮಹಾಭಾರತದ ಕತೆ ನೆನಪಿಗೆ ಬರುತ್ತದೆ) ಚಕ್ರವರ್ತಿ ಸಿಟ್ಟುಗೊಂಡು ಮಕ್ಕಳನ್ನು ಟೈಬರ್ ನದೀ ತೀರದಲ್ಲಿ ಎಸೆದು
ಬಿಡಿ ಎಂದು ಆಜ್ಞಾಪಿಸಿದನಂತೆ. ಆಗ ಆ ಮಕ್ಕಳಿಗೆ ಹಾಲು ಕುಡಿಸಿದ್ದು ಹೆಣ್ಣು ತೋಳವೊಂದು (ತೋಳದ ಕೆಳಗೆ ಕುಳಿತು ಅದರ ಮೊಲೆಗಳಿಂದ ರೇಮಸ್ ಮತ್ತು ರೋಮ್ಯುಲಸ್ ಹಾಲು ಕುಡಿಯುತ್ತಿರುವ ಶಿಲ್ಪ ಕ್ಯಾಪಿಟೊಲಿನ್ ಬೆಟ್ಟದ ಮೇಲೆ ಈಗಲೂ ಇದೆ) ಆ ಮಕ್ಕಳನ್ನು ಕಂಡ ಕುರಿಗಾಹಿಯೊಬ್ಬ ಅವರನ್ನು ಕರೆದೊಯ್ದು ಬೆಳೆಸಿದ ದೊಡ್ಡವರಾದ ಮೇಲೆ ಟೈಬರ್ ನದಿ ತಟದಲ್ಲಿ ದೊಡ್ಡ ಸಾಮ್ರಾಜ್ಯವೊಂದನ್ನು ಕಟ್ಟಲು ಅವರು ನಿರ್ಧರಿಸಿದರು. ಆಗ ರೋಮುಲಸ್ ಅಂದನಂತೆ. ರೋಮನರಿಗೆಲ್ಲ ಡಂಗುರ ಹೊಡೆಸಿ ಹೇಳಿದನಂತೆ. “ನನ್ನ ರೋಮಾ ಜಗತ್ತಿನ ರಾಜಧಾನಿಯಾಗೋದು ದೇವತೆಗಳ ಸಂಕಲ್ಪ ಎಂದು.”
ಈ ಕತೆಯನ್ನು ನಮ್ಮನ್ನು ಬಂದು ಹಾಲ್‌ನೊಳಗೆ ಕರೆದುಕೊಂಡು ಹೋಗಿ ಈ ಕುರಿತಾದ ಚಿತ್ರಣವನ್ನು ಪರದೆಯ ಮೇಲೆ 15 ನಿಮಿಷದವರೆಗೆ ತೋರಿಸಿದರು. ಅಲ್ಲಿ ನಾವು ಕುಳಿತುಕೊಳ್ಳಲು ಕೊಟ್ಟ ಆಸನ ವ್ಯವಸ್ಥೆ ತುಂಬಾ ಮಜವಾಗಿತ್ತು. ಆಸನ ಅಲುಗಾಡುತ್ತ ಎತ್ತರಕ್ಕೆ ಹೋಗಿ ಸುತ್ತಲೂ ಚಕ್ರದಂತೆ ತಿರುಗುತಿತ್ತು. ಬಿ.ಪಿ. ಶುಗರ್ ಹೃದಯ ಕಾಯಿಲೆ ಇದ್ದವರು ಅದರಲ್ಲಿ ಕೂಡಬಾರದು ಎಂದು ಮೊದಲೇ ಹೇಳಿದ್ದರು. ನನಗೆ ಈ ಯಾವುದೇ ತೊಂದರೆ ಇರಲಿಲ್ಲವಾದ್ದರಿಂದ ನಾನು ಅದರ ಮೇಲೆ ಕುಳಿತು ಅದರ ಸುಂದರ ಅನುಭವವನ್ನು ಅನುಭವಿಸಿದೆನು. ಇದು ಅತ್ಯಂತ ರೋಮಾಂಚನಕಾರಿಯಾಗಿತ್ತು. ರೋಮ್ಯುಲಸ್‌ನ ರೋಮ್ ದೊಡ್ಡ ಸಾಮ್ರಾಜ್ಯ ವಾಗಿಯೇನೋ ಮೆರೆಯಿತು. ಆದರೆ ದೇವತೆಗಳ ಸಹಾಯದಿಂದಲ್ಲ. ಅಲ್ಲಿನ ಜನರ ಶೌರ್ಯ ಹಾಗೂ ಮೇಧಾವಿತನದಿಂದ.
ಕ್ರಿ.ಪೂ. ಮೊದಲ ಶತಮಾನದ ಜೂಲಿಯಸ್ ಸೀಜರ್ ಅನಂತರ ಬಂದ ಚಕ್ರವರ್ತಿ ಆಗಸ್ಟಸ್ ನಮಗೆಲ್ಲ ಪರಿಚಿತವಾದ ಹೆಸರುಗಳು. ಆ ಕಾಲದಲ್ಲಿ ಪರಾಕ್ರಮಿಗಳ ಜೊತೆಗೆ ಅತ್ಯಂತ ಪ್ರತಿಭಾವಂತ ಸಾಹಿತಿಗಳೂ ಇದ್ದರು. ಚಿಚಿರೋ ಅಂತಹವರಲ್ಲೊಬ್ಬ ಜೂಲಿಯಸ್ ಸೀಜರನೂ ಈತನೂ ಬದ್ಧ ದ್ವೇಷಿಗಳಾದರೂ ಸೀಜರ್ ಒಮ್ಮೆ ಚಿಚಿರೋ ಬಗ್ಗೆ ಮೆಚ್ಚುಗೆಯ ಮಾತು ಅಂದಿದ್ದ

“ರೋಮನ್ ಸಾಮ್ರಾಜ್ಯದ ಎಲ್ಲೆಗಳನ್ನು ವಿಸ್ತರಿಸುವುದಕ್ಕಿಂತ ಮನುಷ್ಯನ ಅರಿವಿನ ಅಂಚನ್ನು ವಿಸ್ತರಿಸುವದು ಉದಾತ್ತವಾದ ಕೆಲಸ”. ಸದಾಕಾಲಕ್ಕೂ ಸಲ್ಲುವ ರೋಂ ಸಪ್ತಗಿರಿಗಳ ಮೇಲೆ ಕಟ್ಟಿದ ನಗರ. ಆದರೆ ಬೆಟ್ಟಗಳು ಮಾತ್ರ ಎಲ್ಲೂ ಕಾಣುವುದೇ ಇಲ್ಲ. ಏರಿ ಇಳಿಯುವ ರಸ್ತೆಗಳಿಂದ ಮಾತ್ರ ಅಲ್ಲಿ ಬೆಟ್ಟಗಳು ಇದ್ದಿರಬಹುದೆಂದು ಊಹಿಸಬೇಕು. ಟೈಬರ್ ನದಿ ಮಾತ್ರ ಕಪ್ಪಾಗಿ ಮಂದ ಗತಿಯಲ್ಲಿ ಹರಿಯುತ್ತಿತ್ತು. ಇಲ್ಲಿನ ರಸ್ತೆಗಳ ಅಗಲ ಕಿರಿದಾದರೂ ಪುಟ್ಟ ಪುಟ್ಟ ಫಿಯೆಟ್ ಕಾರುಗಳು ಅತಿವೇಗದಲ್ಲಿ ಓಡಾಡುತ್ತಿದ್ದವು. ಪ್ರತಿ ಚೌಕದಲ್ಲು ಒಂದೊಂದು ಕಾರಂಜಿ ಮತ್ತು ಪ್ರತಿಮೆಗಳಿರುವುದು ಇಟಲಿ ಮತ್ತು ರೋಂ ನಗರಗಳ ವಿಶೇಷ. ಇನ್ನೊಂದು ನನ್ನನ್ನು ಚಕಿತಗೊಳಿಸಿದ ವಿಷಯವೆಂದರೆ ಸುಮಾರು ಎರಡು ಸಾವಿರ ವರುಷಗಳ ಹಿಂದೆ ಮಾಡಿದ ಮೆಟಲ್ ರಸ್ತೆಗಳು ಇಂದಿಗೂ ಅಷ್ಟೇ ಗಟ್ಟುಮುಟ್ಟಾಗಿವೆ. ಅದನ್ನು ಇಲ್ಲಿಯವರೆಗೆ ಬದಲಾಯಿಸಿಲ್ಲವಂತೆ.
ಮುಂದೆ ನಾವು ಅಲ್ಲೇ ಇರುವ ಟ್ರೈವಿ ಫೌಂಟನ್ ನೋಡಲು ಹೋದೆವು. ರೋಮನ್ ಕಾರಂಜಿಗಳಲ್ಲಿ ಟ್ರೈವಿ ಫೌಂಟೆನ್ ಪ್ರಸಿದ್ಧವಾದುದು. ಇದು ಹದಿನೇಳನೆಯ ಶತಮಾನದಲ್ಲಿ ಖ್ಯಾತ ಶಿಲ್ಪಿ ಬರ್ನಿಯಿಂದ ನಿರ್ಮಿಸಲ್ಪಟ್ಟಿದ್ದು. ವಿಸ್ತಾರವಾದ ಈ ಕಾರಂಜಿಯಲ್ಲಿ ಧುಮುಕುವ ನೀರು ನೋಡಲು ತುಂಬಾ ಮೋಹಕವಾಗಿದೆ. ಇದರಲ್ಲಿ ಮುಖ್ಯವಾದ ವಿಗ್ರಹ ನೆಪ್ಯೂನ್ ದೇವತೆ (ಇದು ರೋಮನ್ನರ ಸಮುದ್ರ ದೇವತೆ. ನಮಗೆ ವರುಣ ದೇವರಿದ್ದ ಹಾಗೆ). ಈ ದೇವತೆ ಒಂದು ಕೈಯಲ್ಲಿ ಆರೋಗ್ಯವನ್ನು ಇನ್ನೊಂದು ಕೈಯಲ್ಲಿ ಸಮೃದ್ಧಿಯನ್ನು ನೀಡುತ್ತದೆ ಎಂಬ ಪ್ರತೀತಿಯಿದೆ. ಹೀಗೆ ಅನೇಕ ದಂತ ಕತೆಗಳು ಈ ಕಾರಂಜಿಯೊಂದಿಗೆ ಹೆಣೆದುಕೊಂಡಿವೆ. ಅವುಗಳಲ್ಲಿ ಒಂದರ ಪ್ರಕಾರ ಯಾರು ಹುಣ್ಣಿಮೆ ರಾತ್ರಿಯ ದಿನ ರಾತ್ರಿಯ ವೇಳೆ ಕಾರಂಜಿಯ ಬಳಿ ಹೋಗಿ ಅದರ ನೀರು ಕುಡಿದು ಅದರೊಳಗೆ ಒಂದು ನಾಣ್ಯ ಹಾಕುತ್ತಾರೋ ಅವರು ಖಂಡಿತ ಪುನಃ ರೋಮ್ ನೋಡಲು ಬರುತ್ತಾರೆ ಎಂಬುದು. ಈಗ ಹಗಲು ಹೊತ್ತೇ ಪ್ರವಾಸಿಗರು ಕಾರಂಜಿಯೊಳಗೆ ಹಣ ಹಾಕುತ್ತಾರೆ, ನಾವು ಅಲ್ಲಿ ಹೋದಾಗ ಅಸಾಧ್ಯವಾದ ಜನಸಂದಣಿಯಿತ್ತು. ನಾನು ಸಹ ಆ ಗದ್ದಲದಲ್ಲಿಯೇ ಹೋಗಿ ಕಾರಂಜಿಗೆ ಅಲ್ಲಿಯ ನಾಣ್ಯ ಹಾಕಿ ಬಂದೆ. ಕಾರಂಜಿಯಲ್ಲಿ ಅಪಾರ ನಾಣ್ಯಗಳು ಸಂಗ್ರಹವಾಗಿದ್ದರಿಂದ ಅದರ ಕಾವಲಿಗೆ ಪೊಲೀಸರಿದ್ದಾರೆ.
ಮುಂದೆ ನಾವು ಹೋಗಿದ್ದು ಫಾಂಥೀಯನ್, ಇದೊಂದು ಅದ್ಭುತ ದೇವಾಲಯ (ಚರ್ಚ್). ಮಾರ್ಕ್ ಅಂಥೋನಿ ಕ್ಲಿಯೋಪಾತ್ರ ಕಥೆ ನಮಗೆ ಗೊತ್ತು. ಅವರು ರೋಮನ್‌ರ ಮೇಲೆ ಯುದ್ಧ ಮಾಡಿ ಸೋತು ಈಜಿಪ್ಟಿಗೆ ಹಿಂತಿರುಗುವಾಗ ಆ ವಿಜಯದ ನೆನಪಿಗಾಗಿ ಈ ದೇವಾಲಯ (ಚರ್ಚ್)ವನ್ನು ಕ್ರಿ.ಪೂ. ಇಪ್ಪತ್ತೇಳರಲ್ಲಿ ಮಾರ್ಕಸ್ ಅಗ್ರಿಸ್ ಎಂಬ ರೋಮನ್ ದೊರೆ ಕಟ್ಟಿಸಿದನಂತೆ. ಇದೇ ಶಿಲ್ಪ ವಿನ್ಯಾಸವಿರುವ ಪ್ಲಾಂಥೀಯಾನಗಳು ರೋಮನರು ರಾಜ್ಯಭಾರ ಮಾಡಿದ ಯುರೋಪಿನ ಇತರ ದೇಶಗಳಲ್ಲೂ ಇವೆ. ಪ್ಲಾಂಥೀಯನ್ ಬಾಗಿಲು ಎರಡು ಅಡಿ ಅಗಲವಿದ್ದು ಅದರೊಳಗಿನಿಂದ ಧಾರಾಳವಾಗಿ ಸೂರ್ಯನ ಬೆಳಕು ಒಳಗೆ ಬರುತ್ತದೆ. ಇಲ್ಲಿ ಇಟಲಿಯ ರಾಜರ ಸಮಾಧಿಗಳು ಇಲ್ಲಿವೆ. ಅದರಲ್ಲಿ ತುಂಬಾ ಮುಖ್ಯವಾದುದು ಪ್ರಸಿದ್ಧ ಚಿತ್ರಕಾರ ರಾಫೆಲನ ಗೋರಿ 15ನೇ ಶತಮಾನದಲ್ಲಿ ಬದುಕಿ ಅದ್ಭುತ ಚಿತ್ರಗಳನ್ನು ರಚಿಸಿದ ರಾಫೇಲನ ಗೋರಿ ಮಾತ್ರ ಸರಳವಾದ ಅಮೃತ ಶಿಲೆಯಿಂದ ಮಾಡಿದೆ.
ರೋಮ್ ದುರಂತಕ್ಕೆ ಸಾಕ್ಷಿಯೆಂಬಂತೆ ಹಾಳುಬಿದ್ದ ಕಟ್ಟಡಗಳು ಬೆಂಕಿಯಲ್ಲಿ ಸುಟ್ಟು ಕರಕಲಾದ ಅರಮನೆಗಳ ಅವಶೇಷಗಳನ್ನು ಕಾಣಬಹುದು. ಕೆಲವೊಂದು ಸ್ಮಾರಕಗಳ ಮೇಲೆ ವೈರಿಗಳ ದಾಳಿ ನಡೆದಿದೆ ಎನ್ನುವದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ತುಪಾಕಿಗಳಿಂದ ಹೊಡೆದ ಗುಂಡಿನ ಗುರುತುಗಳನ್ನು ಇಂದಿಗೂ ಕಾಣಬಹುದು.
ವ್ಯಾಟಿಕನ್ ಸಿಟಿ

ವ್ಯಾಟಿಕನ್ ಸಿಟಿ ರೋಂ ನಗರದ ಮಧ್ಯ ಭಾಗದಲ್ಲಿರುವ ಪುಟ್ಟ ನಗರ. ಇದೊಂದು ಚಿಕ್ಕ ರಾಷ್ಟ್ರವೆಂದೇ ಹೇಳಬೇಕು. ಯಾಕೆಂದರೆ ಸುಮಾರು 104 ಎಕರೆಗಳಷ್ಟು ಜಾಗ ಹೊಂದಿರುವ ಈ ನಗರಕ್ಕೆ ಪ್ರತ್ಯೇಕವಾದ ಅಂಚೆ ರೇಡಿಯೋ ಪೊಲೀಸ್, ನಾಣ್ಯ ಇವೆಲ್ಲವೂ ಇವೆ. ಪ್ರಪಂಚದಲ್ಲಿರುವ ಕ್ಯಾಥೋಲಿಕರ ಧರ್ಮಗುರು ಪೋಪ್ ಮಹಾಶಯ, ವ್ಯಾಟಿಕನ್ ಸಿಟಿಯಲ್ಲಿ ಪ್ರಮುಖವಾಗಿ ನೋಡಬೇಕಾಗಿರುವುದು ಸೇಂಟ್ ಪೀಟರ್ಸ್ ಚರ್ಚ್ ಸಿಸ್ಟೈನ್ ಚಾಪೆಲ್ ಮತ್ತು ವ್ಯಾಟಿಕನ್ ಮ್ಯೂಸಿಯಂಗಳು.
ರೋಮನ್ ಜನಾಂಗ ಶತಮಾನಗಳುದ್ದಕ್ಕೂ ಶೋಷಣೆಗೆ ಗುರಿಯಾಗುತ್ತಲೇ ಬಂದವರು ಮೊದಲು ರಾಜಕೀಯದ ನೆಪದಲ್ಲಿ ರೋಮನ್ ಚಕ್ರವರ್ತಿಗಳ ದಬ್ಬಾಳಿಕೆ ಎದುರಿಸಿದರು. ನಂತರ ಧರ್ಮದ ಹೆಸರಿನಲ್ಲಿ ಪೋಪರ ತುಳಿತ ಅನುಭವಿಸಿದರು. ಈ ಎರಡಕ್ಕೂ ಸಾಕ್ಷ್ಯವಾದದ್ದು ಸೇಂಟ್ ಪೀಟರ್‌ನ ಚರ್ಚ್. ಇದನ್ನು ನೋಡಬೇಕೆಂದು ನನಗೆ ತುಂಬಾ ಆಸಕ್ತಿಯಿತ್ತು. ಚಿಕ್ಕಂದಿನಿಂದ ಟಿವಿಯಲ್ಲಿ ಪತ್ರಿಕೆಗಳಲ್ಲಿ ವ್ಯಾಟಿಕನ್ ಸಿಟಿ ಅಲ್ಲಿಯ ಧರ್ಮ ಗುರುಗಳ ಬಗ್ಗೆ ನೋಡುತ್ತಾ ಕೇಳುತ್ತಾ ಬಂದಿದ್ದೆ. ನಾನು ಇತಿಹಾಸದ ವಿದ್ಯಾರ್ಥಿನಿಯಾಗಿದ್ದರಿಂದ ನೀರೋ ಚಕ್ರವರ್ತಿ ಸಂತ ಪೀಟರ್‌ನನ್ನು ಶಿಲುಬೆ ಗೇರಿಸಿದುದರಿಂದ ಪೀಟರ್ ಹುತಾತ್ಮರೆಲ್ಲರ ಸಂಕೇತವಾಗಿ ಉಳಿದದದ್ದು ಮೈಕೆಲೆಂಜೆಲೋ ರಚಿಸಿದ ಅಪೂರ್ವ ಚಿತ್ರಗಳು ಮತ್ತು ಶಿಲ್ಪಗಳನ್ನು ಈ ಜಾಗದಲ್ಲಿ ನೋಡಲು ದೊರೆತಿದ್ದು ನನ್ನ ಸೌಭಾಗ್ಯವೇ ಸರಿ.

ಜಗತ್ತಿನಲ್ಲೆಲ್ಲ ಅತಿ ದೊಡ್ಡದು ಸೇಂಟ್ ಪೀಟರ್ ಚರ್ಚ್. ಇದರ ಮುಂದಿರುವ ವಿಸ್ತಾರವಾದ ಚೌಕದತ್ತ ಬರುತ್ತಿರುವಾಗಲೇ ಅದರ ಭವ್ಯತೆ ನಮ್ಮನ್ನು ದಂಗುಬಡಿಸಿತು. ಅಬ್ಬಾ! ಎಷ್ಟು ಸುಂದರವಾಗಿದೆ ಎಂದು ಕೆಲವರು ಉದ್ದಾರ ಎತ್ತಿದರು. ನಮ್ಮ ಗೈಡ್ ಒಬ್ಬಳು ಯೂರೋಪ್ ಮಹಿಳೆ ನಮಗೆಲ್ಲ ಕಿವಿಗೆ ಹಾಕಿಕೊಳ್ಳಲು Head Phone ಕೊಟ್ಟಿದ್ದರು. ಅವಳು ಮೈಕ್ ಹಿಡಿದು ಹೇಳುತ್ತಾ ಹೋಗುತ್ತಿದ್ದಳು. ನಾವೆಲ್ಲ ಅವಳನ್ನು ಹಿಂಬಾಲಿಸುತ್ತಿದ್ದೆವು. ಅವಳು ಹೇಳಿದ್ದು ನಮಗೇನೂ ಅಷ್ಟು ಅರ್ಥವಾಗುತ್ತಿರಲಿಲ್ಲ. ಆದರೂ ನಾನು ಯೂರೋಪ್ ಪ್ರವಾಸ ಹೊರಟಾಗ ಕೆಲವು ಪ್ರಸಿದ್ಧ ಲೇಖಕರು ಬರೆದ ಪ್ರವಾಸ ಕಥೆಗಳನ್ನು ಓದಿಕೊಂಡಿದ್ದರಿಂದ ನನಗೆ ಅವಳು ಹೇಳುತ್ತಿರುವುದು ಸ್ವಲ್ಪ ಸ್ವಲ್ಪ ಅರ್ಥವಾಗುತ್ತಿತ್ತು. ಎಲ್ಲೆಲ್ಲಿ ಏನು ಏನು ನೋಡುವುದಿದೆ ಎಂದು ಗೊತ್ತಾಗುತ್ತಿತ್ತು. ನೋಡಿದ್ದನ್ನು ಅರಿತುಕೊಳ್ಳಲು ಸಹಾಯವಾಯಿತು. ಚೌಕದ ಮಧ್ಯೆ ಇರುವ ಎತ್ತರದ ಈಜಿಪ್ಟಿನ ಚಿತ್ತಾರದ ಮೊನಚು ಕಂಬದ ಮೇಲೆ ಶಿಲುಬೆಯಿದೆ. ಇದರ ಎರಡು ಪಾರ್ಶ್ವಗಳಲ್ಲೂ ನೀರು ಚಿಮ್ಮುವ ಕಾರಂಜಿಯಿದೆ. ಈ ಕಾರಂಜಿಗಳ ಸುತ್ತಲೂ ಕುಪ್ಪಳಿಸುವ ಅಸಂಖ್ಯಾತ ಪಾರಿವಾಳಗಳು ಅವುಗಳಿಗೆ ಕಡಲೆಕಾಯಿ ಹಾಕುವ ಮಕ್ಕಳು ದೊಡ್ಡವರು ಇಗರ್ಜಿಗೆ ಬರುವ ಸಾವಿರಾರು ಪ್ರವಾಸಿಗಳು ಹೀಗೆ ಚೌಕ ಸದಾ ಚಟುವಟಿಕೆಯ ಕೇಂದ್ರ ಬಿಂದು ಚೌಕದ ವಿಸ್ತಾರವೇ ನಮ್ಮನ್ನು ದಿಗ್ಧಮೆಗೊಳಿಸುತ್ತದೆ. ಒಂದೇ ಬಾರಿಗೆ ಲಕ್ಷಾಂತರ ಜನ ನಿಲ್ಲುವಷ್ಟು ಜಾಗ. ಚೌಕವನ್ನು ಸುತ್ತುವರಿದಿರುವ ವರ್ತುಲಾಕಾರವಾದ ಜಾಗದಲ್ಲಿ ಉನ್ನತ ಕಂಬಗಳಿವೆ. ಈ ಚೌಕದ ನಿರ್ಮಾತೃ ಬರ್ನಿನಿ.
ನಾವು ಚರ್ಚಿನ ಭವ್ಯವಾದ ಮುಂಬಾಗಿಲನ್ನು ದಾಟಿ, ಒಳಗಿನ ಪಾವಟಿಗೆಗಳನ್ನು ಹತ್ತ ನೋಡಿದೆವು. ಚರ್ಚಿನ ಮುಂಬಾಗಿಲಿನಲ್ಲಿ ಕಲಾತ್ಮಕವಾಗಿ ಅಸಂಖ್ಯಾತ ಶಿಲ್ಪಗಳು ಇವೆ. ಒಳಗೆ ಹೋದೊಡನೆ ಚರ್ಚಿನ ಎತ್ತರ ಮತ್ತು ವಿಸ್ತಾರ ನಮ್ಮನ್ನು ದಂಗು ಬಡಿಸುತ್ತದೆ. ಇಲ್ಲಿ ನೂರಾರು ಶಿಲ್ಪಗಳಿವೆ. ವಿಶ್ವ ವಿಖ್ಯಾತ ಛೋಸಾಯಿಕ್ ಚಿತ್ರಗಳಿವೆ. ನಾವು ಬಹುವಾಗಿ ನೋಡಲಪೇಕ್ಷಿಸಿದ್ದ ಮೈಕೆಲೇಂಜೆಲೋ ರೋಮಿನ “ಪಿಯಟ್” ಬಲಗಡೆಯ ಮೊದಲ ಹಜಾರದಲ್ಲೇ ಇತ್ತು.
ಲೆರಾರದ ಅಮೃತ ಶಿಲೆಯಲ್ಲಿ ಕಡೆದಿರುವ ಈ ಪ್ರತಿಮೆಯಲ್ಲಿ ಮೆಡೋನಳ ತೊಡೆಯ ಮೇಲೆ ಮಲಗಿರುವ ಸತ್ತ ಯೇಸುವಿದ್ದಾನೆ. ಮೆಡೋನಳ ಭುಜದ ಮೇಲೆ ಹಾದುಹೋಗಿರುವ ಪಟ್ಟಿಯಲ್ಲಿ ಮೈಕೆಲೇಂಜೆಲೋ ಹೆಸರು ಕೆತ್ತಿದೆ. ತನ್ನ ಇನ್ಯಾವ ಶಿಲ್ಪಗಳ ಮೇಲೂ ಆತ ತನ್ನ ಹೆಸರು ಕೆತ್ತಿಲ್ಲ. ಇದಕ್ಕೆ ಕಾರಣವೂ ಇದೆ. ಈ ಶಿಲ್ಪವನ್ನು ಕಡೆದಾಗ ಮೈಕೆಲೇಂಜೆಲೋವಿಗೆ ಬರೀ 25 ವರ್ಷ.
“ಪಿಯೆತ”ದಲ್ಲಿ ಕ್ರಿಸ್ತನನ್ನು ಶಿಲುಬೆಯಿಂದ ಇಳಿಸಿಕೊಂಡ ತಾಯಿ ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಹತಾಶೆಯಿಂದ ತನ್ನ ಎಡಗೈ ಚೆಲ್ಲಿರುವ ಒಂದೇ ಒಂದು ಭಂಗಿ ಎಂಥವರನ್ನು ದುಃಖಕ್ಕೀಡು ಮಾಡುತ್ತದೆ. ಮೆಡೋನಳ ತಲೆಯ ಮೇಲಿರುವ ವಸ್ತ್ರ. ಅದರ ಸುಕ್ಕುಗಳು ಆಕೆಯ ಭಂಗಿ ಇದು ಜೀವಂತ ಮೂರ್ತಿಯೋ ಎಂಬ ಭ್ರಮೆ ಹುಟ್ಟಿಸುವಷ್ಟು ಸಹಜ. ಕ್ರಿಸ್ತನು ಸತ್ತಿದ್ದಕ್ಕೂ ಅವನ ದೇಹದ ನರಗಳು ಉಬ್ಬಿ ಬದುಕಿನಿಂದ ಮಿಡಿಯುತ್ತಿವೆಯೋನೋ ಎಂಬ ಅನಿಸಿಕೆ ಬರುತ್ತದೆ. ಇಂತಹ ಅಪೂರ್ವ ಹೊಂದಾಣಿಕೆಯಿಂದ ತಣ್ಣಗಿನ ಅಮೃತ ಶಿಲೆಯೂ ಬದುಕಿನಿಂದ ಬೆಚ್ಚಗಾಗಿದೆ ಎನಿಸುತ್ತದೆ.
ಮಧ್ಯದಲ್ಲಿರುವ ಸೇಂಟ್ ಪೀಟರ್‌ನ ಕಂಚಿನ ಪ್ರತಿಮೆ ಭಕ್ತರಿಗೆ ದೊಡ್ಡ ಆಕರ್ಷಣೆ. ಭಕ್ತರು ಈ ಪ್ರತಿಮೆಯ ಕಾಲಿಗೆ ಮುತ್ತಿಕ್ಕುತ್ತಾರೆ. ಇದರಿಂದಾಗಿ ಪೀಟರನ ಬಲಗಾಲು ಹೆಬ್ಬೆರಳು ಪೂರ್ತಿ ಸವೆದುಹೋಗಿದೆ.
ಚರ್ಚಿನ ಮುಖ್ಯ ಕೇಂದ್ರ ಮೈಕೆಲೇಂಜಲೋ ನಿರ್ಮಿಸಿದ ಗುಮ್ಮಟ ಇದರ ಕೆಳಗೆ ಸಂತ ಪೀಟರನ ಗೋರಿ. ಇಲ್ಲಿ ಮೇಣದ ದೀಪಗಳು ಸದಾ ಉರಿಯುತ್ತಿದ್ದುಭಕ್ತಿಯ ವಾತಾವರಣ ಸೃಷ್ಟಿ ಆಗಿದೆ. ಈ ಗುಮ್ಮಟವನ್ನು ಸೃಷ್ಟಿಸುವಾಗ ಮೈಕೆಲೆಂಜೆಲೋ, ಫ್ಲಾರೆನ್ಸಿನಲ್ಲಿ ಬ್ರುಸೆಲ್ಲೆಸ್ಪಿ ರಚಿಸಿದ್ದ ಗುಮ್ಮಟದಿಂದ ಸ್ಫೂರ್ತಿ ಪಡೆದ ಎಂದು ಹೇಳುತ್ತಾರೆ. ಗುಮ್ಮಟದ ಒಳಗಿನ ಕಲಾಕೃತಿಗಳು ಮೊಸಾಯಿಕ್‌ಗಳು ಕ್ರಿಸ್ತನ ಬದುಕಿನ ವಿವಿಧ ಹಂತಗಳನ್ನು ಬಿಂಬಿಸುತ್ತವೆ. ತಲೆಯೆತ್ತಿ ಬೃಹತ್ ಗುಮ್ಮಟವನ್ನು ನೋಡುವಾಗ ವಿಸ್ಮಯ, ಧನ್ಯತೆ ಎರಡೂ ಹೃದಯದಲ್ಲಿ ತುಂಬಿಕೊಳ್ಳುತ್ತವೆ.
By-ಶಾಲಿನಿ ಗಾಂವಕರ್
ಮುಂದಿನ ಭಾಗ ಓದಿ…
