(ಭಾಗ-18) ಪಡುವಣದ ಪ್ರವಾಸ: ಒಂದು ಪ್ರಯಾಣ, ಸಾವಿರ ನೆನಪುಗಳು!

(ಭಾಗ-18) ಪಡುವಣದ ಪ್ರವಾಸ: ಒಂದು ಪ್ರಯಾಣ, ಸಾವಿರ ನೆನಪುಗಳು!

ಇಂಗ್ಲಿಷರ ಬಗ್ಗೆ

ಇಂಗ್ಲೆಂಡಿನ ಎಲ್ಲ ನಗರಗಳಲ್ಲಿ ಸಾಮಾನ್ಯವಾಗಿ ಭಾರತೀಯರು ಸಾಕಷ್ಟು ಸಂಖ್ಯೆಗಳಲ್ಲಿ ಕಾಣಸಿಗುತ್ತಾರೆ. ಹಿಂದೆ ನಮ್ಮ ದೇಶ ವಿಭಜನೆಯಾದಾಗ ಉತ್ತರ ಭಾರತದಿಂದ ಈ ಕಡೆಗೆ ವಲಸೆ ಬಂದ ಜನರೇ ಈಗ ಇಲ್ಲಿ ಬಗೆಬಗೆಯ ಉದ್ಯೋಗಗಳನ್ನು ಕೈಕೊಂಡು ಇಲ್ಲಿ ನೆಲೆಸಿದ್ದಾರೆ. ಭಾರತೀಯರನ್ನು ಬಿಟ್ಟರೆ ಇಲ್ಲಿ ಹೆಚ್ಚು ಸಂಖ್ಯೆಯಲ್ಲಿ ಕಾಣುವವರು ಆಫ್ರಿಕಾದ ಕರಿಯರು. ಹಿಂದೆ ಇಲ್ಲಿ ವರ್ಣನೀತಿ ಇದ್ದಿರಬಹುದು ಆದರೆ ಈಗ ಇಲ್ಲಿ ಕರಿಯರು ಮತ್ತು ಬಿಳಿಯರ ನಡುವೆ ಅಂಥ ವರ್ಣದ್ವೇಷ ಇದ್ದಂತೆ ಕಾಣುವುದಿಲ್ಲ. ಬಿಳಿ ಹುಡುಗಿಯರ ಹೆಗಲ ಮೇಲೆ ಕೈ ಹಾಕಿಕೊಂಡು ನಡೆಯುವ ಕರಿಯರನ್ನು, ಕರಿ ಹುಡುಗಿಯ ಸೊಂಟವನ್ನು ತಬ್ಬಿಕೊಂಡು ನಡೆಯುವ ಬಿಳಿಯರನ್ನು ಹೆಜ್ಜೆ ಹೆಜ್ಜೆಗೂ ಕಾಣಬಹುದು. ಇಲ್ಲಿನ ಬಿಳಿಯರು ನೋಡಲು ಲಕ್ಷಣವಾಗಿಯೇ ಇರುತ್ತಾರೆ. ಅತ್ಯಂತ ಚೈತನ್ಯಪೂರ್ಣವಾದ ಜನ ಗಂಡಸರು, ಅಡಿಯಿಂದ ಮುಡಿಯವರೆಗೆ ಬಟ್ಟೆ ಧರಿಸಿದರೆ ಹೆಂಗಸರಂತೂ ಕಡಿಮೆ ವಸ್ತ್ರಧಾರಿಣಿಯರು, ಅವರಿಗೆ ದೈವದತ್ತವಾಗಿ ಬಂದ ದೇಹದ ಚೆಲುವನ್ನು ಅದೊಂದು ವರವೆಂಬಂತೆ ಪ್ರದರ್ಶಿಸುವುದರಲ್ಲಿ ಅವರಿಗೆ ಯಾವ ಹಿಂಜರಿಕೆಯೂ ಇಲ್ಲ. ಬೇಸಿಗೆ ಬಂತೆಂದರೆ ಅವರಿಗೆ ತುಂಬಾ ಖುಷಿ, ಬಿಸಿಲು ಕಾಣಿಸಿಕೊಂಡರೆ ಅತೀ ಕನಿಷ್ಠ ಉಡುಪಿನಲ್ಲಿ ಹೆಂಗಸರು ಮತ್ತು ಗಂಡಸರು ಮಿಂಚುತ್ತಾರೆ.

ಇಂಗ್ಲೀಷರು ತುಂಬಾ ಗಂಭೀರ ಸ್ವಭಾವದವರು. ಅಮೆರಿಕನ್ನರಂತೆ ಅಲ್ಲ. ಇವರು ತಾವಾಗಿಯೇ ಯಾರನ್ನೂ ಮಾತನಾಡಿಸುವುದಿಲ್ಲ. ಮುಖದ ಮೇಲೆ ಮುಖ ಬಿದ್ದರೆ ಮಾತ್ರ ನಗುತ್ತಾರೆ. ನಾವು ಏನಾದರೂ ಅವರ ಬಳಿ ಸಹಾಯ ಕೇಳಿದರೆ ಖುಷಿಯಿಂದ ಮಾಡುತ್ತಾರೆ. ವಿದೇಶಿಯರಲ್ಲಿ ಕೆಲವು ಸಲ ಜನಾಂಗೀಯ ಮತ್ತು ವರ್ಣಭೇದ ಎದ್ದು ಕಾಣುತ್ತದೆ. ಕೆಲವೊಮ್ಮೆ ನಮ್ಮ ಮತ್ತು ವಿದೇಶೀಯರ ಆಹಾರ ಅಭ್ಯಾಸ ವ್ಯವಹಾರಗಳಲ್ಲಿರುವ ಅಂತರ ನಮ್ಮನ್ನು ಅವರಿಂದ ಬೇರೆ ಆಗುವಂತೆ ಮಾಡುತ್ತದೆ. ಉದಾಹರಣೆಗೆ ನಮ್ಮ ಮಗಳು ಕೆಲಸ ಮಾಡುವ ಆಸ್ಪತ್ರೆಯಲ್ಲಿ 10 ಜನ ದಂತವೈದ್ಯರಿದ್ದಾರೆ. 10 ರಲ್ಲಿ ನಮ್ಮ ಮಗಳದು 2ನೇ ನಂಬರ್. ಅವಳಿಗೆ ಒಬ್ಬ ನರ್ಸ್ ಮತ್ತು ಒಬ್ಬ ಮ್ಯಾನೇಜ‌ರ್ ಮತ್ತು ರಿಸೆಪ್ಪನಿಸ್ಟ್ ಇದ್ದಾರೆ. ಆದರೆ ನಮ್ಮನ್ನು ತುಂಬಾ ವರುಷಗಳಷ್ಟು ಆಳಿದ ಇಂಗ್ಲೀಷರಿಗೆ ಭಾರತೀಯರ ಕೈ ಕೆಳಗೆ ಕೆಲಸ ಮಾಡುವುದು ಅವರ ಮನಸ್ಸಿಗೆ ಸ್ವಲ್ಪ ಕಿರಿಕಿರಿಯಾಗುತ್ತದೆ ಮತ್ತು ಅದನ್ನು ಅವರು ಸಹಿಸುವುದಿಲ್ಲ. ಅಲ್ಲಿ ಹೆಂಗಸರು-ಗಂಡಸರು ಪಾರ್ಟಿ ಮಾಡುತ್ತಾರೆ, ಕುಡಿಯುತ್ತಾರೆ, ಸಿಗರೇಟ್ ಸೇದುತ್ತಾರೆ. ಇನ್ನು ಆಸ್ಪತ್ರೆಯ ಬಿಡುವಿನ ಸಮಯದಲ್ಲಿ ಸಹ ಅವರು ಒಟ್ಟಾಗಿ ಕುಳಿತು ಸಿಗರೇಟ್ ಸೇದುವುದು ಮತ್ತು ಅವರವರ ಗೆಳೆಯ ಗೆಳತಿಯರ ಬಗ್ಗೆ ಚರ್ಚೆ ಮಾಡುತ್ತಾರಂತೆ. ಆದರೆ ಮದುವೆಯಾದ ಭಾರತೀಯಳಾದ ಮಗಳಿಗೆ ಇದು ಮುಜುಗರ ಉಂಟು ಮಾಡುತ್ತದೆ. ಮತ್ತು ಅವರ ಜೊತೆ ಬೆರೆಯಲು ಸ್ವಲ್ಪ ಕಷ್ಟವಾಗುತ್ತದೆ. ಆದರೂ ಅವರ ಜೊತೆ ಹೊಂದಿಕೊಂಡು ಹೋಗಲು ಪ್ರಯತ್ನ ಮಾಡುತ್ತಾಳೆ. ತನ್ನ ಸ್ವಂತ ಪ್ರತಿಭೆಯಿಂದ ಆಸ್ಪತ್ರೆಯಲ್ಲಿ ಒಳ್ಳೆಯ ಹೆಸರನ್ನು ಪಡೆದುಕೊಂಡಿದ್ದಾಳೆ. ಅಲ್ಲಿ ದಂತವೈದ್ಯರಿಗೆ ಕೈ ತುಂಬಾ ಸಂಬಳವಿರುತ್ತದೆ. ಅದರಂತೆ ಕೆಲಸದ ಶ್ರಮವೂ ಹೆಚ್ಚು, ಸಂಬಳದಲ್ಲಿ ನೂರಕ್ಕೆ ನವಲತ್ತು ಪರ್ಸೆಂಟ್ ತೆರಿಗೆ ಕಟ್ಟಬೇಕು. ಸರಕಾರ ಅದನ್ನು ದೇಶದ ಅಭಿವೃದ್ಧಿಗೆ ಉಪಯೋಗಿಸುತ್ತದೆ.

ಇಂಗ್ಲೀಷರು ತಾವು ತೊಡುವ ಉಡುಪುಗಳಿಗೆ ತುಂಬಾ ಮಹತ್ವ ಕೊಡುತ್ತಾರೆ. ಅವರು ಮಳೆಗಾಲದಲ್ಲಿ ತೊಡುವ ಬಟ್ಟೆ ಬೇರೆ ರೀತಿಯ ಬಣ್ಣ ಮತ್ತು ಶೈಲಿಯನ್ನು ಹೊಂದಿರುತ್ತದೆ. ಅದೇ ರೀತಿ ಬೇಸಿಗೆ ಮತ್ತು ಚಳಿಗಾಲದಲ್ಲಿ ಸಹ ಬೇರೆ ರೀತಿಯದಾಗಿರುತ್ತದೆ. ಅವರು ಜನರು ಧರಿಸಿದ ಬಟ್ಟೆಯನ್ನು ನೋಡಿ ಅವರ ವ್ಯಕ್ತಿತ್ವವನ್ನು ಅಳಿಯುತ್ತಾರೆ.

ಅಲ್ಲಿ ನಾನು ತುಂಬಾ ಇಷ್ಟಪಟ್ಟಿದ್ದು ಮುದ್ದು ಮುದ್ದಾದ ಬೆಕ್ಕಿನ ಕಣ್ಣಿನ ಮುದ್ದಾದ ಮಕ್ಕಳು. ನನಗಂತೂ ಬೆಳ್ಳಗಿನ ಗುಂಡುಗುಂಡಾದ ಮಕ್ಕಳನ್ನು ನೋಡಿ ಎತ್ತಿ ಮುದ್ದಾಡ ಬೇಕೆನಿಸುತಿತ್ತು. ಅವರನ್ನೇ ಪದೇ ಪದೇ ದಿಟ್ಟಿಸಿ ನೋಡುತ್ತಿದ್ದೆ. ಆದರೆ ಆ ರೀತಿ ನೋಡುವುದು ಇಂಗ್ಲೀಷರಿಗೆ ಇಷ್ಟವಾಗುವುದಿಲ್ಲವಂತೆ. ಅದಕ್ಕೆ ಪದೇ ಪದೇ ನನ್ನ ಮಗಳು ಅಮ್ಮಾ ಹಾಗೆ ನೋಡಬೇಡವೆಂದು ಹೇಳುತ್ತಿದ್ದಳು. ಅಲ್ಲಿಯ ಸರಕಾರವೂ ಮಕ್ಕಳ ಆಸ್ಪತ್ರೆ ಖರ್ಚು, ಅವರ ವಿದ್ಯಾಭ್ಯಾಸದ ಖರ್ಚು ಎಲ್ಲವನ್ನು ನೋಡಿಕೊಳ್ಳುತ್ತದೆ. ಅದಕ್ಕಾಗಿ ಅಲ್ಲಿ ಒಬ್ಬೊಬ್ಬರಿಗೆ 4-5 ಮಕ್ಕಳು ಇರುತ್ತಾರೆ. ಅವರನ್ನು ಚಿಕ್ಕಂದಿನಿಂದಲೇ ಸ್ವಾವಲಂಬಿಗಳನ್ನಾಗಿ ಬೆಳೆಸುತ್ತಾರೆ. ಚಿಕ್ಕವರಾದರೂ ಅವರು ಎಲ್ಲಿಗೆ ಹೋಗಬೇಕಾದರೂ ತಮ್ಮ ಸಾಮಾನುಗಳಿದ್ದ ಚೀಲವನ್ನು ಅವರೇ ತೆಗೆದುಕೊಂಡು ಹೋಗಬೇಕು. ಇನ್ನೂ ಕೆಲವು ಮಕ್ಕಳು ತಮಗಿಂತ ಚಿಕ್ಕವರ ಕಾಳಜಿಯನ್ನು ತೆಗೆದುಕೊಳ್ಳುತ್ತಾರೆ. ಇಲ್ಲಿ ತಮ್ಮ ಆಪೇಷ್ಟರನ್ನು ನೋಡಲು ಹೋಗುವವರು, ಆಸ್ಪತ್ರೆಗೆ ಹೋಗುವವರು ತಮ್ಮ ನೆಂಟರ ಯೋಗ ಕ್ಷೇಮವನ್ನು ವಿಚಾರಿಸಿಕೊಂಡು ಹೋಗಲು ಬರುವವರ ಕೈಯಲ್ಲಿ ಬಣ್ಣಬಣ್ಣದ ಹೂವಿನ ಬೊಕ್ಕೆಗಳು ಇರುತ್ತವೆ. ಹಾಗೆ ಎಲ್ಲ ಬಗೆಯ ಸಮಾರಂಭಹಾಗೂ-ಸಂತೋಷಕೂಟಗಳಿಗೆ ಬರುವವರ ಕೈಯಲ್ಲಿ ಸಹ ಬಗೆಬಗೆಯ ಬಣ್ಣದ ಹೂವಿನ ಬೊಕೆಗಳಂತೂ ಇಲ್ಲಿನ ಶಿಷ್ಟಾಚಾರದ ಒಂದು ಭಾಗವಾಗಿದೆ. ಈಗೀಗ ಇದು ಇಂಡಿಯಾದಲ್ಲೂ ಅಲ್ಲಲ್ಲಿ ಕಾಣ ಸಿಗುತ್ತದೆ. ಶಿಷ್ಟಾಚಾರ ಎಂದೆನಲ್ಲ. ಈ ದೇಶದ ಜನ ಶಿಷ್ಟಾಚಾರಕ್ಕೆ ಮೊದಲ ಸ್ಥಾನ ಕೊಡುವಂತಹವರು. ಯಾರು ಯಾರೊಂದಿಗೂ ಪರಿಚಯ ಮಾಡಿಕೊಡದ ಹೊರತು ಮೇಲೆ ಬಿದ್ದು ಮಾತನಾಡಿಸುವಂತಿಲ್ಲ. ಅಮೆರಿಕಾದ ಜನಕ್ಕೂ ಇಂಗ್ಲೆಂಡಿನ ಜನಕ್ಕೂ ಇರುವ ವ್ಯತ್ಯಾಸವೇ ಇದು. ಅಮೆರಿಕಾದಲ್ಲಿ ಜನರು ಅವರಾಗಿಯೇ ಹಾಯ್ ಎಂದು ವಿಶ್ ಮಾಡಿ ಮುಗುಲ್ನಗೆಯೊಂದಿಗೆ ಮುಂದೆ ಹೋಗುತ್ತಾರೆ. ಆದರೆ ಇಲ್ಲಿ ಯಾರೂ ಯಾರೊಂದಿಗೂ ಮಾತನಾಡದೆ ತಮ್ಮ ಪಾಡಿಗೆ ತಾವು ನಿರ್ಭಾವುಕರಾಗಿ ಮುಂದೆ ಹೋಗುತ್ತಾರೆ, ರೈಲು ಮತ್ತು ಬಸ್ಸುಗಳಲ್ಲಿ ಪ್ರಯಾಣ ಮಾಡುವಾಗ ತಮ್ಮ ಪಾಡಿಗೆ ತಾವು ಸೀಟಿನಲ್ಲಿ ತಟಸ್ಥರಂತೆ ಕೂರುತ್ತಾರೆ. ಅಥವಾ ಪತ್ರಿಕೆಗಳನ್ನೂ ಪುಸ್ತಕಗಳನ್ನೂ ಓದುತ್ತ ಅತ್ತಿತ್ತ ನೋಡದೆ ಅದರಲ್ಲೇ ಮಗ್ನರಾಗಿರುತ್ತಾರೆ. ಹಾಗೆಂದರೆ ಮಾತನಾಡಿಸದೆ ಮಾತೇ ಆಡುವುದಿಲ್ಲವೆಂದೇನಿಲ್ಲ. ಏನಾದರೂ ಮಾಹಿತಿ ಬೇಕಾದರೆ ‘ಎಕ್ಸ್‌ಕ್ಯೂಸ್‌ಮಿ’ ಎಂದು ಮಾತನಾಡಿಸಿದಾಗ ತೀರಾ ಸೌಜನ್ಯದಿಂದಲೇ ಸಹಾಯ ಮಾಡುತ್ತಾರೆ. ಪ್ರತಿಯೊಂದು ಮಾತಿನ ತುದಿಗೂ ‘ಥ್ಯಾಂಕ್ ಯು ಥ್ಯಾಂಕ್ಸ್’ ಎಂಬ ಧನ್ಯವಾದದ ಮಾತುಗಳು ಕೇಳಿ ಬರುತ್ತವೆ. ಅಂಗಡಿಯಾತ ಕೊಡುವ ಬಿಲ್ಲಿಗೆ ಹಣತೆತ್ತ ಕೂಡಲೇ, ರೈಲಿನಲ್ಲಿ, ಬ್ಯಾಂಕಿನಲ್ಲಿ ವಿಚಾರಿಸಲು ದೂರವಾಣಿಯ ಮೂಲಕ ಮುಕ್ತಾಯದಲ್ಲಿ ‘ಥ್ಯಾಂಕ್ ಯು ಬೈ’ ಇದ್ದೇ ಇರುತ್ತದೆ. ಇಂಥ ಸೌಜನ್ಯ ಅಭಿವ್ಯಕ್ತಿಯ ಸಂದರ್ಭಗಳಲ್ಲಿ ಒಂದು ಬಗೆಯ ಆತ್ಮೀಯತೆಯನ್ನು ನಾವು ಗುರುತಿಸಬಹುದು. ಇಲ್ಲಿ ಎಲ್ಲ ಸಂದರ್ಭಗಳಲ್ಲೂ ಕಂಡುಬರುವ ಮಾನವೀಯತೆ ಈ ಪರಿಸರದ ಚೆಲುವಿನ
ಇನ್ನೊಂದು ಭಾಗವೆಂಬಂತೆ ಭಾಸವಾಗುತ್ತದೆ.

ಇನ್ನು ಈ ದೇಶದ ಸಂಚಾರ ಸಮಯದಲ್ಲಿ ನನಗೆ ತುಂಬ ಇಷ್ಟವಾದದ್ದು ಪ್ರಾಕೃತಿಕವಾದ ಸಸ್ಯ ಸಂಪತ್ತಿನ ಚೆಲುವು. ಎಲ್ಲಿ ನೋಡಿದರೂ ಕಣ್ಣಿಗೆ ಹಬ್ಬವನ್ನುಂಟುಮಾಡುವ ಗುಡ್ಡ, ಬೆಟ್ಟಗಳು, ಅದನ್ನು ತಬ್ಬಿಕೊಂಡ ಹಾಗೂ ಹಬ್ಬಿಕೊಂಡ ಹಸಿರು, ವಿವಿಧ ಕಾಲಮಾನಗಳಲ್ಲಿ ತಾಳುವ ವರ್ಣ ವಿನ್ಯಾಸಗಳು, ಅಲ್ಲಲ್ಲಿ ಇರುವ ಕೆರೆಗಳು, ಗ್ರಾಮಾಂತರ ಪರಿಸರಗಳಲ್ಲಿ ಸದಾ ಕಣ್ಣಿಗೆ ತಂಪನ್ನುಂಟು ಮಾಡುವ ಹಸಿರು ಬಯಲುಗಳು ಮನಸ್ಸಿಗೆ ತುಂಬಾ ಸಂತೋಷವನ್ನುಂಟು ಮಾಡುತ್ತವೆ. ನಾವು ದಿನಾಲೂ ಪಾರ್ಕಿಗೆ ವಾಕಿಂಗ್ ಹೋಗುತ್ತಿದ್ದೆವು. ಅಲ್ಲಿಯ ತಂಪು ಆಹ್ಲಾದಕರವಾದ ಗಾಳಿ ನಮ್ಮನ್ನು ಚಳಿಯಿಂದ ನಡುಗುವಂತೆ ಮಾಡುತ್ತಿತ್ತು. ಆದರೂ ಒಂದು ದಿನವೂ ನಮ್ಮ ಆರೋಗ್ಯ ಶೀತದಿಂದ ಜ್ವರದಿಂದ ಒಮ್ಮೆಯೂ ತೊಂದರೆಯಾಗಲಿಲ್ಲ. ಅದು ಅಷ್ಟೊಂದು ತಾಜಾ ಹವಾಮಾನ ಮತ್ತು ಆರೋಗ್ಯಕರ ಹವಾಮಾನ ಎಲ್ಲೂ ಧೂಷಿತ ಹವಾಮಾನ ಇಲ್ಲದಿರುವುದರಿಂದ ಅಲ್ಲಿಯ ಜನ ಆರೋಗ್ಯವಂತ ಜನರು ಯಾವಾಗಲೂ ಸಂತೋಷದಿಂದ ನಗು ನಗುತ್ತಾ ಇರುತ್ತಾರೆ. ಇನ್ನು ಇಂಗ್ಲೆಂಡಿನ ತಂಪು ಹವಾಮಾನ. ಅಲ್ಲಿ 12 ತಿಂಗಳು ತಂಪಾಗಿರುತ್ತದೆ. ಅಲ್ಲಿಯ ಹಣ್ಣು ಮತ್ತು ಕಾಯಿಪಲ್ಲೆಗಳು ತುಂಬಾ ತಾಜಾ ತಾಜಾ ಇರುತ್ತವೆ. ಮತ್ತು ಅವರ ಸಮಯ ಪರಿಪಾಲನೆ ಮತ್ತು ಕಾನೂನು ಪರಿಪಾಲನೆ ಮೆಚ್ಚುವಂತಹದು. ವಾಹನ ಚಾಲಕರು ಸಿಗ್ನಲ್‌ನಲ್ಲಿ ರಾತ್ರಿ 1 ಗಂಟೆಯಲ್ಲೂ ವಾಹನಗಳ ಓಡಾಟವಿಲ್ಲದಿದ್ದರೂ ಸಹ ಸಿಗ್ನಲ್ ಇದ್ದಷ್ಟು ಹೊತ್ತು ಕಾರು ನಿಲ್ಲಿಸಿ ಕಾದು ಮುಂದೆ ಹೋಗುತ್ತಾರೆ. ಹೀಗಾಗಿ ಅಲ್ಲಿ ವಾಹನ ಅಪಘಾತಗಳು ಕಡಿಮೆ.

ಇನ್ನೊಂದು ವಿಷಯ ಎಂದರೆ ನಾವು ರಸ್ತೆ ದಾಟುವಾಗ ಅಲ್ಲಿ ಒಂದು ಲೈಟಿನ ಕಂಬ ಇರುತ್ತದೆ. ಅಲ್ಲಿ ಕೆಂಪು ಮತ್ತು ಹಸಿರಿನ ಬಟನ್‌ಗಳು ಇರುತ್ತವೆ. ಒಂದು ವೇಳೆ ನಾವು ರಸ್ತೆ ದಾಟುವದಿದ್ದರೆ ನಾವು ಹಸಿರು ಬಟನ್ ಒತ್ತಿದರೆ, ಹಸಿರು ಲೈಟ್ ಬರುತ್ತದೆ. ಆಗ ಎಷ್ಟೇ ರಭಸದಿಂದ ಬಂದ ವಾಹನ ಸವಾರರಾದರೂ ತಮ್ಮ ವಾಹನಗಳನ್ನು ನಿಲ್ಲಿಸುತ್ತಾರೆ. ನಾವು ರಸ್ತೆ ದಾಟಿದ ಮೇಲೆ ಕೆಂಪು ಲೈಟ್ ಬರುತ್ತದೆ. ಆಗ ವಾಹನ ಸವಾರರು ಮುಂದೆ ಹೋಗುತ್ತಾರೆ. ಇದು ನನಗೆ ತುಂಬಾ ಇಷ್ಟವಾಯಿತು.

ವಿದೇಶೀಯರು ತಾವು ಮಾಡುವ ಕೆಲಸವನ್ನು ತುಂಬಾ ನಿಷ್ಠೆಯಿಂದ ಮಾಡುತ್ತಾರೆ. ಅವರಲ್ಲಿ ತಾವು ಕೆಲಸದವರು ಎನ್ನುವ ಕೀಳರಿಮೆ ಇಲ್ಲ. ನಮ್ಮ ಮಗಳ ಮನೆಗೆ ಒಬ್ಬಳು ವಿದೇಶಿ ಮಹಿಳೆ ಕೆಲಸಕ್ಕೆ ಬರುತ್ತಾಳೆ. ಅವಳು ಹಂಗೇರಿಯಾ ದೇಶದವಳು, ಅವಳ ಹೆಸರು ಎಲಿಜಬೆತ್, ಅವಳಿಗೆ ಇಂಗ್ಲಿಷ್ ಸರಿಯಾಗಿ ಬರುತ್ತಿರಲಿಲ್ಲ. ಅವರ ಭಾಷೆ ಹಂಗೇರಿಯ ಆದರೂ ನಾವಾಡುವ ಇಂಗ್ಲಿಷ್ ಸ್ವಲ್ಪ ಸ್ವಲ್ಪ ಅರ್ಥ ಆಗುತ್ತಿತ್ತು, ನಾನು ಅವಳಿಗೆ ಚಾ ಮಾಡಿ ಕೊಡುತ್ತಿದ್ದೆ ಮತ್ತು ಜೊತೆಯಲ್ಲಿ ಒಮ್ಮೊಮ್ಮೆ ತಿಂಡಿಯನ್ನು
ಕೊಡುತ್ತಿದ್ದೆ. ಅದನ್ನು ತುಂಬಾ ಸಂತೋಷದಿಂದ ತಿನ್ನುತ್ತಿದ್ದಳು. ಅವಳಿಗೆ ಸುಮಾರಿ 55 ವರ್ಷಗವಾಗಿರಬಹುದು ನೋಡಲು ತುಂಬಾ ಸುಂದರವಾಗಿದ್ದಾಳೆ. ಅವಳು ಕೆಲಸಕ್ಕೆ ಬರುವಾಗ ಸೂಟು ಬೂಟು ಹಾಕಿಕೊಂಡು ಕಾರಿನಲ್ಲಿ ಬರುತ್ತಿದ್ದಳು. ಬರುವಾಗ ಸ್ವಚ್ಛ ಮಾಡಲು ಉಪಯೋಗಿಸುವ ಕಾರ್ಪೆಟ್ ಬಾತ್‌ ರೂಮನ್ನೆಲ್ಲ ಸ್ವಚ್ಚ ಮಾಡುವು ಸ್ನೇಗಳನ್ನು ತರುತ್ತಿದ್ದಳು. ಬಂದವಳೇ ತನ್ನ ಡ್ರೆಸ್ ಬದಲಾಯಿಸಿ ಲೂಸ್ ಪೈಜಾಮ ಟೀ ಶರ್ಟ್ ಹಾಕಿ ಕೈಗೆ ಗೌಸ್ ಹಾಕಿಕೊಂಡು ಕೆಲಸ ಶುರು ಮಾಡುತ್ತಾಳೆ. ಎಲ್ಲ ಬಾತ್ ರೂಮ್ ಸಿಂಕ್ ಕಾರ್ಪೆಟನ್ನೆಲ್ಲ ಸ್ವಚ್ಛಗೊಳಿಸಿ, ಅಡಿಗೆ ಮನೆಯಲ್ಲಿಯ ಸಿಂಕ್‌ನಲ್ಲಿದ್ದ ಎಲ್ಲ ಪಾತ್ರೆಗಳನ್ನು ತೊಳೆದು ಬಟ್ಟೆಗಳನ್ನೆಲ್ಲ ಇಸ್ತ್ರಿ ಮಾಡುವುದು ಹೀಗೆ ಎಲ್ಲ ಕೆಲಸಗಳನ್ನು ಪಟಪಟನೆ ನಗು ನಗುತ್ತಾ ಮಾಡುತ್ತಾಳೆ. ಅವಳು ಖುಷಿಯಿಂದ ಹಾಡು ಗುನುಗುತ್ತೆ ಕೆಲಸ ಮಾಡುವುದನ್ನು ನೋಡಿದರೆ ತುಂಬಾ ಖುಷಿಯಾಗುತ್ತದೆ. ಮಗಳು ಆಸ್ಪತ್ರೆಗೆ ಹೋದಾಗ ಸಹ ಅಲ್ಲಿಗೆ ಹೋಗಿ ಕೀ ತೆಗೆದುಕೊಂಡು ಬಂದು ಎಲ್ಲವನ್ನು ನೀಟಾಗಿ ಮಾಡಿ ಹೋಗುತ್ತಾಳಂತೆ, ಎಂದೂ ಕೆಲಸದಲ್ಲಿ ಸೋಮಾರಿತನ ತೋರಿಸಿದ್ದಿಲ್ಲ. ಮನೆಯನ್ನು ಅಷ್ಟು ಅಚ್ಚುಕಟ್ಟಾಗಿ ಸ್ವಚ್ಛಮಾಡಿ ರೂಮ್ ಫ್ರೆಶ್‌ನರ ಉಪಯೋಗಿಸಿ ಮನೆಯನ್ನೆಲ್ಲ ಘಮ ಘಮಿಸುವಂತೆ ಮಾಡುತ್ತಾಳೆ. ಅವಳು ನಗುನಗುತ್ತಾ ನಿಷ್ಠೆಯಿಂದ ಕೆಲಸ ಮಾಡುವ ರೀತಿ ನನಗೆ ತುಂಬಾ ಇಷ್ಟವಾಯಿತು. ಅವಳಿಗೆ ನನ್ನ ಮಗಳು ಒಂದು ತಾಸಿಗೆ 10 ಪೌಂಡನಂತೆ ಸಂಬಳ ಕೊಡುತ್ತಾಳೆ. ಅವಳನ್ನು ನೋಡಿದರೆ ಯಾರೂ ಕೆಲಸದವಳು ಎಂದು ಹೇಳಲು ಸಾಧ್ಯವೇ ಇಲ್ಲ. ನಮ್ಮನ್ನು ಸಹ ತುಂಬಾ ಪ್ರೀತಿಯಿಂದ ಮಾತನಾಡಿಸುತ್ತಿದ್ದಳು. ನಾವು ತಿರುಗಿ ಇಂಡಿಯಾಗೆ ಬರುವ ವಿಷಯ ತಿಳಿದು ಬೇಸರಪಟ್ಟುಕೊಂಡಳು. ಇಂಡಿಯಾದಲ್ಲಿ ಕೆಲಸದವರು ಕೆಲವರು ಚೆನ್ನಾಗಿ ಮಾಡಿದರೆ ಕೆಲವರು ಕೆಲಸಗಳ್ಳರು. ಕೆಲವರು ಸ್ವಚ್ಛವಿದ್ದರೆ ಕೆಲವರು ತುಂಬಾ ಗಲೀಜು, ಇಂಡಿಯಾದಲ್ಲಿ ಮನೆಗೆಲಸ ಮಾಡುವವರ ಪರಿಸ್ಥಿತಿ ಸರಿಯಾಗಿರುವುದಿಲ್ಲ. ಕೆಲವರ ಗಂಡಂದಿರು ಕುಡಿದು ಬಂದು ರಾತ್ರಿ ಹೊಡೆಯುವವರು ಇದ್ದಾರೆ. ಮನೆಯಲ್ಲಿ ಬಡತನ, ಅತ್ತೆ- ಮಾವನ ಕಾಟ ಹೀಗೆ ತಮ್ಮ ಚಿಂತೆ ಮಕ್ಕಳ ಚಿಂತೆ ಮನೆಯ ಚಿಂತೆಯಲ್ಲಿ ಅವರಿಗೆ ಕೆಲಸ ಮಾಡಲು ಸಾಧ್ಯವಾಗದು. ಹೀಗಾಗಿ ಅವರು ತಮ್ಮ ತಮ್ಮ ನೋವಿನಲ್ಲೇ ಕಷ್ಟದ ಜೀವನ ಸಾಗಿಸುತ್ತಿರುತ್ತಾರೆ. ಈ ವರ್ಗದ ಜನರಲ್ಲಿ ಹೆಚ್ಚಿನ ಜನರ ಗಂಡಂದಿರು ಕುಡುಕರಾಗಿರುತ್ತಾರೆ. ಹೀಗಾಗಿ ಇಂಡಿಯಾ ಜನರ ಜೀವನಕ್ಕೂ ಲಂಡನ್ ಜನರ ಜೀವನಕ್ಕೂ ತುಂಬಾ ಅಂತರವಿದೆ.

ಇಂಗ್ಲೀಷರು ವಾರದ ಕೊನೆಯಲ್ಲಿ ತಮ್ಮ ರಜಾ ದಿನಗಳನ್ನು ಮಜಾ ಮಾಡಲು ವಿನಿಯೋಗಿಸುತ್ತಾರೆ. ಕೆಲವರು ಸಂಸಾರ ಸಮೇತ ಸುತ್ತಾಡಲು ಹೊರಗಡೆ ಹೋದರೆ ಇನ್ನೂ ಕೆಲವರು ತಮ್ಮ ಸ್ನೇಹಿತರ ಜೊತೆ ಮನೆಯಲ್ಲೇ ಪಾರ್ಟಿ ಮಾಡುತ್ತಾರೆ. ಅಂದು ಅವರು ಬಾರ್ಬಿಕ್ಕೂ ಮಾಡುತ್ತಾರೆ. ಬಾರ್ಬಿಕ್ಯೂ ಎಂದರೆ ಅದು ಗಾರ್ಡನ್ಏ ರಿಯಾದಲ್ಲಿ ಇರುತ್ತದೆ. ಅಲ್ಲಿ ಒಂದು ಒಲೆಯ ಥರ ಸ್ಟಾಂಡ್ ಇರುತ್ತದೆ. ಅದರ ಕೆಳಗಡೆ ಇದ್ದಿಲಿನಿಂದ ಬೆಂಕಿ ಮಾಡಿ ಮೇಲಿನ ಟ್ರೇನಲ್ಲಿ ಮಸಾಲೆ ಹಚ್ಚಿದ ಕೋಳಿಯ ಮಾಂಸವನ್ನು ಬೇಯಿಸುತ್ತಾರೆ. ಮತ್ತು ಬೇಯಿಸಿದ ಮಾಂಸವನ್ನು ವೈನ್, ವಿಸ್ಕಿ ಶಾಂಫನ್ ಜೊತೆ ಕುಡಿದು ತಿನ್ನುತ್ತಾರೆ, ಇದು ಅಲ್ಲಿಯ ಜನರಿಗೆ ತುಂಬಾ ಸಂತೋಷವನ್ನು ಕೊಡುತ್ತದೆ. ಕೆಲವರು ಸಾಫ್ಟ್ ಡ್ರಿಂಕ್ಸ್ ಜೊತೆ ಸಹ ಅವನ್ನು ತಿಂದು ಮಜಾ ತೆಗೆದುಕೊಳ್ಳಬಹುದು.

ಲಂಡನ್‌ನಲ್ಲಿ ಭಾರತದ ಪಂಜಾಬಿಗಳು ಗುಜರಾತಿಗಳು ತುಂಬಾ ಜನರಿದ್ದಾರೆ. ಅವರು ಬಹಳ ವರುಷಗಳಿಂದ ಅಲ್ಲಿ ನೆಲೆಸಿದ್ದಾರೆ ಮತ್ತು ಪಾಶ್ಚಾತ್ಯ ಜೀವನಕ್ಕೆ ಹೊಂದಿಕೊಂಡುಬಿಟ್ಟಿದ್ದಾರೆ. ಅವರ ಬಂಧುಗಳನ್ನು ಸಹ ಅಲ್ಲಿಗೆ ಕರೆಸಿಕೊಂಡಿದ್ದಾರೆ. ಅವರಲ್ಲಿ ಕೆಲವರು ಅಲ್ಲಿರುವ ಭಾರತೀಯರ ಮನೆಗಳಲ್ಲಿ ಅಡಿಗೆ ಮಾಡುವುದು ಮತ್ತು ಮಕ್ಕಳನ್ನು ನೋಡಿಕೊಳ್ಳುವುದು ಹೀಗೆ ಮಾಡಿ ಹಣ ಗಳಿಸುತ್ತಾರೆ. ನನ್ನ ಮಗಳ ಮನೆಯಲ್ಲೂ ಸಹ ಗುಜರಾತಿ ಹೆಂಗಸೊಬ್ಬಳು ಅಡಿಗೆ ಮಾಡಲು ಬರುತ್ತಾಳೆ. ಅವಳು ಅಲ್ಲಿ ಅವಳ ಗಂಡನ ಅಜ್ಜಿಯನ್ನು ನೋಡಿಕೊಳ್ಳಲು ಮಗನನ್ನು ಇಂಡಿಯಾದಲ್ಲಿ ಬಿಟ್ಟು ಲಂಡನ್ನಿಗೆ ಹೋಗಿದ್ದಾಳೆ. ಅಜ್ಜಿ ಲಂಡನ್ ನಿವಾಸಿಯಾಗಿದ್ದಾಳೆ. ಅಲ್ಲಿ ಅಜ್ಜಿಗೆ ತುಂಬಾ ಆಸ್ತಿ ಇದೆ. ಅಜ್ಜಿಯ ವಯಸ್ಸು 85 ವರ್ಷ.

ಇಂಗ್ಲೆಂಡಿನಲ್ಲಿ ವಾಹನ ಚಾಲಕರಿಗೂ ಸಹ ಶಿಸ್ತಿನ ಕಾನೂನುಬದ್ಧವಾದ ಕಾಯಿದೆ ಇದೆ. ಪ್ರತಿಯೊಬ್ಬ ಚಾಲಕನು ವಾಹನ ನಡೆಸುವಾಗ ಸಣ್ಣ ತಪ್ಪನ್ನೂ ಮಾಡುವಂತಿಲ್ಲ. ಅಲ್ಲಲ್ಲಿ ಸಿ.ಸಿ. ಕ್ಯಾಮರಾಗಳನ್ನು ಇಟ್ಟಿರುತ್ತಾರೆ. ಗಾಡಿಯ ವೇಗದ ಮಿತಿ 35 ಪರ್ ಕಿ.ಮೀ. ಇದ್ದರೆ ಅಷ್ಟೇ ವೇಗದಲ್ಲಿ ನಡೆಸಬೇಕು. ಎಲ್ಲಾದರೂ ಗಡಿಬಿಡಿಯಲ್ಲಿ ವೇಗ ಹೆಚ್ಚಾದರೆ ಸಿ. ಸಿ. ಕ್ಯಾಮರಾದಲ್ಲಿ ಗಾಡಿಯ ನಂಬರ್ ಗೊತ್ತಾಗಿ ದಂಡದ ಚೀಟಿ ಮನೆಗೆ ಬಂದು ಮುಟ್ಟುತ್ತದೆ. ಆಗಲೇ ವಾಹನ ಸವಾರರಿಗೆ ತಾವು ಮಾಡಿದ ತಪ್ಪು ಗೊತ್ತಾಗುತ್ತದೆ. ಒಮ್ಮೆ ನಮ್ಮ ಮಗಳು ಅಳಿಯ ಶಾಪಿಂಗ್ ಮಾಲ್‌ಗೆ ಹೋಗಿದ್ದರಂತೆ. ಗಾಡಿ ಪಾರ್ಕಿಂಗ್ ಜಾಗದಲ್ಲಿ ಕಾರು ನಿಲ್ಲಿಸುವಾಗ ಎದುರುಗಡೆಯ ಗಾಡಿಗೆ ಸ್ವಲ್ಪವೇ ತಾಗಿತ್ತಂತೆ, ಅದನ್ನು ಅವರು ಅಷ್ಟಾಗಿ ಗಮನಿಸಿಲ್ಲವಂತೆ, ಆದರೆ ಮನೆಗೆ ದಂಡದ ಚೀಟಿ ಬಂದಾಗಲೇ ಅವರಿಗೆ ಗೊತ್ತಾಗಿದ್ದು ಹೀಗೆ ಸಣ್ಣ ತಪ್ಪು ಮಾಡಿದರೂ ಕಾನೂನಿನಿಂದ ತಪ್ಪಿಸಿಕೊಳ್ಳುವಂತಿಲ್ಲ. ಅದೇ ರೀತಿ ಆಸ್ಪತ್ರೆಯಲ್ಲಿ ಸಹ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಸ್ವಲ್ಪ ಹೆಚ್ಚುಕಡಿಮೆಯಾದರೂ ರೋಗಿಗಳು ಗಲಾಟೆ ಮಾಡಿ ಲಕ್ಷಗಟ್ಟಲೇ ಹಣ ವಸೂಲಿ ಮಾಡುತ್ತಾರೆ. ಅದಕ್ಕೆ ಅವರಿಗೆ ಮೆಡಿಕಲ್ ಇನ್ಸುರೆನ್ಸ್ ಇರುತ್ತದೆ. ಇದಕ್ಕೆ ಸೂ ಮಾಡುವುದು ಎನ್ನುತ್ತಾರೆ.

ಮಗಳ ಮನೆಯ ಸುತ್ತ-ಮುತ್ತಲೂ ಹೆಚ್ಚಾಗಿ ಇಂಗ್ಲೀಷರೇ ಇದ್ದಾರೆ. ಮಗಳ ಪಕ್ಕದ ಮನೆಯಲ್ಲಿ ಒಬ್ಬಳೇ ಇಂಗ್ಲಿಷ್ ಮಹಿಳೆ ವಾಸಿಸುತ್ತಿದ್ದಾಳೆ. ಮೊದಲು ಅವಳು ಅವಳ ಗಂಡನ ಜೊತೆ ಇರುತ್ತಿದ್ದಳು. ಅವನು ಏರ್‌ಪೋರ್ಸ್‌ನಲ್ಲಿ ದೊಡ್ಡ ಆಫೀಸರ ಆಗಿದ್ದನಂತೆ ಅವನು ಅಕಸ್ಮಾತ್ ಸತ್ತುಹೋದನಂತೆ. ಅವನು ಆಸ್ಪತ್ರೆಯಲ್ಲಿ ಸತ್ತು ಹೋಗಿದ್ದನಂತೆ. ಆ ವಿಷಯ. ಇವರಿಗೆ ಗೊತ್ತಾಗಲೇ ಇಲ್ಲವಂತೆ. ನಮ್ಮ ದೇಶದಲ್ಲಿ ಪಕ್ಕದ ಮನೆಯಲ್ಲಿ ಜೋರಾಗಿ ಮಾತಾಡಿದರೂ ಗೊತ್ತಾಗುತ್ತದೆ. ಅಷ್ಟೇ ಏಕೆ ಹಾಲು ಹೊತ್ತಿದರೂ ಗೊತ್ತಾಗುತ್ತದೆ. ಒಂದು ವಾರದ ನಂತರ ಯಾರೋ ಅವರು ಮನೆಗೆ ಹೂವಿನ ಬೊಕ್ಕೆ ಕೊಡಲು ಬಂದಾಗ ಅವರ ಮನೆಗೆ ಬೀಗ ಇದ್ದುದನ್ನು ನೋಡಿ ಹೊರಗೆ ಬಂದ ನಮ್ಮ ಅಳಿಯನ ಹತ್ತಿರ ಅವರಿಗೆ ಬೊಕ್ಕೆ ಕೊಡಲು ಹೇಳಿ ವಿಷಯ ತಿಳಿಸಿದರಂತೆ. ಹೀಗೆ ಅಲ್ಲಿ ಒಬ್ಬರ ಮನೆಯ ವಿಷಯ ಒಬ್ಬರಿಗೆ ಗೊತ್ತಾಗುವುದಿಲ್ಲ. ಅಲ್ಲಿ ಯಾರೂ ಮನೆಯ ಬಾಗಿಲು ಬಡಿಯುವುದಿಲ್ಲ. ಏನಾದರೂ ವಿಷಯ ತಿಳಿಸುವದಿದ್ದರೆ ಅದನ್ನು ಚೀಟಿಯಲ್ಲಿ ಬರೆದು ಬಾಗಿಲಿಗೆ ಸಿಕ್ಕಿಸುತ್ತಾರೆ. ಇಲ್ಲವೇ ಲೆಟ‌ರ್ ಬೋಕ್ಸ್‌ನಲ್ಲಿ ಹಾಕುತ್ತಾರೆ. ಎದುರಿಗೆ ಸಿಕ್ಕಿದಾಗ ಮಾತ್ರ ‘ಹಾಯ್ ಹಲೋ’ ಎಂದು ಒಂದು ಸಣ್ಣ ನಗೆ ಬೀರುತ್ತಾರೆ. ಮಗಳ ಪಕ್ಕದ ಮನೆಯಲ್ಲಿ ಈಗ ಲೇಡಿ ಒಬ್ಬಳೆ ವಾಸಿಸುತ್ತಾಳೆ. ತುಂಬಾ ಸುಂದರವಾದ ಹೆಂಗಸು ಅಷ್ಟೇ ಚೆನ್ನಾಗಿ ಉಡುಗೆಗಳನ್ನು ತೊಡುತ್ತಾಳೆ. ಅವಳ ಡ್ರೆಸಿಂಗ್ ಸೆನ್ಸ್ ತುಂಬಾ ಚೆನ್ನಾಗಿದೆ. ಕೂದಲು ಪೂರ್ತಿ ಬಾಬ್‌ಕಟ್ ಮಾಡಿಕೊಂಡಿದ್ದಾಳೆ. ಅವಳು ತೊಡುವ ತಿಳಿ ನೀಲಿ, ತಿಳಿ ಹಳದಿ, ಗುಲಾಬಿ ಟೀ ಶರ್ಟ್ ತೊಟ್ಟು ಕಡು ದಟ್ಟವಾದ ಬಣ್ಣದ ಪ್ಯಾಂಟ್ ತೊಟ್ಟು ಕೈಯಲ್ಲಿ ಸೀಗರೇಟ ಹಿಡಿದು ಇನ್ನೊಂದು ಕೈಯಲ್ಲಿ ಶರಾಬಿನ ಗ್ಲಾಸ್ ಹಿಡಿದು ಮನೆಯ ಹಿಂದಿನ ತೋಟದ ಕಲ್ಲು ಬೆಂಚಿನಲ್ಲಿ ಕುಳಿತು, ಒಂದು ಕೈಯಲ್ಲಿ ಸಿಗರೇಟು ಸೇದಿ ಹೊಗೆ ಬಿಡುವುದು ಇನ್ನೊಂದು ಕೈಯಲಿ ಶರಾಬು ಗುಟುಕರಿಸುವ ಆ ಸುಂದರ ದೃಶ್ಯವನ್ನು ನಾನು ಮಗಳ ಮನೆಯ ಮಾಳಿಗೆಯ ಮೇಲಿನಿಂದ ನೋಡಿ ಬೆರಗುಗೊಳ್ಳುತ್ತಿದ್ದೆ. ಅವಳಿಗೆ ಮಗ ಮಗಳು ಮೊಮ್ಮಕ್ಕಳು ಎಲ್ಲಾ ಇದ್ದಾರೆ. ಆದರೆ ಅವರು ಬೇರೆ ಕಡೆ ವಾಸಿಸುತ್ತಾರೆ. ವಾರದ ಕೊನೆಯಲ್ಲಿ ಅವರು ಇವಳ ಬಳಿ ಬರುತ್ತಾರೆ. ಇಲ್ಲದಿದ್ದರೆ ಇವಳನ್ನು ಅವರ ಬಳಿ ಕರೆದುಕೊಂಡು ಹೋಗುತ್ತಾರೆ.

ಅವಳು ಸಹ ನಾನು ಗಾರ್ಡನ್‌ನಲ್ಲಿ ಕೆಲಸ ಮಾಡುವುದನ್ನು ನೋಡುತ್ತಿದ್ದಳು ಮತ್ತು ಆಗಾಗ ನನ್ನ ಬಗ್ಗೆ ಮಗಳ ಬಳಿ ವಿಚಾರಿಸುತ್ತಾ ಇದ್ದಳಂತೆ. ಒಮ್ಮೆ ನಾನು ಅವಳು ಭೆಟ್ಟಿಯಾದಾಗ ವಿಶ್ ಮಾಡಿದೆ. ನಾನು ಇಂಗ್ಲೀಷಿನಲ್ಲಿ ಮಾತಾಡಿದ್ದು ಕೇಳಿ ಅವಳಿಗೆ ತುಂಬಾ ಸಂತೋಷವಾಯಿತು. ಅವಳಿಗೆ ಸಹ ತೋಟದಲ್ಲಿ ಕೆಲಸ ಮಾಡುವದೆಂದರೆ ತುಂಬಾ ಖುಷಿಯಂತೆ. ಅವಳ ತೋಟದಲ್ಲಿ ಸಹ ತುಂಬಾ ಹೂವಿನ ಗಿಡಗಳೂ ಗೊಂಬೆಗಳೂ ಇವೆ. ಅದನ್ನು ಚೆನ್ನಾಗಿ ಜೋಡಿಸಿಟ್ಟಿದ್ದಾಳೆ. ಅವಳ ಹೆಸರು ಸಾರಾ ಅವಳಿಗೆ ಸುಮಾರು 70 ವರ್ಷವಾಗಿರಬಹುದು. ಈ ವಯಸಿನಲ್ಲಿ ಅವಳಿಗೆ ಜೀವನದಲ್ಲಿ ಇರುವ ಆಸಕ್ತಿಯನ್ನು ಕಂಡು ತುಂಬಾ ಸಂತೋಷವಾಯಿತು. ಆಗಾಗ ನನ್ನ ಬಳಿ ಸ್ವಲ್ಪ ಸ್ವಲ್ಪ ಮಾತನಾಡುತ್ತಿದ್ದಳು. ಆದರೆ ನನಗೆ ಅವರ ಇಂಗ್ಲಿಷ್ ಮಾತಾಡುವ ಉಚ್ಚಾರಣೆ ಅಷ್ಟಾಗಿ ಅರ್ಥವಾಗುತ್ತಿರಲಿಲ್ಲ. ಹೀಗಾಗಿ ಹೆಚ್ಚಿನ ಮಾತನಾಡಲು ಹೋಗುತ್ತಿರಲಿಲ್ಲ. ಅವಳು ಮನೆಯಲ್ಲಿದ್ದರು ಆ ಕಡೆಯಿಂದ ಒಂದು ಚಿಕ್ಕ ಶಬ್ದ ಸಹ ಬರುತ್ತಿರಲಿಲ್ಲ. ಅವಳು ಇದ್ದಾಳೋ ಇಲ್ಲವೋ ಎಂದು ಸಹ ತಿಳಿಯುತ್ತಿರಲಿಲ್ಲ. ನಾನು ಅಲ್ಲಿ ಗಮನಿಸಿದ ವಿಷಯ ಎಂದರೆ ಎಲ್ಲೂ ಟ್ರಾಫಿಕ್ ಜಾಮ್ ಇಲ್ಲ, ಯಾವುದಕ್ಕೂ ಕ್ಯೂ ಇಲ್ಲ. ಕೊಳಚೆ ಪ್ರದೇಶಗಳಿಲ್ಲ, ಜೋಪಡಿ ಪಟ್ಟಿಗಳಿಲ್ಲ. ಸಿಗ್ನಲ್‌ನಲ್ಲಿ ಬಂದು ಕಾಡುವ ಭಿಕ್ಷುಕರು, ಚಕ್ಕಾಗಳು ಇಲ್ಲ. ಬಡತನ ಇಲ್ಲ, ಎಲ್ಲೂ ಹೊಲಸು ವಾಸನೆ ಇಲ್ಲ, ನೀರು, ಗ್ಯಾಸ್, ಪೆಟ್ರೋಲಿಗೆ ಕೊರತೆಯಿಲ್ಲ. ಸುಂದರ ಸ್ವಚ್ಛ ವಾತಾವರಣ. ಕೈ ತುಂಬಾ ಸಂಬಳ, ಹೀಗಿರುವಾಗ, ವಿದೇಶಕ್ಕೆ ಹೋದ ಯುವಕ-ಯುವತಿಯರು ಭಾರತಕ್ಕೆ ಮರಳಲೂ ಇಷ್ಟಪಡುವದಿಲ್ಲ. ಹೀಗೆ ನಮ್ಮ ದೇಶದ ಪ್ರತಿಭಾವಂತರು ವಿದೇಶದತ್ತ ಮುಖ ಮಾಡಿದರೆ ನಮ್ಮ ದೇಶದ ಪ್ರತಿಭೆಗಳೆಲ್ಲ ವಿದೇಶದ ಪಾಲಾದಂತೆ ಸರಿ.

ನಾನು ನನ್ನ ಮಗಳನ್ನು ಈ ಬಗ್ಗೆ ಕೇಳಿದೆ. ಅದಕ್ಕವಳು ಒಂದು ಸಲ ನಾವು ಇಲ್ಲಿಯ ಒಳ್ಳೆಯ ಗುಣಮಟ್ಟದ ಜೀವನಕ್ಕೆ ಹೊಂದಿಕೊಂಡುಬಿಟ್ಟಿದ್ದೇವೆ. ಇಲ್ಲಿ ಸಿಗುವ ಸಂಬಳ ನಮಗೆ ಇಂಡಿಯಾದಲ್ಲಿ ಸಿಗುವುದಿಲ್ಲ. ನಮಗೆ ಬೇಕಾದಂತಹ ಎಲ್ಲ ಸೌಲಭ್ಯಗಳೂ ಇಲ್ಲಿವೆ. ಮೊದಲು ಸ್ವಲ್ಪ ಹೊಂದಿಕೊಳ್ಳಲು ತೊಂದರೆಯಾದರೂ ಈಗ ಎಲ್ಲವೂ ಸರಿಯಾಗಿದೆ. ವರ್ಷದಲ್ಲಿ ಒಮ್ಮೆ ಇಲ್ಲವೆ ಎರಡು ಸಲ ನಿಮ್ಮನ್ನು ನೋಡಲು ಬರುತ್ತೇವೆ. ದಿನಾಲು ಪೋನಿನಲ್ಲಿ ಮಾತಾಡುತ್ತೇವೆ. ಹೀಗಾಗಿ ನಮಗೆ ನಿಮ್ಮಿಂದ ದೂರ ಇದ್ದೇವೆ ಎಂದು ಎನಿಸುವುದಿಲ್ಲ. ಊರಲ್ಲಿ ಇದ್ದವರೆಲ್ಲ ತಂದೆ-ತಾಯಿಯವರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆಂದು ಗ್ಯಾರಂಟಿ ಇಲ್ಲ. ಭಾರತದಲ್ಲಿ ಎಷ್ಟೋ ವಿದ್ಯಾವಂತರು ಸಹ ತಮ್ಮ ತಂದೆ-ತಾಯಿಯವರನ್ನು ಅನಾಥಾಶ್ರಮದಲ್ಲಿ ಇಟ್ಟ ಉದಾಹರಣೆಗಳು ಇವೆ. ವಿದ್ಯಾವಂತರು ಯಾರೂ ಹೊರಗೆ ತೋರಿಸಿಕೊಳ್ಳುವುದಿಲ್ಲ.ಇಲ್ಲಿ ಸಹ ಜಾತಿಭೇದ ಇದೆ. ಆದರೆ ಇಂಡಿಯಾದಲ್ಲಿ ಸಹ ಕೆಳಗಿನ ಜಾತಿ, ಮೇಲಿನ ಜಾತಿ ಎಂಬ ಜಾತಿಭೇದ ಇದೆಯಲ್ಲವೇ? ಎಂದು ನಮಗೆ ಸಮಾಧಾನ ಹೇಳುತ್ತಾಳೆ.

ಅವರಿಗೆ ಒಂದೇ ಕಾಳಜಿ. ನಮ್ಮಿಬ್ಬರ ಆರೋಗ್ಯದ ಬಗ್ಗೆ. ಇಂಡಿಯಾದಲ್ಲಿ ಸರಿಯಾದ ಸಮಯಕ್ಕೆ ವೈದ್ಯಕೀಯ ಚಿಕಿತ್ಸೆ ಸಿಗದೆ ಸತ್ತವರು ತುಂಬಾ ಜನ. ಆದರೆ ವಿದೇಶಗಳಲ್ಲಿ ಮನುಷ್ಯನ ಪ್ರಾಣಕ್ಕೆ ಮಹತ್ವ ಕೊಡುತ್ತಾರೆ. ಒಂದು ಸಲ ಅಂಬ್ಯುಲೆನ್ಸ್‌ಗೆ ಪೋನ್ ಮಾಡಿದರೆ ಅವರು ಕೂಡಲೇ ಆಂಬ್ಯುಲೆನ್ಸ್ ತೆಗೆದುಕೊಂಡು ಬರುತ್ತಾರೆ. ಮತ್ತು ಅದರಲ್ಲಿ ಆಕ್ಸಿಜನ್, ವೆಂಟಿಲೇಟರ್, ರಕ್ತ ಹೀಗೆ ಎಲ್ಲ ವ್ಯವಸ್ಥೆಯೂ ಇರುತ್ತದೆ ರೋಗಿ ಜೊತೆ ಯಾರಾದರೂ ಇರಲೇಬೇಕೆಂಬ ಅವಶ್ಯಕತೆ ಇಲ್ಲ. ಆಸ್ಪತ್ರೆಯವರೇ ಎಲ್ಲ ಜವಾಬ್ದಾರಿ ತೆಗೆದುಕೊಂಡು ರೋಗಿಯ ಆರೈಕೆ ಮಾಡುತ್ತಾರೆ. ವಯಸ್ಸಾದ ಮುದುಕರು ಇದ್ದರೆ ಅವರು ಮನೆಗೆ ಬಂದ ಮೇಲೆ ತಮ್ಮ ಜೊತೆ ಬಂದು ಇರುವಂತೆ ಕೇಳಿಕೊಳ್ಳುತ್ತಿದ್ದಾರೆ. ಎಂದರೆ ಸರಕಾರವೇ ನರ್ಸ್‌ಗಳನ್ನು ನೇಮಿಸುತ್ತವೆ. ಹೀಗೆ ನಾವು ವಿದೇಶೀಯರಿಂದ ಕಲಿಯುವುದು ತುಂಬಾ ಇದೆ. ನಾನು ನನ್ನ ಪ್ರಯಾಣದ ಅವಧಿಯಲ್ಲಿ ತುಂಬಾ ವಿಷಯವನ್ನು ತಿಳಿದುಕೊಂಡೆ. ಅದಕ್ಕೇ ಹಿರಿಯರು ಹೇಳುತ್ತಾರೆ, ‘ದೇಶ ತಿರುಗು ಕೋಶ ಓದು, ಇನ್ನೂ ಕೆಲವರು ದೇಶ ತಿರುಗಿದವನಿಗೆ ಭಾಷೆ ಕಲಿಸುವದು ಬೇಡ’ ಎಂದು. ಇದರ ಅರ್ಥ ಇಷ್ಟೇ ನಾವು ನಾನಾ ಕಡೆ ಪ್ರವಾಸ ಮಾಡುವುದರಿಂದ ನಮ್ಮ ಅನುಭವಜ್ಞಾನ ತಿಳಿವಳಿಕೆ ಹೆಚ್ಚುತ್ತದೆ.

ಕೊನೆಗೂ ನಾವು ಎರಡು ಸುಂದರವಾದ ದೇಶಗಳನ್ನು ನೋಡಿ ಎರಡು ಮಕ್ಕಳೊಡನೆ ಸಂತೋಷದಿಂದ ದಿನಕಳೆದು ಭಾರತಕ್ಕೆ ಹೊರಟು ನಿಂತೆವು. ಇಂಗ್ಲೆಂಡಿನ ಗೆಟ್‌ವಿಕ್ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿ ವಿಮಾನ ಏರಿ ಟರ್ಕಿ ವಿಮಾನ ನಿಲ್ದಾಣಕ್ಕೆ ಬಂದೆವು. ಅಲ್ಲಿ ಸುಮಾರು 3-4 ತಾಸು ಕಾಯಬೇಕಾಯಿತು. ಅಲ್ಲಿಂದ ಮುಂಬಯಿ ವಿಮಾನ ಏರಿ ಮುಂಬಯಿಗೆ ಬಂದೆವು. ಅಲ್ಲಿಂದ ರೈಲ್ವೆಯಲ್ಲಿ ಧಾರವಾಡಕ್ಕೆ ಬಂದು ಮುಟ್ಟಿದೆವು. ನಮ್ಮ ಮನೆ ಸೇರಿದ ಸಂತೋಷ ಒಂದು ಕಡೆ ಆದರೆ, ಇನ್ನೊಂದು ಕಡೆ ಮಗ ಮತ್ತು ಮಗಳ ಜೊತೆ ಕಳೆದ ದಿನಗಳ ನೆನಪು ಕಾಡುತ್ತಿತ್ತು.

Leave a Comment

Comments

No comments yet. Why don’t you start the discussion?

    Leave a Reply