ಬೋಸ್ಟನ್ ನಗರ
ಮುಂದೆ ನಾವು ಬಸ್ಸನ್ನೇರಿ ಬೋಸ್ಟನ್ ನಗರದ ಕಡೆ ಪ್ರಯಾಣದ ನಂತರ ರಾತ್ರಿಯ ವೇಳೆ ನಾವು ಬೋಸ್ಟನ್ ನಗರ ತಲುಪಿದೆವು. ಅಲ್ಲಿ ನಮ್ಮ ಗೈಡ್ ನಮ್ಮನ್ನು ಅಲ್ಲಿಯ ಚೈನಾ – ಟೌನ್‌ಗೆ ಕರೆದುಕೊಂಡು ಹೋದನು. ಅಲ್ಲಿ ಚೈನಾ ಪ್ರವಾಸಿಗರಿಗಾಗಿ ಸ್ಪೆಷಲ್ ಲೊಬ್ ಸ್ಟಾರ್ ಊಟ ರೆಡಿಯಾಗಿತ್ತು ಅದಕ್ಕಾಗಿ ನಮ್ಮ ಬಳಿ ಒಬ್ಬೊಬ್ಬರಿಂದ 25 ಡಾಲರ್ ಹಣವನ್ನು ಕೇಳಿ ಪಡೆದಿದ್ದರು. ನಾವು ಸಹ ಮಾಂಸಹಾರಿಗಳಾಗಿದ್ದರಿಂದ ಏನಿದೆ ನೋಡುವಾ? ಎಂದು ಕೂತುಹಲದಿಂದ ಒಳಗೆ ಹೋದೆವು. ನಮ್ಮ ಟೂರ್‌ನಲ್ಲಿ 38 ಜನರೂ ಚೈನಿಗಳೇ. ಅವರಿಗೆ ಲೋಬ್‌ಸ್ಟಾರ್ ಊಟ ಎಂದರೆ ಪಂಚಪ್ರಾಣವಂತೆ ಅದರಿಂದ ಅವರೆಲ್ಲರೂ ತುಂಬಾ ಖುಷಿಯಲ್ಲಿದ್ದರು. ಅವರೆಲ್ಲ ಒಂದೊಂದು ಟೇಬಲ್ಲಿನ ಬಳಿ 5-6 ಜನ ರೌಂಡ್ ಆಗಿ ಕುಳಿತಿದ್ದರು. ಅವರ ಮುಂದೆ ದೊಡ್ಡ ದೊಡ್ಡ ಗಾಜಿನ ಪ್ಲೇಟಿನಲ್ಲಿ ಲೋಬಸ್ಸಾರನ್ನು ಪೂರ್ತಿಯಾಗಿ ಬೇಯಿಸಿ ಇಟ್ಟಿದ್ದರು. ಅವರು ಅದನ್ನು ಕಡ್ಡಿಯಲ್ಲಿ ಚುಚ್ಚಿ ಚುಚ್ಚಿ ತಿನ್ನುತ್ತಿದ್ದರು. ಇನ್ನೊಂದು ಪ್ಲೇಟಿನಲ್ಲಿ ಪ್ರಾನ್ಸ್ ಮತ್ತು ದನದ ಮಾಂಸವನ್ನು ಬೇಯಿಸಿ ಇಟ್ಟಿದ್ದರು. ಮಧ್ಯದಲ್ಲಿ ಕೆಲವು ಜೊತೆಗೆ ಹಾವು ಚೇಳುಗಳು ಹೆಚ್ಚಾಗಿ ಇರಬೇಕು. ಅವರು ತರಕಾರಿ ತುಂಡುಗಳು ನಮ್ಮನ್ನು ತಮ್ಮ ಜೊತೆ ಊಟಕ್ಕೆ ಬರುವಂತೆ ಕರೆಯುತ್ತಿದ್ದರು. ನನಗಂತೂ ಅದನ್ನು ನೋಡಿಯೇ ವಾಂತಿ ಬಂದಂತೆ ಆಯಿತು. ಊಟ ಮಾಡುವುದಿರಲಿ ಅಲ್ಲಿ ನಿಲ್ಲಲೂ ಮನಸ್ಸು ಬರಲಿಲ್ಲ. ಇವರಿಗೆ ನಾವು ಹೊರಗೆ ಹೋಗಿ ಬಿಡುವಾ ಎಂದು ಹೊರಟೆವು. ಅಷ್ಟರಲ್ಲಿ ನಮ್ಮ ಗೈಡ್‌ಗಳಾದ ಡೀನ್ ಮತ್ತು ಲೀ ಬಂದು ನೀವು ಅಷ್ಟೊಂದು ಹಣ ಕೊಟ್ಟಿದ್ದೀರಿ ಹೇಗೆ ಊಟ ಮಾಡದೆ ಹೋಗುತ್ತೀರಿ. ನಿಮಗಾಗಿ ಪ್ರೈಡ್ ರೈಸ್ ಕೊಡಿಸುತ್ತೇವೆ ಅದನ್ನು ತಿನ್ನಿರಿ ಎಂದರು. ನಿಜವಾಗಲೂ ಅಂದು ನಮಗೆ ಕಾಣದ ದೇಶದಲ್ಲಿ ಒಬ್ಬಂಟಿಗಳಾದೆವು ಎನಿಸಿತು. ನಾವು ಚೈನಾ ದೇಶದಲ್ಲಿ ಇದ್ದಂತೆ ಭಾಸವಾಯಿತು. ಅಲ್ಲಿ ಎತ್ತ ನೋಡಿದರೂ ಚೈನಿ ಮುಖಗಳೇ, ಕೊನೆಯಲ್ಲಿ ನಾವಿಬ್ಬರೇ ಮೂಲೆಯಲ್ಲಿದ್ದ ಟೇಬಲ್ ಬಳಿ ಹೋಗಿಕುಳಿತೆವು, ನಮಗೆ ಎರಡು ಪ್ಲೇಟ್ ತುಂಬ ಬಿರಿಯಾನಿ ತಂದುಕೊಟ್ಟರು. ನನಗಂತೂ ಅದರಲ್ಲಿರುವ ಮಾಂಸದ ತುಂಡು ನೋಡಿ ಅದು ದನದ ಮಾಂಸವೇನೊ ಎನಿಸಿತು.
ಅದರಿಂದ ತುಂಬಾ ಹಸಿವೆಯಾಗಿದ್ದರಿಂದ ಅದರಲ್ಲಿದ್ದ ಬರಿ ಅನ್ನವನ್ನಷ್ಟೇ ಕೆದಕಿ ಕೆದಕಿ ತಿಂದೆವು. ನಾಲ್ಕು ತುತ್ತು ತಿನ್ನುವಷ್ಟರಲ್ಲಿ ಹೊಟ್ಟೆ ತೊಳೆಸಿ ವಾಂತಿ ಬಂದಂತೆ ಆಯಿತು. ಅಷ್ಟಕ್ಕೆ ಊಟ ಬಿಟ್ಟು ಹೊರಗೆ ಬಂದೆವು. ರಾತ್ರಿ 11-00 ಗಂಟೆಗೆ ಎಲ್ಲರೊಟ್ಟಿಗೆ ಶೆರಟಾನ್ ಹೊಟೇಲಗೆ ಹೋಗಿ ಮಲಗಿಕೊಂಡೆವು. ಮಾರನೆಯ ದಿನ ಬೆಳಿಗ್ಗೆ ನಾವು ಬೊಸ್ಟನ್ down townಗೆ ಹೋದೆವು. ಅಲ್ಲಿ ಕುಂಜಿ ಮಾರ್ಕೆಟ್‌ಗೆ ಹೋಗಿ shopping ಮಾಡಿದೆವು. ಮುಂದೆ ಅಟ್ಲಾಂಟಿಕ್ ಮಹಾನಗರ ದಡದ ಡೆಕ್‌ನಲ್ಲಿ ಸುತ್ತಾಡಿದೆವು. ಪಕ್ಕದಲ್ಲೆ ಇರುವ ವಿಮಾನ ನಿಲ್ದಾಣವನ್ನು ನೋಡಿ ಆಶ್ಚರ್ಯಚಕಿತರಾದೆವು. ವಿಮಾನಗಳು ಮಹಾಸಾಗರದ ಮೇಲೆ ತೀರ ಕೆಳಗಿನಿಂದ ಹಾರುತ್ತವೆ. ಹಾರುವಾಗ ನೀರಿನ ಮೇಲೆ ವಿಮಾನ ತೆಲುತ್ತಿದೆಯೇನೋ ಎಂದು ಭಾಸವಾಗುತ್ತಿತ್ತು. ಇನ್ನೊಂದು ವಿಶೇಷವೆಂದರೆ ಸಾಗರದೊಳಗಿನಿಂದ ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ಹೋಗುವ ಹಾದಿ. ಇದು ವಿಜ್ಞಾನಕ್ಕೊಂದು ಸವಾಲು.

ಬೋಸ್ಟನ್ ನಗರ ಸುಂದರವಾದ ನಗರ. ನಾವು ಬೋಸ್ಟನ್ ನಗರ ಎಂದು ಕರೆದರೆ ಅಮೆರಿಕನ್ನರು ಅದನ್ನು ಬಾಸ್ಟನ್ ನಗರವೆಂದು ಕರೆಯುತ್ತಾರೆ. ಬಾಸ್ಟನ್ ನಗರ ಜನದಟ್ಟಣೆಯ ನಗರ ಇಲ್ಲಿ ಅಪಾರ ಸಂಖ್ಯೆಯಲ್ಲಿ ವಾಹನಗಳ ಓಡಾಟ ಇದ್ದರಿಂದ ಆಗಾಗ ಟ್ರಾಫಿಕ್ ಜಾಮ್ ಆಗುತ್ತಿರುತ್ತದೆ. ಮೊದಲು ನಾವು ನೇರವಾಗಿ ಹಾರ್ವಡ್್ರ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದೆವು. ಅದು ತೀರ ಹಳೆಯ ವಿಶ್ವವಿಖ್ಯಾತ ವಿದ್ಯಾ ಕೇಂದ್ರ, ಅಮೆರಿಕಾದಲ್ಲಿರುವ ವಿಶ್ವವಿದ್ಯಾನಿಲಯಗಳು ವಿಶ್ವ ಶ್ರೇಷ್ಠವಾಗಿವೆ. ಅವುಗಳಲ್ಲಿ ಓದುವದೇ ಒಂದು ಅದೃಷ್ಟ, ಇವುಗಳ ಗುಣಮಟ್ಟ ಶ್ರೇಷ್ಠವಾದರೂ ಇವು ಅತ್ಯಂತ ದುಬಾರಿ, ಹಾರ್ವಡ್‌್ರನಲ್ಲಿ 2 ವರ್ಷ ಎಂ.ಬಿ.ಎ. ವ್ಯಾಸಂಗಕ್ಕೆ ಕನಿಷ್ಠ ಎರಡು ಕೋಟಿ ರೂಪಾಯಿ ಖರ್ಚಾಗುತ್ತದೆಯಂತೆ. ವಿಶ್ವದ ಎಲ್ಲೆಡೆಯಿಂದ ಇಲ್ಲಿ ವ್ಯಾಸಂಗಕ್ಕಾಗಿ ಲಕ್ಷಾಂತರ ವಿದ್ಯಾರ್ಥಿಗಳು ಬರುತ್ತಾರೆ. ಅಮೆರಿಕಾದ ವಿ.ವಿ.ಗಳಿಗೂ ನಮ್ಮ ವಿಶ್ವವಿದ್ಯಾನಿಲಯಗಳಿಗೂ ಹೋಲಿಸುವಂತಿಲ್ಲ. ಅಮೆರಿಕಾದ ವಿ.ವಿ.ಗಳು ಅತ್ಯಂತ ಶ್ರೇಷ್ಠ ವಿ.ವಿ.ಗಳಾದರೆ ನಮ್ಮವು ಅತ್ಯಂತ ಕಳಪೆಯಾದವು. ಇವೂ ಜಾತಿ ರಾಜಕಾರಣದ ಕೊಂಪೆಗಳಾಗಿವೆ. ಕೆಲವು ವಿ.ವಿ.ಗಳಲ್ಲಂತೂ ಉಸಿರು ಕಟ್ಟಿಸುವ ವಾತಾವರಣವಿರುತ್ತದೆ.
ಹಾರ್ವಡ್ ವಿಶ್ವವಿದ್ಯಾನಿಲಯವು ಮೊದಲಿಗೆ 1636ರಲ್ಲಿ ಜಾನ್ ಹಾರ್ವಡ್್ರ ವಿಶ್ವವಿದ್ಯಾನಿಲಯ ಸ್ಥಾಪಿತವಾಯಿತು. ವಿಶ್ವವಿದ್ಯಾಲಯದ ಕ್ಯಾಂಪಸ್ ಊರಿನ ನಡುವೆ ಇದೆ. ನಾವು ಕಾಲೇಜಿನ ಆವರಣದ ಒಳಗೆ ಹೋಗುತ್ತಿದ್ದಂತೆ ಇದರ ಸ್ಥಾಪನೆಗೆ ಕಾರಣೀಭೂತನಾದ ಹಾರ್ವಡ್‌್ರ ದೊಡ್ಡ ಪ್ರತಿಮೆಯನ್ನು ನೋಡಿದೆವು. ಅದನ್ನು ಮುಟ್ಟಿ ನಮಸ್ಕಾರ ಮಾಡಿದೆವು. ನಂತರ ವಿಶಾಲವಾದ ತರಗತಿಗಳನ್ನು ದೊಡ್ಡ ಸಭಾಭವನವನ್ನು ಲೈಬ್ರರಿಯನ್ನು ನೋಡಿ ಸ್ವಲ್ಪ ಹೊತ್ತು ಅಲ್ಲಿ ಹುಲ್ಲುಹಾಸಿನ ಮೇಲೆ ಅಡ್ಡಾಡಿದೆವು. ಅಲ್ಲಿ ದೊಡ್ಡ ದೊಡ್ಡ ಮರಗಳು ಇರುವುದರಿಂದ ವಾತಾವರಣ ತುಂಬ ಶಾಂತವಾಗಿ ತಂಪಾಗಿತ್ತು.
ಅದರ ಎದುರಿಗೆ ಎಂ. ಆಯ್. ಟಿ. ಇದೆ. ಎಂ. ಆಯ್. ಟಿ. ಎಂದರೆ ಮೆಸೆಚುಸೆಟ್ಸ್ ಇನ್ಸ್‌ಟ್ಯೂಟ್ ಆಫ್ ಟೆಕ್ನಾಲಜಿ, ಅಮೇರಿಕಾ ಇಂದು ತನ್ನ ಬುದ್ಧಿಮತ್ತೆಯಿಂದ ಹಾಗೂ ವಿಚಾರಧಾರೆಗಳಿಂದ ಇಡೀ ವಿಶ್ವವನ್ನೇ ಆಳುತ್ತಿದೆ. ವಿಶ್ವಮಟ್ಟದಲ್ಲಿ ಈ ರೀತಿಯ ಪ್ರಭಾವವನ್ನು ಸೃಷ್ಟಿ ಮಾಡುವಲ್ಲಿ ಅಮೆರಿಕದ ಶ್ರೇಷ್ಠ ಶಿಕ್ಷಣ ಸಂಸ್ಥೆಗಳಲ್ಲಿ ಬಹುಮುಖ್ಯವಾದುದು ಎಂ.ಆಯ್.ಟಿ. ಇದು ವಿಶ್ವದ ಶ್ರೇಷ್ಠ ತಾಂತ್ರಿಕ ಸಂಸ್ಥೆ. ಇದನ್ನು 1861 ರಲ್ಲಿ ವಿಲಿಯಂ ಬಾರ್ಟನ್ ರೋಜರ್ ಎಂಬ ಮಹಾನುಭಾವ ಸ್ಥಾಪಿಸಿದ. ಇದು ಇಂದು ಬೃಹತ್ ವಿದ್ಯಾಸಂಸ್ಥೆಯಾಗಿ ಬೆಳೆದಿದೆ. ಈ ಶ್ರೇಷ್ಠ ಸಂಸ್ಥೆ ಮಾಡಿದ ಅನ್ವೇಷಣೆಗಳಿಂದಾಗಿ ಇಂದು ಮಾನವನ ಜೀವನ ಸುಲಭವಾಗಿದೆ. ಬೋಸ್ಟನ್ ಒಂದು ಶಿಕ್ಷಣ ಕೇಂದ್ರವಾಗಿದೆ.

ಈ ಮಹಾನ್ ಸಂಸ್ಥೆಯಲ್ಲಿ ಶಿಕ್ಷಣ ಪಡೆದು ಹೊರಬಂದವರ ಸಾಧನೆ ಗಣನೀಯವಾದದ್ದು. ಇಲ್ಲಿ ಓದಿದ ಕಾರಣಕ್ಕಾಗಿ ವಿದ್ಯಾರ್ಥಿಗೆ ದೇಶದ ಯಾವ ಮೂಲೆಯಲ್ಲಾದರೂ ಕೆಲಸ ಸಿಕ್ಕೇ ಸಿಗುತ್ತದೆ. ಒಳ್ಳೆಯ ವೇತನ ಹಾಗೂ ಸಾಮಾಜಿಕ ಮನ್ನಣೆ ಸಿಗುತ್ತದೆ. ಬಾಸ್ಟನ್ ಯುನಿವರ್ಸಿಟಿಯನ್ನು ನೋಡಿದೆವು. ಒಂದು ದೇಶ ತನ್ನ ಪ್ರಜೆಗಳಿಗೆ ನೀಡಬಹುದಾದ ಏಕೈಕ ಮಹತ್ವದ ಆಸ್ತಿ ಎಂದರೆ ಅತ್ಯುತ್ತಮ ಶಿಕ್ಷಣ. ಅಲ್ಲದೆ ಶಾಂತಿಯುತ ಸಾಮಾಜಿಕ ಪರಿವರ್ತನೆಗೆ ಅತ್ಯುತ್ತಮ ಅಸ್ತ್ರವೆಂದರೆ ಉತ್ತಮ ಶಿಕ್ಷಣ. ಇದು ಅತೀ ಶ್ರೀಮಂತರ ಊರು ಸಹ ಹೌದು.
ಬಾಸ್ಟನ್‌ಲ್ಲಿ ಕ್ರೂಸನಲ್ಲಿ ಕೆಲವು ಕಾಲ ವಿಹರಿಸಿದೆವು ನಂತರ ಸ್ವಲ್ಪ ಹೊತ್ತು ಬೋಸ್ಟನ್ ಸಿಟಿಯಲ್ಲಿ ಅಡ್ಡಾಡಿದೆವು. ಆಗಲೇ ನಮಗೆ ಬೇಕಾದಂಥ ತಿಂಡಿಯನ್ನು ತಿಂದು ಹೊಟ್ಟೆ ತುಂಬಿಸಿಕೊಂಡೆವು. ಇಲ್ಲಿಗೆ ನಮ್ಮ ನ್ಯೂ ಯಾರ್ಕ್‌ನಿಂದ ಶುರುವಾದ ಪ್ರವಾಸ ಬೋಸ್ಟನ್‌ವರೆಗೆ – ಮುಗಿದಿತ್ತು. ನಮ್ಮಂತೆ ಕೆಲವರು ಮಾತ್ರ ಮುಂದೆ ಮಯಾಮಿ ಮತ್ತು ಫ್ಲೋರಿಡಾಗೆ ಹೋಗುವವರಿದ್ದೆವು. ನಮ್ಮ ಜೊತೆಗೆ ಬಂದ ಪ್ರವಾಸಿಗರು ಮತ್ತು ಗೈಡ್‌ಗಳಾದ ಡೀನ್ ಮತ್ತು ಲೀ ಅದೇ ಬಸ್ಸಿನಲ್ಲಿ ವಾಪಸ್ಸು ನ್ಯೂ ಯಾರ್ಕಿಗೆ ಹೊರಟರು. ನಾವು ಅವರೆಲ್ಲರಿಗೂ ಬಾಯ್ ಹೇಳಿ ನಮ್ಮ ಪ್ರವಾಸ ಮುಂದುವರೆಸಿದೆವು. ಅವರು ನಮ್ಮನ್ನು ಬೋಸ್ಟನ್ ಏರ್ ಪೋರ್ಟಿಗೆ ಬಿಟ್ಟರು. ನಮಗೆ ಅಲ್ಲಿಂದ ವಿಮಾನ ನಿಲ್ದಾಣದ ಮೇನ್ ಬಾಗಿಲಿಗೆ ಹೋಗುವುದು ಹೇಗೆ ಎಂದು ತಿಳಿಯದೆ ಅತ್ತ ಇತ್ತ ನೋಡುತ್ತಾ ಇದ್ದೆವು.
ಅಷ್ಟರಲ್ಲಿ ಇವರ ಗೆಳೆಯ ವಿಕ್ರಮನ ಫೋನ್ ಬಂತು ಅವನು ಬೋಸ್ಟನಲ್ಲಿ ಕೆಲಸ ಮಾಡುತ್ತಾ ಇದ್ದ. ಅವನು ನಮಗಾಗಿ ವಿಮಾನ ನಿಲ್ದಾಣದ ಒಳಗೆ ಕಾಯುತ್ತಾ ಇದ್ದ. ನಾವು ಒಳಗೆ ಹೋಗುವದು ಹೇಗೆ? ಎಲ್ಲಿ ಸೆಕ್ಯೂರಿಟಿ ಚೆಕ್ ಮಾಡುವದು! ವಿಮಾನ ಯಾವ ಗೇಟಿಗೆ ಬರುತ್ತದೆ. ಏನೂ ತಿಳಿಯದೆ ಪೇಚಾಡುತ್ತಾ ಇರುವಾಗ ಅವನ ಫೋನ್ ಬಂತು. ತುಂಬಾ ಖುಷಿಯಾಯಿತು. ನಾವು ಮುಂದೆ ಸೀರಿಟ್ ಎಂಬ ಕಂಪನಿಯ ವಿಮಾನದಲ್ಲಿ ಮಯಾಮಿಗೆ ಹೋಗಬೇಕಿತ್ತು. ನಾವು ಅವನ ಹತ್ತಿರ ಎಲ್ಲ ವಿವರಗಳನ್ನು ಕೇಳಿ ತಿಳಿದುಕೊಂಡು ಅವನಿದ್ದಲ್ಲಿಗೆ ಹೋಗಿ ಮುಟ್ಟಿದ್ದೆವು. ತುಂಬಾ ದಿನಗಳ ಮೇಲೆ ಗೆಳೆಯನನ್ನು ಕಂಡು ಅವನಿಗೆ ತುಂಬಾ ಸಂತೋಷವಾಯಿತು. ಅವನು ನಮಗಾಗಿ ನಮ್ಮ ಆಹಾರವಾದ ಅನ್ನ, ಚಪಾತಿ, ಸಾಂಬಾರು, ಬಿರಿಯಾನಿ ಎಲ್ಲ ತೆಗೆದುಕೊಂಡು ಬಂದಿದ್ದನು. ನನಗಂತೂ ನಿನ್ನೆಯಿಂದಲೂ ಹೊಟ್ಟೆ ಸರಿಯಾಗಿಲ್ಲವಾದ್ದರಿಂದ ಊಟ ಮಾಡಲು ಸಾಧ್ಯವಾಗಲಿಲ್ಲ. ಪಾಪ ಅವನು ಊಟ ಮಾಡುವಂತೆ ನನಗೆ ತುಂಬಾ ಒತ್ತಾಯ ಮಾಡುತ್ತಿದ್ದ. ಅವನ ಸಮಾಧಾನಕ್ಕೆ ಮಾಡಿದ ಶಾಸ್ತ್ರ ಮಾಡಿದೆ. ನಿಜವಾಗಿಯೂ ಊಟ ಚೆನ್ನಾಗಿತ್ತು, ಆದರೆ ನನಗೆ ಹೊಟ್ಟೆ ತೊಳೆಸುವಿಕೆ ಇನ್ನೂ ನಿಂತಿಲ್ಲವಾದ್ದರಿಂದ ಊಟ ಮಾಡಲು ಸಾಧ್ಯವಾಗಲೇ ಇಲ್ಲ. ಇವರು ಚೆನ್ನಾಗಿ ಊಟ ಮಾಡಿದರು. ಸ್ವಲ್ಪ ಹೊತ್ತು ಅವನ ಜೊತೆ ಮಾತಾಡುತ್ತಾ ಕುಳಿತೆವು. ನಂತರ ನಮ್ಮ ವಿಮಾನದ ಸಮಯವಾಯಿತೆಂದು ಚೆಕ್ ಇನ್ ಮಾಡಲು ಹೊರಟೆವು.
ಮಯಾಮಿ ಪ್ರವಾಸ

ನಂತರ ನಾವು ನಮ್ಮ ಬ್ಯಾಗ್‌ಗಳನ್ನು ಚೆಕ್ ಇನ್ ಮಾಡಲು ಹೋದೆವು. ನಮ್ಮ ಬಳಿ ದೊಡ್ಡ ಸೂಟ್‌ಕೇಸ್‌ಗಳು ಇರಲಿಲ್ಲವಾದರೂ ಸಣ್ಣ ಕ್ಯಾರಿಬ್ಯಾಗ್‌ನ್ನು ಚೆಕ್ ಇನ್ ಮಾಡಿದೆವು ಅದಕ್ಕೂ ಅವರು ಒಂದೊಂದು ಬ್ಯಾಗಿಗೆ 35 ಡಾಲರ ತೆಗೆದುಕೊಂಡರು. ಇನ್ನೂ ಸ್ವಲ್ಪ ಸಮಯವಿದ್ದರಿಂದ ಅವನ ಜೊತೆ ಮಾತನಾಡುತ್ತಾ ಕುಳಿತೆವು. ನಂತರ ಸಮಯವಾದ್ದರಿಂದ ಅವನಿಗೆ ಬೈ ಹೇಳಿ ಸೆಕ್ಯೂರಿಟಿ ಚೆಕ್‌ಗೆ ಹೋದೆವು. ಸೆಕ್ಯೂರಿಟಿ ಚೆಕ್ ಮುಗಿಸಿ ಬೋಡಿರ್ಂಗ್ ಪಾಸ್ ತೆಗೆದುಕೊಂಡು ಸ್ಪಿರಿಟ್ ವಿಮಾನ ಏರಿದೆವು.
ಮಯಾಮಿ ನಗರ
ಸರಿಯಾದ ಸಮಯಕ್ಕೆ ಮಯಾಮಿ ವಿಮಾನ ನಿಲ್ದಾಣ ತಲುಪಿದೆವು. ಅಷ್ಟರಲ್ಲಿ ಕತ್ತಲಾಗಿತ್ತು. ನನಗೋ ಹೊಸ ಜಾಗ. ಅಲ್ಲಿ ನಮ್ಮನ್ನು ಕರೆಯಲು ಯಾರೂ ಬಂದಂತೆ ಕಾಣಲಿಲ್ಲ. ಅವರಿಗಾಗಿ ಹುಡುಕ ಹತ್ತಿದೆವು. ನಮ್ಮ ಗೈಡ್ ವಿಮಾನ ನಿಲ್ದಾಣದ ಹೊರಗೆ ನಮಗಾಗಿ ಕಾಯುತ್ತಾ ಇದ್ದನಂತೆ. ಅವನೂ ಸಹ ನಮ್ಮನ್ನು ಕಾಣದೆ ನಮ್ಮ ಮಗನಿಗೆ ಫೋನ್ ಮಾಡಿದನಂತೆ ತಕ್ಷಣ ಮಗ ನಮಗೆ ಫೋನ್ ಮಾಡಿ ತಿಳಿಸಿದ. ಅಷ್ಟರಲ್ಲಿ ಅವರು ನಮ್ಮನ್ನು ಹುಡುಕಿಕೊಂಡು ಬಂದರು. ಆ * ಗೈಡ್‌ನನ್ನು ನೋಡಿದ ಮೇಲೆ ನನಗೆ ಸ್ವಲ್ಪ ಸಮಾಧಾನವಾಯಿತು. ಅವರು ನಮ್ಮನ್ನು ಒಂದು ವ್ಯಾನ್‌ನಲ್ಲಿ ಹೋವರ್ಡ್ ಜಾನ್‌ಸನ್ ಹೋಟೆಲ್ ಗೆ ಕರೆದುಕೊಂಡು ಹೋದರು. ನಮ್ಮ ಜೊತೆಯಲ್ಲಿ ಇನ್ನೂ ಕೆಲವರು ಚೈನಿ ಪ್ರವಾಸಿಗರು ಇದ್ದರು. ಹೋಟೆಲ್ ತುಂಬಾ ಭವ್ಯವಾಗಿ ಇದೆ. ಫೈವ್ ಸ್ಟಾರ್ ಹೋಟೆಲ್ ಆಗಿತ್ತು. ಅಲ್ಲಿ ಫ್ರಿಜ್, ಟಿ.ವಿ., ಓವನ್, ಸ್ವಿಮ್ಮಿಂಗ್ ಪೂಲ್ ಎಲ್ಲ ರೀತಿಯ ಅನುಕೂಲಗಳು ಇದ್ದವು.
ಮಾರನೆಯ ದಿನ ಸರಿಯಾದ ಸಮಯಕ್ಕೆ ಗೈಡ್ ಬಂದು ನಮ್ಮನ್ನು ಮೊದಲು ಎಲಿಗೇಟರ್ ಪಾರ್ಕ್‌ನ ಏರ್ ಬೋಟ್ ಟೂರ್‌ಗೆ ಕರೆದುಕೊಂಡು ಹೋದನು. ಅಲ್ಲಿ ನಮ್ಮನ್ನು ಸಣ್ಣ ಮೋಟರ್ ದೋಣಿಯಲ್ಲಿ ಎಲಿಗೇಟರ್ ನೋಡಲು ಕರೆದುಕೊಂಡು ಹೋದರು. ಅದೊಂದು ಅಟ್ಲಾಂಟಿಕ್ ಮಹಾಸಾಗರದ ಹಿನ್ನೀರಿನ ಗಜನಿ ಪ್ರದೇಶ, ಅದರಲ್ಲಿ ಎಲಿಗೇಟರ್‌ಗಳು ವಾಸವಾಗಿವೆ. ಅವು ಮೊಸಳೆಯ ತರಹ ಇರುತ್ತವೆ. ಆದರೆ ಬಾಯಿ ಉದ್ದವಿರದೆ ಚಿಕ್ಕದಾಗಿರುತ್ತದೆ. ನಮಗೆ ಅಲ್ಲಿ 4-5 ಎಲಿಗೇಟರ್ ನೋಡಲು ಸಿಕ್ಕವು. ನನಗಂತೂ ಅದು ಏನೂ ಖುಷಿ ಕೊಡಲಿಲ್ಲ. ಏಕೆಂದರೆ ಇಂಥವು ನಮ್ಮ ಕರ್ನಾಟಕದಲ್ಲಿ ಏಕೆ ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ತುಂಬಾ ಕಡೆ ಇವೆ. ಆದರೆ ನಮ್ಮ ಸರಕಾರದವರು ಇದನ್ನು ತುಂಬಾ ಕಡೆಗಣಿಸಿದ್ದಾರೆ. ಇಂತಹ ಸ್ಥಳಗಳನ್ನು ಸ್ವಲ್ಪ ಮುತುವರ್ಜಿ ವಹಿಸಿದ್ದರೆ ಅಮೇರಿಕಾದಂತೆ ಒಳ್ಳೆಯ ಪ್ರವಾಸಿ ತಾಣವನ್ನಾಗಿ ಮಾಡಿ ಪ್ರವಾಸಿಗರನ್ನು ಆಕರ್ಷಿಸಬಹುದಿತ್ತು. ನಮಗೆ ಈ ಎಲಿಗೇಟರ ಪಾರ್ಕ ನೋಡಲು ಒಬ್ಬರಿಗೆ 20 ಡಾಲರ ತೆಗೆದುಕೊಂಡಿದ್ದಾರೆ. ಅಲ್ಲಿಯೇ ಇದ್ದ ಒಂದು ಚಿಕ್ಕ ಪ್ರಾಣಿ ಸಂಗ್ರಹಾಲಯಕ್ಕೆ ಭೆಟ್ಟಿ ಕೊಟ್ಟೆವು. ಅಲ್ಲಿ ನವಿಲು, ಬಾತುಕೋಳಿ, ದೊಡ್ಡ ದೊಡ್ಡ ಕಪ್ಪೆ, ಚೇಳುಗಳು ಮತ್ತು ಎಲಿಗೇಟರ್‌ಗಳು ಇದ್ದವು. ಅಲ್ಲಿ ಒಬ್ಬ ಟ್ರೇನರ್ ಇದ್ದ. ಅವನು ಚೇಳು, ಕಪ್ಪೆಗಳನ್ನು ಕೈಯಲ್ಲಿಟ್ಟು ಆಟ ಆಡಿಸುತ್ತಿದ್ದ ಮತ್ತು ಎಲಿಗೇಟರ್ ಮೇಲೆ ಕುಳಿತು ಅದರ ಬಾಯಿ ತೆಗೆಯುವುದು ಮುಚ್ಚುವುದು ಮಾಡುತ್ತಿದ್ದ. ಇನ್ನೊಬ್ಬ ಇನ್ನೊಂದು ಚಿಕ್ಕ ಎಲಿಗೇಟರನ್ನು ಕೈಯಲ್ಲಿ ಎತ್ತಿ ಹಿಡಿದಿದ್ದ ಅದಕ್ಕೆ ನಮ್ಮನ್ನು ಕರೆಯುವಂತೆ ಟಾಟಾ ಮಾಡುವಂತೆ ಹೇಳುತ್ತಿದ್ದ, ಅದು ಹಾಗೆ ಮಾಡುತ್ತಿತ್ತು. ಅದರ ಬಾಯನ್ನು ಟೇಪ್‌ನಿಂದ ಮುಚ್ಚಲಾಗಿತ್ತು. ಅವನು ಅದನ್ನು ಎತ್ತಿಕೊಳ್ಳುವಂತೆ ನಮಗೆ ಹೇಳುತ್ತಿದ್ದ. ಯಾರೂ ಮುಂದೆ ಬರಲಿಲ್ಲ. ನಾನು ಅದರ ಬಾಯಿ ಮುಚ್ಚಿದ್ದನ್ನು ನೋಡಿದ್ದೆ. ಆದ್ದರಿಂದ ಧೈರ್ಯ ಮಾಡಿ ಅದನ್ನು ಎತ್ತಿಕೊಂಡೆ. ಇವರು ಫೋಟೋ ತೆಗೆದರು. ನಂತರ ಉಳಿದವರೂ ಸಹ ಎತ್ತಿಕೊಂಡರು. ಮಯಾಮಿ ಇದರ ಸ್ಪೆಲಿಂಗ್ ಇಂಗ್ಲಿಷ್‌ನಲ್ಲಿ Maimi (ಮಿಯಾಮಿ) ಎಂದಿದ್ದರೂ ಅಲ್ಲಿ ಮಯಾಮಿ ಎಂದೇ ಕರೆಯುತ್ತಾರೆ. ಬೋಸ್ಟೆನ್‌ಗೆ (ಬಾಸ್ಟನ್) ಎಂದು ಕರೆಯುತ್ತಾರೆ. ಹೀಗಾಗಿ ನಮಗೆ ಅವರ ಇಂಗ್ಲಿಷ್ ಉಚ್ಚಾರಣೆ ತಿಳಿಕೊಳ್ಳಲು ಸ್ಪಷ್ಟ ಕಷ್ಟವಾಗುತಿತ್ತು. ನಮ್ಮ ಚೈನಿ ಗೈಡ್‌ನಿಗೆ ಇಂಗ್ಲಿಷ್ ಬರುತ್ತಿರಲಿಲ್ಲ. ಸೌಥ್ ಎನ್ನಲು ತಿಳಿಯದೆ ಒಪ್ಪೋಸಿಟ್ ನೊರ್ಥ ಎಂದು ಹೇಳುತ್ತಿದ್ದ. ಆದರೂ ಕೈ ಬಾಯಿ ಸನ್ನೆ ಮಾಡಿ ನಮಗೆ ಅರ್ಥ ಮಾಡಿಸಲು ಪ್ರಯತ್ನ ಪಡುತ್ತಿದ್ದ
ಸ್ವಭಾವದಲ್ಲಿ ತುಂಬಾ ಒಳ್ಳೆಯವನಿದ್ದ ನಮ್ಮ ಪಕ್ಕದಲ್ಲೇ ಕುಳಿತು ನಮಗೆ ಗೊತ್ತಾಯಿತೇನು ಎಂದು ಪದೇ ಪದೇ ಹೇಳುತ್ತಿದ್ದ. ಉಳಿದವರಿಗೆ ಚೈನಿ ಭಾಷೆಯಲ್ಲಿ ವಿವರಿಸುತ್ತಿದ್ದ. ನಮ್ಮ ಜೊತೆ ಬಂದವರಲ್ಲಿ ಎಮ್.ಬಿ.ಬಿ.ಎಸ್. ಮಾಡುವ ಹುಡುಗರು ಇದ್ದರು. ಅವರಿಗೂ ಸಹ ಇಂಗ್ಲೀಷ್ ಬರುತ್ತಿರಲಿಲ್ಲ. ನನಗಂತೂ ಇದನ್ನು ಕೇಳಿ ತುಂಬಾ ಆಶ್ಚರ್ಯವಾಯಿತು. ಚೈನಾದಲ್ಲಿ ಎಲ್ಲ ಶಿಕ್ಷಣವನ್ನು ಎಂದರೆ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಶಿಕ್ಷಣವನ್ನು ಸಹ ಚೈನಿ ಭಾಷೆಯಲ್ಲಿಯೇ ಕಲಿಸುತ್ತಾರಂತೆ. ಎಷ್ಟೋ ಸಲ ಜೈನಿ ಹೆಂಗಸರು ಟಾಯ್ಲೆಟ್‌ಗೆ ಹೋದಾಗ ಬರೆದ ಬೋರ್ಡ್ ಓದಲು ತಿಳಿಯದ ಲೇಡಿಸ್ ರೂಮ್ ಬದಲು ಜೇಂಟ್ಸ್ ಟಾಯ್ಲೆಟ್ ಕಡೆ ಹೋಗುತ್ತಿದ್ದರು. ಅವರು ಒಳ್ಳೆಯ ಜನ ನಿರುಪದ್ರವಿಗಳು ತಮ್ಮಷ್ಟಕ್ಕೆ ತಾವು ಇರುತ್ತಾರೆ. ಅಮೆರಿಕಾದಲ್ಲಿ ಕೆನಡಾದಲ್ಲಿ ವಾಸಿಸುವ ಕೆಲವು ಚೀನಿಯರಿಗೆ ಇಂಗ್ಲಿಷ್ ಬರುತ್ತದೆ.
ಅವರು ಊಟ ಮಾಡಿದ ಮೇಲೆ ಬಾಯಿ ತೊಳೆಯುವುದಿಲ್ಲ. ಟಿಕ್ಕೂ ಪೇಪರನಲ್ಲಿ ಮೇಲಿಂದ ಮೇಲೆ ಒರೆಸಿಬಿಡುತ್ತಾರೆ. ಅವರು ಮಾಂಸಾಹಾರಿಗಳಾದ್ದರಿಂದ ಅವರ ಹತ್ತಿರ ಹೋದರೆ ಬಾಯಿ ವಾಸನೆ ಬರುತ್ತದೆ. ಮೈತುಂಬಾ ಸುಗಂಧ ದ್ರವ್ಯ ಸಿಂಪಡಿಸಿಕೊಂಡಿರುತ್ತಾರೆ. ಕ್ಯೂಬಾ ದೇಶ ಮಯಾಮಿಯಿಂದ ಹತ್ತಿರವಿರುವುದರಿಂದ ತುಂಬಾ ಜನರು ಅಲ್ಲಿಂದ ಅಮೇರಿಕಾದ ಮಯಾಮಿಗೆ ವಲಸೆ ಬಂದು ಅವರದೇ ಆದ ಒಂದು ಕಾಲನಿ ಮಾಡಿಕೊಂಡಿದ್ದಾರೆ. ಅದರ ಸುತ್ತಮುತ್ತಲು ಅವರದೇ ಆದ ಮಾಲ್‌ಗಳು, ಪೆಟ್ರೋಲ್ ಬಂಕ್‌ಗಳು ಸಹ ಇವೆ. ನಮ್ಮನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಎಲ್ಲ ವಿವರಿಸಿದರು.
ಮುಂದೆ ಹೋದರೆ ಅಲ್ಲಿ ವಿಶಾಲವಾದ ಗಾಲ್ಫ್ ಮೈದಾನವಿತ್ತು. ಅದು ತುಂಬಾ ಸುಂದರವಾಗಿ ಸ್ವಚ್ಛವಾಗಿ ಇತ್ತು. ಅಲ್ಲಿ ತುಂಬಾ ಜನರು ಗಾಲ್ಫ್ ಆಟ ಆಡುತ್ತಿದ್ದರು.
ಅಲ್ಲಿ ಅವರದೇ ಆದ ಗಾಲ್ಫ್ ಕ್ಲಬ್ ಸಹ ಇದೆ. ಅಲ್ಲೇ ಪಕ್ಕದಲ್ಲಿ ನೂರಾರು ವರ್ಷ ಹಳೆಯದಾದ ಹೊಟೇಲ್ ಇದೆ. ಅದು ಹಳೆಯದಾದರೂ ತುಂಬಾ ಸ್ವಚ್ಛವಾಗಿ ಚೆನ್ನಾಗಿತ್ತು. ಅಲ್ಲಿಂದ ಒಂದೊಂದು ವಸ್ತುಗಳು ಕುರ್ಚಿ, ಮೇಜುಗಳು, ಕನ್ನಡಿಗಳು ಸಹ ಆಂಟಿಕ್ ಪೀಸ್‌ಗಳಾಗಿದ್ದವು. ಅವುಗಳನ್ನು ನೋಡುವುದೇ ಖುಷಿ ಕೊಡುತ್ತಿತ್ತು. ಅಲ್ಲಿ ಬಿಲ್ ಕ್ವಿಂಟನ್ ತನ್ನ ಹೆಂಡತಿ ಮಕ್ಕಳ ಜೊತೆ ಬಂದು ಇದ್ದನಂತೆ. ಅದಕ್ಕೆ ಸಾಕ್ಷಿ ಎಂಬಂತೆ ಅವರ ಫೋಟೋಗಳಿವೆ. ಅಲ್ಲಿ ಸುಂದರವಾದ ಹೂವಿನ ತೋಟವಿದೆ. ಅಲ್ಲಿ ನಾವು ಫೋಟೋ ತೆಗೆದೆವು.

ನಾವು ಹೋದ ಸಮಯದಲ್ಲಿ ಅಲ್ಲಿ ತುಂಬಾ ಬಿಸಿಲಿತ್ತು. ಸಮುದ್ರದ ದಂಡೆಯಾದ್ದರಿಂದ ಮೈಯೆಲ್ಲ ಬೆವರುತ್ತಿತ್ತು. ನಾವು ಒಂದು ಏರ್ ಕಂಡಿಶನ್ ಇರುವ ಹೊಟೇಲ್‌ಗೆ ಹೋದೆವು. ಅಲ್ಲಿ ನಮಗೆ ಬೇಕಾದಂಥ ಊಟ, ತಿಂಡಿ, ಹಣ್ಣುಗಳೆಲ್ಲ ಇದ್ದವು. ಅಲ್ಲಿ ನಾವು ಚೆನ್ನಾಗಿ ತಿಂದು ಹೊಟ್ಟೆ ತುಂಬಿಸಿಕೊಂಡೆವು. ನಂತರ ಅಲ್ಲಿಯ ಮಹಾಸಾಗರದ ಹಿನ್ನೀರಿನಲ್ಲಿ ವಿಹಾರ ಹೊರಟೆವು. ಹೋಗುವಾಗ ಅಕ್ಕಪಕ್ಕದಲ್ಲಿ ಅಂದರೆ ಎರಡೂ ಬದಿಯಲ್ಲಿ ಐಲ್ಯಾಂಡ್‌ಗಳಿವೆ. ಅದಕ್ಕೆ ಸ್ಟಾರ್ ಐಲ್ಯಾಂಡ್ ಎಂದು ಕರೆಯುತ್ತಾರಂತೆ. ಅಲ್ಲಿ ದೊಡ್ಡ ಸೆಲೆಬ್ರಿಟಿಗಳ ದೊಡ್ಡ ದೊಡ್ಡ ಬಂಗಲೆಗಳಿವೆ. ಉದಾ: ಬಿಲ್‌ಗೇಟ್, ಎಲಿಜಾಬೆತ್ ಟೇಲರ್. ಟೆನಿಸ್ ತಾರೆಯರು ಸೆಪಿಗ್ರಾಫ್, ಬೋರಿಸ್ ಬೆಕರ್, ಸಿನಿಮಾ ತಾರೆಯರ ಬಂಗಲೆಗಳಿವೆ. ಗೈಡ್ ಕ್ರೂಸ್ ಸರಿಯುತ್ತಿದ್ದಂತೆ ಯಾರಾರ ಬಂಗಲೆ ಎಂದು ಹೆಸರು ಹೇಳುತ್ತಿದ್ದ ನಾವು ಒಂದನ್ನು ಪೂರ್ತಿಯಾಗಿ ಕಣ್ಣುಂಬಿ ಕೊಳ್ಳುವಷ್ಟರಲ್ಲಿ ಇನ್ನೊಂದು ಬಂಗಲೆ ಮುಂದೆ ಬರುತ್ತಿತ್ತು. ಅವುಗಳು 10-12 ಬೆಡ್ ರೂಮ್‌ಗಳಿರುವ ವಿಶಾಲ ಬಂಗಲೆಗಳು ಮನೆಯ ಮುಂದೆ ಒಂದೋ ಎರಡೋ ಈಜುಕೊಳಗಳು, ಶಿಪ್‌ಗಳು, ಮೋಟಾರ್ ಬೋಟ್‌ಗಳು, ಕ್ರೂಸ್ ಮುಂದ ಹೋಗುತ್ತಿದ್ದರೆ ಹೀಗೆ ಕಣ್ಣು ಬಾಯಿ ಬಿಡುತ್ತಾ ಆ ಅದ್ಭುತವಾದ ಬಂಗಲೆಗಳನ್ನು ನೋಡಿ ಮೂಕ ವಿಸ್ಮಿತರಾದೆವು. ಮನೆ ಮುಂದೆ 2-3 ಕಾರುಗಳು. ಇಲ್ಲಿಯೂ ಸಹ ವಿಮಾನ ನಿಲ್ದಾಣ ಸರೋವರದ ಬದಿಯಲ್ಲಿಯೇ ಇದೆ. ಅಲ್ಲಿಯೂ ಸಹ ಪದೇ ಪದೇ ಬಂದು ಹೋಗುವ ವಿಮಾನಗಳನ್ನು ವೀಕ್ಷಿಸಬಹುದು. ನಾವು ಕ್ರೂಸ್ ಇಳಿದು ಎಲ್ಲರೂ ಬೀಚ್ ಸೈಡ್ ಗೆ ಹೋದೆವು. ಅಷ್ಟರಲ್ಲಿ ಸಂಜೆಯಾಗುತ್ತಾ ಬಂತು.
ಫ್ಲೋರಿಡಾದಲ್ಲಿ ಇವರ ಕಸಿನ್ ಅನಸೂಯಕ್ಕ, ಗೋಪಾಲಣ್ಣ ಇದ್ದರು. ಅವರು ತಮ್ಮಲ್ಲಿಗೆ ಬರಲೇಬೇಕೆಂದು ಪದೇ ಪದೇ ಫೋನ್ ಮಾಡಿ ಬಲವಂತ ಮಾಡಿದ್ದರು. ಅದಕ್ಕಾಗಿ ನಾವು ನಮ್ಮ ಗೈಡ್ ಪರವಾನಿಗೆ ಪಡೆದು ಅಲ್ಲಿಗೆ ಹೋಗಲು ನಿರ್ಧರಿಸಿದೆವು. ನಮ್ಮನ್ನು ಕರೆದುಕೊಂಡು ಹೋಗಲು ಅನಸೂಯಕ್ಕನ ತಮ್ಮನ ಹೆಂಡತಿ ರಮಾ ಮಯಾಮಿಯಲ್ಲಿ ಕೆಲಸ ಮಾಡುತ್ತಿದ್ದಳು. ಅವಳು ನಮ್ಮನ್ನು ಕರೆದುಕೊಂಡು ಹೋಗಲು ‘ಬಂದಳು. ಅವಳೇ ನಮ್ಮನ್ನು ಬೀಚ್ ಸೈಡಿಗೆ ಕರೆದುಕೊಂಡು ಹೋಗಿ ಸಂಜೆಯ ಸುಂದರವಾದ ದೃಶ್ಯವನ್ನು ತೋರಿಸಿಕೊಂಡು ಫ್ಲೋರಿಡಾ ಕಡೆ ಕಾರಿನಲ್ಲಿ ಹೊರಟಳು. ನಾವು ಫ್ಲೋರಿಡಾ ಮುಟ್ಟಿದಾಗ ಸಂಜೆಯಾಗಿತ್ತು. ಅನಸೂಯಕ್ಕ ಅಲ್ಲಿ ದೊಡ್ಡ ಡಾಕ್ಟರ್. ಅವಳಿಗೆ ಸುಮಾರು 65 ಕ್ಕಿಂತ ಹೆಚ್ಚು ವಯಸ್ಸಾಗಿರಬೇಕು. ಆದರೂ ಸೇವೆಯಲ್ಲಿದ್ದಾಳೆ. ಆಕೆಯ ಗಂಡ ಗೋಪಾಲಣ್ಣ ವಿಜ್ಞಾನಿ. ತುಂಬಾ ವರುಷಗಳ ಮೇಲೆ ನಮ್ಮನ್ನು ಕಂಡು ತುಂಬಾ ಖುಷಿಯಾದರು. ಹಳೆಯ ದಿನಗಳನ್ನು ನೆನಪಿಸಿಕೊಂಡು ತುಂಬಾ ಖುಷಿ ಪಟ್ಟರು. ನಮ್ಮನ್ನು ತುಂಬಾ ಪ್ರೀತಿಯಿಂದ ಆತ್ಮೀಯತೆಯಿಂದ ನೋಡಿಕೊಂಡರು. ಅವರಿಬ್ಬರನ್ನು ನಾನು ನೋಡಿದ್ದು ಪ್ರಥಮ ಬಾರಿಗೆ. ಆದರೂ ನಾವು ತುಂಬಾ ಆತ್ಮೀಯರಾಗಿಬಿಟ್ಟೆವು. ಅವರ ಮನೆಯ ಮುಂದಿರುವ ವಿಶಾಲವಾಗಿ ಬೆಳೆದಿರುವ ತುಳಸಿ ಗಿಡ ಮತ್ತು ತಿನ್ನುವ ವಿಳ್ಯದ ಎಲೆಯ ಗಿಡ ನೋಡಿ ತುಂಬಾ ಖುಷಿಯಾಯಿತು. ಅವರು ತುಂಬಾ ವರ್ಷಗಳಿಂದ ಅಲ್ಲಿಯೇ ಇದ್ದಾರೆ. ಮಕ್ಕಳಿಬ್ಬರೂ ಅಲ್ಲಿಯವರನ್ನೇ ಮದುವೆಯಾಗಿ ಬೇರೆ ಕಡೆ ಇದ್ದಾರೆ. ಅನಸೂಯಕ್ಕ ನಮಗಾಗಿ ಮೀನಿನ ಸಾರು, ಶೆಟ್ಟಿ ಪುಡಿ, ಮೀನು ಫಾಯ್, ಮಾವಿನ ಸಾಸಿಕಾಯಿ ಮಾಡಿದ್ದಳು. ಬಹಳ ದಿನಗಳ ಮೇಲೆ ನಮ್ಮೂರಿನ ಊಟ ಮಾಡಿ ತುಂಬಾ ತೃಪ್ತಿಯಾಯಿತು. ಗೋಪಾಲಣ್ಣ ದೊಡ್ಡ ವಿಜ್ಞಾನಿಯಾದರೂ ತುಂಬಾ ಸರಳವಾದ ವ್ಯಕ್ತಿ. ಮನೆಯಲ್ಲಿ ಬಿಳಿಯ ಲುಂಗಿ ಧರಿಸಿ ತುಂಬು ತೋಳಿನ ಜುಬ್ಬ ಧರಿಸಿ ಹಣೆಯಲ್ಲಿ ದೇವರ ಕುಂಕುಮ ಧರಿಸಿದ ಅವನನ್ನು ನೋಡಿದರೆ ಆ ಹಿರಿಯ ಜೀವಕ್ಕೆ ಬಾಗಿ ನಮಸ್ಕರಿಸಬೇಕು ಎನಿಸುತ್ತದೆ. ಅವನ ವಯಸ್ಸು ಸುಮಾರು 75ರ ಆಸು ಪಾಸು ಇರಬೇಕು. ಆದರೂ ವಿದೇಶಗಳಿಗೆ ವಿಜ್ಞಾನದ ಕಾನ್ಸ್‌ರೆನ್ಸ್‌ಗಳಿಗೆ ಇತರ ಕೆಲಸಗಳಿಗೆ ಅವನನ್ನು ಮೇಲಿಂದ ಮೇಲೆ ಕರೆಸಿಕೊಳ್ಳುತ್ತಾರಂತೆ. ಅವನ ಬಳಿ ನಮ್ಮ ಕಡೆಯ ಯಕ್ಷಗಾನ, ಕೀರ್ತನೆಗಳ ಸಿ.ಡಿ.ಗಳ ಸಂಗ್ರಹಾಲಯವೇ ಇದೆ. ಬಿಡುವಾದಾಗಲೆಲ್ಲ ಅದನ್ನು ಕೇಳುತ್ತಿರುತ್ತಾನೆ. ಅವನು ತುಂಬಾ ದೈವಭಕ್ತ, ಕೆಲವು ಸಮಯವನ್ನು ಪೂಜೆ ಮತ್ತು ದೈವಭಕ್ತಿ ಧ್ಯಾನಗಳಲ್ಲಿ ಕಳೆಯುತ್ತಾನೆ. ಅವರ ಮನೆಯಲ್ಲಿ ದೇವರಿಗಾಗಿ ಸುಂದರವಾದ ಪ್ರತ್ಯೇಕ ಕೋಣೆಯಿದೆ. ಅವರು ನಮ್ಮ ಊರ ಕಡೆಯ ಜನರ ಬಗ್ಗೆ ವಿಷಯಗಳ ಬಗ್ಗೆ ನಮ್ಮ ಬಳಿ ವಿಚಾರಿಸಿದರು. ಅವರಿಗೆ ನಮ್ಮನ್ನು ಕಳಿಸುವ ಮನಸ್ಸೇ ಇರಲಿಲ್ಲ. ಆ ರಾತ್ರಿ ಅಲ್ಲೇ ಇರುವಂತೆ ತುಂಬಾ ಒತ್ತಾಯ ಮಾಡಿದರು. ಆದರೆ ನಾವು ಪ್ಯಾಕೇಜ್ ಟೂರಲ್ಲಿ ಇದ್ದದ್ದರಿಂದ ಹೊಟೇಲಿಗೆ ಹೋಗಲೇಬೇಕಾಗಿತ್ತು. ನಾನು ಅವರ ಮನೆಯ ಸುತ್ತ ಒಂದು ಸುತ್ತು ಹಾಕಿ ಬಂದೆ. ನಮ್ಮ ಊರಿನ ವಾತಾವರಣದಂತೆ ಸುತ್ತಲಿನ ಪರಿಸರ ಇತ್ತು. ಮನೆಯ ಸುತ್ತ ತೆಂಗಿನ ಗಿಡಗಳು, ತೆಂಗಿನಕಾಯಿ ಸುಲಿಯುವವರಿಲ್ಲದೆ ಸುತ್ತಲು ಒಣಗಿ ಬಿದ್ದಿದ್ದವು. ಮಾವಿನ ಗಿಡಗಳಿಗೆ ಮಾವಿನಕಾಯಿ ಆಗಿತ್ತು. ಮನೆಯ ಪಕ್ಕದಲ್ಲಿ ಸಣ್ಣ ಹೊಳೆ ಹರಿಯುತ್ತಿತ್ತು. ಮನೆಯ ಹಿಂದೆ ಸುಂದರವಾದ ಈಜುಕೊಳ ಇದನ್ನು ನೋಡಿ ಊರಿಗೆ ಬಂದಂತೆ ಅನಿಸಿತು. ನಾವು ರಾತ್ರಿ ಒಂದು ಗಂಟೆಯವರೆಗೂ ಮಾತಾಡುತ್ತಾ ಕುಳಿತೆವು. ರಮಾ ನಮ್ಮನ್ನು ಮಯಾಮಿಗೆ ಕರೆದುಕೊಂಡು ಬಂದು ಹೊಟೇಲಿಗೆ ಬಿಟ್ಟಳು. ಅವಳು ನಮಗಾಗಿ ತೊಂದರೆ ತೆಗೆದುಕೊಂಡಳು. ಅವಳಿಗೆ ಥ್ಯಾಂಕ್ಸ್ ಹೇಳಿ ಹೂಟೇಲಿಗೆ ಹೋಗಿ ಮಲಗಿಕೊಂಡೆವು.
By-ಶಾಲಿನಿ ಗಾಂವಕರ್
ಮುಂದಿನ ಭಾಗ ಓದಿ…
