ಮಾರನೆಯ ದಿನ ಕೀ ವೆಸ್ಟ್ಗೆ ಹೊರಟೆವು. ಕೀ ವೆಸ್ಟ್ ಎಂದರೆ ಅಮೇರಿಕೆಯ ಸ್ಟಾರ್ಟಿಂಗ್ ಪಾಯಿಂಟ್, ಅಮೇರಿಕಾ ಶುರುವಾಗುವುದೇ ಅಲ್ಲಿಂದ, ನಮಗೆ ಅಲ್ಲಿ ಹೋಗುವಾಗ 32 ಆಯ್‌ಲ್ಯಾಂಡ್‌ಗಳು ಮತ್ತು 42 ಬ್ರಿಜ್‌ಗಳು ಸಿಗುತ್ತವೆ. ಸುಮಾರು ಮೂರು ತಾಸು ದೀರ್ಘ ಪ್ರಯಾಣ ಮಾಡಿ ಕೀ ವೆಸ್ಟ್ ಮುಟ್ಟಿದೆವು. ಅಲ್ಲಿ ಎಲ್ಲಿ ನೋಡಿದರೂ, ಮಹಾಸಾಗರ ಕಣ್ಣು ಮುಟ್ಟುವವರೆಗೂ ನೀರೇ ನೀರು, ಅಲ್ಲಿಂದ 90 ಮೈಲು ಹಡಗಿನಲ್ಲಿ ಹೋದರೆ ಕ್ಯೂಬಾ ಸಿಗುತ್ತದೆ. ಅದೊಂದು ನಡುಗಡ್ಡೆ, ನಮ್ಮ ಬಳಿ ವೀಸಾ ಇಲ್ಲದ್ದರಿಂದ ನಾವು ಹೋಗಲಾಗಲಿಲ್ಲ. ಅಲ್ಲಿ ಸುತ್ತಮುತ್ತಲು ನಮ್ಮ ಕರಾವಳಿಯ ಪರಿಸರದಂತೆ ಇತ್ತು. ಅದೇ ತೆಂಗು, ಅಡಿಕೆ ಮರಗಳು, ಹಂಚಿನ ಮನೆಗಳು, ಅಲ್ಲಲ್ಲಿ ಸಾಕಿದ ಕೋಳಿ, ಹುಂಜಗಳು, ಬಾಳೆಗಿಡಗಳು, ನಮ್ಮಲ್ಲಿ ಬೆಳೆಯುವ ಹೂವಿನ ಗಿಡಗಳು, ಅದನ್ನು ನೋಡಿದರೆ ನಾವು ಅಮೇರಿಕಾದಲ್ಲಿ ಇರದೆ ನಮ್ಮ ಹಳ್ಳಿಯಲ್ಲಿ ಇದ್ದಂತೆ ಭಾಸವಾಗುತ್ತಿತ್ತು.

ನಾವು ಕೀ ವೆಸ್ಟ್‌ನಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ಅರೆಸ್ಟ್ ಹೆಮಿಂಗ್‌ವೇನ ಮನೆ ನೋಡಿದೆವು. ಅಲ್ಲಿ ಅನೇಕ ಪುಸ್ತಕಗಳು, ಅವನಿಗೆ ಬಂದ ಪ್ರಶಸ್ತಿಗಳು. ಅವರು ಉಪಯೋಗಿಸಿದ ಸಾಮಾನುಗಳು ಇದ್ದವು. ಅದನ್ನೆಲ್ಲ ನೋಡಿ ಮುಂದೆ ಹೋಗಿ ಅಮೇರಿಕಾದ ಪ್ರೆಸಿಡೆಂಟ್‌ಗಳಲ್ಲಿ ಒಬ್ಬರಾದ ಹ್ಯಾರಿಸ್ ಟ್ರುಮನ್ ಅವರ ಮನೆ ಸಣ್ಣ ವೈಟ್ ಹೌಸ್ ಇದೆ. ಅದನ್ನು ಈಗ ಮ್ಯೂಸಿಯಂ ಮಾಡಿದ್ದಾರೆ. ಅದೇ ಸ್ಟೇಟ್ ಆಫ್ ಫ್ಲೋರಿಡಾಸ್ ಪ್ರೆಸಿಡೆಂಟಲ್ ಮ್ಯೂಸಿಯಂ ನೋಡಿ ಹೊರಟು ಬಂದೆವು.
ತಿರುಗಿ ಬರುವಾಗ ಒಂದು ಚೈನಿಸ್ ಹೊಟೇಲ್‌ನಲ್ಲಿ ಊಟಕ್ಕೆ ಹೋದೆವು. ನನಗಂತೂ ತುಂಬಾ ಹಸಿವಾಗಿತ್ತು. ಬರೀ ಒಣ ಅನ್ನವನ್ನು ತಿಂದು ಹೊಟ್ಟೆ ತುಂಬಿಸಿಕೊಂಡೆವು. ಪಲ್ಯದಲ್ಲಿ ಏನಿದೆಯೋ ಏನೋ ಎಂದು ಪಲ್ಯ ತಿನ್ನಲಿಲ್ಲ. ಪಲ್ಯದಲ್ಲಿದ್ದ ಬೀನ್ಸ್ ಕ್ಯಾರೆಟ್ ಆರಿಸಿಕೊಂಡು ತಿಂದೆವು. ಹೊಟೇಲ್ ಮುಟ್ಟುವಷ್ಟರಲ್ಲಿ ಸಂಜೆಯಾಗಿತ್ತು. ಅಲ್ಲಿಯೇ ಕೆಲವು ಮಾಲ್‌ಗಳಲ್ಲಿ ಹೋಗಿ ಸಣ್ಣ ಪುಟ್ಟ ಶಾಪಿಂಗ್ ಮಾಡಿದೆವು. ಮಾರನೇ ದಿನ ನಾವು ಚಿಕಾಗೊಗೆ ವಾಪಸ್ ಆಗಬೇಕಿತ್ತು. ಅದಕ್ಕಾಗಿ ಬೆಳಿಗ್ಗೆ ಸಾಮಾನುಗಳನ್ನು ಪ್ಯಾಕ್ ಮಾಡಿಕೊಂಡೆವು. ಲಗೇಜ್ ಸಮೇತ ಹೊರಟೆವು. ಮೊದಲು ಮಯಾಮಿಯಲ್ಲೇ ಪ್ರಸಿದ್ಧವಾದ ಮತ್ತು ಸುಂದರವಾದ ಬೀಚಿಗೆ ನಮ್ಮನ್ನು ಕರೆದುಕೊಂಡು ಹೋದರು. ಅದು ತುಂಬಾ ಅದ್ಭುತವಾದ ಬೀಚು. ಅಲ್ಲಿ ನಮ್ಮ ದೇಶದ ಹೆಚ್ಚಿನ ಸಿನಿಮಾಗಳ ಶೂಟಿಂಗ್ ನಡೆಯುತ್ತದೆಯಂತೆ! ಬೀಚಿನ ನೀರು ತುಂಬಾ ಸ್ವಚ್ಛವಾಗಿ ತಿಳಿನೀಲಿ ಬಣ್ಣದಲ್ಲಿ ಕಾಣುತ್ತದೆ. ಎಲ್ಲಿ ನೋಡಿದರೂ ಒಂದು ಚೂರು ಕಸವೂ ಇರಲಿಲ್ಲ. ಕಸ ಒಂದು ವೇಳೆ ಎಲ್ಲಾದರೂ ಬಿದ್ದರೆ ಕೂಡಲೇ ಅದನ್ನು ತೆಗೆದು ಸ್ವಚ್ಛ ಮಾಡುತ್ತಾರೆ. ಅಲ್ಲಿಯ ಮಹಾಸಾಗರಕ್ಕೆ ನಮ್ಮ ಸಮುದ್ರದಂತೆ ದೊಡ್ಡ ದೊಡ್ಡ ತೆರೆಗಳು ದಡಕ್ಕೆ ಬಂದು ಅಪ್ಪಳಿಸುವುದಿಲ್ಲ. ಹೀಗಾಗಿ ಅಲ್ಲಿ ಅಪಾಯದ ತೊಂದರೆ ಕಡಿಮೆ. ಅಮೇರಿಕಾದ ಜನರು ಸಮುದ್ರ ಸ್ನಾನವನ್ನು ತುಂಬಾ ಇಷ್ಟಪಡುತ್ತಾರೆ. ತುಂಡು ಬಿಕಿನಿ ತೊಟ್ಟು ಸಮುದ್ರದಲ್ಲಿ ಸ್ನಾನ ಮಾಡಿ ದಣಿವಾದ ಮಲೆ ಅಲ್ಲೇ ಹಾಕಿದ ಸೋಪಾನಗಳ ಮೇಲೆ ಮಲಗಿ ಬಿಸಿಲು ಕಾಯಿಸಿಕೊಳ್ಳುತ್ತಾರೆ. ಅವರ ಜೊತೆ ಚಿಕ್ಕ ಚಿಕ್ಕ ಮಕ್ಕಳು ಸಹ ನೀರಲ್ಲಿ ಈಜಾಡುತ್ತಾರೆ. ನಾವು ಬೀಚಿನ ತುಂಬಾ ಅಡ್ಡಾಡಿದೆವು. ಸ್ವಲ್ಪ ಹೊತ್ತು ನೀರಲ್ಲಿ ಆಟ ಆಡಿ ಸಂತೋಷಪಟ್ಟೆವು. ಅಲ್ಲಿಗೆ ನಮ್ಮ ಪ್ಯಾಕೇಜ್ ಪ್ರವಾಸ ಮುಗಿಯುತ್ತಾ ಬಂದಿತ್ತು. ಎಲ್ಲರೂ ಊರುಗಳಿಗೆ ಹೋಗಲು ತಯಾರಾದರು. ಕೆಲವರಿಗೆ ಚೈನಾ ಇಂಡೋನೇಷಿಯಾ ಕಡೆಗೆ ಹೋಗುವುದಿತ್ತು ಅದಕ್ಕಾಗಿ ನಮ್ಮನ್ನು ವಿಮಾನ ನಿಲ್ದಾಣಕ್ಕೆ ಬಿಟ್ಟರು.

ನಾವು ಸ್ಪಿರೀಟ್ ವಿಮಾನ ನಿಲ್ಲುವ ಗೇಟನ್ನು ಹುಡುಕಿಕೊಂಡು ಹೋದೆವು. ಇದೊಂದು ಡೊಮೆಸ್ಟಿಕ್ ವಿಮಾನ, ಇದರ ಪ್ರಯಾಣ ದರ ಕಡಿಮೆ, ಹೀಗಾಗಿ ಎಲ್ಲರೂ ಹೆಚ್ಚಾಗಿ ಈ ವಿಮಾನಕ್ಕೆ ಟಿಕೇಟ್ ಮಾಡುತ್ತಾರೆ. ಆಮೇಲೆ ನಮ್ಮ ಪ್ರತಿಯೊಂದು ಚೀಲಕ್ಕೂ 35 ಡಾಲರಿನಂತೆ ಹಣ ವಸೂಲು ಮಾಡುತ್ತಾರೆ. ನಮ್ಮ ವಿಮಾನ ಬರಲು ಇನ್ನೂ ಸಮಯ ಇರುವುದರಿಂದ ನಿಲ್ದಾಣದ ಸುತ್ತ ಒಂದು ರೌಂಡ್ ಅಡ್ಡಾಡಿಕೊಂಡು ಬಂದೆವು. ನಂತರ ಚೆಕ್ ಇನ್ ಮುಗಿಸಿ ಸೆಕ್ಯೂರಿಟಿ ಚೆಕ್ ಮುಗಿಸಿ ಬೋರ್ಡಿಂಗ್ ಪಾಸ್ ತೆಗೆದುಕೊಂಡು ವಿಮಾನ ಏರಿ ಕುಳಿತೆವು. ನಾವು ಕುಳಿತು ಎಷ್ಟು ಹೊತ್ತಾದರೂ ವಿಮಾನಕ್ಕೆ ಮೇಲೆ ಹಾರಲು ಸಿಗ್ನಲ್ ಸಿಗಲಿಲ್ಲ. ಕಾರಣ ಇದು ಡೊಮೆಸ್ಟಿಕ್ ವಿಮಾನ ಏನಿದ್ದರೂ ಇಂಟರ್‌ನ್ಯಾಷನಲ್ ವಿಮಾನಗಳಿಗೆ ಮೊದಲು ಆದ್ಯತೆ ಅಂತೂ ಒಂದು ತಾಸು ಬಿಟ್ಟ ಮೇಲೆ ಸಿಗ್ನಲ್ ಸಿಕ್ಕು ನಮ್ಮ ವಿಮಾನ ಮೇಲೆ ಹಾರಿತು. ಈ ವಿಮಾನದಲ್ಲಿ ಏನನ್ನೂ ಕೊಡುವದಿಲ್ಲ. ನೀರನ್ನು ಸಹ ದುಡ್ಡು ಕೊಟ್ಟು ಪಡೆಯಬೇಕು. ಅಂತೂ ಮೂರೂವರೆ ತಾಸಿನ ಪ್ರಯಾಣದ ನಂತರ ಚಿಕಾಗೋ ಸಮೀಪಿಸಿತು. ಆದರೆ ವಿಮಾನಕ್ಕೆ ಇಳಿಯಲು ಸಿಗ್ನಲ್ ಸಿಗಲಿಲ್ಲ. ಸಿಗ್ನಲ್ ಸಿಗುವವರೆಗೂ ವಿಮಾನ ಆಕಾಶದಲ್ಲಿ ಹಾರಾಡುತ್ತಾ ಇತ್ತು. 15-20 ನಿಮಿಷಗಳ ಮೇಲೆ ಸಿಗ್ನಲ್ ಸಿಕ್ಕು ವಿಮಾನವೇನೋ ಲ್ಯಾಂಡ್ ಆಯಿತು. ಆದರೆ ಕೆಳಗೆ ಇಳಿದ ಮೇಲೂ ಅದಕ್ಕೆ ವಿಂಡೋ ಸಿಗದ ಕಾರಣ ಅದು ವಿಂಡೋಗಾಗಿ ಕಾಯುತ್ತಾ ಒಂದು ಮೂಲೆಯಲ್ಲಿ ಹೋಗಿ ನಿಂತಿತು. ನಮ್ಮ ಮಗ ನಮಗಾಗಿ ವಿಮಾನ ನಿಲ್ದಾಣದ ಹೊರಗೆ ಕಾಯುತ್ತಿದ್ದ. ಕಾದು ಕಾದು ನಮಗೆ ಪೋನ್ ಮಾಡಿದ ನಾವು ಇದ್ದ ವಿಷಯ ತಿಳಿಸಿದೆವು. ಅಂತೂ ಕೊನೆಯಲ್ಲಿ ವಿಂಡೋ ಸಿಕ್ಕಿತು. ನಾವು ವಿಮಾನದಿಂದ ಹೊರಗೆ ಬಂದು ನಮ್ಮ ಸಾಮಾನು ತೆಗೆದುಕೊಂಡು ನಿಲ್ದಾಣದಿಂದ ಹೊರಗೆ ಬಂದೆವು ನಮ್ಮ ಮಗ ಮತ್ತು ಇವರ ಗೆಳೆಯ ಅನಿಲ ಹೊರಗೆ ನಮಗಾಗಿ ಕಾಯುತ್ತಾ ಇದ್ದರು. ನಾವು ಅವರ ಜೊತೆ ಕಾರಲ್ಲಿ ಅವರ ಮನೆ ಕಡೆ ಹೊರಟೆವು. ರೂಪಾ ನನಗಾಗಿ ಕಷಾಯ ಮತ್ತು ಇವರಿಗಾಗಿ ಚಹವನ್ನು ಪ್ಲಾಸ್ಕಿನಲ್ಲಿ ಹಾಕಿ ಕಳಿಸಿದ್ದಳು. ಇನ್ನೆರಡು ದಿನ ಮಗನ ಜೊತೆಯಲ್ಲಿ ಕಳೆದವು. ಒಂದು ದಿನ ಸ್ವಲ್ಪ ಶಾಪಿಂಗ್ ಮಾಡಿದೆವು. ಇನ್ನೊಂದು ದಿನ ರೂಪಾನ ತಮ್ಮ ವಿವೇಕನ ಮನೆಗೆ ನಾವೆಲ್ಲರೂ ಊಟಕ್ಕೆ ಹೋಗಿ ಬಂದೆವು. ಅವರ ತಂದೆ-ತಾಯಿ ಸಹ ಅಲ್ಲಿದ್ದರು. ಎಲ್ಲರೂ ಒಟ್ಟಾಗಿ ಕೂತು ಊಟ ಮಾಡಿ ರಾತ್ರಿ ಅನಿಲನ ಮನೆಗೆ ಬಂದೆವು. ಅನಿಲ ನಮ್ಮೆಲ್ಲರ ಸುಮಾರು ಫೋಟೋಗಳನ್ನು ತೆಗೆದನು. ರಾತ್ರಿ ನಾವೆಲ್ಲರೂ ತುಂಬಾ ಹೊತ್ತಿನವರೆಗೆ ಮಾತನಾಡುತ್ತಾ ಕುಳಿತೆವು. ಆಮೇಲೆ ಎಲ್ಲರೂ ಹೋಗಿ ಮಲಗಿದೆವು. ನನಗೆ ಮಾತ್ರ ಮಲಗಿದರೂ ನಿದ್ದೆ ಬರಲಿಲ್ಲ. ಮಗನನ್ನು ಬಿಟ್ಟು ಹೋಗಬೇಕಲ್ಲ ಎಂದು ನೆನೆದು ತುಂಬಾ ದುಃಖವಾಯಿತು. ಅವನ ಜೊತೆ ಅದು ಇದು ಮಾತಾಡುತ್ತಾ ರಾತ್ರಿ ಕಳೆದವು. ನಮ್ಮ ಮಗನು ನಮಗಾಗಿ ಒಂದು ಆಯ್ ಪ್ಯಾಡ್ ಮತ್ತು ಭಾವನಿಗೆ ಒಂದು ಟ್ಯಾಬ್ಲೆಟ್ ಮತ್ತು ಅಕ್ಕನಿಗೆ ಆಯ್‌ಫೋನ್ ಮತ್ತು ಪಪ್ಪನಿಗೆ ದುಬಾರಿಯಾದ ಗಡಿಯಾರವನ್ನು ಕೊಡಿಸಿದನು. ಅವನು ನಮಗಾಗಿ ತುಂಬಾ ಖರ್ಚು ಮಾಡಿದ್ದನು. ನನಗೆ ನನ್ನ ಮಗನ ಬಗ್ಗೆ ತುಂಬಾ ಹೆಮ್ಮೆ ಎನಿಸಿತು. ಹೃದಯ ತುಂಬಿ ಬಂತು. ನೀನು ನಮಗೆ ಎಲ್ಲವನ್ನೂ ನೋಡುವ ಸುಂದರ ಅವಕಾಶ ಒದಗಿಸಿ ಕೊಟ್ಟೆಯಲ್ಲಾ ಮಗನೇ. ಇದರಿಂದ ನಮಗೆ ತುಂಬಾ ಸಂತೋಷವಾಗಿದೆ ಮಗಾ ಎಂದು ಅವನ ಮುಂದೆ ಹೇಳಿದಾಗ, ಅವನು ಅಮ್ಮಾ ಇದೇನು ಇಷ್ಟಕ್ಕೇ ನೀನು ಹೀಗೆ ಹೇಳಿದರೆ ಹೇಗೆ? ಇದು ನನ್ನ ಕರ್ತವ್ಯ ನೀವು ನನಗೆ ಮಾಡಿದುದರ ಮುಂದೆ ಇದೂ ಏನೂ ಅಲ್ಲ. ಇನ್ನೂ ನನ್ನ ಕರ್ತವ್ಯ ತುಂಬಾ ಇದೆ. ಅದನ್ನು ನೋಡಲು ನೀವು ಆರೋಗ್ಯದಿಂದ ಇರಬೇಕು. ಅದಕ್ಕಾಗಿ ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ, ಈ ಸಲ ನೀವು ಅಮೆರಿಕಾದ ಈಸ್ಟ್ ಭಾಗವನ್ನು ಮಾತ್ರ ನೋಡಿದಿರಿ, ಮುಂದಿನ ಸಲ ನಿಮಗೆ ಅಮೆರಿಕಾದ ವೆಸ್ಟ್ ಭಾಗವನ್ನು ತೋರಿಸುತ್ತೇನೆ ಎಂದು ಹೇಳಿದ. ಆಗ ಇಂಥ ಮಗನನ್ನು ಪಡೆದ ನಾವೇ ಧನ್ಯರು ಎನಿಸಿತು.
ಅವನು ನಮ್ಮ ಸಾಮಾನುಗಳನ್ನೆಲ್ಲ ಸರಿಯಾಗಿ ಸೂಟ್‌ಕೇಸಿಗೆ ತುಂಬಿ ಎಲ್ಲ ಬ್ಯಾಗುಗಳ ಸರಿಯಾದ ತೂಕ ಮಾಡಿ ಕೊಟ್ಟನು. ಬೆಳಿಗ್ಗೆ ಎದ್ದು ಹೊರಡಲು ರೆಡಿಯಾದೆವು. ಮನೆಯಲ್ಲಿ ಹಿರಿಯರಿಗೆ ನಮಸ್ಕಾರ ಮಾಡಿ ಚಿಕ್ಕವರಿಗೆ ಬಾಯ್ ಹೇಳಿ ವಿಮಾನ ನಿಲ್ದಾಣಕ್ಕೆ ಹೊರಟೆವು. ನಮ್ಮ ಜೊತೆ ಮಗ ಮತ್ತು ಇವರ ಗೆಳೆಯ ದಂಪತಿಗಳು ಸಹ ಬಂದಿದ್ದರು. ಅವರಿಗೂ ಸಹ ನಮ್ಮನ್ನು ಕಳೆಸಲು ತುಂಬಾ ಬೇಸರವಾಗಿತ್ತು. ಇನ್ನು ಸ್ವಲ್ಪ ದಿನ ನಾವು ಅಲ್ಲಿರಬೇಕೆಂಬುದು ಅವರ ಆಶೆಯಾಗಿತ್ತು. ನಾವು ಬಂದವರೇ ಮೊದಲು ಚೆಕ್ ಇನ್ ಮಾಡಲು ಹೋದೆವು. ಸೂಟ್‌ಕೇಸಿನ ಭಾರ 25 ಕೆ.ಜಿ.ಗಿಂತ ಹೆಚ್ಚಿದ್ದರಿಂದ ಕೆಲವು ಸಾಮಾನುಗಳನ್ನು ತೆಗೆಯಬೇಕಾಯಿತು. ಶಾಂಪು, ಬಾಡಿ ವಾಶ್, ಬಾಡಿ ಕ್ರೀಮ್‌ಗಳೆಲ್ಲ ಅತಿ ಭಾರವಿರುವುದರಿಂದ ಅದನ್ನು ತೆಗೆದು ಮಗನಿಗೆ ಕೊಟ್ಟೆವು. ಸ್ವಲ್ಪ ಸಮಯ ಮಗನ ಬಳಿ ನಿಂತು ಅವನನ್ನು ತಬ್ಬಿ ಅತ್ತುಬಿಟ್ಟೆ. ನಾನು ಅಳುವುದನ್ನು ನೋಡಿ ಉಳಿದವರ ಕಣ್ಣಲ್ಲೂ ನೀರು ಬಂತು. ಮಗನಿಗೂ ಸಹ ತುಂಬಾ ದುಃಖವಾಗಿತ್ತು. ಆದರೂ ಅದನ್ನು ತೋರಿಸಿಕೊಳ್ಳದೇ ನನ್ನ ಬೆನ್ನು ಸವರಿ ಸಮಾಧಾನ ಮಾಡುತ್ತಿದ್ದ. ಕೊನೆಗೂ ಸೆಕ್ಯೂರಿಟಿ ಚೆಕ್ ಮುಗಿಸಿ ಅವರಿಗೆ ಟಾಟಾ ಮಾಡಿ ಲಂಡನ್ ವಿಮಾನ ಏರಿದೆವು. ಹೀಗೆ ನಾವು ಒಂದು ತಿಂಗಳ ಅಮೇರಿಕಾ ಪ್ರವಾಸ ಮುಗಿಸಿದೆವು.
ಅಮೇರಿಕಾ ವಲಸಿಗರ ಬದುಕು
ಇಂದಿನ ಯುವಕರಿಗೆ ಅಮೇರಿಕಾದ ಆಕರ್ಷಣೆಯ ರಹಸ್ಯ ಅಡಗಿರುವುದು ಡಾಲರ್‌ನಲ್ಲಿ, ಆ ದೇಶದಲ್ಲಿ ದುಡಿಯುವ ಸಾಫ್ಟ್‌ವೇರ್ ಎಂಜಿನಿಯರ್, ಡಾಕ್ಟರು ವಕೀಲರು ಹೀಗೆ ವಿವಿಧ ವೃತ್ತಿಗಳಲ್ಲಿ ತೊಡಗಿರುವವರ ಆದಾಯ ದೊಡ್ಡ ಪ್ರಮಾಣದಲ್ಲಿ ಇರುವುದರಿಂದ ಈ ಡಾಲರಿನ ಮಹಿಮೆ ಎಲ್ಲರನ್ನೂ ಕವಿದಿದೆ. ಈ ದೇಶದಲ್ಲಿ ನೆಲೆನಿಲ್ಲಲು ಇದು ಮೊದಲ ಕಾರಣ, ಎರಡನೆಯದು ಸರಿಸಮಾನತೆ, ಪ್ರತಿಭೆಗೆ ಮಾನ್ಯತೆ, ಮೂರನೆಯದು ಇಂಡಿಯಾದ ಹಾಗೆ ಲಂಚ, ರಾಜಕೀಯ, ಪ್ರತಿಭೆಗೆ ಅವಕಾಶವಿಲ್ಲದ ಆಡಳಿತ ವ್ಯವಸ್ಥೆ, ಬೆಂಗಳೂರಿನ ಟ್ರಾಫಿಕ್ ಜಾಮ್, ಪೊಲ್ಯುಶನ್ ಇಲ್ಲಿ ಇಲ್ಲ ಮತ್ತು ಸಾಮಾಜಿಕವಾಗಿ ನಮ್ಮ ಬದುಕು ನಮಗೆ ಸಂಬಂಧಿಸಿದ್ದು ಎನ್ನುವ ನಿರಾಳತೆ.
ವಲಸಿಗರಾಗಿ ಬಂದು ಇಲ್ಲಿ ಗೂಡುಕಟ್ಟಿದವರ ಸಮಸ್ಯೆ ಹಲವು ಬಗೆಯದು. ಕೆಲವರು ಆರ್ಥಿಕವಾಗಿ ಮುಂದುವರಿದಿದ್ದರೂ ಅವರಿಗೆ ನೆಮ್ಮದಿಯಿಲ್ಲ. ಕೆಲವರು ಭೌತಿಕ ಸುಖವನ್ನು ಅರಸಿಕೊಂಡು ಇಲ್ಲಿಗೆ ಬಂದರೂ ಅವರಿಗೆ ಭದ್ರತೆ ಇಲ್ಲ. ಇನ್ನೂ ಕೆಲವರು ತಮ್ಮ ಕುಟುಂಬ ತಮ್ಮ ತಂದೆ ತಾಯಿ ಬಂಧು-ಬಳಗ ಎಂದು ತುಂಬ ಹಚ್ಚಿಕೊಂಡವರಿಗೆ ಮನೆಯನ್ನೂ ದೇಶವನ್ನೂ ಬಿಟ್ಟಿರುವುದು ತುಂಬಾ ಕಷ್ಟ. ಅವರ ಮನಸ್ಸು ಸದಾ ಚಿಂತಿಸುತ್ತಿರುವುದು ತಂದೆ ತಾಯಿಯ ಬಗ್ಗೆ, ಶರೀರ ಭೌತಿಕವಾಗಿ ಅಮೆರಿಕಾದಲ್ಲಿದ್ದರೂ ಸದಾ ತುಡಿಯುತ್ತಿರುವುದು ತಮ್ಮ ಊರಿನ ಕೌಟುಂಬಿಕ ಪರಿಸರ, ಬಂಧು ಬಾಂಧವರ ಬಗೆಗೆ ಚಿಂತೆ ಕಾಡುತ್ತಿರುತ್ತದೆ.
ಇನ್ನು ಕೆಲವು ಸಂಪ್ರದಾಯಸ್ಥ ವಲಸಿಗರು ಅಮೆರಿಕಾ ಜೀವನ ಶೈಲಿಯನ್ನು ಹೊರಗೆ ಅನುಸರಿಸಿದರೂ ತಮ್ಮ ಮನೆಯ ನಾಲ್ಕು ಗೋಡೆಗಳ ಒಳಗೆ ದೇವರ ಪೂಜೆ, ಹಬ್ಬಗಳ ಆಚರಣೆ, ಊಟೋಪಚಾರಗಳಲ್ಲಿ ಅವರದು ಸಂಪ್ರದಾಯಸ್ಥ ನಡುವಳಿಕೆ.
ಅಮಾವಾಸ್ಯೆ ಹುಣ್ಣಿಮೆಗಳಲ್ಲಿ ಅವರದೇ ಆದ ವ್ರತಾಚರಣೆಗಳಿರುತ್ತವೆ. ಇದನ್ನು ನಾನು ಇವರ ಗೆಳೆಯನ ಮನೆಯಲ್ಲಿ ಕಣ್ಣಾರೆ ಕಂಡಿದ್ದೇನೆ. ಅವರು ಅಮೆರಿಕೆಯ ಪೌರತ್ವ ಪಡೆದು ನೆಮ್ಮದಿಯಿಂದ ಇದ್ದರೂ ಅವರಲ್ಲಿ ತಮ್ಮ ತವರಿಗೆ ಹಿಂತಿರುಗಿ ತಮ್ಮ ಕೊನೆಯ ದಿನಗಳನ್ನು ತಮ್ಮ ಕುಟುಂಬ ಬಂಧು ಬಾಂಧವರ ಜೊತೆ ನೆಮ್ಮದಿಯಿಂದ ಕಳೆಯಬೇಕೆನ್ನುವ ಆಸೆ. ಅದಕ್ಕಾಗಿ ಅವರು ತಮ್ಮ ಊರಲ್ಲಿ ಆಧುನಿಕ ರೀತಿಯ ಮನೆ ಕಟ್ಟಿಸಿರುತ್ತಾರೆ. ತಮ್ಮ ದುಡಿಮೆಯ ಹಣವನ್ನು ಇಂಡಿಯಾದಲ್ಲಿ ಸೈಟು, ಜಮೀನು, ಷೇರುಗಳಲ್ಲಿ ಹೂಡಿರುತ್ತಾರೆ. ಗಂಡು ಮತಾರಿ
ಇನ್ನೂ ಕೆಲವರು ಅಮೆರಿಕಾದ ಐಷಾರಾಮಿ ಜೀವನಕ್ಕೆ ಹೊಂದಿಕೊಂಡು ಬಿಟ್ಟಿರುತ್ತಾರೆ. ಅವರಿಗೆ ನಮ್ಮಲ್ಲಿಯ ರಾಜಕೀಯ, ಮೋಸ, ವಂಚನೆ, ಸುಳ್ಳು ನೆನೆಸಿಕೊಂಡಾಗ ಅವರಿಗೆ ಅಮೆರಿಕಾದಲ್ಲಿ ಇರುವುದೋ ಇಲ್ಲಾ ಇಂಡಿಯಾಕ್ಕೆ ಹೋಗಬೇಕೇ ಬೇಡವೇ ಎಂಬ ದಂದ್ವದಲ್ಲಿ ಇರುತ್ತಾರೆ. ಅಲ್ಲಿಯ ಸ್ವಚ್ಛ ಗಾಳಿ, ಪರಿಸರ, ಅಮೇರಿಕಾದ ಜೀವನ ವಿಧಾನ, ಆರೋಗ್ಯ ಸೌಲಭ್ಯಗಳು, ಒಳ್ಳೆಯ ರಸ್ತೆ ಇವುಗಳನ್ನು ಅನುಭವಿಸಿದ ತಾವು ತಮ್ಮ ಊರಿನ ಪರಿಸರಕ್ಕೆ ಹೊಂದಿಕೊಳ್ಳುತ್ತೇವೆಯೋ ಇಲ್ಲವೊ ಎಂಬ ಚಿಂತೆ ಅವರನ್ನು ಕಾಡುತ್ತದೆ. ಈ ಚಿಂತೆಯಲ್ಲೇ ಕೆಲವರು ತಮ್ಮ ನಿರ್ಧಾರವನ್ನು ಮುಂದೆ ಹಾಕುವರು, ಕೆಲವರು ಗಟ್ಟಿ ಮನಸ್ಸು ಮಾಡಿ ಭಾರತಕ್ಕೆ ಬಂದ ಉದಾಹರಣೆಗಳೂ ಉಂಟು.
ಇನ್ನು ವಲಸಿಗರ ಇನ್ನೊಂದು ಸಮಸ್ಯೆ ಎಂದರೆ ಮಕ್ಕಳ ಸಮಸ್ಯೆ, ಮಕ್ಕಳ ಲಾಲನೆ ಪಾಲನೆಯದೇ ಸಮಸ್ಯೆ, ಒಂದನೆಯದು ಅವರು ತಮ್ಮ ಮಕ್ಕಳು ಅಮೆರಿಕಾದ ಮಕ್ಕಳಂತೆ ಇಂಗ್ಲಿಷ್ ಮಾತನಾಡಬೇಕೆಂದು ಅವರಿಗೆ ತಮ್ಮ ಮಾತೃ ಭಾಷೆ ಹೇಳಿಕೊಡುವ ಬದಲು ಕೆಲವರು ಮಕ್ಕಳು ಹುಟ್ಟುತ್ತಲೇ ತಂದೆ ತಾಯಿಯರು ಅವರ ಮುಂದೆ ಯಾವಾಗಲೂ ಇಂಗ್ಲಿಷ್‌ನಲ್ಲಿಯೇ ಮಾತನಾಡುತ್ತಿರುತ್ತಾರೆ. ಹೀಗಾಗಿ ಮಕ್ಕಳಿಗೆ ಮಾತೃಭಾಷೆಯ ಪರಿಚಯವೇ ಇರುವುದಿಲ್ಲ. ಅವರು ಅಪರೂಪಕ್ಕೆ ಊರಿಗೆ ಬಂದಾಗ ಅಜ್ಜ ಅಜ್ಜಿಯರಿಗೆ ತಮ್ಮ ಮೊಮ್ಮಕ್ಕಳ ಬಳಿ ಬಾಯಿ ತುಂಬಾ ಮಾತನಾಡಬೇಕೆಂದು ಹಂಬಲವಿರುತ್ತದೆ. ಆದರೆ ಮೊಮ್ಮಕ್ಕಳಿಗೆ ಕನ್ನಡ ಬರುವುದಿಲ್ಲ. ಅವರಿಗೆ ಇಂಗ್ಲಿಷ್ ಬರುವುದಿಲ್ಲ. ಹೀಗಿದ್ದ ಅವರ ಮಧ್ಯ ಪ್ರೀತಿಯ ಬಾಂಧವ್ಯ ಬೆಳೆಯುವುದಾದರೂ ಹೇಗೆ? ಅವರ ಮಧ್ಯ ಭಾಷೆ ಎನ್ನುವುದು ಅಡ್ಡಗೋಡೆಯಾಗಿರುತ್ತದೆ. ಮಕ್ಕಳು ದೊಡ್ಡವರಾದಂತೆ ಊರಿಗೆ ಬಂದಾಗಲೆ ತಮ್ಮ ಕುಟುಂಬದವರೊಡನೆ ಬೇರೆಯದೇ ಒಂದು ರೂಮಿನಲ್ಲಿ ಕುಳಿತು ಕಾಮಿಕ್ಸ್ ಪುಸ್ತಕವನ್ನು ಓದುವುದು, ಕಿವಿಗೆ ಹೆಡ್‌ಫೋನ್ ಹಾಕಿಕೊಂಡು ಪ್ರಪಂಚದ ಪರಿವೆಯಿಲ್ಲದ ಇಂಗ್ಲೀಷ್ ಹಾಡುಗಳನ್ನು ಕೇಳುತ್ತಿರುತ್ತಾರೆ, ಅದಕ್ಕಾಗಿ ನನಗೆ ಅನಿಸುತ್ತದೆ ತಂದೆ ತಾಯಿಯರು ಮಕ್ಕಳಿಗೆ ಇಂಗ್ಲಿಷ್ ಕಲಿಸುವುದರ ಜೊತೆಗೆ ತಮ್ಮ ಮಾತೃಭಾಷೆಯನ್ನು ಕಲಿಸಲೇಬೇಕು. ಇನ್ನೂ ಕೆಲವರು ತಮ್ಮ ಮಾತೃಭಾಷೆಯ ಜೊತೆಗೆ ಊರಿಗೆ ಬಂದಾಗ ತಮ್ಮ ಬಂಧು-ಬಳಗದವರ ಪರಿಚಯ ಮಾಡಿಸಿಕೊಟ್ಟು ಅವರೊಟ್ಟಿಗೆ ಕೂಡಿ ಆಡುವಂತೆ ಮಾಡುವವರೂ ಇದ್ದಾರೆ. ಜೊತೆಗೆ ನಮ್ಮ ಭಾರತೀಯ ಸಂಸ್ಕೃತಿಯ ತಿಳುವಳಿಕೆ ಕೊಡುವವರೂ ಇದ್ದಾರೆ.
ಇನ್ನೂ ಕೆಲವರಿಗೆ ಮಕ್ಕಳ ವಿದ್ಯಾಭ್ಯಾಸ, ಲಾಲನೆ, ಪಾಲನೆಯದೇ ಚಿಂತೆ, ಅವರನ್ನು ಗದರಿಸುವಂತಿಲ್ಲ, ಶಿಕ್ಷಿಸುವಂತಿಲ್ಲ. ಆ ದೇಶದ ಕಾನೂನು ಮಕ್ಕಳ ಪರವಾಗಿದೆ.
ಮಕ್ಕಳು ಬೆಳೆದು ದೊಡ್ಡವರಾದಂತೆಲ್ಲಾ ಅವರ ಸ್ವಾತಂತ್ರ್ಯಕ್ಕೆ ಮನೆಯ ಹಿರಿಯರು ಅಡ್ಡಿ ಬರುವಂತಿಲ್ಲ, ಹೀಗಾಗಿ ತಂದೆ ತಾಯಿಯರಿಗೆ ಅವರನ್ನು ಹದ್ದುಬಸ್ತಿನಲ್ಲಿಡಲಾಗದೇ ಮಾನಸಿಕವಾಗಿ ನರಳುವರು. ಮಗಳು ತಡವಾಗಿ ಮನೆಗೆ ಬಂದರೆ ಎಲ್ಲಿಗೆ ಹೋಗಿದ್ದೆ ಎಂದು ಪ್ರಶ್ನೆ ಕೇಳುವಂತಿಲ್ಲ. ಅವರ ಡೇಟಿಂಗ್ ಬಗ್ಗೆ ಪ್ರಶ್ನಿಸುವಂತೆಯೇ ಇಲ್ಲ. ಅವರು ಹದಿನಾರನೇ ವಯಸ್ಸಿಗೆ ಮೆಜಾರಿಟಿಗೆ ಬರುವರು. ಅವರ ಸ್ವಾತಂತ್ರ್ಯವನ್ನು ಪ್ರಶ್ನಿಸುವಂತೆ ಇಲ್ಲ. ಹೀಗಾಗಿ ಅವರು ಮೌನವಾಗಿ ಅಂತರಂಗದಲ್ಲಿ ಕೊರಗುವರು.
ಇನ್ನು ಅಮೆರಿಕಾದಲ್ಲಿ ನೆಲೆಸಿರುವ ಹುಡುಗರು ಪೌರತ್ವ ಪಡೆಯುವುದಕ್ಕಾಗಿ ಪರದಾಡುತ್ತಾರೆ. ಅವರಿಗೆ ಅದು ನೆಮ್ಮದಿಯ ತಾಣದ ಹುಡುಕಾಟ. ಒಮ್ಮೆ ಪೌರತ್ನ ಪಡೆದು ಬಿಟ್ಟರೆ ನಿರಂತರವಾಗಿ ಅಲ್ಲಿ ಬದುಕು ನಡೆಸಬಹುದೆಂಬ ಹಂಬಲ, ಇದು ಸಿಗದಿದ್ದರೆ ಅವರ ಬದುಕು ಅತಂತ್ರ, ವಿದ್ಯಾರ್ಥಿಯಾಗಿ ಇಲ್ಲವೆ ಕೆಲಸದ ಸಲುವಾಗಿ ಇಲ್ಲಿಗೆ ಬಂದವರಿಗೆ ಸ್ಪೂಡೆಂಟ್ ವೀಸಾ ಅವಧಿ ವೃತ್ತಿ ಸಂಬಂಧವಾದ ವೀಸಾ ತಾತ್ಕಾಲಿಕ ಅವಧಿಯದ್ದು. ಹೀಗಾಗಿ ವೀಸಾ ಅವಧಿ ಮುಗಿದ ಕೂಡಲೇ ಅವರು ತಮ್ಮ ದೇಶಕ್ಕೆ ಹಿಂತಿರುಗಬೇಕೆಂಬುದು ಆ ದೇಶದ ಕಟ್ಟು ನಿಟ್ಟಿನ ನಿಯಮ. ಹೀಗಾಗಿ ವಿದ್ಯಾರ್ಥಿ ಜೀವನ ಮುಗಿದ ಕೂಡಲೇ ಕೆಲಸಕ್ಕಾಗಿ ಪ್ರಯತ್ನ ನಡೆಸುವರು. ಕೆಲಸ ನೀಡಿದವರೇ ವೀಸಾ ನಿಬರ್ಂಧ ಸಡಿಲಿಸಿ ಆ ದೇಶದಲ್ಲಿ ನೆಲೆಸಲು ಅವಕಾಶ ಮಾಡಿಕೊಡಬೇಕೆಂದು ಸರಕಾರಕ್ಕೆ ಶಿಫಾರಸ್ಸು ಮಾಡುವರು, ಗ್ರೀನ್ ಕಾರ್ಡ್ ಕೊಡುವ ಅಧಿಕಾರ ಆ ದೇಶದ್ದು, ಸಮಗ್ರ ಪರಿಶೀಲನೆಯ ನಂತರ ತೆಗೆದುಕೊಳ್ಳುವ ತೀರ್ಮಾನ.
ಈಗಿನ ಯುವಕರು ಅಮೆರಿಕೆಯಲ್ಲಿ ನೆಲೆಸುವ ಉದ್ದೇಶದಿಂದ ಹುದ್ದೆಯೊಂದನ್ನು ಹಿಂಬಾಲಿಸಿ ಅಮೆರಿಕಾಕ್ಕೆ ಬರುವರು, ಬಂದ ಕೆಲವೇ ದಿವಸಗಳಲ್ಲಿ ತಮ್ಮ ಊರು, ಕೇರಿ, ಬಂಧು ಬಳಗ, ಆಚರಣೆ, ಸಂಸ್ಕೃತಿ ಎಲ್ಲ ಮರೆತುಬಿಡುವರು. ಅಮೆರಿಕಾ ಜೀವನ ಶೈಲಿಯೊಂದಿಗೆ ಬೆರೆತುಹೋಗಿಬಿಡುವರು. ಅವರ ನಡೆ ನುಡಿ, ಮಾತಿನ ಧಾಟಿ, ಮ್ಯಾನರಿಸಂ ವೇಷ ಭೂಷಣಗಳು ಅಮೇರಿಕಾವನ್ನು ಅನುಕರಣೆ ಮಾಡುವ ಮಟ್ಟಿಗೆ ಬದಲಾಗಿಬಿಡುತ್ತವೆ. ಇದನ್ನು ಅಮೇರಿಕೀಕರಣ ಎಂದು ಕರೆಯಬಹುದು. ಇಂದಿನ ಯುವಕರು ಸಾಂಸ್ಕೃತಿಕ ಬೇರುಗಳನ್ನು ಕಳಚಿಕೊಂಡು ಸ್ವತಂತ್ರವಾಗಿರಲು ಬಯಸುವರು. ಅವರಿಗೆ ನಮ್ಮ ಹಳೆಯ ವಿವಾಹ ಬಂಧನದ ಬಗೆಗೆ ವಿಶ್ವಾಸವಿಲ್ಲ. ಪರಂಪರೆಯಿಂದ ಬಂದ ಸಂಪ್ರದಾಯ ಆಚರಣೆಗಳ ಬಗೆಗೆ ಅವರಿಗೆ ನಂಬಿಕೆ ಇಲ್ಲ.
ಕೆಲವು ಸಾಫ್ಟ್‌ವೇರ್ ಕಂಪನಿಗಳಿಂದ ಪ್ರೊಜೆಕ್ಟ್ ಸೇವೆಗೆಂದು ಈ ದೇಶಕ್ಕೆ ಬಂದವರು ತಮ್ಮ ಪ್ರೊಜೆಕ್ಟ್ ಅವಧಿ ಮುಗಿದ ಮೇಲೆ ಅಲ್ಲೇ ನೆಲೆ ನಿಲ್ಲಲು ಬೇರೆ ಬೇರೆ ಕಂಪನಿಗಳಿಗೆ ಅರ್ಜಿ ಹಾಕಿಕೊಂಡು ಕೆಲಸ ಪಡೆಯಲು ಪ್ರಯತ್ನಿಸುವರು. ಅವರ ಪ್ರತಿಭೆಗೆ ಬೆಲೆ ಕೊಡುವ ಕಂಪನಿಗಳು ಅವರಿಗೆ ಕೆಲಸವನ್ನು ನೀಡಿ ಅವರ ಸೇವಾ ಅಗತ್ಯವನ್ನಾಧರಿಸಿ ಗ್ರೀನ್ ಕಾರ್ಡ್‌ಗೆ ಶಿಫಾರಸ್ಸು ಮಾಡುವರು. ಒಮ್ಮೆ ಅದು ದೊರೆತರೆ ಭಾರತಕ್ಕೆ ಹಿಂದಿರುಗುವ ಸಾಧ್ಯತೆ ಕಡಿಮೆ.
By-ಶಾಲಿನಿ ಗಾಂವಕರ್
ಮುಂದಿನ ಭಾಗ ಓದಿ…
