ಸ್ವಚ್ಛ ಸುಂದರವಾದ ನಗರ

ಅಮೆರಿಕಾ ನಗರಗಳಲ್ಲಿ ಮಾತ್ರವಲ್ಲದೆ ಹೆದ್ದಾರಿಗಳಲ್ಲಿ ಮತ್ತು ಸಣ್ಣ ಸಣ್ಣ ಪಟ್ಟಣಗಳಲ್ಲಿ ಎಲ್ಲೆಲ್ಲಿಯೂ ಒಂದೇ ರೀತಿಯ ಸ್ವಚ್ಛವೂ ಸುಂದರವೂ ಆದ ರೆಸ್ಟ್ ರೂಂಗಳು, ಇಡೀ ಶೌಚಾಲಯವನ್ನು ದುರ್ಬಿನು ಹಾಕಿ ಹುಡುಕಿದರೂ ಒಂದು ಕಸ ಕಡ್ಡಿ ಸಿಗುವಂತಿಲ್ಲ. ಅಲ್ಲಿ ಎಲ್ಲವೂ ಆಟೋಮೆಟಿಕ್. ನಾವು ನಮ್ಮ ಕೆಲಸ ಮುಗಿಸಿದ ಕೂಡಲೇ ತಂತಾನೇ ನೀರು ಪ್ಲಶ್ ಆಗುವದು. ಅಲ್ಲದೇ ಹೊರಗೆ ಬಂದ ಕೂಡಲೇ ಸ್ವಚ್ಛಗೊಳಿಸುವವರು ಒಳಹೋಗಿ ಮತ್ತೊಮ್ಮೆ ಸ್ವಚ್ಛಗೊಳಿಸುವರು.ಇಲ್ಲಿಯ ಶೌಚಾಲಯಗಳನ್ನು ನೋಡಿದ ಮೇಲೆ ಒಮ್ಮೆ ನಮ್ಮ ದೇಶದಲ್ಲಿ ಇರುವ ಶಾಚಾಲಯಗಳನ್ನು ನೆನಪಿಸಿಕೊಂಡೆ. ಕೆಲವೊಂದು ಬಸ್ ನಿಲ್ದಾಣಗಳಲ್ಲಿ ಶೌಚಾಲಯಕ್ಕೆ ಹೋದರೆ ಅಲ್ಲಿಯ ಕೆಟ್ಟ ವಾಸನೆ, ಕೆಟ್ಟ ಪರಿಸರ ಕೊಳಕುತನವೇ ತುಂಬಿಕೊಂಡಿದ್ದು ವಾಂತಿ ಬರುವಂತೆ ಆಗುತ್ತದೆ. ಆದರೆ ಹೋಗದೇ ವಿಧಿಯಿಲ್ಲ. ಕೆಲವು ಕಡೆ ಸ್ವಚ್ಛಗೊಳಿಸುವವರು ಅಲ್ಲೇ ಇದ್ದರೂ ಸಹ ಅವರಿಗೆ ಶೌಚಾಲಯದ ಸ್ವಚ್ಛತೆಗಿಂತ ಬಂದವರ ಬಳಿ ಹಣ ವಸೂಲಿ ಮಾಡುವುದೇ ಮುಖ್ಯ ಹೊರತು ಅದರ ನಿರ್ವಹಣೆಯ ಬಗೆಗೆ ಕಾಳಜಿ ಇಲ್ಲ.
ಕೆಲವು ಹಳ್ಳಿಗಳಲ್ಲಿ ಶೌಚಾಲಯವೇ ಇಲ್ಲ. ಜನರು ಅಲ್ಲಲ್ಲಿ ಬಯಲಿನಲ್ಲಿ ಬಹಿರ್ದೆಸೆಗೆ ಕುಳಿತಿರುವುದನ್ನು ಕಾಣಬಹುದು. ಇನ್ನೂ ಕೆಲವು ವಿದ್ಯಾವಂತರೂ ಸಹ ಮನೆಯಲ್ಲಿ ಶೌಚಾಲಯವಿದ್ದರೂ ತಮ್ಮ ಮನೆಯ ಶೌಚಾಲಯ ಹೊಲಸಾಗುತ್ತದೆ. ನೀರು ಹಾಕಿ ಸ್ವಚ್ಛ ಮಾಡಬೇಕಾಗುತ್ತದೆ ಎಂದು ಮಕ್ಕಳನ್ನು ರಸ್ತೆಯ ಬದಿಯಲ್ಲಿ ಬಹಿರ್ದೆಸೆಗೆ ಕೂಡಿಸುವುದನ್ನು ನಾನು ಗುಲ್ಬರ್ಗಾದ ಕೆಲವು ಕಡೆ ಕಣ್ಣಾರೆ ಕಂಡಿದ್ದೇನೆ.
ನಾವು ಹೆದ್ದಾರಿಗಳಲ್ಲಿ ಪ್ರಯಾಣ ಮಾಡುವಾಗ ಸಹ ಮಧ್ಯ ಮಧ್ಯ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಅಲ್ಲಲ್ಲಿ ರೆಸ್ಟ್ ರೂಮ್‌ಗಳಿವೆ. ಪ್ರಕೃತಿ ಕೂಡ ಅಮೆರಿಕಾಕ್ಕೆ ತುಂಬಾ ಸಹಾಯಕವಾಗಿದೆ. ಅಪಾರ ಪ್ರಮಾಣದ ನೈಸರ್ಗಿಕ ಸಂಪನ್ಮೂಲವಿದೆ. ನೂರಾರು, ಸಾವಿರಾರು ಮೈಲುಗಳುದ್ದಕ್ಕೂ ಸಮತಟ್ಟಾದ ಬಯಲು ಪ್ರದೇಶವಿದೆ. ಅಲ್ಲಲ್ಲಿ ದೊಡ್ಡ ದೊಡ್ಡ ನದಿಗಳಿವೆ. ನದಿಗಳಿಲ್ಲದ ಕಡೆ ಮಾನವನಿರ್ಮಿತ ನೀರಿನ ಕಾಲುವೆಗಳು, ಅಲ್ಲಲ್ಲಿ ನೀರಿನ ದೊಡ್ಡ ಹೊಂಡದಂತೆ ಮಾಡಿ ಅಲ್ಲಿ ಕಾರಂಜಿಗಳನ್ನು ಮಾಡಿದ್ದಾರೆ.
ಹೆದ್ದಾರಿಯ ಅಕ್ಕ ಪಕ್ಕದಲ್ಲಿ ದಟ್ಟವಾದ ಕಾಡು ಇದೆ. ಅಮೆರಿಕನ್ನರು ಕಾಡು ಪ್ರಿಯರು ಅಲ್ಲಲ್ಲಿ ಅರಣ್ಯಗಳನ್ನು ಬೆಳೆಸಿದ್ದಾರೆ. ಅವರು ನಮ್ಮ ಜನರಂತೆ ಕಾಡು ನಾಶ ಮಾಡುವುದಿಲ್ಲ ಕಾಡನ್ನು ಉಳಿಸುತ್ತಾರೆ. ಅಲ್ಲಲ್ಲಿ ಎಕರೆಗಟ್ಟಲೆ ಜಾಗದಲ್ಲಿ ಪಾರ್ಕ್‌ಗಳನ್ನು ಮಾಡಿದ್ದಾರೆ. ಅಲ್ಲಿ ಸಹ ನೂರಾರು ಗಿಡಗಳನ್ನು ಬೆಳೆಸಿದ್ದಾರೆ.
ಬದಲಾದ ಅಭಿಪ್ರಾಯ
ಅಮೆರಿಕಾ ನೋಡುವ ಮೊದಲು ನನಗೆ ಅದರ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ ಮತ್ತು ನಾನು ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗಿರಲಿಲ್ಲ. ಅಲ್ಲಿಗೆ ಹೋಗಿ ನೋಡಿದ ಮೇಲೆ ನನ್ನ ಭಾವನೆಗಳು ಬದಲಾಗಿವೆ.

ಅಮೇರಿಕಾ ಎಂಬ ಹೆಸರೇ ನಮ್ಮಲ್ಲಿ ರೋಮಾಂಚನ ಮೂಡಿಸುತ್ತದೆ. ಅಂಥ ಅದ್ಭುತವಾದ ದೇಶ, ಪ್ರಕೃತಿ ತನ್ನೆಲ್ಲ ಸೌಂದರ್ಯವನ್ನು ಅಮೆರಿಕಾಗೆ ಧಾರ ಎರೆದಿದೆಯೇನೋ ಎನ್ನುವಷ್ಟು ಅನುಕೂಲಗಳು ಕೆಲವು ಅಪವಾದವನ್ನು ಹೊರತು ಪಡಿಸಿದರೆ ಅಲ್ಲಿಯ ಜನ ಸಂತೃಪ್ತರು. ಇಂದಿನ ಯುವ ಪೀಳಿಗೆಗಂತೂ ಅಮೆರಿಕಾ ಅಚ್ಚುಮೆಚ್ಚಿನ ದೇಶ. ಮನೆಗೆ ಒಬ್ಬ ಹಿರಿಯನಿರುವಂತೆ, ಒಂದು ಸಂಸ್ಥೆಗೆ ಒಬ್ಬ ಅಧಿಕಾರಿ ಇರುವಂತೆ, ವಿಶ್ವಕ್ಕೂ ಒಬ್ಬ ನಾಯಕ ಬೇಕು. ಇದನ್ನು ಅಮೇರಿಕಾವಲ್ಲದೇ ಬೇರಾವ ದೇಶವೂ ವಹಿಸಲು ಸಾಧ್ಯವಿಲ್ಲ. ಅಮೇರಿಕಾವು ಅಷ್ಟೊಂದು ಶಕ್ತಿ ಸಾಮರ್ಥ್ಯ ಸಂಪನ್ಮೂಲಗಳನ್ನು ಹೊಂದಿರುವುದರಿಂದ ಅದು ವಿಶ್ವದ ದೊಡ್ಡಣ್ಣ ಎನಿಸಿದೆ. ಅಮೆರಿಕಾ ಮತ್ತು ಭಾರತದ ನಡುವೆ ಬಹಳಷ್ಟು ಅಂತರಗಳಿವೆ. ಉದಾ: ಅಲ್ಲಿನ ಶ್ರೀಮಂತಿಕೆ ಇಲ್ಲಿನ ಬಡತನ, ಅಲ್ಲಿನ ಶಿಸ್ತು, ಇಲ್ಲಿನ ಅಶಿಸ್ತು. ಹೀಗೆ ಪ್ರಾಮಾಣಿಕತೆ, ಸ್ವಚ್ಛ ರಾಜಕಾರಣ, ನೈರ್ಮಲೀಕರಣ, ಶ್ರೇಷ್ಠ. ಗುಣಮಟ್ಟದ ಶಿಕ್ಷಣ, ಅಲ್ಲಿನ ಸ್ವಾತಂತ್ರ್ಯ ಪ್ರಾಮಾಣಿಕ ಆಡಳಿತ, ಅಲ್ಲಿಯ ಅತ್ಯುತ್ತಮ ಜೀವನಮಟ್ಟ, ಅಲ್ಲಿನ ಆಹಾರ ವ್ಯವಸ್ಥೆ, ಶ್ರೇಷ್ಠ ದರ್ಜೆಯ ರಸ್ತೆಗಳು, ಅಲ್ಲಿನ ಸಾಹಸಿ ಪ್ರವೃತ್ತಿ ಇವುಗಳಲ್ಲಿ ಭಾರತ ತುಂಬಾ ಸುಧಾರಣೆಗಳನ್ನು ಹೊಂದಬೇಕಾಗಿದೆ. ಇದಕ್ಕೆ ಕಾರಣಗಳನ್ನು ಹುಡುಕಿದರೆ ಹಲವಾರು ಅಂಶಗಳು ಸಿಗುತ್ತವೆ. ಮೊದಲನೆಯದು ಬೆಳೆಯುತ್ತಿರುವ ಜನಸಂಖ್ಯೆ. ಇನ್ನೊಂದು ಅಮೇರಿಕನ್ನರು 250 ವರ್ಷಗಳ ಕಾಲದಿಂದ ದೇಶವನ್ನು ಶ್ರದ್ಧೆಯಿಂದ ಕಟ್ಟುತ್ತಾ ಬಂದಿದ್ದಾರೆ. ಆದರೆ ನಮಗೆ ಸ್ವಾತಂತ್ರ್ಯ ಬಂದು ಕೇವಲ 75 ವರ್ಷಗಳಾಗಿವೆ. ಇನ್ನೂ ಭಾರತ ಬಾಲ್ಯಾವಸ್ಥೆಯಲ್ಲಿಯೇ ಇದೆ. ಈ ಮೊದಲು ಭಾರತ ವಿದೇಶೀಯರ ಆಳ್ವಿಕೆಯಲ್ಲಿತ್ತು. ವಿದೇಶೀಯ ಆಕ್ರಮಣಕಾರರು ಭಾರತದ ಸಂಪತ್ತನ್ನು ಕೊಳ್ಳೆ ಹೊಡೆದು ದೋಚಿದರೇ ಹೊರತು ಪ್ರಗತಿಯತ್ತ ಗಮನ ಕೊಡಲಿಲ್ಲ. ನಮ್ಮಲ್ಲಿಯ ಬೆಳ್ಳಿ ಬಂಗಾರ ಅಪಾರ ಪ್ರಮಾಣದ ನೈಸರ್ಗಿಕ ಸಂಪತ್ತನ್ನು ಕೊಳ್ಳೆ ಹೊಡೆದು ತಮ್ಮ ದೇಶಕ್ಕೆ ಸಾಗಿಸಿದರು. ಈಗ ನಮ್ಮ ದೇಶವು ಸುಧಾರಣೆಯ ಹಾದಿಯಲ್ಲಿದೆ. ಆದರೆ ಅಮೆರಿಕಾದಂತೆ ಆಗಬೇಕಾದರೆ ಇನ್ನೂ ನೂರು ವರುಷ ಬೇಕು. ಇನ್ನು ಅಮೆರಿಕಾದ ಬೀದಿಗಳು, ಮನೆಗಳು ಸುತ್ತ ಮುತ್ತಲಿನ ಪರಿಸರ ಸ್ವಚ್ಛವಾಗಿರಲು ಕಾರಣ ಅವರ ಕಸದ ವಿಲೇವಾರಿ, ಅಮೆರಿಕಾದ ಸಾವಿರಾರು ಮೈಲು ಸುತ್ತಿದರೂ ಮತ್ತು ಸುಮಾರು ಸಿಟಿಗಳನ್ನು ನೋಡಿದ್ದೇವೆ. ಕೆಲವು ಚಿಕ್ಕ ಪುಟ್ಟ ಹಳ್ಳಿಗಳಿಗೂ ಭೇಟಿಕೊಟ್ಟಿದ್ದೇವೆ. ಎಲ್ಲ ಕಡೆಯಲ್ಲಿಯೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲಾಗಿತ್ತು. ಎಲ್ಲಿಯೂ ಕಸ ಕಡ್ಡಿಗಳನ್ನು ನಾವು ನೋಡಲಿಲ್ಲ. ಅವರು ಸ್ವಚ್ಛತೆಗೆ ಬಹಳ ಮಹತ್ವವನ್ನು ಕೊಡುತ್ತಾರೆ, (1) ಕಸದ ಪೆಟ್ಟಿಗೆಯಲ್ಲದೇ ಬೇರೆಲ್ಲೂ ಕಸ ಹಾಕುವುದಿಲ್ಲ. ಎಲ್ಲಿ ನೋಡಿದರಲ್ಲಿ ಕಸದ ಪೆಟ್ಟಿಗೆಗಳಿರುತ್ತವೆ ಮತ್ತು ಅಲ್ಲಿಯೇ ಕಸವನ್ನು ಹಾಕುತ್ತಾರೆ. ಹೀಗಾಗಿ ಈಡೀ ಅಮೇರಿಕಾ ಸದಾ ಸ್ವಚ್ಛವಾಗಿರುತ್ತದೆ. (2) ಕಸದ ವಿಲೇವಾರಿಯೂ ಅತ್ಯಂತ ಸಮರ್ಥವಾಗಿದೆ. ನಾವು ಇದ್ದ ಹೊಟೇಲ್‌ನಂದ ಅವರು ಕಸವನ್ನು ಸಂಗ್ರಹಿಸುತ್ತಿದ್ದರು. ಅಲ್ಲಿ ಕಸದ ಬುಟ್ಟಿಯಲ್ಲಿ ಕಸ ಹಾಕಿದಾಗ ಅದು ಅಲ್ಲಿ ಸಂಗ್ರಹವಾಗುತ್ತದೆ. ಪ್ಲಾಸ್ಟಿಕ್ ಕಸದ ಬ್ಯಾಗ್ ತುಂಬಿದ ನಂತರ ಹೊಟೇಲಿನವರೇ ಅದನ್ನು ತೆಗೆದು ಟೇಪ್‌ನಿಂದ ಕಟ್ಟಿ ಒಂದೆಡೆ ಜೋಡಿಸಿಡುತ್ತಾರೆ. ಆದ್ದರಿಂದ ಕಸಕಡ್ಡಿ ಹೊರ ಚೆಲ್ಲುವುದಿಲ್ಲ. ಮಾರನೇ ದಿನ ಕಸದ ಲಾರಿಯವರು ಬಂದು ಎಲ್ಲ ಕಸದ ಚೀಲಗಳನ್ನು ಎತ್ತಿ ವಾಹನಕ್ಕೆ ಹಾಕಿಕೊಂಡು ಹೋಗುತ್ತಾರೆ. ಹೀಗೆ ಎಲ್ಲ ಬಸ್, ರೈಲಿನಲ್ಲಿ ಇಂಥದೇ ವ್ಯವಸ್ಥೆ ಇರುತ್ತದೆ. ಹೀಗಾಗಿ ಕಸದ ವಿಲೇವಾರಿ ಸರಳವಾಗಿ ನೀಟಾಗಿ ನಡೆಯುತ್ತದೆ.
ಈ ಕಸದ ವಾಹನ ಮತ್ತು ಕಸ ಎತ್ತುವ ಜನರೂ ಸಹ ಅಷ್ಟೇ ಸ್ವಚ್ಛವಾಗಿರುತ್ತಾರೆ. ಅವರನ್ನು ಯಾರೂ ಕಸ ಎತ್ತುವವರು ಅನ್ನುವಂತೆಯೇ ಇಲ್ಲ. ಅವರು ಒಂದು ಬಗೆಯ ಪ್ಲಾಸ್ಟಿಕ್ ಡ್ರೆಸ್‌ನ್ನು ಧರಿಸಿರುತ್ತಾರೆ ಮತ್ತು ಕೈಗೆ ಗೌಸ್‌ಗಳನ್ನು ಹಾಕಿರುತ್ತಾರೆ ಮತ್ತು ಅವರು ಕೆಲಸದಲ್ಲಿ ಆಸಕ್ತಿಯುಳ್ಳವರಾಗಿರುತ್ತಾರೆ. ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಾರೆ.
ಅದೇ ರೀತಿ ಅವರ ಒಳಚರಂಡಿ ವ್ಯವಸ್ಥೆಯೂ ಅಷ್ಟೇ ಚೆನ್ನಾಗಿದೆ. ಅವರು ನೆಲಮಾಳಿಗೆಯಲ್ಲಿ ಒಳಚರಂಡಿ ವ್ಯವಸ್ಥೆ ಮಾಡಿರುವದರಿಂದ ನಗರದ ನೈರ್ಮಲ್ಯ ಕಾಪಾಡಬಹುದು. ಅಲ್ಲದೆ ಒಳಚರಂಡಿ ವ್ಯವಸ್ಥೆಯಲ್ಲಿ ತಾತ್ಕಾಲಿಕ ದೋಷವಾದರೆ ಮನೆಯವರೇ ಕೂಡಲೇ ರಿಪೇರಿ ಮಾಡಿಕೊಳ್ಳಬಹುದು. ಹೀಗೆ ಅಮೆರಿಕದ ಎಲ್ಲ ನಗರಗಳು ಇಂಥ ಒಳ ಚರಂಡಿ ವ್ಯವಸ್ಥೆಯನ್ನು ಹೊಂದಿವೆ. ಅವರು ನಗರ ನಿರ್ಮಿಸುವುದಕ್ಕಿಂತ ಮೊದಲು ಅತ್ಯುತ್ತಮವಾದ ಒಳಚರಂಡಿ ವ್ಯವಸ್ಥೆಯನ್ನು ರೂಪಿಸಿರುತ್ತಾರೆ. ಅಲ್ಲಿ ಪ್ರತಿಯೊಂದು ನಗರಕ್ಕೂ ಒಬ್ಬೊಬ್ಬ ಆರ್ಕಿಟೆಕ್ಟ್ ಎಂಜಿನಿಯರ್ ಇರುತ್ತಾರೆ.
ಅತಿಥಿಗಳು : ಭಾರತದಲ್ಲಿ ಮತ್ತು ಅಮೆರಿಕಾದಲ್ಲಿ
ಅಮೆರಿಕನ್ನರ ಮನೆಯಲ್ಲಿ ಅತಿಥಿಯಾಗಿರುವದಕ್ಕೂ ಭಾರತದಲ್ಲಿ ಬಂಧು ಮಿತ್ರರ ಮನೆಗೆ ಹೋಗುವದಕ್ಕೂ ವ್ಯತ್ಯಾಸವಿದೆ. ಅಮೆರಿಕಾದಲ್ಲಿ ಯಾರ ಮನೆಗಾದರೂ ಹೋಗಬೇಕಾದರೆ ಮೊದಲೇ ಅವರ ಒಪ್ಪಿಗೆ ಪಡೆದು ಹೋಗಬೇಕು. ನಮ್ಮಲ್ಲಿ ಬಂಧುಗಳನ್ನು ಒಬ್ಬರನ್ನೊಬ್ಬರನ್ನು ನೋಡಬೇಕೆನಿಸಿದಾಗ ಮೊದಲೇ ತಿಳಿಸದೆ ಹೋಗಬಹುದು. ಒಮ್ಮೊಮ್ಮೆ ನಾವು ಎಲ್ಲಿಗೋ ಹೋಗಲು ರೆಡಿಯಾಗಿರುತ್ತೇವೆ, ಆಗ ನಮ್ಮ ಮನೆಗೆ ಅಪರೂಪದ ಅತಿಥಿಗಳು ಹೇಳದೆ ಬಂದುಬಿಡುತ್ತಾರೆ. ಆ ಸಮಯದಲ್ಲಿ ನಾವು ಹೊರಗೆ ಇಲ್ಲವೆ ಮದುವೆಗೆ ಹೋಗುವದನ್ನು ಕ್ಯಾನ್ಸಲ್ ಮಾಡುತ್ತೇವೆ. ಕೆಲವು ಸಂದರ್ಭದಲ್ಲಿ ನನ್ನನ್ನು ಬಿಟ್ಟು ಇವರು ಒಬ್ಬರೇ ಹೋಗುತ್ತಾರೆ. ಆದರೆ ಅಮೆರಿಕಾದಲ್ಲಿ ತಂದೆ ಮಕ್ಕಳು ಒಬ್ಬರ ಮನೆಗೊಬ್ಬರು ಹೋಗಿ 4 ದಿನ ಇದ್ದು ಬರಬೇಕೆನ್ನಿಸಿದರೂ ಅವರ ಆಹ್ವಾನಕ್ಕಾಗಿ ಕಾಯಬೇಕು. ಒಂದು ವೇಳೆ ಕಾಯದಿದ್ದರೆ ಮೊದಲೇ ಪೋನ್ ಮಾಡಿ ನಾನು ಬರಲೇ? ನಿನ್ನ ಅನೂಕೂಲ ಹೇಗಿದೆ? ಯಾವತ್ತು ಬರಲಿ? ಎಂದು ಕೇಳಬೇಕಾಗುತ್ತದೆ ಅದು ಎಲ್ಲರಿಗೂ ಅನ್ವಯಿಸುವುದಿಲ್ಲ. ಅವರವರ ಮನಸ್ಥಿತಿಯ ಮೇಲೆ ಅವಲಂಬಿಸಿದೆ. ಪಾಶ್ಚಾತ್ಯರ ಪದ್ದತಿಯ ಪ್ರಕಾರ ಅವರು ತಮ್ಮ ಅತಿಥಿಗೆ ಬೇರೆ ಒಂದು ಕೋಣೆಯನ್ನು ಬಿಟ್ಟುಕೊಡಬೇಕು. ಅವರಿರುವಷ್ಟು ದಿನ ಆ ಕೋಣೆ ಅವರಿಗೆ ಮೀಸಲು. ಅವರಿಗೆ ಕುರ್ಚಿ, ಮೇಜು, ಮಂಚ, ಟಾಯ್ಲೆಟ್ ಮೊದಲಾದ ಸೌಕರ್ಯ ಒದಗಿಸಬೇಕು. ಊಟಕ್ಕೆ ಕುಳಿತಾಗ ಯಾರು ಯಾರ ಪಕ್ಕದಲ್ಲಿ ಕೂಡಬೇಕು, ಹೇಗೆ ಮಾತನಾಡಬೇಕು ಎಂದು ಮೊದಲೇ ನಿಶ್ಚಯಿಸಿಕೊಳ್ಳುತ್ತಾರಂತೆ.
ಅಮೆರಿಕದಲ್ಲಿರುವ ಭಾರತೀಯರೂ ಕೂಡ ಈ ವಿಷಯದಲ್ಲಿ ಅಮೆರಿಕನ್ನರಂತೆ ನಡೆಯಲಾರಂಭಿಸಿದ್ದಾರೆ. ಆದರೆ ನಮ್ಮಲ್ಲಿ ಹಾಗಲ್ಲ ಮಧ್ಯೆ ರಾತ್ರಿಯಲ್ಲಿ ಅತಿಥಿ ಬಂದರೂ ಸಾರು ಹೇಗೂ ಮಿಕ್ಕಿರುತ್ತದೆ. ಬೇಗ ಬಿಸಿ ಅನ್ನ ಮಾಡಿ ಬಡಿಸುವ ರೂಢಿ ಇದೆ. ಸಣ್ಣ ಮನೆಯಿದ್ದರೂ ಇದ್ದ ಒಂದು ಹಾಲಿನಲ್ಲಿಯೇ ಎಲ್ಲರೂ ಸಾಲಾಗಿ ನೆಲಕ್ಕೆ ಹಾಸಿಕೊಂಡು ಮಲಗುವ ರೂಢಿ ಇದೆ. ಇದು ಎಂದೂ ನಮಗೆ ಬೇಸರ ತರಿಸುವದಿಲ್ಲ. ಮೇಲಾಗಿ ಹೆಚ್ಚು ಖುಷಿ ಕೊಡುತ್ತದೆ. ಮನೆಗೆ ಬಂದವರೊಡನೆ ನಮ್ಮ ವ್ಯವಹಾರವೋ ಸರಳ ರೀತಿಯದು ಅತಿಥಿಗಳು ಅದಕ್ಕೆ ಹೊಂದಿಕೊಳ್ಳುತ್ತಾರೆ.
ಇನ್ನು ಬೇರೆ ದೇಶಕ್ಕೆ ಹೋಗಬೇಕೆಂದರೆ ಪಾಸ್‌ಪೋರ್ಟ್ ಬೇಕು, ವೀಸಾ ಬೇಕು, ಸ್ಪಾನ್ಸರ ಬೇಕು. ಮೇಲಾಗಿ ಅಷ್ಟು ಹಣ ಬೇಕು. ಹೀಗಾಗಿ ಅಪರೂಪಕ್ಕೆ ಜನ ವಿದೇಶಕ್ಕೆ ಹೋಗುತ್ತಾರೆ. ಹಾಗಾಗಿ ಅಲ್ಲಿಯ ನಮ್ಮವರು ನಮ್ಮನ್ನು ಪ್ರೀತಿಯಿಂದ ಕಾಣುತ್ತಾರೆ. ಹೆಚ್ಚಾಗಿ ಅತಿಥಿಗಳು ಶನಿವಾರ, ರವಿವಾರ ರಜದ ದಿನಗಳಲ್ಲಿ ಹೋಗುವುದರಿಂದ ಅವರಿಗೂ ಅತಿಥಿಗಳ ಉಪಚಾರ ಮಾಡಲು ಅನುಕೂಲವಾಗುತ್ತದೆ. ಯಾವುದಕ್ಕೂ ಅವರು ಮಾನಸಿಕವಾಗಿ ತಯಾರಾಗಿರಬೇಕು ಅಷ್ಟೇ. ಎಲ್ಲರೂ ಎಲ್ಲರನ್ನೂ ಪ್ರೀತಿಯಿಂದ ಆತ್ಮೀಯತೆಯಿಂದ ನೋಡಬೇಕೆಂದೇನಿಲ್ಲ. ಕೆಲವರು ಇವರು ಯಾಕಪ್ಪಾ ಬಂದರು ಎಂದು ಮನಸ್ಸಿಲ್ಲದ ಮನಸ್ಸಿನಿಂದ ತೋರಿಕೆಗಾಗಿ ಪ್ರೀತಿ ತೋರಿಸುವವರೂ ಇದ್ದಾರೆ. ಕೆಲವರಿಗೆ ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆ ನಮ್ಮವರೊಡನೆ, ಆತ್ಮೀಯರೊಡನೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಇಷ್ಟಪಡುತ್ತಾರೆ. ತಮ್ಮ ಮನಸ್ಸಿನ ಸಮಾಧಾನಕ್ಕಾಗಿ ಉಡುಗೊರೆಗಳನ್ನು ಕೊಟ್ಟು ಕಳಿಸುತ್ತಾರೆ.
ಅತಿಥಿಗಳಿಗೆ ಎಲ್ಲ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕೆಂಬ ಯೋಚನೆ ನಮಗೂ ಇದೆ. ಹಾಗೆ ಮಾಡದಿರುವದಕ್ಕೆ ಕಾರಣ ಬಡತನ ಅಲ್ಲ. ನಮ್ಮ ಜೀವನ ಕ್ರಮವೇ ಹಾಗೆ.
ಇನ್ನು ಅಮೆರಿಕಾದಲ್ಲಿ ಪ್ರತಿಯೊಂದು ಚಿಕ್ಕ ಹಳ್ಳಿಯೂ ಪಟ್ಟಣದ ಎಲ್ಲ ಸೌಲಭ್ಯಗಳನ್ನು ಹೊಂದಿರುತ್ತದೆ. ಉದಾ.: ಪೆಟ್ರೋಲ್ ಪಂಪ್‌ಗಳು, ಮಾಲ್‌ಗಳು, ಮೈಕಡೋರ್ನಾಲ್ಡ್, ವಿಜ್ಞಾ ಕಾರ್ನ‌್ರಗಳು, ವಿಶಾಲ ರಸ್ತೆಗಳು, ಸ್ವಚ್ಛವಾದ ರೆಸ್ಟ್ ರೂಮ್ ಗಳು ಹೀಗೆ ಎಲ್ಲ ಅನುಕೂಲತೆಗಳನ್ನು ಹೊಂದಿದೆ. ಒಂದು ನಾನು ಗಮನಿಸಿದ ವಿಷಯ ಎಂದರೆ ಅಲ್ಲಿಯ ಜನ ಯಾವಾಗಲೂ ನೋಡಿಲ್ಲ. ಎಲ್ಲೂ ನಮ್ಮ ಮನಸ್ಸಿಗೆ ನೋವಾಗುವಂಥ ದೃಶ್ಯವನ್ನು ನಾವು ನೋಡಿಲ್ಲ.
ಅಮೇರಿಕನ್ನರು ಮನುಷ್ಯನ ಜೀವಕ್ಕೆ ತುಂಬಾ ಬೆಲೆಕೊಡುತ್ತಾರೆ. ಯಾರೇ ಕಷ್ಟದಲ್ಲಿದ್ದರೂ ಸಹಾಯಹಸ್ತ ಚಾಚುತ್ತಾರೆ. ಯಾವಾಗಲೂ ನಗು ನಗುತ್ತಾ ಇರುತ್ತಾರೆ. ನಾವೇನಾದರೂ ತೊಂದರೆಯಲ್ಲಿದ್ದರೆ ಕೂಡಲೇ ನಮ್ಮ ಬಳಿ ಬಂದು. ಆರ್ ಯು ಓ.ಕೆ.? ಕೆನ್ ಆಯ್ ಹೆಲ್ ಯು? ಎಂದು ಕೇಳುತ್ತಾರೆ. ಅಪಘಾತವಾದರೆ ಕೂಡಲೇ ಪೊಲೀಸರು ಮತ್ತು ಫೈರ್ ಎಂಜಿನ್‌ನವರು ಬಂದು ಅವರನ್ನು ಆಸ್ಪತ್ರೆಗೆ ಸೇರಿಸುತ್ತಾರೆ.
ಆದರೆ ನಮ್ಮ ದೇಶದಲ್ಲಿ ಮನುಷ್ಯನ ಜೀವಕ್ಕೆ ಏನೂ ಕಿಮ್ಮತ್ತಿಲ್ಲ. ಕೇವಲ 50 ರೂಪಾಯಿಗಳಿಗಾಗಿ ಕೊಲೆ ನಡೆದದ್ದನ್ನು ನಾನು ಟಿ.ವಿ.ಯಲ್ಲಿ ನೋಡಿದ್ದೇನೆ. ಅಪಘಾತವಾಗಿ ಜನ ಸಾಯುತ್ತಾ ಬಿದ್ದರೂ ಕೆಲವರು ಅವರ ಮೈ ಮೇಲಿನ ಬಂಗಾರ ದುಡ್ಡು ಕದಿಯುತ್ತಾರೆ ಹೊರತು ಅವರನ್ನು ಉಳಿಸಲು ಪ್ರಯತ್ನಪಡುವುದಿಲ್ಲ. ಭಾರತದಲ್ಲಿ ಒಮ್ಮೆ ನನ್ನ ಮಗನ ಗೆಳೆಯನಿಗೆ ಮೋಟರ ಸೈಕಲ್ ಅಪಘಾತವಾಗಿ ಅವನು ಆರೆ ಪ್ರಜ್ಞಾವಸ್ಥೆಯಲ್ಲಿ ತುಮಕೂರ ಬಳಿಯಲ್ಲಿ ಬಿದ್ದಿದ್ದನಂತೆ. ಆಗ ಎರಡು ಜನ ಅವನ ಬಳಿ ಬಂದು ಅವನ ವಾಚು, ಚೈನ್ ಮತ್ತು ಅವನ ಜೇಬನ್ನು ತಡಕಾಡಿ ಜೇಬಿನಲ್ಲಿದ್ದ ಹಣ, ಅವನ ಮೊಬೈಲ್ ಕದ್ದು ಒಯ್ದರಂತೆ ಹೊರತು ಪೊಲೀಸರಿಗೆ ಫೋನ್ ಸಹ ಮಾಡಿಲ್ಲವಂತೆ. ಇದು ಇಂಡಿಯಾ! ಅಮೇರಿಕಾದಲ್ಲಿ ಒಮ್ಮೆ ನನ್ನ ಮಗ ಅವನ ಗೆಳೆಯನ ಜೊತೆ ನ್ಯೂ ಯಾರ್ಕಿಗೆ ಹೊರಟಿದ್ದಾಗ, ಬೆಳಿಗ್ಗೆ ಏನೂ ತಿನ್ನದೆ ಹೊರಟಿದ್ದರಿಂದ ಅವನಿಗೆ ವಾಂತಿ ಬಂದಂತೆ ಅನಿಸಿತಂತೆ. ಆದರೆ ಅಲ್ಲಿ ಇಲ್ಲಿಯ ಹಾಗೇ ಎಲ್ಲಿ ಬೇಕಾದಲ್ಲಿ ವಾಂತಿ ಮಾಡುವಂತಿಲ್ಲ. ಅದಕ್ಕಾಗಿ ಕಸದ ಡಬ್ಬಿ ಇದ್ದಲ್ಲಿಗೆ ಓಡುತ್ತಾ ಹೋಗುವಾಗ ತಲೆ ಸುತ್ತಿದಂತಾಗಿ ಬಿದ್ದು ಬಿಟ್ಟನಂತೆ. ಆಮೇಲೆ ತಾನೇ ಎದ್ದು ಹೋಗಿ ವಾಂತಿ ಮಾಡಿ ಬಂದನಂತೆ. ಇದನ್ನೆಲ್ಲ ನೋಡಿದ ಅವನ ಗೆಳೆಯ ಆಸ್ಪತ್ರೆಗೆ ಹೋಗುವಾ ಎಂದನಂತೆ. ಅದಕ್ಕೆ ನನ್ನ ಮಗ ಇಲ್ಲ ನಾನು ಆರಾಮ ಇದ್ದೇನೆ. ಬೇಡ ಎಂದನಂತೆ. ಅದಕ್ಕೆ ಅವನು ಇಲ್ಲ ನೀನು ಬಿದ್ದಾಗ ಜೋರಾಗಿ ಶಬ್ದ ಬಂತು. ಅದಕ್ಕೆ ರಿಸ್ಕ್ ಬೇಡ ಎಂದು ಹೇಳಿ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸಿ ಇಡೀ ರಾತ್ರಿ ಅವನ ಜೊತೆ ಇದ್ದು ಉಪಚರಿಸಿದನಂತೆ! ಮತ್ತು ಮಗನ ಗೆಳೆಯರಿಗೆ ಸಹ ವಿಷಯ ತಿಳಿಸಿದನಂತೆ. ಅವರೆಲ್ಲ ತುಂಬಾ ಕಾಳಜಿ ವಹಿಸಿದರಂತೆ. ಅದಕ್ಕೆ ನನ್ನ ಮಗ ಯಾವಾಗಲೂ ಹೇಳುತ್ತಾನೆ. ನೀವು ನನ್ನ ಬಗ್ಗೆ ಕಾಳಜಿ ಮಾಡುವುದು. ಬೇಡ ನನಗೆ ನಿಮ್ಮದೇ ಕಾಳಜಿಯಾಗುತ್ತದೆ. ಅದಕ್ಕೆ ಆರಾಮ ಆಗಿ ಇರಿ ಎಂದು ಪದೇ ಪದೇ ಹೇಳುತ್ತಿರುತ್ತಾನೆ. ಅವನಿಗೆ ಅಲ್ಲಿ ಅಮೇರಿಕಾದ ಒಳ್ಳೆಯ ಗೆಳೆಯರಿದ್ದಾರೆ. ನನಗಂತೂ ಇಲ್ಲಿ ದಿನ ಬೆಳಗಾದರೆ ಟಿ.ವಿ.ಯಲ್ಲಿ ನೋಡುವ ಕೊಲೆ ಸುಲಿಗೆ ವಂಚನೆ ಮೋಟರ್ ಸೈಕಲ್ ಅಪಘಾತ, ಯುವಕನ ಸಾವು ಇದೇ ವಿಷಯವನ್ನು ಕೇಳಿದರೆ ಮಗನು ಅಲ್ಲಿರುವುದೇ ಉತ್ತಮ ಎನಿಸುತ್ತದೆ. ಅವನು ಅಲ್ಲಿ ಖುಷಿಯಿಂದ ಇದ್ದಾನೆ. ಆಗಾಗ ನಮ್ಮನ್ನು ಮಾತ್ರ ಮಿಸ್ ಮಾಡಿಕೊಳ್ಳುತ್ತಾನಂತೆ.
ಇನ್ನು ಅಮೆರಿಕಾದ ಇಂದಿನ ಯುವಕರು ತಮಗೆ ಇಷ್ಟವಾದ ಹುಡುಗಿಯ ಜತೆ ವಾರದ ಕೊನೆಯಲ್ಲಿ ಡೇಟಿಂಗ್ ಹೋಗುತ್ತಾರೆ. ಕೆಲವರಂತೂ ತಾವು ಪ್ರೀತಿಸಿದ ಹುಡುಗಿಯ ಜತೆ ಒಂದೇ ಕೋಣೆಯಲ್ಲಿ ಇರುತ್ತಾರೆ. ಇದಕ್ಕೆ ಲಿವಿಂಗ್ ಟುಗೆದರ್ ಎನ್ನುತ್ತಾರೆ. ಇದು ಈಗೀಗ ಇಂಡಿಯಾದಲ್ಲೂ ಕೆಲವೆಡೆ ನಡೆಯುತ್ತಿದೆ. ಆ ಮಾತು ಬೇರೆ. ಹೀಗೆ ಯುವಕ ಯುವತಿಯರು ವರುಷಗಟ್ಟಲೇ ಒಂದೇ ಕಡೆ ಜೊತೆಯಾಗಿದ್ದು ಲಿವಿಂಗ್, ಡೇಟಿಂಗ್ ಮಾಡಿಕೊಂಡು ಇರುತ್ತಾರೆ. ಕೊನೆಯಲ್ಲಿ ಇಷ್ಟವಾದರೆ ಮದುವೆಯಾಗುತ್ತಾರೆ. ಏನಾದರೂ ಭಿನ್ನಮತ ಬಂದರೆ ಬೇರೆ ಬೇರೆಯಾಗುತ್ತಾರೆ. ಈ ಬಗ್ಗೆ ಅವರಿಗೆ ಯಾವುದೇ ಬೇಸರ ದುಃಖವಿರುವುದಿಲ್ಲ. ಮತ್ತೆ ಅವರಿಗೆ ಬೇರೆ ಜೊತೆಗಾರರು ಸಿಗುತ್ತಾರೆ. ಒಮ್ಮೊಮ್ಮೆ ಇಬ್ಬರು ಎರಡು ಮೂರು ವರ್ಷ ಜೊತೆಯಲ್ಲಿದ್ದು ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಆಮೇಲೆ ಮದುವೆಯಾಗಿ ಸುಖ ಸಂಸಾರ ಮಾಡಿದವರ ಉದಾಹರಣೆಗಳೂ ಉಂಟು.
ಅಮೆರಿಕೆಯ ಜನರು ಲಂಡನ್ ಜನರಿಗಿಂತ ಒಳ್ಳೆಯವರು. ನಮಗೇನಾದರೂ ಸಹಾಯ ಬೇಕಿದ್ದರೆ ಮುಕ್ತ ಮನಸ್ಸಿನಿಂದ ಸಹಾಯ ಮಾಡುತ್ತಾರೆ. ನನಗೆ ಈ ದೇಶದ ಮಾನವೀಯತೆ ಇಷ್ಟವಾಯಿತು. ವಯಸ್ಸಾದವರು, ವಿಕಲಾಂಗರು ವೀಲ್ ಚೇರ್‌ನಲ್ಲಿ ಕುಳಿತು ಬಸ್‌ನಲ್ಲಿ ಒಳಗೆ ಪ್ರವೇಶಿಸಲು ಅನುಕೂಲವಾಗುವಂತೆ ಪ್ರವೇಶ ದ್ವಾರದಲ್ಲಿ ಕಬ್ಬಿಣದ ನೆಲಹಾಸು ಕಲ್ಪಿಸಿರುವರು. ಪ್ರತಿಯೊಂದು ಕಾಲು ಹಾದಿಯಲ್ಲಿ ಅಂಥವರಿಗಾಗಿಯೇ ಯಾವ ತಡೆಯೂ ಇಲ್ಲದ ಹಾದಿ ನಿರ್ಮಿಸಿರುವರು. ವಿಲ್ ಚೇರ್‌ನಲ್ಲಿ ಬಂದವರು ಯಾರ ನೆರವನ್ನೂ ಪಡೆಯದೆ ತಾವೇ ಪ್ರವೇಶಿಸುವರು. ತಂದೆ ತಾಯಿಯರು ಪ್ರೇಮ್‌ನಲ್ಲಿ ಎಳೆಯ ಮಕ್ಕಳನ್ನು ಕೂರಿಸಿ ಬಸ್ಸಿನೊಳಗೆ ಅದನ್ನು ಎಳೆದು ತರುವರು.ಒಟ್ಟಿನಲ್ಲಿ ಹೇಳಬೇಕೆಂದರೆ ಎಲ್ಲರೂ ಅಮೇರಿಕಾವನ್ನು ಇಷ್ಟಪಡಲೇಬೇಕು ಎಂದಿಲ್ಲ. ಅವರವರಿಗೆ ಎಲ್ಲಿ ಸಂತೋಷ ಸುಖ ಸಿಗುತ್ತದೆಯೋ ಅಲ್ಲಿ ಇರಲು ಇಷ್ಟಪಡುತ್ತಾರೆ. ಅದು ಅವರವರ ಭಾವನೆಗಳಿಗೆ ಸಂಬಂಧಿಸಿದ್ದು, ಮುಂದೆ ಒಂದು ದಿನ ಅವರಿಗೆ ಸಮಯ ಸರಿದಂತೆ ಅವರ ಭಾವನೆ ಬದಲಾದಂತೆ ಅವರಿಗೆ ಭಾರತಕ್ಕೆ ವಾಪಸು ಬರಬೇಕೆಂದು ಅನಿಸಿದರೂ ತಪ್ಪಿಲ್ಲ.
ಅಮೆರಿಕಾದಲ್ಲಿ ಕಿರಿಕಿರಿಯಾದ ವಿಷಯ

ಅಲ್ಲಿ ನಮಗೆ ಕಿರಿಕಿರಿಯಾದ ವಿಷಯ ಎಂದರೆ ಸೆಕ್ಯೂರಿಟಿ ಚೆಕ್. ಏನಿಲ್ಲವೆಂದರೂ ನಾವು 10 ಸಲ ವಿಮಾನ ಏರಿದ್ದೆವು, ಇಳಿದಿದ್ದೆವು. ಪ್ರತಿ ಸಲವೂ ಸೆಕ್ಯೂರಿಟಿ ಚೆಕ್ ಮಾಡುವಾಗ ಎಲ್ಲ ಸಣ್ಣ ಬ್ಯಾಗ್‌ಗಳನ್ನು ಸ್ಕ್ಯಾನ್ ಮಾಡಿದರೆ ಪರವಾಗಿಲ್ಲ. ನಮ್ಮ
ಇಡೀ ಶರೀರವನ್ನು ಸ್ಕ್ಯಾನ್ ಮಾಡುತ್ತಿದ್ದರು. ಒಬ್ಬರು ನಮ್ಮನ್ನು ಬದಿಗೆ ಕರೆದುಕೊಂಡು ಹೋಗಿ ಈಡೀ ಮೈಯನ್ನು ಮುಟ್ಟಿ ಮುಟ್ಟಿ ತಪಾಸಣೆ ಮಾಡುತ್ತಿದ್ದರು. ಅಷ್ಟಕ್ಕೂ ಸಮಾಧಾನವಾಗದೇ ಕಾಲಿನ ಬೂಟು ಸಾಕ್ಸ್‌ಗಳನ್ನು ಸಹ ತೆಗೆಸುತ್ತಿದ್ದರು. ಇದು ನನಗೆ ತುಂಬಾ ಮುಜುಗರವನ್ನು ತರುತ್ತಿತ್ತು. ಸುರಕ್ಷತೆಯ ದೃಷ್ಟಿಯಿಂದ ಇದು ಒಂದು ರೀತಿಯಲ್ಲಿ ಸರಿ ಇರಬಹುದು. ಆದರೆ ಅವರಿಗೆ ನಾವು ಭಯೋತ್ಪಾದಕರಂತೆ ಕಾಣುತ್ತವೇನೋ, ಇದೇ ಬಿಗಿ ಭದ್ರತೆಯನ್ನು ಮೊದಲೇ ಸರಿಯಾಗಿ ಮಾಡಿದ್ದರೆ ಡಬ್ಲ್ಯೂಟಿ.ಯ ಮೇಲಿನ ದಾಳಿಯನ್ನು ತಪ್ಪಿಸಿ ಸಾವಿರಾರು ಜನರ ಪ್ರಾಣವನ್ನು ಉಳಿಸಬಹುದಿತ್ತು, ಅಲ್ಲಿ ಬಿಳಿಯರು ಮತ್ತು ಕರಿಯರಲ್ಲಿ ವರ್ಣಭೇದವಿದೆ. ಅದು ಅಲ್ಲಲ್ಲಿ ಕಂಡುಬರುತ್ತದೆ. ಆದರೆ ಲಂಡನ್‌ನಲ್ಲಿ ಬ್ರಿಟಿಷರು ನಮ್ಮನ್ನು ಅತೀ ಕೀಳಾಗಿ ಕಾಣುತ್ತಾರೆ ಎನಿಸುತ್ತದೆ. ಅವರು ನಮ್ಮನ್ನು ಮಾತು ಸಹ ಆಡಿಸುವುದಿಲ್ಲ. ಅಮೇರಿಕಾದಲ್ಲಾದರೆ ಮಾಲ್‌ಗಳಿಗೆ ಹೋದಾಗ ಕೌಂಟರ್‌ನಲ್ಲಿದ್ದರು. ‘ಹಾಯ್’ ಹೇಳಿ ‘ಹೌ ಆರ್ ಯು?’ ಎಂದು ಕೇಳುತ್ತಾರೆ. ವಾಪಸ್ಸು ಬರುವಾಗ “ಥ್ಯಾಂಕ್ ಯು, ಹೇವ್ ಎ ನೈಸ್ ಡೇ’ ಎನ್ನುತ್ತಾರೆ.
ಇನ್ನೊಂದು ವಿಷಯ ಎಂದರೆ ಇಲ್ಲಿಂದ ಹೋದವರಿಗೆ ಅಕಸ್ಮಾತ್ ಆರೋಗ್ಯದಲ್ಲಿ ಏನಾದರೂ ಏರುಪೇರಾದರೆ ಕೂಡಲೇ ಡಾಕ್ಟರ್ ಬಳಿ ಚಿಕಿತ್ಸೆ ಸಿಗುವುದಿಲ್ಲ. ಅದಕ್ಕಾಗಿ ಮೆಡಿಕಲ್ ಇನ್ಸುರೆನ್ಸ್ ಇರಬೇಕಾಗುತ್ತದೆ. ಅದೂ ಅಲ್ಲದೆ ಡಾಕ್ಟರ್ ಭೇಟಿ ಇಲ್ಲದೆ ಒಂದು ತಲೆ ನೋವಿನ ಯಾವ ಗುಳಿಗೆಯೂ ಸಿಗುವುದಿಲ್ಲ. ಅಲ್ಲಿಯವರಿಗೆ ಇರುವಷ್ಟು ಅನುಕೂಲಗಳು, ಸಹಾಯಗಳು ನೌಕರಿಯಲ್ಲಿ ಇರುವ ನಮ್ಮವರಿಗೆ ಸಿಗುವುದಿಲ್ಲ. ಕೆಲವೊಮ್ಮೆ ಮಧ್ಯವರ್ತಿಗಳು ಅದರ ಲಾಭವನ್ನು ಪಡೆಯುತ್ತಾರೆ.
ನಿಜ ಹೇಳಬೇಕೆಂದರೆ ನಮ್ಮ ದೇಶವು ಆದ್ಭುತವಾದ ದೇಶವೇ. ಇಲ್ಲಿ ಎಲ್ಲವೂ ಇದೆ. ಸಹಸ್ರಾರು ವರ್ಷಗಳ ಸಂಸ್ಕೃತಿ ಇತಿಹಾಸ ಪರಂಪರೆ ಇದೆ. ಹೇರಳವಾದ ನಿಸರ್ಗ ಸಂಪನ್ಮೂಲಗಳು ಇವೆ. ಮಾನವ ಸಂಪನ್ಮೂಲಗಳಿವೆ. ಆದರೂ ಭಾರತ ಪ್ರಗತಿಯಾಗಿಲ್ಲ ಯಾಕೆ? ಯಾಕೆಂದರೆ ಪರಿಣಾಮಕಾರಿ ನಾಯಕತ್ವದ ಕೊರತೆ ಮತ್ತು ಕೆಟ್ಟ ಆರ್ಥಿಕ ನೀತಿಗಳು, ಇಂದಿಗೂ ಭಾರತವನ್ನು ಬಡವರಿಂದ ಕೂಡಿದ ಶ್ರೀಮಂತ ದೇಶ ಎಂದು ಕರೆಯಲಾಗುತ್ತಿದೆ. ಭಾರತ ಶ್ರೀಮಂತವಾಗಿದೆ ಆದರೆ ಭಾರತೀಯರು ಮಾತ್ರ ಬಡವರು.
ಅಮೆರಿಕಾ ಚೆನ್ನಾಗಿದೆ. ಅದ್ಭುತ ಆಕರ್ಷಕ ಸುಂದರ ನಗರ. ಅವರಿಂದ ಕಲಿಯಬೇಕಾದ್ದು ತುಂಬಾ ಇದೆ. ಆದರೆ ಅಮೆರಿಕಾಕ್ಕೆ ಹೋಗುವ ಮತ್ತು ಬರುವ ದೀರ್ಘವಾದ ಪ್ರವಾಸ ಮಾತ್ರ ಬೇಸರ ತರಿಸುವಂಥದ್ದು.
By-ಶಾಲಿನಿ ಗಾಂವಕರ್
ಮುಂದಿನ ಭಾಗ ಓದಿ…
