ಅಧ್ಯಾಯ – 3
ಎರಡನೇ ಸಲ ಲಂಡನ್ ಪ್ರವಾಸ
ನಾವು ಅಮೇರಿಕಾದ ಚಿಕಾಗೋ ವಿಮಾನ ನಿಲ್ದಾಣದಿಂದ ಲಂಡನ್ ವಿಮಾನ ಏರಿದೆವು. ನಾವು ಬೆಳಿಗ್ಗೆ 9 ಗಂಟೆಗೆ ಹೊರಟಿದ್ದೆವು. ವಿಮಾನದಲ್ಲಿ ಬೆಳಗಿನ ತಿಂಡಿ ತಿಂದೆವು. 1 ಗಂಟೆ ಸುಮಾರಿಗೆ ಊಟ ಮಾಡಿ ಮಲಗಿದ್ದೆವು. ದಣಿವಾದ್ದರಿಂದ ಸ್ವಲ್ಪ ಹೊತ್ತಿಗೆ ನಿದ್ದೆ ಬಂತು. ಮೂರು ಗಂಟೆ ಸುಮಾರಿಗೆ ಎದ್ದು ನೋಡುತ್ತೇನೆ ಆಗಲೇ ಕತ್ತಲಾಗಿಬಿಟ್ಟಿತ್ತು. ಏಕೆಂದರೆ ಅಮೇರಿಕಾ ಮತ್ತು ಲಂಡನ್ ಸಮಯಕ್ಕೆ ಸುಮಾರು 6-7 ತಾಸಿನ ಅಂತರವಿತ್ತು ಅಷ್ಟರಲ್ಲಾಗಲೇ ಲಂಡನ್ ಹತ್ತಿರ ಬಂತೆಂದು ಅನೌನ್ಸ್ ಮಾಡುತ್ತಿದ್ದರು. ವಿಮಾನ ವಿಮಾನ ನಿಲ್ದಾಣದಲ್ಲಿ ಇಳಿಯಿತು. ನಾವು ಎಲ್ಲ ಫಾರ್ಮಾಲಿಟೀಸ್ ಮುಗಿಸಿ ಹೊರ ಬಂದಾಗ ಬಾಗಿಲಲ್ಲಿ ಮಗಳು ಅಳಿಯ ಕಾಯುತ್ತಿದ್ದರು. ಅವರನ್ನು ಕಂಡು ತುಂಬಾ ಸಂತೋಷವಾಯಿತು. ಕಾರಲ್ಲಿ ಅವರ ಮನೆಗೆ ಹೋಗಿ ಸಾಮಾನು ಸರಿಯಾಗಿದೆಯೋ ಎಂದು ನೋಡಿಕೊಂಡೆವು. ನಾನು `ಮಗಳಿಗೆ ಮತ್ತು ಅಳಿಯನಿಗೆ ತಂದ ಸಾಮಾನುಗಳನ್ನು ತೆಗೆದು ಕೊಟ್ಟೆ, ಅವರಿಗೆ ನಾನು ತಂದ ಎಲ್ಲ ಸಾಮಾನುಗಳು ಇಷ್ಟವಾದವು. ಎಲ್ಲರೂ ಊಟ ಮಾಡಿ ಮಲಗಲು ಹೊರಟೆವು. ಆದರೆ ಮಗಳಿಗೆ ಅಮೇರಿಕಾದಲ್ಲಿಯ ನಮ್ಮ ಅನುಭವಗಳನ್ನು ಕೇಳುವ ಕಾತುರ. ಹೀಗಾಗಿ ಅವಳು ನನಗೆ ಮಲಗಲು ಬಿಡಲಿಲ್ಲ. ನಾವಿಬ್ಬರೂ ಮಾತಾಡುತ್ತಾ ಕುಳಿತೆವು. ಸಮಯ ಹೋಗಿದ್ದೇ ಗೊತ್ತಾಗಲಿಲ್ಲ. ಆಗಲೇ ಬೆಳಗಿನ 4 ಗಂಟೆಯಾದಂಗಿತ್ತು.
ಮಾರನೆಯ ದಿನ ರವಿವಾರ ಆಗಿದ್ದರಿಂದ ನಮ್ಮವರೇ ಆದ ವಿನಯ ಪತಿ ನಮಗೆ ಊಟಕ್ಕೆ ಕರೆದಿದ್ದರು. ಅವರು ನಮ್ಮನ್ನು ಪ್ರೀತಿಯಿಂದ ನೋಡಿಕೊಂಡರು. ಅವರ ಮನೆ ಹಿತ್ತು ವಿಮಾನ ನಿಲ್ದಾಣದಿಂದ ತುಂಬಾ ಹತ್ತಿರವಿದೆ. ದೃತಿ ಇರುವುದು ಹಂಸಲಾದಲ್ಲಿ. ಅಲ್ಲಿ ಒಂದು ಇಂಡಿಯನ್ ಮಾರ್ಕೆಟ್ ಇದೆ. ಅಲ್ಲಿ ಇಂಡಿಯಾದಲ್ಲಿ ಸಿಗುವ ಎಲ್ಲ ತರಕಾರಿಗಳು ಸಿಗುತ್ತವೆ. ಬಾಳೆ ಎಲೆ, ನುಗ್ಗೆಸೊಪ್ಪು ಅರಶಿನದ ಎಲೆ ಸಹ ಸಿಗುತ್ತದೆ. ಅಂದು ಅಲ್ಲಿ ಶಾಪಿಂಗ್ ಮಾಡಿ ಮನೆಗೆ ಬಂದು ಚೆನ್ನಾಗಿ ನಿದ್ದೆ ಮಾಡಿದೆವು.
ಒಂದೇ ಸಮನೆ ತಿರುಗಾಟ ಹೆಚ್ಚಾಗಿ ನಾವಿಬ್ಬರೂ ತುಂಬಾ ಸುಸ್ತಾಗಿದ್ದೆವು. ಲಂಡನ್‌ನಲ್ಲಿ ಒಮ್ಮೆ ನಮ್ಮ ಅಳಿಯ ರಾಜೀವ ಮತ್ತು ವಿನಯ ಹಂಸಲಾಗೆ ಸಾಮಾನು ತರಲು ಹೋಗಿದ್ದರಂತೆ ಆಗ ಅವರಿಬ್ಬರೂ ನಮ್ಮ ಭಾಷೆಯಲ್ಲಿ ಮಾತಾಡುತ್ತಾ ನಿಂತಿದ್ದರಂತೆ ಆಗ ಒಬ್ಬಳು ಹುಡುಗಿ ಅಲ್ಲಿಗೆ ಬಂದು, ನೀವು ಅಂಕೋಲಾದವರೇನು? ಎಂದು ಕೇಳಿದಳಂತೆ. ಅದಕ್ಕೆ ಅವರು ‘ಹೌದು, ನಾವು ಅಂಕೋಲಾದವರೇ’ ಎಂದರಂತೆ ‘ನೀವು ನಾಡವರ ಭಾಷೆ ಮಾತಾಡ್ತಾ ಇದ್ದಿರಲ್ಲಾ ನೀವು ನಾಡವರೇನು?’ ಎಂದು ಕೇಳಿದಳಂತೆ, ಅವರು ‘ಹೌದು ನಾವು ನಾಡವರೇ’ ಎಂದರಂತೆ. ಇದನ್ನು ಕೇಳಿ ಅವಳಿಗೆ ತುಂಬಾ ಸಂತೋಷವಾಯಿತಂತೆ. ಏಕೆಂದರೆ ಅವಳು ಸಹ ಅಂಕೋಲಾ ನಾಡವರ ಹುಡುಗಿಯಾಗಿದ್ದಳು ಮತ್ತು ಅವಳು ಬೇರೆ ಜಾತಿಯ ಹುಡುಗನನ್ನು ಮದುವೆಯಾಗಿ ಲಂಡನ್‌ನಲ್ಲಿ ವಾಸವಾಗಿದ್ದಳು. ಕೂಡಲೇ ಅವಳು ತನ್ನ ಪರಿಚಯವನ್ನು ಹೇಳಿಕೊಂಡು ತನ್ನ ಗಂಡನನ್ನು ಕರೆದು ಇವರಿಗೆ ಪರಿಚಯ ಮಾಡಿಸಿದಳಂತೆ, ಅವಳಿಗೆ ಅಪರೂಪಕ್ಕೆ ತಮ್ಮ ಜನರನ್ನು ಅಲ್ಲಿ ಕಂಡು ತುಂಬಾ ಸಂತಸಪಟ್ಟಳಂತೆ. ನಂತರ ಹತ್ತಿರದಲ್ಲೇ ಇರುವ ಧೃತಿ-ವಿನಯ ಮನೆಗೆ ಬಂದು ಹೋದರಂತೆ. ಆಮೇಲೆ ಗೊತ್ತಾಯಿತು ಅವಳು ನಮಗೆ ತುಂಬಾ ಪರಿಚಯವಿರುವ ಸೂರ್ವೆಯ ಇಂದಿರಾಳ ಮಗಳು ಸುಶ್ಮಿತಾ ಎಂದು. ಹೀಗೆ ಭಾಷೆ, ನೆಲ, ಊರು ಒಬ್ಬರನ್ನೊಬ್ಬರನ್ನು ಕೂಡಿ ಬಾಳುವಂತೆ ಮಾಡುತ್ತದೆ.
ನಾನು ಒಂದು ದಿನ ಮಗಳ ಮನೆಯಲ್ಲಿ ನಮ್ಮ ಊರಿನ ಅಡಿಗೆಯನ್ನು ಮಾಡಿ ನಮ್ಮ ಜಾತಿಯ 3-4 ಫ್ಯಾಮಿಲಿಯನ್ನು ಊಟಕ್ಕೆ ಕರೆದಿದ್ದೆ. ಅವರು ಎಷ್ಟೋ ದಿನಗಳಾದ ಮೇಲೆ ಊರಿನ ಊಟ ಮಾಡಿ ಸಂತೋಷಪಟ್ಟರು. ನಾನು ಬಿಡುವಿನ ವೇಳೆಯಲ್ಲಿ ಮಗಳಿಗೆ ಬೇಕಾದಂಥ ತಿಂಡಿಗಳನ್ನು ಮತ್ತು ಶೇಂಗಾ ಚಟ್ನ, ಕೊಬ್ಬರಿ ಚಟ್ಟಿ ಎಲ್ಲ ಮಾಡಿ ಕೊಟ್ಟೆ.
ಇನ್ನು ಇಂಗ್ಲೆಂಡ್ ಬಗ್ಗೆ ಹೇಳಬೇಕೆಂದರೆ ಸ್ವಚ್ಛವಾದ ರಸ್ತೆಗಳು, ರಸ್ತೆಯ ಎರಡು ಬದಿಗೂ ಒಂದೇ ಮಾದರಿಯ ಮನೆಗಳು, ಮನೆಯ ಛಾವಣಿಯ ನಡುವೆ ಎದ್ದು ಕಾಣುವ ಹೊಗೆ ಚಿಮಣಿಗಳು, ಒಂದು ಕಾಲಕ್ಕೆ ಪ್ರತಿಯೊಂದು ಮನೆಯೊಳಗೂ ಬೆಂಕಿ ಗೂಡುಗಳು ಇರುತ್ತಿದ್ದ ಕಾರಣದಿಂದ ಅದರ ಹೊಗೆ ಹೊರಗೆ ಹೋಗುವದಕ್ಕೆ ಹೊಗೆ ಕೊಳವೆ ಚಿಮಣಿಗಳು ಅವಶ್ಯಕವಾಗಿದ್ದವು. ಆದರೆ ವಿದ್ಯುಚ್ಛಕ್ತಿಯು ಎಲ್ಲರಿಗೂ ಎಲ್ಲ ಕಾಲಕ್ಕೂ ಲಭ್ಯವಾಗಿರುವುದರಿಂದ ಮನೆಯನ್ನು ಬೆಚ್ಚಗಿಡಲು ಹೀಟರ್‌ಗಳನ್ನು ಅಳವಡಿಸಿರುವಾಗಲೂ ಬಹುತೇಕ ಮನೆಗಳು ಹಿಂದಿನ ನೆನಪನ್ನು ಸಂರಕ್ಷಿಸಿಕೊಂಡಂತೆ ಚಿಮಣಿಯ ಜುಟ್ಟು ಬಿಟ್ಟುಕೊಂಡಿರುವುದು ಕಾಣುತ್ತದೆ.
ರಾಣಿಯರ ಮನೆ

ನಾವು ಕಳೆದ ಸಲ ಲಂಡನ್‌ಗೆ ಬಂದಾಗ ಮಹಾರಾಣಿಯ ಆಫೀಶಿಯಲ್ ಅರಮನೆ ವಿಂಡರ್ಸ ಕೆಸಲ್ ನೋಡಿರಲಿಲ್ಲ ಮತ್ತು ಲಂಡನ್ ಟವರ್ ಅನ್ನು ನೋಡಿರಲಿಲ್ಲ. ಮಗಳು ಎಲ್ಲವನ್ನೂ ಒಂದೇ ಸಲ ನೋಡಿ ಮುಗಿಸಬೇಡಿ ಮುಂದಿನ ಸಲ ಬಂದಾಗ
ನೋಡುವಿರಂತೆ ಎಂದು ಹೇಳಿದ್ದಳು. ಅದಕ್ಕೆ ಈಗ ಸಮಯ ಕೂಡಿ ಬಂದಿತು
. ಒಂದು ರವಿವಾರ ನಾವಿಬ್ಬರೂ ವಿಂಡಸರ್ ಅರಮನೆ ನೋಡಲು ಹೊರಟೆವು.
ಅಳಿಯ ರಾಜೀವ ಕಾರಲ್ಲಿ ನಮ್ಮನ್ನು ಅರಮನೆಯ ಹತ್ತಿರ ಬಿಟ್ಟನು. ನಾವಿಬ್ಬರೂ ಟಿಕೇಟ್ ಪಡೆದು ಒಳಗೆ ಹೋದೆವು. ಅಲ್ಲಿಯೇ ಒಬ್ಬಳು ಹುಡುಗಿ ಮಹಾರಾಣಿಯಂತೆ ಡ್ರೆಸ್ ಮಾಡಿಕೊಂಡು ನಿಂತಿದ್ದಳು. ಅವಳು ತುಂಬಾ ಸುಂದರವಾಗಿ ಕಾಣುತ್ತಿದ್ದಳು. ಅವಳ ಜೊತೆ ಫೋಟೊ ತೆಗೆಸಿಕೊಳ್ಳಬೇಕಾದರೆ 1 ಪೌಂಡ್ ಹಣ ನೀಡಬೇಕೆಂತೆ. ಕೆಲವರಂತೂ ಹುಚ್ಚರಂತೆ ದುಡ್ಡು ಕೊಟ್ಟು ಫೋಟೊ ತೆಗೆಸಿಕೊಳ್ಳುತ್ತಿದ್ದರು. ಅದನ್ನು ನೋಡಿ ನನಗೆ ಮಜಾ ಎನಿಸಿತು. ಹಾಗೇ ಮುಂದೆ ಅರಮನೆ ನೋಡಲು, ಹೊರಟೆವು.
ನಾನು ಇಂಡಿಯಾದಲ್ಲಿ ತುಂಬಾ ಅರಮನೆಗಳನ್ನು ನೋಡಿದ್ದೆ. ಅದೇ ರೀತಿ ಸ್ಕಾಟ್‌ಲೆಂಡಿನಲ್ಲಿಯ ಎಡಿನ್ ಬರಾ ಅರಮನೆ ನೋಡಿದ್ದೆ. ಆದರೆ ಇದು ಇದೆಲ್ಲಕ್ಕಿಂತ ಮೀರಿ ನಿಂತಿದೆ. ಮೊದಲು ನಾವು ರಾಣಿಯ ಡೊಲ್ ಹೌಸ್ (ಗೊಂಬೆಗಳ ಮನೆ) ಇಲ್ಲಿಂದ ಶುರು ಮಾಡಿದೆವು. ಒಂದು ಕೋಣೆಯಲ್ಲಿ ಗ್ಲಾಸಿನ ಕಪಾಟಿನಲ್ಲಿ ರಾಣಿಯರು ಚಿಕ್ಕಂದಿನಲ್ಲಿ ಆಟ ಆಡಿದ ಗೊಂಬೆಗಳು, ಚಿಕ್ಕ ಚಿಕ್ಕ ಹಾಸಿಗೆಯಿಂದ ಹಿಡಿದು ಡೈನಿಂಗ್ ಟೇಬಲ್ ಎಲ್ಲ ಅಡಿಗೆ ಪಾತ್ರೆ, ಊಟದ ತಾಟು, ಪುಟ್ಟ ಪುಟ್ಟ ಖುರ್ಚಿ, ಟೇಬಲ್ ಎಲ್ಲ ಒಂದು ರೂಮಿನಲ್ಲಿ ಇದ್ದರೆ ಇನ್ನೊಂದು ರೂಮಿನಲ್ಲಿ ಬೆಡ್ರೂಮ್‌ನಲ್ಲಿ ಉಪಯೋಗಿಸುವ ಪುಟ್ಟ ಪುಟ್ಟ ಹಾಸಿಗೆ ಮಂಚ, ದಿಂಬು, ಹೊದಿಕೆ ಎಲ್ಲ ಇದ್ದವು.
ಅದೇ ರೀತಿ ಪುಟ್ಟ ಪುಟ್ಟ ಮನೆಗಳು ಅದರಲ್ಲಿ ಪುಟ್ಟ ಅಡಿಗೆ ಮನೆ, ಡೈನಿಂಗ್ ಹಾಲ್, ಬೆಡ್ ರೂಮ್, ಸಣ್ಣ ಕೈತೋಟ, ಕೆಲಸದವರ ಕೋಣೆ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ನೋಡುತ್ತಾ ಇದ್ದರೆ ಮುಂದೆ ಹೆಜ್ಜೆ ಹಾಕಲು ಮನಸ್ಸಾಗುತ್ತಿರಲಿಲ್ಲ.
ಹಾಗೆ ಮುಂದೆ ಹೋದರೆ ಒಂದು ವಿಶಾಲವಾದ ಕೋಣೆಯಲ್ಲಿ ಈಗಿನ ಮಹಾರಾಣಿಯ ಚಿಕ್ಕ ಮಗುವಿನಿಂದ ಹಿಡಿದು ದೊಡ್ಡವಳಾಗಿ ಮದುವೆಯಾಗಿ ಅವಳು ಮಹಾರಾಣಿಯಾಗುವವರೆಗಿನ ಮತ್ತು ಅವಳು ಅಧಿಕಾರ ಸ್ವೀಕರಿಸುವ ನಾನಾ ರೀತಿಯ ಫೋಟೊಗಳು ಮತ್ತು ರಾಜ ಪರಿವಾರದವರ ಫೋಟೊಗಳು ಮತ್ತು ಮಹಾರಾಣಿಯು ಬೇರೆ ಬೇರೆ ದೇಶಗಳಿಗೆ ಭೇಟಿ ಇತ್ತಾಗ ಆ ದೇಶದ ರಾಜರು ಪ್ರಧಾನ ಮಂತ್ರಿಗಳು ಅಧ್ಯಕ್ಷರ ಜೊತೆ ತೆಗೆಸಿಕೊಂಡ ಫೋಟೊಗಳು, ರಾಣಿಯು ಕುದುರೆ ಸವಾರಿ ಮಾಡುವುದು ಮತ್ತು ಅವಳು ಮಹಾರಾಜನ ಜೊತೆ ರಾಜ ಪರಿವಾರದವರ ಜೊತೆ ತೆಗೆದ ಫೋಟೊ ಮತ್ತು ಅರಮನೆಯ ವಿಶೇಷ ಸಮಾರಂಭಗಳಲ್ಲಿ ತೆಗೆದ ಫೋಟೊಗಳಿವೆ.

ರಾಣಿಯು ಸಣ್ಣ ವಯಸ್ಸಿನಲ್ಲಿ ಮತ್ತು ಪ್ರಾಯದಲ್ಲಿ ತುಂಬಾ ಸುಂದರವಾಗಿ ಕಾಣುತ್ತಾಳೆ. ಮುಂದಿನ ಕೋಣೆಯಲ್ಲಿ ಗಾಜಿನ ಸಾಮಾನುಗಳನ್ನು ಇಟ್ಟಿದ್ದಾರೆ. ಸುಮಾರು ಕ್ರಿ.ಶ. 1600ರಿಂದ ಅಂದರೆ ಒಂದನೇ ಹೆನ್ರಿಯ ಕಾಲದಿಂದ ಹಿಡಿದು ಇಂದಿನ ಮಹಾರಾಣಿಯ ಕಾಲದವರೆಗೆ ಅವರು ಉಪಯೋಗಿಸಿದ ಊಟ ಮಾಡಿದ ಪಿಂಗಾಣಿ ಪ್ಲೇಟುಗಳು, ತಿಂಡಿ ತಿನ್ನುವ, ಜ್ಯೂಸ್ ಕುಡಿವ ಗ್ಲಾಸುಗಳು, ಟೀ ಕುಡಿವ ಕಪ್ ಸಾಸರಗಳು ಸಾವಿರ ಸಂಖ್ಯೆಯಲ್ಲಿ ಇವೆ. ಆ ಸುಂದರ ಗಾಜಿನ ಪ್ಲೇಟು ಲೋಟಗಳ ಮೇಲೆ ಬಿಡಿಸಿದ ಸುಂದರ ಕೆತ್ತನೆಯ ಕುಸುರಿ ಕೆಲಸವಂತೂ ಅಮೋಘವಾಗಿದೆ. ಅವುಗಳನ್ನು ನೋಡಿದಷ್ಟು ಮತ್ತು ನೋಡಬೇಕೆನಿಸುತ್ತಿದೆ. ಅದು ಎಷ್ಟು ದೊಡ್ಡದಿವೆ ಎಂದರೆ ನಮ್ಮಲ್ಲಿಯ ಮೂರು Bedroom ಮನೆಗಿಂತ ದೊಡ್ಡದಾದ ಹಾಲ್.
ಮುಂದೆ ರಾಣಿಯರ ಡೈನಿಂಗ್ ರೂಮ್ ನೋಡಲು ಹೋದೆವು. ಅವರು ಉಪಯೋಗಿಸುವ ಡೈನಿಂಗ್ ಟೇಬಲ್ ಎಷ್ಟು ದೊಡ್ಡದಿದೆ ಎಂದರೆ ಒಂದೇ ಸಲ ಸುಮಾರು 50 ರಿಂದ 60 ಜನ ಒಟ್ಟಿಗೆ ಕೂತು ಊಟ ಮಾಡಬಹುದು. ಅಷ್ಟು ದೊಡ್ಡ ಡೈನಿಂಗ್ ಟೇಬಲ್‌ಗಳು ಮತ್ತು ಖುರ್ಚಿಗಳು ಅವುಗಳ ಕೊನೆಯನ್ನು ಬಂಗಾರದ ಹಿಡಿಕೆಯಿಂದ ಸಿಂಗರಿಸಲಾಗಿದೆ. ಮುಂದೆ ಹೋದರೆ ಉದ್ದವಾದ ಮೊಗಸಾಲೆಗಳು ಹಾಗೂ ಕೋಣೆಗಳು ರಾಜೋಚಿತವಾದ ಪೀಠೋಪಕರಣಗಳಿಂದ ಆಕರ್ಷಿತವಾಗಿದೆ. ರಾಣಿಯ ಚಿತ್ರಶಾಲೆ (ಕ್ವಿನ್ಸ್ ಗೆಲರಿ) ಎಂಬ ಒಂದು ಕೋಣೆಯಲ್ಲಂತೂ ಕಳೆದ ನಾಲ್ಕು ಶತಮಾನಗಳ ಕಾಲಮಾನದಲ್ಲಿ ಅಂದಂದಿನ ರಾಜರು ಸಂಗ್ರಹಿಸಿದ ವರ್ಣಚಿತ್ರಗಳಿವೆ. ಉದ್ದಕ್ಕೂ ಅನೇಕ ಅಮೃತಶಿಲೆಯ ವಿಗ್ರಹಗಳು ಇಂಗ್ಲೆಂಡಿನ ರಾಜ ಮನೆತನಗಳ ಚರಿತ್ರೆಗೆ ಸಂಬಂಧಿಸಿದ ವರ್ಣಚಿತ್ರಗಳಿವೆ. ಗೋಡೆಯ ತುಂಬಾ ಅಂದಿನ ರಾಜ ರಾಣಿಯರ ಚಿತ್ರ ಪಟಗಳನ್ನು ತೂಗು ಹಾಕಲಾಗಿತ್ತು.
ಇನ್ನು ಡ್ರೆಸ್ಸಿಂಗ್ ರೂಮ್. ಬೇರೆ ಬೇರೆ ದೇಶಗಳಿಂದ ತಂದಿರುವ ಆಳೆತ್ತರದ ಮತ್ತು ಅಗಲವಾದ ದೊಡ್ಡ ದೊಡ್ಡ ಸುಂದರವಾದ ಕನ್ನಡಿಗಳು, ವಿಶಾಲವಾದ ಕಪಾಟಿನಲ್ಲಿ ಜೋಡಿಸಿರುವ ಸುಂದರವಾದ ಅಮೂಲ್ಯವಾದ ವಿವಿಧ ರೀತಿಯ ಬಟ್ಟೆಗಳನ್ನು ಜೋಡಿಸಿಡಲಾಗಿತ್ತು ಮತ್ತು ಕೆಲವು ಬಟ್ಟೆ ಮೇಲೆ ಮುತ್ತು ರತ್ನಗಳಿಂದ ಕಸೂತಿ ಕುಸುರಿ ಕೆಲಸ ಮಾಡಲಾಗಿತ್ತು. ರಾಜಕುಮಾರಿಯರು ಚಿಕ್ಕವರಿರುವಾಗ ಧರಿಸಿದ ಬಟ್ಟೆಗಳು ಪ್ರಾಯದಲ್ಲಿ ಧರಿಸಿದ ಬಟ್ಟೆಗಳು, ಅಲ್ಲದೇ ಅವರು ರಾತ್ರಿಯಲ್ಲಿ ತೊಡುವ ಬಟ್ಟೆಗಳು ಮತ್ತು ಈಜು ಉಡುಗೆಗಳು ಸಹ ಅಲ್ಲಿದ್ದವು.
ಹಾಗೆ ಮುಂದೆ ಹೋದರೆ ಇಂಗ್ಲೆಂಡಿನ ರಾಜ-ರಾಣಿಯರು ಮಲಗುವ ಕೋಣೆ. ಒಳ್ಳೆಯ ಕಟ್ಟಿಗೆಯಿಂದ ಮಾಡಿದ ರತ್ನ ಖಚಿತವಾದ ಮಂಚಗಳು, ಅದರ ಮೇಲಿರುವ
ಮೆತ್ತನೆ ಹಾಸಿಗೆಗಳು, ಕೋಣೆಯಲ್ಲಿರುವ ಸುಂದರವಾದ ಬೆಡ್ ಲ್ಯಾಂಪ್‌ಗಳು, ಮೇಲುಗಡೆ ತೂಗು ಹಾಕಿರುವ ದೊಡ್ಡದಾದ ಹಾಸಿಗೆ ಮೇಲೆ ಹಾಸಿದ ವೆಲ್‌ವೆಟ್ಟಿನ ಮೆತ್ತನೆಯ ದೇವಲೋಕದ ಅಂತಃಪುರದ ವೈಭವವೇನೊ ಎನ್ನುವಂತೆ ಭಾಸವಾಗುತ್ತಿತ್ತು. ಎಷ್ಟು ಹಾಸು ಹೊದಿಕೆಗಳು ಮತ್ತು ದಿಂಬುಗಳು ಇವುಗಳನ್ನು ನೋಡುತ್ತಿದ್ದರೆ ಇದು ನೋಡಿದರೂ ಮತ್ತಷ್ಟು ನೋಡಬೇಕೆನಿಸುತ್ತಿತ್ತು. ಛಾವಣಿಯ ತುಂಬಾ ವಿವಿಧ ರೀತಿಯ ರೇಖಾ ವಿನ್ಯಾಸಗಳು ಅದ್ಭುತವಾಗಿದೆ. ಪಕ್ಕದಲ್ಲಿಯ ಕನ್ನಡಿಯಲ್ಲಿ ಮೇಲ್ಬಾವಣಿಯ ಸುಂದರ ಕಲೆಗಳು ಪ್ರತಿಬಿಂಬಿಸುತ್ತವೆ.
ಇನ್ನು ರಾಣಿಯ ದರ್ಬಾರ ಹಾಲ್ ಇದನ್ನಂತೂ ಕೇಳುವುದೇ ಬೇಡ, ಇಡೀ ದೊಡ್ಡದಾದ ವಿಶಾಲವಾದ ಸಭಾಭವನ ಸಾವಿರಕ್ಕಿಂತ ಹೆಚ್ಚು ಜನ ಹಿಡಿಯಬಹುದಾದ ಆತೀ ದೊಡ್ಡ ಹಾಲ್ ಅದು, ಅದರಲ್ಲಿ ಅರಮನೆಯ ಕುಟುಂಬದವರು ಕುಳಿತುಕೊಳ್ಳುವ, ಮಂತ್ರಿಗಳು ಸಭಾಸದರು ಕುಳಿತುಕೊಳ್ಳಲು ಪ್ರತ್ಯೇಕ ವ್ಯವಸ್ಥೆ ಇತ್ತಂತೆ. ಇಲ್ಲಿ ರಾಣಿ ತನ್ನ ಆಡಳಿತ ವರ್ಗ ಮತ್ತು ಮಂತ್ರಿಗಳ ಜೊತೆ ಕುಳಿತು ಸಮಾಲೋಚನೆ ನಡೆಸುತ್ತಿದ್ದಳಂತೆ, ಕೆಲವೊಮ್ಮೆ ರಾಣಿಯು ದರ್ಬಾರ ನಡೆಸುವಾಗ ರಾಣಿಯ ಪರಿವಾರ ಸಹ ಉಪಸ್ಥಿತವಿರುತ್ತಂತೆ, ಅಲ್ಲಿ ಸಾವಿರಾರು ಸಂಖ್ಯೆಯಲ್ಲಿ ಖುರ್ಚಿ ಮತ್ತು ಸೋಫಾಗಳನ್ನು ಜೋಡಿಸಿಡಲಾಗುವುದು, ಗೋಡೆಯ ಮೇಲೆ ಸುಂದರವಾದ ಚಿತ್ರಪಟಗಳನ್ನು, ವರ್ಣಚಿತ್ರಗಳು ಹಾಗೇ ಹಿಂದಿನ ರಾಜರ ಚಿತ್ರಗಳನ್ನು ಹಾಕಿದ್ದಾರೆ.
ಇನ್ನೊಂದು ಕೋಣೆಯಲ್ಲಿ ರಾಣಿಯು ವಿದೇಶಗಳಿಗೆ ಹೋದಾಗ ಕೊಟ್ಟ ಉಡುಗೊರೆಗಳ ರಾಶಿಯೇ ಇದೆ. ಅವು ತುಂಬಾ ಬೆಲೆ ಬಾಳುವಂತಹವು ಮತ್ತು ಅವು ನೋಡಲು ಒಂದಕ್ಕಿಂತ ಇನ್ನೊಂದು ಸುಂದರವಾಗಿವೆ.

ಹಾಗೆ ಮುಂದೆ ಹೋದರೆ ವಿಶಾಲವಾದ ಶಸ್ತ್ರಾಸ್ತ್ರಗಳನ್ನು ಇಟ್ಟ ಕೋಣೆ ಇದೆ. ಅವರು ಯುದ್ಧಗಳಲ್ಲಿ ಉಪಯೋಗಿಸಿದ ರೈಫಲ್ಲು, ತೋಪುಗಳ ರಾಶಿಯೇ ಇದೆ. ಅವು ಎಷ್ಟಿವೆ? ಎಂದು ಲೆಕ್ಕ ಮಾಡಲು ಸಾಧ್ಯವಿಲ್ಲ. ಸೈನಿಕರು ಉಪಯೋಗಿಸುವ ಶಿರಸ್ತ್ರಾಣಗಳು, ಎದೆಕವಚಗಳು ಇವುಗಳ ರಾಶಿಯೇ ಇದೆ. ಸೈನಿಕರು ಯುದ್ಧದಲ್ಲಿ ಬಳಸುವ ತಲೆಯಿಂದ ಹಿಡಿದು ಕಾಲಿನವರೆಗೂ ಮುಚ್ಚುವ ಕಬ್ಬಿಣದ ಕವಚಗಳಿವೆ. ಬಹಳ ವರ್ಷಗಳ ಹಿಂದೆಯೇ ಅವರ ಬಳಿ ಇಷ್ಟು ಅದ್ಭುತವಾದ ಗುಣಮಟ್ಟದ ಚಾಕು, ಚೂರಿ, ಕತ್ತಿ, ತೋಪು ಬಂದೂಕುಗಳು ಇದ್ದರಿಂದ ಅವರಿಗೆ ಯುದ್ಧದಲ್ಲಿ ಜಯಗಳಿಸಲು ಸುಲಭವಾಗಿರಬೇಕು. ಜೊತೆಯಲ್ಲಿ ಒಡೆದು ಅಳುವ ಬುದ್ದಿಯು ಸೇರಿರಬೇಕು. ನಮ್ಮ ದೇಶದ ಸೈನಿಕರ ಬಳಿ ಇದೆಲ್ಲ ಎಲ್ಲಿಂದ ಬರಬೇಕು? ಸರಿಯಾದ ಯುದ್ಧೋಪಕರಣಗಳು ಇರಲಿಲ್ಲ. ರಾಜರಲ್ಲಿ, ಜನರಲ್ಲಿ ಸರಿಯಾದ ಒಗ್ಗಟ್ಟು ಇರಲಿಲ್ಲ. ಹೀಗಾಗಿ ನಮ್ಮವರಿಗೆ ಅವರನ್ನು ಎದುರಿಸಲು ಕಷ್ಟವಾಗಿರಬೇಕು ಎಂದು ನನಗನಿಸಿತು.
ಅರಮನೆಯಲ್ಲಿ ಬಹಳ ಕಡೆ ‘ಕ್ಲೀನ್ ಲಾಂಗ ಲೀವ್’ ಎಂಬ ಫಲಕಗಳು ಕಾಣ ಸಿಗುತ್ತದೆ. ಇಂಗ್ಲೀಷರಿಗೆ ರಾಣಿ ಎಂದರೆ ಪತ್ರಕ ದೇವರು. ಒಂದು ವಿಶೇಷದ ಸಂಗತಿಯೆಂದರೆ ಇಂಗ್ಲೆಂಡಿನ ಜನ ರಾಜಸತ್ತೆಯನ್ನು ಪ್ರಜಾಪ್ರಭುತ್ವವನ್ನು ಒಂದು ರೀತಿಯಲ್ಲಿ ಒಟ್ಟಿಗೆ ಉಳಿಸಿಕೊಂಡವರು. ಪ್ರಜಾಪ್ರಭುತ್ವಕ್ಕೆ ‘ರಾಜತ್ವಕ್ಕೆ ವಿರಸವೋ ಸಂಘರ್ಷವೋ ಉಂಟಾದ ಸಮಯದಲ್ಲಿ ರಾಜರನ್ನೇ ಸಿಂಹಾಸನ ಚ್ಯುತಗೊಳಿಸಿದ ಹಾಗೂ ರಾಜನ ಶಿರಚ್ಛೇದನವನ್ನೇ ಮಾಡಿದ ನಿದರ್ಶನಗಳು ಇಂಗ್ಲೆಂಡಿನ ಚರಿತ್ರೆಯಲ್ಲಿವೆ. ಎಷ್ಟೋ ಅನುಮಾನಾಸ್ಪದವಾಗಿ ಕೊಲೆಮಾಡಿ ಹೊರಗೆ ಬಾರದೇ ಮುಚ್ಚಿಹೋರ ಇತಿಹಾಸವು ಇಲ್ಲಿದೆ.
ಹಾಗೇ ಇನ್ನೊಂದು ಕೋಣೆಯಲ್ಲಿ ರಾಣಿ ತನ್ನ ಗಂಡ ಡ್ಯೂಕ್ ಆಫ್ ಎಡಿನ ಬರೊ ಜೊತೆಯಲ್ಲಿದ್ದ ಅನೇಕ ಪೋಟೊಗಳಿವೆ. ಕೆಲವು ಕಡೆ ರಾಣಿ ತನ್ನ ಅರಮನೆಯ ಪರಿವಾರದವರ ಜೊತೆ ಇದ್ದ ಫೋಟೊಗಳು ಈಗಿನ ರಾಣಿ ತನ್ನ ಗಂಡುಮಕ್ಕಳು ಮತ್ತು ಸೊಸೆಯಂದಿರು ಮೊಮ್ಮಕ್ಕಳ ಜೊತೆಗಿದ್ದ ಅನೇಕ ಫೋಟೊಗಳಿವೆ. ಇಷ್ಟೆಲ್ಲ ನೋಡುತ್ತ ನೋಡುತ್ತ ನನ್ನ ಕಾಲು ತುಂಬಾ ನೋಯತೊಡಗಿತು. ಇನ್ನೂ ಮೇಲಿನ ಮಾಳಿಗೆಯಲ್ಲಿ ನೋಡುವುದು ತುಂಬಾ ಇತ್ತು. ಸಮಯವು ತುಂಬಾ ಆಗಿಹೋಗಿತ್ತು. ಹೀಗಾಗಿ ನಾವು ಮತ್ತೆ ಮುಂದೆ ಹೋಗದೆ ಕೆಳಗಿಳಿದು ಬಂದೆವು. ಅಲ್ಲೇ ಅರಮನೆಯ ಆವರಣದಲ್ಲಿರುವ ಸುಂದರ ತೋಟವನ್ನು ನೋಡಿಕೊಂಡು ಅರಮನೆಯ ಸುತ್ತ ಒಂದು ಸುತ್ತು ಹಾಕಿ ಅರಮನೆಯ ಆವರಣದಿಂದ ಹೊರಗೆ ಬಂದೆವು. ಅಷ್ಟರಲ್ಲಿ ಅಳಿಯ ಬಂದ. ಇಂಗ್ಲೆಂಡಿನಲ್ಲಿ ಎಲ್ಲಿ ಹೋದರೂ ಈ ದೇಶದ ರಾಜ ಮನೆತನ ಹಾಗೂ ರಾಜ ರಾಣಿಯರ ಹೆಸರನ್ನು ಹೊತ್ತ ಬೀದಿಗಳು, ಚೌಕಗಳು, ಮಾರುಕಟ್ಟೆಗಳು, ಮತ್ತಿತರ ಸ್ಮಾರಕಗಳು ಕಣ್ಣಿಗೆ ಕಾಣುತ್ತವೆ. ಈಗಲೂ ರಾಜ ಮನೆತನದವರಿಗೆ ಪ್ರತ್ಯೇಕವಾದ ಶಾಲೆ, ಕಾಲೇಜುಗಳಿವೆ, ಆಸ್ಪತ್ರೆಗಳಿವೆ.
ಇನ್ನೊಂದು ರವಿವಾರ ಲಂಡನ್ ನಗರಕ್ಕೆ ಟ್ರೇನಿನಲ್ಲಿ ಹೋಗುವುದೆಂದು ನಿರ್ಧರಿಸಿ ಮಗಳು ಅಳಿಯನ ಜೊತೆ ಟ್ಯೂಬ್ ಟ್ರೈನ್‌ನಲ್ಲಿ ಹೊರಟೆವು. ಅಲ್ಲಿ ಟ್ಯೂಬ್ ಟ್ರೈನ್‌ನಲ್ಲಿ ಪ್ರಯಾಣಿಸುವುದೇ ಒಂದು ಸುಂದರ ಅನುಭವ, ರೈಲು ಕೆಲವೇ ಕೆಲವು ನಿಮಿಷಗಳಲ್ಲಿ ಸುರಂಗದ ಕತ್ತಲನ್ನೂ ಸೀಳಿಕೊಂಡು ನಾವು ನಿಂತ ನಿಲುಗಡೆಯ ಬೆಳಕಿನ ವರ್ತುಲದೊಳಗೆ ಮತ್ತೊಂದು ರೈಲು ಧಾವಿಸಿ ಬಂದು ದಡ್ ಎಂದು ನಿಲ್ಲುತ್ತದೆ. ರೈಲಿನ ಗಾಜು – ಬಾಗಿಲುಗಳು ತನ್ನಿಂದ ತಾನೇ ತಾವಾಗಿಯೇ ತೆರೆದುಕೊಳ್ಳುತ್ತವೆ.
ಇಳಿಯುವವರು ಚಕಚಕನೇ ಇಳಿಯುತ್ತಾರೆ. ಹತ್ತುವವರು ಸರಸರನೆ ಒಳಗೆ ಪ್ರವೇಶಿಸುತ್ತಾರೆ. ಕೇವಲ ಒಂದೆರಡು ನಿಮಿಷಗಳಲ್ಲಿ ಸ್ವಯಂಚಾಲಿತ ಬಾಗಿಲುಗಳು ತಾವಾಗಿಯೇ ಮುಚ್ಚಿಕೊಳ್ಳುತ್ತವೆ. ಸುರಂಗ ರೈಲು ಮತ್ತೆ ದಡದಡನೆ ಮರೆಯಾಗುತ್ತದೆ. ರೈಲಿನಿಂದ ಇಳಿದ ಕೆಲವು ಪ್ರಯಾಣಿಕರು ಅಲ್ಲೇ ಇರುವ ಎಸ್ಕಲೇಟರ್‌ಗಳ ಮೇಲೆ ನಿಂತು ಏರಿ ಹೋಗುತ್ತಾರೆ. ಹಾಗೆಯೇ ಕೆಳಕ್ಕೆ ಬರುವ ಪ್ರಯಾಣಿಕರು ಎಸ್ಕಲೇಟರ್ ಮೇಲೆ ನಿಂತು ಕೆಳಗೆ ಇಳಿದು ಬರುತ್ತಾರೆ. ಹೀಗೆ ಹಗಲು ರಾತ್ರಿಯೂ ಸಂಚರಿಸುವ
ರೈಲುಗಳು ಏರಿಳಿಯುವ ಎಸ್ಕಲೇಟರ್‌ಗಳು ಒಂದೇ ಸಮನೆ ಚಲನಶೀಲವಾಗಿರುತ್ತವೆ. ಇದು ಈ ನಗರದ ನರನಾಡಿಗಳಂತೆ ಉದ್ದಕ್ಕೂ ವ್ಯಾಪಿಸಿದ ಈ ಸುರಂಗ ರೈಲು ಮಾರ್ಗಗಳ ಮೇಲೆ ಅವ್ಯಾಹತವಾಗಿ ನಡೆಯುತ್ತದೆ ಜನಸಂಚಾರ, ಇಂಗ್ಲೆಂಡಿನ ರಾಜ ಮನೆತನಕ್ಕೆ ಸಂಬಂಧಿಸಿದ ಅತ್ಯಂತ ಮುಖ್ಯವಾದ ಸ್ಮಾರಕವೊಂದು ಲಂಡನ್ ನಗರದಲ್ಲಿದೆ.ಅದೇ ಟವರ್ ಆಫ್ ಇಂಗ್ಲೆಂಡ್, ಇಂಗ್ಲೆಂಡಿನ ಇತಿಹಾಸದಲ್ಲಿ ಭಯಾನಕವಾದ ನೆನಪುಗಳನ್ನು ಉಳಿಸಿಕೊಂಡಿರುವ ಸ್ಮಾರಕ ಇದು. ಥೇಮ್ಸ್ ನದಿಯ ದಡದಲ್ಲಿರುವ ವಿಸ್ತಾರವಾದ ವೃತ್ತಾಕಾರವಾದ ಕೋಟೆಯ ಪ್ರಾಕಾರದಲ್ಲಿ ಹಲವು ಗೋಪುರಗಳ ಸಮುಚ್ಚಯವನ್ನುಳ್ಳ ಮತ್ತು ಕೋಟೆಯ ಪ್ರಾಕಾರದಲ್ಲಿ ಹಲವು ಕಟ್ಟಡಗಳನ್ನುಳ್ಳ ಪ್ರದೇಶ ಇದು ಇಡಿಯಾಗಿ ಇದನ್ನು ಟವರ್ ಎಂದು ಕರೆಯಲಾಗಿದೆ. ಈ ಕೋಟೆಯ ಗೋಡೆಯ ಆಚೆ ಸುತ್ತಲೂ ಕಂದಕವಿದೆ. ಹಿಂದೆ ಅದರ ತುಂಬಾ ಥೇಮ್ಸ್ ನದಿಯ ನೀರನ್ನು ರಕ್ಷಣಾ ಸಾಧನವನ್ನಾಗಿ ತುಂಬಿಸುತ್ತಿದ್ದರೆಂದು ಕಾಣುತ್ತದೆ. ಈಗ ನೀರಿನ ಬದಲಾಗಿ ಸೊಂಪಾಗಿ ಹುಲ್ಲು ಬೆಳೆದುಕೊಂಡಿದೆ.
By-ಶಾಲಿನಿ ಗಾಂವಕರ್
ಮುಂದಿನ ಭಾಗ ಓದಿ…
