ಟವರ್ ಆಫ್ ಲಂಡನ್ (ಇಂಗ್ಲೆಂಡ್)

ಈ ಟವರ್ ಅನ್ನುವುದು ವಾಸ್ತವವಾಗಿ ಒಂದು ಕಾರಾಗೃಹವೇ. ಅನೇಕ ಪಿತೂರಿಗಳು, ಕೊಲೆಗಳು ಇಲ್ಲಿ ನಡೆದಿವೆ. ತಮಗೆ ಆಗದವರನ್ನು ಅಥವಾ ತಮಗೆ ದ್ರೋಹ ಬಗೆದವರನ್ನು ಇಂಗ್ಲೆಂಡಿನ ರಾಜರು, ವಿಚಾರ ನಡೆಸಿಯೋ, ನಡೆಸದೆಯೋ, ಸೆರೆಮನೆಗೆ ತಳ್ಳುತ್ತಿದ್ದ ಸ್ಥಳ ಇದು. ಹಾಗೆ ಸೆರೆಯಾದವರಲ್ಲಿ ಸರ್ ಥಾಮಸ್ ಮೋರ್, ಸರ್ ವಾಲ್ಟರ್ ಕ್ಯಾಲೆ, ಮೇರಿ ಕ್ವಿನ್ ಆಫ್ ಸೌಟ್ಸ್ ರಾಣಿ ಅನಿಬೋಲಿನ್ ಇತ್ಯಾದಿ. ಅವರಲ್ಲಿ ರಾಣಿ ಅನಿಬೋಲಿನ ಮತ್ತು ಥಾಮಸ್ ಮೋರ್ ಎನ್ನುವವರನ್ನು ತಲೆ ಕಡಿದು ಸಾಯಿಸಲಾಯಿತು. ಇದರ ಜತೆ ಎಷ್ಟೋ ಜನ ನಿರಪರಾಧಿಗಳು ಮುಗ್ಧರು ಶಿಕ್ಷೆಗೆ ಒಳಗಾಗಿದ್ದಾರೆ. ಚರಿತ್ರೆಯೇ ಹೀಗೆ. ಈ ಚರಿತ್ರೆಯ ಮಬ್ಬುಕವಿದ ಸುರಂಗಮಾರ್ಗದಲ್ಲಿ ಶತಮಾನಗಳ ನೆತ್ತರು ಕೆಸರು ಕಾಲಿಗೆ ಮೆತ್ತಿಕೊಳ್ಳುತ್ತದೆ. ನರಳುವ ದನಿಗಳಿಂದ ಮಾರ್ದನಿಗೊಂಡ ರಕ್ತದ ಕಲೆಗಳಿಂದ ನಿರಪರಾಧಿಗಳ ನಿಟ್ಟುಸಿರಿನ ನೆನಪುಗಳಿಂದ ಈ ಟವರಿನ ಕತ್ತಲೆಯ ಮೂಲೆಗಳು ಕಾರಾಗೃಹ ರೂಪದ ನೆಲಮಾಳಿಗೆಯ ಕೂಪಗಳು ಇಂದು ಹೇಳಲಾಗದ ವ್ಯಥೆಗಳನ್ನು ಹುದುಗಿಸಿಕೊಂಡು ಸ್ತಬ್ಧವಾಗಿವೆ. ಹೀಗೆ ಇತಿಹಾಸದ ಪುಟಗಳಲ್ಲಿ ಹೀಗೆ ದಾಖಲಾಗುತ್ತಲೇ ಇರುವ ಮನುಷ್ಯನ ಮಹತ್ವಾಕಾಂಕ್ಷೆಗೆ ಮತ್ತು ಕಾರ್ಯಗಳಿಗೆ ಕೊನೆಯಿಲ್ಲ.
ಇದು ವಿಂಡ್ ಅರಮನೆಗಿಂತಲೂ ಹಳೆಯದು. ಅಲ್ಲಿ ಹೆನ್ರಿ 1, ಹೆನ್ರಿ 2, ಜಾರ್ಜ್ 2, ಜಾರ್ಜ್ 3 ಹೀಗೆ ಅತೀ ಹಿಂದಿನ ರಾಜರು ಆಳಿದ ಅರಮನೆ ಅದು. ತುಂಬಾ ಹಳೆಯದಾಗಿದ್ದು ಕೆಲವು ಕಡೆ ಮಾಳಿಗೆಯ ಮೆಟ್ಟಿಲುಗಳು ಶಿಥಿಲವಾಗಿವೆ. ಇಲ್ಲಿ ಸಹ ರಾಜರುಗಳು ಉಪಯೋಗಿಸಿದ ಸಾಮಾನುಗಳು, ಯುದ್ಧದಲ್ಲಿ ಉಪಯೋಗಿಸಿದ ಶಸ್ತ್ರಾಸ್ತ್ರಗಳು, ರಾಜರುಗಳು ಧರಿಸಿದ ಉಡುಗೆ, ತೊಡುಗೆಗಳು ಇವೆ. 13ನೇ ಶತಮಾನದಲ್ಲಿ 3ನೇ ಹೆನ್ರಿ ಥೇಮ್ಸ್ ನದಿಯ ದಂಡೆಯಲ್ಲಿ ಕಟ್ಟಿಸಿದ ಈ ಅರಮನೆ ಮುಂದೆ ಆತನ ಮಗ ಎಡ್‌ವರ್ಡ್‌ನು ಅರಮನೆಯ ಸುತ್ತ ಮುತ್ತಲೂ ಅಭಿವೃದ್ಧಿಗೊಳಿಸಿದನಂತೆ. ಅಲ್ಲೇ ಹತ್ತಿರದಲ್ಲಿ ಒಂದನೇ ಹೆನ್ರಿ ಕಟ್ಟಿಸಿದ ಅರಮನೆಯೂ ಇದೆ. ಅಲ್ಲಿಯೂ ಸಹ ಅವರು ಉಪಯೋಗಿಸಿದ ವಸ್ತುಗಳು, ರಾಜರ ಮೂರ್ತಿಗಳು ಬಂಗಾರದ ಪಾತೆಗಳು ಇವೆ. ಈಗಲೂ ಅರಮನೆಯ ಬಾಗಿಲಲ್ಲಿ ಬಂದೂಕುಧಾರಿಗಳು ಇರುತ್ತಾರೆ. ಒಳಗೆ ಹೋದಂತೆ ಅವರು ಉಪಯೋಗಿಸಿದ ಸುಂದರವಾದ ದೀಪಗಳು ತೋಪುಗಳ ರಾಶಿಯೇ ಇದೆ. ಇಲ್ಲಿಯೂ ಸಹ ಸಾವಿರಾರು ಸಂಖ್ಯೆಯಲ್ಲಿ ಬಂದೂಕುಗಳು, ತುಪಾಕಿಗಳು ಇವೆ. ಅವರು ಉಪಯೋಗಿಸಿದ ಕೈ, ತಲೆ, ಎದೆ, ತೋಳುಗಳಿಗೆ ತುಂಬುವ ರವಟಿಗಳು ಅಲ್ಲಿವೆ. ಅಲ್ಲಿ ಅಪರಾಧಿಗಳ ಶಿರವನ್ನು ಕಡಿಯುವಂಥ ವಧಾಸ್ಥಾನವೂ ಇದೆ. ಒಮ್ಮೆ ರಾಣಿಯೊಬ್ಬಳು ಬೇರೆಯವರ ಜೊತೆ ಸಂಬಂಧ ಇಟ್ಟುಕೊಂಡಿದ್ದನ್ನು ಅರಿತ ರಾಜಮನೆತನದವರು ಅವಳ ತಲೆಯನ್ನು ಇಲ್ಲಿ ಕಡಿದು ಹಾಕಿದ್ದರಂತೆ. ಇನ್ನೊಂದು ಕೋಣೆಯಲ್ಲಿ ಮುಂಬಾಗಿಲಲ್ಲಿ ಎರಡು ಬಂಗಾರದ ಹುಲಿಗಳಿವೆ. ಮುಂದೆ ಹೋದರೆ ರಾಜರಾಣಿಯರು ಊಟ ಮಾಡಿದ ಬಂಗಾರದ ಲೋಟ, ಚಮಚಗಳು, ಬಂಗಾರದ ವಿವಿಧ ಆಕಾರದ ಚಮಚ, ನೀರಿನ ಜಗ್‌ಗಳು, ಕೈ ತೊಳೆಯಲು ಉಪಯೋಗಿಸುವ ಎರಡೂ ಕಡೆ ಹಿಡಿಕೆ ಇರುವ ದೊಡ್ಡ ದೊಡ್ಡ ಪಾತ್ರೆಗಳು ಸಹ ಬಂಗಾರದ್ದೇ ಆಗಿದೆ. ಒಂದು ಕಡೆ ದೊಡ್ಡ ತಾಟಿನಲ್ಲಿ ವಜ್ರದ ಹರಳುಗಳ ರಾಶಿಯೇ ಇದೆ. ಅಲ್ಲಿ ವಜ್ರ ಖಚಿತವಾದ ಕಿರೀಟಗಳ ರಾಶಿಯೇ ಇದೆ. ಬೇರೆ ದೇಶದವರು ಇವರಿಗೆ ನೀಡಿದ ಉಡುಗೊರೆಗಳ ರಾಶಿಯೇ ಇಲ್ಲಿದೆ. ಅವೆಲ್ಲ ತುಂಬಾ ಬೆಲೆಬಾಳುವಂತಹವೂ ಆಗಿದೆ.

ಇದನ್ನೆಲ್ಲ ನಾವು ಫೋಟೊ ತೆಗೆದುಕೊಂಡೆವು. ಅಲ್ಲಿಯೇ ಮುಂದೆ ಒಂದು ಹಾಲ್‌ನಲ್ಲಿ ಮಹಾರಾಣಿ ಎಲಿಜಬೆತ್‌ಳ ಪಟ್ಟಾಭಿಷೇಕದ ದೃಶ್ಯವನ್ನು ದೊಡ್ಡ ಟಿ.ವಿ. ಪರದೆಯ ಮೇಲೆ ನಿರಂತರವಾಗಿ ತೋರಿಸುತ್ತಾ ಇರುತ್ತಾರೆ. ಆಗ ಅರಮನೆ ಇಂದ್ರನ ಅರಮನೆಯಂತೆ ಶೃಂಗಾರಗೊಂಡು ಕಂಗೊಳಿಸುತ್ತಿತ್ತು. ಅರಮನೆಯಿಂದ ಹೊರಟ ಮೆರವಣಿಗೆ ಸೈನಿಕರು, ಮಂತ್ರಿಗಳು, ವಾದ್ಯದವರು ಸಮವಸ್ತ್ರಧಾರಿಗಳಾಗಿದ್ದರು. ಕೆಲವರು ವಯಲಿನ್ ಬಾರಿಸುವವರು. ರಾಜ ಪರಿವಾರದವರು ಮೆರವಣಿಗೆಯಲ್ಲಿದ್ದರು. ಪಾದ್ರಿಗಳು ಇದ್ದರು. ಇವರೆಲ್ಲರ ಜೊತೆ ರಾಣಿ ಪಲ್ಲಕ್ಕಿಯಲ್ಲಿ ಕುಳಿತು ಹೊರಡುವ ದೃಶ್ಯ ತುಂಬಾ ಮನಮೋಹಕವಾಗಿದೆ. ಮಹಾರಾಣಿ ಧರಿಸಿದ ಬಿಳಿ ಉಡುಗೆ ತುಂಬಾ ವಜ್ರವನ್ನು ಉಪಯೋಗಿಸಿ ಕಸೂತಿ ಮಾಡಲಾಗಿತ್ತು. ಅವಳು ವಜ್ರದ ಕಿರೀಟವನ್ನು ತೊಟ್ಟಿದ್ದಳು. ರಾಣಿಯಂತೂ ದೇವಲೋಕದಿಂದ ಇಳಿದು ಬಂದ ಅಪ್ಸರೆಯಂತೆ ಕಾಣುತ್ತಿದ್ದಳು. ಹೀಗೆ ಆ ಮೆರವಣಿಗೆ ಒಂದು ಅದ್ಭುತ ದೃಶ್ಯವಾಗಿತ್ತು. ಅಲ್ಲಿಗೆ ಬಂದ ಪ್ರವಾಸಿಗರೆಲ್ಲ 5 ನಿಮಿಷ ಅಲ್ಲಿ ನಿಂತು ಈ ದೃಶ್ಯವನ್ನು ನೋಡಿ ಮುಂದೆ ಹೋಗುತ್ತಿದ್ದರು. ಮುಂದೆ ನಾವು ಡೈಮಂಡ್ ಹೌಸ್ ನೋಡಲು ಹೋದೆವು. ಅಲ್ಲಿ ನಮಗೆ ಕ್ಯಾಮರಾ ಮೊಬೈಲ್ ಒಳಗೆ ಒಯ್ಯಲು ಬಿಡಲಿಲ್ಲ. ಅಲ್ಲಿ ಬಿಗಿ ಭದ್ರತೆ ಇತ್ತು. ಅತ್ಯಂತ ಬಿಗಿಯಾದ ಕಾವಲಿನಲ್ಲಿರುವ ಈ ವಜ್ರ ವೈಡೂಲ್ಯದ ಪ್ರದರ್ಶನಾಲಯದೊಳಗೆ ರಾಜ ಮಹಾರಾಜರ ರತ್ನಖಚಿತ ಕಿರೀಟಗಳು, ಅವರ ಝಗಝಗಿಸುವ ಉಡುಗೆ ತೊಡುಗೆಗಳು, ಅವರ ಸುವರ್ಣ ರಾಜದಂಡಗಳು, ಕಿರೀಟಧಾರಣೆಯ ಸಂದರ್ಭದಲ್ಲಿ ಉಪಯೋಗಿಸುವ ಅಮೂಲ್ಯ ರಾಜವಸ್ತ್ರಗಳು, ಅವರು ಬಳಸುತ್ತಿದ್ದ ಬಂಗಾರದ ಪಾನಪಾತ್ರೆ ಮತ್ತಿತರ ಪರಿಕರಗಳು ಇವೆ. ಇಲ್ಲಿರುವ ಅನೇಕ ಐಶ್ವರ್ಯ ಸೂಚಕ ಸಾಮಾಗ್ರಿಗಳು ಬ್ರಿಟಿಷ್ ಸಾಮ್ರಾಜ್ಯವು ತನ್ನ ವಸಾಹತುಗಳಿಂದ ದೋಚಿ ತಂದವುಗಳಾಗಿರಬೇಕು. ಇಂಡಿಯಾದಿಂದ ಕೊಳ್ಳೆ ಹೊಡೆದುಕೊಂಡು ಹೋಗಿ ಇಲ್ಲಿ ಪ್ರದರ್ಶನಕ್ಕೆ ಇರಿಸಿರುವ ಅಮೂಲ್ಯವಾದ ವಸ್ತುಗಳಲ್ಲಿ ಜಗತ್ ಪ್ರಸಿದ್ಧವಾದ ಕೊಹಿನೂರ್ ವಜ್ರವೂ ಒಂದು. ಆದರೆ ಅದರ ಪಕ್ಕದಲ್ಲಿ ಭಾರತಕ್ಕೆ ರಾಣಿ ಬಂದಾಗ ಕೊಟ್ಟ ಉಡುಗೊರೆ ಎಂದು ಬರೆಯಲಾಗಿದೆ. ಅದನ್ನು ರಾಣಿಯ ಒಂದು ಕಿರೀಟಕ್ಕೆ ಹಾಕಲಾಗಿದೆ. ಮೊದಲು ಈ ವಜ್ರ ಹೆಚ್ಚಿನ ಕ್ಯಾರೆಟಿನಿಂದ ಕೂಡಿದ್ದು ತುಂಬಾ ಹೊಳೆಯುತ್ತಿತ್ತಂತೆ ಮತ್ತು ಅಳತೆಯಲ್ಲಿ ಸಹ ತುಂಬಾ ದೊಡ್ಡದಾಗಿತ್ತಂತೆ ಎಂದು ಬಲ್ಲವರು ಹೇಳುತ್ತಾರೆ. ಕಾಲಕ್ರಮೇಣ ಪದೇ ಪದೇ ಕಟ್ ಮಾಡಿ ಈಗ ಅದರ ಅಳತೆ ಚಿಕ್ಕದಾಗಿದೆಯಂತೆ. ಇದೇ ರೀತಿಯ ವಜ್ರದ ಕಿರೀಟಗಳು ರಾಣಿಯರ ವಜ್ರದ ನೆಕ್‌ಲೆಸ್, ಉಂಗುರ, ವಜ್ರದ ಬಳೆಗಳು, ವಜ್ರ, ಅಂಟಿಸಿದ ಬೆಳ್ಳಿಯ ಚಮಚಗಳಿವೆ. ವಿದೇಶಗಳಿಂದ ಉಡುಗೊರೆಯಾಗಿ ಬಂದ ಅತ್ಯಮೂಲ್ಯವಾದ ವಜ್ರಗಳ ಕಿರೀಟಗಳಿವೆ. ಇಷ್ಟೊಂದು ವಜ್ರಗಳ ಹೊಳಪಿಗೆ ಇಡೀ ಕೋಣೆಯಲ್ಲಿ ಬೆಳಕು ಬಿದ್ದಂತೆ ಹೊಳೆಯುತ್ತಿದೆ. ನಾನಂತೂ ಆ ಕೋಣೆಯನ್ನು ಎರಡು ಸಲ ಹೋಗಿ ನೋಡಿ ಬಂದೆ. ಎಷ್ಟು ಸಲ ನೋಡಿದರೂ ಮತ್ತೆಮತ್ತೆ ನೋಡಬೇಕೆನಿಸುತ್ತದೆ.

ನಂತರ ಅಲ್ಲಿಯೇ ಹತ್ತಿರವಿರುವ ಅತೀ ಹಳೆಯ ಚರ್ಚ್ ಅನ್ನು ನೋಡಿ ಬಂದವು. ನಂತರ ಮುಂದೆ ಇದ್ದ ಮ್ಯೂಸಿಯಂ ನೋಡಲು ಹೋದೆವು. ಲಂಡನ್ ನಗರದೊಳಗಿನ ಮ್ಯೂಸಿಯಂಗಳು ಜಗತ್ಪಸಿದ್ಧವಾದವುಗಳು. ಇವುಗಳ ಒಳ ಹೊಕ್ಕರೆ ಅವುಗಳ ವಿಸ್ತಾರ ಹಾಗೂ ವೈವಿಧ್ಯತೆ ಯಾರನ್ನಾದರೂ ಕಕ್ಕಾಬಿಕ್ಕಿಯನ್ನಾಗಿಸುತ್ತದೆ. ಇಲ್ಲಿ ಬ್ರಿಟಿಷ್ ಇತಿಹಾಸದ ಶತ ಶತಮಾನಗಳ ಇತಿಹಾಸವನ್ನು ಒಳಗೊಂಡಿದೆ.
ನಮ್ಮ ದೇಶದಲ್ಲಿ ನಾವು ಎಲ್ಲೆಂದರಲ್ಲಿ ಭಿಕ್ಷುಕರನ್ನು ನೋಡುತ್ತೇವೆ. ಆದರೆ ಇಲ್ಲಿ ಭಿಕ್ಷುಕರೇ ಇಲ್ಲವೆಂದೇನೂ ಅಲ್ಲ. ಇಲ್ಲಿಯೂ ಭಿಕ್ಷುಕರು ಇದ್ದಾರೆ. ಅವರೆಲ್ಲ ಒಂದು ರೀತಿಯಲ್ಲಿ ಮರ್ಯಾದಸ್ಥ ಭಿಕ್ಷುಕರು, ರೈಲ್ವೆ ಸ್ಟೇಶನ್ ಮುಂದುಗಡೆಯೋ ಅಥವಾ ಸಬ್ ವೇಗಳಲ್ಲಿಯೋ ತಮ್ಮ ಹ್ಯಾಟನ್ನು ಮುಂದೆ ಇರಿಸಿಕೊಂಡು, ‘ಐ ಆಮ್ ಹಂಗಿ ಎಂಡ್ ಹೆಲ್ಸ್‌ಲೆಸ್, ಫೀಸ್ ಹೆಲ್ತ್ ಮಿ’ ನಾನು ಹಸಿದಿದ್ದೇನೆ ನಿಸ್ಸಾಯಕನಾಗಿದ್ದೇನೆ. ದಯಮಾಡಿ ಸಹಾಯ ನೀಡಿ ಎಂಬ ಚಿಕ್ಕ ಬೋರ್ಡ್ ಹಿಡಿದು ಕೂತವರನ್ನು ನೋಡಿದ್ದೇನೆ. ಕೆಲವರು ಪಿಟೀಲೊಂದನ್ನು ಬಾರಿಸುತ್ತ ನಿಂತುಕೊಂಡು ಕೆಳಗೆ ತಮ್ಮ ಪಿಟೀಲು ವಾದ್ಯದ ತೆರೆದ ಪೆಟ್ಟಿಗೆಯನ್ನು ಇರಿಸಿಕೊಂಡಿರುತ್ತಾರೆ. ಅವರೆದುರಿಗೆ ಸಾಕಷ್ಟು ನಾಣ್ಯಗಳನ್ನು ಇಷ್ಟವಿದ್ದವರು ಹಾಕುತ್ತಾರೆ. ಆದರೆ ನೀವು ದಾನ ಮಾಡಲೇಬೇಕೆಂದು ಅಂಗಲಾಚುವುದಾಗಲಿ ನೀವು ದಾನ ಮಾಡದಿದ್ದರೇನು ಗತಿ? ಎಂಬ ಆತಂಕವಾಗಲಿ ದೈನ್ಯವಾಗಲಿ ಅವರ ಮುಖದಲ್ಲಿ ಇರುವುದಿಲ್ಲ. ಇಂಗ್ಲೆಂಡಿನ ಸರ್ಕಾರ ಪ್ರತಿಯೊಬ್ಬನಿಗೂ ತಕ್ಕ ಉದ್ಯೋಗ ದೊರೆಯುವವರೆಗೂ ನಿರುದ್ಯೋಗಿಗಳಾದವರಿಗೆ ಸಹ ಅವರಿಗೆ ಉದ್ಯೋಗ ದೊರೆಯುವವರೆಗೂ ‘ನಿರುದ್ಯೋಗ ಭತ್ಯೆ’ಯನ್ನು ಕೊಡುತ್ತದೆ. ತೀರಾ ಕಡಿಮೆ ವರಮಾನದವರಿಗಾಗಿ ಹಾಗೂ ನಿರುದ್ಯೋಗಿ ಸಂಸಾರದವರಿಗೆ ಪ್ರತಿಯೊಂದು ಮುಖ್ಯವಾದ ನಗರಗಳಲ್ಲೂ ಪ್ರತ್ಯೇಕವಾದ ವಸತಿಗಳೇ ಇವೆ. ಹೀಗಾಗಿ ಅತ್ಯಂತ ಕಡುಬಡತನದ ಪ್ರಮಾಣ ಕಡಿಮೆಯೆಂದೇ ಹೇಳಬಹುದು.
ಅಮೇರಿಕಾದ ನಗರಗಳಿಗೆ ಹೋಲಿಸಿದರೆ ಲಂಡನ್ ನಗರ ಒಂದು ರೀತಿಯಲ್ಲಿ ಸುಂದರವಾದ ನಗರವೆಂದೇ ಹೇಳಬೇಕು. ಯದ್ವಾ-ತದ್ವಾ ಮೇಲೇರಿ ಹೋಗುವ ಗಗನ ಚುಂಬಿ ಕಟ್ಟಡಗಳೇ ಪ್ರಮುಖವಾದ ಅಮೇರಿಕಾದ ನಗರಗಳಿಗಿಂತ ಓರಣವಾದ ಕಟ್ಟಡಗಳುಳ್ಳ ಲಂಡನ್ ನಗರ ನನಗೆ ಹೆಚ್ಚು ಇಷ್ಟವಾಯಿತು. ಜಗತ್ತಿನ ಎಲ್ಲ ನಗರಗಳಂತೆ ವಾಹನಗಳ ದಟ್ಟಣೆ ಪರಿಸರ ಮಾಲಿನ್ಯದ ಆತಂಕ ಇತ್ಯಾದಿಗಳು ಈ ನಗರದಲ್ಲಿ ಸ್ವಲ್ಪ ಕಡಿಮೆ, ಅದರಲ್ಲೂ ನಗರದೊಳಗಿನ ವಾಹನದ ದಟ್ಟಣೆಗಳ ಬಹಿರಂಗ ವಲಯದಿಂದ ಪಾರಾಗಿ ನೆಲದೊಳಗಿನ ಸುರಂಗ ಟ್ಯೂಬ್‌ಗಳನ್ನವಲಂಬಿಸುವುದಾದರೆ ಲಂಡನ್‌ನಲ್ಲಿ ಹೆಚ್ಚು ಸಮಯವನ್ನು ವ್ಯಯ ಮಾಡದೇ ನಮ್ಮ ನಮ್ಮ ಕಾಲಮಿತಿಯೊಳಗೆ ನೋಡಲು ಸಾಧ್ಯವಾದಷ್ಟನ್ನು ನೋಡಬಹುದು.
By-ಶಾಲಿನಿ ಗಾಂವಕರ್
ಮುಂದಿನ ಭಾಗ ಓದಿ…
