(ಭಾಗ-27) ಪಡುವಣದ ಪ್ರವಾಸ: ಒಂದು ಪ್ರಯಾಣ, ಸಾವಿರ ನೆನಪುಗಳು!

(ಭಾಗ-27) ಪಡುವಣದ ಪ್ರವಾಸ: ಒಂದು ಪ್ರಯಾಣ, ಸಾವಿರ ನೆನಪುಗಳು!

ಸೆಂಟ್ ಪೀಟರ್‌ನ ಚರ್ಚಿನ ಎಡಭಾಗದಲ್ಲೇ ಜಗದ್ವಿಖ್ಯಾತ ಸಿಸ್ಟೈನ್ ಛಾಪೆಲ್ ಇದೆ. ಮೈಕೆಲೇಂಜೆಲೋವಿನ ಮುಚ್ಚಿಗೆ ಚಿತ್ರಗಳಿಗಾಗಿಯೂ Last Judgement ಎಂಬ ಭಿತ್ತಿ ಚಿತ್ರಕ್ಕಾಗಿಯೂ ಈ ಪುಟ್ಟ ಜಾಗ ಜಗತ್ತಿನೆಲ್ಲೆಡೆಯ ಕಲಾಪ್ರಿಯರನ್ನು ಆಕರ್ಷಿಸುತ್ತದೆ. ಕ್ರಿ.ಶ. 15ನೇ ಶತಮಾನದಲ್ಲಿ ಪೋಪ್ ಜೂಲಿಯಸನು ಈ ಮುಚ್ಚಿಗೆ ಚಿತ್ರಗಳನ್ನು ರಚಿಸಲು ಆಹ್ವಾನಿಸಿದಾಗ ಮೈಕೆಲೇಂಜೆಲೋ “ನಾನು ಶಿಲ್ಪಿ ಚಿತ್ರಗಳನ್ನು ಬರೆಯೋಕೆ ನಂಗೆ ಬರೋದಿಲ್ಲ” ಅಂದನಂತೆ. ಆದರೆ ಪೋಪನ ಒತ್ತಾಯಕ್ಕೆ ಮಣಿದು ಚಿತ್ರ ರಚನೆಗೆ ತೊಡಗಿದ. ಅಂದರೆ ಅಟ್ಟಣಿಗೆಯ ಮೇಲೆ ಮಲಗಿ ಮುಚ್ಚಿಗೆಯ ಮೇಲೆ ಚಿತ್ರ ಬಿಡಿಸಬೇಕು. ಆಗ ಮೈಕೆಲೇಂಜೆಲೋವಿಗೆ 30 ವರ್ಷ, ತನ್ನ ರಚನೆಯ ಕಾಲದಲ್ಲಿ ಕೊಠಡಿಯ ಒಳಗೆ ಯಾರನ್ನೂ ಬಿಡಬಾರದು ಎಂದು ಕಟ್ಟಪ್ಪಣೆ ವಿಧಿಸಿದನಂತೆ. ಪೋಪ್ ಜೂಲಿಯಸನು ಮಾತ್ರ ಆಗಾಗ ಪಾವಟಿಗೆಯೇರಿ ಅಟ್ಟಣಿಗೆಯ ಮೇಲೆ ಕುಳಿತು ಚಿತ್ರಗಳನ್ನು ವೀಕ್ಷಿಸುತ್ತಿದ್ದ. ಹೀಗೆ ವರ್ಷಗಳು ಉರುಳಿದವು. ಆದರೆ ಚಿತ್ರ ರಚನೆ ಮುಗಿಯಲಿಲ್ಲ. ಪೋಪನು ಅಸಹನೆಯಿಂದ ಇವನ್ನು ಯಾವಾಗ ಮುಗಿಸುತ್ತೀಯಾ ಎಂದು ಕೇಳುತ್ತಿದ್ದ. ಪ್ರತಿ ಬಾರಿಯೂ ಈತ “ನನ್ನ ಕೈಲಾದಾಗ” ಎನ್ನುತ್ತಿದ್ದ. ಅದನ್ನು ಕೇಳಿ ಕೇಳಿ ಬೇಸರ ಬಂದ ಪೋಪನು ಒಮ್ಮೆ ಸಿಟ್ಟಿನಿಂದ “ನನ್ನ ಕೈಲಾದಾಗ ನನ್ನ ಕೈಲಾದಾಗ ಅಂತ ಯಾವಾಗ್ಲ ಹೇಳುತ್ತೀ, ಮುಗಿಸುವುದು ಯಾವಾಗ?” ಎಂದು ತನ್ನ ದಂಡದಿಂದ ಮೈಕೆಲಾಂಜಲೋವಿಗೆ ಹೊಡೆದನಂತೆ. ಕಲಾಕಾರನಿಗೆ ಅತೀವ ಕೋಪ ಬಂತು. ಅವನು ಪಾವಟಿಗಳನ್ನು ಸರಸರನೆ ಇಳಿದು ತನ್ನ ಮನೆಗೆ ಹೋಗಿ ಗಂಟು ಮೂಟೆ ಕಟ್ಟಿ ತನ್ನೂರಾದ ಫ್ಲಾರೆನ್ಸಿಗೆ ಹೊರಟೇಬಿಟ್ಟ. ಪೋಪನಿಗೆ ಪಶ್ಚಾತ್ತಾಪವಾಯಿತು. ತಕ್ಷಣ ದೂತನೊಬ್ಬನೊಂದಿಗೆ 500 ಡ್ಯುಕೆಟ್ ಹಣ ಕೊಟ್ಟು ಕಳಿಸಿ ಮೈಕೆಲೇಂಜೆಲೋನ ಕ್ಷಮಾಯಾಚನೆ ಮಾಡಿದ ಕಲೆಯ ಮುಂದೆ ಅಧಿಕಾರ ಮದ ತಲೆಬಾಗಿದುದಕ್ಕೆ ಇದು ಮಹತ್ವದ ನಿದರ್ಶನ. ಮೈಕೆಲೇಂಜೆಲೋ ಹಿಂತಿರುಗಿ ಬಂದು ತನ್ನ ಕೆಲಸ ಮುಗಿಸಿದ. 1512ರಲ್ಲಿ ಸಾರ್ವಜನಿಕ ಪ್ರವೇಶಕ್ಕೆಂದು ತೆರೆದಾಗ

ಜನ ವಿಸ್ಮಯ ಭಕ್ತಿಗಳಿಂದ ಈ ಚಿತ್ರಗಳನ್ನು ನೋಡಿದರು. “ಇದು ನಮ್ಮ ಕಲೆಯ ದೀಪ. ಇದರ ಕಾಂತಿ ಎಷ್ಟು ಉಜ್ವಲವಾಗಿದೆಯೆಂದರೆ ಇಡೀ ಜಗತ್ತನ್ನು ಇದು ಬೆಳಗಬಲ್ಲದು! ಎಂಬಂಥ ಮಾತು ಆಡಿದರು.
ಜಗತ್ತಿನ ಅತ್ಯಂತ ಶ್ರೇಷ್ಠ ಶಿಲ್ಪಿ ಮೈಕೆಲೇಂಜೆಲೋ ಮಹಾಚಿತ್ರಕಾರನೂ ಅಹುದು. ಹೀಗೆ, ಈ ಮಹಾ ಕೃತಿಗಳನ್ನು ಕಣ್ಣಾರೆ ಕಂಡ ಹೆಗ್ಗಳಿಕೆ ನಮ್ಮದು.

ಗಿಸ್ಟೈನ್ ಛಾಪೆಲಿನ ಎಡ ಮತ್ತು ಬಲಗೋಡೆಗಳ ಮೇಲೆ ಪೆರಗಿನೋ ಗಿರಾಂಡೆಯೋ ಸಿಗ್‌ನೊರಲ್ಲಿ ಮತ್ತು ಬಾಟಿಸೆಲ್ಲಿ ಬರೆದ ಭಿತ್ತಿ ಚಿತ್ರಗಳಿವೆ. ಅದರ ಹಿಂಭಾಗದ ಗೋಡೆಯಲ್ಲಿರುವ ಮೆಕೆಂಜೆಲೋ ರಚಿತ Last Judgement ಜಗದ್ವಿಖ್ಯಾತ ಮುಚ್ಚಿಗೆ ಚಿತ್ರ ರಚಿಸಿದ 25 ವರ್ಷಗಳ ಅನಂತರ ಮೈಕೆಲೇಂಜೆಲೋ ಇದನ್ನು ಚಿತ್ರಿಸಿದ.

ಮುಂದೆ ನಾವು ವ್ಯಾಟಿಕನ್ ಮ್ಯೂಸಿಯಂ ನೋಡಲು ಹೊರಟೆವು. ಇಲ್ಲಿನ ವಿಸ್ತಾರವಾದ 16 ಕೊಠಡಿಗಳಲ್ಲಿ ಪುನರುದಯ ಕಾಲದ ಚಿತ್ರಕಾರನ ವರ್ಣಚಿತ್ರಗಳಿವೆ. ಗೋಡೆಗಳ ಎತ್ತರ ಇಪ್ಪತ್ತು ಅಡಿಗೆ ಮಿಗಿಲಾಗಿದ್ದು, ಅಷ್ಟು ಜಾಗವನು ಚಿತ್ರಗಳು ಆಕ್ರಮಿಸಿವೆ. ಇದರಲ್ಲಿ ಅಧನ್ಯ ಶಾಲೆ ಎಂಬ ವರ್ಣಚಿತ್ರ ಬಲು ಸೊಗಸಾಗಿದೆ. ಇಲ್ಲಿ ಗ್ರೀಸ್ ದಾರ್ಶನಿಕರಾದ ಫುಟೋ ಅರಿಸ್ಟಾಟಲ್, ಸಾಕ್ರೆಟಿಸ್, ಪೈಥಾಗೋರಸ್ ಇವರು ತಮ್ಮ ಶಿಷ್ಯ ವರ್ಗದವರೊಡನೆ ಇದ್ದ ದೃಶ್ಯವಿದೆ.

ಆಗಸ್ಟ್ 10

ಮುಂದೆ “ನಾವು ಕೊಲೋಸಿಯಂ ಪ್ರಪಂಚದ ಮಹಾ ಭಗ್ನಾವಶೇಷ ನೋಡಲು ಹೊರಟೆವು. ಕ್ರಿ.ಶ. ಎಪ್ಪತ್ತೊಂಬತ್ತರಲ್ಲಿ ವೆಸ್ಟೀಸಿಯಂ ಕೊಲೋಸಿಯಂ ನಿರ್ಮಾಣ ಆರಂಭಿಸಿದ ವರ್ತುಲಾಕಾರದ ಈ ತೆರೆದ ರಂಗಮಂಟಪದಲ್ಲಿ ಒಂದು ಬಾರಿಗೆ 50 ಸಾವಿರ ಪ್ರೇಕ್ಷಕರು ಕೂಡಬಹುದಿತ್ತು ಎಂದರೆ ಅದರ ವಿಸ್ತಾರದ ಕಲ್ಪನೆ ಬರುತ್ತದೆ. ಇದು ನಾಲ್ಕು ಅಂತಸ್ತಿನ ಕಟ್ಟಡ ಪ್ರತಿಯೊಂದು ಅಂತಸ್ತಿನಲ್ಲೂ ಕೋಣೆಗಳು ಕಮಾನುಗಳು ಹತ್ತಲು ಮೆಟ್ಟಿಲುಗಳು ಇದ್ದವು. ಇಲ್ಲಿ ಕೋಣೆಗಳು ಕಮಾನುಗಳು ಹತ್ತಲು ಮೆಟ್ಟಿಲುಗಳು ಇದ್ದಿರಬೇಕು. ಚರಂಡಿ ವ್ಯವಸ್ಥೆಯೂ ಇದ್ದಿರಬೇಕು. ಆದರೆ ಬೆಂಕಿ ಮತ್ತು ಭೂ ಕಂಪನಿಗಳಿಂದಾಗಿ ಕೊಲೋಸಿಯಂ ಪೂರ್ತಿ ನಾಶವಾಗಿದೆ. ಅಲ್ಲಲ್ಲಿ ಎತ್ತರದ ಪಾಳುಬಿದ್ದ ಗೋಡೆಗಳು ಕಾಣುತ್ತವೆ. ಅಲ್ಲಿ ಮಹಾ ಭಗ್ನಾವಶೇಷ ಕಂಡು ರೋಂ ಸಾಮ್ರಾಜ್ಯದ ಕಲ್ಪನೆ ಮಾಡಿಕೊಳ್ಳಬಹುದು. ಅದರಂತೆ ಆ ಮಹಾ ಕಲಾಕಾರ ಮೈಕೆಲೇಂಜೆಲೋವಿಗೆ ಭಕ್ತಿಯಿಂದ ನಮಿಸಬೇಕೆನಿಸುತ್ತದೆ.

ರೋಮನರದ್ದು ಯುದ್ಧ ಪ್ರವೃತ್ತಿ. ದೈಹಿಕ ಸಾಹಸ ಕಾರ್ಯಗಳೆಂದರೆ ಅವರಿಗೆ ಅತಿ ಅಚ್ಚುಮೆಚ್ಚು ಕ್ರೂರ ವಿನೋದಗಳೆಂದರೆ ಇನ್ನೂ ಪ್ರಿಯ ಚಕ್ರವರ್ತಿಗಳ ಬೊಕ್ಕಸದಲ್ಲಿ ಅಪಾರ ಹಣ ರಾಶಿಯಾಗಿರುವಾಗ ನಿರುದ್ಯೋಗ, ಬಡತನ ಸಹಜವಾಗಿಯೇ ಏರುತಿತ್ತು. ಆದ್ದರಿಂದ ಜನರ ಗಮನವನ್ನು ವಿನೋದಗಳ ಕಡೆಗೆ ಸೆಳೆಯಲು ಸರ್ಕಾರ ರಚಿಸಿದ ತಂತ್ರ ಎಂದರೆ ತಪ್ಪಾಗಲಾರದು. ಇಲ್ಲಿ ಖಡ್ಗಮಲ್ಲರ ದ್ವಂದ್ವಯುದ್ಧ ಸಾಧಾರಣವಾಗಿ ಇವರು ಗುಲಾಮರು ಅಥವಾ ಯುದ್ಧ ಕೈದಿಗಳಾಗಿರುತ್ತಿದ್ದರು. ಕ್ರೂರ ಮೃಗಗಳ ಪರಸ್ಪರ ಕಾದಾಟ ನಡೆಯುತ್ತಿದ್ದವು. ಕ್ರೂರ ಪ್ರಾಣಿಗಳೊಂದಿಗೆ ಮನುಷ್ಯನೂ ಸೆಣೆಸಿ ಪ್ರಾಣ ಅರ್ಪಿಸಬೇಕಾಗುತ್ತಿತ್ತು. ಇದನ್ನು ನೋಡಲು ರೋಮಿನ ಚಕ್ರವರ್ತಿಗಳೂ ಅಲ್ಲಿಗೆ ಬರುತ್ತಿದ್ದರಂತೆ. ಖಡ್ಗ ಮಲ್ಲರು ಚಕ್ರವರ್ತಿಯ ಸಿಂಹಾಸನದ ಮುಂದೆ ಸಾಗುತ್ತಾ ಚಕ್ರವರ್ತಿಗೆ ಜಯವಾಗಲಿ ಇನ್ನೇನು ಪಂದ್ಯದಲ್ಲಿ ಸಾಯಲಿರುವ ನಾವು ನಿಮಗೆ ನಮಸ್ಕರಿಸುತ್ತೇವೆ ಎನ್ನುತ್ತಿದ್ದರು. ಇವರು ಕ್ರೂರ ಮೃಗಗಳು ಪರಸ್ಪರ ಹೋರಾಟ ಸಾಯುತ್ತಿರುವಾಗ ಕಂಚಿನ ಕೊಂಬು ಕಹಳೆಗಳು ಜಲವಾದ್ಯಗಳೂ ಹಿಮ್ಮೇಳ ನುಡಿಸುತ್ತಿರುತ್ತಿದ್ದವು. ಆಗ ಭಾರತದಲ್ಲಿಯಂತೆ ತಂಪುಪಾನೀಯ, ಬನ್ ಸಾಸೇಜುಗಳನ್ನು ಮಾರುವವರ ಕೊಲೋಸಿಯಂನಲ್ಲೂ ಮಾರಾಟ ಮಾಡುತ್ತಾ ತಿರುಗಾಡುತ್ತಿದ್ದರಂತೆ ಅವನ್ನೆಲ್ಲಾ ಕೊಂಡು ತಿನ್ನುತ್ತಾ ರೋಮನರು ಖುಷಿಯಿಂದ ಪಂದ್ಯಗಳನ್ನು ವೀಕ್ಷಿಸುತ್ತಿದ್ದರಂತೆ.

ಇದನ್ನು ನೆನೆಸಿಕೊಂಡಾಗ ಮನಸ್ಸಿಗೆ ಸಂಕಟವಾಗುತ್ತದೆ. ಇಂಥ ಮೃಗೀಯ ವಿನೋದ ಪ್ರಪಂಚದ ಎಲ್ಲ ಕಡೆಗಳಲ್ಲಿ ಬಡವರು ಬಲ್ಲಿದ ಮಧ್ಯೆಯೆ ನಡೆಯುತ್ತಿತ್ತು ಎಂಬುದಕ್ಕೆ ಕೊಲೋಸಿಯಂ ಭವ್ಯ ನಿದರ್ಶನ ಇಟಲಿ. ಇಟಾಲಿಯನ್ನರು ಭಾರತೀಯರಂತೆಯೇ ಸಾಧಾರಣ ಎತ್ತರ ಮತ್ತು ಸಾಧಾರಣ ಗಾತ್ರದವರು ದೇಹದ ಬಣ್ಣ ಗೋದಿ ಕೆಂಪು ಮುಖದ ಮಾಟ ಮಾತ್ರ ತುಂಬಾ ಚೆಲುವು. ಹೆಂಗಸರಂತೂ ಪ್ರಪಂಚದಲ್ಲೇ ಅತ್ಯಂತ ಸುಂದರಿಯರು ಇಂಥ ರೂಪದರ್ಶಿಗಳ ನೆರವಿನಿಂದಲೇ ಮೈಕೆಲೇಂಜೆಲೋ ಮತ್ತು ರಾಫೆಲನಂತಹವರು ಜಗತ್ನಸಿದ್ಧ ಕೆತ್ತನೆಗಳನ್ನು ಚಿತ್ರಗಳನ್ನು ರಚಿಸಿದರು. ಇವರು ವಿನೋದಪ್ರಿಯರು ಮತ್ತು ಸಾಹಸಪ್ರಿಯರು.

ಈಗಲೂ ಅಲ್ಲಲ್ಲಿ ಚಿತ್ರಗಳನ್ನು ಬಿಡಿಸುವ ಕಲಾವಿದರಿದ್ದಾರೆ. ಅಲ್ಲಲ್ಲಿ ಕೆಲವರು ಕಲಾಕಾರರ ಎದುರಿಗೆ ಕುಳಿತು. ಇಲ್ಲವೆ ನಿಂತು ತಮ್ಮ ಚಿತ್ರಗಳನ್ನು ಚಿತ್ರಿಸಿಕೊಳ್ಳುವ (ಬಿಡಿಸಿಕೊಳ್ಳುವ) ದೃಶ್ಯವನ್ನು ನಾವು ನಾನಾ ಕಡೆ ಕಂಡೆವು.

ನಮಗೆ 15 ದಿನ ಪ್ರವಾಸದಲ್ಲಿ ಎಲ್ಲ ಕಡೆಯಲ್ಲೂ Star Tour ನವರು ಭಾರತೀಯ ಊಟವನ್ನು ವ್ಯವಸ್ಥೆ ಮಾಡಿದ್ದರು. ಸಾಮಾನ್ಯವಾಗಿ ಎಲ್ಲ ಕಡೆಯಲ್ಲೂ ಭಾರತೀಯರ ಹೋಟೆಲುಗಳಿದ್ದವು. ಆದರೆ ಇಟಲಿಯಲ್ಲಿ ಮಾತ್ರ ನಮಗೆ ಭಾರತೀಯ ಊಟ ಸಿಗಲಿಲ್ಲ. ಅದಕ್ಕಾಗಿ ನಾವು ಇಟಲಿಯ ಪಿಜ್ಜಾ ಪಾಸ್ತಾ ಮತ್ತು ಸ್ಥಗೆಟ್ಟಿ ಎಂಬ ಇಟಲಿಯನ್ ಆಹಾರವನ್ನು ತಿನ್ನಬೇಕಾಯಿತು.

ಚಕ್ರವರ್ತಿಗಳು ಮತ್ತು ಫ್ಯಾಸಿಸ್ಟ್ ಸರ್ವಾಧಿಕಾರಿ ಮುಸೋಲಿನಿ ಆಳಿದ ಇಟಲಿಯಲ್ಲಿ ಪ್ರಜಾಪ್ರಭುತ್ವವಿರುವುದೊಂದು ವಿಶೇಷ.

ವೆನಿಸ್:

ವೆನಿಸ್ ನಗರ ಅತೀ ಪ್ರಾಚೀನ ಕಾಲದಿಂದಲೂ ಕವಿಗಳಿಗೆ ಹಾಗೂ ಕಲಾವಿದರಿಗೆ ಸ್ಫೂರ್ತಿಯ ನೆಲೆಯಾಗಿದೆ. ಗೊಂಡಾಲಾ ಎಂದು ಕರೆಯಲಾಗುವ ದೋಣಿಯಾಕಾರದ ತೇಲುವಾಹನದಲ್ಲಿ ಕೂತು ಪ್ರಯಾಣ ಮಾಡಿದರೆ ಈ ನಗರದ ಅದ್ಭುತವಾದ ವಾಸ್ತು ಸೌಂದರ್ಯದ ಪರಿಚಯವನ್ನು ಮಾಡಿಕೊಳ್ಳಬಹುದು. ಎತ್ತರವಾದ ಕಟ್ಟಡಗಳು ಗೋಪುರಗಳನ್ನು ಕಾಣಬಹುದು. ಈ ನಗರ ಒಂದು ಕಾಲಕ್ಕೆ ಜಗತ್ಪಸಿದ್ಧ ವ್ಯಾಪಾರ ಕೇಂದ್ರವಾಗಿತ್ತು ಎಂದು ನಾವು ಇತಿಹಾಸ ಓದುವಾಗ ಕೇಳಿದ ನೆನಪು ಮಹಾಕವಿ ಗಯಟೆ ಈ ನಗರವನ್ನು ಉದಯಾಸ್ತಮಾನಗಳ ನಾಡುಗಳ ಮಾರುಕಟ್ಟೆ ಎಂದು ವರ್ಣಿಸಿದ್ದಾನೆ. ಮಹಾ ಪ್ರವಾಸಿಯಾದ ಮಾರ್ಕೋಪೋಲೋ ಪೂರ್ವ ದೇಶಗಳ ತನ್ನ ಕಡಲ ಪ್ರವಾಸವನ್ನು ಮುಗಿಸಿ ಹಿಂತಿರುಗುವ ಹೊತ್ತಿನಲ್ಲಿ ಒಂದು ಮುಂಜಾನೆಯ ಹೊಂಬೆಳಕಿನಲ್ಲಿ ಈ ನಗರದ ಚೆಲುವನ್ನು ವೀಕ್ಷಿಸಿ ವೆನಿಸ್ ಒಂದು ಮಾಯಾನಗರ ಎಂದು ಉದ್ಗಾರವೆತ್ತಿದನಂತೆ. ಇಂಥ ನಗರವನ್ನು ಕಣ್ಣಾರೆ ನೋಡಿದ ಆನಂದ ನನಗಿದೆ. ಅಲ್ಲಿಂದ ಮುಂದೆ, ನಾವು ಸೇಂಟ್ ಮಾರ್ಕ್ಸ್ ಚೌಕಕ್ಕೆ ಬಂದೆವು. ಆ ಬೃಹತ್ ವಿಸ್ತಾರದ ಚೌಕದಲ್ಲಿ ಸಾವಿರಾರು ಜನ, ಆ ಜನರ ನಡುವೆ ಅಸಂಖ್ಯ ಪಾರಿವಾಳಗಳು ಆ ಚೌಕದ ಬದಿಗೆ ಅತ್ಯಂತ ಎತ್ತರವಾದ ಗಡಿಯಾರ ಗೋಪುರವಿದ್ದ ಕಂಬ. ಒಂದು ಕಡೆ ಸೆಂಟ್ ಮಾರ್ಕ್‌ನ ಅತಿ ದೊಡ್ಡ ಚರ್ಚ್ ಇದರ ಒಳಗಡೆ ಪ್ರಾಚೀನ ಕಾಲದ ತೈಲಚಿತ್ರಗಳು. ಇದನ್ನು ನೋಡಲು ದೊಡ್ಡದಾದ ಕ್ಯೂ, ಈ ಚರ್ಚನ್ನು ಒಳಗೊಂಡಂತೆ ಈ ಚೌಕದ ನಾಲ್ಕು ದಿಕ್ಕಿಗೂ ಎತ್ತರವಾದ ಸೊಗಸಾದ ಶಿಲ್ಪ ವೈವಿಧ್ಯವನ್ನು ಪ್ರಕಟಿಸುವ ಕಟ್ಟಡಗಳ ಸಾಲು ಈ ಚೌಕದ ತುಂಬ ಗಿಜಿಗುಟ್ಟುವ ಜನಸಂದಣಿ, ಇಲ್ಲಿ ಸಾಲು ಅಂಗಡಿಗಳಿಗೆ ಉಪಹಾರ ಗೃಹಗಳಿವೆ. ಆ ನಡುವೆ ವೇದಿಕೆಯೊಂದರ ಮೇಲೆ ಬಗೆಬಗೆಯ ವಾದ್ಯಗಳನ್ನು ನುಡಿಸುವ ವಾದ್ಯಗಾರರು. ಇಂಥ ವಾದ್ಯಗಾರರ ಹಲವು ತಂಡಗಳ ಸುಸ್ವರಗಳೆಂದ ನಾದಮಯವಾಗಿ ಹಾಡುವ ಹಾಡುಗಾರರು, ನಾವು ಸಂಜೆಯ ತನಕ ಆ ಚೌಕದ ವಾಸ್ತು ವೈಭವವನ್ನು ನೋಡಿದೆವು. ಬಹು ಬಗೆಬಗೆಯ ವಸ್ತುಗಳನ್ನು ಹೆಗಲಿನಲ್ಲಿ ತೂಗು ಹಾಕಿಕೊಂಡು ಚೌಕಾಶಿ ವ್ಯಾಪಾರದಲ್ಲಿ ತೊಡಗಿದ ಕಪ್ಪು ಜನರನ್ನು ಚೌಕದ ಸುತ್ತಲೂ ಉದ್ದಗಲಕ್ಕೂ ಕಿಕ್ಕಿರಿದ ವಿವಿಧ ದೇಶಗಳ ಪ್ರವಾಸಿಗರನ್ನು ಎದುರಿನ ಸಮುದ್ರದಲ್ಲಿ ತೇಲುವ ದೋಣಿಗಳನ್ನು ಅದರಲ್ಲಿ ವಿಹರಿಸುವ ರಸಿಕರನ್ನು ನೋಡುತ್ತಾ ನಿಂತೆವು.

ವಿದೇಶಗಳಲ್ಲೂ ಭಾರತದಂತೆ ತುಂಬಾ ಚೌಕಾಶಿ ವ್ಯಾಪಾರ ನಡೆಯುತ್ತಿದೆ. ಐದು ಯುರೋ ಸಿಗುವ ಸಾಮಾನನ್ನು ಮೊದಲು ಅವರು ನಮಗೆ 15 ರಿಂದ 20 ಯುರೋ ಎಂದು ಹೇಳುತ್ತಾರೆ. ಮುಂದೆ ಚೌಕಾಶಿ ಮಾಡುವವರು ಕೆಲವರಿಗೆ ಅದು 15ಕ್ಕೂ 10ಕ್ಕೂ ಇಲ್ಲ 5 ಯುರೋಕ್ಕೆ ಸಿಗಬಹುದು. ಚೌಕಾಸಿ ಮಾಡುವವರ ರೀತಿಯನ್ನು ಅವಲಂಬಿಸಿದೆ.

ಪೀಸಾ ಗೋಪುರ

ಮುಂದೆ ನಾವು ಕೂತ ಬಸ್ಸು ಪೀಸಾ ನಗರವನ್ನು ಪ್ರವೇಶಿಸಿತು. ಒಂದು ದೊಡ್ಡ ಪ್ರಾಕಾರವನ್ನು ದಾಟಿ ಮುಂದೆ ನಡೆದೊಡನೆಯೇ ಪೀಸಾದ ವಾಲಿಕೊಂಡ ಗೋಪುರವೊಂದು ಕಾಣುತ್ತದೆ. ಈ ಊರಿನ ವಿಶೇಷವೇ ಇದು. ವಿಸ್ತಾರವಾದ ಬಯಲ ನಡುವೆ ದೊಡ್ಡ ಚರ್ಚೊಂದರ ಎದುರಿಗೆ ಸಣ್ಣ ಸಣ್ಣ ಕಂಬಗಳನ್ನುಳ್ಳ ವೃತ್ತಾಕಾರದ ಆರು ಹಂತಗಳನ್ನುಳ್ಳ ಒಂದು ನೂರಾ ಎಂಬತ್ತು ಅಂಕಿಗಳೆತ್ತರದ ಗೋಪುರವೊಂದು ವಾಸ್ತುವಿನ ಚಾತುರ್ಯವನ್ನು ಪ್ರದರ್ಶಿಸಲೆಂಬಂತೆ ವಾಲಿಕೊಂಡು ನಿಂತುಕೊಂಡಿದೆ. ಇದರ ಅಡಿಪಾಯ ಕೊಂಚ ಕೊಂಚವೇ ಸಡಿಲವಾಗುತ್ತ ಕಾಲಕ್ರಮದಲ್ಲಿ ಇಡೀ ಗೋಪುರವೇ ಕುಸಿದುಬೀಳುವ ಕಾಲ ದೂರವಿಲ್ಲವೆಂದು ಹೇಳುತ್ತಾರೆ. ಈ ವಾಲು ಗೋಪುರದ ತುದಿಯನ್ನೇ. 2. ಗೆಲಿಲಿಯೋ ಬೇರೆ ಬೇರೆ ತೂಕದ ಎರಡು ವಸ್ತುಗಳನ್ನು ಕೆಳಗೆ ಬಿಟ್ಟನೆಂದು ಅವೆರಡು ಏಕಕಾಲಕ್ಕೆ ನೆಲಕ್ಕೆ ಬಿದ್ದು ಹೆಚ್ಚು ತೂಕದ ವಸ್ತು ಅದಕ್ಕಿಂತ ಕಡಿಮೆ ತೂಕದ ವಸ್ತುವಿಗಿಂತ ವೇಗದಲ್ಲಿ ಹಾಗೂ ಕಡಿಮೆ ತೂಕದ ವಸ್ತು ನಿಧಾನರಾದಿ ಕಾಲದಲ್ಲಿ ನೆಲಕ್ಕೆ ಬೀಳುತ್ತದೆ ಎಂಬ ಅರಿಸ್ಟಾಟಲ್‌ನ ಸಿದ್ಧಾಂತವನ್ನು ಈ ಪ್ರಯೋಗ ಸುಳ್ಳಾಗಿಸಿತ್ತೆಂದೂ ದಂತ ಕತೆಯೊಂದು ಪ್ರಚಲಿತವಾಗಿದೆ. ಆದರೆ ಅರಿಸ್ಟಾಟಲನ ಕಾಲದ ಚಲನ ಸಿದ್ಧಾಂತವನ್ನು ಗೆಲಿಲಿಯೋ ತನ್ನ ಪ್ರಯೋಗ ಪರೀಕ್ಷೆಗಳಿಂದ ನಿರಾಕರಿಸಿದ್ದಂತೂ ನಿಜ.

ಆ ಕಾಲಕ್ಕೆ ಪಿಸಾನರು ಅಂತಸ್ತುಗಳ ಮೇಲೆ ಅಂತಸ್ತುಗಳಂತೆ ತಮ್ಮ ಮೋಹಕ ಗೋಪುರ ಕಟ್ಟಿಸಿದ್ದರು. ಅದು ಮುಕ್ತಾಯಕ್ಕೆ ಮುನ್ನವೇ ವಾಲಿತ್ತಂತೆ ಅದನ್ನು ಕಂಡ ಫ್ಲಾರೆನ್ಸಿನ ರಾಜ ನಮ್ಮೂರಲ್ಲೂ ಒಂದು ಗೋಪುರ ನಿರ್ಮಾಣವಾಗಬೇಕು. ಇದು ಎತ್ತರದಲ್ಲೂ ಸೌಂದರ್ಯದಲ್ಲೂ ಶ್ರೇಷ್ಠತೆಯಲ್ಲೂ ಇದಕ್ಕಿಂತ ಮೀರಿಸಬೇಕು ಎಂದು ಫ್ಲಾರೆನ್ಸಿನಲ್ಲಿ ಗಯೋಟೋ ಗೋಪುರ ಕಟ್ಟಿಸಿದನೆಂದು ಒಂದು ಕತೆಯಿದೆ. ಪೀಸಾ ಗೋಪುರದ ಹತ್ತಿರ ಒಂದು ದೊಡ್ಡ ಚರ್ಚ್ ಇದೆ. ಅಲ್ಲಿಗೆ ಬಂದ ಪ್ರವಾಸಿಗರು ಅನೇಕರು ಅಲ್ಲಿ ಹೋಗಿ ಪ್ರಾರ್ಥನೆ ಮಾಡುತ್ತಾರೆ. ನಾವು ಸಹ ಅಲ್ಲಿ ಹೋಗಿ ಸ್ವಲ್ಪ ಹೊತ್ತು ಕುಳಿತು ಪ್ರಾರ್ಥನೆ ಮಾಡಿ ಬಂದೆವು.

ಈ ವಾಲುಗೋಪುರದ ಸುತ್ತ ಅನೇಕ ವಸ್ತುಗಳು ಬ್ಯಾಗು ಪರ್ಸ್ ಟೋಪಿ ಹೀಗೆ ಅನೇಕ ವಸ್ತುಗಳ ಅಂಗಡಿಗಳಿವೆ. ಸದಾ ಪ್ರವಾಸಿಗಳಿಂದ ಕಿಕ್ಕಿರಿದಿರುತ್ತದೆ.

By-ಶಾಲಿನಿ ಗಾಂವಕರ್

ಮುಂದಿನ ಭಾಗ ಓದಿ…

Leave a Comment

Comments

No comments yet. Why don’t you start the discussion?

    Leave a Reply