ನಮ್ಮ ಯೂರೋಪ್ ಪ್ರವಾಸ ಪ್ರಾರಂಭ

ಆಗಸ್ಟ್ 1ಕ್ಕೆ ನಮ್ಮ ಯೂರೋಪ್ ಪ್ರವಾಸ ಪ್ರಾರಂಭವಾಯಿತು. ನಾನು ಈ ಸಲ ಪ್ರವಾಸದ ತಯಾರಿ ಚೆನ್ನಾಗಿಯೇ ಮಾಡಿಕೊಂಡಿದ್ದೆ. ಹಸಿವಾದಾಗ ತಿನ್ನಲು ಕುರುಕಲು ತಿಂಡಿ ಚಕ್ಕುಲಿ, ಅವಲಕ್ಕಿ, ಬೇಸನ್ ಉಂಡೆ ಎಲ್ಲವನ್ನು ತೆಗೆದುಕೊಂಡಿದ್ದೆ.
ಸ್ವಿಸರ್‌ಲೆಂಡ್ ತಂಪು ಪ್ರದೇಶವೆಂದು ಉಣ್ಣೆಯ ದಪ್ಪ ದಪ್ಪ ಸೈಟರ್ ಕೆಮ್ಮು ಕಫದ ಔಷಧಿ, ಥರ್ಮಸ್ ಫ್ಲಾಸ್ಕ್ ಎಲ್ಲ ಇಟ್ಟುಕೊಂಡಿದ್ದೆ. ತಯಾರಿ ಏನೋ ಜೋರಾಗಿಯೇ ಇತ್ತು. ಪರಿಚಯದವರೆಲ್ಲ ನಮ್ಮ 15 ದಿನದ ಪ್ರವಾಸಕ್ಕೆ ಫೋನ್ ಮಾಡಿ ಶುಭ
ಹಾರೈಸುತ್ತಿದ್ದರು. ನನಗಂತೂ ಖುಷಿಯಾಗುತ್ತಿತ್ತು. ಆದರೂ ಮನದ ಯಾವುದೋ ಮೂಲೆಯಲ್ಲಿ ಭಯವಿತ್ತು. ಮೊದಲೇ ಇವರು ಹಾರ್ಟ್ ಪೇಶಂಟ್ ಏನಾದರೂ ತೊಂದರೆ ಆದರೆ ಏನು ಮಾಡುವುದು ಎಂದು. ಆದರೂ ದೇವರ ಮೇಲೆ ಭಾರ ಹಾಕಿ ಬೆಳಿಗ್ಗೆ ರೆಡಿಯಾದೆವು. ಅಳಿಯ ನಮ್ಮ ಬಸ್ಸು ಹೊರಡುವ ಜಾಗ ವೆಮ್ಲ ಎನ್ನುವಲ್ಲಿ ನಮ್ಮನ್ನು ಬಿಟ್ಟನು. ಇನ್ನು ನಮ್ಮ ಬಸ್ ಬಂದಿರಲಿಲ್ಲ. ಹೀಗಾಗಿ ನಾವು ಆ ಚಳಿಯಲ್ಲಿ ನಡುಗುತ್ತಾ ಕಾಯುತ್ತಿದ್ದೆವು. ಸುಮಾರು ಅರ್ಧ ತಾಸಿನ ಮೇಲೆ ನಮ್ಮ ಬಸ್ಸು ಬಂತು. ಉಳಿದ ಪ್ರವಾಸಿಗಳು ನಮಗಿಂತ ಏಳು ದಿನ ಮೊದಲೇ ಪ್ರವಾಸ ಆರಂಭಿಸಿದ್ದರು. ಅವರು ಸ್ಕಾಟ್‌ಲೆಂಡ್ ಮತ್ತು ಲಂಡನ್ ಪ್ರವಾಸ ಮುಗಿಸಿದ್ದರು. ಆಮೇಲೆ ನಾವು ಅವರ ಜೊತೆ ಸೇರಿಕೊಂಡಿದ್ದರಿಂದ ಬಸ್ಸು ಮೊದಲು ಅವರೆಲ್ಲರ ಹೊಟೇಲಿನ ಹತ್ತಿರ ಹೋಗಿ ಅವರನ್ನು ಬಸ್ಸಿನಲ್ಲಿ ಕೂಡ್ರಿಸಿಕೊಂಡು ಕೊನೆಯಲ್ಲಿ ನಮ್ಮನ್ನು ಸೇರಿಕೊಂಡರು. ನಮ್ಮ ಜೊತೆ ಇನ್ನೂ ಮದ್ರಾಸಿನವರು, ಬಾಂಬೆಯವರು ಸುಮಾರು 8-10 ಜನ ಇದ್ದರು. ನಾವೆಲ್ಲರೂ ನಮ್ಮ ಬ್ಯಾಗುಗಳನ್ನು ಬಸ್ಸಲ್ಲಿ ಇರಿಸಿ ನಮ್ಮ ಸೀಟಿನಲ್ಲಿ ಕುಳಿತುಕೊಂಡೆವು.
ಬಸ್ ಪೂರ್ತಿ ಪ್ಯಾಕ್ ಆಗಿತ್ತು. ಸುಮಾರು 50 ರಿಂದ 52 ಜನ ಇದ್ದಿರಬೇಕು. ಬಸ್ಸು ಹೊರಡುವ ಸಮಯಕ್ಕೆ ನಮ್ಮ ಡ್ರೈವರು ಮತ್ತು ಗೈಡ್ ನೀರಜ ಬಂದು ನಮ್ಮ ಪರಿಚಯ ಮಾಡಿಕೊಂಡರು. ಮತ್ತು ನಮ್ಮೆಲ್ಲರ ಹೆಸರು ಮತ್ತು ಯಾವ ಊರಿನಿಂದ ಬಂದವರು ಎಂದು ತಿಳಿಸಿಕೊಡಲು ಹೇಳಿದರು. ಅದರಂತೆ ಎಲ್ಲರೂ ತಮ್ಮ ಪರಿಚಯವನ್ನು ಮಾಡಿಕೊಂಡರು. ನಾವಿನ್ನೂ ಗೊಂದಲದಲ್ಲೇ ಇದ್ದೆವು. ನನ್ನ ಕಫ ಇನ್ನೂ ಕಡಿಮೆ ಆಗಿರಲಿಲ್ಲ. ಕಲ್ಲುಸಕ್ಕರೆ ಒಣಶುಂಠಿ ಬಿಸಿನೀರು ಸೇವಿಸುವುದರಲ್ಲೇ ಉಳಿದಿದ್ದೆ.
ಅಂತೂ ಬಸ್ಸು ಸ್ಟಾರ್ಟ್ ಆಗಿ ಫ್ರಾನ್ಸ್ ಕಡೆ ಹೊರಟಿತ್ತು. ಮುಂಜಾನೆಯ ಬೆಳಕಿನಲ್ಲಿ ಲಂಡನ್ ನಗರ ನೋಡುವುದೇ ಒಂದು ಸುಂದರ ಅನುಭವ. ಬಸ್ಸು ಲಂಡನ್ ನಗರ ವನ್ನು ದಾಟಿ ಮುಂದಕ್ಕೆ ಹೋಗುತ್ತಿತ್ತು. ನಾನಂತೂ ಕಿಡಕಿಯ ಪಕ್ಕ ಕುಳಿತು ಅತ್ತ ಇತ್ತ ನೋಡುತ್ತ ಇಂಗ್ಲೆಂಡಿನ ಬೆಳಗಿನ ಜಾವದ ಸೊಬಗನ್ನು ಸವಿಯುತ್ತಿದ್ದೆ. ಬಸ್ಸು ಫ್ರಾನ್ಸಿನ ಕಡೆಗೆ ವೇಗವಾಗಿ ಹೋಗುತ್ತಿತ್ತು. ನಾವು ಅತಿ ಉದ್ದವಾದ ಇಂಗ್ಲಿಷ್ ಕಡಲ್ಗಾಲುವೆಯನ್ನು ದಾಟಿ ಹೋಗಬೇಕಾಗಿತ್ತು.
ಈ ಇಂಗ್ಲಿಷ್ ಕಡಲ್ಗಾಲುವೆಯನ್ನು ಕ್ರೂಸ್ ಲಾಂಚ್‌ನಲ್ಲಿ ಕುಳಿತು ದಾಟಬಹುದು ಮತ್ತು ನೀರಿನ ಒಳಗಡೆಯಿಂದ ಹೋಗುವ ಟ್ಯೂಬ್ ಟ್ರೇನಿನಲ್ಲೂ ಸಹ ದಾಟಬಹುದಂತೆ. ಇದು ತುಂಬಾ ಮಜವಾಗಿರುತ್ತದೆಯಂತೆ. ಆದರೆ ನಾವು ಈ ಛಾನ್ಸನ್ನು ಮಿಸ್ ಮಾಡಿಕೊಂಡೆವು.

ಲಂಡನ್ ದಾಟಿ ಫ್ರಾನ್ಸಿನ ಕೆಲೆಯನ್ನು ತಲುಪಬೇಕಿತ್ತು. ಬಸ್ಸು ಹೊರಟ 20 ನಿಮಿಷಗಳಲ್ಲಿ ಒಂದೆಡೆ ನಮ್ಮ ಪಾಸ್‌ಪೋರ್ಟ್‌ಗಳನ್ನು ತಪಾಸಣೆ ಮಾಡಿ ಕಛೇರಿಯಲ್ಲಿ ಮುದ್ರೆ ಒತ್ತಿಸಿಕೊಂಡು ಯುರೋಪ್ ದೇಶವನ್ನು ಪ್ರವೇಶಿಸುವ ಅನುಮತಿ ಪಡೆದುಕೊಂಡು ಮುಂದೆ ಹೋದೆವು. ಮುಂದೆ ನಾವು ಬೃಹತ್ ಆಕಾರದ ಕ್ರೂಸ್ ಲಾಂಚ್‌ನಲ್ಲಿ ಕುಳಿತು ಸುಮಾರು 30 ನಿಮಿಷ ಕಳೆಯಬೇಕಿತ್ತು. ಅದು ತುಂಬಾ ವಿಶಾಲವಾಗಿತ್ತು.ಅಲ್ಲಿ ದೊಡ್ಡದಾದ ವ್ಯಾಪಾರಿ ಸಂಕೀರ್ಣವಿತ್ತು. ಇದೊಂದು ತೆರಿಗೆ ಮುಕ್ತ ವಾಣಿಜ್ಯ ಸಂಕೀರ್ಣ. ಅಲ್ಲಿ ಬೇಕಾದವರು ಬೇಕಾದ ವ್ಯಾಪಾರ ಮಾಡಬಹುದಿತ್ತು. ಎಲ್ಲ ಪ್ರಯಾಣಿಕರು ಸಂಭ್ರಮದಿಂದ ಇಳಿದರು. ನಾವು ಇಳಿದು ನಾವು ತಂದಿದ್ದ ಬ್ರೆಡ್ಡು ಬಿಸ್ಕತ್ತು ತಿಂದೆವು. ಯಜಮಾನರು ಕಾಫಿ ಕುಡಿದರು. ಅಷ್ಟಗಲ ಕಡಲ ಮೇಲೆ ತೇಲಿ ದಾಟುವ ಅನುಭವ ತುಂಬಾ ರೋಮಾಂಚನಕಾರಿಯಾಗಿತ್ತು. ನಮ್ಮ ಪರಿಚಯದವರಾರು ಅಲ್ಲಿ ಇಲ್ಲದ್ದರಿಂದ ನಮಗೆ ನಾವು ಒಂಟಿ ಎಂಬ ಭಾವನೆ ಬಂತು. ಇಬ್ಬರೂ ಅಲ್ಲಿ ಇಲ್ಲಿ ಅಡ್ಡಾಡುತ್ತಾ ಬಾತ್ ರೂಮಿಗೆ ಹೋಗಿ ಬಂದೆವು. ಒಂದು ಕಡೆ ಇಬ್ಬರೇ ಕುಳಿತು ಕಡಲ ಮೇಲೆ ಕೂತು ಕಡಲ್ಗಾಲುವೆಯನ್ನು ನೋಡುತ್ತಾ ಪಯಣ ಮಾಡುವುದು ಅದ್ಭುತ ಮತ್ತು ರೋಮಾಂಚಕ ಅನುಭವವಾಗಿತ್ತು. ಅಂತೂ ಆಚೆಯ ದಡ ಸೇರಿದೆವು.
ನಮ್ಮ ಬಸ್ಸಿನವರೆಲ್ಲ ನಮ್ಮ ಬಸ್ಸಿದ್ದಲ್ಲಿಗೆ ಹೋಗಲು ಲಿಫ್ಟ್‌ನಲ್ಲಿ ಕಾಯುತ್ತಾ ಇರುವಾಗ ನಮ್ಮೂರಿನವರೇ ಆದ ಈಗ ಹುಬ್ಬಳ್ಳಿಯಲ್ಲಿ ಡಾಕ್ಟರ್‌ರಾಗಿರುವ ಗಣೇಶ ಕಿಣಿಯವರನ್ನು ಕಂಡೆವು. ಇವರು ಅವರೇ ಹೌದೋ ಅಲ್ಲವೋ ಎಂದು ಅನುಮಾನಿಸುತ್ತಾ ಹೋಗಿ ಅವರನ್ನು ಮಾತಾಡಿಸಿದರು. ನೋಡಿದರೆ ಹುಬ್ಬಳ್ಳಿಯಿಂದ KMC ಯಲ್ಲಿ 1979 ನಲ್ಲಿ ಓದಿದ ಡಾಕ್ಟರ್ ಗೆಳೆಯರ ತಂಡ ತಮ್ಮ ಸಂಸಾರ ಸಮೇತ ಯುರೋಪ್ ಟೂರ್ ಬಂದಿದ್ದರು. ಗಣೇಶ ಕಿಣಿ ಮತ್ತು ಅವರ ಹೆಂಡತಿ ನಮಗೆ ಈ ಮೊದಲೇ ಅಮೇರಿಕಾದ ಚಿಕಾಗೋ ಪ್ರವಾಸದಲ್ಲಿ ಭೆಟ್ಟಿಯಾಗಿದ್ದರು. ಅವರು ಸೇರಿದಂತೆ 12 ಪರಿಣಿತರಾದ ಡಾಕ್ಟರರ ತಂಡವೇ ಅಲ್ಲಿತ್ತು. ಅದರ ಜೊತೆ ಅವರ ಹೆಂಡತಿ ಮಕ್ಕಳು ಮತ್ತು ಮಂಗಳೂರಿನ ಕನ್ನಡದವರೇ ಆದ ದಂಪತಿಗಳಿಬ್ಬರು ಇದ್ದರು. ಒಟ್ಟು 52 ಜನರಲ್ಲಿ 40 ಜನ ಕನ್ನಡದವರಿದ್ದವರು. ನನಗಂತೂ ನಾವು ಕರ್ನಾಟಕದಲ್ಲಿಯೇ ಇದ್ದಂತೆ ಭಾಸವಾಯಿತು. ಏನಾದರೂ ಸಧ್ಯ ತೊಂದರೆ ಇಲ್ಲ ಎಂದು ಮನಸ್ಸು ನಿರಾಳವಾಯಿತು. ಬೆಳ್ಳಿಯಂ ನಾವು ಕೆಲೆಯನ್ನು ದಾಟಿ ಬೆಲ್ಟಿಯಂ ಕಡೆ ಪ್ರವಾಸ ಹೊರಟೆವು.
ಬೆಲ್ಜಿಯಂ
ಮೊದಲ ದೇಶ ಬೆಲ್ಜಿಯಂ ನಾನು ಯೂರೋಪಿಯನ್ ದೇಶಗಳನ್ನು ನೋಡಿ ತುಂಬಾ ಉತ್ಸುಕಳಾಗಿದ್ದೆ. ದೇಶ ನೋಡು ಕೋಶ ಓದು ಎನ್ನುವ ನಾಣ್ಣುಡಿಯಲ್ಲಿ ನಂಬಿಕೆ ಇಟ್ಟವಳು. ನಾನು ಕೆಲವೊಮ್ಮೆ ಕೋಶದಲ್ಲಿ ಓದಿದ ವಿಷಯಗಳನ್ನು ಮರೆಯಬಹುದು. ಆದರೆ ನೋಡಿದ ವಿಷಯಗಳನ್ನು ಮರೆಯುವುದು ಅತಿ ವಿರಳ. ಯೂರೋಪಿಯನ್ ಒಕ್ಕೂಟದ ಕೇಂದ್ರ ಸ್ಥಾನ ಬೆಲ್ಜಿಯಂ, ಯುರೋಪ್ ಖಂಡದ ಪಶ್ಚಿಮ ಭಾಗದಲ್ಲಿ ಅಟ್ಲಾಂಟಿಕ್ ಮಹಾಸಾಗರದ ತಟದಲ್ಲಿ ಇರುವ ಪುಟ್ಟ ದೇಶ. ಬೆಲ್ಜಿಯಂ ದೇಶದ ಸೊಗಸೆಂದರೆ ಇಲ್ಲಿರುವ ಮೂರು ವಿಧದ ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಡಚ್ ಭಾಷೆ ಮಾತನಾಡುವ ಜನರು ಫ್ರೆಂಚ್ ಡಚ್ ಭಾಷೆ ಮಾತನಾಡುವ ಫ್ರೆಂಚ್ ಜನರು ಹಾಗೂ ಜರ್ಮನ್ ಭಾಷೆ ಮಾತನಾಡುವ ಜರ್ಮನ್ನರು, ಇದೇ ರೀತಿ ಈ ದೇಶದಲ್ಲಿ ಮೂರು ವಿವಿಧ ಪ್ರಾಂತಗಳಿವೆ. ಹಲವಾರು ಭಾಷೆಗಳನ್ನು ಮಾತನಾಡುವ ಜನ ರಾಜಧಾನಿ ಬ್ರಸೆಲ್ಸ್ನಲ್ಲಿದ್ದಾರೆ. ಈ ದೇಶದ ವಿಶೇಷತೆ ಎಂದರೆ ಎಲ್ಲಾ ದೇಶ ಜಾತಿ, ಮತ, ವರ್ಣಗಳ ಜನರನ್ನು ಆದರಿಂದಲೇ ಬರಮಾಡಿಕೊಳ್ಳುವುದು.
ಬ್ರಸೆಲ್ಸ್ ನಗರ

ಇದು ಒಂದು ಗುಡ್ಡದ ಮೇಲೆ ಕಟ್ಟಲ್ಪಟ್ಟಿದೆ. ಈ ನಗರದ ಅತೀ ಹೆಸರಾಂತ ಆಕರ್ಷಣೆ. “ಮ್ಯಾನಿಕೇನ್ ಪಿಸ್” ಎನ್ನುವ ಪ್ರತಿಮೆ ಮಾನಿಕೇನ್ ಎಂದರೆ ಬೊಂಬೆ ಮತ್ತು ಪಿಸ್ ಎಂದರೆ ಮೂತ್ರ. ಇದು ಮೂರ್ತ ಮಾಡುವ ಸಣ್ಣ ಬಾಲಕನ ಪ್ರತಿಮೆ ಬ್ರಸೆಲ್ಸ್ ನಗರದ ಹೆಸರಾಂತ ಸಂಕೇತ ಹಾಗೂ ಅತೀ ಹೆಚ್ಚು ಜನ ನೋಡುವ ಪ್ರವಾಸಿ ಸ್ಥಳ, ಅಸಲಿಗೆ ಈ ಶಿಲ್ಪವು ಒಂದು ಸಣ್ಣ ನೀರಿನ ಕಾರಂಜಿ 1619 ರಲ್ಲಿ ಸುಮಾರು 2 ಅಡಿ ಎತ್ತರದ ಪ್ರತಿಮೆಯನ್ನು ಸ್ಥಾಪಿಸಲಾಯಿತು. “ಹೀರೋನೆಮಸ್ ಡ್ಯೂಕೇಸ್ ನಾಯ್” ಎನ್ನುವವನು ಕೆತ್ತಿದ ಕಂಚಿನ ಪ್ರತಿಮೆ ಹೇಗೆ ಸ್ಥಾಪಿತವಾಯಿತು ಎಂದು ಯಾರಿಗೂ ಗೊತ್ತಿಲ್ಲ. ಇದರ ಸುತ್ತ ನೂರಾರು ದಂತಕಥೆಗಳಿವೆ. 14ನೇ ಶತಮಾನದಲ್ಲಿ ಬ್ರಸೆಲ್ಸ್ ನಗರವನ್ನು ವಿದೇಶಿ ಸೈನಿಕರು ಸುತ್ತುವರಿದಿದ್ದರಿಂದ ಅವರು ನಗರದ ಹಲವಾರು ಕಡೆ ಸ್ಪೋಟಕಗಳನ್ನು ಇಡಬೇಕೆಂದು ಹೊಂಚು ಹಾಕುತ್ತಿದ್ದಾಗ ಪುಟ್ಟ ಬಾಲಕನೊಬ್ಬ ಅವರ ಮಾತುಗಳನ್ನು ಕೇಳಿಸಿಕೊಂಡು ಅವರು ಮುಚ್ಚಿಟ್ಟಿದ್ದ ಸ್ಫೋಟಕದ ಮೇಲೆ ಮೂತ್ರ ಮಾಡಿ ನಗರವನ್ನು ಪಾರು ಮಾಡಿದನಂತೆ. ಈ ಕಾರಣಕ್ಕಾಗಿ ಈ ಪ್ರತಿಮೆ ಮಾಡಲಾಗಿದೆ ಎಂಬ ಕತೆ ಇದೆ.
ಈ ಪ್ರತಿಮೆ ಇರುವ ಜಾಗಕ್ಕೆ ಹೋದರೆ ಘಮ ಘಮ ಎಂದು ತಿನಿಸೊಂದರ ವಾಸನೆ ಮೂಗಿಗೆ ಬಡಿಯುತ್ತದೆ. ಗೋಧಿ ಹಿಟ್ಟಿನಿಂದ ಮಾಡುವ ಈ ತಿನಿಸಿನ ಹೆಸರು ವಾಪೆಲ್ ಎಂದು. ಇದಕ್ಕೆ ಬೆಲ್ಟಿಯನ್ನರು ಹಣ್ಣುಗಳು ಚಾಕೋಲೇಟ್ ರಸ, ಹಾಲಿನ ಕೆನೆ ಹಾಕಿಕೊಂಡು ಸವಿಯುತ್ತಾರೆ.
ಈ ಪ್ರತಿಮೆಯ ಬಳಿ ಇತರದ ಹಲವಾರು ಅಂಗಡಿಗಳಿವೆ. ಬೆಲ್ಡಿಯಂ ದೇಶ, ಫ್ರೆಂಚ್ ಪ್ರೈ ತಿಂಡಿಗೆ ವಿಶ್ವ ಪ್ರಸಿದ್ಧ. ಬೆರಳುಗಳ ಆಕಾರದಲ್ಲಿ ಅಲೂಗಡ್ಡೆ ತುಂಡುಗಳನ್ನು ಕರಿದು ಮಾಡುವ ಈ ತಿನಿಸನ್ನು ಕಂಡು ಹಿಡಿದವರು ಫ್ರೆಂಚ್ ದೇಶದವರೆಂದು ಸಾಮಾನ್ಯರ ನಂಬಿಕೆ. ಮ್ಯಾನಿಕೇನ್ ಪ್ರೆಸ್‌ನಿಂದ ಸುಮಾರು 100 ಮೀಟರ್ ದೂರದಲ್ಲಿ ಒಂದು ವಿಶಾಲ ಜಾಗವಿದೆ. ಇದರ ಹೆಸರೇ ಗ್ರಾಂಡ್ ಪ್ಲೇಸ್ 223×360 ಅಡಿ ಇರುವ ಈ ಚೌಕವು ಬಸೆಲ್ ನಗರದ ಅತೀ ಹೆಸರಾಂತ ಸ್ಥಳವಾಗಿದ್ದು ಈ ಚೌಕದ ನಾಲ್ಕು ಕಡೆಗಳಲ್ಲಿ ಹಲವಾರು ಪುರಾತನ ವೈಭವಪೂರಿತ ಕಟ್ಟಡಗಳಿವೆ.

ಬೆಲ್ಜಿಯಂ ದೇಶ ಚಾಕೋಲೇಟ್‌ಗಳಿಗೆ ವಿಶ್ವದೆಲ್ಲೆಡೆ ಹೆಸರುವಾಸಿ. ಇಲ್ಲಿ ಮಾಡುವ ಪ್ರೋಲೈನ್ ಮಾದರಿಯ ಚಾಕಲೇಟ್ ಬಹಳ ಜನಪ್ರಿಯ ಪ್ರೋಲೈನ್ ಎಂದರೆ ಹೊರ ಕವಚ ಚಾಕೋಲೇಟ್‌ನಿಂದ ಮಾಡಲಾಗಿದ್ದು ಒಳಗಡೆ ಮೇಲಿಂದ ರಮ್ ವಿಸ್ಕಿ ಮಾದಕ ಪೇಯಗಳಲ್ಲದೇ ಖರ್ಜುರ, ಬಾದಾಮಿ, ಪಿಸ್ತಾ ಮುಂತಾದ ಒಣ ಹಣ್ಣುಗಳಿಂದ ಮಾಡಿರುತ್ತಾರೆ. ಈ ವಿಶ್ವವಿಖ್ಯಾತ ಚಾಖೋಲೇಟ್‌ಗಳೂ ಸಾಧಾರಣವಾಗಿ ಹೆಚ್ಚಿನ ಬೆಲೆಯುಳ್ಳವುಗಳು ನಾವು ಹೋದ ಚಾಕೋಲೇಟ್ ಫ್ಯಾಕ್ಟರಿ ಬ್ರಸೆಲ್ಸ್ ನಗರದ ಹೊರ ವಲಯದಲ್ಲಿದೆ. ಫ್ಯಾಕ್ಟರಿಯ ಹೊರ ಭಾಗದಲ್ಲಿ ವ್ಯಾಪಾರಿ ಮಳಿಗೆಗಳಿವೆ. ಅಲ್ಲಿ ಹೋದವರು ಪ್ರದರ್ಶನಕ್ಕಿಟ್ಟಿರುವ ಚಾಕೋಲೇಟ್‌ಗಳು ಸ್ಯಾಂಪಲ್ ಸವಿಯಬಹುದು. ನೀವು ನಮ್ಮ ಅಂಗಡಿಯಲ್ಲಿ ಮನಬಂದಷ್ಟು ತಿನ್ನಬಹುದು. ನಾವು ನಿಮಗೆ ಚಾರ್ಜ್ ಮಾಡುವುದಿಲ್ಲ. ಎನ್ನುತ್ತಾರೆ ಅಂಗಡಿಯವರು. ನಾವು ಅಲ್ಲಿಗೆ ಹೋದಾಗ ಅಲ್ಲಿ ಬಂದಂತ ಸ್ಥಳೀಯರು ಸ್ಯಾಂಪಲ್‌ಗಾಗಿ ಇಟ್ಟಿದ್ದ ಒಂದೋ ಎರಡೋ ಚಾಕೋಲೇಟ್‌ಗಳ ರುಚಿ ನೋಡಿ ಖರೀದಿಸಿದರೆ ನಮ್ಮ ದೇಶದ ಪ್ರವಾಸಿಗರು ಪ್ರದರ್ಶನಕ್ಕೆ ಇಟ್ಟಿದ್ದ ಚಾಕೋಲೇಟ್‌ಗಳನ್ನು ತಿಂದು ಕೆಲವರು ಅದನ್ನು ಜೇಬಿಗಿಳಿಸಿದವರು ಇದ್ದಾರೆ. ಆದರೆ ನಾವು ಊಟ ಮುಗಿಸಿ ಚಾಕೋಲೇಟ್ ಫ್ಯಾಕ್ಟರಿಗೆ ಹೋಗಿದ್ದರಿಂದ ಜಾಸ್ತಿ ತಿನ್ನಲಿಲ್ಲ ಮತ್ತು ನಾವು ಮುಂದ ಇಟಲಿ ರೋಮ್‌ಗಳಿಗೆ ಹೋಗುವವರಿದ್ದರಿಂದ ಚಾಕೋಲೇಟ್‌ಗಳು ಬಿಸಿಲಿಗೆ ಕರಗಬಹುದೆಂದು ನಾವು ಚಾಕೋಲೇಟ್ ಖರೀದಿಸಲಿಲ್ಲ. ನಾವು ಅಲ್ಲಿಯೇ ಸ್ವಲ್ಪ ದೂರದಲ್ಲಿ ಮುಂದೆ ‘ನಾವು ಅತಿ ಹೆಚ್ಚು ಪ್ರವಾಸಿಗರು ಭೆಟ್ಟಿ ಕೊಡುವ “ಅಟೋಮಿಯಮ್” ನೋಡಲು ಹೋದೆವು. ಬ್ರಸೆಲ್ಸ್ ನಗರದಲ್ಲಿ 1958 ರಲ್ಲಿ “ಏಕ್ಸ್‌ಪೋ 58 ಎನ್ನುವ ವಿಶ್ವಮಟ್ಟದ ವಸ್ತು ಪ್ರದರ್ಶನ ನಡೆಯಿತು. ಆ ಸಮಯದಲ್ಲಿ ವಸ್ತು ಪ್ರದರ್ಶನ ನಡೆಯುವಲ್ಲಿ ಯಾರೂ ಮರೆಯದಂತಹ ಕಲಾಕೃತಿಯನ್ನು ನಿರ್ಮಿಸಬೇಕೆಂದು ಮನಗಂಡ ಅಂದಿನ ಸರಕಾರ ಅಟಮ್ (ಅಣು) ಆಕಾರದ ಉಕ್ಕಿನ ದೊಡ್ಡ ಮಾದರಿಯನ್ನು ನಿರ್ಮಿಸಿ ನಿಲ್ಲಿಸಿದೆ. ಕಬ್ಬಿಣದ ಅಣುವಿನ ರೂಪವನ್ನು ಪಡೆದು 165 ಶತಕೋಟಿ ದೊಡ್ಡದು. ಮಾಡಿದಾಗ ಬಂದ ರೂಪವೇ ಆಟೋಮಿಯಮ್ ಕಲಾಕೃತಿ. ಅಂಡ್ರೆ ಮತ್ತು ಜಾನ್ ಪೋಲಾಕ್ಸ್ ಎನ್ನುವವರು ವಿನ್ಯಾಸಗೊಳಿಸಿದ್ದ ಈ ಶಿಲ್ಪಾಕೃತಿಯು 335 ಅಡಿ ಎತ್ತರವಿದೆ. ಏರಿ ಹೋಗಲು ಲಿಫ್ಟ್ ಮತ್ತು ಎಸ್ಕಲೇಟರ್‌ಗಳು ಇವೆ. ಸಾರ್ವಜನಿಕರಿಗೆ ಇಲ್ಲಿಗೆ ಪ್ರವೇಶವಿದೆ. ಇದು ಯುರೋಪ್ ರಾಜಧಾನಿಯ ಸಂಕೇತವೆಂದೂ ಪರಿಗಣಿಸಲಾಗುತ್ತದೆ. ಇದರ ಪಕ್ಷದಲ್ಲಿಯೇ ಸುಂದರವಾದ
ಉದ್ಯಾನವನವಿದೆ. ಅದರಲ್ಲಿ ಸುಂದರ ಬಣ್ಣ ಬಣ್ಣದ ಹೂವಿನ ರಾಶಿಯೇ ಇದೆ. ನೋಡಿದಷ್ಟು ಕಣ್ಣಿಗೆ ದಣಿವಾಗಲಾರದು.
ಬ್ರಸೆಲ್ಸ್‌ನ ವಾಸಿಗಳೂ ಬೆಲ್ಟಿಯಂ ನಗರದ ಇತರರಂತೆ ಸೈಕಲ್ ಸವಾರಿ ಪ್ರಿಯರು. ವಾಯುಮಾಲಿನ್ಯವನ್ನು ತಪ್ಪಿಸಲು ಇಲ್ಲಿಯ ಸರ್ಕಾರ ತನ್ನ ನಾಗರಿಕರಿಗೆ ಸೈಕಲ್ ಉಪಯೋಗ ಮಾಡಲು ಉತ್ತೇಜನ ನೀಡುತ್ತದೆ. ಇಲ್ಲಿಯ ಸರ್ಕಾರ ತನ್ನ ನಾಗರಿಕರಿಗೆ ಖರೀದಿಸಿದ್ದು ನಗರದ ಬೇರೆ ಬೇರೆ ಬಡಾವಣೆಗಳಲ್ಲಿನ ಮುಖ್ಯ ರಸ್ತೆಗಳಲ್ಲಿ ಸೈಕಲ್ ಸ್ಟ್ಯಾಂಡ್ ಮಾಡಿದೆ. ಯಾವುದೇ ನಾಗರಿಕನೂ ನಿರ್ದಿಷ್ಟ ಶುಲ್ಕ ನೀಡಿ ಬೇಕಾದ ಅವಧಿಗೆ ಸೈಕಲ್ ಓಡಿಸಲು ಪರವಾನಗಿ ಪಡೆಯಬಹುದು. ಕ್ರೆಡಿಟ್ ಕಾರ್ಡ್ ಮಾದರಿಯಲ್ಲಿರುವ ಈ ಪರವಾನಿಗೆ ಪತ್ರವನ್ನು ಸೈಕಲ್ ನಿಲ್ದಾಣದಲ್ಲಿರುವ ಯಂತ್ರದಲ್ಲಿ ಹಾಕಿದರೆ ಸೈಕಲ್ ತಾನೇ ಹೊರಗೆ ಬರುತ್ತದೆ. ಸೈಕಲನ್ನು ತೆಗೆದುಕೊಂಡು ಬೇಕಾದಲ್ಲಿ ಉಪಯೋಗಿಸಿ ನಗರದಲ್ಲಿ ಸೈಕಲ್ ಹಿಂದಿರುಗಿಸಬಹುದು.
ಬ್ರಸೆಲ್ಸ್‌ನಿಂದ 13 ಕಿ.ಮೀ. ದೂರದಲ್ಲಿ ವಾಟರ್‌ಲೂ ಇದೆ. ಈ ವಾಟರ್‌ಲೂ ಕದನದಲ್ಲಿ ದೊರೆ ನೆಪೋಲಿಯನ್ ಬೋನೋಪಾರ್ಟೆ ಹೀನಾಯವಾಗಿ ಸೋಲನ್ನು ಅನುಭವಿಸಿದ ಕದನದ ಜಾಗ. ಒಟ್ಟಿನಲ್ಲಿ ಬೆಳ್ಳಿಯಂ ಪುಟ್ಟ ದೇಶವಾದರೂ ಹಲವು ಹತ್ತು ಕಾರಣಗಳಿಗಾಗಿ ಪ್ರಾಮುಖ್ಯತೆಯನ್ನು ಪಡೆದಿದೆ. ಅಲ್ಲಿ ನಾನು ಹರಳಿನ ಸರ ಪದಕ ಖರೀದಿ ಮಾಡಿದೆ.
By-ಶಾಲಿನಿ ಗಾಂವಕರ್
ಮುಂದಿನ ಭಾಗ ಓದಿ…
