(ಭಾಗ-21) ಪಡುವಣದ ಪ್ರವಾಸ: ಒಂದು ಪ್ರಯಾಣ, ಸಾವಿರ ನೆನಪುಗಳು!

(ಭಾಗ-21) ಪಡುವಣದ ಪ್ರವಾಸ: ಒಂದು ಪ್ರಯಾಣ, ಸಾವಿರ ನೆನಪುಗಳು!

ಆಗಸ್ಟ್ 3 – ನೆದರ್‌ಲ್ಯಾಂಡ್:

ಅಲ್ಲಿಂದ ಮುಂದೆ ನಾವು ನೆದರ್‌ಲ್ಯಾಂಡಿನತ್ತ ಪ್ರಯಾಣ ಬೆಳೆಸಿದೆವು. ರಾತ್ರಿ ಹೊತ್ತಿಗೆ ನೆದರ್‌ಲ್ಯಾಂಡಿನ ಹೊರವಲಯದಲ್ಲಿರುವ five star ಹೋಟೆಲಿನಲ್ಲಿ ನಮ್ಮನ್ನು ಇಳಿಸಿದರು. ವಿಶಾಲವಾದ ಹೋಟೆಲ್ ಅಲ್ಲಿ ನಮ್ಮ ರೂಮ್ ಹುಡುಕುವುದೇ ಒಂದು ದೊಡ್ಡ ಕಷ್ಟವಾಗಿತ್ತು. ಊಟಕ್ಕೆ ಮತ್ತು ಬೆಳಗ್ಗಿನ ತಿಂಡಿಗೆ ಇನ್ನೊಂದು ಮಹಡಿಯಲ್ಲಿರುವ ಡೈನಿಂಗ್ ಹಾಲ್‌ಗೆ ಬರಬೇಕಿತ್ತು. ಆ ರಾತ್ರಿ ನಮಗೆ ಒಳ್ಳೆಯ ಊಟ ಸಿಕ್ಕಿತು. ಅದರ ಜೊತೆ ಒಂದು dish ಮಾಂಸಾಹಾರವು ಇತ್ತು. ಹೋಟೆಲು ರೂಂಗಳಂತೂ ಕೇಳುವುದೇ ಬೇಡ. ವಿಶಾಲವಾದ ಹತ್ತಿಯಂತೆ ಮೃದುವಾಗಿರುವ ಡಬಲ್ ಬೆಡ್ ಬಿಸಿ ನೀರು ಕಾಯಿಸಲು ಕೆಟಲ್, ಟೀ ಮಾಡಿಕೊಳ್ಳಲು ಹಾಲು ಸಕ್ಕರೆ ಟೀ ಕಾಫಿ ಪೌಡರ್ ಪ್ಯಾಕೆಟ್‌ಗಳು ಇದ್ದವು. ಕೆಲವು ಕಡೆ ಪ್ರಿಜ್, ಟಿ.ವಿ. ಎಲ್ಲ ವ್ಯವಸ್ಥೆಯು ಇತ್ತು. ಸ್ನಾನ ಮಾಡಲು ಬಿಸಿ ಬಿಸಿಯಾದ ನೀರು, ಬೆಳಿಗ್ಗೆ 6.30 ಕ್ಕೆ ಅಲಾರಂ ನಮ್ಮನ್ನು ಎಬ್ಬಿಸಿತು.

ಬೇಗ ಎದ್ದು ಸ್ನಾನ ಮಾಡಿ ರೆಡಿಯಾಗಿ ಬೆಳಿಗ್ಗಿನ ತಿಂಡಿಗಾಗಿ ಕೆಳಗಿನ ವಿಸ್ತಾರವಾದ ಕೊಠಡಿಯಲ್ಲಿ ಹೋಗಬೇಕಿತ್ತು. ಅಲ್ಲಿ ಸೊಗಸಾದ ಬ್ರೇಕ್‌ಫಾಸ್ಟ್ ಒಂದೆಡೆ ಓರಣವಾಗಿ ಜೋಡಿಸಿದ ಖಾದ್ಯ ಪದಾರ್ಥಗಳನ್ನು ತಟ್ಟೆಗೆ ನಾವೇ ಬಡಿಸಿಕೊಂಡು ನಮ್ಮ ನಮ್ಮ
ಟೇಬಲ್‌ಗಳಿಗೆ ಒಯ್ದು ತಿನ್ನುವ ವ್ಯವಸ್ಥೆ. ಅಲ್ಲಿ ಬ್ರೆಡ್, ಬ್ರೆಡ್ ಟೋಸ್ಟ್ ಮಾಡಿಕೊಳ್ಳಲು ಅವಕಾಶವಿತ್ತು. ಅಲ್ಲಿ ಬ್ರೆಡ್ ಗೆ ಹಚ್ಚಿಕೊಳ್ಳಲು ನಾನಾ ರೀತಿಯ ಜಾಮ್‌ ಚೀಸ್ ಕಾರ್ನ್‌ಪ್ಲೇಕ್ ಮತ್ತು ಬಿಸಿ ತಂಪು ಹಾಲು ಕಾಫಿ ಟೀ ಬೇಯಿಸಿದ ಮೊಟ್ಟೆ, ನಾನಾ ತರದ ಹಣ್ಣುಗಳು ಇತ್ಯಾದಿಗಳು ಇರುತ್ತಿದ್ದವು. ನಾವು ಬೇಕಾದಷ್ಟನ್ನು ಹೊಟ್ಟೆ ತುಂಬಾ ತಿನ್ನಬಹುದಾಗಿತ್ತು. ನಿಗದಿತ ಸಮಯಕ್ಕೆ ಸರಿಯಾಗಿ ಬಸ್ ಹೊರಟಿತು. ಆಗಸ್ಟ್ 2 ಡಚ್ ಜನರು ವಾಸಿಸುವ ದೇಶವಾದ ನೆದರ್‌ಲ್ಯಾಂಡ್ಸ್ ಸಾಮಾನ್ಯವಾಗಿ ಹಾಲೆಂಡ್ ಎಂದೇ ಜನಪ್ರಿಯವಾಗಿದೆ. ವಿಶ್ವದ ಅತಿ ಸಂತಸದ ದೇಶ ಎಂದು ಹಾಲೆಂಡ್ ಕರೆಯಲ್ಪಡುತ್ತದೆ.

ದಕ್ಷಿಣಕ್ಕೆ ಬೆಲ್ಜಿಯಂ ದೇಶ ಹಾಗೂ ಪೂರ್ವಕ್ಕೆ ಜರ್ಮನಿ ಇರುವ ಸಮುದ್ರವಿದೆ. ಈ ದೇಶ ನೆದರ್‌ಲ್ಯಾಂಡ್ ಎಂದು ಏಕೆ ಕರೆಯಲ್ಪಡುತ್ತದೆ ಎಂದರೆ ಈ ದೇಶದ ಶೇಕಡ 27ರಷ್ಟು ಭಾಗ ಸಮುದ್ರ ಮಟ್ಟದಿಂದ ಕೆಳಗಡೆ ಇದೆ. ಈ ದೇಶದ ಒಂದು ನಗರ ಸಮುದ್ರ ಮಟ್ಟಕ್ಕಿಂತ ಸುಮಾರು 20 ಅಡಿ ಕೆಳಗಡೆ ಇರುವುದು ವಿಶೇಷ. ಈ ದೇಶದಲ್ಲಿ ಬೆಟ್ಟ ಗುಡ್ಡಗಳೇ ಇಲ್ಲದಿರುವುದು ಇನ್ನೊಂದು ವಿಶೇಷ. ನೋಡಲು ನಾವು ಮೊದಲು ಆಮ್‌ಸ್ಟರ್‌ಡ್ಯಾಮ್ ನಗರವನ್ನು ಮೊದಲಿಗೆ ಕಾಲುವೆ ಮೂಲಕ ದೊಡ್ಡ ಲಾಂಚ್‌ನಲ್ಲಿ ಹತ್ತಿ ಕುಳಿತೆವು. ಆಮ್‌ಸ್ಟರ್‌ಡ್ಯಾಮ್‌ನಲ್ಲಿ ನಾಲ್ಕು ಚಂದ್ರಾಕಾರದ ದೊಡ್ಡ ದೊಡ್ಡ ಕಾಲುವೆಗಳು ಒಂದರ ಹಿಂದೆ ಒಂದರಂತೆ ಇವೆ. ಈ ಕಾಲುವೆಗಳನ್ನು ರಾಜ ಕಾಲುವೆ, ರಾಜಕುಮಾರರ ಕಾಲುವೆ, ಶ್ರೀಮಂತರ ಕಾಲುವೆ ಹಾಗೂ ಒಂಟಿ ಕಾಲುವೆ ಎಂದು ಕರೆಯುತ್ತಾರೆ. ಈ ಕಾಲುವೆಗಳನ್ನು 17ನೇ ಶತಮಾನದಲ್ಲಿ ಸಮುದ್ರದ ನೀರಿನಿಂದ ನಗರವನ್ನು ರಕ್ಷಿಸಿಕೊಳ್ಳಲೆಂದು ಕಟ್ಟಲಾಯಿತಂತೆ.

ನಮ್ಮ ಲಾಂಚ್ ನಿಧಾನವಾಗಿ ಚಲಿಸುತ್ತಾ ಬಂದರನ್ನು ಹಾಯ್ದು ಆನಂತರ ಕಾಲುವೆಯೊಂದನ್ನು ಪ್ರವೇಶಿಸಿ 16 ಮತ್ತು 17ನೇ ಶತಮಾನಗಳಲ್ಲಿ ಕಟ್ಟಲ್ಪಟ್ಟಂತಹ ದೊಡ್ಡ ದೊಡ್ಡ ಮನೆಗಳೂ ಮತ್ತು ಗೋದಾಮುಗಳ ಮುಂದೆ ಹಾದುಹೋಯಿತು.

ದೂರದಲ್ಲಿ ಒಂದು ವಿಶಿಷ್ಟ ಆಕೃತಿಯ ಕಟ್ಟಡವದೆ. ಐ ವೆಲ್ಕಂ ಇನ್ಸ್‌ಟಿಟ್ಯೂಟ್ ಕಟ್ಟಡವಂತೆ ಇದು ನೀರಿನಲ್ಲಿ ಚಲಿಸುತ್ತಿರುವಂತೆ ಕಾಣುತ್ತಿದೆ. ಎಲ್ಲ ಮನೆಗಳ ಮುಂಬಾಗಿಲುಗಳಲ್ಲಿ ಇಟ್ಟಿರುವ ಕುಂಡಗಳಲ್ಲಿ ರಾರಾಜಿಸುವ ಹೂಗೊಂಚಲುಗಳು ಪುರಾತನ ಗೋದಾಮುಗಳು ಹಾಗೂ ಮನೆಗಳ ಮುಂಭಾಗಗಳು ಅತ್ಯಂತ ಚಿತ್ತಾಕರ್ಷಕವಾಗಿ ಕಟ್ಟಲ್ಪಟ್ಟಿವೆ. ನಮ್ಮ ಲಾಂಚ್ ನಗರದ ಹಲವಾರು ಪುರಾತನ ಚರ್ಚ್‌ಗಳು ಮುಂದೆ ಹಾದುಹೋಯಿತು.

ಲಾಂಚ್‌ನಲ್ಲಿ ಟಾಯಲೆಟ್ ಸಹ ಇದ್ದು ಅದನ್ನು ನಾವು ಉಪಯೋಗಿಸಿದೆವು. ನಾವು ನಗರದ ಮುಖ್ಯ ಆಕರ್ಷಣೆಗಳನ್ನು ನೋಡಿದ ನಂತರ ನಾವು ಲಾಂಚ್ ಹತ್ತಿದ ಜಾಗಕ್ಕೆ ವಾಪಸ್ಸಾದೆವು. ಆಮ್‌ಸ್ಟರ್‌ಡ್ಯಾಮ್‌ನ ಕೇಂದ್ರ ರೈಲು ನಿಲ್ದಾಣ ತನ್ನ ವಿಶಿಷ್ಟ ವಿನ್ಯಾಸಕ್ಕಾಗಿ ಹೆಸರುವಾಸಿಯಾಗಿದೆ. ನಿಲ್ದಾಣದ ಹೊರಗೆ ಸಾವಿರಾರು ಬೈಸಿಕಲ್‌ಗಳು ನಿಂತಿದ್ದವಲ್ಲದೇ ಸ್ವಲ್ಪ ದೂರದಲ್ಲಿ ಸುಮಾರು 2000 ಸೈಕಲ್‌ಗಳನ್ನು ನಿಲ್ಲಿಸುವ ವಿಶೇಷ ಗ್ಯಾರೇಜಿನಲ್ಲಿ ಇನ್ನಷ್ಟು ಸೈಕಲ್‌ಗಳಿದ್ದವು. ಬೆಲ್ಲಿಯಂನಲ್ಲಿ ಬೈಸಿಕಲ್‌ಗಳ ಉಪಯೋಗವನ್ನು ನೋಡಿದ್ದ ನನಗೆ ಆಮ್‌ಸ್ಟರ್‌ಡ್ಯಾಮ್‌ನ ಬೈಸಿಕಲ್‌ಗಳ ಸಂಖ್ಯೆ ಕೇಳಿ ಸೋಜಿಗವೇ ಆಯಿತು. ಈ ನಗರದಲ್ಲಿ ಸುಮಾರು 10 ಲಕ್ಷ ಬೈಸಿಕಲ್‌ಗಳಿದ್ದು ವಿಶ್ವದಲ್ಲಿ ಅತೀ ಹೆಚ್ಚು ಬೈಸಿಕಲ್‌ಗಳಿರುವ ನಗರ ಎಂದು ಪ್ರಸಿದ್ದಿ ಪಡೆದಿದೆ.

ಇಲ್ಲಿ ಮುಖ್ಯ ರೈಲು ನಿಲ್ದಾಣದಿಂದ ನಗರದ ಬೇರೆ ಬೇರೆ ಸ್ಥಳಗಳಿಗೆ ಹೋಗಲು ಮೆಟ್ರೋ ರೈಲು ಟ್ರಾಮ್‌ಗಳು ಮತ್ತು ಬಸ್‌ಗಳು ಇವೆ. ಇದಲ್ಲದೆ ದೋಣಿಗಳ ಮೂಲಕವೂ ನಗರದಲ್ಲಿ ಓಡಾಡಬಹುದು. ಕಾರಣವೆಂದರೆ ಈ ನಗರದ ಎಲ್ಲೆಡೆ ವ್ಯಾಪಿಸಿರುವ ಕಾಲುವೆಗಳು.

ಹಾಲೆಂಡ್ ದೇಶವೆಂದರೆ ಎಲ್ಲರ ನೆನಪಿಗೆ ಬರುವ ದೃಶ್ಯವೆಂದರೆ ವಿಂಡ್‌ಮಿಲ್. ಇದರ ನಿರ್ಮಾಣದ ಮುಖ್ಯ ಉದ್ದೇಶ ಪ್ರವಾಹದಿಂದ ಬಂದಂತಹ ನೀರನ್ನು ಹೊರಗೆ ಹಾಕುವುದಾಗಿದ್ದರೂ ಹಾಲೆಂಡ್‌ನಲ್ಲಿ ಇರುವ ವಿಂಡ್‌ಮಿಲ್‌ಗಳು ಬೇರೆ ತರಹದ ಕಾರ್ಯಗಳಿಗೂ ಉಪಯೋಗಿಸಲ್ಪಡುತ್ತಿವೆ. ಈ ನಗರದಲ್ಲಿ 8 ಮುಖ್ಯ ವಿಂಡ್ ಮಿಲ್‌ಗಳು ಇದ್ದು ಸಂಪೂರ್ಣವಾಗಿ ಮರದಿಂದಲೇ ಕಟ್ಟಲಾಗಿರುವ ಗೂಯರ್ ಎನ್ನುವ ಹೆಸರಾಂತ ವಿಂಡ್‌ಮಿಲ್‌ನ್ನು ನಾವು ನೋಡಿದೆವು.

ಇಲ್ಲಿಯ ಅತ್ಯಂತ ಪುರಾತನ ಕಟ್ಟಡವೆಂದರೆ “ಹಳೆಯ ಚರ್ಚ್” 1306ರಲ್ಲಿ ಸ್ಥಾಪಿತವಾದ ಈ ಚರ್ಚ್ ಕಳೆದ ಶತಮಾನಗಳಲ್ಲಿ ಹಲವಾರು ಬಾರಿ ಪುನರ್ ನಿರ್ಮಾಣಗೊಂಡಿದ್ದು ಇಂದಿಗೂ ಸಾಕಷ್ಟು ಹೆಸರುವಾಸಿಯಾಗಿದ್ದು, ರೈಲ್ವೆ ನಿಲ್ದಾಣದ ಸಮೀಪದಲ್ಲಿಯೇ ಇದೆ.

ಪುರಾತನ ಚರ್ಚಿನ ಬಳಿಯೇ ಆಮ್‌ ಸ್ಟರ್‌ಡ್ಯಾಮ್ ನಗರದ ಹೆಸರಾಂತ ಕೆಂಪು ದೀಪದ ಪ್ರದೇಶವಿದೆ. ಈ ಪ್ರದೇಶವು ತನ್ನ ವೇಶ್ಯಾವಾಟಿಕೆಗಾಗಿ ವಿಶ್ವದೆಲ್ಲೆಡೆ ಖ್ಯಾತಿ ಪಡೆದಿದೆ. ಇಲ್ಲಿನ ವೇಶ್ಯಾ ವ್ಯಾಪಾರಕ್ಕಾಗಿಯೇ ಈ ನಗರವು ವಿಶ್ವದ ಪಾಪದ ನಗರ ಎಂದು ಕರೆಯಲ್ಪಡುತ್ತದೆ. ದಿನದ 24 ಘಂಟೆಯೂ ನಿರಂತರವಾಗಿ ವೇಶೈಯರು ತಮ್ಮ ಕಸುಬನ್ನು ಇಲ್ಲಿ ನಡೆಸುತ್ತಾರೆ. ನಮಗೆ ಲಾಂಚ್‌ ನಲ್ಲಿ ಹೋಗಿ ಬಂದ ಮೇಲೆ ಚರ್ಚು ಹತ್ತಿರ ಬಿಟ್ಟು ಸುತ್ತಲೂ ಅಡ್ಡಾಡಲು 3 ತಾಸು ಬಿಟ್ಟಿದ್ದರು. ನಾನು ಮತ್ತು ಯಜಮಾನರು ಒಂದು ವಾಹನವನ್ನು ಬಾಡಿಗೆಗೆ ತೆಗೆದುಕೊಂಡು ವಾಹನ ಸವಾರನಿಗೆ ವೇಶ್ಯಾವಾಟಿಕೆ ನಡೆಯುವ ಜಾಗವನ್ನು ತೋರಿಸುವಂತೆ ಕೇಳಿಕೊಂಡೆವು. ಅವನು ನಮ್ಮನ್ನು ಆ ಪ್ರದೇಶದಲ್ಲಿ ಒಂದು ಸುತ್ತು ಹಾಕಿಸಿದನು. ಆಗ ಒಂದು ರೂಮಿನ ಗ್ಲಾಸ್‌ನೊಳಗೆ ಲೇಡೀಸ್ ನಿಂತು ಅರ್ಧ ನಗ್ನರಾಗಿ ನಿಂತು ಗಂಡಸರನ್ನು ಕರೆಯುವ ರೀತಿ ತುಂಬಾ ಮುಜುಗರ ತರಿಸುವಂತೆ ಇತ್ತು. ನಮ್ಮ ಪ್ರವಾಸದ ಚಾರ್ಟ್‌ನಲ್ಲಿ ಆ ದಿನ ರಾತ್ರಿ ಅಲ್ಲಿಗೆ ಹೋಗುವುದೆಂದು ಇತ್ತು. ಹೀಗಾಗಿ ನಾವು ಯಾರಿಗೂ ಈ ವಿಷಯವನ್ನು ಹೇಳಲಿಲ್ಲ.

ನಂತರ ನಮ್ಮನ್ನು Chees and Clog Demonstration factoryrt ಕರೆದುಕೊಂಡು ಹೋದರು. ಹಾಲೆಂಡ್‌ನಲ್ಲಿ ಹೈನುಗಾರಿಕೆ ದೊಡ್ಡ ಉದ್ಯಮವಾಗಿದ್ದು ಅಲ್ಲಿ ಚೀಸ್‌ನ್ನು ಹೇಗೆ ತಯಾರಿಸುವುದೆಂದು 15 ನಿಮಿಷದವರೆಗೆ ಚೀಸ್‌ನಿಂದ ಏನೇನು ಮಾಡಬಹುದೆಂದು ವಿವರಿಸಿದರು. ಚೀಸ್‌ನಿಂದ ಮಾಡಿದ ಕಲಾಕೃತಿಗಳನ್ನು ನಾವು ಖರೀದಿಸಬಹುದಿತ್ತು.

ಇನ್ನೊಂದು ಕಡೆ ಕಟ್ಟಿಗೆಯಿಂದ ಮಾಡಿದ ಬೂಟುಗಳ ರಾಶಿಯೇ ಇತ್ತು. ಚಿಕ್ಕ ಚಿಕ್ಕ ಅಳತೆಯ ಬೂಟುಗಳಿಂದ ಹಿಡಿದು ದೊಡ್ಡದು ಮತ್ತು ಅತಿ ದೊಡ್ಡ ಅಳತೆಯ ಬೂಟುಗಳು ಸಹ ಇದ್ದವು. ಅಲ್ಲಿಯೂ ಸಹ ಕಟ್ಟಿಗೆ ತುಂಡುಗಳನ್ನು ತೆಗೆದುಕೊಂಡು ಯಾವ ರೀತಿಯಲ್ಲಿ ಬೂಟುಗಳಿಗೆ ಆಕಾರ ಕೊಡುತ್ತಾರೆ ಎಂದು ಪ್ರಾತ್ಯಕ್ಷಿಕ ವಿವರಣೆಯನ್ನು ನೀಡಿದರು. ಅಲ್ಲಿಯೇ ಪಕ್ಕದಲ್ಲಿ ವಾಣಿಜ್ಯ ಸಂಕೀರ್ಣ ಇತ್ತು. ಅಲ್ಲಿ ನಾವು ಬೇಕಾದ ಬೂಟುಗಳನ್ನು ಮತ್ತು ಚಿಸ್‌ಗಳನ್ನು ಯೂರೋಗಳನ್ನು ಕೊಟ್ಟು ಖರೀದಿಸಬಹುದಿತ್ತು.

ಅಲ್ಲಿ ದ್ರಾಕ್ಷಾರಸದಿಂದ ಮಾಡಿದ Red wineನ್ನು ಸಹ ಮಾರಾಟಕ್ಕೆ ಇಟ್ಟಿದ್ದರು. ಸ್ಯಾಂಪಲ್‌ಗಾಗಿ ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಕಪ್‌ಗಳಲ್ಲಿ ಹಾಕಿ ಇಟ್ಟಿದ್ದರು. ಎಲ್ಲರೂ ರುಚಿ ನೋಡಲು ತೆಗೆದುಕೊಂಡು ಕುಡಿಯುತ್ತಿದ್ದರು. ನಾನು ಸಹ ಒಂದು ಚಿಕ್ಕ ಕಪ್‌ನ್ನು ತೆಗೆದುಕೊಂಡು ಕುಡಿದೆ. ಅದು ಸಿಹಿಯಾಗಿ ತುಂಬಾ ರುಚಿಯಾಗಿತ್ತು. ನೋಡ ನೋಡುತ್ತಿದ್ದಂತೆ ಅಲ್ಲಿಟ್ಟ ನೂರಾರು ಪ್ಲಾಸ್ಟಿಕ್ ಕಪ್‌ಗಳು ಖಾಲಿಯಾದವು. ಅದರಲ್ಲಿ ಹೆಚ್ಚು ಕುಡಿದವರು ಚೈನಿಯರು. ನಾವು ಸಹ ಮಾರಾಟಕ್ಕಿಟ್ಟಿದ್ದ ಎರಡು ಬಾಟಲನ್ನು 120 ಯುರೋ ಕೊಟ್ಟು ಕೊಂಡೆವು. ದರ ಸಹ ಕಡಿಮೆ ಇತ್ತು. ಕೆಲವರು ಚಿಕ್ಕ ಚಿಕ್ಕ ಕಟ್ಟಿಗೆಯ ಬೂಟು ಮತ್ತು ಚೀಸ್‌ಗಳನ್ನು ಖರೀದಿ ಮಾಡಿದರು.

ಆಗಲೇ ಸಣ್ಣದಾಗಿ ಜಿಟಿ ಜಿಟಿ ಮಳೆ ಶುರುವಾಯಿತು. ನಮ್ಮ ಗೈಡ್ ನಿರಜ ರಾತ್ರಿ ಕೆಂಪು ದೀಪದ ಪ್ರದೇಶಕ್ಕೆ ಹೋಗಲು ಆಗುವುದಿಲ್ಲ ಎಂದುಬಿಟ್ಟ. ಏಕೆಂದರೆ ನಾವು ಉಳಿದುಕೊಂಡಿದ್ದ ಹೋಟೆಲು city ಯಿಂದ ತುಂಬಾ ದೂರದಲ್ಲಿತ್ತು. ಮತ್ತು ಮಳೆ ನಿಲ್ಲುವ ಲಕ್ಷಣ ಕಾಣಲಿಲ್ಲ. ಇದರಿಂದ ಎಲ್ಲರಿಗೂ ನಿರಾಶೆಯಾಯಿತು.

ಎಲ್ಲರೂ ಹೋಟೆಲು ರೂಮಿಗೆ ಬಂದೆವು. ಸ್ನಾನ ಮಾಡಿ ಫ್ರೆಶ್ ಆಗಿ ಊಟ ಮಾಡಿಕೊಂಡು ಬರಲು ಡಿನ್ನರ್ ಹಾಲ್‌ಗೆ ಹೋಗಿ ಊಟ ಮುಗಿಸಿ ವಾಪಸ್ ಬರುತ್ತಿರುವಾಗ ನಮ್ಮ ಗುಂಪಿನ ಡಾಕ್ಟರ್‌ಗಳೆಲ್ಲಾ ಸೇರಿ ಒಂದು ವಾಹನ ಮಾಡಿಕೊಂಡು ಕೆಂಪು ದೀಪದ ಜಾಗವನ್ನು ನೋಡಲು ಹೊರಡುವವರಿದ್ದರು. ಎಲ್ಲ ತಯಾರಿ ಮಾಡಿಕೊಂಡು ಕೊನೆಯ ಗಳಿಗೆಯಲ್ಲಿ ಅವಸರ ಅವಸರವಾಗಿ ಬಂದು ನಮ್ಮನ್ನು ಕರೆದರು. ಆಗ ನಾವಿನ್ನು ಮಾನಸಿಕವಾಗಿ ತಯಾರಿರಲಿಲ್ಲ. ನಾವು ವಿಚಾರ ತಿಳಿಸುವವರೆಗೆ ಅವರು ನಿಲ್ಲಲು ತಯಾರಾಗಿರಲಿಲ್ಲ. ಅವರು ಹೋದ ನಂತರ ನಮ್ಮ ಗುಂಪಿನಲ್ಲಿರುವ ಮುಂಬಯಿಂದ ಬಂದಂತಹ ಕೆಲವರು ಸೇರಿ ಇನ್ನೊಂದು 12 ಜನ ಹಿಡಿಯಬಹುದಾದ ಇನ್ನೊಂದು ವಾಹನ ಮಾಡಿ ನಮ್ಮನ್ನು ಕರೆದರು. ಆಗ ನಾವು ರೆಡಿಯಾಗಿ ನಮ್ಮ ಕೊಠಡಿಗೆ ಹೋಗಿ ಪರ್ಸ್ ಛತ್ರಿ ತೆಗೆದುಕೊಂಡು ಸೈಟರ್ ಹಾಕಿಕೊಂಡು ಹೊರಟೆವು. ಅವರಲ್ಲಿ ಅಂಜಲಿ ಎನ್ನುವ ಮಹಿಳೆಯೊಬ್ಬಳಿದ್ದಳು. ಸುಮಾರು 45 ವರ್ಷ ಆಗಿರಬೇಕು. ಮದುವೆಯಾಗಿರಲಿಲ್ಲ. ತುಂಬಾ ಒಳ್ಳೆಯವಳು ಅವಳು ಅಮೆರಿಕಾದಲ್ಲಿ ನೆಲೆಸಿದ್ದಳು. ಸಂಬಂಧಿಕರ ಮದುವೆಗೆ ಲಂಡನ್ನಿಗೆ ಬಂದವಳು ಗೆಳತಿಯ ಜೊತೆ ಯೂರೋಪ್ ಟೂರ್‌ಗೆ ಬಂದಿದ್ದಳು. ಅವಳ ಜೊತೆ ಸೇರಿ ನಾವು ಇತರರು 10 ಜನ ಸುಮಾರು 10-30 ಗಂಟೆ ರಾತ್ರಿಯಲ್ಲಿ ಹೊರಟೆವು. ಆ ಪ್ರದೇಶಕ್ಕೆ ಹೋಗಿ ಮುಟ್ಟಲು ಒಂದು ತಾಸು ಬೇಕಾಯಿತು.

ಕೆಂಪು ದೀಪದ ಜಾಗವನ್ನು ಡಿ ವಾಲನ್ ಎಂದು ಕರೆಯಲಾಗಿದ್ದು ಇಲ್ಲಿ ನೂರಾರು ವೇಶ್ಯಾಗೃಹಗಳಲ್ಲದೆ ನೈಟ್ ಕ್ಲಬ್‌ಗಳು. ನೃತ್ಯ ಪ್ರದರ್ಶನ ಮಂದಿರಗಳು, ಸೆಕ್ಸ್ ಆಟಿಕೆಗಳ ಅಂಗಡಿಗಳು ಮುಂತಾದವು ಇವೆ. ಇದನ್ನು ನೋಡಲೆಂದೇ ಲಕ್ಷಾಂತರ ಜನ ಜಗತ್ತಿನ ಮೂಲೆ ಮೂಲೆಯಿಂದ ಈ ನಗರಕ್ಕೆ ಬರುತ್ತಾರೆ. ಇಲ್ಲಿಯ ವೇಶ್ಯಾವಾಟಿಕೆ ಕಾನೂನುಬದ್ಧವಾಗಿದೆ. ಯಾವುದೇ ಅಡೆತಡೆಯಿಲ್ಲದೆ ನಿರಂತರವಾಗಿ ನಡೆಯುತ್ತಾ ಇರುತ್ತದೆ. ಇಲ್ಲಿಯ ಜನರ ಮನೋಭಾವ ಜಗತ್ತಿನ ಇತರರಿಗಿಂತ ಭಿನ್ನವಾದದ್ದು. ಈ ದೇಶದಲ್ಲಿ ಸಲಿಂಗಕಾಮ, ವೇಶ್ಯಾವಾಟಿಕೆ, ಗಾಂಜಾ ಸೇವನೆ ಮುಂತಾದವುಗಳು ಅಪರಾಧವಲ್ಲ. ನಾವು ಆ ಪ್ರದೇಶದಲ್ಲಿ ನಡೆದುಕೊಂಡೇ ಹೊರಟಿದ್ದೆವು. ಹೊರಗಡೆಯ ಗೋಡೆಯ ಮೇಲೆ ಅಶ್ಲೀಲವಾದ ಲೈಂಗಿಕ ಕ್ರಿಯೆಯ ಚಿತ್ರಪಟಗಳನ್ನು ಹಚ್ಚಿಟ್ಟಿದ್ದರು. ಜನರು ತಂಡೋಪತಂಡವಾಗಿ ಆ ವೇಶೈಯರನ್ನು ನೋಡಲು ಬಂದಿದ್ದರು. ಅಲ್ಲಿ ಎಳೆಯ ಪ್ರಾಯದ ಸುಂದರ ಹುಡುಗಿಯರು ಸುಂದರವಾಗಿ ಅಲಂಕರಿಸಿಕೊಂಡು ಕಡಿಮೆ ಬಟ್ಟೆಗಳಿಂದ ಅಂದರೆ ಮೇಲೆ ತೆಳ್ಳಗಿನ ಬ್ರಾ ಕೆಳಗಡೆ ತೆಳ್ಳಗಿನ ಚಿಕ್ಕ ನಿಕ್ಕರ್ ಹಾಕಿರುತ್ತಿದ್ದರು. ಹೆಚ್ಚಾಗಿ ಅವರೆಲ್ಲರೂ ಕಪ್ಪನೆಯ ಬಣ್ಣದ ಬಟ್ಟೆಯನ್ನು ಧರಿಸಿದ್ದರು. ಪಕ್ಕದಲ್ಲಿಯೇ ಅವರು ಮಲಗುವ ಮಂಚಗಳು ಇದ್ದವು. ಯಾರಾದರೂ ಗಂಡಸರು ಒಳಗಿದ್ದರೆ ಆ ಬಾಗಿಲಿಗೆ ತೆಳ್ಳಗಿನ ಪರದೆ ಎಳೆಯುತ್ತಿದ್ದರು. ದಂಪತಿಗಳ ಜೊತೆಯಲ್ಲಿದ್ದರೆ ಕರೆಯುತ್ತಿರಲಿಲ್ಲ. ಕೆಲವು ಗಂಡಸರು (ಶ್ರೀಮಂತರು) ಅವರ ಬಳಿ ಹೋಗಿ ಹಣದ ಬಗ್ಗೆ ಚೌಕಾಶಿ ಮಾಡುತ್ತಿದ್ದ ದೃಶ್ಯ ಕೆಲವೆಡೆ ಕಂಡುಬರುತ್ತಿತ್ತು. ಎಷ್ಟು ಕಿಕ್ಕಿರಿದ ಜನ ಸಂದಣಿ ಇದ್ದರೂ, ಎಳೆ ಪ್ರಾಯದ ಹುಡುಗ ಹುಡುಗಿಯರು ತುಂಬಾ ಜನರು ಇದ್ದರೂ ಸಹ ಯಾರೊಬ್ಬರೂ ನಗುವುದು; ಹುಡುಗಿಯರ ಜೊತೆ ಅಸಭ್ಯವಾಗಿ ನಡೆದುಕೊಳ್ಳುತ್ತಿರಲಿಲ್ಲ. ರಾತ್ರಿ 12-1 ಗಂಟೆಗೆಲ್ಲ ಹುಡುಗಿಯರು ಒಬ್ಬೊಬ್ಬರೇ ಅಡ್ಡಾಡುತ್ತಿದ್ದರೂ ಯಾವ ಅನುಚಿತ ಘಟನೆಗಳೂ ನಡೆಯುತ್ತಿರಲಿಲ್ಲ. ಎಲ್ಲೂ ಪೋಲಿಸರ ಹಾವಳಿ ಇಲ್ಲ. ಕುಡಿದವರಿದ್ದರೂ ಯಾರೂ ಅಸಭ್ಯವಾಗಿ ವರ್ತಿಸುತ್ತಿರಲಿಲ್ಲ. ಇದು ನನಗೆ ತುಂಬಾ ಇಷ್ಟವಾದ ವಿಷಯ. ನಾವು ಹೋಟೆಲು ರೂಮಿಗೆ ಹಿಂದಿರುಗಿದ್ದಾಗ ಬೆಳಗ್ಗಿನ 2.30 ಗಂಟೆ ಮಲಗಿದರೆ ನಿದ್ದೆ ಬರಲಿಲ್ಲ. ಇಡೀ ರಾತ್ರಿ ವೇಶ್ಯಾ ಗೃಹದ ಹುಡುಗಿಯರ ಮುಖವೇ ಕಣ್ಣು ಮುಂದೆ ಬಂದು ಅವರ ಬಗ್ಗೆ ವಿಚಾರ ಮಾಡುತ್ತಿದ್ದೆ.

By-ಶಾಲಿನಿ ಗಾಂವಕರ್

ಮುಂದಿನ ಭಾಗ ಓದಿ…

Leave a Comment

Comments

No comments yet. Why don’t you start the discussion?

    Leave a Reply