(ಭಾಗ-22) ಪಡುವಣದ ಪ್ರವಾಸ: ಒಂದು ಪ್ರಯಾಣ, ಸಾವಿರ ನೆನಪುಗಳು!

(ಭಾಗ-22) ಪಡುವಣದ ಪ್ರವಾಸ: ಒಂದು ಪ್ರಯಾಣ, ಸಾವಿರ ನೆನಪುಗಳು!

Modarodam Model Village

6.30 ಕ್ಕೆ ಅಲಾರಾಂ ಆದಾಗ ಎಚ್ಚರವಾಯಿತು. ಏಳಲೂ ಮನಸ್ಸು ಆಗಲಿಲ್ಲ. ಆದರೂ ಏಳಲೇಬೇಕಲ್ಲ. ಟೂರ್ ನಿಯಮ ಮುರಿಯುವಂತಿಲ್ಲ. ಬೇಗ ರೆಡಿಯಾಗಿ ತಿಂಡಿ ತಿಂದು Modarodam Model Village ನೋಡಲು ಹೊರಟೆವು. ನಾವು ಹೋಗಿದ್ದು ಆಗಸ್ಟ್ ತಿಂಗಳಲ್ಲಿ ಅದರಿಂದ ನಮಗೆ Tulip ತೋಟ ನೋಡಲು ಸಿಗಲಿಲ್ಲ. ಮಾರ್ಚ್‌ನಿಂದ ಮೇ ತಿಂಗಳವರೆಗೆ ಮಾತ್ರ Tulip ಹೂ ತೋಟ ನೋಡಲು ಸಿಗುತ್ತದೆಯಂತೆ. ಈಗ ಅದರ ಕೊಯ್ದು ಮುಗಿದಿದ್ದರಿಂದ ಆ ಹೂವುಗಳ ಸೌಂದರ್ಯ ನಮಗೆ ನೋಡಲು ಸಿಗಲಿಲ್ಲ. ಆದರೆ Modarodam Model Village ಸಹ ತುಂಬಾ ಚೆನ್ನಾಗಿದೆ. ಮಾದರಿಯ ರೈಲು ನಿಲ್ದಾಣ ಮಾದರಿಯ ಬಸ್ ನಿಲ್ದಾಣ ವಿಮಾನ ನಿಲ್ದಾಣಗಳು ಸುಧಾರಿತ ಪಟ್ಟಣದ ಸುಂದರವಾದ ರಸ್ತೆಗಳು ಟುಲಿಪ್ ಹೂ ಗಿಡಗಳು ಸುಂದರವಾದ ವಿವಿಧ ರೀತಿಯ ಹೂವುಗಳನ್ನು ನೋಡುತ್ತಿದ್ದರೆ ಹುಚ್ಚು ಹಿಡಿದಂತಾಗುತ್ತದೆ. ಎಷ್ಟು ನೋಡಿದರೂ ಇನ್ನೂ ನೋಡುತ್ತಾ ಇರಬೇಕು ಎನಿಸುತ್ತದೆ. ಅಲ್ಲಿರುವ ನೀರಿನ ಫೌಂಟೈನ್‌ಗಳು ಊರಿಗೆ ಸರಬರಾಜಾಗುವ ನೀರು ಪೂರೈಕೆ ಹರಿಯುವ ನೀರಿಗೆ ಕಟ್ಟಿದ ಸೇತುವೆಗಳು ನೋಡುವಂತೆ ಯಾವುದೋ ವಿಜ್ಞಾನಿಯ ಕಲ್ಪನೆಯ ನಗರ ತುಂಬಾ ಸುಂದರವಾಗಿದೆ.

ಮುಂದೆ ನಾವು ಬಸ್ ಕೋಚನ್ನು ಏರಿ ಜರ್ಮನಿ ಕಡೆ ಹೊರಟೆವು. ನಮ್ಮ ಗೈಡ್ ನೀರಜ್ ಬಸ್ಸನ್ನು ಎರಡು ತಾಸಿಗೊಮ್ಮೆ ದಾರಿ ಮಧ್ಯದಲ್ಲಿ ಟೀ ಕುಡಿಯಲು ಮತ್ತು ಟಾಯ್‌ಲೆಟ್‌ಗೆ ಹೋಗಲು ನಿಲ್ಲಿಸುತ್ತಿದ್ದ. ಯಾರಿಗಾದರೂ ಅರ್ಜೆಂಟ್ ಇದ್ದರೆ ಬಸ್ಸಲ್ಲಿ ಇರುವ ಟಾಯ್‌ಲೆಟ್ ಉಪಯೋಗಿಸಬಹುದಿತ್ತು. ಪ್ರವಾಸದ ಸಮಯದಲ್ಲಿ ವಯಸ್ಸಾದವರ ಬಗ್ಗೆ ತುಂಬಾ ಕಾಳಜಿ ವಹಿಸುತ್ತಿದ್ದರು.

ಜರ್ಮನಿ

ಜರ್ಮನಿಯು ಸಹ ಲಂಡನ್ನಿನಂತೆ ಸುಂದರವಾದ ನಗರ. ದಾರಿಯುದ್ದಕ್ಕೂ ಕಣ್ಣು ಮುಟ್ಟುವವರೆಗೆ ಹಚ್ಚ ಹಸಿರಿನ ಹೊದಿಕೆ ಹಾಸಿಗೆಯಂತೆ ಭೂತಾಯಿ ಹಸಿರು ಸೀರೆ ಉಟ್ಟು ನಮ್ಮನ್ನು ಕೈ ಬೀಸಿ ಕರೆದಂತೆ ಭಾಸವಾಯಿತು. ಇಲ್ಲಿಯ ಪ್ರಕೃತಿ ಸೌಂದರ್ಯ ಅದ್ಭುತವಾದುದು. ಒಂದಾನೊಂದು ಕಾಲದಲ್ಲಿ ಮಹತ್ವಾಕಾಂಕ್ಷಿಯಾದ ಹಿಟ್ಲರನ ದಬ್ಬಾಳಿಕೆಯಿಂದ ನಲುಗಿದರೂ ಸಹ ಮತ್ತೆ ಛಲದಿಂದ ಎದ್ದು ನಿಂತು ತಂತ್ರಜ್ಞಾನದಲ್ಲಿ ಜಾಗತಿಕ ಮಟ್ಟದಲ್ಲಿ ಪ್ರಥಮ ಸ್ಥಾನದಲ್ಲಿ ಮೆರೆಯುತ್ತಿದೆ. ಪುಟ್ಟ ದೇಶ ವಿರಳ ಜನಸಂಖ್ಯೆ ಹೊಂದಿದ ಈ ದೇಶದಲ್ಲಿ ಮಾನವ ಶಕ್ತಿಗಿಂತ ಯಂತ್ರ ಶಕ್ತಿಯದೇ ಮೇಲುಗೈ. ಇಂದು ನಮ್ಮ ದೇಶದಲ್ಲಿ ಓಡಾಡುವ ಎಷ್ಟೋ ಕಾರುಗಳು ಜರ್ಮನಿಯಲ್ಲಿ ತಯಾರಾದವುಗಳು. ಇದು ಜರ್ಮನಿಯಲ್ಲೇ ಅತ್ಯುತ್ತಮ ವಾಸ್ತು ಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಮೊದಲು ನಾವು Cologneನಲ್ಲಿ ಇರುವ ದೊಡ್ಡ ಚರ್ಚ್ ನೋಡಲು ಹೊರಟೆವು. ಯೂರೋಪ್ ದೇಶದಲ್ಲಿರುವ ಎಲ್ಲ ಚರ್ಚ್‌ಗಳು ಒಂದಕ್ಕಿಂತ ಒಂದು ನೋಡಲು ಚೆನ್ನಾಗಿವೆ. ಇದು ಅತಿ ಪುರಾತನ ಕಾಲದಾಗಿದ್ದು ಕಟ್ಟಡದೊಳಗಿನ ಕಲಾ ಶೈಲಿ ತುಂಬಾ ಚೆನ್ನಾಗಿದೆ. ಬರೀ ಕೆಥೊಲಿಕ್ ಧರ್ಮಗುರುಗಳು ಏಸುವಿನ ಭವ್ಯ ಕಲಾಕೃತಿ ಇವನ್ನೆಲ್ಲ ಸರಿಯಾಗಿ ನೋಡಲು ತುಂಬಾ ಸಮಯ ಬೇಕಿತ್ತು. ಆದರೆ ನಮಗೆ ಸಮಯದ ಅಭಾವ ವಿರುವುದರಿಂದ ನಮ್ಮ ಗೈಡ್ ಕೋಚ್‌ ಗೆ ಹೋಗುವಂತೆ ಅವಸರಪಡಿಸುತ್ತಿದ್ದ. (ಚರ್ಚಿನ ಡೋಮ್ 157 ಮೀಟರ್ ಎತ್ತರದಲ್ಲಿ ನಿಂತಿದೆ) ಇದನ್ನು ಕಟ್ಟಲು ತುಂಬಾ ವರ್ಷಗಳು ಬೇಕಾಯಿತಂತೆ.

ಮುಂದೆ ನಾವು Heidelberg ಅರಮನೆ ನೋಡಲು ಹೋದೆವು. ಅದು ತುಂಬಾ ಹಳೆಯ ಅರಮನೆ. ಅದು ಎತ್ತರದ ಗುಡ್ಡದ ಮೇಲೆ ಇದೆ. ಅಲ್ಲಿ ಸುಮಾರು ಮೂರ್ತಿಗಳ ಹತ್ತಿರ ನಿಂತು ಫೋಟೋ ತೆಗೆಸಿಕೊಂಡೆವು. ಅಲ್ಲಿಂದ ಮುಂದೆ Black forest ಕಡೆ ಹೊರಟೆವು. Heidelberg ದಟ್ಟವಾದ ಗುಡ್ಡಗಳ ಸಾಲುಗಳಿಂದ ಸುತ್ತುವರಿದಿದೆ. ಅಲ್ಲಿಯ ಸುಂದರವಾದ ಹೂ ತೋಟವಂತೂ ತುಂಬಾ ಸುಂದರವಾಗಿದೆ. ಇದು ದಕ್ಷಿಣ ಜರ್ಮನಿಯಲ್ಲಿದೆ. ಅಲ್ಲಿರುವ ಗುಡ್ಡದ ಮೇಲಿರುವ ಅರಮನೆ ಅತ್ಯಂತ ರಮಣೀಯವಾಗಿದೆ. ಆ ಗುಡ್ಡಗಳ ಸಾಲಿನಲ್ಲಿ ಮುಂದುವರೆಯುತ್ತ ದಕ್ಷಿಣ ಜರ್ಮನಿಯ ಭಾಗದಲ್ಲಿರುವ (ಕಪ್ಪು ಅರಣ್ಯ) Black Forest ತಲುಪಿದೆವು, ದೊಡ್ಡ ದೊಡ್ಡ ಮರಗಳು ಸಹ್ಯಾದ್ರಿ ಪರ್ವತದ ಪ್ರದೇಶದಲ್ಲಿರುವ ಯಾಣವನ್ನು ನೆನಪಿಸಿತ್ತು. ಹಗಲಿನಲ್ಲಿಯೂ ಸೂರ್ಯನ ಬೆಳಕನ್ನು ಕಾಣದಿರುವ ಆ ಕಪ್ಪು ಅರಣ್ಯ ನನ್ನ ಜೀವನದಲ್ಲಿಯೇ ಅತ್ಯಂತ ಸ್ಮರಣೀಯ, ಆ ಪ್ರದೇಶದಲ್ಲಿ ನಮ್ಮ Star Tour ನವರು ವಿಶೇಷವಾಗಿ ಟೆಂಟ್ ಹಾಕಿ ದಕ್ಷಿಣ ಭಾರತದ ಭೋಜನ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು. ಆ ಪರ್ವತದ ಮಡಿಲಲ್ಲಿ ತುಂಬಾ ಓಡಾಡಿ ಸುಸ್ತಾಗಿದ್ದರಿಂದ ಹೊಟ್ಟೆ ತುಂಬಾ ಊಟ ಮಾಡಿದೆವು.

ನಂತರ ಅಲ್ಲಿಯೇ ಪಕ್ಕದಲ್ಲಿರುವ ಕೊಕ್ಕೂ ಗಡಿಯಾರ ತಯಾರಿಕಾ ಸಂಕೀರ್ಣವನ್ನು ನೋಡಲು ಹೊರಟೆವು. ಇದು ಜಗತ್ತಿನಲ್ಲಿಯೇ ವಿಶೇಷವಾಗಿ ಗಡಿಯಾರ ಕೂಕ್ಕೂ ಹಕ್ಕಿಯ ನೆನಪಿನ ಸಲುವಾಗಿ ಕಾರ್ಮಿಕರಿಗೆ ಸಮಯ ನೋಡಲು ಅನುಕೂಲವಾಗಲೆಂದು ತಯಾರಿಸಲಾದ ಗಡಿಯಾರ. ಅಲ್ಲಿ ನಮಗೆ ಈ ಕೂಕ್ಕೂ ಗಡಿಯಾರವನ್ನು ಕಟ್ಟಿಗೆಯಿಂದ ಹೇಗೆ ತಯಾರಿಸಲಾಗುತ್ತದೆ ಎಂಬುದನ್ನು ವಿವರವಾಗಿ ಮಾಡಿ ತೋರಿಸಿದರು. ಅಲ್ಲಿಯೇ ಗಡಿಯಾರ ಮಾರಾಟದ ಮಳಿಗೆಯೂ ಇತ್ತು. ಅಲ್ಲಿಯ ಗಡಿಯಾರಗಳು 30 ಯೂರೋದಿಂದ ಹಿಡಿದು 30 ಸಾವಿರ ಯುರೋಗಳವರೆಗೂ ಇತ್ತು. ಆ ಗಡಿಯಾರದಲ್ಲಿ ತಾಸಿಗೊಮ್ಮೆ ಕೂಕ್ಕೂ ಹಕ್ಕಿಯು ಗೂಡಿನಿಂದ ಹೊರಗೆ ಬಂದು ಗಂಟೆ ಎಷ್ಟಾಗಿದೆಯೋ ಅಷ್ಟು ಸಲ ಕೂಕ್ಕೂ ಕೂಕ್ಕೂ ಎಂದು ಹೇಳಿ ಒಳಗೆ ಹೋಗುತ್ತದೆ. ಮತ್ತೆ ಒಂದು ತಾಸು ಆದ ಮೇಲೆ ಮತ್ತೆ ಬಂದು ಹಾಗೆ ಮಾಡುತ್ತದೆ. ಇದು ನಿರಂತರವಾಗಿ ನಡೆಯುತ್ತಾ ಇರುತ್ತದೆ. ಅಲ್ಲಿಗೆ ಬಂದ ಅನೇಕ ಪ್ರವಾಸಿಗಳು ಜರ್ಮನಿಗೆ ಬಂದ ನೆನಪಿಗಾಗಿ ಕೂಕ್ಕೂ ಗಡಿಯಾರಗಳನ್ನು ಖರೀದಿಸಿದರು. ನಾವು ಸಹ ಒಂದು ಗಡಿಯಾರ ಖರೀದಿಸಿದೆವು. ಅಲ್ಲಿಂದ ಮುಂದೆ ಸ್ವಿಡ್ಡರ್‌ಲೆಂಡಿಗೆ ಹೋಗುವ ದಾರಿಯಲ್ಲಿ ರೈನ್ ಫಾಲ್ಸ್ ಸಿಗುತ್ತದೆ.

ರೈನ್ ನದಿ (Rhine Falls)

ಜರ್ಮನಿಯಲ್ಲಿ ಹರಿದಿರುವ ರೈನ್ ನದಿ ಈ ದೇಶಕ್ಕೆ ವರದಾನವಾಗಿದೆ. ರೈನ್ ಜಲಪಾತ. ಇದರ ನೀರು ಯೂರೋಪ್ ಖಂಡದಲ್ಲಿಯೇ ದೊಡ್ಡದಾದ ಜಲಪಾತ ಅಮೃತದಷ್ಟು ರುಚಿ ಆ ಚಳಿಯಲ್ಲೂ ಆ ನೀರನ್ನೂ ಕುಡಿದಷ್ಟು ಮತ್ತೆ ಕುಡಿಯಬೇಕು ಎನಿಸುತ್ತಿತ್ತು. ದೂರದಿಂದಲೇ ಜಲಪಾತದಲ್ಲಿ ಮೇಲಿನಿಂದ ನೀರು ಬೀಳುವ ಶಬ್ದ ಕಿವಿಗೆ ಅಪ್ಪಳಿಸುತಿತ್ತು. ನೀರು ಬೀಳುವ ದೃಶ್ಯವಂತೂ ಹಾಲಿನ ನೊರೆ ಉಕ್ಕಿ ಹರಿದಂತೆ ಕಾಣುತಿತ್ತು. ಇನ್ನೂ ದೂರದಿಂದ ಇಷ್ಟು ಸುಂದರ ರಮಣೀಯವಾಗಿ ಕಾಣುತ್ತಿದೆ. ಇನ್ನೂ ಹತ್ತಿರ ಹೋಗಿ ನೋಡಿದರೆ ಇನ್ನೂ ಹೇಗೆ ಕಾಣಬಹುದೆಂದು ನಾನು ಯೋಚಿಸುತ್ತಿದ್ದೆ. ನಾವು ಕ್ರೂಸ್‌ನಲ್ಲಿ ಕುಳಿತು ಜಲಪಾತದ ಕಡೆ ಹೊರಟೆವು. ಕ್ರೂಸ್‌ನಲ್ಲಿದ್ದವರೆಲ್ಲ ದೂರದಿಂದ photo ತೆಗೆಯತೊಡಗಿದರು. ಕ್ರೂಸ್ ಇನ್ನೂ ಜಲಪಾತದ ಹತ್ತಿರ ಹೋಗುತ್ತಿದ್ದಂತೆ ಕುಳಿತಿದ್ದ ಜನರೆಲ್ಲ ಹೋ! so beautiful ಎಮೇಜಿಂಗ್ ಹೀಗೆ ಹರ್ಷೋದ್ಗಾರಗಳನ್ನು ತೆಗೆಯುತ್ತಿದ್ದರು. ನಿಜವಾಗಲೂ ಇದು ತುಂಬಾ ಅದ್ಭುತ ಮತ್ತು ರಮಣೀಯವಾಗಿತ್ತು. ನಾನು ಸಹ ಇದೆಲ್ಲವನ್ನು ವಿಡಿಯೋ ಮಾಡುತ್ತಿದ್ದೆ. ಫೋಟೋ ಸಹ ತೆಗೆದುಕೊಂಡೆ. ಇನ್ನೂ ಹತ್ತಿರ ಹೋಗುತ್ತಿದ್ದಂತೆ ಕ್ರೂಸ್ ಒಂದು ರೌಂಡ್ ಸುತ್ತು ಹಾಕಿ ಹತ್ತಿರದಿಂದ ನೋಡಲು ಅವಕಾಶ ಮಾಡಿಕೊಟ್ಟಿತು. ಹತ್ತಿರ ಹೋದಂತೆ ಅಲ್ಲಿ ಸಹ Made of mistನ ಅನುಭವವಾಯಿತು. ನಾನು ಅಮೆರಿಕಾದಲ್ಲಿ ನಯಾಗಾರ ಫಾಲ್ಸ್ ನೋಡಿದಾಗ ಸಹ ಇದೇ ಅನುಭವ ರೋಮಾಂಚನ ಜನ್ಮ ಸಾರ್ಥಕ ಎಂಬ ಭಾವನೆಯಾಗಿತ್ತು. ಇದು ಸಹ ಅದೇ ತರದ ಇನ್ನೊಂದು ಅನುಭವ, ನಾನು ಇದುವರೆಗೆ ನೋಡಿ ಅತೀ ಸಂತೋಷವನ್ನು ಅನುಭವಿಸಿದರಲ್ಲಿ
ಇದು ಒಂದು ಜಾಗ, ನಂತರ ನಾವು ಕೂಸ್ ಪ್ರವಾಸ ಮುಗಿಸಿ ಬಂದ ಮೇಲೂ ಸಹ ನೀರು ಮೇಲುಗಡೆಯಿಂದ ಬೀಳುವುದನ್ನು ನೋಡಲು ಎತ್ತರದ ಜಾಗಕ್ಕೆ ಹೋಗಿ ಆ ಸೌಂದರ್ಯವನ್ನು ಕಣ್ಣು ತುಂಬಿಸಿಕೊಂಡೆವು. ಆ ಪ್ರದೇಶದ ಸುತ್ತಲೂ ಸುಂದರವಾದ ಹೂವಿನ ತೋಟವಿದೆ. ಜರ್ಮನಿಯಲ್ಲಿ ನಾನು ಇನ್ನೊಂದು ಇಷ್ಟಪಟ್ಟಿದ್ದು ಏನೆಂದರೆ ಜರ್ಮನಿಯಲ್ಲಿ ಅಲ್ಲಲ್ಲಿ ಇರುವ ಸುಂದರ ಹೂವಿನ ಗಿಡಗಳು ಎಲ್ಲಿ ನೋಡಿದರಲ್ಲಿ ಸುಂದರವಾದ ಹೂವಿನ ಗಿಡಗಳನ್ನು ಬೆಳೆಸಿದ್ದಾರೆ. ಅಲ್ಲಿಯ ಹವಾಮಾನಕ್ಕೆ ನಮ್ಮಲ್ಲಿ ಆಗುವ ಚಿಕ್ಕ ಚಿಕ್ಕ ಹೂಗಳೂ ಸಹ ತುಂಬಾ ದೊಡ್ಡದಾಗಿ ಅರಳುತ್ತವೆ.

ಸ್ವಿಟ್ಜರ್ಲೆಂಡ್

ನಮ್ಮ ಬಸ್ ಸ್ವಿಟ್ಜರ್ಲೆಂಡ್ಕ ಡೆ ಹೋಗುತ್ತಿತ್ತು. ರಮ್ಯತೆಯಿಂದ ಮೊದಲುಗೊಂಡು ಭವ್ಯತೆಯವರೆಗೆ ವಿವಿಧ ಮಜಲುಗಳೆಲ್ಲ ನಿಸರ್ಗದ ಚೆಲುವು ಸೂರೆಯಾದಂತಿರುವ ಸ್ವಿಟ್ಜರ್ಲೆಂಡ್ಜ ಗತ್ತಿನ ಪ್ರವಾಸಿ ಪ್ರಿಯರೆಲ್ಲರ ಆಕರ್ಷಣಿಯ ಕೇಂದ್ರವಾಗಿದೆ. ಆಲ್ಫ್ ಹಾಗೂ ಜೂರಾ ಪರ್ವತಗಳಿಂದ ಆವೃತವಾದ ಈ ಪರಿಸರ ಎತ್ತರವಾದ ಹಾಗೂ ಹಿಮಾಚ್ಛಾದಿತವಾದ ಹಲವು ಶಿಖರಗಳಿಂದ ಹಸುರು ತುಳುಕುವ ಆಳವೂ ಅಗಲವೂ ಆದ ಕಂದಕಗಳಿಂದ ವಿಸ್ತಾರವಾದ ಅನೇಕ ಸರೋವರಗಳಿಂದ ಕೂಡಿದೆ.

ಜ್ಯೂರಿಚ್

ನಮ್ಮ ಬಸ್ ಸ್ವಿಡ್ಡರ್‌ಲೆಂಡ್ ಕಡೆ ಹೊರಟಿತು. ಆಗಲೇ ಸ್ವಿಟ್ಜರ್ಲೆಂಡ್ನ ರಮಣೀಯ ವಾತಾವರಣ ಶುರುವಾಯಿತು. ನಾವು ಮೊದಲು ಸ್ವಿಟ್ಜರ್ಲೆಂಡ್ ದೇಶವನ್ನು ಜೂರಿಚ್ ಮೂಲಕ ಮುಟ್ಟಿದ್ದರಿಂದ ಮೊದಲು ಅಲ್ಲಿಗೆ ಹೋಗಬೇಕಾಯಿತು. ಜ್ಯೂರಿಚ್ ಸ್ವಿಡ್ಡರ್ ಲೆಂಡಿನ ಮಧ್ಯಭಾಗದಲ್ಲಿದ್ದು ಅತಿ ದೊಡ್ಡ ನಗರವಾಗಿದೆ. ಇದು ವಿಶ್ವದ ಅತಿ ದೊಡ್ಡ ಆರ್ಥಿಕ ನಗರಗಳಲ್ಲಿ ಒಂದಾಗಿದೆ. ಹೆಚ್ಚಿನ ಸಂಖ್ಯೆಯ ಸ್ವಿಸ್ ಬ್ಯಾಂಕ್‌ಗಳು ಇಲ್ಲಿಯೇ ಇವೆ.

ಈ ನಗರವು ಜ್ಯೂರಿಚ್ ಹೆಸರಿನ ಸರೋವರದ ಬಳಿ ಇದೆ. ಇದು ಸುಮಾರು 2000 ವರ್ಷಗಳಷ್ಟು ಹಳೆಯದಾಗಿದೆ. ಇದು ಆಲ್ಸ್ ಪರ್ವತ ಶ್ರೇಣಿಯಿಂದ ಕೇವಲ 30 ಕಿ.ಮೀ. ದೂರದಲ್ಲಿರುವ ಈ ನಗರ ಒಂದು ಕಣಿವೆಯಲ್ಲಿ ಇದೆ.

ಈ ನಗರದ ಮಧ್ಯೆ ಲಿಮ್ಲಾಟ ನದಿ ಹರಿಯುತ್ತಿದೆ. ಇದರ ಎರಡು ದಡಗಳಲ್ಲಿ ಈ ನಗರದ ಪ್ರೇಕ್ಷಣೀಯ ಸ್ಥಳವಿದೆ. ಇಲ್ಲಿ ದೊಡ್ಡ ದೊಡ್ಡ ಚರ್ಚ್‌ಗಳು ಹಲವಾರು ಮ್ಯೂಸಿಯಂಗಳಿವೆ. ಆದರೆ ಸಂಜೆಯಾಗಿದ್ದರಿಂದ ನಮಗೂ ಹೆಚ್ಚೇನೂ ನೋಡಲು ಆಗಲಿಲ್ಲ. ಅಲ್ಲಿ ಕೆಲವು ಫೋಟೋಗಳನ್ನು ತೆಗೆದುಕೊಂಡು ಬಸ್ ಏರಿದೆವು. ಅಲ್ಲಿಯೂ ಹವಾಮಾನವಂತೂ ತುಂಬಾ ಚಳಿಯಿಂದ ಕೂಡಿತ್ತು.

ಸ್ವಿಟ್ಜರ್ಲೆಂಡ್ ಪಟ್ಟಣ, ಆಗಸ್ಟ್ 4

ಇದು ಆಲ್ಸ್ ಪರ್ವತದ ಮಡಿಲಲ್ಲಿ ಇರುವ ಪುಟ್ಟ ದೇಶ ಸ್ವಿಟ್ಜರ್ಲೆಂಡ್ ಜಗತ್ತಿನ ಅತೀ ಸುಂದರ ದೇಶಗಳಲ್ಲಿ ಒಂದು. ರಮ್ಯತೆಯಿಂದ ಮೊದಲುಗೊಂಡು ಭವ್ಯತೆಯವರೆಗೆ ವಿವಿಧ ಮಜಲುಗಳಲ್ಲಿ ನಿಸರ್ಗದ ಚೆಲುವು ಸೂರೆಯಾದಂತಿರುವ ಈ ದೇಶ ಜಗತ್ತಿನ ಪ್ರವಾಸ ಪ್ರಿಯರೆಲ್ಲರ ಆಕರ್ಷಣೆಯ ಕೇಂದ್ರವಾಗಿದೆ. ಆಲ್ ಹಾಗೂ ಜೂರಾ ಪರ್ವತಗಳಿಂದ ಆವೃತವಾದ ಈ ಪರಿಸರ ಎತ್ತರವಾದ ಹಿಮದಿಂದ ಆವೃತವಾದ ಹಲವು ಶಿಖರಗಳಿಂದ ಹಸಿರು ತುಳುಕುವ ಆಳವೂ ಅಗಲವೂ ಆದ ಕಂದಕಗಳಿಂದ ವಿಸ್ತಾರವಾದ ಸರೋವರಗಳಿಂದ ದಟ್ಟವಾದ ಕಾಡಿನಿಂದ ಜುಳು ಜುಳನೆ ಹರಿಯುವ ಹೊಳೆಗಳಿಂದ ನಯನ ಮನೋಹರವಾಗಿದೆ.

ನಮ್ಮ ಬಸ್ಸು ದೊಡ್ಡ ಸರೋವರವೊಂದನ್ನು ದಾಟಿ ನಿಧಾನವಾಗಿ ಆಲ್ಫ್ ಪರ್ವತ ಶ್ರೇಣಿಯನ್ನು ಏರತೊಡಗಿತು. ಅಕ್ಕಪಕ್ಕದಲ್ಲಿರುವ ಪ್ರಕೃತಿ ಸೌಂದರ್ಯವನ್ನು ನೋಡಲು ಅನುಭವಿಸಲು ಸವಿಯಲು ಎರಡು ಕಣ್ಣು ಸಾಲದು. ಕಣ್ಣು ಕಂಡಿದ್ದನ್ನು ವರ್ಣಿಸುವ ಶಬ್ದಗಳೇ ಸಾಲದು. ಹಸಿರು ಬಣ್ಣದ ಹುಲ್ಲುಗಾವಲಿನ ಪ್ರದೇಶದಲ್ಲಿ ಹುಲ್ಲನ್ನು ಮೇಯುತ್ತಿರುವ ದೊಡ್ಡ ದೊಡ್ಡ ಹಸುಗಳು ಕೆಳಕ್ಕಿಳಿದಿರುವ ಮೋಡಗಳು, ಬೆಟ್ಟಗಳ ತುದಿಯಿಂದ ಜುಳು ಜುಳು ಹರಿಯುತ್ತಿರುವ ಝರಿಗಳು ಅದರ ಬದಿಯಲ್ಲಿ ಅಲ್ಲೊಂದು ಇಲ್ಲೊಂದು ಪುಟ್ಟ ಪುಟ್ಟ ಮನೆಗಳು, ಪುಟ್ಟ ರಸ್ತೆಗಳು, ಅಪರೂಪಕ್ಕೆ ರಸ್ತೆಗಳಲ್ಲಿ ಸಂಚರಿಸುತ್ತಿರುವ ವಾಹನಗಳು ಇವನ್ನು ನೋಡುವುದೇ ಒಂದು ಚೆಂದ.

ನಾವು ರಾತ್ರಿ 7 ಗಂಟೆ ಸುಮಾರಿಗೆ “ರಾಮದಾ” ಎನ್ನುವ ಹೋಟೆಲಿಗೆ ಮುಟ್ಟಿದೆವು. ರಾತ್ರಿ ಊಟ ಮಾಡಿ ಮಲಗಿದೆವು. ಮರುದಿನ ಬೆಳಿಗ್ಗೆ 8 ಗಂಟೆಗೆ ಕಾಂಟಿನೆಂಟಲ್ ಉಪಹಾರ ಮುಗಿಸಿ ಬಸ್ಸು ಹತ್ತಿದೆವು. ಆಗಷ್ಟೇ ಬಸ್ಸು ಇಂಟರ್‌ಲಾಕೆನ್ ಕಡೆ ಹೊರಟಿತು. ಅಂದು ಬೆಳಿಗ್ಗೆಯಿಂದಲೇ ಸಣ್ಣವಾಗಿ ಮಳೆ ಶುರುವಾಗಿತ್ತು. ಈ ಮೋಡದಲ್ಲಿ ಹಿಮದರಾಶಿಯನ್ನು ಹೇಗೆ ನೋಡುವುದು ಎಂದು ಚಿಂತೆಯಾಯಿತು. ನಾವು ಮೊದಲು ಜಲಗುಪ್ಪಾ ಎನ್ನುವ ಪರ್ವತ ನೋಡಲು ಹೋದೆವು. ಜಂಗ್ ಪ್ರೌ ಎಂದರೆ ಜರ್ಮನ್ ಭಾಷೆಯಲ್ಲಿ ಕನ್ಯಾಕುಮಾರಿ ಎಂದರ್ಥವಂತೆ. ಇದು ಸುಮಾರು 12,000 ಆಡಿ ಎತ್ತರವಿರುವ ಈ ಪರ್ವತವು ಪರ್ವತಾರೋಹಿಗಳಿಗೆ ನೆಚ್ಚಿನ ಆಕರ್ಷಣೆಯಾಗಿದೆ. ಈ ಪರ್ವತದ ಮೇಲೆ ದೊಡ್ಡ ದೊಡ್ಡ ಗ್ರೇಸಿಯರ್ (ನೀರಿನ ಬುಗ್ಗೆಗಳು) ಇವೆ. ಯಂಗ್ ಪ್ರೌ ಪರ್ವತದಿಂದ ಇಳಿದು ಬಂದು ಕಲ್ಪ ಸ್ಟೇಶನ್‌ಗೆ ಬಂದು ವಿಶ್ವವಿಖ್ಯಾತವಾದ ಸ್ವಿಸ್ ಗೋಲ್ಡನ್ ಪಾಸ್ ರೈಲನ್ನು ಹತ್ತಿದೆವು. ಸ್ವಿಸ್‌ಗೋಲ್ಡನ್ ಪಾಸ್ ರೈಲು ಪ್ರವಾಸಿಗರಿಗೆಂದ ವಿಶೇಷವಾಗಿ ತಯಾರಿಸಲಾಗಿರುವ ರೈಲು ಬಂಡಿಯಾಗಿದ್ದು, ಈ ರೈಲಿನಲ್ಲಿ ಕೇವಲ 4 ರಿಂದ 5 ಬೋಗಿಗಳು ಇರುತ್ತವೆ. ಪ್ರತಿ ಬೋಗಿಗೆ ದೊಡ್ಡ ದೊಡ್ಡ ಕಿಟಕಿಗಳು ಇದ್ದು ಸುತ್ತಲಿನ ಪ್ರಕೃತಿ ಸೌಂದರ್ಯವನ್ನು ಸವಿಯಬಹುದಾಗಿದೆ. ಈ ರೈಲು ಸ್ವಿಡ್ಡರ್‌ಲೆಂಡಿನ ಆಲ್ಸ್ ಪರ್ವತ ಶ್ರೇಣಿಗಳಲ್ಲಿ ಸಂಚರಿಸುತ್ತದೆ. ಇಂಟ‌ಲಾಕೆನ್‌ನಿಂದ ಈ ರೈಲು ಸಂಚರಿಸುತ್ತದೆ. ಇಂಟರ್‌ಲಾಕೆನ್‌ನಿಂದ ಈ ರೈಲು ಜೇಸಿಮನ್ ಎನ್ನುವ ಊರಿಗೆ ಕರೆದೊಯ್ದು ಅಲ್ಲಿಂದ ಮಾಂಟ್ರೋ ಎನ್ನುವ ಊರಿಗೆ ತಲುಪುತ್ತದೆ. ಈ ರೈಲು ಪ್ರವಾಸಿಗರ ರೈಲಾಗಿರುವುದರಿಂದ ಇದರ ಟಿಕೇಟ್‌ಗಾಗಿ ದುಬಾರಿ ಬೆಲೆ ತೆರಬೇಕಾಗುತ್ತದೆ.

ನಮ್ಮ ತಂಡದವರೆಲ್ಲ ರೈಲು ಏರಿ ಕುಳಿತೆವು. ರೈಲು ಪರ್ವತ ಶ್ರೇಣಿಯನ್ನು ಏರತೊಡಗಿತು. ನಾವು ರೈಲಿನಲ್ಲಿ ಪಕ್ಕದ ಸೀಟಿನಲ್ಲಿ ಕುಳಿತು ಈ ಪರ್ವತಗಳ ಸೊಬಗನ್ನು ನೋಡಿ ಮೂಕ ವಿಸ್ಮಿತರಾದೆವು. ಪರ್ವತಗಳ ಸೊಬಗು ವರ್ಣನಾತೀತ ಬಿಳಿ ಆಕಾಶದ ಹಿನ್ನೆಲೆಯಲ್ಲಿ ತಿಳಿನೀಲಿ ಬಣ್ಣದ ಪರ್ವತ ಹರಿದ್ವರ್ಣದ ಕಾಡು ಹಾದಿಯ ಬದಿಯಲ್ಲಿ ಅರಳಿದ ಹೂಗಳಿಗೆ ಲೆಕ್ಕವೇ ಇಲ್ಲ. ಬಿಳಿ ನೀಲಿ ಹಳದಿ ಕೆಂಪು ಹೂವುಗಳು ಈ ಪರ್ವತದ ಕುಸುಮಗಳಿಗೆ ಇಂಗ್ಲೆಂಡಿನಲ್ಲಿ ಪ್ರಿಮ್‌ ರೋಸಸ್ ವಯಲೆಟ್ಸ್ ಪೆರಿವಿಂಕಲ್ ಹೈಗ್ ಅನಿಮೊಗ್ ಎಂಬ ಮುದ್ದಾದ ಹೆಸರುಗಳಿವೆ.

ಪರ್ವತದ ಸೆರಗಿನಲ್ಲಿ ಕಣಿವೆಗಳ ಮಧ್ಯ ರೇಲ್ವೆ ಹೋಗುತ್ತಿತ್ತು. ರೈಲು ನಿಧಾನವಾದಂತೆ ಎಲ್ಲರೂ ಫೋಟೋ ತೆಗೆಯುವುದು ಅಯ್‌ಪೇಡಲ್ಲಿ ಕೆಮರಾಗಳಲ್ಲಿ ವಿಡಿಯೋ ಮಾಡತೊಡಗಿದ್ದರು. ಕಿಟಕಿ ಬಾಗಿಲು ತೆಗೆದು ಹೊರಗಿನ ಗಾಳಿಗೆ ಮೈಯೊಡ್ಡಿ ಚುಮು ಚುಮು ಗಾಳಿಯನ್ನು ಅನುಭವಿಸುತ್ತಾ ಇದ್ದರೆ ಸಮಯ ಹೋಗುವುದೇ ಗೊತ್ತಾಗುವುದಿಲ್ಲ.

ಒಂದು ಗಂಟೆ 10 ನಿಮಿಷ ಪ್ರಯಾಣದ ನಂತರ ನಮ್ಮ ರೈಲು ಬಂದು ನಿಲ್ದಾಣದಲ್ಲಿ ನಿಂತಿತು. ವಾಟರ್ ಬೆನ್ ವೆಲೆ (ಗುಡ್ಡಗಾಡಿನ ತೊಪ್ಪಲು ಇದು ಆ Shapeನ್ನು ಹೊಂದಿದ್ದು ಜಗತ್ತಿನಲ್ಲಿಯೇ ಅತ್ಯಂತ ಸುಂದರವಾಗಿದೆ. ಎರಡು ಕಡೆ 1000 ಮೀಟರ್‌ಗಿಂತಲೂ ಹೆಚ್ಚು ಎತ್ತರವಾದ ಗುಡ್ಡಗಳಿವೆ. ಕಾಕ್‌ವೀಲ್ ಟ್ರೇನ್ ಮೂಲಕ ಯುರೋಪಿನ ತುತ್ತ ತುದಿ 3454 ಮೀಟರ್ ಸಮುದ್ರ ತಟದಿಂದ ಎತ್ತರವಾದ ಯುರೋಪಿನ ತುತ್ತ ತುದಿ ಜಾಂಗ್ ಪ್ರೊ ತಲುಪಿದೆವು. ಝೇಶಲರ ಟ್ರೇನನ್ನು ಮಾಡಿದ ಎಂಜಿನಿಯರ್‌ಗೆ ಒಂದು ಸಲಾಮ್ ಮಾಡಬೇಕು. ಅಷ್ಟು ಕ್ಲಿಷ್ಟಕರವಾದ ಪ್ರದೇಶದಲ್ಲಿ ಅತಿ ಎತ್ತರದ ದುರ್ಗಮ ಪ್ರದೇಶದಲ್ಲಿ ಹಿಮಪಾತ ಮತ್ತು ಮೈ ಕೊರೆಯುವ ಚಳಿಯೊಂದಿಗೆ ಟ್ರೇನಿನ ಹಳಿಯನ್ನು ಜೋಡಿಸುವಾಗ ಬಹಳಷ್ಟು ಕೂಲಿಕಾರರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಅವರ ನೆನಪಿನಲ್ಲಿ ಅಲ್ಲಿರುವ ಕೆಲವು ಸ್ಮಾರಕಗಳನ್ನು ಈಗಲು ನೋಡಬಹುದು. ಕೊನೆಯಲ್ಲಿ ನಾವು ಯೂರೋಪಿನ ಅತಿ ಎತ್ತರ ಪ್ರದೇಶದಲ್ಲಿರುವ ಐಸ್ ಪ್ಯಾಲೇಸನ್ನು ನೋಡಲು ಹೋದೆವು.

By-ಶಾಲಿನಿ ಗಾಂವಕರ್

ಮುಂದಿನ ಭಾಗ ಓದಿ…

Leave a Comment

Comments

No comments yet. Why don’t you start the discussion?

    Leave a Reply