ಐಸ್ ಪ್ಯಾಲೇಸ್ (ಹಿಮದ ಅರಮನೆ):

ಐಸ್ ಪ್ಯಾಲೇಸ್ ಒಳಹೋಗುತ್ತಿದ್ದಂತೆ ತುಂಬಾ ಚಳಿಯಾಗುತ್ತಿತ್ತು. ಯಾವುದೋ ಗವಿಯೊಳಗೆ ಹೋದ ಅನುಭವ ನೆಲವೆಲ್ಲ ಹಿಮದಿಂದ ಮಾಡಲಾಗಿತ್ತು. ಕಾಲಿಡುವಾಗ ತುಂಬಾ ಜಾಗರೂಕತೆಯಿಂದ ಇಡಬೇಕಾಗಿತ್ತು. ಅದು ತುಂಬಾ ಜಾರುತಿತ್ತು. ನಾವು ಗೋಡೆಯ ಆಸರೆಯಿಂದ ಒಳಗೆ ಹೋದೆವು. ಅಲ್ಲಲ್ಲಿ ಹಿಮದಿಂದ ಅನೇಕ ಕಲಾಕೃತಿಗಳನ್ನು ಮಾಡಿದ್ದರು. ಹಿಮದಲ್ಲಿ ಪ್ರಾಣಿಗಳನ್ನೂ, ಪಕ್ಷಿಗಳನ್ನು ಹೂವಿನ ಕುಂಡಗಳನ್ನು ನಿರ್ಮಿಸಿದ್ದಾರೆ. ಪೆಂಗ್ವಿನ್ ಹಕ್ಕಿಗಳು ಮುಂದೆ ಹೋದಂತೆ ಕುಳಿತು ಕೊಳ್ಳಲು ಹಿಮದಿಂದಲೇ ಮಾಡಿದ ಸೋಪಾನಗಳು ಇದ್ದವು. ಅದರ ಮೇಲೆ ಕೂಡಲು ತುಂಬಾ ತಂಪಾಗಿ ಕಷ್ಟವಾಗುತಿತ್ತು. ಮುಂದೆ ಹಿಮದ ಕರಡಿಗಳು ಹಿಮದ ಚಿಕ್ಕ ಚಿಕ್ಕ ಮನೆಗಳು ಕಮಾನಿನಾಕಾರದ ಬಾಗಿಲು ಮನುಷ್ಯರ ಮುಖಗಳನ್ನು ಹಕ್ಕಿಗಳ ಗೂಡುಗಳು ಹೀಗೆ ನೂರಾರು ಕಲಾಕೃತಿಗಳನ್ನು ಮಾಡಿ ಇಟ್ಟಿದ್ದರು. ಅಲ್ಲಿ Top of Europe ಎಂದು ಹಿಮದಿಂದಲೇ ಬರೆದಿದ್ದರು. ಅದನ್ನೆಲ್ಲ ನೋಡಿ ನಾವು ಹೊರಗಡೆ ಬಂದೆವು. ಅಲ್ಲಿ ಸಹ ದೊಡ್ಡ ಶಾಪಿಂಗ್ ಮಾಲ್ ಇತ್ತು. ಅಲ್ಲಿ ನಾವು ನಮಗೆ ಬೇಕಾದ cold drinks snacks ಖರೀದಿ ಮಾಡಬಹುದಿತ್ತು. ಸ್ವಲ್ಪ ವಿಶ್ರಾಂತಿ ಪಡೆದು ಹೊರಗೆ ಜೋರಾಗಿ ಬೀಳುತ್ತಿರುವ ಹಿಮದ ಮಳೆ ನೋಡಲು ಹೋದೆವು. ಅಲ್ಲಿ ತುಂಬಾ ಗಾಳಿಯು ಇತ್ತು. ಇದರಿಂದ ಹಿಮದ ರಾಶಿಯ ಮೇಲೆ ಓಡಾಡಲು ಕಷ್ಟವಾಗಿತ್ತು. ಸ್ವಲ್ಪ ಹೊತ್ತು ಹಿಮದಲ್ಲಿ ಆಟವಾಡಿ ಒಳಗೆ ಬಂದೆವು. ಆ ಪೂರ್ತಿ ಕಟ್ಟಡವನ್ನು ಹಿಮದ ಗುಡ್ಡದ ಮೇಲೆಯೇ ಕಟ್ಟಲಾಗಿತ್ತು. ನಿಜವಾಗಲೂ ಇದು ಒಂದು ವಿಸ್ಮಯ ಮತ್ತು ಅದ್ಭುತವಾಗಿದೆ. ಸುಮಾರು 2-3 ತಾಸು ಅಲ್ಲೆಲ್ಲ ಅಡ್ಡಾಡಿ ಹಿಮದ ಪರ್ವತವನ್ನು ನೋಡಿ ಸಂತೋಷಪಟ್ಟೆವು. ಸ್ವಿಡ್ಡರ್‌ಲೆಂಡಿನಲ್ಲಿ ಫ್ರಾಂಕ್, ಇದು ನಮ್ಮ ಭಾರತೀಯ ರೂಪಾಯಿಗಿಂತ ತುಂಬಾ ಹೆಚ್ಚಾಗಿತ್ತು. ಇನ್ನೂ ತುಂಬಾ ನೋಡುವುದಿದೆ. ಕೊಂಡುಕೊಳ್ಳುವುದಿತ್ತು. ಆಗ ನಮ್ಮ ಗೈಡ್ ನೀರಜ ಬಂದು ಹೊರಡಲು ಸೂಚನೆ ಕೊಟ್ಟ. ರೈಲ್ವೆಯಿಂದ ಕೆಳಗೆ ಬರುವಾಗಲು ಸಹ ಅದೇ ರೋಮಾಂಚಕಾರಿ ಅನುಭವ ಅಂತೂ ಕುಡಿದ ನೀರು ಅಲುಗದಂತೆ ನಾವು ಹಿಮದ ಗುಡ್ಡಗಳನ್ನು ಇಳಿದು ಬಂದೆವು.
ಲಂಚ್ ಮುಗಿಸಿ ಮಧ್ಯಾಹ್ನದ ಊಟ ಮುಗಿಸಿ. ನಮ್ಮನ್ನು ಮೂರು ತಾಸು ಶಾಪಿಂಗ್ ಮತ್ತು ಫೋಟೋ ಶೂಟ್‌ಗೆ ಬಿಟ್ಟರು. ನಾವು ಮತ್ತು ನಮ್ಮ ಪ್ರವಾಸದಲ್ಲಿ ಸಿಕ್ಕ ಅರುಣಾ, ಆದಿರಾಜ ದಂಪತಿಗಳು ಒಟ್ಟಿಗೆ ಹೊರಟೆವು. ಇಲ್ಲಿಯ ಪ್ರತಿಯೊಂದು ಮಳಿಗೆಗಳದ್ದು ತನ್ನದೇ ಆದ ವೈಶಿಷ್ಟ್ಯ ಶಿಸ್ತು ಇತ್ತಾದರೂ ಪ್ರವಾಸಿಗರು ಹೆಚ್ಚು ಎನ್ನುವ ಕಾರಣದಿಂದಲೋ ಏನೋ ಪ್ರತಿ ವಸ್ತುವಿನ ದರಗಳು ಶ್ರೀಸಾಮಾನ್ಯನಿಗೆ ಕೈಗೆಟುಕಲಾರದಂತಿದ್ದವು. ನೆದರ್‌ಲ್ಯಾಂಡ್ ಸ್ವಿಸ್ ಗಡಿಯಾರ ವಿಶ್ವಖ್ಯಾತಿ ಪಡೆದಿದೆ. ಇವರಿಗೆ ಒಂದು ಸ್ವಿಸ್ ಗಡಿಯಾರ ಕೊಳ್ಳಬೇಕೆಂಬ ಆಶೆ ಇತ್ತು. ಹೀಗಾಗಿ ಸುಮಾರು ಗಡಿಯಾರದ ಅಂಗಡಿಗಳಿಗೆ ಹೋಗಿ ನೋಡಿದೆವು. ಆದರೆ ದರಗಳು ಮಾತ್ರ ನಮಗೆ ದುಬಾರಿ. ಇಲ್ಲಿ ಅತ್ಯಾಕರ್ಷಕವಾದ ಗಡಿಯಾರಗಳಿದ್ದವು. ತುಂಬಾ ನೋಡಿದ ಮೇಲೆ ಇವರಿಗೆ ಒಂದು ಗಡಿಯಾರ ಇಷ್ಟವಾಯಿತು. ನನಗೂ ಏನಾದರೂ ಕೊಳ್ಳುವಂತೆ ಒತ್ತಾಯ ಮಾಡಿದರು. ವಿಶೇಷ ಏನೆಂದರೆ ಆ ಅಂಗಡಿಯಲ್ಲಿದ್ದ ಒಂದು ಗಣೇಶನ ಮೂರ್ತಿ ಇಷ್ಟವಾಯಿತು. ತಟ್ಟನೆ ಅದನ್ನು 4 ಫ್ರಾಂಕ್ ಕೊಟ್ಟು ಖರೀದಿಸಿದೆ. ಸ್ವಿಸ್ ಚಾಕಲೇಟ್ ಸಹ ಇಲ್ಲಿ ವಿಶ್ವ ಪ್ರಸಿದ್ಧಿ.
ನನಗೆ ಇನ್ನೂ ನಾವು ಹತ್ತಿ ಏರಿ ಬಂದ ಕಾಗಮೀಲ್ ಟ್ರೇನಿನ ಬಗ್ಗೆಯೇ ಇನ್ನಷ್ಟು ಬರೆಯಬೇಕು ಎನಿಸುತ್ತದೆ. ಈ ಕಾಗವೀಲ್ ಟ್ರೇನಿಗೆ ಕನ್ನಡದಲ್ಲಿ ಹಲ್ಲಿನ ಚಕ್ರದ ಹಳಿಬಂಡಿ ಎಂದು ಕರೆಯುತ್ತಾರೆ.
ರೈಲಿನ ಚಕ್ರ:

ಹೌದು ಮೂರು ಚಕ್ರದ ಹಳಿ ಬಂಡಿ ಮಧ್ಯದ ಚಕ್ರಕ್ಕೆ ಹಲ್ಲುಗಳಿದ್ದುಇದು ಏದುಸಿರು ಬಿಡುತ್ತ ಮೇಲೇರುವ ರೈಲು ಜಾರದಂತೆ ತಡೆಯುವ ತಂತ್ರವಾಗಿದೆ. ಇದು 3350 ಮೀಟರ್ ಎತ್ತರವಿರುವ ರೈಲ್ವೆ ನಿಲ್ದಾಣ ರೈಲು ಪ್ರಾರಂಭವಾದೊಡನೆ ನಮಗೆ ಇದ್ಯಾವುದರ ಪರಿವೆ ಇಲ್ಲದೆ ನಿರಾತಂಕವಾಗಿ ಸುತ್ತಲಿನ ಹಿಮಾಚ್ಛಾದಿತ ರಮಣೀಯ ನಿಸರ್ಗದೇವಿಯ ಸೌಂದರ್ಯವನ್ನು ಸವಿಯುತ್ತ ಸಾಗಿದೆವು. ಇಲ್ಲಿ ಗುಡ್ಡವನ್ನು ಕೊರೆದು ಪ್ರವಾಸಿಗರಿಗೆ ರಕ್ಷಣಾ ದೃಷ್ಟಿಯಿಂದ ಕಟಾಂಜನಗಳನ್ನು ನಿರ್ಮಿಸಿ ಎರಡು ಕಡೆ ವೀಕ್ಷಣ ನಿಲ್ದಾಣಗಳನ್ನು ಮಾಡಿರುತ್ತಾರೆ. ಅಲ್ಲಿ ಒಂದೆರಡು ನಿಮಿಷ ರೈಲು ನಿಲ್ಲುತ್ತದೆ. ಆ ಸಮಯದಲ್ಲಿ ಕೆಳಗಿಳಿದು ವಿಕ್ಷಣಾ ಸ್ಥಳವನ್ನು ವೀಕ್ಷಿಸಿದರೆ ಅಬ್ಬಾ ಆ ಗಿರಿಗಳ ಮಡಿಲಲ್ಲಿ ಬೆಳೆದ ಸಸ್ಯಕಾಶಿ ನೋಡಿ ಜೀವಕ್ಕೆ ಧನ್ಯತಾಭಾವ ಮೂಡಿತು. ಇಷ್ಟೊಂದು ಎತ್ತರ ಪ್ರದೇಶದಲ್ಲಿ ಈ ರಮ್ಯ ರಮಣೀಯ ದೃಶ್ಯ ನೋಡಿ ಮೈ ರೋಮಾಂಚನವಾಯಿತು.
ಐಸ್ ಪ್ಯಾಲೇಸ್:

ನಿಬ್ಬೆರಗಾಗುವ ತಾಣ ವಿಶ್ವವಿಖ್ಯಾತ ಹಿಮದ ಅರಮನೆ ಈ ರಮಣೀಯ ಅರಮನೆಯ ರೂವಾರಿಗಳಾದ “ಗ್ರಿಂಡೇವಾಲ್ಟ” ಮತ್ತು “ವೇಂಗೇನ್” ಅವರು ಹಿಮದ ಗರ್ಭದಲ್ಲಿಳಿದು ಜಗತ್ತಿನಲ್ಲಿ ಕಂಡು ಕೇಳರಿಯದ ಮಹಾಮನೆಯನ್ನು ನಿರ್ಮಿಸಿ ಆ ಮಹಾಮನೆಯಲ್ಲಿ ವಿವಿಧ ಬಗೆಯ ಚಿತ್ತಾರಗಳ ಎರಕ ಹೊಯ್ದು ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಲು ಕಾರಣಭೂತರಾದರು. ಮೆಲ್ಲನೆ ಅಳುಕುತ್ತ ಒಳಗಡೆ ಕಾಲಿರಿಸಿದಾಗ ನಾವು ಯಾವುದೋ ಲೋಕಕ್ಕೆ ಪ್ರವೇಶಿಸುತ್ತಿದ್ದೇವೆ ಎನ್ನುವ ಭಾವದಿಂದ ಭಯವಾಗಿ ಇವರ ಕೈ ಹಿಡಿದುಕೊಂಡೆ. ಈ ಹಿಮದರಮನೆಯಲ್ಲಿ ಒಂದು ಪ್ರಮಾಣದ ಶೀತಲತೆಯನ್ನು ಕಾಯ್ದುಕೊಂಡು ಬಂದು ಅಲ್ಲಲ್ಲಿ ಕೋಣೆಗಳನ್ನು ನಿರ್ಮಿಸಿ ಹಿಮದ ಗೋಡೆಗಳ ಮೇಲೆ ವಿವಿಧ ತೆರನಾದ ಕಲಾಕೃತಿಗಳನ್ನು ಕೆತ್ತಿ ವಿಟ್ಲ ದೀಪಗಳನ್ನು ಮೂರ್ತಿ ಅಳವಡಿಸಿ ಹಿಮದ ನೆಲ ಜಾರಿದರೆ ಆಸರೆಗೆಂದು ಕಬ್ಬಿಣದ ಕಟಾಂಜನಗಳನ್ನು ನಿರ್ಮಿಸಿ ಇಲ್ಲಿ ಶೀತ ಉಳಿಸಿಕೊಳ್ಳಲು ಬಳಸಿದ ರೆಫ್ರಿಜರೇಟರ್‌ಗಳ ಗಾಳಿಯನ್ನು ಇನ್ನುಳಿದ ಕೋಣೆಗಳ ಉಷ್ಣತೆ ಕಾಪಾಡಿಕೊಳ್ಳಲು ಬಳಸಿದ್ದಾರೆ. ನಾವು ಹಿಮದ ಮನೆಯ ಗೋಡೆಗಳ ಮೇಲಿರುವ ಕೆತ್ತನೆಗಳನ್ನು ನೋಡುತ್ತ ಮುಂದೆ ಸಾಗುವಾಗ ಸಂತಸದ ಬುಗ್ಗೆ ಅಲೆ ಹೊಮ್ಮುತ್ತಿತ್ತು. ಆದರೆ ಕೆಲವರು ಉಸಿರಿನ ತೊಂದರೆಯಿಂದ ಬಳಲಿದ್ದರು. ಅಲ್ಲಿಂದ ಮುಂದೆ ಲಿಫ್ಟ್ ಏರಿ ಟಾಪ್ ಅಪ್ ದಿ ಯೂರೋಪ್ ನಿಗದಿತ ಸ್ಥಳ ತಲುಪಿ ಅತಿ ಸಂತೋಷದಲ್ಲಿ ಅದ್ಭುತ ಅನುಭವ ಅನುಭವಿಸಿದೆವು. ಕೊರೆಯುವ ಚಳಿಯಲ್ಲಿ ನಡುಗುತ್ತ ಖುಷಿಯಿಂದ ಕುಣಿದು ಕುಪ್ಪಳಿಸಿದೆವು.
ಜುಲೈ 7, 1896 ರಲ್ಲಿ ಈ ಹಳಿಬಂಡಿ ಕಾರ್ಯ ಪ್ರಾರಂಭವಾಯಿತು. ಸುಮಾರು 100 ಇಟಾಲಿಯನ್ ಕಾರ್ಮಿಕರು ಈ ಕೆಲಸದಲ್ಲಿ ತೊಡಗಿದರು. 1898ರಿಂದ ಈ ಗುಡ್ಡ ಕೊರೆಯುವ ಕೆಲಸ, ಪ್ರಾರಂಭವಾಯಿತು. ಏಪ್ರಿಲ್ 28-1903ರಲ್ಲಿ ಸ್ಟೇಷನ್ ಪ್ರಾರಂಭವಾಯಿತು. ಜುಲೈ 28, 1905ರಲ್ಲಿ ಈರ ನಿಲ್ದಾಣ ಪ್ರಾರಂಭವಾಯಿತು.
ಕಾಲವೀಲ ರೈಲು 1912 ಆಗಸ್ಟ್ 1 ರಂದು ಪೂರ್ಣಗೊಂಡಿತು. 19 ವರ್ಷಗಳ ಸುದೀರ್ಘ ಅವಧಿಯ ಕಾರ್ಯಾಚರಣೆಯಲ್ಲಿ ಗಾಯಗೊಂಡವರೆಷ್ಟೋ ಮರಣ ಹೊಂದಿದವರೆಷ್ಟೋ ಇವರೆಲ್ಲರ ಪರಿಶ್ರಮದ ಫಲವಾಗಿ ಈ ರೈಲು ಮಾರ್ಗ ತಯಾರಾಯಿತು. ಇದು ಈ ದೇಶದ ಮಹತ್ಸಾಧನೆ. ಸಂಜೆಯ ವೇಳೆ ಸ್ವಿಡ್ವರ್‌ಲೆಂಡಿನ ಸುಂದರ ಉದ್ಯಾನವನ್ನು ನೋಡಲು ಹೋದೆವು. ಇಂಟರಲಾಕ್‌ನ ರಮಣೀಯ ಉದ್ಯಾನವನದಲ್ಲಿ ದಿಲ್ ವಾಲೆ ದುಲಹನಿಯಾ ಲೇ. ಜಾಯೆಂಗೆ ಚಿತ್ರದ ಶೂಟಿಂಗ್ ನಡೆದದ್ದು ಇದರ ನೆನಪಿಗಾಗಿ ಅಲ್ಲಿ ಈ ಚಿತ್ರದ ನಿರ್ಮಾಪಕ ಯಶ್ ಚೋಪ್ರಾರವರ ಮೂರ್ತಿಯನ್ನು ಮಾಡಿ ನಿಲ್ಲಿಸಿದ್ದಾರೆ. ನಾವು ಅದರ ಹತ್ತಿರ ನಿಂತು ಪೋಟೋ ತೆಗೆಸಿಕೊಂಡೆವು. ಅಷ್ಟೇ ಅಲ್ಲದೇ ಇಲ್ಲಿ ಅನೇಕ ಹಿಂದಿ ಸಿನಿಮಾಗಳ ಚಿತ್ರೀಕರಣ ನಡೆದಿದೆಯಂತೆ. ಮೊದಲು ಹಿಮ ಪರ್ವತಗಳನ್ನು ತೋರಿಸಲು ಸಿನಿಮಾ ನಿರ್ದೇಶಕರು ಕಾಶ್ಮೀರಕ್ಕೆ ಹೋಗುತ್ತಿದ್ದರು. ಆದರೆ ಆತಂಕವಾದಿಗಳ ಕಾರಣದಿಂದ ಈಗ ಸ್ವಿಡ್ಡರ್ಲೆಂಡ್ ಕಡೆ ಮುಖ ಮಾಡಿದ್ದಾರೆ.
ಅಲ್ಲೆಲ್ಲ ಸುತ್ತಾಡಿ ಸಾಕಾಗಿ ಬಂದು ರೂಮಿಗೆ ಬಂದು ಮಲಗಿದೆವು. ಬೆಳಿಗ್ಗೆ 6-30ಕ್ಕೆ ಎದ್ದು ರೆಡಿಯಾಗಿ ಬೆಳಗಿನ ತಿಂಡಿ ತಿಂದು ಕೇಬಲ್ ಕಾರ್ಗೆಗೆ ಹೋಗುವ ಮುನ್ನ ಕೆಳಗಡೆ ಟಿಕೇಟ್ ಪಡೆದು 10000 ಅಡಿ ಎತ್ತರದ ಬಪರ ಮೈದಾನವನ್ನು ಕಣ್ಣುಂಬಿಕೊಳ್ಳಲು ಕೇಬಲ್ ಕಾರ್ ಮೂಲಕ ಮೇಲೆ ಹೋಗಲು ಸರದಿಯಲ್ಲಿ ಕಾದು ನಿಂತೆವು.
ಆಗಸ್ಟ್ 5 – ಟಿಟಲೀಸ್ ಲುಸರ್ನ್

ಕೇಬಲ್ ಕಾರಿನಲ್ಲಿ 6 ಜನ ಕುಳಿತುಕೊಳ್ಳಬಹುದು. ನಾವಿಬ್ಬರೂ ಮತ್ತು ಅರುಣಾ ಅದಿರಾಜ ದಂಪತಿಗಳು ಮತ್ತು ಇನ್ನೊಂದು ಮುಂಬಯಿಂದ ಬಂದ ದಂಪತಿಗಳು ಒಂದು ಕೇಬಲ್ ಕಾರಿನಲ್ಲಿ ಕುಳಿತುಕೊಳ್ಳಬಹುದಾದಂತಹ ಒಂದು ಚೌಕಾಕೃತಿಯ ಮುಚ್ಚು ಪೆಟ್ಟಿಗೆ ಇದರ ಮೇಲ್ ಭಾಗ ಒಂದು ಕಿರುಚಕ್ರದ ಮೂಲಕ, ಮೇಲಿಂದ ಎತ್ತರಕ್ಕೆ ದೂರ ದೂರದವರೆಗೆ ಅನೇಕ ಸ್ತಂಭಗಳ ಆಸರೆಯು ಮೇಲೆ ಹಾಸಿಕೊಂಡಿರುವ ಬಲವಾದ ಉಕ್ಕಿನ ಹಗ್ಗಕ್ಕೆ ಲಗತ್ತಾಗಿರುತ್ತದೆ. ಸಮಾನಾಂತರವಾಗಿ ಈ ನಿಲ್ದಾಣದಿಂದ ಈ ಪರ್ವತ ಟೆಟಿಲಸ್ ಎಂಬ ಶಿಖರದ 1000 ಅಡಿಗಳ ಎತ್ತರದವರೆಗೂ ಹಾಸಿಕೊಂಡಿರುವ ಈ ಹಗ್ಗದ ದಾರಿಯಲ್ಲಿ ನಾವು ಕೂತ ಈ ಚೌಕಾಕಾರದ ಕೇಬಲ್ ಕಾರುಗಳು ಏರುತ್ತಾ ಹೋಗುತ್ತವೆ. ಹಾಗೆಯೇ ಆ ಎತ್ತರದಿಂದ ಇದೇ ಬಗೆಯ ಕೇಬಲ್ ಕಾರುಗಳು ಇಳಿಯುತ್ತಾ ಬರುತ್ತವೆ. ಈ ಕೇಬಲ್ ಕಾರಿನ ಒಳಗೆ ನಾವು ಪ್ರವೇಶಿಸಿದ ಏಂಜಲ್‌ಬರ್ಗ್ ಎಂಬ ಹೆಸರಿನ ಮೊದಲ ನೆಲೆ ಇರುವುದೇ ಸಮುದ್ರ ಮಟ್ಟದಿಂದ ಮೂರು ಸಾವಿರ ಅಡಿಗಳ ಎತ್ತರದಲ್ಲಿ, ಕೇಬಲ್ ಕಾರ್ ನಿಧಾನವಾಗಿ ಏರತೊಡಗಿದಂತೆ ಕೆಳಗಣ ಅಗಲವಾದ ಕಣಿವೆ ತಪ್ಪಲಿನ ಹಚ್ಚನೆಯ ಬಯಲಲ್ಲಿ ಹರಡಿಕೊಂಡಿರುವ ಕೆಲವೇ ಮನೆಗಳ ಪುಟ್ಟ ಊರುಗಳು ಬೊಂಬೆಯ ಮನೆಗಳಂತೆ ತೋರುತ್ತವೆ. ಸುತ್ತಲೂ ಎತ್ತರವಾಗಿ ಹಬ್ಬಿಕೊಂಡ ಬೆಟ್ಟಗಳ ನಡುವಣ ಆ ಮೌನದಲ್ಲಿ ಕೆಳಗೆ ಹಚ್ಚ ಹಸುರ ಬಯಲಲ್ಲಿ ಮೇಯುತ್ತಿರುವ ಹಸುಗಳ ಕೊರಳ ಗಂಟೆಯ ಧ್ವನಿ ಕೇಳಿಸುತ್ತಿತ್ತು. ಹಗ್ಗದ ದಾರಿಯಗುಂಟ ಕೇಬಲ್ ಕಾರ್ ಮೇಲೇರಿದಂತೆ ಹಸುರು ಕಣಿವೆ ಕಣ್ಮರೆಯಾಗಿ ಪದರ ಪದರಗಳಾಗಿ ಹಾಸಿಕೊಂಡ ಪರ್ವತದ ಏರುವೆಗಳು ಹಾಗೂ ಆ ಪರ್ವತದ ಸೂಕ್ಷ್ಮ ಶಿಲಾವಿನ್ಯಾಸಗಳು ತೆರೆಯತೊಡಗುತ್ತವೆ. ಹಾಗೆಯೇ ಕ್ರಮ ಕ್ರಮೇಣ ಮೇಲೇರಿದಂತೆ ಕೇಬಲ್ ಕಾರ್ ಐದು ಸಾವಿರ ಅಡಿಗಳ ಎತ್ತರದ ನಿಲುಮನೆಯೊಂದರಲ್ಲಿ ನಿಲ್ಲುತ್ತದೆ. ನಿಲ್ದಾಣದ ಹೆಸರು “ಟ್ರುಬ” ಇಲ್ಲಿ ನಾವು ಇಳಿದು ಮತ್ತೊಂದು ಚೌಕಾಕಾರದ ಸುಮಾರು ಇಪ್ಪತ್ತೈದು ಜನ ನಿಂತುಕೊಳ್ಳಬಹುದಾದ ಇನ್ನೊಂದು ಕೇಬಲ್ ಕಾರಿಗೆ ಬದಲಾಯಿಸಬೇಕು. ಈ ಕೇಬಲ್ ಕಾರ್ ಮತ್ತೆ ಹತ್ತು ಸಾವಿರ ಅಡಿ ಎತ್ತರದ ಟಿಟ್ಲಸ್ ಎಂಬ ಶಿಖರದ ನಿಲುಮನೆಯನ್ನು ತಲುಪುವವರೆಗೆ ಏಕಕಾಲಕ್ಕೆ ಚಲಿಸುತ್ತ ಹಾಗೂ ತಿರುಗುತ್ತ ಮುಂದುವರಿಯುವಾಗ ಸಂಪೂರ್ಣ ಗಾಜಿನ ಹೊದಿಕೆಯ ದೊಡ್ಡ ಪಂಜರದಂಥ ಈ ಕೇಬಲ್. ಈ ಕೇಬಲ್ ಕಾರ್‌ನೊಳಗೆ ನಿಂತವರ ಕಣ್ಣಿಗೆ ಕಾಣುವ ದೃಶ್ಯ ವೈವಿಧ್ಯ ಹಾಗೂ ವೈಭವ ಅಪೂರ್ವವಾದದ್ದು, ಅದು ನಿಂತ ಒಡನೆ ತಾನಾಗಿ, ತೆರೆದುಕೊಂಡ ಬಾಗಿಲು ಮೂಲಕ ಇಳಿದು ಮತ್ತೆ ಮೆಟ್ಟಿಲುಗಳನ್ನೇರಿ ಬಂದರೆ ಅಲ್ಲಿ ಕುಳಿತು ಸೋಜಿಗದ ದೃಶ್ಯಗಳನ್ನು ಕಾಣಬಹುದಾದ ಪಾರದರ್ಶಕ ಗಾಜುಗಳ ವೀಕ್ಷಣಾ ಮಂದಿರ ಅದರ ಬದಿಗೊಂದು ವಿವಿಧ ವಸ್ತುಗಳನ್ನುಳ್ಳ ಅಂಗಡಿಗಳು ರೆಸ್ಟೋರೆಂಟ್‌ಗಳು ಫೋಟೋ ಸ್ಟುಡಿಯೋಗಳು ಇವೆ. ಅದನ್ನು ದಾಟಿ ಮೇಲಕ್ಕೆ ಬಂದರೆ ಕಟಕಟೆಯನ್ನುಳ್ಳ ಒಂದು ತೆರೆದ ಅಂಗಳ ಅಂಗಳದಗಲಕ್ಕೂ ಹಾಕಿದ ಮರದ ಬೆಂಚುಗಳು ಅಲ್ಲಿ ಕೂತು ಅಥವಾ ನಿಂತು ಸುತ್ತ ನಾಲ್ಕು ದಿಕ್ಕಿಗೆ ನೋಡಿದರೆ ಮೇರೆಯರಿಯದಂತೆ ಹಬ್ಬಿಕೊಂಡ ಪರ್ವತಗಳು ಹಾಗೂ ಶಿಖರಗಳ ನೋಟ ದಂಗುಬಡಿಸುತ್ತದೆ. ನಾವು ಹೊರಗಡೆ ಹೋಗುವ ಮೊದಲು ಫೋಟೋ ಸ್ಟುಡಿಯೋ ನೋಡಲು ಹೋದೆವು. ಅದು ಒಂದು ದೊಡ್ಡ ಫೋಟೋ ಸ್ಟುಡಿಯೋ ಆಗಿತ್ತು. ಅಲ್ಲಿ ಬಂದ ಪ್ರವಾಸಿಗರಿಗೆ ಸ್ವಿಡ್ಡರ್‌ಲೆಂಡಿನ ಉಡಿಗೆ ತೊಡಿಗೆಗಳನ್ನು ತೊಡಿಸಿ ಫೋಟೋ ತೆಗೆಯುತ್ತಿದ್ದರು. ಅದಕ್ಕಾಗಿ ಜಗತ್ತಿನ ಮೂಲೆ ಮೂಲೆಗಳಿಂದ ಬಂದ ಪ್ರವಾಸಿಗರು ಸ್ವಿಡ್ಡರ್‌ಲೆಂಡಿಗೆ ಬಂದ ನೆನಪಿಗಾಗಿ ಫೋಟೋ ತೆಗೆಸಿಕೊಳ್ಳಲು ಉದ್ದದ ಸರತಿಯ ಸಾಲಿನಲ್ಲಿ ನಿಂತಿದ್ದರು. ನಾವು ಸಹ ಅವರು ಜೊತೆ ಸಾಲಿನಲ್ಲಿ ಹೋಗಿ ನಿಂತೆವು. ಮತ್ತು ಫೋಟೋ ತೆಗೆಯಲು ಕೊಡಬೇಕಾದ ಹಣ ಎಷ್ಟೆಂದು ಕೇಳಿದೆವು. ಅದು ತುಂಬಾ ದುಬಾರಿಯಾಗಿತ್ತು. ಅದನ್ನು ಕೇಳಿ ನಾನು ಅಷ್ಟೊಂದು ಫ್ರಾಂಕ್ ಬೇಡ ವಾಪಸ್ಸು ಹೋಗೋಣ ಎಂದಿದ್ದೆ, ಆದರೆ ಇವರು ಮಾತ್ರ ಬೇಡ ಇಷ್ಟೊಂದು ಖರ್ಚು ಮಾಡಿ ಬಂದಿದ್ದೇವೆ. ಈ ಚಾನ್ಸು ಮತ್ತೆ ಸಿಗುವುದು ಇಲ್ಲ. ಫೋಟೋ ಸೈಜನ್ನು ಅವಲಂಬಿಸಿ ಹಣಕೊಡಬೇಕಿತ್ತು. ನಮ್ಮನ್ನು ಒಂದು ಕಡೆ ಕರೆದು ತಯಾರು ಮಾಡಿಸಿದರು. ಕೂದಲನ್ನು ಉದ್ದಕ್ಕೆ ಬಾಚಿ ಬಿಟ್ಟು ಒಳಗಡೆ ಬಿಳಿ ಶರ್ಟು ಅದರ ಮೇಲೊಂದು ಉದ್ದದ ಗೌನ್, ಕೈಯಲ್ಲಿ ಕಪ್ಪು ವೆನಿಟಿ ಬ್ಯಾಗ್, ಹಾಕಿ ಕೈಯಲ್ಲೊಂದು ಹೂವಿನ ಗೊಂಚಲು ಕೊಟ್ಟು ತುಟಿಗೆ ಲಿಪಿಸ್ಟಿಕ್ ಮುಖಕ್ಕೆ ಪೌಡರ್ ಹಾಕಿ ಅದರಂತೆ ಇವರಿಗೆ ಸಹ ಬಿಳಿ ಶರ್ಟ್ ಮೇಲೆ ಕೋಟು ಕಪ್ಪು ಪ್ಯಾಂಟ್ ತಲೆಗೆ ಟೋಪಿ ಕೈಯಲ್ಲೊಂದು ಉದ್ದದ ಕೋಲು ಕೋಟು ನಮ್ಮಿಬ್ಬರನ್ನು ಕೂಡ್ರಿಸಿ ಫೋಟೋ ತೆಗೆದರು. ಆ ಫೋಟೋ ನೆಗೆಟಿಪ್ಸ್ ಕೊಡುವುದಿಲ್ಲ. ಮತ್ತೆ ನಮ್ಮ ಫೋಟೋವನ್ನು ಬೇರೆ ಯಾರೂ ತೆಗೆಯುವಂತಿಲ್ಲ. ನಾವು ಫೋಟೋ ಕೆಲಸ ಮುಗಿಸಿ ಅವರಿಗೆ ಹಣ ಪೇ ಮಾಡಿ ಮೆಟ್ಟಲೇರಿ ತೆರೆದ ಅಂಗಳಕ್ಕೆ ಎದುರಿಗೆ ಬಂದರೆ ಹಾಸಿಕೊಂಡ ಬೆಳ್ಳನೆಯ ಹಿಮದ “ಗ್ರೇಸಿಯರ್” ಕಾಣುತ್ತದೆ.
By-ಶಾಲಿನಿ ಗಾಂವಕರ್
ಮುಂದಿನ ಭಾಗ ಓದಿ…
