ಮುಂದೆ ವೀಕ್ಷಣಾ ಗೋಪುರದ ಮೇಲೆ ನಿಂತು ನೋಡಿದರೆ ಮೈಲಿ ಮೈಲಿಗೆಗಳಗಲಕ್ಕೂ ನಿಶ್ಚಲವಾದ ಶ್ವೇತ ಶುಭ್ರವಾದ ಮಹಾಕಾಯ ಪರ್ವತದ ಇಳಿಜಾರುಗಳು ಅವುಗಳ ನಡುವೆ ಮುಗಿಲೆಡೆಗೆ ವಿವಿಧಾಕೃತಿಗಳಲ್ಲಿ ಚಾಚಿಕೊಂಡ ಕೃಷ್ಣವರ್ಣದ ಬೃಹತ್ ಶಿಲಾ ಶಿಖರಗಳು ನಡು ಹಗಲಿನಲ್ಲಿ ಬಿಸಿಲಿನಲ್ಲಿ ಥಳ ಥಳ ಹೊಳೆಯುತ್ತವೆ. ಅಷ್ಟೇ ಅಲ್ಲ ಆಲ್ಸ್ ಪರ್ವತದ ಇನ್ನೆಷ್ಟೋ ಶಿಖರಗಳನ್ನು ಅಲ್ಲಿ ಇರಿಸಿರುವ ದುರ್ಬೀನಿನ ಮೂಲಕ ನೋಡಬಹುದು. ಎತ್ತರ ಹಾಗೂ ಗಾತ್ರದ ವಿಸ್ತಾರಗಳಲ್ಲಿ ಹಿಮಾಲಯಕ್ಕೆ ಸೋದರ ಸಂಬಂಧಿಯಂತೆ ತೋರುವ ಈ ಪರ್ವತದಲ್ಲಿರುವ ಶಿಖರಗಳಲ್ಲಿ ಮ್ಯಾಟರ್ ಹಾರನ್ ಎಂಬುದೇ ಅತ್ಯಂತ ಎತ್ತರವಾದುದೆಂದು ಹೇಳಲಾಗುತ್ತದೆ. ಇದರ ಎತ್ತರ 14.705 ಅಡಿಗಳು.

ನಾವು ಟೆಟಿಲಸ್ ಪರ್ವತಾಗ್ರದಲ್ಲಿ ತುಂಬಾ ಹೊತ್ತು ಇದ್ದೆವು. ನಾನು ಮತ್ತು ಅರುಣಾ ಹಿಮದ ರಾಶಿಯಲ್ಲಿ ಹೊರಳಾಡಿ ಆಟ ಆಡಿದೆವು. ಇವರು ಸಹ ನಮ್ಮ ಜೊತೆಯಾದರೂ ಅರುಣಾಪತಿ ಆದಿರಾಜ ನಮ್ಮ ಫೋಟೋಗಳನ್ನು ತೆಗೆದರು. ಅರುಣಾ ಸಹ ನಮ್ಮಿಬ್ಬರ ವಿವಿಧ ಭಂಗಿಯ ಫೋಟೋ ತೆಗೆಯುತ್ತಿದ್ದರು. ನಾವು ಅಲ್ಲಿ ಸಾಕಷ್ಟು ಹೊತ್ತು ನಿಂತು, ಕೂತು, ಸಂಚರಿಸಿ ಆ ಮಹಾಶ್ವೇತಾ ಪ್ರಪಂಚದ ಭವ್ಯತೆಯನ್ನು ಆಸ್ವಾದಿಸಿದೆವು. ನಮ್ಮ ಸುತ್ತ ಪರ್ವತಗಳನ್ನು ತಬ್ಬಿಕೊಂಡು ಹಬ್ಬಿಕೊಂಡು ನುಣ್ಣಗೆ ಹಾಗೂ ನಯವಾಗಿ ಸಕ್ಕರೆಯ ಹರಳಿನಂತೆ ಥಳಥಳಿಸುವ ಆ ಹಿಮದ ನಿಶ್ಯಬ್ದ ಹಾಗೂ ನಿಶ್ಚಲವಾದ ಸೌಂದರ್ಯದ ಎದುರು ನಾವು ನಮ್ಮಂಥ ಎಷ್ಟೋ ಜನರ ಚಲನವಲನ, ನಾವಾಡುವ ಮಾತು ಕತೆ ಎಲ್ಲವೂ ಒಂದು ರೀತಿ ಯಃಕಶ್ಚಿತ್ ಎನಿಸಿತು. ಆ ಅಸಾಮಾನ್ಯವಾದ ದೃಶ್ಯಾವಳಿಗಳನ್ನು ನೋಡಲು ಆ ದೇವರು ಇನ್ನೆರಡು ಕಣ್ಣುಗಳನ್ನು ದಯಪಾಲಿಸಿದ್ದರೆ ಚೆನ್ನಾಗಿರುತ್ತಿತ್ತು ಎನಿಸಿತ್ತು. ಎರಡೆರಡು ಸೈಟರ್ ಧರಿಸಿ ಕಿವಿ ಮೂಗಿಗೂ ಕಾಲು ಎಲ್ಲವನ್ನೂ ಚಳಿಯಿಂದ ರಕ್ಷಿಸಿಕೊಂಡಿದ್ದರೂ ಸಹ ಅಲ್ಲಿಯ ಚಳಿ ನಮ್ಮನ್ನು ಅಷ್ಟು ಸಲೀಸಾಗಿ ಬಿಡುತ್ತಿರಲಿಲ್ಲ. ಇದಾವುದನ್ನು ಲೆಕ್ಕಿಸದೆ ನಾವೆಲ್ಲ ಆ ಹಿಮ ಲೋಕದಲ್ಲಿ ಕುಣಿದಿದ್ದೇನು, ಆಡಿದ್ದೇನೂ ಯಾವ ರೀತಿಯಿಂದ ಮನ ತಣಿಸಿಕೊಂಡರೂ ಇನ್ನೂ ಮನ ತಣಿಯಲಿಲ್ಲ. ನಮಗಂತೂ ಮತ್ತೆ ಯೌವ್ವನ ಬಂದಂತೆ ಆಯಿತು.
ಹಿಮ ಲೋಕದಲ್ಲಿ ಕುತೂಹಲದಿಂದ ಇನ್ನೂ ಮುಂದೆ ಹೋದರೆ, ಅಲ್ಲೊಂದು ಟಿಕೆಟ್ ಕೌಂಟರ್ ಸ್ಕೋಪ್ಲೇಸಿಯರ್‌ಗೆ ಹೋಗಲು ಟಿಕೆಟ್ ಪಡೆದು ನಾಲ್ಕು ಜನರ ಆಸನವಿರುವ ಜೋಕಾಲಿಯನ್ನು ಹೋಲುವ ಒಂದು ಯಂತ್ರದಲ್ಲಿ ಕುಳಿತೊಡನೆ ಸುರಕ್ಷಾ ಪಟ್ಟಿ ಧರಿಸಿದ ನಂತರ ಅಗ್ರೇಸಿಯರ ಒಮ್ಮೆಲೆ ಮೇಲಕ್ಕೆ ಹಾರಿದಾಗ ನನಗಂತೂ ಭಯವಾಯಿತು. ಪಕ್ಕದಲ್ಲಿರುವವರನ್ನು ಗಟ್ಟಿಯಾಗಿ ಹಿಡಿದುಕೊಂಡು ಉಸಿರು ಬಿಗಿ ಹಿಡಿದುಕೊಂಡು ಹೇಗೋ ಕುಳಿತುಕೊಂಡೆ. ಯಂತ್ರ ಅಲ್ಲಿ ನಿಂತೊಡನೆ ಕ್ಷಣಾರ್ಧದಲ್ಲಿ ನಾವೆಲ್ಲ ಇಳಿಯಬೇಕು. ಇಳಿದು ಮುಂದೆ ಹೆಜ್ಜೆ ಹಾಕಿದರೆ ದೃಷ್ಟಿ ಹರಿಸಿದಲ್ಲೆಲ್ಲ ಹಿಮವೋ ಹಿಮ. ಪ್ರತಿಯೊಬ್ಬರು ತಮ್ಮ ವಯೋಮಾನ ಮರೆತು ಆಡಿದ ಆಟ ಕುಣಿದ ಕುಣಿತ ಕೇಳುವುದೇ ಬೇಡ. ಜೀವಮಾನದ ಅನುಭವವದು. ಸ್ವರ್ಗಲೋಕವೆಂದರೆ ಹೀಗೆಯೇ ಇರಬಹುದೇ ಎನಿಸಿತು ಆ ಕ್ಷಣ. ತಾಣಗಳು ಮನೋಲ್ಲಾಸ ನೀಡುವುದಕ್ಕೆ ಜೊತೆಗೆ ಜೀವನ ಪಾಠವನ್ನು ಹೇಳಿಕೊಡುತ್ತವೆ. ಮತ್ತೆ ಕೇಬಲ್ ಕಾರ್ ಮೂಲಕ ಕೆಳಗಿಳಿದು ಅಲ್ಲಿಂದ ಉಪಹಾರ ಗೃಹದಲ್ಲಿ ತಿಂಡಿ ತಿಂದು, ನಂತರ ಇನ್ನೊಂದು ಕೇಬಲ್ ಕಾರ್ ಮೂಲಕ ಕೆಳಗಿಳಿದು ಬಂದೆವು. ಬರುವ ಮೊದಲು Photo shopಗೆ ಹೋಗಿ ನಮ್ಮ photo ತೆಗೆದುಕೊಂಡು ಬಂದೆವು. ಸಂಜೆ ನಮ್ಮನ್ನು ಲೂಸರ್ನ್ ಪೇಟೆಗೆ ಶಾಪಿಂಗ್‌ಗೆ ಬಿಟ್ಟರು. ಅಲ್ಲಿ ಪ್ರತಿ ವಸ್ತುವಿನ ದರವು ಶ್ರೀಸಾಮಾನ್ಯನಿಗೆ ಕೈಗೆಟುಕಲಾರದಂತಿದ್ದವು. ನಾವು ಎಲ್ಲ ಅಂಗಡಿಗಳ ಒಂದು ರೌಂಡ್ ಹಾಕಿ ಬಂದು ಹೋಟೆಲು ಸೇರಿಕೊಂಡೆವು.
ಆಗಸ್ಟ್ 6 ಬೆಳಿಗ್ಗೆ ಬೇಗ ಎದ್ದು ರೆಡಿಯಾಗಿ ತಿಂಡಿ ತಿಂದು ಬಸ್ಸು ಏರಿದೆವು. ಬಸ್ಸು ಲಿಚಿಸ್ಟಿನ್ ಕಡೆ ಓಡುತ್ತಿತ್ತು. ಸುಂದರವಾದ ಸಿಡ್ಡರ್‌ಲೆಂಡ್ ಬಿಟ್ಟು ಬರುವಾಗ ತುಂಬಾ ಬೇಸರವಾಯಿತು. ನನಗನಿಸಿದಂತೆ ಬೇರೆ ಪ್ರವಾಸಿಗರಿಗೂ ಅನಿಸಿರಬೇಕು.
ಬಸನ್ನೇರಿ ಹೊರಟಾಗ ಎಷ್ಟೋ ಹೊತ್ತು ಯಾರೂ ಮಾತನಾಡಲಿಲ್ಲ. ಮೇಲೆ ನೋಡಲು ಕೇವಲ ದೈಹಿಕ ಆಯಾಸದ ಮೌನವೋ ಎಂಬ ಭ್ರಮೆಯನ್ನುಂಟುಮಾಡುತ್ತಿದ್ದ ಆ ಮಾತಿಲ್ಲದ ಸ್ಥಿತಿಯ ಹಿಂದೆ ಅದುವರೆಗೂ ಚಿರಪರಿಚಿತ ಜಗತ್ತಿನ ಅನುಭವಗಳು ಎಷ್ಟೊಂದು ಅರ್ಥಹೀನ ಎಂಬುದನ್ನು ಅಪ್ರಜ್ಞಾಪೂರ್ವಕವಾಗಿ ಆ ಸಮಯಕ್ಕೆ ಅರಿವು ಮಾಡಿಕೊಟ್ಟಿತು.
ಆಗಸ್ಟ್ 7 – ಲಿಚಿಸ್ಟನ್

ನಾವು ಸ್ವಿಡ್ವರ್‌ಲೆಂಡಿನಿಂದ ಮುಂದೆ ಲಿಚಿಸ್ಟನ್ ಎನ್ನುವ ದೇಶಕ್ಕೆ ಹೊರಟೆವು. ಇದು ಯೂರೋಪ್ ದೇಶದಲ್ಲೇ ಅತಿ ಚಿಕ್ಕ ದೇಶ. ವದುಜ (Vaduz) ಎನ್ನುವುದು ಲಿಚಿಸ್ಟನ್ ದೇಶದ ರಾಜಧಾನಿ. ಇದು ಚಿಕ್ಕದಾದರೂ ಸುಂದರವಾದ ಊರು. ಅಲ್ಲಿರುವ ಕೆಲವು ಸ್ಮಾರಕಗಳನ್ನು ನಾವು ನೋಡಿದೆವು. ಅವುಗಳ ಮುಂದೆ ನಿಂತು ಫೋಟೋ ತೆಗೆಸಿಕೊಂಡೆವು. ಅದೇ ರೀತಿ ಸುಂದರವಾದ ಹೂವಿನ ತೋಟಗಳನ್ನು ನೋಡಿದೆವು. ನಾವು ಬಸ್‌ನಿಂದ ಕೆಳಗೆ ಇಳಿಯುವಾಗಲೇ ನಮ್ಮ ಗೈಡ್ ಇಲ್ಲಿ ನಮ್ಮ ಪಾಸ್‌ಪೋರ್ಟ್ ಮೇಲೆ stamp ಹಾಕಿಸಿಕೊಳ್ಳುವಂತೆ ಹೇಳಿದ್ದ. ಅದಕ್ಕೆ ನಾವು ಐದು ಯುರೋಗಳನ್ನು ಕೊಡಬೇಕಿತ್ತು. ಆದರೆ ನಾನು ಐದು ಯುರೋಗಳನ್ನು ಕೊಡುವ ಬದಲು ಆ ಆಫೀಸಿನ ಮುಂದೆ ನಿಂತು ಒಂದು ಫೋಟೋ ತೆಗೆಸಿಕೊಂಡೆನು. ಅದರ ಬಾಗಿಲಿನ ಮೇಲೆ Get your Souvenir Stamp here ಎಂದು ಬರೆದಿತ್ತು. ಇದು ನಾವು ಲಿಚಿಸ್ಟನಿಗೆ ಭೆಟ್ಟಿ ನೀಡಿದ ಸಾಕ್ಷಿಯಾಗಿ ಉಳಿದಿದೆ. ಲಿಚಿಸ್ಟಿನ್ ಸಹ ಸುಂದರವಾದ ದೇಶ ಎಲ್ಲಿ ನೋಡಿದರೂ ಸ್ವಚ್ಛತೆ ಮತ್ತು ರಮಣೀಯವಾದ ಸುಂದರ ತೋಟಗಳನ್ನು ನೋಡಬಹುದು.
ಲಿಚಿಸ್ಟನ್ ಸಣ್ಣ ದೇಶವಾಗಿದ್ದರಿಂದ ಅಲ್ಲಿ ಅತಿ ಅವಶ್ಯಕ ವಸ್ತುಗಳು ಮಾತ್ರ ಲಭ್ಯ ಅಲ್ಲಿಯ ಜನ ದೊಡ್ಡ ಸಾಮಾನಿಗೆ ಮತ್ತು ಕೆಲಸಕ್ಕೆ ಜರ್ಮನಿ ಇಲ್ಲವೆ; ಆಸ್ಟ್ರಿಯಾಕ್ಕೆ ಹೋಗುತ್ತಾರೆ. ಇಲ್ಲಿಯು ರಾಜರ ಮಾನೋಮೆಂಟ್‌ಗಳು ಇವೆ.
ಆಗಸ್ಟ್ 7 – ಆಸ್ಟ್ರಿಯಾ
ಫ್ರೆಂಚ್ ಕ್ರಾಂತಿಯ ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿ ಉಳಿದ ಪ್ರತಿಯೊಬ್ಬ ಪ್ರವಾಸಿಗನೂ ಭೇಟಿ ನೀಡಲೇಬೇಕಾದ ಒಂದು ಮಹತ್ವದ ಸ್ಥಳವೆಂದರೆ ಆಸ್ಟ್ರಿಯಾದ ಒಂದು ಅದ್ಭುತ ಸ್ಮಾರಕ “ಸಿಂಹ ಸ್ಮಾರಕ” ಇತಿಹಾಸ ಪ್ರಸಿದ್ಧ ಭಯಾನಕ ಫ್ರೆಂಚ್ ಕ್ರಾಂತಿಯ ಕಾಲದಲ್ಲಿ ನಡೆದ ಒಂದು ರೋಮಾಂಚನಕಾರಿ ಘಟನೆಯ ಕುರುಹಾಗಿ ಈ ಸ್ಮಾರಕ ಇಂದಿಗೂ ಅಚ್ಚಳಿಯದೇ ಉಳಿದಿದೆ. ಇದು ಒಂದು ವಿಸ್ಮಯದ ಸಂಗತಿಯೇ ಸರಿ. ಇಂತಹ ಒಂದು ಅತ್ಯದ್ಭುತ ಸ್ಮಾರಕವನ್ನು ನೋಡಿ ಮೂಕವಿಸ್ಮಿತರಾದೆವು
ಆಸ್ಟ್ರಿಯಾ ದೇಶದ ಅಂಗರಕ್ಷಕರು ತಮ್ಮ ಅರಸರ ಪ್ರಾಣರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ಹುತಾತ್ಮರ “ಸ್ಮರಣಾರ್ಥ ಒಬ್ಬ ಅಂಗ ರಕ್ಷಕನೇ ಶಿಲೆಯಲ್ಲಿ ನಿರ್ಮಿಸಿದ ಅದ್ಭುತ ವಿನ್ಯಾಸದ ಈ ಕಲೆ ನೋಡುಗರನ್ನು ಮಂತ್ರಮುಗ್ಧರನ್ನಾಗಿ ಮಾಡುವುದು.

ಈ ಸಿಂಹ ಸ್ಮಾರಕದಲ್ಲಿ ಸಿಂಹದ ಭುಜಕ್ಕೆ ಚುಚ್ಚಿದ ಭಲ್ಲೆ ಕೆಳಗೆ ರಕ್ಷಣೆ ಪಡೆದ ಫ್ರಾನ್ಸ್ ದೇಶದ ಗುರುತು ಹೊಂದಿದ ಗುರಾಣಿ ಎದುರಿಗೆ ಇರುವ ಸ್ವಿಸ್ ಮುದ್ರೆ ಎಲ್ಲವೂ ಈ ಶಿಲೆಯ ಸ್ಮಾರಕದಲ್ಲಿ ಸ್ಪುಟವಾಗಿದ್ದು ಸಿಂಹದ ಮುಖದಲ್ಲಿಯ ಅತೀ ದಯಾನೀಯ ಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ. ಇದು ಫ್ರೆಂಚ್ ಕ್ರಾಂತಿಯ ಜೀವಂತ ಉದಾಹರಣೆಯಾಗಿದೆ. ಇಂದಿಗೂ ಇತಿಹಾಸದ ದುರಂತಗಳನ್ನು ನೆನಪಿಸುತ್ತದೆ. ಈ ಸ್ಮಾರಕವಿರುವ ಸುತ್ತಲಿನ ವಾತಾವರಣವೂ ಸಹ ಮನೋಲ್ಲಾಸಕರವಾಗಿದೆ. ಆಸ್ಟ್ರಿಯಾ ಬಂದೊಡನೆ ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತವೇ ನೆನಪಾಗುತ್ತದೆ. ಸಾವಿರಾರು ವರ್ಷಗಳ ಝೇಂಕಾರದಿಂದ ಈ ಬೆಟ್ಟಗಳು ಜೀವಂತವಾಗಿವೆ. ಆಸ್ಟ್ರಿಯಾ ದೇಶದಲ್ಲಿ ಆಲ್ಫ್ ಪರ್ವತಗಳು ಹಾದು ಹೋಗಿದ್ದು ಮಧ್ಯ ಯುರೋಪಿನಲ್ಲಿರುವ ಈ ದೇಶದಲ್ಲಿ ಒಂಭತ್ತು ರಾಜ್ಯಗಳಿವೆ. ಇವುಗಳಲ್ಲಿ ಮುಖ್ಯವಾದವುಗಳು ಕೆಳಗಿನ ಆಸ್ಟ್ರಿಯಾ ಸ್ವಿಜರ್‌ಲ್ಯಾಂಡಿನಂತೆ ಅತ್ಯಂತ ಸುಂದರ ದೇಶ.
ನಾವು ಬಸ್ಸಿನಲ್ಲಿ ಬರುವಾಗ ನಮ್ಮ ಬಸ್ಸು ಹೆದ್ದಾರಿಯಲ್ಲಿ ಸಂಚರಿಸುವಾಗ ಅಕ್ಕ ಪಕ್ಕದಲ್ಲಿ ನಯನಮನೋಹರವಾದ ಬೆಟ್ಟ ಗುಡ್ಡಗಳು ಎಲ್ಲಿ ನೋಡಿದರೂ ಹಸಿರು ಹಾಸು, ಸಣ್ಣ ಪುಟ್ಟ ಮನೆಗಳು ಚರ್ಚ್‌ಗಳು ಕಂಡು ಬಂದವು. ಹಿತವಾದ ತಂಗಾಳಿ ಬೀಸುತಿತ್ತು. ಜನರು ಸಂಗೀತ ಮತ್ತು ಕಲೆಗೂ ನೀಡುವ ಮಹತ್ವವನ್ನು ಪಾಶ್ಚಿಮಾತ್ಯದ ಈ ದೇಶಗಳಲ್ಲಿ ಕಾಣಬಹುದು. ನಾವು ನಗರದಲ್ಲಿ ಸಂಚರಿಸುವಾಗ ಕೆಲವು ಹುಡುಗ ಹುಡುಗಿಯರು ಮುಖಕ್ಕೆಲ್ಲ ಗ್ರೇ ಕಲರಿನ ಬಣ್ಣವನ್ನು ಬಡಿದುಕೊಂಡು ರಸ್ತೆ ಪಕ್ಕ ಮೂರ್ತಿಯನ್ನು ನಿಲ್ಲಿಸಿದಂತೆ ಕಣ್ಣು ರೆಪ್ಪೆಯನ್ನು ಬಡಿಯದೆ ನಿಂತುಕೊಂಡಿದ್ದರು. ದೂರದಿಂದ ಅಲ್ಲ ಅತೀ ಹತ್ತಿರದಿಂದ ನೋಡಿದರೂ ಅವರು ಮನುಷ್ಯರೆಂದು ಗೊತ್ತಾಗುತ್ತಿರಲಿಲ್ಲ. ಅವರು ಅಲ್ಲಿ ಇಟ್ಟಿದ್ದ ಒಂದು ತಟ್ಟೆಯಲ್ಲಿ ಒಂದು ಯುರೋ ಹಾಕಿದಾಗ ತಲೆ ತಗ್ಗಿಸಿ ತಮ್ಮ ಸಂತೋಷವನ್ನು ವ್ಯಕ್ತಿಪಡಿಸುತ್ತಿದ್ದರು. ಆಗ ನನಗೆ ಗೊತ್ತಾಯಿತು ಇವರು ನಮ್ಮಂತಹದೇ ಮನುಷ್ಯರೆಂದು.
ಸ್ವರೋಸ್ತಿ ಕ್ರಿಸ್ಟಲ್ ಅರಮನೆ

ನಾವು ಯುರೋಪ್ ಟೂರ್ ಹೋಗುವಾಗಲೇ ನನ್ನ ಮಗಳು ಅಮ್ಮಾ ‘ಆಸ್ಟ್ರಿಯಾಕ್ಕೆ ಹೋದಾಗ ನನಗೆ ಸ್ವರೋಸ್ತಿ ಕ್ರಿಸ್ಟಲ್ ಆಭರಣಗಳನ್ನು ತರುವಂತೆ ಹೇಳಿದ್ದಳು. ಅದಕ್ಕಾಗಿ ನನಗೂ ಸಹ ಅದನ್ನು ನೋಡುವ ಕುತೂಹಲವಿತ್ತು. ಇದರ ಪ್ರವೇಶದ್ವಾರವೇ ನಮ್ಮನ್ನು ಮಂತ್ರ ಮುಗ್ಧರನ್ನಾಗಿ ಮಾಡಿತು. ಬೃಹತ್ ಮನುಷ್ಯಾಕೃತಿಯ ಬಾಯಿಯಿಂದ ಬೀಳುವ ಸ್ಪಟಿಕದಷ್ಟೇ ಪರಿಶುದ್ಧವಾದ ನೀರು. ಸ್ಪಟಿಕದಂತೆ ಕಳೆದುಂಬಿದ ಕಣ್ಣುಗಳು ಸುತ್ತಲಿನ ಹಸಿರು ಸಿರಿಯನ್ನು ನೋಡಿ ಮನಸ್ಸು ಸಂತೋಷದಿಂದ ಮುದಗೊಂಡಿತು. ಒಳಗೆ ಪ್ರವೇಶಿಸಿದರೆ ವಾವ್ ಅಲ್ಲೊಂದು ಹೊಳೆಯುವ ಒಂದು ಮಾಯಾಲೋಕ. ಎಲ್ಲಿ ನೋಡಿದರಲ್ಲಿ ಸ್ಪಟಿಕದ ದೊಡ್ಡ ದೊಡ್ಡ ಕಲ್ಲುಗಳು, ಚಿಕ್ಕ ಚಿಕ್ಕ ಕಲಾಕೃತಿಗಳು.
ಆ ಮಾಯಾ ಲೋಕದಲ್ಲಿ ಸ್ಪಟಿಕದ ಸುಂದರವಾದ ಕಲಾಕೃತಿಗಳನ್ನು ಕುತೂಹಲದಿಂದ ವೀಕ್ಷಿಸುತ್ತಾ ಒಟ್ಟು 7 ಮಾಯಾ ಲೋಕದ ಕೋಣೆಗಳನ್ನು ಹಾಯ್ದು ಸ್ಪಟಿಕದಲ್ಲಿ ಮಾಡಿದ ಕಣ್ಣಿಗೆ ರಾಚುವ ರಂಗಿನ ಹೊಳೆ. ಹೊಳೆಯುವ ವಿನ್ಯಾಸದ ಚಿತ್ತಾರಗಳು ಗಣೇಶ. ಬುದ್ಧ ಕ್ರಿಸ್ತನ ಹೊಳೆವ ಸ್ಪಟಿಕದಿಂದ ಮಾಡಿದ ಮೂರ್ತಿಗಳು ನನಗಂತೂ ಯುರೋಪ್ ದೇಶದಲ್ಲಿ ನಮ್ಮ ಗಣಪನನ್ನು ಕಂಡು ತುಂಬಾ ಸಂತೋಷವಾಯಿತು. ಕೂಡಲೇ ಮೊಬೈಲ್‌ನಲ್ಲಿ ಫೋಟೋ ತೆಗೆದುಕೊಂಡೆ. ಮುಂದೆ ಹೋದಂತೆ, ಇನ್ನೊಂದು ರೂಮಿನಲ್ಲಿ ಹೆಂಗಳೆಯರ ಕಿವಿಯ ಕೊರಳಿನ ನಾನಾತರದ ಆಭರಣಗಳನ್ನು ನೋಡುತ್ತಾ ನಿಂತರೆ ಸಮಯ ಹೋಗಿದ್ದೇ ಗೊತ್ತಾಗುತ್ತಿರಲಿಲ್ಲ.
ಈ ಆಭರಣಗಳು ಅತೀ ದುಬಾರಿ ಎನಿಸಿದರೂ ಆಭರಣದ ವಿನ್ಯಾಸಕ್ಕೆ ಮರುಳಾಗಿ ಮತ್ತು ಮಗಳ ಇಷ್ಟದಂತೆ ಕಿವಿಯ ಆಭರಣದ ಮೂರು ಸೆಟ್‌ಗಳನ್ನು ಕೊಂಡು ತಂದೆ. ಇದರಿಂದ ಮಗಳಿಗೆ ಖುಷಿಯಾಯಿತು. ಇದಕ್ಕೆ ಸಾಕ್ಷಿಯಾದ ಡೇನಿಯಲ್ ಸ್ವರೋಸ್ಕಿ ಎಂಬುವನು ಡೈಮಂಡ್ ಕತ್ತರಿಸಿ ಹೊಳಪುಗೊಳಿಸುವ ವಿದ್ಯುತ್ ಯಂತ್ರ ಶೋಧಿಸಿದ ಫಲವೇ ಈ ಅದ್ಭುತ ಸ್ಪಟಿಕದ ಅರಮನೆಯ ಹುಟ್ಟಿಗೆ ಕಾರಣವಾಯಿತು. ಸೀಸಮಿಶ್ರಿತ ಗಾಜಿನ ಹರಳುಗಳನ್ನು ವಿವಿಧ ಆಕಾರದಲ್ಲಿ ಕತ್ತರಿಸಿ, ತಿದ್ದಿ, ತೀಡಿ, ಹೊಳೆ ಹೊಳೆಯುವ ಸ್ಪಟಿಕ ತಯಾರಿಸಿದನು. ಕೋಸ್ಟನ್ ಮತ್ತು ವೀಸ ಎಂಬುವರು ಈ ಸ್ವರೋಷ್ಠಿ ಗುತ್ತಿಗೆ ಪಡೆದು ಲ್ಯಾಟಿನ್ಸ್‌ನಲ್ಲಿ ಈ ಕಂಪನಿಯನ್ನು ಸ್ಥಾಪಿಸಿ ಜಗದ್ವಿಖ್ಯಾತರಾದರು. ಸ್ಪಟಿಕ ಇಷ್ಟೊಂದು ಹೊಳೆಯಲು ಕಾರಣ ಕನ್ನಡಕದ ಗಾಜಿಗೆ ಸೀಸದ ಆಕ್ಸೆಡ್ ಮಿಶ್ರಣ ಮಾಡಿದ್ದಾರೆ. ಗಾಜಿನ ಪ್ರತಿಫಲನ ಹೆಚ್ಚಾಗಿ ತನ್ನ ಮೇಲೆ ಬಿದ್ದ ಬೆಳಕನ್ನು ತನ್ನೊಳಗೆ ಮೂಲೆಯಿಂದ ಮೂಲೆಗೆ ಚಲಿಸುವುದರಿಂದಲೇ ಇವುಗಳು ಫಳ ಫಳ ಹೊಳೆಯುತ್ತಿರುತ್ತವೆಯಂತೆ.
ಸ್ಪಟಿಕದ ಆಭರಣಗಳನ್ನು ಖರೀದಿಸಿ ಹೊರಬಂದಾಗ ಎಲ್ಲರ ಮುಖದಲ್ಲಿಯೂ ತೃಪ್ತಿಯ ನಗೆ ಇತ್ತು. ಕೆಲವರು ತಾವು ಖರೀದಿಸಿದ ಆಭರಣಗಳನ್ನು ಒಬ್ಬರಿಗೊಬ್ಬರು ತೋರಿಸಿ ಆನಂದಿಸಿದರೆ ಕೆಲವರು ಖರೀದಿಸಿದ ಆಭರಣಗಳನ್ನು ಅಲ್ಲಿ ಧರಿಸಿಕೊಂಡು ಸಂಭ್ರಮಪಟ್ಟರು.
By-ಶಾಲಿನಿ ಗಾಂವಕರ್
ಮುಂದಿನ ಭಾಗ ಓದಿ…
