(ಭಾಗ-25) ಪಡುವಣದ ಪ್ರವಾಸ: ಒಂದು ಪ್ರಯಾಣ, ಸಾವಿರ ನೆನಪುಗಳು!

(ಭಾಗ-25) ಪಡುವಣದ ಪ್ರವಾಸ: ಒಂದು ಪ್ರಯಾಣ, ಸಾವಿರ ನೆನಪುಗಳು!

ವಿಯನ್ನಾ:

ವಿಯನ್ನಾ ಆಸ್ಟ್ರಿಯಾ ದೇಶದ ರಾಜಧಾನಿ. ಇದು ಆ ದೇಶದ ಸುಂದರ ನಗರ. ಇಲ್ಲಿಯ ಜನ ಜರ್ಮನ್ ಭಾಷೆ ಮಾತನಾಡುತ್ತಾರೆ. 15ನೇ ಶತಮಾನದಲ್ಲಿ ಪವಿತ್ರ ರೋಮನ್ ಸಾಮ್ರಾಜ್ಯದ ರಜಧಾನಿಯಾಗಿದೆ. ವಿಯೆನ್ನಾ 19ನೇ ಶತಮಾನದಲ್ಲಿ ನೆಪೋಲಿಯನ್ ಯುದ್ಧದ ಸಮಯದಲ್ಲಿ ಆಸ್ಟ್ರಿಯಾ ಸಾಮ್ರಾಜ್ಯದ ರಾಜಧಾನಿಯಾಯಿತು. ಇದು ಶಾಸ್ತ್ರೀಯ ಸಂಗೀತಕ್ಕೆ ಹೆಸರಾದ ವಿಯನ್ನಾದಲ್ಲಿಯೇ ಪಾಶ್ಚಿಮಾತ್ಯ ಶೈಲಿಯ ಮೊಟ್ಟ ಮೊದಲ ಸಂಗೀತ ಶಾಲೆ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ. ಅಡಾಲ್ಫ್ ಹಿಟ್ಲ‌ರ್ ಜನಿಸಿದ್ದು ಆಸ್ಟ್ರಿಯಾ ದೇಶದಲ್ಲೇ. ವಿಶ್ವ ಮಹಾಯುದ್ಧದ ಸಮಯದಲ್ಲೇ ವಿಯನ್ನಾ ನಗರ ನಾಲ್ಕು ಹೋಳಾಗಿ ಅದರ ನಾಲ್ಕು ಭಾಗಗಳನ್ನು ಅಮೇರಿಕಾ, ಇಂಗ್ಲೆಂಡ್, ಫ್ರಾನ್ಸ್ ಹಾಗೂ ರಷ್ಯಾ ದೇಶಗಳು ಆಳುತ್ತಿದ್ದವು.

ವಿಯನ್ನಾ ನಗರದಲ್ಲಿ ವಿಶ್ವ ಸಂಸ್ಥೆಯ ಹಲವಾರು ಘಟಕಗಳಿವೆ. ವಿಯನ್ನಾದಲ್ಲಿಯೇ ಅಂತರರಾಷ್ಟ್ರೀಯ ಅಣುಶಕ್ತಿ ಕಛೇರಿ ಅಪರಾಧಗಳ ಬಗೆಗಿನ ವಿಶ್ವಸಂಸ್ಥೆ ಕಛೇರಿ ಹಾಗೂ ಅಂತರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಮಂಡಳಿಯ ಕೇಂದ್ರ ಸ್ಥಾನ ಇವೆ.

ಆಗಸ್ಟ್ 8 – ಫ್ಲಾರೆನ್ಸ್

ನಾವು ವೆನಿಸ್‌ನಿಂದ ಫ್ಲಾರೇನ್ಸ್ ಕಡೆ ಪ್ರಯಾಣ ಬೆಳೆಸಿದೆವು. ಫ್ಲಾರೆನ್ಸ್‌ಗೆ ಹೋಗುವ ದಾರಿಯುದ್ದಕ್ಕೂ ಪ್ರಕೃತಿ ತುಂಬಾ ರಮ್ಯವಾಗಿದೆ. ಆಲ್ಸ್ ಪರ್ವತಾವಳಿ ಇಲ್ಲಿಂದ ಆರಂಭವಾಗುತ್ತದೆ. ದಾರಿಯುದ್ದಕ್ಕೂ ಪರ್ವತದಲ್ಲಿ ಕೊರೆದ ಅನೇಕ ಸುರಂಗ ಮಾರ್ಗಗಳಲ್ಲಿ ಹೋಗಬೇಕಾಯಿತು. ಕಣಿವೆಗಳಲ್ಲಿ ಸಸ್ಯ ಸಮೃದ್ಧಿಯ ಸೂರ್ಯಕಾಂತಿ ಹೂ ಗಿಡಗಳು ದ್ರಾಕ್ಷಿ ತೋಟಗಳು. ಇಲ್ಲಿ ಕೆಲಸಗಳು ಯಾಂತ್ರೀಕೃತಗೊಂಡಿವೆ. ತೋಟಗಳ ಮಧ್ಯೆ ನೀರು ಹನಿಸುತ್ತಿದ್ದ ನೀರಿನ ಚಿಮ್ಮುಗೆಗಳು ಮನಸ್ಸಿಗೆ ಮುದ ನೀಡುತ್ತದೆ.

ನಮ್ಮ ಪ್ರವಾಸ ಮಧ್ಯೆ ನಮ್ಮ ಗೈಡ್ ನಮ್ಮ ದೇಹ-ಬಾಧೆ ನೀಗಿಸಿಕೊಳ್ಳಲು ಟಾಯ್‌ಲೆಟ್‌ಗಳು ಇದ್ದಂಥ ರೆಸ್ಟೋರೆಂಟ್‌ನ ಹತ್ತಿರ ನಮ್ಮ ಬಸ್ಸು ನಿಲ್ಲಿಸುತ್ತಿದ್ದ. ಅಲ್ಲಿನ ರೆಸ್ಟೋರೆಂಟ್‌ಗಳು ವಿಶಾಲವಾಗಿದ್ದು ಒಳಗೆ ಹೊರಗೆ ಹೂವಿನ ಕುಂಡಗಳಿಂದ ಅಲಂಕೃತವಾಗಿದ್ದವು. ಇಲ್ಲಿ ಕಾಫಿ ಬ್ರೆಡ್ ಸ್ಯಾಂಡ್‌ವಿಚ್‌ನ ಪಿಜ್ಜಾಗಳು ಮಾತ್ರವಲ್ಲದೆ ಬಗೆ ಬಗೆಯ ಬಿಸ್ಕತ್ತು, ಚಾಕಲೇಟ್‌ಗಳು, ಗೊಂಬೆ ಕ್ಯಾಸೆಟ್ ಹಾಲಿನ ಹಣ್ಣಿನ ರಸದ ಡಬ್ಬಿಗಳು ಒಣ ಹಣ್ಣುಗಳು ಸೊವೆ ನೀರಗಳು ಇವನ್ನೆಲ್ಲ ಓರಣವಾಗಿ ಜೋಡಿಸಿರುತ್ತಾರೆ. ಪ್ರವಾಸಿಗಳು ತಿಂಡಿ, ಕಾಫಿಯಾದ ಬಳಿಕ ಇವನ್ನು ಕೊಳ್ಳುವರೆಂಬುದು ಅವರಿಗೆ ಗೊತ್ತು.
ಫ್ಲಾರೆನ್ಸ್ ಎಂದರೆ ಪುಷ್ಪ ನಗರಿ ಎಂದರ್ಥ. ಈ ಪುಟ್ಟ ನಗರ ಆಲ್ಫ್ ಪರ್ವತದ ಕಣಿವೆಯಲ್ಲಿ ಹರಡಿಕೊಂಡಿದೆ. ಅರ್ನೊ ಎಂಬ ಸುಂದರ ನದಿ ಈ ನಗರದ ಮಧ್ಯೆ ಹರಿದು ಅದಕ್ಕೊಂದು ವಿಶೇಷ ಸೊಬಗನ್ನು ನೀಡಿದೆ. ಹಳೆಯ ಕಾಲದ ಮನೆಗಳೂ ಓಣಿಗಳು ಆದರೆ ರಸ್ತೆಗಳಲ್ಲಿ ಅಂಥ ಜನಸಂದಣಿ ಇಲ್ಲ.

ಪುನರುದಯ ಕಾಲ ಅಂದರೆ ಕ್ರಿ.ಶ. 14-15ನೇ ಶತಮಾನಗಳಲ್ಲಿ ಫ್ಲಾರೆನ್ಸ್‌ನ ಕಲಾವೈಭವ ಜಗತ್ತನ್ನೇ ಬೆರಗುಗೊಳಿಸಿತು. ಅದ್ವಿತೀಯ ಶಿಲ್ಪಿ ಮೈಕೆಲಾಂಜೆಲೋ ಹುಟ್ಟಿ ಬೆಳೆದುದು ಈ ನಗರದಲ್ಲೇ. ಬ್ರುನೆಲ್ಲಿಸ್ಟ ಗಿ ಉರ್ಟ್ ಗಿ ಯೋಟೊ ಮುಂತಾದ ಶಿಲ್ಪ ವಿನ್ಯಾಸಕಾರ ಹಾಗೂ ಚಿತ್ರಗಾರರು ತಮ್ಮ ಅಪೂರ್ವ ಕೃತಿಗಳನ್ನು ಸೃಷ್ಟಿ ಮಾಡಿದ್ದು ಈ ಕಾಲದಲ್ಲೇ. ಇಟಲಿಯ ಖ್ಯಾತ ಕವಿ ದಾಂಟೆ ಜನರಿಗೆ ಅರ್ಥವಾಗುವ ಲ್ಯಾಟಿನ್ ಭಾಷೆಯಲ್ಲಿ ಡಿವೈನ್ ಕಾಮಿಡಿ” ಎಂಬ ಮಹಾಕಾವ್ಯ ಬರೆದು ಕಲೆ ಸಾಹಿತ್ಯಗಳಿಗೆ ಅಪಾರ ಪ್ರೋತ್ಸಾಹ ನೀಡಿದವರು ಮೆದಿಚಿ ಮನೆತನದವರು.

ಫ್ಲಾರೆನ್ಸಿಗೆ ಬರುವ ಪ್ರತಿ ಯಾತ್ರಿಕರು ಮೊದಲು ನೋಡುವ ಸ್ಥಳ ಪಿಯಾಸೊಡೆಲ್ಲಾ ಸಿಗೊರಿಯಾ (ಪ್ರತಿ ಜನರು ಪಿಯಾಸೋ ಎನ್ನುತ್ತಾರೆ. ಅರಮನೆಗೆ ಪಾಲಸೊ) ಈ ಜಾಗ ಹದಿನಾಲ್ಕನೆಯ ಶತಮಾನದ ಫ್ಲಾರೆನ್ಸಿನ ಸಾಮಾಜಿಕ ಮತ್ತು ರಾಜಕೀಯ ಕೇಂದ್ರವಾಗಿತ್ತು.

ಎಲ್ಲ ಚೌಕಗಳಂತೆ ಇಲ್ಲೂ ಕಾರಂಜಿ ಇದೆ. ಇದನ್ನು ನೆಮ್ಯೂನ್ ದೇವತೆ ಕಾರಂಜಿ ಎಂದು ಕರೆಯುತ್ತಾರೆ. ಆ ಚೌಕದ ಹಿಂಭಾಗದಲ್ಲಿರುವುದು ವೆಚ್ಚಿಯೋ ಅರಮನೆ ಮತ್ತು ಗಂಟೆ ಗೋಪುರ ಅರಮನೆಯ ಮುಂದೆ ಮೈಕಲಾಂಜೆಲೋ ಕೆತ್ತಿದ ಜಗದ್ವಿಖ್ಯಾತ ಡೇವಿಡ್‌ನ ಬೆತ್ತಲೆ ಪ್ರತಿಮೆಯಿದೆ. ಡೇವಿಡ್ ಪುನರುದಯ ಕಾಲದ ರೋಮನ್‌ರ ಶಕ್ತಿ ಮತ್ತು ರೋಷಗಳನ್ನು ಪ್ರತಿಬಿಂಬಿಸುವ ಶಿಲ್ಪ ಎಂದು ಕರೆಯುತ್ತಾರೆ.

ಗಿಯೋವನಿ ಚೌಕ ಫ್ಲಾರೆನ್ಸಿನ ಧಾರ್ಮಿಕ ಕೇಂದ್ರ. ಏಕೆಂದರೆ ಇಲ್ಲಿ ಈ ನಗರದ ಪ್ರಮುಖ ಆಕರ್ಷಣೆಗಳಾದ ಗಿಯೋಟಾ ಗೋಪುರ ಬಾಟ್ಟಿಸ್ಟ್ರಿ ಮತ್ತು ಸೇಂಟ್ ಮೇರಿ ಕೆಥೆಡ್ರಲ್‌ಗಳಿವೆ. ಫ್ಲಾರೆನ್ಸಿನಲ್ಲಿ ಎಲ್ಲಿ ನಿಂತರೂ ಗಿಯೋಟೋ ಗೋಪುರ ಮತ್ತು ಇಗರ್ಜಿಯ ಗೊಮ್ಮಟ ಕಾಣಿಸುವುದೊಂದು ವಿಶೇಷ.

ಹದಿಮೂರನೆಯ ಶತಮಾನದ ಬಾಪ್ಪಿಸ್ಟ್ರಿಯ ವಿನ್ಯಾಸ ತಸ್ಕನ್ ರೋಮನ್ ಶೈಲಿಯದ್ದು. ಇದಕ್ಕೆ ಮೂರು ಕಂಚಿನ ಬಾಗಿಲುಗಳಿವೆ. ದಕ್ಷಿಣದ ಬಾಗಿಲು ಅಂಡೆ ಪಿಸಾನೋ ರಚಿಸಿದ್ದು. ಇದರಲ್ಲಿ ಜಾನ್ ಬಾಪ್ಟಿಸ್ಟನ್ ಜೀವನ ಚರಿತ್ರೆಯಿದೆ. ಮೂಡಣದ ಬಾಗಿಲು ಅತ್ಯಂತ ಹೆಸರುವಾಸಿಯಾದುದು. ಇದನ್ನು “ಸ್ವರ್ಗದ ಬಾಗಿಲು” ಎಂದು ಕರೆಯುತ್ತಾರೆ. ಈ ಬಾಗಿಲು ಸಿದ್ಧಪಡಿಸುವುದಕ್ಕೆ ಗಿಬರ್ಟಿ ಇಪ್ಪತ್ತಮೂರು ವರ್ಷ ತೆಗೆದುಕೊಂಡನಂತೆ ಎಂದು ಮಾರ್ಗದರ್ಶಿ ಹೇಳಿದ.

ಈ ಬಾಗಿಲಿನಲ್ಲಿ ಹತ್ತು ಅಂಕಣಗಳಿವೆ. ಒಂದೊಂದು ಅಂಕಣದಲ್ಲೂ ಬೈಬಲ್ಲಿನ ಕತೆಗಳು, ಆಡಮ್ ಮತ್ತು ಈವ್‌ರ ಸೃಷ್ಟಿ, ನೋವಾನ ಕತೆಗಳು ಇತ್ಯಾದಿ ಇವೆ. ಈ ಪುಟ್ಟ ಜಾಗದಲ್ಲಿ ನಿರ್ಮಿತವಾಗಿರುವ ವ್ಯಕ್ತಿಗಳು ಮತ್ತು ಅವರ ಹಿನ್ನೆಲೆ ಅತ್ಯದ್ಭುತವಾಗಿವೆ. ಪ್ರತಿಯೊಂದು ವ್ಯಕ್ತಿಯ ಮುಖಚರ್ಯೆ ನಿಲುವು ಸ್ಪುಟವಾಗಿ ಕೆತ್ತಲ್ಪಟ್ಟಿವೆ. ಇದನ್ನು ಕಂಡ ಮೈಕೆಲಾಂಜೆಲೋ ಆಗ ದಂಗು ಬಡಿದು ಉದ್ಗಾರ ತೆಗೆದಿದ್ದನಂತೆ. “ಕೆತ್ತನೆ ಎಷ್ಟು ಚಿತ್ತಾಕರ್ಷಕವಾಗಿದೆಯೆಂದರೆ ಇವು ಸ್ವರ್ಗದ ಬಾಗಿಲುಗಳಾಗುವ ಯೋಗ್ಯತೆವುಳ್ಳವು.”

ಸೇಂಟ್ ಮೇರಿ ಕೆಥೆಡ್ರಲಿನ ಎಡಕ್ಕಿರುವ ಗಯೋಟೋ ಗೋಪುರ ಅಲಂಕಾರಿಕವಾಗಿ ತುಂಬಾ ಆಕರ್ಷಕವಾಗಿ ಕಾಣುತ್ತದೆ. ಆ ಕಾಲಕ್ಕೆ ಪಿನೌನರು ಅಂತಸ್ತುಗಳ ಮೇಲೆ ಅಂತಸ್ತುಗಳ ತಮ್ಮ ಮೋಹಕ ಗೋಪುರ ಕಟ್ಟಿದ್ದರು. (ಇದು ಪಿಸಾದಲ್ಲಿರುವ ವಾಲು ಗೋಪುರ) ಅದು ಮುಕ್ತಾಯಕ್ಕೆ ಮುನ್ನವೇ ವಾಲಿತ್ತಂತೆ ಅದನ್ನು ಕಂಡು ಪ್ಲಾರೆನ್ಸಿಗ ರಾಜ ಆಜ್ಞೆ ಮಾಡಿದನಂತೆ. ನಮ್ಮೂರಲ್ಲೂ ಒಂದು ಗೋಪುರ ನಿರ್ಮಾಣವಾಗಬೇಕು. ಇದು ಎತ್ತರದಲ್ಲೂ ಸೌಂದರ್ಯದಲ್ಲೂ ಶ್ರೇಷ್ಠತೆಯಲ್ಲೂ ಇದುವರೆಗೆ ಗ್ರೀಕ್‌ರಾಗಲೀ ರೋಮನ್‌ ರಾಗಲೀ ಕಟ್ಟಿದ್ದನ್ನು ಮೀರಿಸಬೇಕು.

82 ಮೀಟರ್ ಎತ್ತರದ ಗಿಯೋಟೋ ಗೋಪುರ ವಿನ್ಯಾಸದಲ್ಲೂ ರಮ್ಯತೆಯಲ್ಲೂ ಸಾಮರಸ್ಯದಲ್ಲೂ ಇಟಲಿಯಲ್ಲಿಯೇ ಶ್ರೇಷ್ಠವಾದ ವಾಸ್ತು ರಚನೆ. ಇದನ್ನು ಫ್ಲಾರೆನ್ಸ್ ಗಾಥಿಕ್ ಶೈಲಿ ಎಂದು ಕರೆಯಬಹುದು. ಇದರ ವಿನ್ಯಾಸಕಾರ ಗಿಯೋಟೋ ಆದ್ದರಿಂದ ಗೋಪುರಕ್ಕೆ ಅವನ ಹೆಸರನ್ನೇ ಇರಿಸಿದ್ದಾರೆ. ಮೊದಲಿನ ಅಂತಸ್ತಿನ ಸುತ್ತಲೂ ಕೆತ್ತನೆಗಳಿದ್ದು ಅವು ಆಕಾಲಿನ ಧಾರ್ಮಿಕ ಸಾಮಾಜಿಕ ಹಾಗೂ ನೈತಿಕ ಮೌಲ್ಯಗಳನ್ನು ಪ್ರತಿಬಿಂಬಿಸುತ್ತವೆ. ಗೋಪುರದ ಮೇಲೆ ಹತ್ತಿ ನೋಡಿದಾಗ ಕಾಣುವ ಫ್ಲಾರೆನ್ಸಿನ ಹಾಗೂ ಅರ್ನೊ ಕಣಿವೆಯ ದೃಶ್ಯಗಳು ಮನಮೋಹಕವಾಗಿವೆ.

ಸೇಂಟ್ ಮೇರಿ ಕೆಥೆಡ್ರಲಿನ ಹೋರಾಂಗಣ ಕೂಡಾ ತುಂಬಾ ಚೆಲುವಾಗಿದೆ. ಇದನ್ನು ಬಗೆ ಬಗೆಯ ಬಣ್ಣದ ಅಮೃತ ಶಿಲೆಯನ್ನು ಜೋಡಿಸಿ ರಚಿಸಲಾಗಿದೆ. ಇಗರ್ಜಿಯ ಎರಡು ಬದಿಯಲ್ಲಿ ಸೈಯನ್ಸ್ ಗ್ಲಾಸ್ ಕಿಟಕಿಗಳಿವೆ. ಇದರಲ್ಲಿ ಬ್ರುನೆಲ್ಸ್ಸ್ಪಿ ಮತ್ತು ಗಿಯೋಟೋರ ಅಮೃತಶಿಲೆಯ ಪ್ರತಿಮೆಗಳಿವೆ. ಮಧ್ಯ ಭಾಗದ ಗುಮ್ಮಟವಂತೂ ಅದ್ವಿತೀಯವಾಗಿದೆ.

ಅರ್ನೊ ನದಿಯ ಮೇಲಿಂದ ಸೇತುವೆ ದಾಟಿ ಪಿತ್ತಿ ಅರಮನೆಗೆ ಹೋದೆವು. ಮ್ಯಾಲಟಿನ ಗ್ಯಾಲರಿ ಇರುವುದು ಇಲ್ಲಿಯೇ. ಇದು ಮೂರಂತಸ್ತಿನ ಭವನ. ಹೊರಗೆ ನೋಡಲು ಬರೀ ಇಟ್ಟಿಗೆ ಕಟ್ಟಡದ ಹಾಗೆ ಕಂಡರೂ ಒಳಗಿನ ಭವ್ಯತೆ ನಮ್ಮನ್ನು ಮೂಕರನ್ನಾಗಿಸುತ್ತದೆ. ಈ ಕಲಾಶಾಲೆಗಳನ್ನು ಉಳಿಸಿ, ಬೆಳೆಸಿದ ಕೀರ್ತಿ ಪುನರುದಯ ಕಾಲದ ಪಿತ್ತೆ ಮತ್ತು ಮೆದಿಚಿ ಮನೆತನದವರಿಗೆ ಸೇರಬೇಕು. ಇವರು ಕಲಾಸಕ್ತರೂ ಶ್ರೀಮಂತರೂ ಆಗಿದ್ದುದರಿಂದ ಅಪರೂಪದ ವಸ್ತುಗಳನ್ನು ಕಲೆಹಾಕಿದರು. ಕಲಾಕಾರರಿಂದ ಚಿತ್ರಗಳನ್ನು ಬರೆಸಿದರು. ಯುರೋಪಿನ ಎಲ್ಲ ಆರ್ಟ್ ಗ್ಯಾಲರಿಗಳಲ್ಲೂ ಇದೇ ತರದ ರಚಿನೆ ಇದ್ದುದರಿಂದ ನಮಗೆ ಅದನ್ನು ನೋಡುವಾಗ ಮೆಚ್ಚುಗೆ, ಧನ್ಯತೆ, ವಿಸ್ಮಯ, ಆನಂದ ಎಲ್ಲವೂ ಒಂದೇ ಸಾರಿಗೆ ಆಗುತ್ತವೆ.

ಬೆಳ್ಳಿಯ ವಸ್ತು ಸಂಗ್ರಹ ಶಾಲೆ ಆಭರಣಪ್ರಿಯ ಮಹಿಳೆಯರಿಗೆ ತುಂಬಾ ಹಿಡಿಸುತ್ತದೆ. ಅಲ್ಲಿ ಮೆದಿಚಿ ಮನೆತನದವರು ಸಂಗ್ರಹಿಸಿದ ಅಪಾರ ಆಭರಣಗಳು, ಅಪರೂಪದ ವಜ್ರ ವೈಡೂರ್ಯಗಳೂ ಬೆಲೆ ಬಾಳುವ ಉಡುಗೆ ತೊಡುಗೆಗಳು ಇವೆ. ಇವುಗಳನ್ನು ಪ್ಯಾರಿಸ್, ವಿಯೆನ್ನಾ, ಬರ್ಲಿನ್, ಚೈನಾ, ಜಪಾನ್, ಸ್ಲಾಕ್ಸಿನಿ ಮುಂತಾದ ದೇಶಗಳಿಂದ ಸಂಗ್ರಹಿಸಿದ್ದರಂತೆ. ಮಧ್ಯಾಹ್ನ ದಾಟಿತ್ತು. ನಾವು ಹೋಟೆಲಿಗೆ ಮರಳುವಾಗ ಮತ್ತೆ ಅರ್ನೊ ನದಿಯ ಸೇತುವೆ ದಾಟಬೇಕು. ಈ ನದಿಯ ನೀರು ನೀಲಿ ಬಣ್ಣಕ್ಕಿದ್ದು ತುಂಬಾ ನಿರ್ಮಲವಾಗಿದೆ. ಅಲ್ಲಿಂದ ಮುಂದೆ ಸಂತ ಫ್ರಾನ್ಸಿಸನ ಹೋಲಿ ಕ್ರಾಸ್ ಬೆಸಿಲಿಕಾ ಫ್ಲಾರೆನ್ಸಿನ ಖ್ಯಾತ ದೇವಮಂದಿರ ಆಗಿನ ಕಾಲದ ಪ್ರಸಿದ್ಧ ವ್ಯಕ್ತಿಗಳ ಗೋರಿಗಳಿವೆ. ಈ ಮಂದಿರದ ಮುಂಭಾಗದಲ್ಲಿ ಕವಿ ದ್ಧಾಂಟೆಯ ಅಮೃತಶಿಲೆಯ ಪ್ರತಿಮೆಯಿದೆ.

ಫ್ಲಾರೆನ್ಸಿನಲ್ಲಿ ನೋಡಲೇಬೇಕಾದಂತಹವು ಅಲ್ಲಿನ ಆರ್ಟ್ ಗ್ಯಾಲರಿಗಳು ಇವುಗಳಲ್ಲಿ ಪ್ರಸಿದ್ಧವಾದವು. ನ್ಯಾಶನಲ್ ಮ್ಯೂಸಿಯಂ, ಅಕಾಡೆಮಿ ಗ್ಯಾಲರಿ ಉಫಿಚಿ ಮತ್ತು ಪ್ಲಾಲಟಿನ್ ಗ್ಯಾಲರಿಗಳು.

ಫ್ಲಾರೆನ್ಸಿನಿಂದ ಹೊರಗಿರುವ ಗುಡ್ಡ ಮನೋಹರವಾದ ಜಾಗ ಹಸಿರು ಕಾಡುಗಳು ವರ್ಣರಂಜಿತ ಹೂಗಳು ಮಧ್ಯೆ ಶೋಭಿಸುವ ವಿಲ್ಲಾಗಳು.

By-ಶಾಲಿನಿ ಗಾಂವಕರ್

ಮುಂದಿನ ಭಾಗ ಓದಿ…

Leave a Comment

Comments

No comments yet. Why don’t you start the discussion?

    Leave a Reply