“ದೇಶ ತಿರುಗಬೇಕು ಕೋಶ ಓದಬೇಕು” ಇದು ನೂರಕ್ಕೆ ನೂರು ಸತ್ಯ. ನಾವು ಬೇರೆ ಬೇರೆ ಊರುಗಳನ್ನು ತಿರುಗುವುದರಿಂದ ನಮ್ಮ ಬುದ್ಧಿ ವಿಕಾಸವಾಗುತ್ತದೆ. ಅಲ್ಲಿಯ ಆಹಾರ ವಿಹಾರ ಜನರ ನಡವಳಿಕೆ ಒಂದೊಂದು ಊರಿನ ವಿಶೇಷತೆಯ ವಿಭಿನ್ನ ಜ್ಞಾನದಾಹಿಗಳಿಗಂತೂ ಇದೊಂದು ತಿಳಿದುಕೊಳ್ಳಲು ಸದಾವಕಾಶ. ನಿಜ ಹೇಳಬೇಕೆಂದರೆ ನನಗೆ ಶಾಪಿಂಗ್ ಮಾಡುವುದು, ಗೆಳೆಯರ ಮನೆ ನೆಂಟರ ಮನೆ ಮದುವೆ ಮುಂಜಿಗಳಿಗೆ ಹೋಗುವುದು ಇಷ್ಟ ಇಲ್ಲ. ಹೋಗಲೇಬೇಕಾದ ಸಂದರ್ಭಗಳಲ್ಲಿ ಉಪಾಯವಿಲ್ಲದೆ ಹೋಗುತ್ತೇನೆ. ಅಷ್ಟೇ ಆದರೆ ಬೇರೆ ಬೇರೆ ದೇಶಗಳು ನಮ್ಮ ಇಂಡಿಯಾದಲ್ಲೇ ಇರುವಂಥ ಪ್ರೇಕ್ಷಣೀಯ ಪ್ರಸಿದ್ಧವಾದ ರಮಣೀಯ ಸ್ಥಳಗಳನ್ನು ನೋಡುವುದೆಂದರೆ ತುಂಬಾ ಇಷ್ಟ. ಅದರಿಂದ ಸಿಗುವ ಅನುಭವಗಳು ಅಪಾರ. ಅದಕ್ಕೆ ನಮ್ಮ ಹಿರಿಯರು ಹೇಳುತ್ತಿದ್ದರು “ದೇಶ ತಿರುಗಿದವನಿಗೆ ಭಾಷೆ ಕಲಿಸಬೇಕೇನು” ಇದು ನಿಜ. ಪ್ರವಾಸದಲ್ಲಿ ತುಂಬಾ ಜನ ಸಂಪರ್ಕಕ್ಕೆ ಬರುತ್ತಾರೆ.
ನಾವು ಅವರ ಬಗ್ಗೆ ಅವರ ವಿಚಾರ ಸ್ವಭಾವಗಳ ಬಗ್ಗೆ ತಿಳಿಯಬಹುದು. ಅದರಂತೆ ನಾವು ಪುಸ್ತಕಗಳಲ್ಲಿ ಓದಿದಂತೆ ಇತಿಹಾಸಪ್ರಸಿದ್ಧ ಸ್ಥಳಗಳನ್ನು ಮ್ಯೂಜಿಯಂಗಳನ್ನು ಕಟ್ಟಡಗಳನ್ನು ನೋಡಿ ಇತಿಹಾಸ ಗತವೈಭವಗಳು ರಾಜರ ಆಡಳಿತ ಇವುಗಳ ಬಗ್ಗೆ ತಿಳಿದುಕೊಳ್ಳಬಹುದು. ನಾವು ಒಂದು ಹತ್ತರಿಂದ ಹದಿನೈದು ದೇಶ ನೋಡಿರಬಹುದು. ಅಷ್ಟೇ ಆದರೆ ನೂರು ಇನ್ನೂರು ದೇಶ ನೋಡಿದವರನ್ನು ನಾನು ಬಲ್ಲೆ. ನಮಗಿಂತ ಅವರ ಅನುಭವ ತುಂಬಾ ಅಪಾರವಾಗಿರಬೇಕು. ಆದರೂ ಸಹ ಅವರು ಎಲೆಯ ಮರೆಯ ಕಾಯಿಯಂತೆ ಇರುತ್ತಾರೆ.ನಾನು ನನ್ನ ಅನುಭವವನ್ನು ಇತರರಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಬರೆದಿದ್ದೇನೆ. ಓದುಗರಿಗೆ ಇದರಿಂದ ಏನಾದರೂ ಒಳಿತಾದರೆ ನಾನು ಬರೆದದ್ದಕ್ಕೂ ಸಾರ್ಥಕವಾಗುತ್ತದೆ. ಬರವಣಿಗೆಯಲ್ಲಿ ತಪ್ಪಾಗಿದ್ದಲ್ಲಿ ನನ್ನನ್ನು ಕ್ಷಮಿಸಿ.
ಅಂತೂ ಅಪರೂಪದ ಯಾತ್ರೆ ಮುಗಿಸಿ ಬೆಂಗಳೂರಿಗೆ ಹೊರಟೆವು. ಆದರೆ ನನ್ನ ತನುಮನವೆಲ್ಲ ಇನ್ನೂ ಪ್ರವಾಸದ ಗುಂಗಿನಲ್ಲೇ ಇತ್ತು. ಎಷ್ಟೊಂದು ವೈವಿಧ್ಯಮಯ ದೇಶಗಳನ್ನು ನೋಡಿದ್ದೆ. ಪ್ರಾಚೀನ ಕಲಾ ವೈಭವದ ರೋಂ, ಪ್ಲಾರೆನ್ಸ್‌ಗಳು, ಸುಂದರ ಪರ್ವತ ಸರೋವರಗಳ ಸ್ವಿಟ್ಟರ್‌ಲ್ಯಾಂಡ್, ವಿಚಾರ ಪ್ರಗತಿಯ ಫ್ರಾನ್ಸ್, ಗತಕಾಲದ ಗುಂಗಿನಲ್ಲೇ ಇರುವ ಇಂಗ್ಲೆಂಡ್, ನಂಬಲಾರದಷ್ಟು ವೈವಿಧ್ಯ. ಅಲ್ಲಿಯ ಜನರ ಬದುಕಿನ ವೈಪರೀತ್ಯಗಳು, ಸಾಹಿತ್ಯ ಸಂಸ್ಕೃತಿಗಳು, ಅವರ ಸಂತೋಷ ದುಃಖ ದುಮ್ಮಾನಗಳು, ದಬ್ಬಾಳಿಕೆ ಶೋಷಣೆಗಳು, ಶಾಂತಿಗಾಗಿ ಆಶೆಪಡುವ ಜನರು ಇವೆಲ್ಲವನ್ನು ಕಂಡುಬಂದಿದ್ದೆ.ಈ ಅನುಭವಗಳಿಂದ ನನ್ನ ಜ್ಞಾನ ವೃದ್ಧಿಯಾಗಿತ್ತು. ಅಲ್ಲಿಯ ಜನರ ಸಾಧನೆ ಸಾಹಸಗಳನ್ನು ಕಂಡಾಗ ಕಲಿಯುವುದು ಇನ್ನೂ ತುಂಬಾ ಇದೆ ಎಂಬ ವಿನೀತಭಾವವೂ ಈಗ ನನ್ನಲ್ಲಿ ಬೃಹದಾಕಾರವಾಗಿ ಬೆಳೆಯಿತು. ಪ್ರಪಂಚದ ಜನರೆಲ್ಲ ಸುಖ ಸಮೃದ್ಧಿಗಳಿಂದ ಬದುಕಬೇಕು ಎಲ್ಲರೂ ಸಮಾನರಾಗಿರಬೇಕು, ಸಮರದ ಮಾತು ಈ ಜಗತ್ತಿನಿಂದಲೇ ನಾಶವಾಗಬೇಕು. ಸಾವಿರಾರು ಜನರ ಇಲ್ಲ ಲಕ್ಷ ಕೋಟಿ ಜನರ ರಕ್ತಪಾತವಾಗುವುದು ಬೇಡ. ಮಕ್ಕಳು ಅನಾಥರಾಗುವುದು ಬೇಡ. ಇದೇ ಭಾವನೆ ಮನಸ್ಸಿನಲ್ಲಿ ಮೂಡಿತು.
ವಿಮಾನ ಬೆಂಗಳೂರು ನಿಲ್ದಾಣ ತಲುಪಿತು. ನಮ್ಮ ಬ್ಯಾಗೇಜುಗಳನ್ನು ತೆಗೆದುಕೊಂಡು ಹೊರಗೆ ಬಂದೆವು. ಬೆಂಗಳೂರಿನ ಮುಂಜಾನೆ ಮೋಹಕವಾಗಿತ್ತು. ಅಂತೂ ನಮ್ಮೂರು ತಲುಪಿದೆವಲ್ಲಾ ಎನ್ನುವ ಸಮಾಧಾನವಿತ್ತು.
ಸಾರ್ಥಕತೆ:- ನಾನು ಇಲ್ಲಿಯವರೆಗೆ ಸುಮಾರು 20 ದೇಶಗಳ ಸಂಚಾರಮಾಡಿದ್ದೇನೆ. ಅಮೇರಿಕಾಕ್ಕೆ ಎರಡು ಸಲ, ಲಂಡನ್‌ಗೆ 6 ಸಲ ಹೋಗಿ ಬಂದಿದ್ದೇನೆ. ಇದರಿಂದ ತುಂಬಾ ಅನುಭವಗಳನ್ನು ಪಡೆದಿದ್ದೇನೆ. ಕೈಕಾಲು ಗಟ್ಟಿ ಇರುವಾಗ ಇವುಗಳನ್ನೆಲ್ಲ ನೋಡಿ ಮುಗಿಸಬೇಕು. ಆಮೇಲೆ ಎಂದರೆ ವಯಸ್ಸಾಗುತ್ತಾ ಹೋಗುತ್ತದೆ. ಅನಾರೋಗ್ಯ ಕಾಡುತ್ತದೆ. ಕೊರೊನಾದಂಥ ಭೀಕರ ರೋಗ ಬಂದರೆ ಕೇಳುವುದೇ ಬೇಡ. ನನಗಂತೂ ನಾವು ಗಟ್ಟಿ ಇರುವಾಗಲೇ ಇಷ್ಟೊಂದು ದೇಶ ಪ್ರವಾಸ ಮಾಡಿದ ಸಾರ್ಥಕತೆ ಇದೆ. ಅದಕ್ಕಾಗಿ ಎಲ್ಲರೂ ಪ್ರವಾಸ ಮಾಡಿ ಅದರ ನೆನಪುಗಳೇ ಮನಸ್ಸಿಗೆ ಖುಷಿ ಕೊಡುತ್ತದೆ. ಹೊಸ ಹೊಸ ಅನುಭವ ಕಣ್ಣಿಗೆ ಮುದ ನೀಡುವ ದೃಶ್ಯಗಳು ಅವರ ಆಚಾರ ವಿಚಾರ ಎಲ್ಲವೂ ನೋಡಲು ಮಾತ್ರ ಚಂದ ಅಷ್ಟೇ. ಆದರೆ ನಿಜವಾದ ನೆಮ್ಮದಿ ಇರುವುದು ಮಾತ್ರ ನಮ್ಮ ಮನೆಯಲ್ಲಿ ಮತ್ತು ನನ್ನ ದೇಶದಲ್ಲಿ. ಈಗಿನ ಕಾಲದ ಮಕ್ಕಳು ವಿದೇಶ ಸಂಸ್ಕೃತಿಗೆ ಮಾರುಹೋಗಿರಬಹುದು. ಅಲ್ಲಿಯ ಕೈ ತುಂಬಾ ಸಂಬಳ ದೊಡ್ಡ ದೊಡ್ಡ ಕಾರು ಮನೆ ರೋಬೊಟ್ ಬಳಕೆ. ವೈಜ್ಞಾನಿಕವಾಗಿ ಮುಂದುವರೆದ ದೇಶ. ಈಗಿನ ಯುವ ಪ್ರತಿಭೆಗಳು ಇದಕ್ಕೆ ಮಾರುಹೋಗಿರುವುದು ದೊಡ್ಡ ವಿಷಯವಲ್ಲ.
ಐಫೆಲ್ ಟವರ್, ಸ್ಟಾಚು ಆಫ್ ಲಿಬರ್ಟಿ
ಸಿಯರ್ಸ್ ಟವರ್ ಎಂಬ ಖಾಸಗೀ ವಾಣಿಜ್ಯ ಸಂಕೀರ್ಣ 1353 ಅಡಿಗಳೆತ್ತರ ಇರುವುದು ನಿಜವಾದರೂ, ಈ ಮಾನವ ನಿರ್ಮಿತ ಕಬ್ಬಿಣದ ಗೋಪುರ ಐಫೆಲ್ ಟವರ್ ನೋಡಿದ ಸಾರ್ಥಕತೆ ನನ್ನದಾಗಿದೆ. ಅದರಂತೆ ನಯಾಗಾರ ಜಲಪಾತ ಲಂಡನ್ ಅಯ್, ಪೀಸಾ ಗೋಪುರಗಳು ಪ್ರಪಂಚದ ಅದ್ಭುತಗಳಾಗಿವೆ.
ಪ್ರವಾಸಿಯ ಮಾತು
ಪ್ರಿಯ ಓದುಗರೆ,
ನನ್ನ ಪಡುವಣ ಪ್ರವಾಸ ಕಥನ ಪುಸ್ತಕ ರೂಪದಲ್ಲಿ ಹೊರಬರಬಹುದೆಂದು ನಾನು ಕನಸಿನಲ್ಲಿಯೂ ನಿರೀಕ್ಷಿಸಿರಲಿಲ್ಲ. ನನ್ನ ಅಂತರಾಳದ ಅನುಭವಗಳನ್ನು, ಅನಿಸಿಕೆಗಳನ್ನು ಬರೆದುಕೊಂಡಿದ್ದೇನೆ. ‘ಜಗತ್ತಿನಲ್ಲಿ ನಾವು ಯಾವಾಗಲೂ ಮಹಾನ್ ಕಾರ್ಯಗಳನ್ನೇ ಮಾಡಬೇಕಾಗಿಲ್ಲ. ಮಾಡುವ ಕೆಲಸವನ್ನೇ ಪ್ರೀತಿಯಿಂದ ಮತ್ತು ಶ್ರದ್ದೆಯಿಂದ ಮಾಡಿದರೆ ಸಾಕು ಬದುಕು ಸಾರ್ಥಕವಾಗುತ್ತದೆ’ ಎಂದು ಮದರ್ ತೆರೆಸಾ ಹೇಳಿದ್ದಾರೆ. ಅದರಂತೆ ನಾನು ಸಹ ಸಣ್ಣ ಪ್ರಯತ್ನವನ್ನು ಮಾಡಿದ್ದೇನೆ. ಇದು ನನ್ನ ಆತ್ಮಚರಿತ್ರಾತ್ಮಕ ಪ್ರೇರಣೆಯ ಅನುಭವ ಪಾಕದ ಆತ್ಮಕಥನ ಸಂಕಲನವಾಗಿದೆ. ನಾನು ನೋಡಿದ್ದನ್ನು ಅನುಭವಿಸಿದ್ದನ್ನು ನನ್ನ ಭಾವನೆಗಳನ್ನು ಯಥಾವತ್ತಾಗಿ ಅರ್ಥೈಸಿ ವ್ಯಾಖ್ಯಾನಿಸಿ ವಿಶ್ಲೇಷಿಸಿ ವಿವರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಇದೆಲ್ಲಾ ಸಾಧ್ಯವಾಗಿದ್ದು ನಮ್ಮ ಯಜಮಾನರಿಂದ ನಾನು ಬಂದದ್ದು ಕರ್ನಾಟಕದ ಬಾರ್ಡೋಲಿ ಎಂದು ಖ್ಯಾತಗೊಂಡ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಬಾಸಗೋಡ ಎಂಬ ಪುಟ್ಟ ಗ್ರಾಮದಲ್ಲಿ. ಹುಟ್ಟಿದ್ದು ಓದಿದ್ದು ಬೆಳೆದದ್ದು ಎಲ್ಲವೂ ಹಳ್ಳಿಯ ಸುಂದರ ವಾತಾವರಣದಲ್ಲಿ. ಮಧ್ಯಮ ವರ್ಗದ ಸಾಮಾನ್ಯರಲ್ಲಿ ತೀರ ಸಾಮಾನ್ಯಳಾದ ಹುಡುಗಿ. ಓದಿದ್ದು ಕನ್ನಡ ಮಾಧ್ಯಮದಲ್ಲಿ ಬಿ.ಎ. ಡಿಗ್ರಿ ನನ್ನ ಜೀವನದಲ್ಲಿ ಆದ ದೊಡ್ಡ ಬದಲಾವಣೆ ಎಂದರೆ ನಾನು ದೇವಾನಂದ ಗಾಂವಕರ ಜೊತೆ ಸಪ್ತಪದಿ ತುಳಿದು ಮದುವೆಯಾಗಿ ಗುಲಬರ್ಗಾಕ್ಕೆ ಹೋಗಿದ್ದು ಮತ್ತು ಅಲ್ಲಿಯೇ ನನ್ನ ಜೀವನದ 25 ವರ್ಷಗಳನ್ನು ಕಳೆದಿದ್ದು. ಆಗ ಇವರು ಎಲ್ಲ ರೀತಿಯಲ್ಲೂ ಸಹಕಾರ ನೀಡಿ ನಾನು ಮುಂದೆ ಬಿ.ಎಡ್. ಮತ್ತು ಎಂ.ಎ. (ಇತಿಹಾಸ) ಮುಗಿಸಲು ಪ್ರೋತ್ಸಾಹ ನೀಡಿದರು.
ನನ್ನ ವಿದೇಶಪ್ರವಾಸದ ಸಮಯದಲ್ಲಿ ಒಂದು ಪುಟ್ಟ ಡೈರಿಯಲ್ಲಿ ನೋಡಿದ ಊರುಗಳ ಬಗ್ಗೆ, ವ್ಯಕ್ತಿಗಳ ಬಗ್ಗೆ ಉಳಿದ ಎಲ್ಲ ಮಾಹಿತಿಗಳನ್ನು ಬರೆದುಕೊಳ್ಳುತ್ತಿದ್ದೆ. ಮತ್ತು ಊರಿಗೆ ಬಂದಮೇಲೆ ನನ್ನ ಗೆಳತಿಯರಿಗೆ ಸಂಬಂಧಿಕರಿಗೆ ಎಲ್ಲ ವಿಷಯಗಳನ್ನು ಉದಾಹರಣೆ ಸಮೇತ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿದ್ದೆ. ಆಗ ಕೆಲವರು ‘ಎಷ್ಟು ಚೆನ್ನಾಗಿ ವಿವರಿಸುತ್ತಿಯಾ ಹೇಗೆ ಎಲ್ಲ ನಿನಗೆ ನೆನಪಿದೆ?, ಎಂದು ಕೇಳುತ್ತಿದ್ದರು.
ಆಗ ಇದನ್ನು ಗಮನಿಸಿದ ನಮ್ಮ ಯಜಮಾನರು ‘ನೀನೇಕೆ ನಿನ್ನ ಅನುಭವವನ್ನು ಬರಿಯಬಾರದು. ಮೊದಲು ನೀನು ಬರಿ ಮುಂದಿನ ಕೆಲಸ ನನಗೆ ಬಿಡು’ ಎಂದು ನನ್ನನ್ನು ಹುರಿದುಂಬಿಸಿ ಪ್ರೋತ್ಸಾಹಿಸಿದರು. ಎಲ್ಲ ರೀತಿಯ ಸಹಕಾರವನ್ನು ನೀಡಿ ನನ್ನ ಅನುಭವ ಪುಸ್ತಕ ರೂಪದಲ್ಲಿ ಹೊರಬರಲು ಇವರೇ ಮುಖ್ಯಕಾರಣ. ಅವರಿಗೆ ನನ್ನ ಹೃತ್ತೂರ್ವಕ ಪ್ರೀತಿಗಳು.
ನಾನು ಕಾಲೇಜಿನಲ್ಲಿ ಓದುವಾಗ ಯುರೋಪ್ ಇತಿಹಾಸ ಮತ್ತು ಅಮೇರಿಕಾ ಇತಿಹಾಸ ಓದಿದ್ದೆ. ಮೊದಲು ಮತ್ತು ಎರಡನೆಯ ಮಹಾಯುದ್ಧದ ಬಗ್ಗೆ ಓದಿ ತಿಳಿದುಕೊಂಡಿದ್ದೆ. ಜರ್ಮನಿ ‘ಫ್ರಾನ್ಸ್’ ಇಟಲಿ ರೋಮ್ ‘ಸ್ಕಾಟ್‌ಲೆಂಡ್ ಮತ್ತು ನೆಪೋಲಿಯನ್, ಶೇಕ್ಸ್‌ಪಿಯರ್, ಮೈಕೆಲ್ ಏಂಜಲ್ ಬಗ್ಗೆ ಓದಿದ್ದೆ. ಆದರೆ ಆ ದೇಶಗಳನ್ನೆಲ್ಲ ನನ್ನ ಕಣ್ಣಾರೆ ನೋಡುತ್ತೇನೆ ಎಂದು ಕನಸಿನಲ್ಲಿಯೂ ಸಹ ಎಣಿಸಿರಲಿಲ್ಲ. ಅದರಲ್ಲೂ ಜಗತ್ತಿನ ಅದ್ಭುತಗಳಾದ ಪೀಸಾ ಗೋಪುರ. ಅಮೆರಿಕಾದ ಸ್ಪ್ಯಾಚೂ ಆಫ್ ಲಿಬರ್ಟಿ ಪ್ಯಾರಿಸ್ಸಿನ ಐಫೆಲ್ ಟವರ್ ನೋಡಿದ್ದು ನನ್ನ ಸೌಭಾಗ್ಯವೇ ಸರಿ. ಎಲ್ಲಕ್ಕಿಂತ ಹೆಚ್ಚಾಗಿ ಮಾನವಜಾತಿಯಲ್ಲಿ ಇರುವ ಭೇದ ಭಾವವನ್ನು ಅಳಿಸಲು ಅದ್ಭುತ ಮಹಾ ನಾಯಕ ಅಬ್ರಾಹಂ ಲಿಂಕ್‌ನ ವಾಸಿಸಿದ ಮನೆಯನ್ನು ನೋಡುತ್ತೇನೆ ಎಂದು ಭಾವಿಸಿರಲಿಲ್ಲ. ಅಂಥ ಅವಕಾಶ ನನಗೆ ಸಿಕ್ಕಿದೆ. ಅದಕ್ಕಾಗಿ ನಾನು ದೇವರಿಗೆ ಭಕ್ತಿಭಾವದಿಂದ ಕೃತಜ್ಞತೆ ಸಮರ್ಪಿಸುತ್ತೇನೆ.
ಮುಖ್ಯವಾಗಿ ನನ್ನ ಮಾತಾ ಪಿತರಿಗೆ ನಾನು ಚಿರಋಣಿಯಾಗಿದ್ದೇನೆ. ಅವರಿಲ್ಲದಿದ್ದರೆ ಇದೆಲ್ಲಾ ಸಾಧ್ಯವಾಗುತ್ತಿರಲಿಲ್ಲ. ಅದೇ ರೀತಿ ಪೂಜ್ಯರಾದ ಅತ್ತೆ ಮಾವಂದಿರಿಗೂ ಚಿರಋಣಿಯಾಗಿದ್ದೇನೆ. ಕೊನೆಯದಾಗಿ ಮುನ್ನುಡಿಯನ್ನು ಸುಂದರವಾಗಿ ಅರ್ಥಪೂರ್ಣ ವಾಗಿ ಬರೆದುಕೊಟ್ಟ ಡಾ. ಶ್ರೀಪಾದಶೆಟ್ಟಿಯವರಿಗೆ ತುಂಬು ಹೃದಯದ ಧನ್ಯವಾದಗಳು. ಬೆನ್ನುಡಿಯನ್ನು ಸಾಂದರ್ಭಿಕವಾಗಿ ಬರೆದ ನನ್ನ ದೇವನಿಗೆ ತುಂಬಾ ಅಭಿನಂದನೆಗಳು.
ಸುಂದರವಾದ ಮುಖಪುಟದ ವಿನ್ಯಾಸವನ್ನು ರಚಿಸಿ, ಅತ್ಯುತ್ತಮವಾಗಿ ಮುದ್ರಿಸಿದ ಇವರಿಗೆ ನನ್ನ ಹೃದಯ ತುಂಬಿದ ಕೃತಜ್ಞತೆಗಳು. ನನ್ನ ಮೂಲಪ್ರತಿಯನ್ನು ಪರಿಷ್ಕರಿಸಿಕೊಟ್ಟ ನಾಗರಾಜ ಹೆಗಡೆ ಅಪಗಾಲ ಅವರಿಗೆ ನನ್ನ ಹೃದಯಾಂತರಾಳದ ಅಭಿನಂದನೆಗಳು.
ಈ ನನ್ನ ಪುಟ್ಟ ಸಾಹಸಕ್ಕೆ ಪರೋಕ್ಷ ಹಾಗೂ ಅಪರೋಕ್ಷವಾಗಿ ಸಹಕರಿಸಿದ ಎಲ್ಲ ನನ್ನ ಬಂಧುಗಳಿಗೆ, ಗೆಳೆಯ, ಗೆಳತಿಯರಿಗೆ ಮತ್ತು ನನ್ನ ಮಕ್ಕಳಿಗೆ ಧನ್ಯವಾದ ಅರ್ಪಿಸದಿದ್ದರೆ ನನ್ನ ನುಡಿ ಮುಕ್ತಾಯವಾಗಲಾರದು.
ಜೈ ಹಿಂದ್
ಶಾಲಿನಿ ಗಾಂಪ್ಟರ್
