(ಭಾಗ-29) ಪಡುವಣದ ಪ್ರವಾಸ: ಒಂದು ಪ್ರಯಾಣ, ಸಾವಿರ ನೆನಪುಗಳು!

(ಭಾಗ-29) ಪಡುವಣದ ಪ್ರವಾಸ: ಒಂದು ಪ್ರಯಾಣ, ಸಾವಿರ ನೆನಪುಗಳು!

ಪ್ಯಾರಿಸ್ ವರ್ಣನೆ

ಪ್ಯಾರಿಸ್‌ ನಗರದ ಕಿರೀಟಪ್ರಾಯವಾದ ಐಫೇಲ್ ಟಾವ‌ರ್ ತನ್ನದೇ ಆದ ಭವ್ಯ ವಿಶಿಷ್ಟ ವಿನ್ಯಾಸದಿಂದ ಜಗತ್ತಿನ ಜನರನ್ನು ತನ್ನತ್ತ ಸೆಳೆಯುತ್ತಾ ಬೀಗುತ್ತಾ ನಿಂತಿದೆ. ಟವರಿನ ಮುಂಭಾಗದಲ್ಲಿ ವಿಸ್ತಾರವಾದ ವಿನ್ಯಾಸಗಳಿವೆ. ಆಕಾಶದಲ್ಲಿ ಭವ್ಯವಾಗಿ ತಲೆ ಎತ್ತಿ ನಿಂತ ಐಫೇಲ್ ಟವರನ್ನು ನೋಡಿ ಹಾಗೆ ವಿಸ್ಮಯದ ಜೊತೆಗೆ ಅಗಾಧ ಮೆಚ್ಚುಗೆಯೂ ಮೂಡುತ್ತದೆ. ಬರೀ ಉಕ್ಕಿನ ಸರಳುಗಳಿಂದ ಕಟ್ಟಿದ ಈ ಗೋಪುರದ ಅಡಿಪಾಯ ಆಕ್ರಮಿಸಿರುವ ಜಾಗ ಸುಮಾರು ಇಪ್ಪತ್ತು ಎಕರೆಗಳು ಎಂದರೆ ಇದರ ಗಾತ್ರ ಊಹಿಸುವುದು ಸುಲಭವಾಗುತ್ತದೆ. ಐಪೆಲ್ ಟವರನ್ನು 1889ರಲ್ಲಿ ಗಸ್ಸೇವ ಐಪೇಲ್ ಎಂಬ ವಾಸ್ತುಶಿಲ್ಪಿ ಸಿದ್ಧಪಡಿಸಿದ. ಅಮೇರಿಕಾದ ಸ್ವಾತಂತ್ರ್ಯ ಪ್ರತಿಮೆಯನ್ನು ನಿರ್ಮಿಸಿದ ಹೆಗ್ಗಳಿಕೆಯು ಇವನಿಗೆ ಸಲ್ಲುತ್ತದೆ. ಪ್ರಪಂಚದ ಏಳು ವಿಸ್ಮಯಗಳಲ್ಲಿ ಇದು ಒಂದು ಎಂದರೆ ಯಾವ ಆಶ್ಚರ್ಯವೂ ಇಲ್ಲ. ಹತ್ತಿರದಿಂದ ಐಫೇಲ್ ಟವರನ್ನು ನೋಡಿದಾಗ ಬರೀ ಕಂದು ಬಣ್ಣದ ಉಕ್ಕಿನ ಸರಳುಗಳು ಕಾಣುತ್ತವೆ. ಟವರಿನ ಎತ್ತರ 984 ಅಡಿ ಇದರ ಮೇಲ್ಬಾಗದಲ್ಲಿ ಟಿ.ವಿ. ಗೋಪುರವಿದೆ.

ಐಫೇಲ್ ಟವರಿನ ಮೇಲುಭಾಗಕ್ಕೆ ಹೋಗಿ ಬರಲು ಸುಮಾರು ಎರಡು ಗಂಟೆಗಳು ಬೇಕು. ಏಕೆಂದರೆ ಎರಡನೆಯ ಅಂತಸ್ತಿನಲ್ಲಿ ಇಳಿದು ಮತ್ತೆ ಟ್ರಾಲಿ ಬದಲಾಯಿಸಬೇಕು. ಪ್ರತಿ ಅಂತಸ್ತಿನಲ್ಲೂ ಈ ಟ್ರಾಲಿಗಳ ಹತ್ತಿರ ನೂರಾರು ಜನ ಕ್ಯೂ ನಿಂತಿರುತ್ತಾರೆ. ನಾವು ಟಿಕೆಟ್ ತೆಗೆದುಕೊಂಡು ಚೌಕಾಕಾರದ ಒಂದು ಜಾಗದಲ್ಲಿ ನಿಂತೆವು. ಸ್ವಲ್ಪ ಹೊತ್ತು ಕಾದ ಮೇಲೆ ನಮ್ಮ ಪಕ್ಕದ ಸರಳುಗಳಾಚೆ ಟ್ರಾಲಿ ಬಂದು ನಿಂತದ್ದು ಕಾಣಿಸಿತು. ಮೇಲಿನಿಂದ ಬಂದ ಟ್ರಾಲಿಯೊಳಗಿದ್ದ ಜನ ಹೊರಬರಲು ಬೇರೆ ದಾರಿಯಿತ್ತು. ಅವರೆಲ್ಲ ಹೊರ ಹೋದ ಮೇಲೆ ನಮ್ಮ ಕಡೆಯ ಕಟಕಟೆಯ ಬಾಗಿಲು ತೆರೆದರು. ನಾವು ಸುಮಾರು ನೂರು ಜನ ಟ್ರಾಲಿಯೊಳಗೆ ಹೋಗಿ ನಿಂತೆವು. ಬಾಗಿಲುಗಳನ್ನೆಲ್ಲ ಭದ್ರಪಡಿಸಿ ಸ್ವಿಚ್ ಒತ್ತಿದ ಕೂಡಲೇ ಟ್ರಾಲಿ ಮೆಲ್ಲನೆ ಮೇಲೆರತೊಡಗಿತು.
ಟ್ರಾಲಿಯ ಸುತ್ತ ಗಾಜಿನ ಕಿಟಕಿ ಇದ್ದುದರಿಂದ ಹೊರಗಿನದು ನಮಗೆ ಕಾಣುತ್ತಿತ್ತು. ಸರಳುಗಳು ಅದರ ಮಧ್ಯೆ ಕಿರಿದಾಗುತ್ತಿದ್ದ ಗಾರ್ಡನ್ ಮತ್ತು ಜನರು ಕಾಣುತಿದ್ದರು.

ಎರಡನೆಯ ಸ್ಟೇಜಿಗೆ ಎಂದ ಕೂಡಲೇ ಬಾಗಿಲು ತೆಗೆದರು. ನಾವು ಹೊರಗೆ ಅಡಿಯಿಟ್ಟೆವು. ಆಶ್ಚರ್ಯ. ಆ ಜಾಗ ಸಣ್ಣ ಊರಿನಂತೆ ಇತ್ತು. ಸೊವಿನೀರ್‌ಗಳು ಲಾಕೆಟ್ ಮುಂತಾದ ಪ್ರವಾಸಿ ಆಕರ್ಷಣೀಯ ಸಾಮಾನುಗಳು ಮುಂತಾದವುಗಳನ್ನು ಮಾರುವ ಅನೇಕ ಅಂಗಡಿಗಳಿದ್ದವು. ಏರ್‌ಕಂಡಿಶನ್ಸ್ ಹೋಟೆಲೊಂದಿತ್ತು. ಹೊರಭಾಗರದಲ್ಲಿ ದಪ್ಪ ಗಾಜಿನ ಕಿಟಕಿಗಳಿರುವ ಒಂದು ರೀತಿಯ ಪಂಜರದಂತೆ ಇತ್ತು. ನಾವು ಗಾಜಿನ ಕಿಟಕಿಗಳ ಬಳಿ ನಿಂತು ಹೊರಗೆ ವೀಕ್ಷಿಸಿದೆವು. ಮೇಲಿನಿಂದ ಸೀನ್ ನದಿ. ಅದರ ಮೇಲಿನ ಸೇತುವೆಗಳು ನಾತರ್ ಟಾಮ್ ಸೇಂಟ್ ಲೂಯಿಸ್ ಎಲ್ಲವೂ ಚೆನ್ನಾಗಿ ಕಾಣುತಿತ್ತು. ಇನ್ನೂ ಮೂರನೆಯ ಅಂತಸ್ತಿಗೆ ಹೋಗಬೇಕಾದರೆ ಇನ್ನೊಂದು ಟ್ರಾಲಿ ಹಿಡಿಯಬೇಕು. ಈ ಜಾಗ ಹುಡುಕಿಕೊಂಡು ಹೋದಾಗ ಅಲ್ಲಾಗಲೇ ಸುಮಾರು ಜನರು ನಿಂತಿದ್ದರು. ನಾವು ಸಹ ಅದರಲ್ಲಿ ತೂರಿಕೊಂಡು ಮೇಲೆ ಹೋದೆವು.

ಮೂರನೆಯ ಅಂತಸ್ತಿನಿಂದ ಪ್ಯಾರಿಸ್ ಇನ್ನೂ ಭವ್ಯವಾಗಿ ಕಾಣುತ್ತಿತ್ತು. ಸೀನ್ ನದಿಯ ಸೊಬಗು ಇನ್ನಷ್ಟು ಮೋಹಕ, ಪ್ಯಾರಿಸಿನಾಚೆಗೆ ಇರುವ ಬಯಲು ಈ ಸೌಂದರ್ಯಕ್ಕೆಲ್ಲಾ ಹಿನ್ನೆಲೆಯಾಗಿತ್ತು. ಉತ್ತರದಲ್ಲಿರುವುದರಿಂದ ವಿಪರೀತ ಗಾಳಿ. ಅಲ್ಲಿ ಗಾಜಿನ ಕೊಠಡಿಯಲ್ಲಿ ಇಪೆಲ್ ಮತ್ತು ಥಾಮಸ್ ಎಡಿಸನ್ ಮಾತಾಡುತ್ತಾ ಕುಳಿತಿರುವ ಒಂದು ದೃಶ್ಯವಿದೆ. ಅವರು ಹಾಕಿಕೊಂಡ ಸೂಟು ಬೂಟು ಹಾವಭಾವ ನೋಡಿದರೆ ಜೀವಂತ ವ್ಯಕ್ತಿಗಳೇ ಕುಳಿತು ಮಾತನಾಡುತ್ತಿದ್ದಾರೇನೋ ಎಂಬ ಭ್ರಮೆಯಾಗುತ್ತದೆ.ಮತ್ತೆ ನಾವು ಕೆಳಗಿಳಿದೆವು. ಎರಡನೆಯ ಅಂತಸ್ತಿಗೆ ಅಲ್ಲಿಂದ ಟ್ರಾಲಿ ಬದಲಾವಣೆ ನೆಲದ ಮೇಲೆ ಕಾಲಿಟ್ಟು ತಲೆಯೆತ್ತಿ ನೋಡಿದಾಗ ನಿಜವಾಗಲು ನಾವು ಅಷ್ಟು ಮೇಲೆ ಹೋಗಿದ್ದೆವೇನು ಎಂಬ ಅನುಮಾನ ಬರುತ್ತದೆ. ನನಗಂತೂ ನಾನು ಇತಿಹಾಸ ಪ್ರಸಿದ್ಧವಾದ ಜಗತ್ತಿನ ಅದ್ಭುತಗಳಲ್ಲಿ ಒಂದಾದ ಐಫೆಲ್ ಟವರ್ ಹತ್ತಿರ ನಿಂತಿದ್ದೇನೆ ಎಂಬುದು ಕನಸೋ ನನಸೋ ಎನ್ನುವುದನ್ನು ದೃಢಪಡಿಸಿಕೊಳ್ಳುವುದು ಆ ಕ್ಷಣದಲ್ಲಿ ಕಷ್ಟ ಸಾಧ್ಯವಾಯಿತು. ಅಲ್ಲದೇ ಈ ಗೋಪುರದ ತಂತ್ರಜ್ಞಾನದ ಬಗ್ಗೆ ಹೆಮ್ಮೆ ಎನಿಸಿತು.

ಅಲ್ಲಿರುವ ಸುಂದರ ಉದ್ಯಾನವನ ಈಜುಗೊಳ ನಿರ್ಮಿಸಿ ಈ ತಾಣವನ್ನು ಪ್ರವಾಸಿಗಳಿಗೆ ಇನ್ನಷ್ಟು ಅತ್ಯಾಕರ್ಷಣೀಯವಾಗಿಸಿದ್ದಾರೆ. ಈ ಅದ್ಭುತ ಕಲಾಕೃತಿಯನ್ನು ನಿರ್ಮಿಸಿದ ಅಭಿಯಂತರನ ಒಂದು ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿವರವನ್ನು ಸಹ ನಮೂದಿಸಿದ್ದಾರೆ. ಒಂದು ಕ್ಷಣ ಅವನ ಬುದ್ಧಿವಂತಿಕೆಗೆ ಒಂದು ಸಲಾಮ್ ಹಾಕಿದೆ. ಆಗಲೇ ಸಂಜೆ 6 ಗಂಟೆಯಾಯಿತು. ನಾವು ಅಲ್ಲಿ ಸುಮಾರು ಫೋಟೋ ತೆಗೆಸಿಕೊಂಡೆವು. ಟವರಿನಿಂದ ಸ್ವಲ್ಪ ದೂರ ಹೋಗಿ ಪೂರ್ತಿ ಟವರ್ ಬರುವಂತೆ ಪೋಟೋ ತೆಗೆಸಿಕೊಂಡೆವು. ನಂತರ ನಮ್ಮ ಗೈಡ್ ನಿರಜ್ ರಾತ್ರಿ ಲೇಸರ್ ದೀಪಾಲಂಕೃತಗೊಂಡ ಟವರ್ ನೋಡಲು ಬರುವಾ ಎಂದು ಹೇಳಿದ. ನಾವು ನಮ್ಮ ಹೋಟೆಲ್ ರೂಮಿಗೆ ಹಿಂತಿರುಗಿ ಫ್ರೆಶ್ ಆಗಿ, ಊಟ ಮುಗಿಸಿಕೊಂಡು ಡ್ರೆಸ್ ಮಾಡಿಕೊಂಡು ರಾತ್ರಿಯಲ್ಲಿ ಪ್ಯಾರಿಸ್ ನಗರ ಮತ್ತು ಐಫೆಲ್ ಟವರ್ ಹೇಗೆ ಕಾಣಿಸುತ್ತದೆ ಎಂದು ನೋಡಲು ಹೊರಟೆವು. ಈ ಸುಂದರ ಐಫೆಲ್ ಟವರ್ ನಿರ್ಮಾಣವಾಗಿ 120 ವರ್ಷಗಳೇ ಕಳೆದರೂ ನಿತ್ಯ ನಾವೀನ್ಯತೆಯನ್ನು ಪಡೆಯುತ್ತಾ ಮದುವಣಗಿತ್ತಿಯಂತೆ ಕಂಗೊಳಿಸುತ್ತಿದ್ದವು. ಸುಮಾರು ರಾತ್ರಿ ಹನ್ನೊಂದು ಗಂಟೆಗೆ ಲೇಸರ್ ದೀಪಾಲಂಕೃತಗೊಂಡ ಗೋಪುರದ ಈ ವೈಭವದ ಸಿರಿಯನ್ನು ನೋಡುವುದೇ ಒಂದು ಸ್ವರ್ಗ ಸುಖವೆಂದು ಹೇಳಿದರೆ ಅತಿಶಯೋಕ್ತಿ ಯಾಗಲಾರದು.

ರಾತ್ರಿಯಲ್ಲಿ ದೀಪಾಲಂಕೃತಗೊಂಡ ಪ್ಯಾರಿಸ್ ನಗರ ನೋಡಲು ಅತ್ಯಂತ ಸುಂದರವಾಗಿ ಕಾಣುತ್ತಿತ್ತು. ನಾವು ಅಲ್ಲಿ ನೆಪೋಲಿಯನ್ನನ ಸಮಾಧಿ ನೋಡಿದೆವು. ಮತ್ತು ಅಲ್ಲಿ ಎಲ್ಲ ಜನರು ಸೇರುವ ಜಾಗ ನೋಡಿ ರೂಮಿಗೆ ಬಂದು ಮಲಗಿಕೊಂಡೆವು.

ಆಗಸ್ಟ್ 13

ಮಾರನೆಯ ದಿನ ನಾವು ಬೆಳಿಗ್ಗೆ 8 ಗಂಟೆಗೆ ರೆಡಿಯಾಗಿ, ತಿಂಡಿ ತಿನ್ನಲು ಹೊರಟೆವು. ಇಲಿ ನಾನು ಪಾಶ್ಚಾತ್ಯ ದೇಶಗಳ ಬೆಳಗಿನ ತಿಂಡಿಯ ಬಗ್ಗೆ ಒಂದೆರಡು ಮಾತುಗಳು ಅಗತ್ಯ. ಇಲ್ಲಿ ಸಾಧಾರಣವಾಗಿ ಬ್ರೆಡ್ ಟೋಸ್ಟ್, ಮಪಿನ್ಸ್ ಆ್ಯಪೆಲ್ ಪ್ರೈ ಮುಂತಾದ ಬಗೆ ಬಗೆಯ ಬ್ರೆಡ್ಡುಗಳನ್ನಿರಿಸಿರುತ್ತಾರೆ. ಅನೇಕ ತರದ ಹಣ್ಣಿನ ರಸಗಳು ದ್ರಾಕ್ಷಿ ಟೊಮ್ಯಾಟೊ ಪೈನಾಪಲ್ ಕಿತ್ತಳೆ, ಆಪಲ್ ಜ್ಯೂಸ್‌ಗಳನ್ನಿಡುತ್ತಾರೆ. ನಾವು ಬೇಕಾದಷ್ಟು ಜ್ಯೂಸ್ ಕುಡಿಯಬಹುದು.

ಸ್ಟ್ರಾಬರಿ ಪೈನಾಪಲ್ ರಾಸ್‌ಬೆರಿ ದ್ರಾಕ್ಷಿ ಮುಂತಾದ ಜ್ಯಾಮ್‌ಗಳ ಸೀಲ್ ಆದ ಪುಟ್ಟ ಡಬ್ಬಿಗಳಲ್ಲಿರುತ್ತವೆ. ಇವು ಒಮ್ಮೆ ಉಪಯೋಗಿಸಿ ಎಸೆದುಬಿಡುವಂತಹದು. ಬೆಣ್ಣೆ ಸಹ ಇಂತಹ ಡಬ್ಬಿಗಳಲ್ಲೇ ಇರುತ್ತದೆ. ಸಾಲಾಗಿ ಬಿಸಿ ಕಾಫಿ, ಟೀ ಹಾಲುಗಳನ್ನು ಫಿಲ್ಟರ್‌ಗಳಲ್ಲಿ ಇಟ್ಟಿರುತ್ತಾರೆ. ಅಲ್ಲಿಯೇ ನಾವು ಕಾಫೀ ಟೀಗಳನ್ನು ಕಪ್‌ನಲ್ಲಿ ತೆಗೆದುಕೊಂಡು ಹಾಲು ಬೆರೆಸಿಕೊಳ್ಳಬಹುದು. ಪ್ರತಿಯೊಂದು ಮೇಜಿನ ಮೇಲೆ ಪುಟ್ಟ ಪುಟ್ಟ ಬ್ಯಾಸ್ಕೆಟ್‌ಗಳಲ್ಲಿ ಇಂಥ ಜಾಮ್ ಡಬ್ಬಿಗಳು ಸಕ್ಕರೆಯ ಪ್ಯಾಕೇಟ್‌ಗಳನ್ನು ಇಟ್ಟಿರುತ್ತಾರೆ. ನಾವು ನಮಗೆ ಬೇಕಾದಷ್ಟು ಸಕ್ಕರೆ ಹಾಲುಗಳನ್ನು ಬೆರೆಸಿಕೊಳ್ಳಬಹುದು ಮತ್ತು ಅಲ್ಲಿ ನಾನಾ ರೀತಿಯ ಕಾರ್ನ್‌ಪ್ಲೆಕ್ಸ್‌ಗಳನ್ನು ಇಟ್ಟಿರುತ್ತಾರೆ. ನಾವು ಕಾರ್ನ್‌ಪ್ಲೆಕ್ಸ್‌ನ್ನು ಹಾಲಿನಲ್ಲಿ ಹಾಕಿಕೊಂಡು ತಿನ್ನಬಹುದು. ಆದರೆ ನಾವು ಹೋದ ಕಡೆಯಲ್ಲ ಒಂದು ಇಂಥದೆಯಾದ ತಿಂಡಿ
ಇರುತ್ತಿತ್ತು. ಉದಾ: ಉಪ್ಪಿಟ್ಟು, ಅವಲಕ್ಕಿ, ದೋಸೆ, ಇಡ್ಲಿ. ಇದು ನಮಗೆ ತುಂಬಾ ಖುಷಿಯಾಗುತ್ತಿತ್ತು. ಮತ್ತು ಬೇಯಿಸಿದ ಮೊಟ್ಟೆಗಳನ್ನು ಇಡುತ್ತಿದ್ದರು. ಅದನ್ನು ಸಹ ನಾವು ಬೇಕಾದಷ್ಟು ತಿನ್ನಬಹುದಿತ್ತು. ನಂತರ ಕೊನೆಯಲ್ಲಿ ತಿನ್ನಲು ಹಸಿರು ಆಪಲ್ ಮೊಸಂಬಿ ಕಿತ್ತಲೆ ಹಣ್ಣುಗಳನ್ನು ಇಟ್ಟಿರುತ್ತಾರೆ. ಅಲ್ಲಿ ತಿಂಡಿಯಾದ ಮೇಲೆ ಅಲ್ಲ; ಊಟವಾದ ಮೇಲೂ ಕಾಫಿ ಸೇವಿಸುವುದು ಪಾಶ್ಚಾತ್ಯರಿಗೆ ರೂಢಿ.

ನಾವು ನಮ್ಮ ಬೆಳಿಗ್ಗಿನ ತಿಂಡಿಯನ್ನು ಮುಗಿಸಿ ಪ್ಯಾರಿಸ್ಸಿನಲ್ಲಿ ಪ್ರಸಿದ್ಧವಾದ ಲುಕ್ಸೆಂಬರ್ಗ್ ಎಂಬ ಉದ್ಯಾನವನವನ್ನು ನೋಡಲು ಹೊರಟೆವು. ಮೊದಲು ನಮ್ಮ ಕಣ್ಣಿಗೆ ಬಿದ್ದದ್ದು ಲುಕ್ಸೆಂಬರ್ಗ್ ಅರಮನೆಯ ವಿಶಾಲವಾದ ಹೆಬ್ಬಾಗಿಲು ಅಲ್ಲಿ ನಿಂತು ನಾವು ಪ್ಯಾರಿಸ್ ಅರಮನೆ ಮತ್ತು ಉದ್ಯಾನವನದ ಅನೇಕ ಪೋಟೋಗಳನ್ನು ತೆಗೆಸಿಕೊಂಡೆವು. ಈ ಅರಮನೆ ಸಹ ಪ್ಯಾರಿಸಿನ ಇನ್ನೊಂದು ಆಕರ್ಷಣೆ ಲುಕ್ಸೆಂಬರ್ಗ್ ಅರಮನೆಯನ್ನು ನಾಲ್ಕನೇ ಹೆನ್ರಿ ದೊರೆಯ ಹೆಂಡತಿ ಮೇರಿ ಮೆಡಿಟಿಗೋಸ್ಕರ ಕಟ್ಟಿಸಿದ್ದು. ಅದು ಈಗ ಸೆನೆಟ್ ಸಭೆ ನಡೆಯುವ ಸ್ಥಳವಾಗಿದೆ. ಇದರ ಇನ್ನೊಂದು ಭಾಗದಲ್ಲಿ ಶಿಲ್ಪ ಕಲಾಶಾಲೆ ಹಾಗೂ ಚಿತ್ರ ಕಲಾಶಾಲೆಗಳಿವೆ. ಶಿಲ್ಪ ಕಲಾ ಶಾಲೆಯಲ್ಲಿ ರೋಡಿನ್ ಮಾಸಿ ರೆನಾಯಿರ್ ಪಿಕಾಸೋ ಡೇಗಾ ಅವರ ಕೆತ್ತನೆಗಳಿವೆ. ಚಿತ್ರಕಲಾಶಾಲೆಯಲ್ಲಿ ಹನ್ನೊಂದು ಕೊಠಡಿಗಳಿದ್ದು ಪ್ರಾನ್ಸಿನ ಪ್ರಾಚೀನ ಹಾಗೂ ಆಧುನಿಕ ಚಿತ್ರಕಾರರ ವರ್ಣಚಿತ್ರಗಳಿವೆ.

ಇನ್ನೂ ಉದ್ಯಾನವನಕ್ಕೆ ಕಾಲಿಡುತ್ತಿದ್ದಂತೆ ನಾವು ಸ್ವರ್ಗಲೋಕ ಪ್ರವೇಶಿಸಿದಷ್ಟು ಸಂತೋಷವಾಯಿತು. ಎಲ್ಲಿ ನೋಡಿದರಲ್ಲಿ ಹೂವಿನ ರಾಶಿಯೇ ರಾಶಿ. ಬಣ್ಣ ಬಣ್ಣದ ನಾನಾತರದ ಹೂಗಿಡಗಳು ಎಷ್ಟು ನೋಡಿದರೂ ಮತ್ತೆ ಮತ್ತೆ ನೋಡಬೇಕೆನಿಸುವ ಪುಷ್ಪ ರಾಶಿ. ಅಲ್ಲಲ್ಲಿ ಚಿಮ್ಮುವ ಕಾರಂಜಿಗಳಂತೂ ಲೆಕ್ಕವೇ ಇಲ್ಲ. ಇದು ಅರಮನೆಯ ಪಕ್ಕದಲ್ಲಿ ಇರುವುದರಿಂದ ಇದು ಹಿಂದೆ ಅರಮನೆಯ ಉದ್ಯಾನವನವಾಗಿರಬೇಕು. ನಾವುಗಳಂತೂ ಹೂ ರಾಶಿಯ ಪಕ್ಕದಲ್ಲಿ ನಿಂತು ತುಂಬಾ ಫೋಟೋ ತೆಗೆಸಿಕೊಂಡೆವು. ಇಲ್ಲಿ ಫ್ರಾನ್ಸಿನ ರಾಜರುಗಳು ಸಾಹಿತಿಗಳು ಕಲಾಕಾರರು ನಡೆದಾಡಿದ ಈ ಉದ್ಯಾನವನದಲ್ಲಿ ಕಾಲಿಡುವಾಗ ವಿಚಿತ್ರವಾದ ಅನುಭವವಾಗುತ್ತದೆ. ಮುಂದೆ ಹೋದಂತೆ ಎತ್ತರವಾದ ದಟ್ಟವಾದ ವಿವಿಧ ಬಗೆಯ ಮರಗಳಿವೆ. ಅಲ್ಲಿ ಹಚ್ಚ ಹಸುರಿನ ಹುಲ್ಲು ಹಾಸು ಅದರ ಮೇಲೆ ಯಾರೂ ನಡೆದಾಡುವಂತೆ ಇಲ್ಲ.

ಇಲ್ಲಿರುವ ಮಕ್ಕಳ ಉದ್ಯಾನ ವಿಶೇಷ ವರ್ಣನೆಗೆ ಪಾತ್ರ. ಇಲ್ಲಿ ಮಕ್ಕಳು ಯಾವ ಅಡೆತಡೆಯೂ ಇಲ್ಲದೆ ಆಟವಾಡುತ್ತಿದ್ದರು. ಹಲವರು ಅಲ್ಲಿದ್ದ ಪುಟ್ಟ ಸರೋವರದಲ್ಲಿ ತೇಲುತ್ತಿದ್ದ ಹಾಯಿ ಹಡಗುಗಳಲ್ಲಿ ಕುಳಿತಿದ್ದರು. ಉದ್ಯಾನವನದಲ್ಲಿ ಅಲ್ಲಲ್ಲಿ ಕುಳಿತುಕೊಳ್ಳಲು ಆಸನಗಳಿದ್ದವು. ಚೌಕಗಳಲ್ಲಿ ಕಾರಂಜಿಗಳು ನೀರು ಚಿಮ್ಮುವ ಸೊಬಗು ಮನಸ್ಸನ್ನು ಮುದಗೊಳಿಸುತ್ತಿತ್ತು. ನನಗಂತೂ ಆ ಉದ್ಯಾನವನ್ನು ಬಿಟ್ಟು ಬರಲು ಮನಸ್ಸೇ ಬರುತ್ತಿರಲಿಲ್ಲ. ಆದರೆ ನಮ್ಮ ಗೈಡ್ ಮುಂದೆ ನೋಡುವುದು ತುಂಬಾ ಇದೆ. ಬೇಗ ಹೊರಡಿ ಎಂದು ನಮ್ಮನ್ನು ಹೊರಡಿಸಿದನು.ನಮ್ಮ ಮುಂದಿನ ನಿಲ್ದಾಣದ ಲಾ ಕಂಕಾರ್ಡ್ ಎಂಬ ಚೌಕ ಬಹಳ ವಿಸ್ತಾರವಾದ ಈ ಚೌಕದ ಎತ್ತರದಲ್ಲಿ ಉನ್ನತ ಕಾರಿಯನ್ ಕಂಬಗಳಿರುವ ಸಾಗರ ಸಚಿವಾಲಯವಿದೆ. ದಕ್ಷಿಣದಲ್ಲಿ ಸೀನ್ ನದಿ ಪೂರ್ವದಲ್ಲಿ ಟ್ಯುಲರಿ ಉದ್ಯಾನ. ಪಶ್ಚಿಮಕ್ಕೆ ಸಾಂಪ್ ಎಲ್‌ಸಿಸ್ ಮಹಾ ರಸ್ತೆ.

ಕಂಕಾರ್ಡ್ ಚೌಕದಲ್ಲಿ ಉನ್ನತವಾದುದೊಂದು ಕಾರಂಜಿಯಿದೆ. ಅಲ್ಲಿ ಶಿಲಾ ಪ್ರತಿಮೆಗಳು ಇವೆ. ಕಾರಂಜಿಯ ನೀರು ಸುಮಾರು ಮೂವತ್ತು ಅಡಿ ಎತ್ತರಕ್ಕೆ ಚಿಮ್ಮುವುದೊಂದು ವಿಶೇಷ. ಈ ಕಾರಂಜಿಯಿದ್ದ ಜಾಗದಲ್ಲಿ ಕ್ರಾಂತಿಯ ಸಮಯದಲ್ಲಿ ಗೆಲೋಟಿನ್ ಯಂತ್ರ ಸಹಸ್ರಾರು ತಲೆಗಳನ್ನು ಬಲಿ ತೆಗೆದುಕೊಂಡಿತ್ತಂತೆ. ಆಗ 1792ರಲ್ಲಿ ಮಾರ್ಸೆಲ್‌ನ ಸೈನಿಕರು ಪ್ರಪಂಚದ ಅತ್ಯಂತ ದೇಶ ಭಕ್ತಿ ಗೀತೆಯಾದ “ದ ಮಾರ್ಸೆಲ್ಸ್” ಎಂಬ ಗೀತೆಯನ್ನು ಹಾಡುತ್ತಾ ಪ್ಯಾರಿಸ್ಸಿಗೆ ಬಂದು ಸರ್ವಾಧಿಕಾರಿ ಚಕ್ರವರ್ತಿ 16ನೇ ಲೂಯಿಯನ್ನು ಸಿಂಹಾಸನದಿಂದ ಕೆಳಗಿಳಿಸಿದ ಕತೆಯನ್ನು ಯೂರೋಪಿಯನ್ ಇತಿಹಾಸದಲ್ಲಿ ಓದಿದ್ದು ನೆನಪಾಯಿತು. ಚಕ್ರವರ್ತಿಯನ್ನು, ಶ್ರೀಮಂತರನ್ನು ಸೆರೆಯಲ್ಲಿಟ್ಟ ನಂತರ 1998ರಲ್ಲಿ ಗಿಲೋಟಿನ್ ಯಂತ್ರದಿಂದ ಅವರನ್ನೆಲ್ಲ ವಧಿಸಿದ್ದು ಕೂಡ ನೆನಪಾಯಿತು. 2 ಚಕ್ರವರ್ತಿ 16ನೇ ಲೂಯಿ ಅವನ ಪ್ರಿಯತಮೆ ಮೇರಿ ಆಂಟೋನಿಯೆಟ್, ಅವನ ತಂಗಿ ಎಲಿಜಬೆತ್, ಪ್ಯಾರಿಸ್ಸಿನ ಆಗರ್ಭ ಶ್ರೀಮಂತರು. ಹೀಗೆ ಜನರನ್ನು ಲೂಟಿ ಮಾಡಿದ ಸುಮಾರು ಮೂರು ಸಹಸ್ರ ಜನರ ಕತ್ತನ್ನು ಗಿಲೊಟಿನ್ ಯಂತ್ರ ಕತ್ತರಿಸಿತು. ಹೀಗೆ ಫ್ರಾನ್ಸ್ ಕ್ರಾಂತಿ, ರಾಜನ ಸರ್ವಾಧಿಕಾರವನ್ನು ನಾಶ ಮಾಡಿತು. ಅದರ ಬದಲಿಗೆ ಜನರ ಆಶಯಗಳನ್ನು ಪ್ರತಿನಿಧಿಸುವ ಪ್ರಜಾ ಪ್ರಭುತ್ವ ಸರಕಾರವನ್ನು ಸ್ಥಾಪಿಸಿತು.ಕಾರಂಜಿಗೆ ಸಮೀಪದಲ್ಲೇ ಉತ್ತರದ ಈ ಆಪ್ಟಿಯನ್ ಗ್ರಾನೈಟ್ ಕಲ್ಲಿನ ಮೊನಚು ಕಂಬವಿದೆ. ಈಜಿಪ್ಟಿನ ಮಹಮ್ಮದಾಲಿ ಪಾಶಾ ಎನ್ನುವ ದೊರೆ. ಫ್ರಾನ್ಸಿನ ಲೂಯಿ ಫಿಲಿಪ್ ಎಂಬ ರಾಜನಿಗೆ ಉಡುಗೊರೆ ಕೊಟ್ಟಿದ್ದು, ಮೂರು ಸಾವಿರ ವರ್ಷಗಳಿಗೆ ಹಿಂದೆ ಈಜಿಪ್ತಿಯನ್ನರು ಇಂಥ ಕಂಬಗಳ ನೆರಳು ನೋಡಿ ಸಮಯ ಹೇಳುತ್ತಿದ್ದರಂತೆ.

ವಿಜಯದ ಕಮಾನು ಸುಮಾರು 180 ಅಡಿ ಎತ್ತರವಿದ್ದು ಪ್ರಪಂಚದಲ್ಲೇ ಅತಿ ಎತ್ತರವಾದ ವಿಜಯದ ಕಮಾನು ಎಂದು ಹೆಸರು ಪಡೆದಿದ್ದೆ. ನೆಪೋಲಿಯನ್ ತಾನು ಗೆದ್ದ ಯುದ್ಧಗಳ ವಿಜಯದ ಸಂಕೇತವಾಗಿ ಈ ಕಮಾನು ಕಟ್ಟಿಸಲು ಪ್ರಾರಂಭಿಸಿದ ಮುಗಿದದ್ದು ಮಾತ್ರ 25 ವರ್ಷಗಳ ನಂತರವೇ. ಮುಂದೆ ನಾವು ನಾತರಡಾಮ್ ಚರ್ಚ್ ನೋಡಲು ಹೊರಟೆವು. ಇದು ದಿಲಾಸಿತೆ ಎಂಬ ದ್ವೀಪದ ಮೇಲಿರುವ ಗಾಧಿಕ್ ಕಲಾಶೈಲಿಯ ಅಪರೂಪದ ಮಂದಿರ ಐಫೆಲ್ ಟವರಿನ ಮೇಲೆ ನಿಂತು ನೋಡಿದಾಗ ಈ ದಿಲಾಸಿತೆ ಎಂಬ ದ್ವೀಪ ಒಂದು ಹಡಗಿನಂತೆ ನಮಗೆ ಕಾಣಿಸುತ್ತದೆ.ನಾತರಡ್ಯಾಮ್ ಪಶ್ಚಿಮಕ್ಕೆ ಮುಖಮಾಡಿ ನಿಂತ ಕಟ್ಟಡ. ನಾವು ಇದರ ಮುಂಭಾಗದಲ್ಲಿ ಬಂದು ನಿಂತಾಗ ನಮ್ಮ ಗೈಡ್ ವಿವರಿಸುತ್ತಿದ್ದ.

ಇದು ಹನ್ನೆರಡನೆಯ ಶತಮಾನದ ಕಟ್ಟಡ. ಇಲ್ಲಿ ಫ್ರಾನ್ಸಿನ ರಾಜರ ಕಿರೀಟ ಧಾರಣೆಗಳು, ಮದುವೆಗಳು, ಮಕ್ಕಳ ನಾಮಕರಣಗಳು ಕಡೆಗೆ ಶವ ಸಂಸ್ಕಾರ ಕೂಡಾ ನಡೆದಿದೆ. ಆಯಾ ಕಾಲದ ಸಾಮಾಜಿಕ ಏರುಪೇರುಗಳನ್ನವಲಂಬಿಸಿ ಪ್ರಾನ್ಸಿನ ಜನ ಇದನ್ನು ಪೂಜಿಸಿದ್ದಾರೆ, ಗೌರವಿಸಿದ್ದಾರೆ. ಅಲಕ್ಷ್ಯ ಮಾಡಿದ್ದಾರೆ. ಹಾಳು ಮಾಡಿದ್ದಾರೆ ಮತ್ತು ಅಲಂಕರಿಸಿದ್ದಾರೆ. ಹದಿನೆಂಟನೇ ಶತಮಾನದ ಕ್ರಾಂತಿಯ ಕಾಲದಲ್ಲಿ ಜನ ಈ ಚರ್ಚನ್ನು ಕೊಳ್ಳೆ ಹೊಡೆದರು. ಆದರೆ ಮತ್ತೆ 19ನೇ ಶತಮಾನದಲ್ಲಿ ವಯಲೆಟ್ ಲಿದರ್ ಎಂಬ ವಾಸ್ತುಶಿಲ್ಪ ತಜ್ಞ ಇದನ್ನು ಪುನರ್ ನಿರ್ಮಿಸಿದ.

By-ಶಾಲಿನಿ ಗಾಂವಕರ್

ಮುಂದಿನ ಭಾಗ ಓದಿ…

Leave a Comment

Comments

No comments yet. Why don’t you start the discussion?

    Leave a Reply