ಮ್ಯೂಸಿಯಂ

ಪ್ಯಾರಿಸ್ ನಗರದಲ್ಲಿ ನೂರಕ್ಕೂ ಹೆಚ್ಚು ಸಂಖ್ಯೆಯ ಮ್ಯೂಸಿಯಂಗಳಿವೆ ಎಂದು ಹೇಳಲಾಗಿದೆ. ಅವುಗಳಲ್ಲೆಲ್ಲ ಲೂವಾ ಮ್ಯೂಸಿಯಂ ಅತ್ಯಂತ ಲೋಕಪ್ರಸಿದ್ಧವಾದದ್ದು. ಮಾನವ ಪ್ರತಿಭೆಯ ಅಭಿವ್ಯಕ್ತಿಗಳಾದ ಕಲಾಕೃತಿಗಳು. ಈ ಮ್ಯೂಸಿಯಂನಲ್ಲಿರುವಷ್ಟು ಸಂಖ್ಯೆಯಲ್ಲಿ ಜಗತ್ತಿನ ಬೇರಾವ ಮ್ಯೂಸಿಯಂಗಳಲ್ಲೂ ಇಲ್ಲವೆಂದು ಹೇಳಲಾಗಿದೆ. ಈ ಮ್ಯೂಸಿಯಂನ ಪ್ರವೇಶದ್ವಾರದಲ್ಲಿರುವ ಗಾಜಿನ ಪಿರಮಿಡ್ ತನ್ನ ಕಲಾಕುಶಲತೆಯಿಂದ ಬೆರಗು ಹುಟ್ಟಿಸುತ್ತದೆ. ಈ ಮ್ಯೂಸಿಯಂ ಅನ್ನು ಪ್ರವೇಶಿಸಿ ಒಂದೊಂದು ವಿಭಾಗದ ಮೂಲಕ ಸುಮ್ಮನೆ ಹಾದು ಬಂದರೂ ಅದು ಒಂದು ಮೈಲಿಯಷ್ಟಾಗುತ್ತದಂತೆ. ಇದನ್ನು ವಿವರವಾಗಿ ನೋಡಲು ಕಡೇ ಪಕ್ಷ ಒಂದು ವಾರವಾದರೂ ಬೇಕಂತೆ. ಇಂಥ ವಿಸ್ತಾರವಾದ ಮ್ಯೂಸಿಯಂನಲ್ಲಿ ನಾವು ನೋಡಲು ಸಾಧ್ಯವಾದದ್ದು ಈಜಿಪ್ಟ್ ಹಾಗೂ ರೋಮನ್ ಶಿಲ್ಪಕಲಾ ವಿಭಾಗಗಳನ್ನು ಮತ್ತು ಜಗತ್ ಪ್ರಸಿದ್ಧ ವರ್ಣಚಿತ್ರಗಳ ವಿಧಾನವನ್ನು. ಬಹುಸಂಖ್ಯೆಯ ಅಮೃತ ಶಿಲ್ಪ ಕಲಾಕೃತಿಗಳ ಜಗತ್ತನ್ನು ಹಾದು ವರ್ಣಚಿತ್ರಗಳ ಪ್ರಪಂಚವನ್ನು ಪ್ರವೇಶಿಸಿದೆವು.
ಸುಮಾರು ಅಮೃತ ಶಿಲ್ಪಾಕೃತಿಗಳ ಮುಂದೆ ನಿಂತು ಫೋಟೋ ತೆಗೆಸಿಕೊಂಡವು.ಸುಮಾರು ಎರಡು ಗಂಟೆಗಳ ಅವಧಿಯಲ್ಲಿ ಜಗತ್ತಿನ ವಿವಿಧ ಕಲಾಪಂಥಗಳ ವರ್ಣಚಿತ್ರ ಶಾಲೆಯಲ್ಲಿ ಸುತ್ತಿ ಕೊನೆಗೆ ಲಿಯೋನಾರ್ಡೊ ದವಿಂಚಿ ಬರೆದ ಜಗತ್ ಪ್ರಸಿದ್ಧವಾದ ಮೋನಲಿಸಾಳ ಚಿತ್ರವಿರುವ ಗ್ಯಾಲರಿಗೆ ಬಂದೆವು. ಈ ಚಿತ್ರದ ಮುಂದಂತೂ ಪ್ರೇಕ್ಷಕರು ಸಾಲುಗಟ್ಟಿ ನಿಂತಿದ್ದರು. ಕೆಲವರು ಫೋಟೋ ತೆಗೆದುಕೊಳ್ಳುತ್ತಿದ್ದರು. ನಾನು ಆಗುಂಪಿನ ನಡುವೆ ಹೋಗಿ ಆ ಚಿತ್ರದ ಎದುರು ನಿಂತು ಫೋಟೋ ತೆಗೆದುಕೊಂಡೆ.
ಈ ಚಿತ್ರ ಜಗತ್‌ಪ್ರಸಿದ್ಧವಾಗಿರುವುದು ಅದರ ಮಂದಹಾಸದಿಂದ ಎಂಬುದು ಜನಜನಿತವಾಗಿದೆ. “ಮೋನಲಿಸಾಳ ಮುಗುಳ್ಳಗೆ” ಎನ್ನುವುದೊಂದು ಗಾದೆ ಮಾತಾಗಿ ಬಿಟ್ಟಿದೆ. ಮಂದಹಾಸವೇನೋ ಇದೆ ಆದರೆ ಅದರ ಮಂದಹಾಸವನ್ನು ಸೂಸುವ ಮುಖದ ಅಂದ ಅಷ್ಟಕಷ್ಟೆ, ಅಗಲವಾದ ಹಣೆಯ ನೀಳವಾದ ಮೂಗಿಗೆ ಅರೆತೆರೆದ ಕಣ್ಣುಗಳ ಬೈತಲೆಯ ಅತ್ತ ಇತ್ತ ಎರಡು ಭುಜಗಳವರೆಗೆ ಇಳಿದ ಕಪ್ಪು ಕೂದಲಿನ ಒಂದು ರೀತಿ ವಿಲಕ್ಷಣವಾದ ಗಾಂಭೀರ್ಯದ ಬಹುಮಟ್ಟಿಗೆ ಗಂಡು ಕಳೆಯನ್ನುಳ್ಳ ಈ ಮುಖದ ಮಂದಹಾಸ ತೀರಾ ವಿಶೇಷವಾದ ಆಕರ್ಷಣೆಯನ್ನು ಉಂಟು ಮಾಡುವುದಿಲ್ಲ. ಆದರೂ ಜನ ಈ ಮ್ಯೂಸಿಯಂನಲ್ಲಿ ಇನ್ನೆಷ್ಟೋ ಚಿತ್ರಗಳಿದ್ದರೂ ನೋಡಲೇಬೇಕಾದ ಚಿತ್ರ ಇದೊಂದೇ ಏನೋ ಎಂಬಂತೆ ಈ ಚಿತ್ರದ ಕಡೆ ಧಾವಿಸಿ ಬಂದು ಇಲ್ಲಿ ನಿಂತು ಮೊನಲಿಸಾಳ ಮುಗುಳ್ಳಗೆಯ ಮುಂದೆ ಮುದಗೊಂಡು ನಿಲ್ಲುತ್ತಾರೆ. ಈ ಚಿತ್ರದ ಕಣ್ಣುಗಳು ಮಾತ್ರ ನಾವು ಯಾವ ಯಾವ ದಿಕ್ಕಿಗೆ ನಿಂತು ನೋಡಿದರು ನಮ್ಮನ್ನು ನೋಡುವಂತೆ ಭಾಸವಾಗುತ್ತದೆ. ಬಹುಶಃ ಇದೇ ಇರಬಹುದು ಈ ಚಿತ್ರದ ಮೋಡಿ.
ದೋಣಿ ವಿಹಾರ

ನಾವು ಸೀನ್ ನದಿಯ ದಡಕ್ಕೆ ಬಂದೆವು. ಮುಂದೆ ನಾವು ದೋಣಿ ವಿಹಾರ ಹೊರಟೆವು. ಅಲ್ಲಿ ಹೋಗಿ ಟಿಕೆಟ್ ತೆಗೆದುಕೊಂಡು ಮೋಟರ್ ಲಾಂಚ್‌ಗಾಗಿ ಕಾಯುತ್ತಿದ್ದೆವು. ನಮ್ಮಂತೆ ಅಲ್ಲಿ ನೂರಾರು ಜನರು ಲಾಂಚಿಗಾಗಿ ಕಾಯುತ್ತಾ ಇದ್ದರು. ಸ್ವಲ್ಪ ಹೊತ್ತಿನಲ್ಲಿಯೇ ಲಾಂಚ್ ಬಂತು. ಒಳಗೆ ಸುಮಾರು ಮುನ್ನೂರು ಜನ ಕುಳಿತು ಕೊಳ್ಳುವಷ್ಟು ಕುರ್ಚಿಗಳಿದ್ದವು. ಎಲ್ಲಿ ಕುಳಿತರು ಸುತ್ತಲಿನದೆಲ್ಲಾ ಸ್ಪಷ್ಟವಾಗಿ ಕಾಣುತಿತ್ತು.
ಲಾಂಚ್ ಪೂರ್ವಾಭಿಮುಖವಾಗಿ ಸಾಗಿತು. ನದಿಯ ಮೇಲೆ ಪ್ರವಾಸಿಗರನ್ನು ಕರೆದುಕೊಂಡು ಹೋಗುವ ಇಂಥ ಅನೇಕ ಲಾಂಚೆಗಳಿದ್ದವು. ಗೋದೂಳಿ ಸಮಯದಲ್ಲಿ ಸೀನ್ ನದಿಯ ದೋಣಿ ವಿಹಾರ ಒಂದು ಅನಿರ್ವಚನೀಯ ಆನಂದ ನೀಡಿತು. ದಂಡೆಯ ಇಕ್ಕೆಲಗಳಲ್ಲಿ ಕಂಡುಬಂದ ಕಲಾತ್ಮಕವಾದ ವಿಧವಿಧವಾದ ಕಟ್ಟಡಗಳು ಇದ್ದವು. ನಮ್ಮ ಗೈಡ್ ಅಲ್ಲಿರುವ ಮುಖ್ಯ ಕಟ್ಟಡಗಳ ಬಗ್ಗೆ ಹೇಳುತ್ತಿದ್ದ.
ಎತ್ತರದ ಗೋಪುರ ಪ್ಯಾಂಥಿಯರದು, ಈಚೆಗೆ ಇರೋದು ಇನ್ ವ್ಯಾಲಿಡ್ಸ್ ಶಿಖರ. ಇಲ್ಲಿ ನೆಪೋಲಿಯನ್ ಗೋರಿ ಇದೆ. ಇನ್ನು ಮುಂದಕ್ಕೆ ಸಾರ್ಬೊನ್ ವಿಶ್ವ ವಿದ್ಯಾಲಯವಿದೆ. ಸೀನ್ ನದಿಯ ಮೇಲೆ 34 ಸೇತುವೆಗಳಿವೆ. ಇವು ಒಂದಕ್ಕಿಂತ ಒಂದು ಚೆನ್ನ. ಲಾಂಚ್ ನಾತಾರಡಾಮ್ ಚರ್ಚನ್ನು ದಾಟಿ ಸೆಂಟ್ ಲೂಯಿಸ್ ದ್ವೀಪದ ಪಕ್ಕ ಹೊರಟಿತ್ತು. ದ್ವೀಪದ ಸುತ್ತಲೂ ಕಲ್ಲು ಕಟ್ಟಿದ ದಂಡೆಯಿದೆ. ಒತ್ತಾದ
ಮರಗಳಿವೆ.
ಸೆಂಟ್ ಲೂಯಿಸ್ ದಾಟಿದ ಮೇಲೆ ಲಾಂಚ್ ಸೀನ್ ನದಿಯ ಎಡ ದಂಡೆಯತ್ತ ಸಾಗಿತು. ನದಿಯ ಇಕ್ಕೆಲಗಳಲ್ಲಿ ಇನ್ನೂ ಅನೇಕಾನೇಕ ಸುಂದರ ದೃಶ್ಯಾವಳಿಗಳನ್ನು ವೀಕ್ಷಿಸಿದೆವು. ನಾವು ಸೀನ್ ನದಿಯಲ್ಲಿ ಹೋಗುವಾಗ ಐಫೆಲ್ ಟವರ್ ತುಂಬಾ ಹತ್ತಿರದಿಂದ ಚೆನ್ನಾಗಿ ಕಾಣುತ್ತಿತ್ತು. ಪ್ಯಾರಿಸ್ ನಗರದಲ್ಲಿ ಸೀನ್ ನದಿಯಲ್ಲಿ ಎಲ್ಲೇ ವಿಹರಿಸುತ್ತಿದ್ದರೂ ಐಫೆಲ್ ಟವರ್ ಕಣ್ಣಿಗೆ ಬೀಳುತ್ತಿತ್ತು. ನಾವು ಲಾಂಚ್ ವಿಹಾರ ಮುಗಿಸಿ ರೂಮಿಗೆ ಬಂದು ಊಟ ಮುಗಿಸಿ ನಮಗೆ ಕ್ಯಾಬರೇ ನೋಡಲು ಹೋಗುವುದಿತ್ತು.
ಪ್ಯಾರಿಸ್ಸಿಗೆ ಬಂದ ಮೇಲೆ ಕ್ಯಾಬರೇಯನ್ನು ನೋಡದೇ ಹೋಗುವುದು ತರವೇ ನಾವು ಟೂರ್ ಹೋಗುವ ಮೊದಲೇ ಇವರ ಗೆಳೆಯರು ಇದರ ಬಗ್ಗೆ ಹೇಳಿದ್ದರು. ಪ್ಯಾರಿಸ್ಸಿಗೆ ಹೋದರೆ ಇದನ್ನು ನೋಡಲೇಬೇಕು. ಚಾನ್ಸ್ ಮಿಸ್ ಮಾಡಿಕೊಳ್ಳಬೇಡಿ ಎಂದು ಹೇಳಿದ್ದರು. ಆದರೆ ಇದಕ್ಕಾಗಿ ತಲಾ 150 ಯುರೋಗಳಂತೆ ನಮಗಿಬ್ಬರಿಗೆ 300 ಯುರೋ ಕೊಡಬೇಕಿತ್ತು. ನಮ್ಮ ಜೊತೆ ಬಂದವರು ಹಣವಂತರಾದರು. ಏಕೋ ಏನೋ ಕ್ಯಾಬರೇ ನೋಡಲು ಬರಲು ಒಪ್ಪಲಿಲ್ಲ. ಕೇವಲ ನಾಲ್ಕು ಜನ ಮಾತ್ರ ನಮ್ಮ ಜೊತೆಗಿದ್ದರು. ವಯಸ್ಸಾದ ನಾವು ಹೊರಟಿದ್ದು ನೋಡಿ ಕೆಲವರು ಮನಸ್ಸಿನೊಳಗೆ ನಕ್ಕಿದ್ದು ಉಂಟು. ಆದರೂ ನಮ್ಮ ಯಜಮಾನರು ಹಣ ಖರ್ಚಾದರೂ ಪರ್ವಾಗಿಲ್ಲ, ಇನ್ನೊಮ್ಮೆ ನಾವು ಪ್ಯಾರಿಸ್ಸಿಗೆ ಬರುವುದಿಲ್ಲ ನೋಡಿಯೇ ಹೋಗೋಣ ಎಂದು ನನ್ನ ಬೆನ್ನು ತಟ್ಟಿ ಹುರಿದುಂಬಿಸಿದರು.
ಲಿಡೋ ಶೋ

ನಮ್ಮ ಪ್ರವಾಸಿ ಸಂಸ್ಥೆಯವರು ಮೊದಲೇ ನಮಗಾಗಿ ಸೀಟ್ ಬುಕ್ ಮಾಡಿಸಿದ್ದರು. ರಾತ್ರಿ 10 ಗಂಟೆಗೆ ನಮ್ಮ ಮ್ಯಾನೇಜರ್ ನೀರಜ್ ನಮ್ಮನ್ನು ಕರೆದುಕೊಂಡು ಹೋದರು. ಪ್ಯಾರಿಸ್ ತನ್ನ ಕತ್ತಲೆಯ ವೈಭವಗಳಿಗೆ ಹೆಸರಾದದ್ದು. ನೈಟ್ ಕ್ಲಬ್‌ಗಳು ನರ್ತನ ಶಾಲೆಗಳು, ಗೀತ ರೂಪಕ ಪ್ರದರ್ಶನಗಳು ಸಾಕಷ್ಟು ಇವೆ. ಶೀಲ ಅಶ್ಲೀಲಗಳ ಬಗ್ಗೆ ತಲೆಕೆಡಿಸಿಕೊಳ್ಳದ ಮನಸ್ಥಿತಿಯಲ್ಲಿದ್ದರೆ, ಇಲ್ಲಿನ ಮನರಂಜನೆ ಹಾಗೂ ವಿಲಾಸಗಳಲ್ಲಿ ಪಾಲುಗೊಂಡು ಸಂತೋಷಪಡಬಹುದು. ವಿಲಾಸಮಯವಾದ ಲಿಡೋ ಪ್ಯಾರಿಸ್ಸಿನ ನೈಟ್ ಕ್ಲಬ್ಬುಗಳಲ್ಲಿ ಅತ್ಯಂತ ಪ್ರಸಿದ್ಧವಾದುದೆಂದು ಹೇಳಲಾಗಿದೆ. ನಾನಂತೂ ಒಳಗೆ ಹೇಗಿರಬಹುದೆಂದು ನೋಡಲು ತುಂಬಾ ಉತ್ಸುಕಳಾಗಿದ್ದೆ. ಪಾರ್ಟಿ ಹಾಲ್ ಹೊರಗಡೆಯೇ ನವ ವಧುವಿನಂತೆ ಅಲಂಕಾರಗೊಂಡಿತ್ತು. ಇನ್ನೂ ಒಳಗಡೆ ಹೇಗಿರಬಹುದು ಎಂದು ಯೋಚಿಸುತ್ತಿದ್ದೆ. ಅಷ್ಟರಲ್ಲಿ ನಮ್ಮ ನಿರ್ವಾಹಕ ನೀರಜ್ನಮ್ಮನ್ನು ಸಾಕಷ್ಟು ವಿಸ್ತಾರವಾದ ಪಾರ್ಟಿ ಹಾಲ್ ಒಳಗಡೆ ಕರೆದುಕೊಂಡು ಹೋದನು.ಅಲ್ಲಿದ್ದ ಕೆಲವು ಬೆಡಗಿಯರು ಮುಗುಳುನಗೆಯಿಂದ ನಮ್ಮನ್ನು ಸತ್ಕರಿಸಿ ಒಂದು ಟೇಬಲ್ ಸುತ್ತ ನಮ್ಮನ್ನು ಕೂರಿಸಿದರು. ಆ ಹಾಲ್ ತುಂಬಾ ವಿಶಾಲವಾಗಿತ್ತು. ಅಲ್ಲಿ ತುಂಬಾ ಜನ ಕುಳಿತಿದ್ದು ಷಾಂಪೇನ್ ಕುಡಿಯುವುದರಲ್ಲಿ ಮುಳುಗಿದ್ದರು. ಆದರೆ ಅಲ್ಲಿ ತುಂಬಾ ನಿಶ್ಯಬ್ದವಾಗಿತ್ತು. ಮಂದವಾದ ಬೆಳಕು ಇಡೀ ಆವರಣವನ್ನು ತುಂಬಿಕೊಂಡಿತ್ತು. ಮಧುರವಾದ ಇಂಗ್ಲಿಷ್ ಸಂಗೀತ ಮನಸ್ಸಿಗೆ ಮುದ ನೀಡುತ್ತಿತ್ತು. ನಾನು ಬೆರಗುಗಣ್ಣಿನಿಂದ ಸುತ್ತಮುತ್ತಲೂ ನೋಡುತ್ತಿದ್ದೆ. ಅಲ್ಲಿ ಕೆಲವರು ಹೆಂಡತಿಯ ಜೊತೆ ಬಂದಿದ್ದರೆ ಕೆಲವರು ತಮ್ಮ ಗೆಳತಿಯರ ಜೊತೆ ಅಲ್ಲಿಗೆ ಬಂದಿದ್ದರು. ಕೆಲವೇ ಕ್ಷಣಗಳಲ್ಲಿ ನಮ್ಮ ಟೇಬಲ್‌ಗಳಿಗೆ ಷಾಂಪೇನ್ ಬಾಟಲುಗಳೂ ಗ್ಲಾಸುಗಳೂ ಬಂದವು. ನೀಟಾದ ಉಡುಗೆ ತೊಟ್ಟ ಪರಿಚಾರಕರು ನಮ್ಮ ಗ್ಲಾಸುಗಳನ್ನು ತುಂಬಿಸಿದರು. ಎಲ್ಲರೂ ರುಚಿಕರವಾದ ಷಾಂಪೇನ್ ತುಂಬಿದ ಬಟ್ಟಲುಗಳನ್ನು ಎತ್ತಿ ಹೀರುತ್ತಿದ್ದರೆ ನನಗೆ ಮಾತ್ರ ಮೊದಲನೇ ಸಲ ಆಗಿದ್ದರಿಂದ ಅದರ ವಾಸನೆ ಮತ್ತು ರುಚಿ ಇಷ್ಟವಾಗಲಿಲ್ಲ. ಅಷ್ಟರಲ್ಲಿ ರಂಗಸ್ಥಲದ ಮೇಲೆ ಝಗ್ಗನೆ ಬೆಳಕು ಬಿದ್ದು, ಪರದೆ ಸರಿದು ಏಳೆಂಟು ಜನ ಅರೆಬೆತ್ತಲೆ ಸುಂದರಿಯರು, ಹಿನ್ನೆಲೆ ವಾದ್ಯ ಸಂಗೀತಕ್ಕೆ ಅನುಸಾರವಾಗಿ ನರ್ತಿಸತೊಡಗಿದರು. ಬಿಳಿ ಬಣ್ಣದ ಹೊಳೆವ ಮೈ ಕಾಂತಿಯ ಮಿಂಚಿದ ಕಣ್ಣಿನ ಮಾಟವಾದ ಕಾಲುಗಳ ಆ ಚೆಲುವೆಯರು ಕನಿಷ್ಠತಮ ವಸ್ತ್ರಗಳಲ್ಲಿ ವಿರಾಜಿಸಿದರು. ಅವರು ಶ್ವೇತವರ್ಣದ ಚಾಮರದಾಕಾರದ ಟೋಪಿ ಧರಿಸಿದ್ದರು. ಅದಕ್ಕೆ ಲಗತ್ತಾದಂತೆ ಹಗುರವಾದ ರೇಷ್ಮೆಯ ವಸ್ತವೊಂದು ಅದರ ಹಿನ್ನೆಲೆಗಿತ್ತು. ಇವರು ಐದಾರು ತಂಡಗಳಲ್ಲಿ ಗುಂಪಾಗಿ ಬಂದು ಡ್ಯಾನ್ಸ್ ಮಾಡುತ್ತಿದ್ದರು. ಇಲ್ಲಿ ಫ್ರೆಂಚ್ ಬೆಡಗಿಯರ ಜೊತೆ ಆಫ್ರಿಕಾದ ಕೃಷ್ಣ ಸುಂದರಿಯರೂ ಇದ್ದರು. ಕೆಲವೊಮ್ಮೆ ಎದೆಗಟ್ಟು ನಾಪತ್ತೆಯಾಗಿ ಅವರ ಸ್ತನ ಸೌಂದರ್ಯವೂ ಪ್ರದರ್ಶಿತವಾಗುತ್ತಿತ್ತು. ನೋಡುತ್ತಿದ್ದಂತೆ ಅವರು ಡ್ಯಾನ್ಸ್ ಮಾಡಿ ಮಾಯವಾಗುತ್ತಿದ್ದರು. ಮತ್ತೆ ಭೂಮಿಯಿಂದ ಮೂಡಿ ಬಂದಂತೆ ಇನ್ನೊಂದು ತಂಡ ಎದ್ದು ಬಂದು ಡ್ಯಾನ್ಸ್ ಮಾಡುತ್ತಿತ್ತು. ಇದು ಕಣ್ಣಿಗೆ ತುಂಬಾ ಆಕರ್ಷಕವಾಗಿತ್ತು. ಅದರ ಮಧ್ಯೆ ನೀರಿನ ಕಾರಂಜಿಯೂ ಭೂಮಿಯಿಂದ ಎದ್ದು ಬಂದಂತೆ ನರ್ತನ ಮಾಡುತ್ತಿತ್ತು. ಈ ಬಗೆಯ ನರ್ತನದ ನಡು ನಡುವೆ ಹಾಸ್ಯ ಲಹರಿಯ ಹಾಗೂ ಸರ್ಕಸ್‌ನಂಥ ಚಮತ್ಕಾರಗಳು ಇದ್ದವು. ಸುಮಾರು ಎರಡು ಗಂಟೆಗಳ ಕಾಲ ನಡೆಯುವ ನರ್ತನದ ವೇಳೆ ಎಲ್ಲರೂ ಷಾಂಪೇನ್ ಕುಡಿಯುತ್ತ ಸಂತೋಷಪಟ್ಟರು. ನಾವು ರೂಮಿಗೆ ಬಂದಾಗ ರಾತ್ರಿ 1 ಗಂಟೆ. ನಮ್ಮ ಟೂರಿನ ಸಹಪ್ರಯಾಣಿಕರು ಬೆಳಗಾಗುವುದನ್ನೇ ಕಾಯುತ್ತಿರುವಂತೆ ಕಾಣುತ್ತದೆ. ಬೆಳಿಗ್ಗಿನ ತಿಂಡಿಗೆ ಹೋದಾಗ ಎಲ್ಲರೂ ನಮ್ಮನ್ನು ರಾತ್ರಿಯ ಲಿಡೋ ಶೋ ಬಗ್ಗೆ ಕೇಳುವವರೆ, ಅದರ ಬಗ್ಗೆ ತಿಳಿದುಕೊಳ್ಳಲು ಎಲ್ಲರು ತುಂಬಾ ಕುತೂಹಲದಿಂದ ಕಾದಿದ್ದರು. ಅವರ ಅನಿಸಿಕೆ ಪ್ರಕಾರ ಈ ಶೋ ತುಂಬಾ ಅಶ್ಲೀಲವಾಗಿ ಇರುತ್ತದೆ ಎಂದು ಭಾವಿಸಿದ್ದರು. ಆ ಶೋ ನೋಡುವುದೇ ಪಾಪವೆಂದು ತಿಳಿದವರು ಇದ್ದರು. ಆದರೆ ನಮಗೆ ಮಾತ್ರ ಆ ನರ್ತನದಲ್ಲಿ ಯಾವುದೇ ರೀತಿಯ ಅಶ್ಲೀಲತೆ ಇರಲಿಲ್ಲ, ಬದಲು ತೆಳ್ಳಗಿನ ಬಳ್ಳಿಯಂತಿರುವ ಅವರು ಮಾಡುವ ನರ್ತನ ನೋಡುವುದೇ ಒಂದು ಸುಂದರ ಅನುಭವ. ಅದನ್ನು ಅನುಭವಿಸಿ ಖುಷಿಪಡುವುದೇ ಮೈನವಿರೇಳಿಸುವ ಅನುಭವ. ಇದು ಎಲ್ಲರಿಗೂ ಸಿಗುವುದಿಲ್ಲ.
By-ಶಾಲಿನಿ ಗಾಂವಕರ್
ಮುಂದಿನ ಭಾಗ ಓದಿ…
