(ಭಾಗ-31) ಪಡುವಣದ ಪ್ರವಾಸ: ಒಂದು ಪ್ರಯಾಣ, ಸಾವಿರ ನೆನಪುಗಳು!

(ಭಾಗ-31) ಪಡುವಣದ ಪ್ರವಾಸ: ಒಂದು ಪ್ರಯಾಣ, ಸಾವಿರ ನೆನಪುಗಳು!

ಆಗಸ್ಟ್ 14

ಅಂದು ನಮ್ಮ ಪ್ರವಾಸದ ಕೊನೆಯ ದಿನ. ನಾವು ಸ್ನಾನ ಮಾಡಿ ರೆಡಿಯಾಗಲು ರೂಮಿಗೆ ಹೋದೆವು. ಇಲ್ಲಿ ನಾನು ಪಾಶ್ಚಾತ್ಯ ದೇಶಗಳಲ್ಲಿನ ಬಾತ್‌ಟಬ್ ಪುರಾಣ ಹೇಳಲೇಬೇಕು. ಯಾಕೆಂದರೆ ಯುರೋಪ್ ಅಥವಾ ಅಮೇರಿಕಾದ ಒಂದೊಂದು ನಗರಗಳಲ್ಲೂ ಒಂದೊಂದು ಬಗೆಯ ಗ್ಲಾಡ್ಡೆಟ್ಸ್ ಇರುತ್ತಿದ್ದವು. ಅವುಗಳನ್ನು ಉಪಯೋಗಿಸಲು ಕೆಲವೊಮ್ಮೆ ಸಾಹಸ ಪಡಬೇಕಿತ್ತು. ಬಾತ್ ಟಬ್ಬಿನ ಮೇಲಿರುವ ನಲ್ಲಿಗಳಿಂದ ಬಿಸಿ ನೀರು ತಣ್ಣೀರು ತುಂಬಿಸಿಕೊಳ್ಳಬೇಕಷ್ಟೇ? ಇವನ್ನು ಆನ್ ಮಾಡುವ ಬಟನ್‌ಗಳು ಮತ್ತೆಲ್ಲೋ ಇರುತ್ತಿದ್ದವು. ಎಲ್ಲೋ ಗುಂಡಿ ಒತ್ತಿದರೆ ಇನ್ನೆಲ್ಲೋ ನೀರು ಬರಲಾರಂಭವಾಗಿ ತಾಪತ್ರಯಕ್ಕಿಟ್ಟುಕೊಳ್ಳುತ್ತಿತ್ತು. ಅದನ್ನು ನಿಲ್ಲಿಸುವ ಪ್ರಯತ್ನದಲ್ಲಿ ಹರಸಾಹಸ ಪಡಬೇಕಾಗಿತ್ತು. ಬಾತ್ ಟಬ್ಬಿನಿಂದ ನೀರು ಹೊರಗೆ ಬಿಡಬೇಕಾದರೆ ಸ್ಟೀಲಿನ ಬಿರಟೆ ಒಂದೊಂದು ಕಡೆ ಇರುತ್ತಿದ್ದವು. ಕೆಲವು ಕಡೆ ಬಿರಟೆಗಳು ಮತ್ತೆ ಕೆಲವು ಕಡೆ ತೂತಿಗೆ ಮುಚ್ಚಿದ ಸ್ಟೀಲಿನ ಬಿರಟೆಯನ್ನು ಒತ್ತಿದರೆ ನೀರು ಹೊರ ಹೋಗಲಾರಂಭಿಸುತ್ತಿತ್ತು. ಎಷ್ಟೋ ಸಾರಿ ಇವರನ್ನು ಕೂಗಿ ಕರೆದು ಸಹಾಯ ಕೇಳುತ್ತಿದ್ದೆ. ಕೆಲವು ಕಡೆ ಹ್ಯಾಂಡ್ ಶವರ್ ಇರುತ್ತಿರಲಿಲ್ಲ. ಇಂಥ ಸಮಯದಲ್ಲಿ ಒಂದೇ ನೀರಿನಲ್ಲಿ ಮುಳುಗಿ ತೊಳೆದು ಸ್ನಾನ ಮುಗಿಸಬೇಕಾಗಿತ್ತು. ಮತ್ತೆ ಹಲವೆಡೆ ಬರೀ ಹೆಡ್ ಶವರ್ ಇರುತ್ತಿತ್ತು. ತಲೆಗೆ ಕಟ್ಟಿಕೊಳ್ಳಲು ಟೊಪ್ಪಿ ಇಲ್ಲದಿದ್ದರೆ ತುಂಬಾ ಕಸರತ್ತು ಮಾಡಬೇಕಾಗಿತ್ತು.

ಅಲ್ಲಿ ಯಾವುದೇ ಬಾತ್ ರೂಮಿನಲ್ಲೂ ನಮ್ಮಲ್ಲಿಯಂತೆ ಬಕೇಟ್ ಮತ್ತು ಮಗ್‌ಗಳು ಇರುತ್ತಿರಲಿಲ್ಲ. ಮಗ್ ಬದಲು ನೀರು ಕುಡಿಯಲು ಇಟ್ಟ ಗ್ಲಾಸ್‌ಗಳನ್ನು ಕೆಲವೊಮ್ಮೆ ಬಳಸಿದ್ದು ಉಂಟು. ಈ ಎಲ್ಲ ಅನುಭವಗಳಿಂದ ನಾನು ಪರದೇಶದಲ್ಲಿ ಸ್ನಾನಕ್ಕಿಳಿಯುವ ಮುನ್ನ ಬಾತ್ ರೂಮಿನ ಎಲ್ಲ ವಿಧಾನಗಳನ್ನು ಮೊದಲು ಅರಿತುಕೊಂಡು ಅನಂತರ ಸ್ನಾನ ಮಾಡುವ ಪರಿಪಾಠ ಇಟ್ಟುಕೊಳ್ಳಬೇಕಾಯಿತು. ಒಮ್ಮೊಮ್ಮೆ ಅಲ್ಲಿ ನಳದಲ್ಲಿ ಬರುವ ಬಿಸಿ ನೀರು ತುಂಬಾ ಬಿಸಿಯಿರುತ್ತದೆ. ಮೈ ಸುಡುವ ಅವಕಾಶವೂ ಇದೆ. ಹೀಗಾಗಿ ನಾವು ನಮ್ಮ ಹುಷಾರಿಯಲ್ಲಿ ಇರಬೇಕು. ಇನ್ನೂ ಬಾತ್ ಟಬ್ಬಿನಿಂದ ಸ್ಕೂಲಕಾಯದವರು ಮೇಲೇಳುವಾಗ ಕಷ್ಟವಾಗಬಾರದೆಂದು ಹಿಡಿದುಕೊಳ್ಳಲು ಒಂದು ಹಿಡಿಕೆಯಿರುತ್ತದೆ. ಮೇಲೆದ್ದು ಹೊರಗೆ ಜೋಪಾನವಾಗಿ ಕಾಲಿಡಬೇಕು. ಯಾಕೆಂದರೆ ನೆಲಕ್ಕೆ ಹಾಕಿರುವ ಟೈಲ್ಸ್ ಥಳಥಳಿಸುತ್ತಿದ್ದು ಜಾರಿ ಬೀಳುವ ಅಪಾಯ ಇರುತ್ತದೆ. ಇದೇ ರೀತಿ ಬಾತ್ ರೂಮಿನ ರೆಸ್ಟ್ ರೂಮಿನ ಬಾಗಿಲು ಚಿಲಕಗಳು ಸಹ ನಾನಾ ರೀತಿಯದಾಗಿರುತ್ತದೆ. ನಾನಂತೂ ಅದನ್ನು ಹಾಕಿ ತೆಗೆದು ನೋಡಿಯೇ ಒಳಗೆ ಹೋಗುತ್ತಿದ್ದೆ.

ಆಗಸ್ಟ್ 15 ಅಂದು ನಮ್ಮ ಪ್ರವಾಸದ ಕೊನೆಯ ದಿನ ಎಲ್ಲ ಸಾಮಾನುಗಳನ್ನು ಪ್ಯಾಕ್ ಮಾಡಿಕೊಂಡು ಜೊತೆಯಲ್ಲೇ ತೆಗೆದುಕೊಂಡೆವು. ಪ್ರವಾಸದಲ್ಲಿ ಪರಿಚಯವಾದ ಎಲ್ಲರೊಟ್ಟಿಗೆ ಫೋಟೋ ತೆಗೆಸಿಕೊಂಡೆವು. ಪೋಟೋ ಶೂಟ್ ಮುಗಿದ ಮೇಲೆ ಪರ್‌ಪ್ಯೂಮ್ ಅಂಗಡಿಗೆ ನಮ್ಮನ್ನು ಕರೆದುಕೊಂಡು ಹೋದರು. ಅದು ಒಂದು ಡಿಪಾರ್ಟ್‌ ಮೆಂಟ್ ಸ್ಟೋರ್ ತರಹವೇ ಇತ್ತು. ಒಳಗೆ ಕಾಲಿಡುತ್ತಿದ್ದಂತೆ ಸುಗಂಧ ದ್ರವ್ಯಗಳ ವಾಸನೆ ಮೂಗಿಗೆ ಬಡಿಯುತ್ತಿತ್ತು. ಅಲ್ಲಿ ನೂರಾರು ಬಗೆಯ ಸುಗಂಧ ದ್ರವ್ಯಗಳಿದ್ದವು. ಅದರ ಜೊತೆಗೆ ಉಣ್ಣೆ ಕೋಟುಗಳು ಕೈ ಗಡಿಯಾರ ಉಂಗುರಗಳು ಬಗೆ ಬಗೆಯ ಆಭರಣಗಳು ಇದ್ದವು.

ನನಗೆ ಸುಗಂಧ ದ್ರವ್ಯದ ವಾಸನೆ ತುಂಬಾ ಇಷ್ಟ, ಅಲ್ಲಿರುವ ಸೇಲ್ಸ್ ಗರ್ಲ್ ಯಾವ ಪರ್‌ಪ್ಯೂಮ್ ಬೇಕು ಎಂದು ಕೊ ಚಾರ್ಲಿ ಎಂದು ಹತ್ತಾರು ಹೆಸರುಗಳನ್ನು ಹೇಳಿ ಪರಿಮಳ ನೋಡಲು ಆಯಾ ಸುಗಂಧ ದ್ರವ್ಯವನ್ನು ಮುಂಗೈ ಮೇಲೆ ಹಾಕಿ ಮೂಸುವಂತೆ ಸೂಚಿಸಿದಳು. ನನಗಂತೂ ಎಲ್ಲ ಸೆಂಟುಗಳ ಪರಿಮಳವು ಒಂದೇ ಎನಿಸುತ್ತಿತ್ತು. ಯಾವುದನ್ನು ಕೊಂಡುಕೊಳ್ಳಬೇಕು ಎಂಬುದು ತಿಳಿಯಲಿಲ್ಲ. ಒಳ್ಳೆಯ ಪರಿಮಳ ಇರುವ ಎರಡು ರೀತಿಯ ಸುಗಂಧ ದ್ರವ್ಯಗಳನ್ನು ತೆಗೆದುಕೊಂಡೆ. ಆದರೆ ಅವುಗಳಿಗಾಗಿ ತುಂಬಾ ಹಣ ವ್ಯವಯಾಯಿತು. ಅವುಗಳನ್ನು ಗ್ರಾಸೇ ಎಂಬಲ್ಲಿ ತಯಾರಿಸುತ್ತಾರಂತೆ. ಮುಖ್ಯವಾಗಿ ಇವುಗಳಿಗೆ ಲ್ಯಾವೆಂಡರ್ ಮಲ್ಲಿಗೆ ಗುಲಾಬಿ ವಯಲೆಟ್ ನಾರ್ಸಿಸಸ್. ಟ್ಯುಬರೋಸ್ ಮತ್ತು ಮಿಮೋಸಾ ಹೀಗೆ ನೂರಾರು ರೀತಿಯ ಹೂಗಳನ್ನು ಬಳಸಿ ಸುಗಂಧ ದ್ರವ್ಯಗಳನ್ನು ತಯಾರಿಸುತ್ತಾರಂತೆ. ನಮ್ಮ ಸಹ ಪ್ರಯಾಣಿಕರು ನಾನಾ ರೀತಿಯ ಸುಗಂಧ ದ್ರವ್ಯಗಳನ್ನು ಕೊಂಡುಕೊಂಡರು. ನಮ್ಮ ಜೊತೆಯ ಕೆಲವು ಪ್ರಯಾಣಿಕರು ಪ್ಯಾರಿಸ್ಸಿನಿಂದಲೇ ನಮಗೆ ಟಾಟಾ ಬೈಬೈ ಹೇಳಿದರು. ಮುಂದೆ ನಾವು ಕೆಲೆಯಿಂದ ಡೋವರ್‌ಗೆ ಬಂದೆವು. ಕೆಲೆ ತಲುಪುವಾಗ ಹನ್ನೆರಡು ಗಂಟೆ ದಾಟಿ ಹೋಗಿದ್ದುದರಿಂದ ಫೆರಿ ನಮಗೆ ಸಿಗಲಿಲ್ಲ. ಮುಂದಿನ ಫೆರಿಗಾಗಿ ನಾವು ಸುಮಾರು ಒಂದು ಗಂಟೆ ಕಾಯಬೇಕಾಯಿತು. ಅನಂತರ ಬಸ್ಸಿನಿಂದಿಳಿದು ಕೆಲೆ ಬಂದರಿನಲ್ಲಿ ಸೆಕ್ಯುರಿಟಿ ಚೆಕ್ ಮುಗಿಸಿ ಪೆರಿ ಏರಿದೆವು.

ಹೆಸರಿಗೆ ಫೆರಿ ಎಂದಿದ್ದರೂ ಇದು ತುಂಬಾ ದೊಡ್ಡದಾದ ಹಡಗು. ಕುಳಿತುಕೊಳ್ಳಲು ಲಾಂಜ್‌ಗಳಿದ್ದವು. ಆ ಆಸನಗಳಲ್ಲಿ ಕುಳಿತು ಗಾಜಿನ ಕಿಟಕಿಗಳ ಮೂಲಕ ಸಮುದ್ರ ನೋಡಬಹುದಾಗಿತ್ತು. ಅಲ್ಲಿ ಸೊವೆನೀಯಂಗಳು ಸಿಗರೇಟು ಸುಗಂಧ ದ್ರವ್ಯಗಳು Hot drinks soft drinks, ಚಾಕಲೇಟು ಮಾರುವ ಅಂಗಡಿಗಳಿದ್ದವು. ಪೋಸ್ಟ್ ಆಫೀಸ್, ವಿಶಾಲವಾದ ರೆಸ್ಟೋರೆಂಟುಗಳು ಇದ್ದವು. ಅಲ್ಲಲ್ಲಿ rest roomಗಳು ಇದ್ದವು. ನನಗನಿಸಿದ ಮಟ್ಟಿಗೆ ಅದರ ವಿಶಾಲತೆ ಬೆಂಗಳೂರಿನಲ್ಲಿರುವ ಒಂದು ದೊಡ್ಡ ಮಾಲ್ ನಷ್ಟಿತ್ತು. ನಾವು ಅಲ್ಲಿ ಊಟ ಮಾಡಿದೆವು. ಅತ್ತಿತ್ತ ಸುತ್ತಾಡಿ ಒಂದು ಕಡೆ ಬಂದು ಕುಳಿತುಕೊಂಡೆವು. ಅಲ್ಲಿ ಕುಳಿತುಕೊಳ್ಳಲು ಕುರ್ಚಿಗಳಿದ್ದವು. ಸಮುದ್ರದ ತಂಪು ಗಾಳಿ ಬೀಸುತ್ತಿತ್ತು. ಆಕಾಶದ ಬಣ್ಣಗಳು ಸಮುದ್ರದ ಮೇಲೆ ವಿವಿಧ ಛಾಯೆಗಳನ್ನು ನಿರ್ಮಿಸುತ್ತಿದ್ದ ಸೊಬಗು ಮನಮೋಹಕವಾಗಿತ್ತು. ಒಟ್ಟಿನಲ್ಲಿ ಈ ಅನುಭವ ಅಪೂರ್ವವಾಗಿತ್ತು.

ಕೆಲೆಯಿಂದ ಡೋವರ್‌ಗೆ ಸುಮಾರು 22 ನಾಟಿಕಲ್ ಮೈಲುಗಳು. ಇದು ಇಂಗ್ಲೆಂಡ್ ಮತ್ತು ಫ್ರಾನ್ಸ್ ಗಳ ಮಧ್ಯೆಯಿರುವ ಅತಿ ಕಿರಿದಾದ ಜಲಸಂಧಿ. ಇದು ಜಗತ್‌ ಪ್ರಸಿದ್ಧವಾಗಿದೆ. ಎನ್ನಬಹುದು. ಪ್ರಯಾಣದ ಸಮಯ ಒಂದು ಗಂಟೆ. ಅಷ್ಟರಲ್ಲಿ ಡೋವರ್ ಬಂದೇ ಬಿಟ್ಟಿತು. ಡೋವರ್ ಎರಡು ಗಿರಿ ಶಿಖರಗಳ ಮಧ್ಯೆ ಇರುವ ಊರು, ಪೂರ್ವದ ಗಿರಿಯ ಮೇಲೆ ಒಂದು ಅರಮನೆಯಿದೆ. ಪಶ್ಚಿಮದ ಶಿಖರವನ್ನು ಷೇಕ್ಸ್‌ಪಿಯರನ ಶಿಖರ ಎಂದು ಕರೆಯುತ್ತಾರೆ. ಡೋವರ್ ಹಡಗು ಕಟ್ಟೆಯಲ್ಲಿ ನಮ್ಮ ಫೆರಿ ನಿಂತಿತು. ಪ್ರತಿಯೊಬ್ಬರನ್ನು ಚೆಕ್ ಮಾಡಿ ಹೊರಗೆ ಬಿಟ್ಟರು. ನಮ್ಮ ಬಸ್ಸು ಲಂಡನ್ ಕಡೆ ಹೊರಟಿತು. ಹಾದಿಯುದ್ದಕ್ಕೂ ಬೆಟ್ಟ ಗುಡ್ಡಗಳು ಹಸಿರು ಹುಲ್ಲು. ಕಂದು ಹಂಚಿನ ಇಳಿಜಾರು ಸೂರಿನ ಹೊಗೆಕೊಳವೆಗಳ ಮನೆಗಳು. ಮನೆಗಳ ಮುಂಭಾಗದಲ್ಲಿ ಬಿಳಿ ಕಿಟಕಿಗಳು ಅವಕ್ಕೆ ಬಿಳಿ ಪರದೆಗಳು ಮನೆಯ ಮುಂದೆ ಪುಟ್ಟ ಹೂ ತೋಟವಿದೆ. ಲಂಡನ್ನಿಗೆ ಮುಂಚೆ ಕೆಂಟ್ ಮತ್ತು ಗ್ರೀನಿಚ್ ಊರುಗಳು ಸಿಗುತ್ತವೆ. ಇಂಗ್ಲೆಂಡಿನಲ್ಲಿ ಸಮಯ ಭಾರತಕ್ಕಿಂತ ಐದೂವರೆ ಗಂಟೆ ಹಿಂದೆ. 6 ತಿಂಗಳು 42 ತಾಸು, 6 ತಿಂಗಳು 52 ಗಂಟೆ.

ಲಂಡನ್ ಹತ್ತಿರ ಬಂದ ಹಾಗೆ ವಾಹನಗಳು ಜಾಸ್ತಿಯಾದವು. ನಾವು ನಮ್ಮ ಸಹ ಪ್ರಯಾಣಿಕರಿಗೆ ಬೈ ಹೇಳುವ ಸಮಯ ಬಂದೇಬಿಟ್ಟಿತು. ನಮ್ಮ ಬಸ್ ವೆಂಬ್ಲಿಗೆ ಬಂದು ನಿಂತಿತು. ಕೆಲವರು ತಮ್ಮ ಮಗಳ ಮನೆಗೋ ಮಗನ ಮನೆಗೋ ಹೊರಟರು. ಕೆಲವರು ಲಂಡನ್ನಿನಲ್ಲಿ ಉಳಿದುಕೊಂಡರೆ ಕೆಲವರಿಗೆ ಭಾರತಕ್ಕೆ ಹಿಂದಿರುಗಲು ವಿಮಾನ ನಿಲ್ದಾಣಕ್ಕೆ ಬಿಡುವ ವ್ಯವಸ್ಥೆ ಮಾಡಲಾಯಿತು. ನಮ್ಮ ಅಳಿಯನು ಕಾರು ತೆಗೆದುಕೊಂಡು ನಮ್ಮನ್ನು ಕರೆದುಕೊಂಡು ಹೋಗಲು ಬಂದಿದ್ದನು. ನಮಗೂ ಸಹ ಮೊಮ್ಮಗನನ್ನು ನೋಡುವ ಉತ್ಸಾಹದಲ್ಲಿ ಅಳಿಯನ ಜೊತೆ ಮನೆಗೆ ಹೋದೇವು.

ಸಹಪ್ರಯಾಣಿಕರ ಬಗ್ಗೆ:-

ಸಹಪ್ರಯಾಣಿಕರೇ ಪ್ರವಾಸದ ಜೀವ, ಭಾವ ಎಂದರೆತಪ್ಪಾಗಲಿಕ್ಕಿಲ್ಲ. ಪ್ರವಾಸದಲ್ಲಿ ಇವರ ಪಾತ್ರ ಬಹು ಪ್ರಮುಖವಾದುದು. ಇವರಿಂದಲೇ ಪ್ರವಾಸಕ್ಕೆ ಒಂದು ಮೆರಗು ಚೈತನ್ಯ ಎನ್ನಬಹುದು. ನಮ್ಮ ಬಸ್ಸಿನಲ್ಲಿ ನಾವು 50 ಜನವಿದ್ದೆವು. ಅವರಲ್ಲಿ ಮುಂಬೈಯಿಂದ 6 ಜನ ಮರಾಠಿ ಮಾತಾಡುವವರು ಮತ್ತು ಎರಡು ದಂಪತಿಗಳು ಚೆನ್ನೈನಿಂದ ಬಂದವರು ಉಳಿದವರೆಲ್ಲ ಕನ್ನಡಿಗರು. ಅದರಲ್ಲಿ ಹುಬ್ಬಳ್ಳಿಯ KMC ಯಲ್ಲಿ 1976 ಬ್ಯಾಚ್‌ನ ವೈದ್ಯಕೀಯ ಓದಿದ ಗುಂಪು ಅವರು ತಮ್ಮ ಸಂಸಾರ ಸಮೇತ ಬಂದಿದ್ದರು. ಎಲ್ಲರೂ ಈಗ ಹುಬ್ಬಳ್ಳಿಯಲ್ಲಿ ಇಲ್ಲ. ಕೆಲವರು ಹುಬ್ಬಳ್ಳಿಯಿಂದ ಬಂದರೆ ಕೆಲವರು ದಾವಣಗೆರೆ, ಚಿತ್ರದುರ್ಗ, ದೆಹಲಿ, ಲಂಡನ್, ಐ‌ಲೆಂಡ್, ಅಮೇರಿಕಾ ಹೀಗೆ ವಿವಿಧ ದೇಶಗಳಿಂದ ಬಂದವರು. ಎಲ್ಲರೂ ಕನ್ನಡವನ್ನೇ ಮಾತಾಡುವರು. ಕನ್ನಡ ಹಾಡಿನ ಬಂಡಿ ಆಡುವುದು ಮಾಡುತ್ತಿದ್ದರು. ಇನ್ನೂ ನಮಗೆ ತುಂಬಾ ಹತ್ತಿರವಾದವರೆಂದರೆ ಬೆಂಗಳೂರಿನವರೇ ಆದ ಆದಿರಾಜ ಮತ್ತು ಅರುಣಾ ಅವರು ವಯಸ್ಸಿನಲ್ಲಿ ನಮಗಿಂತ ಸ್ವಲ್ಪ ದೊಡ್ಡವರಾದರು. ನಮಗೆ ಒಳ್ಳೆಯ ಕಂಪನಿಯಾಗಿತ್ತು. ಆದಿರಾಜ ವೃತ್ತಿಯಲ್ಲಿ ಎಂಜಿನಿಯರ್ ಆಗಿ ನಿವೃತ್ತಿ ಹೊಂದಿದ್ದವರು. ಅವರು ಬಹರೇನ್‌ನಲ್ಲಿ 22 ವರ್ಷ ಉಳಿದು ಬಂದವರು. ಡಾಕ್ಟರ್‌ಗಳಲ್ಲಿ ಗಣೇಶ ಕಿಣಿ ಮತ್ತು ಪೂಜಾ ಕಿಣಿ ಅವರು ನಮ್ಮ ಪಕ್ಕದ ಊರಿನವರು ಮತ್ತು ನಮ್ಮ ಪರಿಚಯಸ್ಥರು. ಅಲ್ಲಿ ಒಂದು ಸಂತೋಷದ ವಿಷಯವೆಂದರೆ, ಅಲ್ಲಿ ಹಾರ್ಟ್ ಗೈನಿಕ್ ಗೆಸ್ಟೋ ಉಂಟೋಲೊಜಿಸ್ಟ್ ಕಾರ್ಡಿಕ್ ಅನ್ನೋ ಮೊಲಜಿ ಅನಿಸಸ್ತೆಶಿಯಸ್ಸುಗಸ್ಟ್‌ ಎಂಟೋಜಲಿಸ್ಟು ಹೀಗೆ. ನಾನಾ ತರದ ಸ್ಪೆಷಲಿಸ್ಟ್‌ಗಳು ಇದ್ದರೂ ಹೀಗಾಗಿ ಯಾವುದೇ ಆರೋಗ್ಯದ ಭಯವಿಲ್ಲದೆ ಪ್ರವಾಸವನ್ನು ಉಲ್ಲಾಸದಿಂದ, ಅನುಭವಿಸಿದೆವು. ಇನ್ನೂ 6 ಜನ ಮುಂಬಯಿಯವರು ನಮ್ಮೊಡನೆ ಹಿಂದಿಯಲ್ಲಿ ಚೆನ್ನಾಗಿ ಮಾತನಾಡುತ್ತಿದ್ದರು. ಆದರೆ ಚೆನ್ನೈನಿಂದ ಬಂದವರಿಗೆ ಸ್ವಲ್ಪ ಕಷ್ಟವಾಯಿತು. ಅವರಿಗೆ ಹಿಂದಿ ಬರುತ್ತಿರಲಿಲ್ಲ. ಹೀಗಾಗಿ ಇಂಗ್ಲೀಷಿನಲ್ಲಿಯೇ ಮಾತನಾಡಬೇಕಿತ್ತು. ತಮಿಳಿನವರು ಮೋಹನದಾಸ ಅವರು ಸಹ ಎಂಜಿನಿಯರು. ಅವರ ಹೆಂಡತಿ ಶೈಲಜಾ ಮತ್ತು ರಜನಿ ಮತ್ತು ಅವಳ ಗಂಡ ಲಾಯ‌ರ್ ಹೀಗಾಗಿ ನಾವು ನಾಲ್ಕು ದಂಪತಿಗಳು ಹೆಚ್ಚಾಗಿ ಒಟ್ಟಿಗೆ ಇರುತ್ತಿದ್ದೆವು. ನಾನು ಮತ್ತು ಅರುಣಾ ಎಲ್ಲಿ ಒಳ್ಳೆಯ ದೃಶ್ಯ ಕಂಡರು. ಒಬ್ಬರಿಗೊಬ್ಬರು ನಿಂತು ಪೋಟೋ ತೆಗೆದುಕೊಳ್ಳುತ್ತಿದ್ದೆವು. ಎಲ್ಲರೂ ಕನ್ನಡದವರೇ ಆದ್ದರಿಂದ ನಾವು ತಂದ ಚಕ್ಕುಲಿ ಕೋಡುಬಳೆ ಅವಲಕ್ಕಿ ಮಿಟಾಯಿ ಎಲ್ಲವನ್ನು ಎಲ್ಲರಿಗೂ ಪರಸ್ಪರ ಹಂಚಿಕೊಂಡು ತಿನ್ನುತ್ತಿದ್ದೆವು. ನಮ್ಮ ಗೈಡ್ ನೀರಜ್‌ ಗೆ ಹೇಳಿ ನಮಗೆ ಬೇಕಾದ ಹಿಂದಿ ಸಿನಿಮಾಗಳನ್ನು ಹಾಕಿಸಿಕೊಂಡು ನೋಡಿ ಖುಷಿಪಡುತ್ತಿದ್ದೆವು. ಕೆಲವು ಡಾಕ್ಟರುಗಳು ತುಂಬಾ ಜೋಕ್ಸ್ ಮಾಡಿ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದರು. ನಿಜವಾಗಲೂ ನಾನು ತುಂಬಾ ಟೂರ್ ಮಾಡಿದ್ದೇನೆ. ಆದರೆ ಈ ಪ್ರವಾಸದಲ್ಲಿ ಅನುಭವಿಸಿದಷ್ಟು ಮಜಾ ಸಂತೋಷ ಎಲ್ಲೂ ಅನುಭವಿಸಿಲ್ಲ. ಈ ಪ್ರವಾಸದ ಮಧುರ ನೆನಪುಗಳು ಎಂದಿಗೂ ಉಳಿಯುವಂತಹದು. ಈಗಲೂ ವಾಟ್ಸ್ ಅಪ್‌ನಲ್ಲಿ ಯೂರೋಪ್ ಟೂರ್ ಎಂದು Group ಮಾಡಿಕೊಂಡು ಚಾಟ್ ಮಾಡುತ್ತಿರುತ್ತೇವೆ

By-ಶಾಲಿನಿ ಗಾಂವಕರ್

ಮುಂದಿನ ಭಾಗ ಓದಿ…

Leave a Comment

Comments

No comments yet. Why don’t you start the discussion?

    Leave a Reply