(ಭಾಗ-32) ಪಡುವಣದ ಪ್ರವಾಸ: ಒಂದು ಪ್ರಯಾಣ, ಸಾವಿರ ನೆನಪುಗಳು!

(ಭಾಗ-32) ಪಡುವಣದ ಪ್ರವಾಸ: ಒಂದು ಪ್ರಯಾಣ, ಸಾವಿರ ನೆನಪುಗಳು!

ಅಧ್ಯಾಯ 5

ಲಂಡನ್ ಪ್ರವಾಸ ಮೂರನೇ ಸಲ

ಯೂರೋಪಿನ ಟೂರ್ ಮುಗಿಸಿ ಲಂಡನ್ನಿನಲ್ಲಿರುವ ನಮ್ಮ ಮಗಳ ಮನೆಗೆ ಬಂದೆವು. 3ನೇ ಸಲ ಬರುತ್ತಿದ್ದೇನೆ. ನಮ್ಮ ಮಗಳು ಅಳಿಯ 5 ದಿನ ಕೆನೆಲ್ ಬೋಟ್‌ನಲ್ಲಿ ಹೋಗೋಣವೆಂದು ಮೊದಲೇ plan ಮಾಡಿ ಇಟ್ಟಿದ್ದರು. ನಾವು ಭಾರತದಲ್ಲಿ ಕೇರಳದಲ್ಲಿರುವ Boat house ನಲ್ಲಿ 2 ದಿನ ಇದ್ದು ಬಂದಿದ್ದೆವು. ಅದು ಸಮುದ್ರದ ಹಿನ್ನೀರಿನಲ್ಲಿ Boat house ನಡೆಸುತ್ತಿದ್ದರು. ಅಲ್ಲಿ ಸಹ ಅವರು ಊಟ ತಿಂಡಿ ಕೊಡುತ್ತಿದ್ದರು. ಮತ್ತು ಬೋಟನ್ನು ನಡೆಸುವುದು ನಾವಿಕ ಮಾತ್ರ ಅವರೇ ಇರುತ್ತಿದ್ದರು. ನಾನು ಈ ಕೆನೆಲ್ ಬೋಟ್ ಸಹ ಅದೇ ರೀತಿ ಇದ್ದಿರಬೇಕೆಂದು 5 ದಿನ ಅಲ್ಲಿ ಹೇಗಿರುವುದು ಬೇಜಾರು ಬರಬಹುದು. ನಾವು ಮೊಮ್ಮಗನನ್ನು ಇಟ್ಟುಕೊಂಡು ಮನೆಯಲ್ಲೇ ಇರುತ್ತೇವೆ. ನೀವಿಬ್ಬರೂ ಹೋಗಿ ಬನ್ನಿ ಎಂದರೆ ಅವರು ಕೇಳಲಿಲ್ಲ ನಿಜವಾಗಿ ಕೆನಲ್ ಬೋಟ್ ಬಗ್ಗೆ ನಮಗೆ ಅನುಭವ ಇರಲಿಲ್ಲ.

ಮಗಳು ರವಿವಾರ ಬೆಳಿಗ್ಗೆ ಕೆನಲ್ ಬೋಟ್‌ನಲ್ಲಿ ಹೋಗಬೇಕೆಂದು ತಯಾರಿ ಮಾಡತೊಡಗಿದಳು. ಐದು ದಿನಗಳಿಗಾಗುವಷ್ಟು ಅಡಿಗೆ ಮಾಡಲು ಅಕ್ಕಿ ಬೇಳೆ ತರಕಾರಿ ಹಣ್ಣು ಹಾಲು ಮೊಸರು ಹೀಗೆ ಬೇಕಾದ ಎಲ್ಲಾ ಸಾಮಾನುಗಳನ್ನು ಪ್ಯಾಕ್ ಮಾಡಿಕೊಳ್ಳಲು ಶುರುಮಾಡಿದಳು. ನಾನು ಹೆಸರುಬೇಳೆ ಸಾರು ಶೆಟ್ಟಿನ ಪುಡಿ ಕಾಬುಲ್ ಕಡ್ಲೆಯ ಚೋಲೆ ಮಾಡಿದೆ. ಬ್ರೆಡ್ಜ್ ಬಿಸ್ಕತ್ತು, ಸ್ಟ್ರಾಕ್ಸ್ ಕೋಕ್ ಜ್ಯೂಸ್ ಎಲ್ಲ ಪ್ಯಾಖ್ ಆಯಿತು. ಮಗುವಿನ ಆಹಾರ, ಹಾಲು, ಬಟ್ಟೆ ಡೈಪರ್ ಹೀಗೆ ಎಲ್ಲ ಪ್ಯಾಕ್ ಮಾಡಿಕೊಂಡೆವು. ನಾವು ಸಹ ನಮ್ಮ ಬಟ್ಟೆಗಳನ್ನು ಪ್ಯಾಕ್ ಮಾಡಿಕೊಂಡೆವು. ರವಿವಾರ ತಿಂಡಿ ತಿಂದು ಎಲ್ಲರೂ ಕಾರಲ್ಲಿ ಹೊರಟೆವು. ನಮ್ಮ ಮಗಳ ಮನೆಯಿಂದ Boat Station ತಲುಪಲು ಸುಮಾರು ಒಂದುವರೆಯಿಂದ ಎರಡು ತಾಸು ಹಿಡಿಯುತ್ತದೆ.

Alve Church Boat Station

ಸುಮಾರು ಒಂದೂವರೆಯಿಂದ ಎರಡು ತಾಸು ಪ್ರವಾಸ ಮಾಡಿದ ಮೇಲೆ ನಾವು ತಲುಪಬೇಕಾದ Boat Station ತಲುಪಿದೆವು. ಮೊದಲೇ ನಮ್ಮ ಅಳಿಯ ಐದು ದಿನ ಲೀಸ್ ಮೇಲೆ ಬುಕ್ ಮಾಡಿದ್ದರಿಂದ ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಕೊಂಡ ಮೇಲೆ 2 ಬೆಡ್‌ ರೂಂ ಒಂದು ಅಡಿಗೆ ಮನೆ ಇರುವ ಒಂದು ಬೋಟ್‌ನ್ನು ನಮ್ಮ ಸುಪರ್ದಿಗೆ ಒಪ್ಪಿಸಿದರು. ಐದು ದಿನಗಳಿಗೆ ಭಾರತದ ರೂಪಾಯಿಯಂತೆ ಒಂದು ಲಕ್ಷಕ್ಕಿಂತ ಹೆಚ್ಚು ಹಣವನ್ನು ಅವರಿಗೆ ಕೊಡಬೇಕಂತೆ. ಅದೊಂದು ಮಾನವ ನಿರ್ಮಿತ ಕೆನೆಲ್ ಅಂದರೆ ಕಾಲುವೆ. ಅದು ಥೇಮ್ಸ್ ನದಿಯ ಹಿನ್ನೀರಿನಲ್ಲಿ ಕಾಲುವೆ ಮುಖಾಂತರ ಇಡೀ ಲಂಡನ್ನಿನ ಸಾಮಾನುಗಳ ವ್ಯಾಪಾರವನ್ನು ಹಡಗಿನ ಮುಖಾಂತರ ಹಿಂದೆ ಮಾಡುತ್ತಿದ್ದರಂತೆ. ಅಲ್ಲಲ್ಲಿ ಇಳಿದುಕೊಳ್ಳಲು ಬೋಟ್ ಕಟ್ಟಲು ಸುರಕ್ಷಾ ವ್ಯವಸ್ಥೆ ಇರುತ್ತದೆ. ಇದು ಸುಮಾರು ಸಾವಿರಾರು ಕಿಲೋಮೀಟರ್‌ಗಳಷ್ಟು ಉದ್ದವಿರಬಹುದು. ಇದನ್ನು ಮೊದಲು ಜನರು ಒಂದು ಊರಿನಿಂದ ಇನ್ನೊಂದು ಊರಿಗೆ ಪ್ರವಾಸ ಮಾಡಲು ಮತ್ತು ಸರಕು ಸಾಗಾಣಿಕೆಗೂ ಉಪಯೋಗಿಸುತ್ತಿದ್ದರಂತೆ. ಮುಂದೆ ಕಾಲ ಮುಂದುವರಿದಂತೆ, ಬಸ್ಸು ಕಾರು ಲಾರಿಗಳು, ಟ್ರೇನುಗಳು ವಿಮಾನ ಶುರುವಾದ ಮೇಲೆ ಇವೆಲ್ಲ ಕಡಿಮೆಯಾಗಿ ಕೊನೆಗೊಂದು ದಿನ ಮೂರ್ತಿಯಾಗಿ ಮುಚ್ಚಿ-ಹೋಯಿತಂತೆ.

ಆಮೇಲೆ ಲಂಡನ್ನಿನ ಶ್ರೀಮಂತ ಜನರು ತಮ್ಮ ಬಿಡುವಿನ ಸಮಯವನ್ನು ತಮ್ಮ ಸಂಸಾರ ಸಮೇತ ಮಜಾ ಮಾಡುವ ಸಲುವಾಗಿ ಮಾರ್ಗದಲ್ಲಿ (ಕಾಲುವೆಯಲ್ಲಿ) ಬೋಟ್‌ಗಳನ್ನು ಲೀಸ್ ಮೇಲೆ ಗೊತ್ತುಮಾಡಿ ತಾವೇ ಬೋಟ್ ಚಾಲನೆ ಮಾಡಿಕೊಂಡು ಅವರವರ ಶ್ರೀಮಂತಿಕೆಗೆ ತಕ್ಕಂತೆ ವಿಹಾರ ಹೊರಡುತ್ತಾರೆ. ಬೋಟುಗಳಲ್ಲಿ 5-6 ಬೆಡ್ ರೂಂ, ಹಾಲ್ ಅಡಿಗೆ ಮನೆ, 2-3 ಬಾತ್ ರೂಂ. ಟಾಯ್‌ಲೆಟ್‌ಗಳ ಬೋಟ್ ಸಹ ಇರುತ್ತದೆ. ಅವು ತುಂಬಾ ದುಬಾರಿಯಾಗಿರುತ್ತದೆ. ಇಂಗ್ಲೀಷರು ತುಂಬಾ ವಿಲಾಸಿಗಳು. ಅವರು ಪ್ರತಿಯೊಂದರಲ್ಲೂ ಸಂತೋಷವನ್ನು ಹುಡುಕಿ ಹುಡುಕಿ ಸಂತೋಷವನ್ನು ಅನುಭವಿಸುತ್ತಾರೆ. ಅವರು ತಮ್ಮ ವಿಲಾಸಿ ಜೀವನಕ್ಕೆ ಹಣ ಖರ್ಚು ಮಾಡಲು ಹಿಂದೆ ಮುಂದೆ ನೋಡುವುದಿಲ್ಲ. ವಯಸ್ಸಾದ ಜೋಡಿಗಳು ಸಹ ಒಂದು ಬೆಡ್ (BHK) ರೂಂ ಇರುವ ಬೋಟನ್ನು ತೆಗೆದುಕೊಂಡು ವಿಹಾರ ಹೊರಡುತ್ತಾರೆ.

ನಾವು ಸಹ ಬೋಟ್‌ನಲ್ಲಿ ನಮ್ಮ ಸಾಮಾನುಗಳನ್ನೆಲ್ಲ ಜೋಡಿಸಿಕೊಂಡೆವು. ಅಲ್ಲಿ ಗ್ಯಾಸು ಅಡಿಗೆ ಮಾಡಲು ಪಾತ್ರೆಗಳು, ಟಿವಿ, ಓವೆನ್, ಫ್ರಿಜ್, ಮಂಚ, ಹಾಸಿಗೆ, ಡೈನಿಂಗ್ ಟೇಬಲ್ ಹೊದೆಯಲು ಡುವೇ ಎಲ್ಲವೂ ಇದ್ದವು. ನನಗಂತೂ ಅಲ್ಲಿಯ ವ್ಯವಸ್ಥೆ ನೋಡಿ ತುಂಬಾ ಖುಷಿ ಆಯಿತು. ರಾಜೀವ್ ಚಾಲಕ ಸೀಟಿನಲ್ಲಿ ಕುಳಿತು ಬೋಟ್ ಚಲಾಯಿಸಲು ಶುರುಮಾಡಿದ. ಬೋಟಿನ ಹೊರಗಡೆ ಚಾಲಕ ಸೀಟಿನ ಪಕ್ಕದಲ್ಲಿ 3-4 ಜನ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇದೆ. ಹಾಗೆ ಹಿಂದಿನ ಭಾಗದಲ್ಲೂ ಹೋಗಿ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇದೆ. ನಾವು ತಲೆಗೆ ಟೋಪಿ ಹಾಕಿಕೊಂಡು ಮುಂದೆ ಕುಳಿತು ಸುತ್ತಮುತ್ತಲಿನ ಸೃಷ್ಟಿ ಸೌಂದರ್ಯವನ್ನು ಕಣ್ಣು ತುಂಬಿಕೊಳ್ಳುತ್ತಿದ್ದೆವು.

ನಾನಂತೂ ಮೊಮ್ಮಗನನ್ನು ಅಪ್ಪಿ ಹಿಡಿದು ಕುಳಿತಿದ್ದೆ. ಏನಾದರೂ ಅನಾಹುತ ಆಗಬಹುದೆಂದು ನಾನು ಹೆಚ್ಚು ಬೋಟ್ ಒಳಗಡೆ ಮೊಮ್ಮಗನ ಜೊತೆ ಕುಳಿತು ಕಿಟಕಿ ಮೂಲಕ ಹೊರಗೆ ನೋಡುತ್ತಾ ನನ್ನ ಮೊಮ್ಮಗ ಜೀವಗೆ ನೀರಲ್ಲಿ ಓಡಾಡುವ ಬಾತು ಕೋಳಿಗಳನ್ನು ತೋರಿಸುತ್ತಿದ್ದೆ. ಅಲ್ಲಿ ಸ್ವಲ್ಪ ಕಪ್ಪಗಿನ ಬಾತುಕೋಳಿಗಳು ಬಿಳಿ ಬಾತು ಕೋಳಿಗಳು; ನೀರಿನಲ್ಲಿ ತೇಲಾಡುತ್ತಿದ್ದವು. ತಿನ್ನಲು ಏನಾದರೂ ಬಿಸಾಕಿದರೆ ಹತ್ತಿರ ಓಡಿ ಬರುತ್ತಿದ್ದವು. ಅಲ್ಲಿಯು ಜನ ಕಪ್ಪು ಡಕ್ಕ ಗಲೀಜು ಮತ್ತು ಬಿಳಿಯ Swain ಗಳು ಸ್ವಚ್ಛ ಎಂದು ಹೇಳುತ್ತಾರೆ. ಅವುಗಳ ಗರಿಗಳು ಮಾತ್ರ ತುಂಬಾ ಬೆಚ್ಚಗೆ ಅವುಗಳ ಗರಿಯನ್ನು ಅವರು ಹೊದೆಯುವ ಹೊದಿಕೆಯ ಒಳಗೆ ಹಾಕಿ ಡುವೇ ಮಾಡುತ್ತಾರೆ. ಅವು ಚಳಿಗಾಲದಲ್ಲಿ ಮೈನಸ್ 5-6 ಡಿಗ್ರಿ ಚಳಿಯಲ್ಲು ನಮ್ಮನ್ನು ಬೆಚ್ಚಗೆ ಇಡುತ್ತದೆ.

ನಮ್ಮ ಬೋಟ್ ಮುಂದೆ ಹೋಗುತ್ತಾ ಇದ್ದರೆ ಆರಾಮ್ ಆಗಿ ಕುಳಿತು ಅಕ್ಕಪಕ್ಕ ನೋಡುತ್ತಾ ಹೋಗುವುದು. ಅದು ಅತೀ ಸುಂದರ ಅನುಭವ. ಸ್ವಲ್ಪ ಸಮಯದ ನಂತರ ರಾಜೀವ್ ಬೋಟನ್ನು ಕಾಲುವೆಯ ದಡಕ್ಕೆ ತಂದು ನಿಲ್ಲಿಸಿದನು. ನಾವು ತಂದ ಊಟವನ್ನು ಮಾಡಿ ಹಣ್ಣು ತಿಂದು ಸ್ವಲ್ಪ ವಿಶ್ರಾಂತಿ ಪಡೆದ ಮೇಲೆ ಮತ್ತು ಬೋಟ್ ಚಲಾಯಿಸಲು ಪ್ರಾರಂಭಿಸಿದ. ಆ ಕಾಲುವೆ ಆರಾಮ ಆಗಿ ಒಮ್ಮೆಲೆ ಎದುರುಗಡೆಯಿಂದ ಬರುವ ಬೋಟು ನಮ್ಮ ಬೋಟು ಏನೂ ತೊಂದರೆಯಿಲ್ಲದೆ Pass ಆಗಬಹುದಿತ್ತು.

ಇನ್ನೊಂದು ವಿಶೇಷವೆಂದರೆ ಅಲ್ಲಿ ಸುಮಾರು 10-15 ಕಿಲೋಮೀಟರ್‌ವರೆಗೆ ಟೆನೆಲ್ (ಸುರಂಗ ಜಲಮಾರ್ಗ)ವಿದೆ. ನಾವು ಕೆಳಗಡೆ ಬೋಟ್‌ನಲ್ಲಿ ಹೋಗುತ್ತಿದ್ದರೆ ಮೇಲುಗಡೆ ಬಸ್ಸು ಕಾರುಗಳು ಓಡಾಡುತ್ತವೆ. ಜೊತೆಗೆ ಕೆಲವೊಂದು ಕಡೆ ರೈಲ್ವೆ ಮಾರ್ಗಗಳು ಸಹ ಇವೆ. ಇನ್ನೊಂದು ಆಶ್ಚರ್ಯವೆಂದರೆ, ನಾವು ಮೇಲ್ಗಡೆ ಬೋಟ್‌ನಲ್ಲಿ ಹೋಗುತ್ತಿದ್ದರೆ ಕೆಳಗಡೆ ಬದಿಯಲ್ಲಿ ಬಸ್ಸುಗಳು ಮತ್ತು ಕಾರುಗಳು ಓಡಾಡುತ್ತಿದ್ದವು. ಇದನ್ನು ನೋಡಿ ನನಗೆ ನನ್ನ ಕಣ್ಣನ್ನೆ ನಂಬಲಾಗಲಿಲ್ಲ. ಇದು ಹೇಗೆ ಸಾಧ್ಯ ಎಂದು ನಮ್ಮ ಅಳಿಯನಿಗೆ ಕೇಳಿದೆ. ಈ ಕಾಲುವೆ ಮನುಷ್ಯರು ಭೂಮಿಯಿಂದ ಎತ್ತರದ ಮೇಲೆ ನಿರ್ಮಿಸಿದ ಕಾಲುವೆಯಂತೆ ನನಗಂತೂ ಇದನ್ನು ಕೇಳಿ ವಿಸ್ಮಯವಾಯಿತು. ಕೆಳಗಡೆಯೂ ಜನ ಸಂಚಾರ ಮೇಲುಗಡೆಯು ಜನ ಸಂಚಾರ ನಾವು ಮಾತ್ರ ನಡುವೆ ಕಾಲುವೆಯಲ್ಲಿ ಬೋಟಿನಲ್ಲಿ ತೇಲುವ ಅನುಭವ ಹೀಗೂ ಉಂಟೇ ಎಂದುಕೊಂಡೆ. ಇದಕ್ಕೆ ಮಧ್ಯೆ ಬೋಟ್ ಹೋಗುತ್ತಿದ್ದರೆ “ಏಕ್ವಾ ಡೆಕ್ಸ್ ಬ್ರಿಡ್ಜ್” ಎಂದು ಕರೆಯುತ್ತಾರಂತೆ. ಯೂರೋಪಿಯನ್ನರ ಮುಂದಾಲೋಚನೆಗೆ ಆಶ್ಚರ್ಯವಾಗುತ್ತದೆ. ಅವರ ಬುದ್ಧಿವಂತಿಕೆಗೆ ಅವರೇ ಸಾಟಿ. ಇನ್ನು ಕೆಲವೆಡೆ ಕೆನಲ್‌ನ ಗುಂಟ ಇಂಗ್ಲೀಷರು ಮನೆ ಕಟ್ಟಿಕೊಂಡಿದ್ದಾರೆ ಸುಂದರವಾದ ಹೂವಿನ ತೋಟವನ್ನು ಮಾಡಿದ್ದಾರೆ ಮತ್ತು ಅಲ್ಲೇ ಮುಂದುಗಡೆ ಸಿಮೆಂಟಿನ ಬೆಂಚುಗಳನ್ನು ಉದ್ದಕ್ಕೂ ಹಾಕಿದ್ದಾರೆ. ಬೇಕೆನಿಸಿದಾಗ ಅಲ್ಲಿ ಬಂದು ಕುಳಿತು ಮೀನು ಹಿಡಿಯುವುದು, ಬಿಳಿ ಹಂಸಗಳಿಗೆ ತಿಂಡಿ ಹಾಕುವುದು ಮಾಡುತ್ತಾರೆ.

ಸಂಜೆಯಷ್ಟೊತ್ತಿಗೆ ನಾವು ಬೋರ್ನ್‌ ವಿಲ್ಲೇ ಎನ್ನುವ ಊರಿನ ಹತ್ತಿರ ಬಂದೆವು. ನಮ್ಮ ಜೊತೆ ಬಂದ ಬೋಟ್‌ಗಳು ಸಹ ಅಲ್ಲೇ ತಂಗಿದ್ದರಿಂದ ಮತ್ತು ಜನ ಸಂಚಾರ ಸಹ ಇದ್ದಿದ್ದರಿಂದ ನಾವು ಅಲ್ಲೇ ರಾತ್ರಿ ಕಳೆಯಲು ನಿರ್ಧರಿಸಿ ಅಳಿಯ ಬೋಟಿಗೆ ದಾರ ಕಟ್ಟಿ ಅಲ್ಲಿಯೇ ಇದ್ದ round ಆದ ಕಬ್ಬಿಣದ ಸರಳಿಗೆ ಗಟ್ಟಿಯಾಗಿ ಕಟ್ಟಿದ. ಅಲ್ಲಲ್ಲಿ ಅನೇಕ ಕಡೆ ಈ ರೀತಿಯ round ಆದ ಹುಕ್ಸ್‌ಗಳನ್ನು ಇಟ್ಟಿದ್ದಾರೆ. ಅದೇ ರೀತಿ ಪ್ರವಾಸಿಗರ ಸುರಕ್ಷತೆಗೂ ಕ್ರಮ ಕೈಕೊಂಡಿದ್ದಾರೆ. ನಮ್ಮ ಬೋಟ್ ನಿಲ್ಲುವಲ್ಲಿ ಸುತ್ತಲೂ ಕಬ್ಬಿಣದ ತಂತಿಯ ಬೇಲಿಯನ್ನು ಹಾಕಿದ್ದಾರೆ. ಹೀಗಾಗಿ ಯಾರೂ ದರೋಡೆಕೋರರು ಮತ್ತು ಕಳ್ಳರು ರಸ್ತೆ ಮಾರ್ಗವಾಗಿ ಬರುವಂತಿಲ್ಲ. ಬಂದರೆ ಜಲಮಾರ್ಗವಾಗಿ ಬರಬೇಕು. ಬೋಟ್‌ನಲ್ಲಿ ಬರುವವರು ನಮ್ಮಂತೆ ಒಂದು ವಾರ ಹತ್ತು ದಿನಕ್ಕೆ ಲೀಸ್ ತಗೊಂಡು ಬರುವವರೆ ಆದ್ದರಿಂದ ಅವರೆಲ್ಲ ಸಾಮಾನ್ಯವಾದ ಸುಶಿಕ್ಷಿತರು, ಶ್ರೀಮಂತರು, ಸಹೃದಯಿಗಳು ಇರುತ್ತಾರೆ. ಮತ್ತೊಬ್ಬರು ಕಷ್ಟದಲ್ಲಿದ್ದರೆ ಪರಸ್ಪರ ಸಹಾಯ ಮಾಡುತ್ತಾರೆ. ಬೋಟನ್ನು ಬದಿಗೆ ತಂದು ನಿಲ್ಲಿಸಲು ಸಹಾಯ ಮಾಡುತ್ತಾರೆ. ರಾತ್ರಿಗೆ ನಾನು ಆಮ್ಮೆಟ್ ಮಾಡಿದೆ. ಮಕ್ಕಳು ಇವರು ನಾವು ತಂದ ಚಪಾತಿ ಮತ್ತು ಬ್ರೆಡ್ ಜೊತೆ ಚೋಲೆ ತಿಂದರು. ಹೆಸರು ಬೇಳೆ ಸಾರು ಆಮ್ಮೆಟ್ ಜೊತೆ ಹೊಟ್ಟೆ ತುಂಬಾ ಊಟ ಮಾಡಿ ಬಾಳೆ ಹಣ್ಣು ತಿಂದು ಮೊಮ್ಮಗನ ಜೊತೆ ಆಟ ಆಡಿ ಮಲಗಿಕೊಂಡೆವು. ಮೊದಲ ಸಲ ನೀರ ಮೇಲೆ ಬೋಟ್‌ನಲ್ಲಿ ಮಲಗಿದ್ದರಿಂದ ನನಗೆ ನಿದ್ದೆ ಸರಿಯಾಗಿ ಬರಲಿಲ್ಲ. ಬೇರೆ ಬೋಟ್‌ಗಳು ನಮ್ಮ ಬೋಟ್ ಪಕ್ಕ ಹಾದು ಹೋಗಬೇಕಾದರೆ ತುಂಬಾ ನೀರಿನಲ್ಲಿ ಅಲ್ಲಾಡುತ್ತಿತ್ತು. ಆಗೆಲ್ಲ ಎಚ್ಚರವಾಗಿಬಿಡುತ್ತಿತ್ತು. ಬೆಳಿಗ್ಗೆ ಎದ್ದು ಟಾಯ್ಲೆಟ್ ಬಾತ್ ರೂಮಿನ ಕೆಲಸ ಮುಗಿಸಿ ಸ್ನಾನ ಮಾಡಿ ಮಕ್ಕಳಿಗೆ ಉಪ್ಪಿಟ್ಟು ಮಾಡಿದೆ. ಎಲ್ಲರೂ ಎದ್ದು ಅವರವರ ನಿತ್ಯದ ಕೆಲಸ ಮುಗಿಸಿ ಉಪ್ಪಿಟ್ಟು ತಿಂದು ಚಹ ಕುಡಿದು ಅಳಿಯ ರೆಡಿಯಾಗಿ ಮತ್ತೆ ಬೋಟ್ ಬಿಡಲು ಶುರು ಮಾಡಿದ. ನಾನು ಸಹ ತಿಂಡಿ ತಿಂದು ಎಲ್ಲ ಕೆಲಸ ಮುಗಿಸಿ ಮಗಳ ಜೊತೆ ಬೋಟಿನ ಹಿಂದಿನ ಭಾಗದಲ್ಲಿ ಕುಳಿತು ಸುತ್ತಮುತ್ತಲಿನ ಸೃಷ್ಟಿ ಸೌಂದರ್ಯವನ್ನು ಸವಿಯುತ್ತಾ ನೀರಲ್ಲಿ ತೇಲಾಡುವ ಕಂದು ಬಣ್ಣದ ಡಕ್ ಮತ್ತು ಅಚ್ಚ ಬಿಳಿಯ ಬಣ್ಣದ ಹಂಸಗಳನ್ನು ನೋಡಿ ಸಂತೋಷ ಪಡುತ್ತಿದ್ದೆವು. ನಿಜವಾಗಲೂ ಇದೊಂದು ಅದ್ಭುತ ಅನುಭವ. ಮನುಷ್ಯ ತನ್ನ ಸಮಯವನ್ನು ಕಳೆಯಲು ಸಂತೋಷಪಡಲು ನಾನಾ ರೀತಿಯ ಮಾರ್ಗಗಳನ್ನು ಹುಡುಕೊಳ್ಳುತ್ತಾನಲ್ಲ ಎನಿಸಿತ್ತು. ಕೆಲವು ಕಡೆ ಕೆನೆಲ್ ಅಕ್ಕಪಕ್ಕದಲ್ಲಿ ಮೇಲುಗಡೆ ಕೆಳಗಡೆ ರೈಲ್ವೆ ಮಾರ್ಗಗಳಿದ್ದವು. ಸತತವಾಗಿ ರೈಲ್ವೆಗಳು ಓಡಾಡುತ್ತಿದ್ದವು. ಕೆಲವು ಪ್ರಯಾಣಿಕರು ನಮ್ಮನ್ನು ಕಂಡು ಕೈ ಬೀಸುತ್ತಿದ್ದರೆ ನಮ್ಮ ಮೊಮ್ಮಗ ಜೀವ ಟ್ರೇನ್ ಶಬ್ದ ಕೇಳಿ ಅದನ್ನು ಕಂಡು ಚಪ್ಪಾಳೆ ಹಾಕಿ ಕೇಕೆ ಹಾಕಿ ನಗುತ್ತಿದ್ದ. ಇದನ್ನು ಕಂಡು ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. ನನ್ನ ಯಜಮಾನರು ದೇವ ಬೋಟ್ ಮುಂದುಗಡೆ ಅಳಿಯನ ಪಕ್ಕ ಕುಳಿತುಕೊಳ್ಳುತ್ತಿದ್ದರು. ಅವರಿಗೋ ಅಳಿಯ ಬೋಟ್ ಚಲಾಯಿಸುವುದನ್ನು ನೋಡಿ ತಾನು ನಡೆಸಬೇಕೆಂಬ ಮಹಾದಾಸೆ. ಒಂದೆರಡು ಸಲ ಅಳಿಯನ ಹತ್ತಿರ ಕೇಳಿಯೂ ಬಿಟ್ಟರು. ಆದರೆ ತರಬೇತಿ ಇಲ್ಲದೆ ಬೋಟ್ ನಡೆಸುವುದು ತೊಂದರೆ ಮತ್ತು ಕಷ್ಟವೇ ಸರಿ. ಹೀಗಾಗಿ ಅವನು ಬೇಡವೆಂದನು. ಹೀಗಾಗಿ ಅವರ ಆಶೆಗೆ ತಣ್ಣೀರು ಎರಚಿದಂತೆ ಆಯಿತು.

ನಮಗೆ ಜಲಮಾರ್ಗ ಮಧ್ಯದಲ್ಲಿ ಅತಿ ಉದ್ದವಾದ ಟೆನೆಲ್ ಸಿಕ್ಕಿತು. ಅದು ಸುಮಾರು 12 ರಿಂದ 15 ಮೈಲು ಉದ್ದವಾಗಿರಬೇಕು. ಅದರ ಒಳಗಡೆ ಹೋಗುತ್ತಿದ್ದಂತೆ ಪೂರ್ತಿ ಕತ್ತಲಾಯಿತು. ಅಲ್ಲಿ ಲೈಟುಗಳನ್ನು ಹಚ್ಚಿಟ್ಟಿದ್ದರು. ಮೇಲುಗಡೆಯ ಬೆಟ್ಟ ಗುಡ್ಡಗಳಿಂದ ಕೆಲವು ಕಡೆ ನೀರು ಸುರಿಯುತಿತ್ತು. ನಾವು ಬೋಟ್ ಒಳಗಡೆ ಹೋಗಿ ಲೈಟ್ ಹಚ್ಚಿಕೊಂಡು ಕಿಟಕಿಯಿಂದ ಹೊರಗೆ ನೋಡುತ್ತಾ ಕುಳಿತೆವು. ಅಲ್ಲಲ್ಲಿ ಮೇಲಿನಿಂದ ಬಿದ್ದ ನೀರು ಹೆಪ್ಪುಗಟ್ಟಿ ಹಿಮದಂತೆ ಕಾಣುತಿತ್ತು. ಜಲಮಾರ್ಗ ಎಷ್ಟು ನೇರವಾಗಿ ಇತ್ತು ಎಂದರೆ ತುಂಬಾ ಕಿಲೋಮೀಟರ್ ದೂರದಿಂದಲೇ ನಾವು ಟೆನೆಲ್ ದಾಟಿ ಹೋಗುವ ದ್ವಾರ ಅಲ್ಲಿಂದ ಬರುವ ಬೆಳಕು ಒಂದು ದೊಡ್ಡ ವಿದ್ಯುತ್ ಬಲ್ಬನಂತೆ ಕಾಣುತ್ತಿತ್ತು. ಈ ದೃಶ್ಯ ತುಂಬಾ ನಯನ ಮನೋಹರವಾಗಿತ್ತು.

ಮಧ್ಯಾಹ್ನ ಮತ್ತೆ ಅನ್ನ ಮಾಡಿ ತಂದ ಅಡಿಗೆಗಳನ್ನೆಲ್ಲ ಬಿಸಿ ಮಾಡಿಕೊಂಡು ಊಟ ಮಾಡಿದೆವು. ಅಳಿಯ ಸ್ವಲ್ಪ ವಿಶ್ರಾಂತಿ ಪಡೆದುಕೊಂಡು ಮತ್ತೆ ಬೋಟ್ ಚಲಾಯಿಸಲು ಶುರುಮಾಡಿದ. ನಮ್ಮ ಬೋಟ್ ಬರ್ಮಿಂಗ್ ಹ್ಯಾಮ್‌ನ ಕಡೆ ಹೊರಡುತಿತ್ತು. ನಾನು ಮಧ್ಯದಲ್ಲಿ ಎಲ್ಲರಿಗೂ ಟೀ ಮಾಡಿ ಕೊಡುತ್ತಿದ್ದೆ. ಮತ್ತು ಮೊಮ್ಮಗನ ಜೊತೆ ಹಿಂದುಗಡೆ ಕುಳಿತು ಸುತ್ತಮುತ್ತಲಿನ ನಿಸರ್ಗದ ಸೌಂದರ್ಯವನ್ನು ನೋಡಿ ಮನಸಾರೆ ಆನಂದಿಸುತ್ತಿದ್ದೆ. ನಾವು ಬರ್ಮಿಂಗ್‌ಹ್ಯಾಮ್ ಹೋಗುವ ದಾರಿಯಲ್ಲಿ ಬರ್ಮಿಂಗ್‌ಹ್ಯಾಮ್ ಯೂನಿವರ್ಸಿಟಿ ಸಿಗುತ್ತದೆ. ಅಲ್ಲಿಂದ ಮುಂದೆ ಹೋದರೆ ನಾವು ಬರ್ಮಿಂಗ್‌ಹ್ಯಾಮ್ ಸಿಟಿಯ ಮಧ್ಯ ಭಾಗ ತಲುಪುತ್ತೇವೆ. ನಾವು ಸಾಯಂಕಾಲದಷ್ಟು ಹೊತ್ತಿಗೆ ಅಲ್ಲಿಗೆ ತಲುಪಿದೆವು. ಅದೊಂದು ಎಲ್ಲ ಬೋಟುಗಳು ಬಂದು ನಿಲ್ಲುವ ಸ್ಥಳವಾಗಿತ್ತು. ಅಲ್ಲಿ ಸುಮಾರು 25ರಿಂದ 30ರಷ್ಟು ಬೋಟುಗಳು ನಿಂತಿದ್ದವು. ಮಾರ್ಕೆಟ್ ಪ್ರದೇಶವಾದ್ದರಿಂದ ಜನಸಂದಣಿ ತುಂಬಾ ಇತ್ತು. ನಮ್ಮ ಬೋಟು ನಿಂತ ಪಕ್ಕದಲ್ಲಿಯೇ ಜನ ಸಂಚಾರಕ್ಕೆ ದಾರಿಯಿತ್ತು. ಅಲ್ಲಿಯೇ ಸುತ್ತಮುತ್ತಲೂ ದೊಡ್ಡ shopping ಮಾಲ್‌ಗಳುಹೋಟೆಲುಗಳು ಇದ್ದವು.

By-ಶಾಲಿನಿ ಗಾಂವಕರ್

ಮುಂದಿನ ಭಾಗ ಓದಿ…

Leave a Comment

Comments

No comments yet. Why don’t you start the discussion?

    Leave a Reply