5.ಬೀರಬಲ್ಲನ ಬಣ್ಣ
ಒಂದು ದಿನ ಬಾದಶಹನು ತನಗೆ ಏನೂ ಕೆಲಸವಿಲ್ಲದ್ದರಿಂದ ಕೇವಲ ಸರಸ ಸಲ್ಲಾಪಗಳಲ್ಲಿಯೇ ಕಾಲ ಕಳೆಯುತ್ತ ತನ್ನ ಪರಿವಾರದಿಂದ ಸುತ್ತು ಗಟ್ಟಲ್ಪಟ್ಟವನಾಗಿ ಕುಳಿತಿದ್ದನು. ಮಂತ್ರಿಗಳು, ಸೇನಾಧಿಪತಿಗಳು, ವೀರಾಧಿ ವೀರರು ಮೊದಲಾದವರೆಲ್ಲರೂ ಇದ್ದರು. ಇಂದು ಮನಬಿಚ್ಚಿ ಮಾತಾಡುವದೆಂದು ನಿರ್ಣಯಿಸಲ್ಪಟ್ಟಿದ್ದರಿಂದ ತಮತಮಗೆ ಹೊಳೆದಂತೆ ಎಲ್ಲರೂ ಮಾತಾಡುತ್ತಿದ್ದರು. ಈ ಹರಟೆಯಲ್ಲಿ ಸೌಂದರ್ಯ, ದೇಹದ ಬಣ್ಣ ಈ ವಿಷಯ ಬಂದು ಬಿಟ್ಟಿತು. ಎಲ್ಲರೂ ಹರಟೆಯಲ್ಲಿ ತಲ್ಲೀನರಾದರು. ಬೀರಬಲ್ಲನ ಸವಾರಿಯು ಬಂದಿತೆಂದು ವಂದಿಮಾಗಧರು ಕೂಗಿಕೊಂಡರು. ಸಭಾಸ್ಥಾನವನ್ನು ಬೀರಬಲ್ಲನು ಪ್ರವೇಶಿಸಿದನು. ನೆರೆದ ಸಭಿಕರೆಲ್ಲರೂ ಬಾದಶಹ ಮೊದಲ್ಗೊಂಡು ಅವನು ಬರುತ್ತಲೇ ನಗತೊಡಗಿದರು.
ಬಿದ್ದು ಬಿದ್ದು ನಕ್ಕರು. ಬೀರಬಲ್ಲನಿಗೆ ತಿಳಿಯಿತು. ಈ ದಿನ ತನ್ನನ್ನು ನೋಡಿ ಯಾವುದೋ ಒಂದು ಮಾತಿಗಾಗಿ ನಗುತ್ತಿದ್ದಾರೆಂದು, ಆದರೂ ತಾನು ಗಂಭೀರನಾಗಿಯೇ ನುಡಿದನು. “ಖಾವಂದ ಇಂದು ತಾವೇನೋ ಬಹಳ ಸಂತೋಷದಲ್ಲಿದ್ದಂತಿದೆ!”
“ನನ್ನ ನಗುವ ಕಾರಣವನ್ನು ಕೇಳಿದರೆ ನಿನಗೆ ದುಃಖವಾಗಬಹುದು.” ಅದೇನಿಲ್ಲ ಹೇಳಿರಿ. ಅದೇನು”
“ಇವರೆಲ್ಲರೂ ನೀನು ಕರಗಿರುವದನ್ನು ನೋಡಿ ಹಾಸ್ಯ ಮಾಡುತ್ತಿದ್ದಾರೆ.”
“ಓಹೋ ಇಷ್ಟೇನೇ? ನಾನು ಕರಗಿರುವ ಕಾರಣ ಅವರಿಗೆ ಗೊತ್ತಿದ್ದರೆ ಹಾಗೆ ನಗುತ್ತಿರಲಿಲ್ಲ.”
“ಅದೇನು ಕಾರಣ ಹೇಳು!”
“ಕಾರಣವು ಬೇಕೇಬೇಕೇನು ಜೀಯಾ? ಹೇಳುತ್ತೇನೆ-ಹಾಗಾದರೆ ದೇವರು ಮೊದಲು ಅಚರ ವಸ್ತುಗಳನ್ನು ನಿರ್ಮಿಸಿದನು. ಆಮೇಲೆ ಚರ ವಸ್ತುಗಳು, ಅನಂತರ ಜೀವಿಗಳು, ಕಟ್ಟಕಡೆಗೆ ಮನುಷ್ಯನನ್ನು ನಿಮ್ಮಿಸಿದನು. ಇವನಿಗೆ ವಿಚಾರಶಕ್ತಿಯೆಂಬುದೊಂದನ್ನು ದಯಪಾಲಿಸಿದನು. ಮನುಷ್ಯರನ್ನು ಭೂಲೋಕಕ್ಕೆ ಕಳಿಸುವಾಗ ಅವರಿಗೆ ಒಂದು ಪ್ರಶ್ನೆ ಕೇಳಿ ಕಳುಹಿಸುತ್ತಾನೆ. ಅದು ಈ ಪ್ರಕಾರ ಅದೆ. (1) ಬುದ್ಧಿ ಸಾಮರ್ಥ್ಯ (2) ದೇಹಸಾಮರ್ಥ್ಯ (3) ಧನಸಾಮರ್ಥ್ಯ (4) ರೂಪ, ನೀವು ತಿಳಿದಂತೆ ಬಣ್ಣ “ಈ ನಾಲ್ಕರಲ್ಲಿ ಬೇಕಾದ್ದೊಂದನ್ನು ಆರಿಸಿತೆಗೆದುಕೊಂಡು ಹೋಗಿರಿ” ಎಂದನು.
ಈ ಸಭಾಸ್ಥಾನದಲ್ಲಿಯಪೂರ್ವಜರೆಲ್ಲರೂ ಕೇವಲ ನಾಲ್ಕನೆಯದನ್ನೇ ಬೇಡಿ ಕಚ್ಚಾಡಿ ತೆಗೆದುಕೊಂಡಿರಬಹುದು. ಅವರ ಮಕ್ಕಳು-ಮೊಮ್ಮಕ್ಕಳಾದ ಇವರಲ್ಲಿ ಇದೊಂದೇ ಉಳಿದುಬಿಟ್ಟಿದೆ. ನನ್ನ ಪೂಧ್ವಜರು ಬಹಳ ಜಾಣರು, ಬುದ್ಧಿ ಸಾಮರ್ಥ್ಯವೊಂದಿದ್ದರೆ ಉಳಿದ ಗುಣಗಳು ತಮ್ಮ ತಾವೇ ದೊರಕುವವೆಂದು ತಿಳಿದು ಅದನ್ನು ಪಡೆದುಕೊಂಡು ಬಂದಿದ್ದಾರೆ’ ಎಂದು ನಗುತ್ತಾ ನಿಂತನು. ಸಭಾ ಜನರು ತೆಪ್ಪಗಾಗಿ ಮೋರೆ ಒಣಗಿಸಿಕೊಂಡರು. ಬಾದಶಹನು ಎದ್ದು ಮುಖಮಾರ್ಜನ ಮಾಡಿಕೊಳ್ಳುವ ನೆಪ ತೋರಿಸಿ ಅದೃಶ್ಯನಾದನು.
ಮುಂದಿನ ಭಾಗ ಓದಿ…