ಕಾಗೆಯ ಸಂಖ್ಯೆ
ರಾಜ್ಯ ಭಾರವು ಯಥಾಪ್ರಕಾರವಾಗಿ ಸಾಗುತ್ತಿರುವಾಗ ರಾಜ ಮನೆತನದವರಿಗೆ ಅವರ ಪರಿಹಾರ ಪರಿಚಾರಕರಿಗೆ ಯಾವುದು ಚಿಂತೆ? ಹಾಗೆ ಕೇಳಿದರೆ ವೇಳೆ ಹೇಗೆ ಕಳೆಯಬೇಕೆಂಬುದೊಂದೇ ಚಿಂತೆಯಾದೀತು. ಆದುದರಿಂದಲೇ ತಮ್ಮ ಸುತ್ತಲೂ ಪಂಡಿತರನ್ನು ಹಿಂದಿನ ಕಾಲದ ರಾಜರು ಇಟ್ಟುಕೊಳ್ಳುತ್ತಿದ್ದರು. ಬೀರಬಲ್ಲನು ಅಕಬರನ ಕೂಡ ಇಪ್ಪತ್ನಾಲ್ಕು ತಾಸು ಹನ್ನೆರಡು ತಿಂಗಳೂ ಇದ್ದನೆಂದು ಹೇಳಿದರೆ ಯಾರೂ ಏನೂ ಅನ್ನಲಿಕ್ಕಿಲ್ಲ. ರಾಜನು ವೇಳೆ ಕಳೆಯಲು ಏನಾದರೊಂದು ಕೇಳುವರು. ಅದನ್ನು ಪಾಂಡಿತ್ಯದ ಒರೆಗಲ್ಲಿಗೆ ಹಚ್ಚಿ ಚಾತುರ್ಯ ದಿಂದ ಉತ್ತರ ಹೇಳಿ ಮನರಂಜನೆ ಮಾಡುವದು ಬೀರಬಲ್ಲನ ಕರ್ತವ್ಯ
ಒಂದು ದಿನ ಅಕಬರನು ಕೇಳಿದನು. “ಬೀರಬಲ್ಲ ನೀನು ಮಹಾಪಂಡಿತನೆಂದು ಮೆರೆಯುವಿ, ಈ ದಿಲ್ಲೀ ಶಹರದಲ್ಲಿ ಕಾಗೆಗಳೆಷ್ಟಿವೆ? ಹೇಳಬಲ್ಲೆಯಾ?”
“ಅದಕ್ಕೇನು ಮಹಾಪ್ರಭೋ, ಅಪ್ಪಣೆಯಾದರೆ ಹೇಳುವೆನು.”
“ಕೂಡಲೇ ಹೇಳಲು ಹೇಗೆ ಸಾಧ್ಯ? ಮೂರು ದಿನ ಸಮಯ ಕೊಡಿರಿ ಹೇಳುವೆನು.”
“ನೋಡು ಬೀರಬಲ್ಲ ಇದು ವಿನೋದವಲ್ಲ, ಬಹಳ ಕಠಿಣ ಕೆಲಸ, ಬೇಕಾದರೆ ಇನ್ನೆರಡು ದಿವಸ ಸಮಯ ತೆಗೆದುಕೋ, ಆದರೆ ಸರಿಯಾದ ಲೆಕ್ಕ ಮಾತ್ರ ಒಪ್ಪಿಸಬೇಕು. ಅದರಲ್ಲಿ ತಪ್ಪಾದರೆ ಸಾವಿರ ಮೊಹರು ದಂಡ ತೆತ್ತಬೇಕಾದೀತು ಎಚ್ಚರ.”
“ಅದಾವ ದೊಡ್ಡ ಪ್ರಶ್ನೆ ಮಹಾರಾಜ, ಕೇವಲ ಅಡ್ಡಾಡುತ್ತ ಲೆಕ್ಕ ತೆಗೆಯುವೆನು, ಮೂರು ದಿವಸ ಸಾಕು.
“ಹೀಗೋ? ಹಾಗಾದರೆ ಹೋಗು. ನಾಲ್ಕನೆಯ ದಿನ ಇದರ ಉತ್ತರ ಹೇಳು.”
ಮೂರು ದಿನಗಳಲ್ಲಿಯೂ ಬೀರಬಲ್ಲನು ಅದೃಶ್ಯನಾಗಿದ್ದನು. ನಾಲ್ಕನೆಯ ದಿನ ಸಭಾಸ್ಥಾನಕ್ಕೆ ಆಗಮಿಸಿದನು. ಎಲ್ಲರೂ ಹರ್ಷಭರಿತರಾಗಿ ಅವನನ್ನು ಸ್ವಾಗತಿಸಿದರು. ವಂದಿಮಾಗಧರು ಪರಾಕು ಹೇಳಿದರು. ಬೀರಬಲ್ಲನು ಆಸನವನ್ನು ಅಲಂಕರಿಸಿದನು.
ಅಕಬರನು ಅದೇ ಪ್ರಶ್ನೆ ಮಾಡಿದನು. “ಪಂಡಿತ ಶ್ರೇಷ್ಠನೆಂಬ ಬಿಂಕವುಳ್ಳವನೇ ದಿಲ್ಲಿಯಲ್ಲಿಯ ಕಾಗೆಗಳ ಸಂಖ್ಯೆಯನ್ನು ಸರಿಯಾಗಿ ಹುಡುಕಿ ತೆಗೆದೆಯಾ?”
“ಹೌದು ಮಹಾಪ್ರಭೋ ತೆಗೆದಿದ್ದೇನೆ.”
“ಹೇಳು ಎಷ್ಟಿದೆ?”
“ಮಹಾರಾಜ ಈ ನಗರದಲ್ಲಿ ಈ ಕ್ಷಣಕ್ಕೆ 2539 ಕಾಗೆಗಳಿವೆ.
ಬಾದಶಹನು ಬಿದ್ದು ಬಿದ್ದು ನಕ್ಕನು. ಏನಾದರೂ ಒಂದು ಅಂಕಿ ಹೇಳಿದರೆ ತೀರಿತೇನು? ಇದು ನಿಜವಾಗಿಯೂ ಸರಿಯಾದ ಅಂಕಿಯೇ? ಎಚ್ಚರದಿಂದ ಮಾತಾಡು.”
“ನಿಜವಾದ ಅಂಕಿಯಿದು, ಬೇಕಾದರೆ ತಾವು ಸ್ವತಃ ಎಣಿಸಿ ನೋಡಿರಿ. ಆದರೆ ಒಂದು ಮಾತು, ಹಾಗೆ ಎಣಿಸುವಾಗ ಈ ಪಟ್ಟಣದಲ್ಲಿಯ ಯಾವ ಕಾಗೆಯನ್ನೂ ಹೊರಗೆ ಬಿಡಕೂಡದು, ಹೊರಗಿನಿಂದ ಯಾವ ಕಾಗೆಯನ್ನೂ ಪಟ್ಟಣದೊಳಗೆ ಬಾರದಂತೆ ಎಚ್ಚರದಿಂದಿರಬೇಕು. ಹೀಗೆ ವ್ಯವಸ್ಥೆ ಇಟ್ಟು ಕಾಗೆಗಳನ್ನು ಎಣಿಸಿರಿ” ಎಂದನು.
ಇದೊಂದು ದೊಡ್ಡ ಪೇಚಿನಲ್ಲಿ ಬಾದಶಹನು ಬಿದ್ದು ಬಿಟ್ಟನು. ಇದು ಆಗದ ಕೆಲಸ, ಇಷ್ಟಾದರೂ ಕಾಗೆಗಳನ್ನು ಎಣಿಸುವದು ನಿಜಕ್ಕೂ ತೊಂದರೆದಾಯಕ ವಾದುದು. ಮೇಲಾಗಿ ಈ ಶಹರದಲ್ಲಿ ಎಷ್ಟು ಕಾಗೆಗಳಿದ್ದರೇನು? ಇಲ್ಲದಿದ್ದರೇನು? ಅದರ ಗೊಡವೆ ತನಗೇಕೆಂದು ಬಾದಶಹನು ವಿಚಾರಿಸಿದನು. ಕಡೆಗೆ ಇದ್ದರೂ ಇರಬೇಕು. ಬೀರಬಲ್ಲ ನಿನ್ನ ಸಂಖ್ಯೆಯೇ ನಿಜವಿರಬೇಕು. ತೆಗೆದುಕೊ ಒಂದು ಸಾವಿರ ಮೊಹರ ಇನಾಮನ್ನು” ಎಂದು ಪಾರಿತೋಷಕವನ್ನು ಕೊಟ್ಟು ಬೀರಬಲ್ಲನಿಗೆ ಮರ್ಯಾದೆ ತೋರಿ ಸಭೆಯಲ್ಲಿ ತನ್ನ ಮರ್ಯಾದೆಯನ್ನು ಉಳಿಸಿಕೊಂಡನು.
ಮುಂದಿನ ಭಾಗ ಓದಿ…