ಎದೆಗಾರ್ತಿ
ಬೇಸಿಗೆಯ ದಾಹವನ್ನು ತಡೆಯಲಾಗಲಿಲ್ಲ. ಅರಮನೆಯ ಸುಖ-ಸಾಧನಗಳು ಬಾದಶಹನಿಗೆ ತಂಪನ್ನೀಯಲು ಎಷ್ಟೂ ಉಪಯೋಗಬೀಳಲಿಲ್ಲ. ಆಗ ಬೀರಬಲ್ಲನನ್ನುದ್ದೇಶಿಸಿ ಬೀರಬಲ್ಲ, ನದಿ ತೀರಕ್ಕಾದರೂ ತಿರುಗಾಡಲು ಹೊರಡೋಣವೇ ಬಹಳ ಶೆಕೆಯಾಗತೊಡಗಿದೆ” ಎಂದನು.
“ಜೀಯಾ ಮಹಾದಾಜ್ಞೆ” ಎಂದನು.
ಈರ್ವರೂ ತಿರುಗಾಡಲು ಹೊರಟರು. ಬೆಳದಿಂಗಳ ರಾತ್ರಿ ಮೆಲ್ಲನೆ ಬೀಸುವ ತಣ್ಣನೆ ಗಾಳಿಯ ಸುಖವು ಆಗ ಸಿಗಹತ್ತಿತ್ತು. ಆಗ ಅಕಬರನೆಂದನು.
“ನೋಡು ಬೀರಬಲ್ಲ, ನಾನು ಈಗ ರಾತ್ರಿ ತಿರುಗಾಡಲು ಹೊರಟಿದ್ದೇವೆ. ಹೆಂಗಸು ಹೀಗೆ ಹೊರಡಬಲ್ಲಳೇ? ಎಷ್ಟೆಂದರೂ ಅವಳು ಅಂಜುಬುರುಕಿ.”
“ಹಾಗೆ ನಾನೆನ್ನಲಾರೆ ಅವಳಿಗೆ ಮಾನ-ಮಾರ್ಯಾದೆಗಳ ಕಟ್ಟು ಬಹಳ ಬಿಗುವಾಗಿವೆ. ಅದಕ್ಕಾಗಿ ತನ್ನ ಜೊತೆಯಲ್ಲಿ ಎರಡು-ಮೂರು ಗಂಡಸರಿಲ್ಲದೆ ಹೊರಬೀಳುವದೇ ಇಲ್ಲ.”
“ಮಾನ-ಮರ್ಯಾದೆಗಳ ಕಟ್ಟು ಇದೆ, ಆದರೆ ಅದು ಹೊರಬೀಳದೆ ಇರಲು ಕಾರಣವಲ್ಲ, ಹಾಗಾದರೆ ಮನೆಯಲ್ಲಿ ಇಲಿ, ಜೊಂಡಿಗೆಗಳಿಗೆ ಅಂಜುವದಿಲ್ಲವೇ ಹೆಂಗಸರು? ಒಬ್ಬಳನ್ನು ಮನೆಯಲ್ಲಿ ಮಲಗಿಸು, ಅವಳಿಗೆ ನಿದ್ರೆ ಹತ್ತುವದೇನೋ ನೋಡೋಣ?”
“ಇಷ್ಟರಿಂದಲೇ ಅವಳಿಗೆ ತಾವು ಅಂಜುಬುರುಕಿಯೆಂದು ಹೆಸರಿಸುವಿರೇನು? ಇದಕ್ಕೆ ನಾನೊಪ್ಪುವುದಿಲ್ಲ. ಹೆಂಗಸು ಮನಸ್ಸು ಮಾಡಿದರೆ ಬೇಕಾದಂಥ
ಘನಘೋರ ಪ್ರಸಂಗದಲ್ಲಿಯಾದರೂ ಅವಳು ಮುಂದೆ ಬಂದು ತನ್ನ ಇಷ್ಟಾರ್ಥ ಸಿದ್ಧಿಸುವಳು.”
ಹೀಗೆ ಚರ್ಚಿಸುತ್ತ ಸಾಗಿರುವಾಗ ದೂರ ಬೆಳದಿಂಗಳಲ್ಲಿ ಯಾವುದೋ ಒಂದು ವ್ಯಕ್ತಿಯನ್ನು ಇವರೀರ್ವರೂ ಕಂಡರೂ ತುಸು ಸನಿಹಕ್ಕೆ ಹೋದಂತೆ ಅದು ಸ್ತ್ರೀ ವ್ಯಕ್ತಿಯೆಂದು ಸ್ಪಷ್ಟವಾಯಿತು.
“ಮಹಾರಾಜ ತುಸು ತಡೆಯಿರಿ. ಈ ಹೆಣ್ಣುಮಗಳು ಒಬ್ಬಳೇ ಇಲ್ಲಿಗೇಕೆ ಬಂದಿದ್ದಾಳೆ ನೋಡೋಣ. ಈಗ ಮಧ್ಯ ರಾತ್ರಿ ಸರಿದುಹೋಗಿದೆ. ಇವಳ ಜೊತೆಗೆ ಮತ್ತಾರಾದರೂ ಇರಬೇಕು. ಏನಿದೆ ಇದರಲ್ಲಿ ಗೂಢ ನೋಡೋಣ” ಎಂದನು.
ಅಕಬರ ಬೀರಬಲ್ಲರು ಸನಿಹದ ಬಂಡೆಗಲ್ಲಿಗೆ ಮರೆಯಾಗಿ ಕುಳಿತುಕೊಂಡರು. ಆ ಹೆಣ್ಣು ಮಗಳು ವಯಸ್ಸಿನಲ್ಲಿ ಚಿಕ್ಕವಳು, ತರುಣಿ ನದಿಯ ದಂಡೆಗುಂಟ ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಿದ್ದಳು. ಯಾರದೋ ಬರವನ್ನು ವೀಕ್ಷಿಸುವಂತೆ ದಾರಿಯತ್ತ ಆಗಾಗ ದಿಟ್ಟಿಸಿ ನೋಡುತ್ತಿದ್ದಳು. ರಾಜಧಾನಿಯ ಕಾವಲುಗಾರರು ಒಂದು ಬಾರಿಸಿದರು. ಅವಳ ಓಡಾಟ ನಡೆದೇ ಇತ್ತು. ಎರಡು ಬಾರಿಸಿದರು.
ಬೀರಬಲ್ಲ, ರಾತ್ರಿ ಎರಡು ಹೊಡೆಯಿತು. ಈ ಹುಡುಗಿಯು ಇನ್ನೂ ಇಲ್ಲಿಯೇ ಇರುವಳಲ್ಲ?”
ತುಸು ತಡೆಯಿರಿ ಖಾವಂದ, ದೂರದಲ್ಲಿ ಅಲ್ಲಿ ನೋಡಿರಿ ಯಾರೋ ಬರುತ್ತಿರುವಂತೆ ತೋರುವದು.”
ದೂರದಲ್ಲಿ ಬರುತ್ತಿರುವ ಯುವಕನು ಸನಿಹಕ್ಕೆ ಬಂದನು. ಹುಡುಗಿಯು ಅವನನ್ನು ಗುರುತಿಸಿದಳು. ಇಬ್ಬರೂ ಕುಡಿದರು. ಅವರ ವಿನೋದ ವಿಲಾಸಗಳು ಎಲ್ಲೆ ಮೀರಿದವು.
“ಮಹಾರಾಜ ಈ ಹುಡುಗಿಯು ಎದೆಗಾರ್ತಿಯು. ಇಲಿ, ಜೊಂಡಿಗೆ ಗಳಿಗೆ ಅಂಜುವ ಅಂಜುಬುರುಕಿಲ್ಲ, ಹೆಂಗಸು ಮನಸ್ಸು ಮಾಡಿದರೆ ಗಂಡಸನ್ನು ಧೈರ್ಯದಲ್ಲಿ ಮೀರಿಸಿ ಬಹುದೂರ ಸಾಗಬಲ್ಲಳು.”
“ಹೌದು ಈಗ ತಂಗಾಳಿ ಬೀಸಿತು. ಅರಮನೆಯತ್ತ ಸಾಗೋಣ ನಡೆ.”
ಮುಂದಿನ ಭಾಗ ಓದಿ…