ತಿರುವುವಿಕೆ
ತಾವು ಭರತಖಂಡದ ಚಕ್ರಾಧಿಪತಿಯೆನಿಸಿ, ರಾಜ್ಯದಾಡಳಿತವನ್ನು ಮಾಡುತ್ತಿದೆ. ವವನಾದರೂ ಅಧಿಕಾರದ ಬಲಕ್ಕಿಂತ ಪಾಂಡಿತ್ಯದ ಬಲದಿಂದ ತನ್ನ ಮೀರಿ ಬೀರಬಲ್ಲನ ವರ್ಚಸ್ಸು ದಿನ ದಿನವೂ ಬೆಳೆಯುತ್ತಿದೆಯೆಲ್ಲಾ ಎಂದು ಅಕಬರನು ಒಮ್ಮೆ ತಾಮಸ ವೃತ್ತಿಯ ಆವೇಶದಲ್ಲಿದ್ದಾಗ ನೆನೆದನು. “ಛೇಛೇ ಇದನ್ನು ಇನ್ನು ಸಹಿಸಿ ಉಪಯೋಗವಿಲ್ಲ. ಬೀರಬಲ್ಲನನ್ನು ಬಗ್ಗು ಬಡಿದೆ ತೀರಬೇಕು” ಎಂದು ಯೋಚಿಸುತ್ತಿರುವಾಗಲೇ ಸಭಾಗೃಹ ಪ್ರವೇಶಿಸಿದನು. ಬೀರಬಲ್ಲನು ಎದ್ದು ನಿಂತು ಕುರ್ನಿಸಾತು ಮಾಡಿ ಮತ್ತೆ ತನ್ನ ಸ್ಥಾನವನ್ನಲಂಕರಿಸಿದನು.
“ಬೀರಬಲ್ಲ! ನೀನು ಮಹಾ ಪಂಡಿತನೆಂದು ಪ್ರಖ್ಯಾತನಾಗಿರುವಿಯಲ್ಲವೇ?”
ಬಾದಶಹನು ಏಕೋ ಇಂದು ವಿಚಿತ್ರನಾಗಿರುವನೆಂದು ಬೀರಬಲ್ಲನು. ಕಂಡುಕೊಂಡನು. “ಅದೆಲ್ಲವೂ ಮಹಾಸ್ವಾಮಿಗಳ ಪ್ರಸಾದ.”
ಇರಲಿ, ನಾನು ನಿನಗೆ ನಾಲ್ಕು ಪ್ರಶ್ನೆಗಳನ್ನು ಕೇಳುವೆನು, ಅವುಗಳಿಗೆ ನೀನು ಒಂದೇ ವಾಕ್ಯದಲ್ಲಿ ಉತ್ತರ ಹೇಳಬೇಕು. ಅಂದರೆ ನಿನ್ನ ಪಾಂಡಿತ್ಯಕ್ಕೆ ಬೆಲೆ ಇದೆ. ಇಲ್ಲದೇ ಹೋದರೆ…..”
“ಗೊತ್ತೇ ಇದೆಯಲ್ಲ ರಾಜ್ಯದಿಂದ ಹೊರಗೆ ಹಾಕಿಸುವದು.”
“ಸರಿ, ನಿನಗೆ ಗೊತ್ತಾದಂತಾಯಿತು. ಕೇಳು ಲಕ್ಷ್ಯಗೊಟ್ಟು ಕೇಳು, ಎಚ್ಚರದಿಂದ ಉತ್ತರ ಹೇಳು.”
1) ಎಲೆಗಳು ಏಕೆ ಕೊಳೆಯುತ್ತವೆ?
2) ಕುದುರೆಯು ಒಮ್ಮೊಮ್ಮೆ ಏಕೆ ಚೆನ್ನಾಗಿ ನಡೆಯುವುದಿಲ್ಲ?
3) ಬಿತ್ತಿದ ಬೆಳೆಯು ಚೆನ್ನಾಗಿ ಬಾರದ ಕಾರಣವೇನು?
4) ಕಲಿತ ವಿದ್ಯೆಯು ಮರೆಯುವ ಕಾರಣವೇನು?
“ಈ ನಾಲ್ಕು ಪ್ರಶ್ನೆಗೆ ಒಂದೇ ವಾಕ್ಯದಲ್ಲಿ ಉತ್ತರಬೇಕು.”
ಬೀರಬಲ್ಲನು ಕ್ಷಣಹೊತ್ತು ವಿಚಾರಿಸಿ ಮುಗುಳು ನಗೆ ನಕ್ಕು ಎದ್ದು ನಿಂತು ಉತ್ತರಿಸಿದನು. “ಮಹಾರಾಜ ತಿರುವುವಿಕೆಯು ಇಲ್ಲದಿದ್ದುದೇ ಇದಕ್ಕೆ ಕಾರಣ.”
“ಏನು ಹೀಗೆಂದರೆ?”
“ಕುದಾವಂದರು ಚಿತ್ತೈಸಬೇಕು. 1) ದಿನಾಲು ಎಲೆಗಳನ್ನು ತಿರುಗಿಸಿ ಹಾಕದೆ ಹಾಗೆಯೇ ಇಟ್ಟರೆ ಅವು ಕೊಳೆತು ಹೋಗುವವು. 2) ಆಗಿಂದಾಗ ಲಗಾಮಿನಿಂದ ತಿರುಗಿಸದಿದ್ದರೆ ಕುದುರೆಗಳು ಅಡ್ಡಾದಿಡ್ಡಿ ಹೋಗುವುದುಂಟು
3) ‘ಪ್ರತಿ ವರ್ಷವೂ ಹೊಲದಲ್ಲಿ ಮಣ್ಣನ್ನು ತಿರುವಿ ತಿರುವಿ ಹಾಕದಿದ್ದರೆ.
ಬೆಳೆಯು ಚೆನ್ನಾಗಿ ಬರುವುದಿಲ್ಲ. 4) ಕಲಿತದ್ದನ್ನು ದಿನಾಲು ಆಗಾಗ ತಿರುವಿ
(ಮೆಲುಕು) ಹಾಕದಿದ್ದರೆ ಮರೆತು ಹೋಗುವದು.” ಬಾದಶಹನು ಮೆತ್ತಗಾದನು. ಸಂತುಷ್ಟನಾದನು. ಪಂಡಿತರ ಗುಂಪು ಆಸ್ಥಾನದಲ್ಲಿ ಬೀರಬಲ್ಲನಿಗೆ ಜಯಜಯಕಾರ ಮಾಡಿತು. ಅಕಬರನು ಬೀರಬಲ್ಲನಿಗೆ ಅದರ ಸತ್ಕಾರ ಮಾಡಿ ಮರ್ಯಾದೆಯಿಂದ ಮನೆಗೆ ಕಳಿಸಿದನು.
ಮುಂದಿನ ಭಾಗ ಓದಿ…