ಅಕ್ಬರ್ ಬೀರಬಲ್ ಕಥೆಗಳು, ಮಕ್ಕಳಿಗೆ ನೈತಿಕ ಪಾಠ-11

ಅಕ್ಬರ್ ಬೀರಬಲ್ ಕಥೆಗಳು, ಮಕ್ಕಳಿಗೆ ನೈತಿಕ ಪಾಠ-11

ಮಲೆಯಾಳದಲ್ಲಿ PART -1

ಅಕಬರನ ರಾಜ್ಯ ವಿಸ್ತರಣೆಯು ಉತ್ತರ ಹಿಂದುಸ್ತಾನದಲ್ಲಿ ಕೆಲವು ಭಾಗವಾಗಿದ್ದರೂ ಇವನ ಕೀರ್ತಿ ಮಾತ್ರ ಅಖಿಲ ಭಾರತವನ್ನು ವ್ಯಾಪಿಸಿತ್ತು.

ಅವನು ವಿದ್ಯಾಭಿಮಾನಿಯೆಂದೂ, ಪಂಡಿತರಿಗೆ ಆಶ್ರಯದಾತನೆಂದೂ ಸಕಲ ಕಲಾವಿದರ ಪ್ರೋತ್ಸಾಹಿಕನೆಂದೂ, ಸಕಲ ಧರ್ಮವನ್ನು ಸಮಾನ ರೀತಿಯಲ್ಲಿ ನೋಡುವವನು ಎಂದೂ ಖ್ಯಾತಿವೆತ್ತಿದ್ದನು.

ಮಲೆಯಾಳಂ ಅರಸನು ಇದನ್ನು ಪರೀಕ್ಷಿಸಬೇಕೆಂದು ನಿಶ್ಚಯಿಸಿ, ಒಂದು ಪತ್ರ ಬರೆದು ಕುದುರೆಯ ಸವಾರನನ್ನೂ, ತನ್ನ ಪ್ರತಿನಿಧಿಯನ್ನೂ ಅಕಬರನ ಆಸ್ಥಾನಕ್ಕೆ ಕಳುಹಿಸಿದನು. ಆಸ್ಥಾನದಲ್ಲಿ ಬಾದಶಹನು ವಿರಾಜಮಾನನಾಗಿದ್ದಾಗ ಸೇವಕನೊಬ್ಬನು ಬಂದು ಮುಜುರೆ ಮಾಡಿ “ಆಗಲಿ ಒಳಗೆ ಬಿಡು” ಎಂದಪ್ಪಣೆಯಾಯಿತು.

ಈರ್ವರೂ ಒಳಗೆ ಬಂದರು. ಅವರ ಪತಾಕೆ ಮೊದಲಾದ ರಾಜ ಚಿನ್ನವನ್ನು

ಕಂಡು ಬಾದಶಹನು ಕೂಡಲೇ ಅರಿತುಕೊಂಡನು. ಅವರು ಮಲೆಯಾಳದವರೆಂದು ರಾಜನಿಗೆ ತೋರುವ ಎಲ್ಲ ಮಾನ-ಮರ್ಯಾದೆಗಳನ್ನೂ ತೋರಿ ಪ್ರತಿನಿಧಿಗೆ ಸ್ವಾಗತಿಸಿ, ನಜರಾಣಿ ಮೊದಲಾದವುಗಳನ್ನು ಅರ್ಪಿಸಿ ಅವರು ಬಂದ ಕಾರಣವನ್ನು ಕೇಳಿದನು. ಅವರು ತಮ್ಮ ರಾಜನಿಂದ ತಂದ ಪತ್ರವನ್ನು ಅಕಬರನಿಗೆ ಅರ್ಪಿಸಿದರು. ಅಕಬರನು ಆ ರೇಶಿಮೆಯ ಚೀಲವನ್ನು ಕೈಯ್ಯಲ್ಲಿ ತೆಗೆದುಕೊಂಡು ಬಹಳ ಹೊತ್ತು ಯೋಚಿಸಿದನು. ಕ್ಷೇಮ-ಸಮಾಚಾರದ್ದಿರಬಹುದೇ? ಯುದ್ಧಕ್ಕೆ ಆಹ್ವಾನವಿರ ಬಹುದೇ? ಏನಾದರೂ ನೋಡಬೇಕಲ್ಲವೇ? ಎಂದು ಜರದಿಂದ ಯುಕ್ತವಾದ ರೇಶಿಮೆಯ ಗೊಂಡೆಯಿಂದ ಸರಗಂಟನ್ನು ಎಳೆದುಬಿಟ್ಟನು. ಒಳಗಿಂದ ಪತ್ರವನ್ನು ತೆಗೆದು ಓದಲು ಮಹಾಪ್ರಧಾನಿಗೆ ಕೊಟ್ಟನು. ಮಹಾಪ್ರಧಾನನು ಅದನ್ನು ಓದಿದನು. ಮುಖ ವಿಕಸಿತವಾಯಿತು. “ಮಹಾಪ್ರಭೋ ಇದರಲ್ಲೇನೊ ಮಹತ್ವದ್ದಿಲ್ಲ.

ತಾವು ವಿದ್ಯಾವಂತರಿಗೆ ಮಹಾ ಆಶ್ರಯದಾತರೆಂದು ಮಲೆಯಾಳದ ಮಹಾರಾಜರು ತಿಳಿದಿದ್ದಾರೆ. ಆದಕಾರಣ ನಮ್ಮ ರಾಜ್ಯದಲ್ಲಿಯ ವಿರೋಧಾಭ್ಯಾಸವುಳ್ಳ ಅತ್ಯಂತ ಶ್ರೇಷ್ಠ ಜನರನ್ನು ಕಳಿಸಿಕೊಡಲು ಕೇಳಿಕೊಂಡಿದ್ದಾರೆ. ಅವರನ್ನು ಮಲೆಯಾಳದ ಮಹಾರಾಜರು ತಮ್ಮ ಆಸ್ಥಾನದಲ್ಲಿಟ್ಟುಕೊಳ್ಳುವಂತೆ” ಎಂದನು.

ಅಕಬರನು ಎಲ್ಲ ಪಂಡಿತ ವರ್ಗದವರನ್ನು ನೋಡಿದನು. ಇದರ ಅರ್ಥವೇ ಎಷ್ಟೋ ಜನರಿಗಾಗಲಿಲ್ಲ. ಅಂದಮೇಲೆ ಅಂಥ ಜನರನ್ನು ಹುಡುಕುವದು. ದೂರವೇ ಉಳಿಯಿತು. ಸರದಾರರನ್ನೂ ಮಾಂಡಲೀಕರನ್ನೂ, ಯೋಧರನ್ನೂ ಕವಿಗಳನ್ನೂ ನರ್ತಕಿಯರನ್ನೂ ವಾರಾಂಗನೆಯರನ್ನೂ ನೋಡಿದನು. ಯಾರನ್ನೂ ನೋಡಿದರೂ ತಲೆ ಕೆಳಗೇ ಹಾಕುತ್ತಿದ್ದರು. ಯಾರೂ ಉತ್ಸಾಹದಿಂದ ಮುಖವೆತ್ತಿ ಮುಂದೆ ಬರಲಿಲ್ಲ.

ಕಡೆಗೆ ಬೀರಬಲ್ಲನ ಸರತಿ ಬಂದಿತು. “ಏನಪ್ಪ ಬೀರಬಲ್ಲ, ಇದೇನು? ಮಾನಹೋಗುವ ಪ್ರಸಂಗವೇ ಬಂದೊದಗಿತಲ್ಲ? ಯುದ್ಧದ ಸೋಲಿನ ಹೊಡೆತಕ್ಕಿಂತ ಬಲವಾದ ಪೆಟ್ಟನ್ನು ಈ ಮಲೆಯಾಳೀ ಅರಸರು ನನಗೆ ಕೊಡುತ್ತಿರುವನು. ಯುದ್ಧದಲ್ಲಿ ಸೋತರೆ ಇಂದಿಲ್ಲ ನಾಳೆಯಾದರೂ ದಂಡೆತ್ತಿ ಹೋಗಿ ಸೇಡು ತೀರಿಸಿಕೊಳ್ಳಬಹುದು. ಪಾಂಡಿತ್ಯದ ಸೋಲಿಗ ಶರಣಾಗತಿಯೇ ಮಾರ್ಗ, ಆತ್ಮಹತ್ಯೆಯೇ ಕೊನೆ ಮುಂದೇನು ಗತಿ?”

“ಬಾದಶಹ, ಮೊದಲು ಈ ಸರದಾರನನ್ನು ವಿಶ್ರಾಂತಿಗಾಗಿ ಅರಮನೆಗೆ ಕಳಿಸಿರಿ, ಆಮೇಲೆ ಮುಂದಿನ ಮಾತು” ಎಂದನು ಬೀರಬಲ್ಲನು.

ಮಲೆಯಾಳದ ಸರದಾರನನ್ನು ವಿಶ್ರಾಂತಿ ವಿಹಾರ ಭವನಕ್ಕೆ ಕಳಿಸಲಾಯಿತು. “ಖಾವಂದ ವಿರೋಧಾಭ್ಯಾಸವುಳ್ಳ ಜನರನ್ನು ಇಲ್ಲಿಂದ ಅಲ್ಲಿಗೆ ಒಯ್ಯುವದಕ್ಕಿಂತ ನನ್ನನನೇ ಮಲೆಯಾಳಕ್ಕೆ ಕಳಿಸಿರಿ. ನಾನು ಅವರ ರಾಜ್ಯದಲ್ಲಿಯೇ ಅಂಥವರನ್ನು ಹುಡುಕಿಕೊಟ್ಟು ತಿರುಗಿ ಬರುವೆನು. ಆದರೆ ನಾನು ಮಲೆಯಾಳಕ್ಕೆ ಹೊರಟು ಹೋದದ್ದು ಅತೀ ಗೌಪ್ಯವಾಗಿ ಇರಬೇಕು. ಇಲ್ಲದಿದ್ದರೆ ಕೆಲಸ ಕೆಟ್ಟಿತು” ಎಂದನು.

ಬಾದಶಹನಿಗೆ ಬಹಳ ಸಂತೋಷವಾಯಿತು. ಮೊಗಲ ರಾಜ್ಯದ ಗೌರವವನ್ನೇ ಕಾಪಾಡಲು ನಿಂತ ಬೀರಬಲ್ಲನಿಗೆ ಅಂದು ಬಾದಶಹನು ಅಖಂಡ ಮಾನ ಮರ್ಯಾದೆಗಳನ್ನು ತೋರಿದನು. ಬೀರಬಲ್ಲನ ಪ್ರವಾಸವು ಸುಖಕರವಾಗಲೆಂದು ಸಕಲ ವ್ಯವಸ್ಥೆಯನ್ನು ಇಡಲು ಸೇನಾಪತಿಗೆ ಆಜ್ಞಾಪಿಸಿದನು ಮಲೆಯಾಳದಲ್ಲಿದ್ದಾಗ ಅವನಿಗೆ ವೆಚ್ಚಕ್ಕೆ ಬೇಕಾಗಬಹುದಾಗ ದುಡ್ಡನ್ನು ಬೀರಬಲ್ಲನು ಕೇಳಿದಷ್ಟು ಕೊಡಲು ಖಜಾನೆದಾರನಿಗೆ ಆಜ್ಞಾಪಿಸಿದನು ಮಲೆಯಾಳದ ಸರದಾರ ಕುದುರೆ ಸವಾರರನ್ನು ಕರೆದು “ನಿಮ್ಮ ರಾಜರು ಕೇಳಿದವರನ್ನು ನಾವು ಕಳುಹುವೆವು, ನೀವು ನಿಮ್ಮ ರಾಜ್ಯಕ್ಕೆ ಹೋಗಿರಿ” ಎಂದು ಮರ್ಯಾದೆ ಪೂರ್ವಕವಾಗಿ ಕಳಿಸಿಕೊಟ್ಟನು. ಮುಂದೆ ಒಂದೆ ತಿಂಗಳಲ್ಲಿ ಬೀರಬಲ್ಲನು ಸಕಲ ವ್ಯವಸ್ಥೆಯೊಂದಿಗೆ ಮಲೆಯಾಳ ಪ್ರವಾಸ ಕೈಕೊಂಡನು. ತನಗೆ ಬೇಕಾದುದಕ್ಕಿಂತಲೂ ಹೆಚ್ಚೇ ಹಣವನ್ನು ಕೈಯ್ಯಲ್ಲಿ ತೆಗೆದುಕೊಂಡು ಸಾಗಿದನು.

ಅನೇಕ ದಿನಗಳ ಪ್ರವಾಸದ ನಂತರ ತಿರುವಾಂಕೂರನ್ನು (ತ್ರಾವಣ ಕೋರ) ಮುಟ್ಟಿದನು. ತಾನೋರ್ವ ಸಿರಿವಂತ ಪ್ರವಾಸಿಯೆಂತಲೂ ಮಲೆಯಾಳವು ಸುಖಕರ ದೇಶವೆಂದು ಕೇಳಿ ಬಂದುದೆಂತಲೂ, ಆದರಿಂದ ಇಲ್ಲಿ ವಾಸಿಸಲು ಇಚ್ಛಿಸು ವೆನೆಂತಲೂ ಹೇಳಿ ಸರಕಾರದಿಂದ ಅಪ್ಪಣೆ ಪಡೆದು ನಗರವನ್ನು ಪ್ರವೇಶಿಸಿದನು.

ಅಲ್ಲಿ ಮೊದಲು ಒಂದು ಧರ್ಮಶಾಲೆಯಲ್ಲಿಳಿದುಕೊಂಡು ಅಲ್ಲಿ ಕೆಲದಿನ ಕಳೆದು ಒಂದು ಭವ್ಯವಾದ ಮಹಲವನ್ನು ಬಾಡಿಗೆಯಿಂದ ಹಿಡಿದು ಅಲ್ಲಿ ವಾಸಿಸತೊಡಗಿದನು. ಬೀರಬಲ್ಲನಿಗೆ ಅಲ್ಲಿ ಕೆಲಸವೇ ಇಲ್ಲ, ಎಲ್ಲ ವೇಳೆಯನ್ನು ಅನು ನೃತ್ಯ ಗಾಯನ, ವಿನೋದ ಇವುಗಳಲ್ಲಿಯೇ ಕಳೆಯುತ್ತಿದ್ದನು. ಇದರಲ್ಲಿ ಭಾಗವಹಿಸಲು ಊರಿನ ಎಲ್ಲ ಪ್ರತಿಷ್ಠಿತ ಜನರನ್ನೂ, ಸರಕಾರದಲ್ಲಿಯ ಅಧಿಕಾರಿ ಗಳನ್ನೂ, ಸಿರಿವಂತ ವರ್ತಕರನ್ನೂ ಆಮಂತ್ರಿಸುತ್ತಿದ್ದನು. ಮೊದಮೊದಲು ಇವರು ಅತಿಥಿಗಳಾಗಿ ಬಂದವರು ಕಾಲ ಕಳೆದಂತೆ ಬೀರಬಲ್ಲನ ಗೆಳೆಯರಾಗತೊಡಗಿದರು. ಗೆಳೆತನದ ಸಲಿಗೆಯಿಂದ ಅವರು ಅವನಿಗೆ ಅನೇಕ ವಿವಿಧ ಪ್ರಶ್ನೆಗಳನ್ನು ಇವನ ಬಗ್ಗೆ ಕೇಳುತ್ತಿದ್ದರು. ಆದರೆ ಅವರಿಗೆಲ್ಲ ಒಂದೇ ಉತ್ತರ ಹೇಳುತ್ತಿದ್ದನು. ಕಾಶ್ಮೀರದಿಂದಾಚೆಗಿರುವ ದೇಶದ ಪ್ರಧಾನಿ ತಾನೆಂದೂ, ತನ್ನ ಹೆಂಡತಿಯು ತೀರಿದ್ದರಿಂದ ದುಃಖ ಪರಿಹಾರಾರ್ಥವಾಗಿ ಇಲ್ಲಿಗೆ ಆಗಮಿಸಿರುವೆನೆಂದೂ ಹೇಳುತ್ತಿದ್ದನು. ತನ್ನ ನಿಜವಾದ ವಿಷಯವನ್ನೂ ಯಾರಿಗೂ ಹೇಳಿಲಿಲ್ಲ.

ಈ ಕಥೆಯನ್ನು ಕೇಳಿ ಪೊಲೀಸ ಖಾತೆಯ ಮುಖ್ಯಾಧಿಕಾರಿಯೂ (ಬೀರಬಲ್ಲನ ದಿನದ ಅತಿಥಿಯೂ ಆದುದರಿಂದ) ಗೆಳೆಯನೂ ಆದ ಚಂದ್ರ ಶೇಖರನ ಬಾಯಿಯಲ್ಲಿ ನೀರೊಡಿಯಿತು. ಇಂಥ ಉಚ್ಚ ಅಧಿಕಾರಿಯ ಕೊರಳಿನಲ್ಲಿ ತನ್ನ ಸೋದರತ್ತೆಯ ಮಗಳಾದ ಅತಿ ಚೆಲುವೆಯಾದ ಯುವತಿಯನ್ನು ಹಾಕಬೇಕೆಂದು ಎಣಿಸಿದನು. ಅವಳಿಗೊಂದು ಯೋಗ್ಯವರ ಬೇಕಲ್ಲ! ಈ ಸಂಬಂಧದ ಬಗ್ಗೆ ಅನೇಕ ಯುಕ್ತಿಗಳನ್ನು ಹೆಣೆದು ಪೊಲೀಸ ಅಧಿಕಾರಿಯು ಕಡೆಗೆ ಸಾಧಿಸಿದನು. ಬೀರಬಲ್ಲನು ಅಲೌಕಿಕ ಸುಂದರಿಯನ್ನು ವಿವಾಹವಾಗಿ ಸುಖವಾಗಿ ಸಂಸಾರವನ್ನು ಹೂಡಿದನು. ಹೀಗೆ ಇರುವಾಗ ತನ್ನ ಮಲೆಯಾಳಿ ಪತ್ನಿಯ ಸ್ವಭಾವವನ್ನು ಚೆನ್ನಾಗಿ ಅಭ್ಯಸಿಸಿ ತನ್ನ

ಕೆಲಸವಾಯಿತೆಂದು ಉಬ್ಬಿದನು. ಒಂದು ದಿನ ದಯಾರಾಮನೆಂಬ ಓರ್ವ ಸಿರಿವಂತ ವ್ಯಾಪಾರಿಯಲ್ಲಿ ಹೋಗಿ “ಅಯ್ಯಾ ಶೆಟ್ಟರೇ, ನಿಮಗೊಂದು ರಹಸ್ಯವನ್ನು ಹೇಳುವೆನು, ಯಾರಿಗೂ ಹೇಳಬೇಡಿರಿ. ನಿಮ್ಮ ರಾಜನ ಮಗನಿಗೆ ನಮ್ಮ ಕಾಶ್ಮೀರದ ರಾಜಕುಮಾರಿಯನ್ನು ಕೊಡುವ ಬಗ್ಗೆ ಮಾತುಕತೆಗಾಗಿ ನಾನಿಲ್ಲಿಗೆ ಬಂದಿದ್ದೇನೆ. ಮಾತುಕತೆಗಳು ಮುಗಿದಿವೆ. ಐವತ್ತು ಸಾವಿರ ವರಹ ವರದಕ್ಷಿಣೆ ಗೊತ್ತು ಮಾಡಿ ಅದನ್ನು ಈಗಲೇ ಕೊಡಲು ನಿಮ್ಮ ರಾಜನು ಕೇಳಿಕೊಂಡಿದ್ದಾನೆ. ಇಂದೇ ಆ ವರಹ ಕೊಡುವ ಕಡೆಯ ದಿನ. ನಾನು ನನ್ನ ದೇಶಕ್ಕೆ ಕುದುರೆ ಸವಾರನನ್ನು ಕಳಿಸಿದ್ದೇನೆ. ಅವನು ಏಕೋ ಇಂದು ಬಂದಿಲ್ಲ. ಈಗ ಸಧ್ಯಕ್ಕೆ ನನ್ನಲ್ಲಿ ನಾಲ್ವತ್ತು ಸಾವಿರ ಅದೆ. ಇನ್ನೂ ಹತ್ತು ಸಾವಿರ ವರಹ ಬೇಕು, ಸಾತ್ವಿಕರಾದ ತಾವು ಈಗ ನನಗೆ ಸಹಾಯ ಮಾಡಿದರೆ ಕುದುರೆ ಸವಾರ ತಿರುಗಿ ಬಂದ ಕೂಡಲೇ ನಿಮ್ಮ ಹಣ ನಿಮಗೆ ಕೊಡುವೆನು. ವಿವಾಹವಾದ ಮೇಲೆ ನಿಜ ಸಂಗತಿಯನ್ನು ಎರಡೂ ಸರಕಾರಕ್ಕೆ ನಿವೇದಿಸಿ ಅವರಿಂದ ಹೇರಳ ಹಣವನ್ನು ಬಹುಮಾನವಾಗಿ ಕೊಡಿಸುವೆನು’ ಎಂದನು.

ಪಕ್ಕಾ ವ್ಯವಹಾರಿಯಾದ ದಯಾರಾಮನಿಗೆ ಈ ಮಾತು ಸರಿಕಂಡಿತು. ನನ್ನ ಭಾಗ್ಯ ತಿರುಗುವ ಲಕ್ಷಣವಿದೆ ಎಂದು ಕಂಡುಕೊಂಡು ತಿರುಗಿ ಒಂದು ಶಬ್ದ ಕೂಡ ನುಡಿಯದೇ ಒಳಗೆ ಹೋಗಿ ತಿಜೋರಿಯಲ್ಲಿಯ ಹತ್ತು ಸಾವಿರ ಮೊಹರಿನ ಗೋಣಿ ಚೀಲವನ್ನೇ ಬೀರಬಲ್ಲನ ಮುಂದಿರಿಸಿದನು. ಬೀರಬಲ್ಲನು ಕೃತಜ್ಞತೆಯಿಂದ ನಮಸ್ಕರಿಸಿ ಹಣ ಸಹಿತ ಹೊರಟು ಹೋದನು.

ಮರುದಿನ ಅದೇ ಊರಲ್ಲಿಯ ಶಾಯಕಾಕ್ಕನಂತಿರುವ ಲೇವಾದೇವಿ ಮಾಡುತ್ತಿರುವ ಮಥುರಾದಾಸನೆಂಬ ಸಾಹುಕಾರನಲ್ಲಿ ಹೋಗಿ ಬೀರಬಲ್ಲನು ಇದೇ ಕಥೆಯನ್ನು ಹೇಳಿ ಹತ್ತು ಸಾವಿರ ಮೊಹರುಗಳನ್ನು ಕೇಳಿದನು ಆದರೆ ಮಥುರಾದಾಸನು ಅವನಿಗೆ ಇಲ್ಲ ಸಲ್ಲದ ಪ್ರಶ್ನೆಗಳನ್ನು ಮಾಡಿದನು:

“ನಿಮಗೆ ಏನೆಂದು ಸಾಲ ಕೊಡಬೇಕು? ನೀವು ಯಾರು ಏನು ಆಸ್ತಿ ಇದೆ? ಏನನ್ನು ತಂದು ಆಡುವು ಇಡುವಿರಿ? ನೀವು ತಿರುಗಿ ಕೊಡುವ ಬಗೆ ಹೇಗೆ? ಕಾಶ್ಮೀರದಿಂದ ಒಂದು ವೇಳೆ ಹಣ ಬರದಿದ್ದರೆ ನನ್ನ ಗತಿಯೇನು? ಆದರೂ ತಾವು ದೊಡ್ಡವರು, ತಮ್ಮ ಮಾತಿಗೆ ಬೆಲೆಕೊಟ್ಟು ಸಾಲ ಕೊಡುವೆ ಆದರೆ ವರುಷದ ಬಡ್ಡಿಯನ್ನು ನೂರಕ್ಕೆ ವರ್ಷಕ್ಕೆ ಇಪ್ಪತ್ತೈದರಂತೆ ಈಗಲೇ ಮುರಕೊಂಡು ಕೊಡುವೆನು, ಇದಕ್ಕೆ ನಿಮ್ಮ ಒಪ್ಪಿಗೆಯೇ?” ಎಂದನು.

ಇದಕ್ಕೆ ಒಪ್ಪಿ 7500 ವರಹಗಳನ್ನು ತೆಗೆದುಕೊಂಡು ಬೀರಬಲ್ಲನು ಮನೆಗೆ ಬಂದನು.

ಇನ್ನೊಂದು ಕೆಲಸ ಮಾಡುವದು ಉಳಿಯಿತೆಂದು ಲೆಕ್ಕ ಹಾಕಿ ಅದೇ ರಾತ್ರಿ ಊರ ಪ್ರಸಿದ್ಧ ವೇಶ್ಯಯಾದ ರೂಪವತಿ ಎಂಬವಳಲ್ಲಿಗೆ ತಾನು ಬರುವೆನೆಂದು ಸುದ್ದಿ ಕಳಿಸಿ ಐದು ಸಾವಿರ ವರಹಗಳನ್ನು ಕಳಿಸಿದನು. ರೂಪವತಿಗೆ ಬಹಳ
ಸಂತೋಷವಾಯಿತು. ಬೀರಬಲ್ಲನಂಥ ಶ್ರೇಷ್ಠ ಬ್ರಾಹ್ಮಣನು ತನ್ನಲ್ಲಿಗೆ ಬರುವನೆಂದು ಬಳಿಕ ತಾನು ಈ ಜನ್ಮದಲ್ಲಿಯೇ ಪಾವನಳಾದೆನೆಂದು ಬಗೆದಳು. ಅವನ ಸ್ವಾಗತಕ್ಕಾಗಿ ಸರ್ವ ಸಿದ್ಧತೆಯನ್ನು ಮಾಡಿಟ್ಟು ಅಣೆಯಾದಳು ರಾತ್ರಿ ಎಷ್ಟು ಹೊತ್ತು ಕಾದರೂ ಬರಲೇ ಇಲ್ಲ. ಹಾಗೆಯೇ ಆರಾಮ ಕುರ್ಚಿಯಲ್ಲಿ ಒರಗಿದರಾಯಿತೆಂದು ಕುಳಿತಳು, ನಿದ್ರೆಯೂ ಮೀರಿ ಬಂದುಬಿಟ್ಟಿತು.

ಸರಿಯಾಗಿ ರಾತ್ರಿ ಹನ್ನೆರಡು ಆಗಿ ಹೋಗಿರಬಹುದು, ಬೀರಬಲ್ಲನು ಬಂದನು, ಬಾಗಿಲನ್ನು ಬಡಿದನು. ರೂಪವತಿಗೆ ಎಚ್ಚರವಾಗಲಿಲ್ಲ. ಬಹಳ ಹೊತ್ತು ಕಾದು ಅವಳನ್ನು ಕೊನೆಗೆ ಎಚ್ಚರಿಸಿದನು. ಅವಳು ಬಂದು ಬಾಗಿಲನ್ನು ತೆರೆದು ಸ್ವಾಗತಿಸಿದಳು. ಆದರೆ ಬೀರಬಲ್ಲನಿಗಿದು ಅಪಮಾನವಾದಂತಾಯಿತು. ಅವಳಿಗೆ ಬಾಯಿಗೆ ಬಂದಂತೆ ಶಪಿಸಿದನು. ಒಳಗೆ ಮತ್ತೊಬ್ಬ ವಿಟಪುರುಷನಿರಬೇಕೆಂದು ಅವಳನ್ನು ಜರಿದನು. ಅವಳು ತಪ್ಪಾಯಿತೆಂದು ಎಷ್ಟು ಹೇಳಿಕೊಂಡರೂ ಕೇಳಲಿಲ್ಲ, ಅವಳ ಮನೆಯಲ್ಲಿ ಒಂದು ಕ್ಷಣ ಕೂಡದೇ ಹೊರಬಿದ್ದನು.

ಮಾರನೆಯ ದಿನ ಮುಂಜಾನೆ ಬೀರಬಲ್ಲನು ಪೇಟೆಗೆ ಹೋಗಿ ಒಂದು ದೊಡ್ಡ ಕಲ್ಲಂಗಡಿಯ ಹಣ್ಣು ತಂದು, ಅದನ್ನು ಹೆಚ್ಚಿ ಅದಕ್ಕೆಲ್ಲ ಕುಂಕುಮ ಸವರಿ ಮೇಲೊಂದು ಬಿಳಿ ಬಟ್ಟೆ ಕಟ್ಟಿ ಧಾವಿಸುತ್ತ ಮನೆಗೆ ಬಂದನು.

“ಸಾದ್ವಿ ಎಲ್ಲಿರುವಿ, ಎಲ್ಲಿರುವಿ, ಬಾ ಬೇಗ ಬಾ, ತೆರೆದ ಬಾಗಿಲನ್ನು ಬೇಗ ಹಾಕು.”

“ಏಕೆ ಏಕೆ? ಏನಾಯಿತು” ಎಂದು ಕೇಳುತ್ತಲೇ ಬೀರಬಲ್ಲನ ಹೆಂಡತಿಯು ತೆರೆದ ಬಾಗಿಲನ್ನು ಮುಚ್ಚಿ ಅಗಳಿ ಜಡಿದಳು.

“ನೋಡು ರಮಾ ಇದು ರಾಜಕುಮಾರನನ ರುಂಡ ಅವನು ನನಗೆ ವಾದಿಸಿದನು. ಅದಕ್ಕಾಗಿ ಶಿರಚ್ಛೇದ ಮಾಡಿದ್ದೇನೆ. ಇದನ್ನು ಕಟ್ಟಿಗೆಯ’ ಪೆಟ್ಟಿಗೆಯಲ್ಲಿ ಬಚ್ಚಿಡುವೆನು. ಈ ವಿಷಯ ಯಾರಿಗೂ ಹೇಳಬೇಡ. ಇದು ಹೊರಬಿದ್ದರೆ ನನ್ನ ಶಿರಸ್ಸನ್ನು ತೆಗೆದುಕೊಳ್ಳುವರು ಜೋಕೆ” ಎನ್ನುತ್ತ ಅದನ್ನು ಕಟ್ಟಿಗೆಯ ಪೆಟ್ಟಿಗೆಯಲ್ಲಿಟ್ಟು ಭದ್ರವಾದ ಕೀಲಿಯನ್ನು ಜಡಿದನು.

“ಇನ್ನು ನನ್ನನ್ನು ಉಳಿಸಿಕೊಳ್ಳುವ ವ್ಯವಸ್ಥೆಗಾಗಿ ಹೋಗಿಬರುವೆನು” ಎಂದವನೇ ಹೊರ ಹೊರಟನು. ಮುಂದೆ ಕೆಲವೇ ನಿಮಿಷಗಳಲ್ಲಿ ಚಂದ್ರಶೇಖರನು ತನ್ನ ಸೊಸೆಯನ್ನು ಕಾಣಲು ಬಂದನು.

ರಮೆಯು ಅವನನ್ನು ಬರಮಾಡಿಕೊಂಡು ಹರಟೆ ಹೊಡೆಯುತ್ತ ಕುಳಿತಳು. ಮನಸ್ಸು ಸ್ವಾಸ್ಥ್ಯವಿರಲಿಲ್ಲ. ಅವನ ಪ್ರಶ್ನೆಗಳಿಗೆ ಯದ್ವಾತದ್ವಾ ಉತ್ತರಗಳು ಸಿಗತೊಡಗಿದವು. ಕಡೆಗೆ ಪೊಲೀಸ ಖಾತೆಯ ಚಂದ್ರಶೇಖರನು ಇದರಲ್ಲಿ ಏನೋ ಗದ್ದಲವಿರಬೇಕೆಂದು ಬಗೆದು ಕೇಳಿದನು.
“ಏಕೆ ತಂಗೀ ಏನಾಗಿದೆ? ಏಕಿಷ್ಟು ಗಾಬರಿ?”

“ಏನಿಲ್ಲ ಮಾವಾ, ಮತ್ತೆ ಯಾರಾದರೂ ಏನಾದರೂ ನಿನಗೆ ಹೇಳಿದರೇನು?

“ಯಾರ ಬಗ್ಗೆ? ಯಾರ ಬಗ್ಗೆ? ನಿನ್ನ ಬಗ್ಗೆ ಏನು?”

“ನನ್ನ ಬಗ್ಗೆ ಅಲ್ಲ, ಆರ್ಯಪುತ್ರನ ಬಗ್ಗೆ”

“ಇಲ್ಲ ಏನೂ ಹೇಳಿಲ್ಲ, ಏಕೆ ಏನಾಗಿದೆ?”

“ಏನೂ ಆಗಿಲ್ಲ. ಅವರದು ಸಿಟ್ಟಿನ ಸ್ವಭಾವ. ಅದರದೇ ಲಾಭ ತೆಗೆದುಕೊಂಡು, ಇವರು ರಾಜಪುತ್ರನ ಕೊಲೆ ಮಾಡಿದನೆಂಬ ವಾರ್ತೆ ನಿನಗೆ ಬಂದಿತೇನೋ ಅದಕ್ಕಾಗಿಯೇ ನೀನು ಇಲ್ಲಿಗೆ ಬಂದಿಯೇನೋ ಎಂಬ ಭಯ ನನಗೆ.”

“ಛೇ ಛೇ ಇಲ್ಲ ಆದರೆ ಈ ಸುದ್ದಿ ನಿನಗಾರು ಹೇಳಿದರು? ಎಲ್ಲಿರುವನು ನಿನ್ನ ಆರ್ಯಪುತ್ರ?”

“ಯಾರೋ ಹೇಳಲಿಲ್ಲ. ಇದು ನನ್ನ ಕಲ್ಪನೆ, ಸುಮ್ಮನೇ ಗಾಬರಿ,”

“ಹುಚ್ಚಿ ಏಕೆ ಗಾಬರಿಯಾಗುವೆ? ನಿನ್ನ ಆರ್ಯಪುತ್ರನಲ್ಲಿ?”

“ಅವರು ಅದರ ಬಂದೊಬಸ್ತಿಗಾಗಿ ಹೋಗಿದ್ದಾರೆ.: ಅಲ್ಲಲ್ಲ ಹೋಗಿರಬಹುದು… ಅಲ್ಲಲ್ಲ ಇಲ್ಲಿಯೇ ಎಲ್ಲಿಯೋ ಹೋಗಿ ಬರುವೆನೆಂದರು ಅಥವಾ ನಿನ್ನ ಮನೆಗೆ ಹೋದಂತಾಯಿತು..

ಚಂದ್ರಶೇಖರನು ಕೂಡಲೇ ಗ್ರಹಿಸಿದನು. ರಮಾ ಹೇಳಿದಂತೆ ರಾಜಕುಮಾರನು. ಆಹುತಿ ಆಗಿರಲೇಬೇಕು. ಈ ಸುದ್ದಿಯು ರಾಜನಿಗೆ ಹೇಳಿ ಬೀರಬಲ್ಲನಿಗೆ ದಂಡಿಸಿದರೆ ತನಗೆ ನಿಜವಾಗಿಯೂ ಮುಖ್ಯ ಸೇನಾಧಿಪತ್ಯ ಸಿಕ್ಕೇತೆಂದು ನೆನೆದು ಸೊಸೆಯ ಅಪ್ಪಣೆ ಪಡೆದು ಎದ್ದನು.

“ಮಾವಾ ಈ ವಿಷಯ ಯಾರ ಮುಂದೂ ಹೇಳಬೇಡ, ನೀನು ನನ್ನವನೆಂದು ನಿನಗೆ ಹೇಳಿದೆ. ನೀನೇ ಅವರನ್ನು ಕಾಪಾಡು.”

“ಛೇ ಛೇ, ಹೆರವರಿಗೆ ಹೇಳುವದುಂಟೇ” ಎನ್ನುತ್ತಲೇ ಚಂದ್ರಶೇಖರನು ಹೊರಟು ಹೋದನು.

ಪೊಲೀಸ, ಪೊಲೀಸ ಖಾತೆಯವರಿಗೆ ಹೃದಯವೆಂಬುದಿಲ್ಲ ಎನ್ನುವ ಮಾತು ಸುಳ್ಳಲ್ಲ. ಬೀರಬಲ್ಲನ್ನು ಹಿಡಿದು ಅವನ ರುಂಡ ಹಾರಿಸಿ ತನ್ನ ಸೊಸೆಯ ಮುಂಡನವಾದರೂ ಆಗಲಿ, ತಾನು ಸೇನಾಧಿಪತಿ ಸ್ಥಾನಕ್ಕೆ ಬರಬೇಕೆಂಬ ಉಬ್ಬಿನ ಅಭಿಲಾಷೆಯ ಮಬ್ಬಿನಲ್ಲಿ ರಾಜಸ್ಥಾನಕ್ಕೆ ಚಂದ್ರಶೇಖರನು ಜಿಗಿದನು. ಅಲ್ಲಿ ಮಹಾಪ್ರಧಾನಿಗೆ ಈ ಸುದ್ದಿಯನ್ನು ಅರುಹಿ “ರಾಜಕುಮಾರನ ಕೊಲೆ” ಈ ಸ್ವರ ಕೇಳಿದ ಕೂಡಲೇ ಮಂತ್ರಿಯ ಬುದ್ಧಿಯೂ ತಪ್ಪಿಹೋಯಿತು. ಯಾವ ವಿಚಾರವನ್ನೂ ಮಾಡದೇ ಮಹಾರಾಜನಿಗೆ ಇದನ್ನು ಅರುಹಿದನು. ಮಹಾರಾಜನು ಶೋಕಿಸುತ್ತ ತನ್ನ ಬುದ್ದಿಯನ್ನೇ ಕಳೆದುಕೊಂಡನು. ಮಹಾರಾಜನಿಗೆ ನೂರಾರು ಹೆಂಡಂದಿರರಿದರು.

ಮುಂದಿನ ಭಾಗ ಓದಿ…

Leave a Comment

Comments

No comments yet. Why don’t you start the discussion?

    Leave a Reply