ಅಕ್ಬರ್ ಬೀರಬಲ್ ಕಥೆಗಳು, ಮಕ್ಕಳಿಗೆ ನೈತಿಕ ಪಾಠ-16

ಅಕ್ಬರ್ ಬೀರಬಲ್ ಕಥೆಗಳು, ಮಕ್ಕಳಿಗೆ ನೈತಿಕ ಪಾಠ-16

ಅರವತ್ತು ದಿವಸಗಳ ತಿಂಗಳು

ಅಕಬರ ಬಾದಶಹನ ದಂಡಯಾತ್ರೆಯು ಎಲ್ಲೆಲ್ಲಿಯೂ ಯಶಸ್ಸನ್ನು ದೊರಕಿಸಿತು. ಕೆಲಕೆಲವು ಕಡೆ ಕೇವಲ ದೂತರಿಂದ ಚಿಕ್ಕಪುಟ್ಟ ರಾಜರಿಗೆ ಪತ್ರ ಬರೆದು ಕೂಡಲೇ ಅವರು ಅವನ ಚಕ್ರಾಧಿಪತ್ಯವನ್ನು ಒಪ್ಪಿ ಶರಣಾಗತರಾಗಿ ಕಪ್ಪು ಕಾಣಿಕೆಗಳನ್ನು ಅರ್ಪಿಸಿದರು. ಹೀಗಾದುದರಿಂದ ಬಾದಶಹನು ತುಸು ಗರ್ವಿಷ್ಠನಾದನು. ತಾನು ಸರ್ವತಂತ್ರ ಸ್ವತಂತ್ರನೆಂಬ ಮದವು ಏರಿತು ಹೀಗಾಗಲಿಕ್ಕೆ ಅವನ ಸುತ್ತಲಿನವರೂ ಕಾರಣರು.”

ಒಂದು ದಿನ ಬಾದಶಹನ ತಲೆಯಲ್ಲಿ ಒಂದು ವಿಚಾರ ಮೂಡಿತು. ಹನ್ನೆರಡು ತಿಂಗಳ ವರುಷವನ್ನು ಆರು ತಿಂಗಳಲ್ಲಿಯೇ ಮುಗಿಸಬೇಕು ಅಂದರೆ ಎಣಿಸಲಿಕ್ಕೆ ಹಗುರಾದೀತು ಎಂದು.

“ಬೀರಬಲ್ಲ ನಾನೊಂದು ಹೊಸ ಯೋಜನೆ ತಯಾರಿಸಿದ್ದೇನೆ, ಅದನ್ನು ನೀನು ಒಪ್ಪಲೇಬೇಕು.”

“ಆಗಲಿ ಮಹಾಪ್ರಭೋ, ಏನದು ಹೇಳೋಣವಾಗಲಿ.”

“ಮೂವತ್ತು ದಿವಸಗಳಿಂದ ಒಂದು ತಿಂಗಳನ್ನು ಮಾಡಿ ವರುಷಕ್ಕೆ ಹನ್ನೆರಡು ತಿಂಗಳೆಂದು ನಮ್ಮ ಪೂರ್ವಜರು ತಯಾರಿಸಿದ್ದು ಅಷ್ಟೊಂದು ಸರಿ ಕಾಣುವುದಿಲ್ಲ; ಆದುದರಿಂದ ಈಗಿನ ಎರಡು ತಿಂಗಳುಗಳನ್ನು ಒಟ್ಟು ಕೂಡಿಸಿ ಅರವತ್ತು ದಿವಸಗಳಿಗೆ ಒಂದು ತಿಂಗಳೆಂದು ಲೆಕ್ಕ ಹಾಕಿ ವರುಷಕ್ಕೆ ಆರು ತಿಂಗಳೆಂದು ಹೊಸ ಪಂಚಾಂಗ ಬರೆಸಬೇಕೆಂದಿದ್ದೇನೆ; ಇದು ನನ್ನ ಆಜ್ಞೆ ಏನೆನ್ನುವಿ?'”

“ಮಹಾರಾಜರ ಆಜ್ಞೆ ಶಿರಸಾಮಾನ್ಯವಿದೆ, ಆದರೆ ಒಂದು ಮಾತು ಜನರಿಗೆ ಇದು ತಿಳಿಯುವ ಬಗೆ ಹೇಗೆ? ಹಿಂದಿನವರು ತಮ್ಮ ಪಾಂಡಿತ್ಯದ ಪ್ರಭಾವ ದಿಂದಾಗಲೀ ಅಧಿಕಾರದ ದರ್ಪದಿಂದಾಗಲೀ ತಿಂಗಳುಗಳನ್ನು ಮಾಡಲಿಲ್ಲ. ಸೃಷ್ಟಿ ನಿಯಮಗಳನ್ನು ಅನುಸರಿಸಿ ಮಾಡಿದ್ದಾರೆ. ಹದಿನೈದು ದಿನ ಬೆಳದಿಂಗಳೂ ಹದಿನೈದು ದಿನ ಕತ್ತಲೆಯ ದಿನವೂ ಎಂದು ಲೆಕ್ಕ ಹಾಕಿ ಅಮವಾಸ್ಯೆಗೆ ತಿಂಗಳು ಮುಗಿಯಿತೆಂದೂ ಹೊಸ ತಿಂಗಳು ಪ್ರಾರಂಭವಾಯಿತೆಂತಲೂ ಹೇಳಿ, ವರುಷಕ್ಕೆ ಹನ್ನೆರಡು ತಿಂಗಳು ಲೆಕ್ಕಮಾಡಿ ಮುಗಿಸಿದರು. ನೀವು ಹೇಗೆ ಮಾಡುವಿರಿ ಹೇಳಿರಿ ನೋಡೋಣ.”

“ನಮ್ಮ ಹೊಸ ಲೆಕ್ಕದ ಪ್ರಾರಂಭವು ಶುದ್ಧ ಪ್ರತಿಪದೆಯಿಂದ ಆರಂಭವಾಗುವದು, ಅನಂತರ ಪ್ರತಿಪದೆಯನ್ನು ಬಿಟ್ಟು ಇನ್ನೊಂದು ಪ್ರತಿಪದೆಗೆ ತಿಂಗಳಾಯಿತೆಂದೇ ಲೆಕ್ಕ ಹಾಕಬೇಕು. ಅದರ ಮುಂದಿನ ಪ್ರತಿಪದೆಯು ಹೊಸ ತಿಂಗಳ ಮೊದಲನೆಯದಾಗುವದು..”

“ಒಳ್ಳೇದು ಇದು ಕಲಿತು ಪಂಚಾಂಗ ಓದಿ ತಿಳಿದುಕೊಳ್ಳುವವರ ಮಾತಾಯಿತು. ಏನೂ ಅರಿಯದ ಹಳ್ಳಿಗರು ಕೇವಲ ಆಕಾಶ ನೋಡಿ ಲೆಕ್ಕ ಹಾಕುವವರಿಗೆ ಏನು ಹೇಳುವಿರಿ? ಆದುದರಿಂದ ತಾವು ಮಹಾ ಸಾಮರ್ಥ್ಯವುಳ್ಳವರು, ಒಂದು ಕೆಲಸ ಮಾಡಬೇಕು.”

“ಏನದು ಹೇಳು? ಅದನ್ನು ಮಾಡಿಯೇ ತೀರುವೆನು.”

“ಈಗಿನ ನಿಮ್ಮ ಲೆಕ್ಕವು ಎಲ್ಲರಿಗೂ ತೊಂದರೆದಾಯಕ. ಆದುದರಿಂದ ಈಗ ನಡೆದಂತೆ ಹದಿನೈದು ದಿನದ ಶುಕ್ಲಪಕ್ಷ, ಹದಿನೈದು ದಿನದ ಕೃಷ್ಣಪಕ್ಷಗಳನ್ನು ತೆಗೆದೊಗೆದು ಮೂವತ್ತು ದಿನಗಳ ಶುಕ್ಲ ಮೂವತ್ತಿ ದಿನಗಲ ಕೃಷ್ಣ ಪಕ್ಷ ಮಾಡಿಸಿಬಿಡಿರಿ, ಎಲ್ಲವೂ ಸರಿಹೋಗುವದು.”

ಬಾದಶಹನು ಗಡ್ಡದ ಮೇಲೆ ಕೈಯ್ಯಾಡಿಸಿಕೊಂಡು ಆಕಾಶ ನೋಡಿದನು. ಬಗೆಹರಿಯಲಿಲ್ಲ. “ಇದು ಮಾತ್ರ ಶಕ್ಯವಿಲ್ಲ ಬೀರಬಲ್ಲ, ಮನುಷ್ಯರು ನನ್ನ ಮಾತನ್ನು ಕೇಳುವರು ದೇವರು ಕೇಳುವುದಿಲ್ಲ.”

“ಆದುದರಿಂದ ಮಹಾಪ್ರಭೋ ಈ ಗೊಡವೆಗೆ ಹೋಗಬೇಡಿರಿ. ಸೃಷ್ಟಿ ನಿಯಮ ಬದಲಿಸಲು ದೇವನೊಬ್ಬನೇ ಸಮರ್ಥನು, ಮನುಷ್ಯನಲ್ಲ ಬಾದಶಹನು ನಿರುತ್ತರನಾದನು.

ಮುಂದಿನ ಭಾಗ ಓದಿ…

Leave a Comment

Comments

No comments yet. Why don’t you start the discussion?

    Leave a Reply