(ಭಾಗ-28) ಪಡುವಣದ ಪ್ರವಾಸ: ಒಂದು ಪ್ರಯಾಣ, ಸಾವಿರ ನೆನಪುಗಳು!

(ಭಾಗ-28) ಪಡುವಣದ ಪ್ರವಾಸ: ಒಂದು ಪ್ರಯಾಣ, ಸಾವಿರ ನೆನಪುಗಳು!

ಜಿನೀವಾ

ಜಿನೀವಾದಲ್ಲಿ ಮುಖ್ಯವಾಗಿ ನೋಡಬೇಕಾದವೂ ಲೀಗ್ ಆಫ್ ನೇಷನ್ಸ್ ಇಂಟರ್ ನ್ಯಾಷನಲ್‌ ಲೇಬ‌ರ್ ಆರ್‌ಗನೈಸೇಷನ್ ಮತ್ತು ರೆಡ್‌ ಕ್ರಾಸ್ ಸಂಸ್ಥೆಗಳು. ಇವೆಲ್ಲವನ್ನು ನಾವು ಹೊರಗಿನಿಂದಲೇ ವೀಕ್ಷಿಸಬೇಕಾಯಿತು. ಏಕೆಂದರೆ ನಾವು ಅಲ್ಲಿ ಹೋದಾಗ
ಸಂಜೆಯಾಗಿತ್ತು. ಬಿಳಿ ಬಣ್ಣದ ಭಾರಿ ಕಟ್ಟಡಗಳು ಆದರೆ ತುಂಬಾ ಸರಳವಾದ ವಿನ್ಯಾಸ ಪಡೆದ ಕಟ್ಟಡಗಳು. ಅಂತರಾಷ್ಟ್ರೀಯ ಸಭೆಗಳು ನಡೆಯೋವಾಗ ಈ ಕಟ್ಟಡಗಳ ಮೇಲೆ ಸದಸ್ಯ ರಾಷ್ಟ್ರಗಳ ಬಾವುಟಗಳನ್ನೆಲ್ಲ ಹಾಕಿದ್ದಾರೆ. ಆಗ ನೋಡೋಕೆ ಚೆಂದ!”

ಸ್ವಿಡ್ಡರ್‌ಲ್ಯಾಂಡ್ ಪುಟ್ಟ ರಾಷ್ಟ್ರವಾದರೂ ಪ್ರಪಂಚದ ಶಾಂತಿಗೆ ಅದು ನೀಡಿರುವ ಕೊಡುಗೆ ಅಪಾರ. ತಾನು ತಟಸ್ಥವಾಗಿದ್ದುಕೊಂಡು ಇತರ ದೇಶಗಳ ಜನರ ಒಗ್ಗಟ್ಟಿಗೆ ಇದು ಸತತವಾಗಿ ಶ್ರಮಿಸುತ್ತಲೇ ಇದೆ. ಇಲ್ಲಿ ಬೇರೆ ದೇಶಗಳಂತೆ ಸೈನ್ಯವಿಲ್ಲ. ಆದರೆ ಇಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಸೈನಿಕ ತರಬೇತಿ ಪಡೆಯುತ್ತಾರೆ. ರಾಷ್ಟ್ರಕ್ಕೆ ಯುದ್ಧ ಭೀತಿ ಒದಗಿದಾಗ ಕೇವಲ ಒಂದು ದಿನದಲ್ಲಿ 6 ಲಕ್ಷ ಜನರು ಯುದ್ಧ ಸನ್ನದ್ಧರಾಗಬಲ್ಲರು.

ಎರಡನೆಯ ಮಹಾಯುದ್ಧದ ಸಮಯದಲ್ಲಿ ಹಿಟ್ಲರ ಸ್ವಿಡರ್ಲೆಂಡ್‌ಗೆ ನುಗ್ಗುತ್ತೇನೆ ಎಂದು ಬೆದರಿಕೆ ಹಾಕಿದನಂತೆ. ಆಗ ಸ್ವಿಸ್ ಜನರಲ್ ಆಗಿದ್ದ ಹೆನ್ರಿ ಗಿಸಾನ್ ಹೇಳಿದನಂತೆ “ಹಾಗೆ ನುಗ್ಗಿದ್ರೆ ಸೇಂಟ್ ಗೋಥಾರ್ಡ್ ಹಿಡಿದು ಎಲ್ಲ ಸುರಂಗಗಳನ್ನು ನಾಶ ಮಾಡಿ ಬಿಡ್ತವೆ.”

ಪಶ್ಚಿಮ ಮತ್ತು ಪೂರ್ವ ಜರ್ಮನಿಯ ವ್ಯಾಪಾರ ವಹಿವಾಟು ಮುಂತಾದ ಸಮಸ್ತ ಕಾರ್ಯಗಳು ಪರ್ವತಗಳಲ್ಲಿರುವ ಈ ಅನೇಕ ಸುರಂಗ ಮಾರ್ಗಗಳ ಮೂಲಕವೇ ನಡೆಯಬೇಕಾಗಿರುವುದರಿಂದ ಹಿಟ್ಲರ್ ಆಗ ಹಿಂದೇಟು ಹಾಕಿದ.

ಪ್ರಪಂಚದ ಎಲ್ಲ ರಾಷ್ಟ್ರಗಳ ಜನರೂ ಪರಸ್ಪರ ಭೆಟ್ಟಿಯಾಗುವುದು ಜಿನೀವಾದಲ್ಲೇ ವರ್ಷಕ್ಕೊಮ್ಮೆ ನಡೆಯುವ ಸಂಯುಕ್ತ ರಾಷ್ಟ್ರ ಮಂಡಳಿಯ ಸಭೆಯನ್ನು ನೋಡುವುದೇ ಕಣ್ಣಿಗೆ ಹಬ್ಬದಂತೆ ಆಗ ಲೀಗ್ ಆಫ್ ನೇಷನ್ಸ್‌ನ ವಿಸ್ತಾರವಾದ ಆಧುನಿಕ ಸಭಾಂಗಣದಲ್ಲಿ ಎಲ್ಲ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಸೇರಿ ಶಾಂತಿಗಾಗಿ ಹೊಸ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಾರೆ. ಪರಸ್ಪರ ರಾಷ್ಟ್ರಗಳಲ್ಲಿ ಸ್ನೇಹವನ್ನು ಬಿತ್ತಿ ಸಮರದ ಕಾರಣಗಳನ್ನು ನಾಶ ಮಾಡುವುದೇ ಇವರ ಉದ್ದೇಶ ಈ ಸಂಸ್ಥೆಯಲ್ಲಿ ಎಲ್ಲ ರಾಷ್ಟ್ರಗಳ ನೌಕರರು ಇದ್ದಾರೆ. ಈ ಕಟ್ಟಡ ಪ್ರಪಂಚದ ಶಾಂತಿಯ ಸಂಕೇತವಾಗಿ ನಿಂತಿದೆ ಎಂದರೆ ತಪ್ಪಾಗಲಾರದು.

ನಾವು ಅಲ್ಲಿಗೆ ಹೋದ ಸಮಯದಲ್ಲಿ ಇಸ್ರೇಲ್ ಬೇರೆ, ಬೇರೆ ದೇಶದ ಕೆಲವು ಸಂಸ್ಥೆಗಳ ಜನರು ಗುಂಪುಗಳನ್ನು ಕಟ್ಟಿಕೊಂಡು ತಮ್ಮ ಬೇಡಿಕೆ ಈಡೇರಿಕೆಗಾಗಿ ಘೋಷಣೆಗಳನ್ನು ಕೂಗುತ್ತಿದ್ದರು. ಅಲ್ಲಿ ಕೆಲವು ದೇಶದ ನಿರುದ್ಯೋಗಿ ಜನರು ಪ್ರವಾಸಿಗರ ಪರ್ಸ್‌ ಬ್ಯಾಗ್, ಮೊಬೈಲ್‌ಗಳನ್ನು ಕದಿಯುತ್ತಾರೆ ಎಂದು ನಮ್ಮ ಗೈಡ್ ನೀರಜ ಹೇಳಿದ. ಅದರಿಂದ ನಾವೆಲ್ಲರೂ ಬರಿಗೈಯಲ್ಲಿ ಅಲ್ಲಿಗೆ ಹೋಗಬೇಕಾಯಿತು.

ಅಲ್ಲಿಯ ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯೂ ಅಷ್ಟೇ ಮಹತ್ವದ್ದು. ದುಡಿಮೆಗೆ ಸಂಬಂಧಿಸಿದ ಎಲ್ಲ ಶಾಖೆಗಳೂ ಇಲ್ಲಿವೆ. ಕಾರ್ಮಿಕರು ದುಡಿಯುವ ವೇಳೆ ನಿವದ ಮಾಡುವರು. ಅವರ ಸಂಬಳ ಏರಿಕೆ ಮುಂತಾದ ವ್ಯವಸ್ಥೆ ಅವರ ಇನ್ಸೂರೆನ್ಸ್
ಸಮಸ್ಯೆಗಳು ವೃತ್ತಿಯಿಂದ ಉದ್ಭವಿಸಬಹುದಾದಂತಹ ಕಾಯಿಲೆ ಅಪಘಾತಗಳು ಮುಂತಾದುವನ್ನು ತಡೆಗಟ್ಟಲು ಉಪಾಯ ಕಂಡುಹಿಡಿಯುವಿಕೆ ಇಂಥ ಗುರುತರವಾದ ಕಾವ್ಯಗಳು ಇಲ್ಲಿ ರೂಪಿಸಲ್ಪಡುತ್ತವೆ. ಜಗತ್ತಿನ ಕಾರ್ಮಿಕರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಈ ಸಂಸ್ಥೆಯಿಂದ ಲಾಭ ಪಡೆದಿದ್ದಾರೆ.

Genève. Nouveau Musée de la Croix-Rouge et du Croissant-Rouge en dessous du Siège du Comité international de la Croix-Rouge. Geneva. New Red Cross and Red Crescent Museum under the Headquarters of the International Committee of the Red Cross.

ಜಿನೀವಾ ಪ್ರಜೆಯೊಬ್ಬ 1864 ರಲ್ಲಿ ರೆಡ್ ಕ್ರಾಸ್ ಸಂಸ್ಥೆಯನ್ನು ಸ್ಥಾಪಿಸಿದನಂತೆ. ಈ ಬಗ್ಗೆ ಜಿನೀವಾದವರಿಗೆ ಹೆಮ್ಮೆ. ಈಗ ರೆಡ್ ಕ್ರಾಸ್ ಪ್ರಪಂಚದೆಲ್ಲೆಡೆ ತನ್ನ ಶಾಖೆಗಳನ್ನು ವಿಸ್ತರಿಸಿಕೊಂಡ ಸೇವಾ ಸಂಸ್ಥೆಯಾಗಿದೆ. ಇದರಂತೆಯೇ ಜಿನೀವಾದಲ್ಲಿ ಅನೇಕ ಅಂತರರಾಷ್ಟ್ರೀಯ ಸೇವಾ ಹಾಗೂ ಪರಿಹಾರ ಸಂಸ್ಥೆಗಳಿವೆ.

“ಜಿನೀವಾದಲ್ಲಿ ನೋಡಲೇಬೇಕಾದ ಇನ್ನೊಂದು ಪ್ರಸಿದ್ದಿ ಪಡೆದ ಸ್ಥಳವಿದೆ. ಅದುವೇ “ಹೂ ಗಡಿಯಾರ” (flower clock) ಹೂ ಗಡಿಯಾರ ಸುಮಾರು ಇಪ್ಪತ್ತು ಅಡಿ ವ್ಯಾಸವಿದೆ. ಇದನ್ನು ಇಪ್ಪತ್ತು ಸಹಸ್ರ ಹೂ ಗಿಡಗಳಿಂದ ಸಿದ್ದಗೊಳಿಸಿದ್ದಾರೆ. ಸಂಖ್ಯೆಗಳಿಗೆ ಬೂದು ಬಣ್ಣದ ಎಲೆಗಳ ಗಿಡಗಳಿವೆ. ಮಧ್ಯೆ ಕೆಂಪು ಉಳಿದ ಭಾಗ ಹಸಿರು. ಹೊರ ಆವರಣದಲ್ಲಿ ಸುತ್ತಲೂ ಕಾಡು ತಾವರೆಗಳು. ಗಡಿಯಾರದ ಸೆಕೆಂಡಿನ ಮುಳ್ಳೂ ತಿರುಗುತಿತ್ತು. ನಾವು ಹೋದಾಗ ರಾತ್ರಿ ಎಂಟು ಗಂಟೆ ಹದಿನೈದು ನಿಮಿಷ ಆ ಗಿಡಗಳನ್ನು ದಿನಾಲು ಟ್ರಿಮ್ ಮಾಡುತ್ತಾರೆ. ಇಲ್ಲದಿದ್ದರೆ ಮುಳ್ಳಿಗೆ ಗಿಡಗಳು ತಗಲುತ್ತವೆ. ಗಡಿಯಾರದ ಹಿಂದೆ ಹಸಿರು ಪೊದೆಗಳಿವೆ. ಬಹುಶಃ ಅದರೊಳಗೆ ಎಲ್ಲೋ ಗಡಿಯಾರದ ಯಂತ್ರಗಳಿರಬೇಕು. ನಾವು ಹೂ ಗಡಿಯಾರ ಎದುರಿಗೆ ನಿಂತು ಫೋಟೋ ತೆಗೆಸಿಕೊಂಡೆವು.

ನಂತರ ನಾವು “ಜೀನಿವಾ ಸರೋವರ ನೋಡಲು ಹೋದೆವು. ಸರೋವರ ತುಂಬಾ ವಿಶಾಲವಾಗಿತ್ತು. ರಾತ್ರಿ 8-30. ಆದರೂ ಇನ್ನೂ ಬೆಳಕೇ ಇತ್ತು. ಸರೋವರದ ದಂಡೆಯಲ್ಲಿ ನಿಂತು ಫೋಟೋ ತೆಗೆಸಿಕೊಂಡೆವು. ಅಲ್ಲಿ ಸುತ್ತಲೂ ಸುಂದರವಾದ ಉದ್ಯಾನವನ ಇತ್ತು. ಇಲ್ಲಿನ ಸರೋವರಗಳಲ್ಲಿ ಬಿಳಿ ಹಂಸಗಳೂ ಯಥೇಚ್ಛವಾಗಿ ಸಂಚರಿಸುತ್ತವೆ. ಇದನ್ನು ಲಂಡನ್‌ನಲ್ಲಿ ಥೇಮ್ಸ್ ನದಿ ದಂಡೆಯಲ್ಲೂ ಕಾಣಬಹುದು. ಈ ಹಂಸಗಳ ಬಗ್ಗೆ ಸ್ವಿಸ್ ಜನರಿಗೆ ಭಾರಿ ಮೋಹ. ಸರೋವರದಲ್ಲಿ ವಿಹಾರ ಹೋಗಬಹುದು. ಜನರು ವಾರದ ಕೊನೆಯಲ್ಲಿ ಇಂಥ ಲಾಂಚುಗಳನ್ನು ಬಾಡಿಗೆಗೆ ತೆಗೆದುಕೊಂಡು ದಿನಗಟ್ಟಲೇ ಸರೋವರದ ಮೇಲೆ ಸಂಸಾರ ಸಮೇತ ವಿಹಾರ ಹೋಗುತ್ತಾರೆ. ಲಾಂಚುವಿನಲ್ಲಿ ಅಡಿಗೆ ಮಾಡಿಕೊಳ್ಳುವ ವ್ಯವಸ್ಥೆ ಇದೆ. ಮಲಗಲು ಬೆಡ್‌ರೂಮುಗಳಿವೆ. ಟಾಯಿಲೆಟ್‌ಗಳ ಸೌಕರ್ಯವಿದೆ. ಸರೋವರದ ಸುತ್ತಲೂ ಜಗಮಗಿಸುವ ವಿದ್ಯುತ್ ಬಲ್ಬುಗಳಿಂದ ಅಲಂಕರಿಸಲಾಗಿತ್ತು. ಸರೋವರದಲ್ಲಿ ಸಂಚರಿಸುವ ಹಂಸಗಳ ಬಗ್ಗೆ ಸ್ವಿಸ್ ಜನರಿಗೆ ವಿಪರೀತ ಮೋಹ. ಒಮ್ಮೆ ಜೀನವಾದ ಸರೋವರ
ಹಿಮದಿಂದ ಗಟ್ಟಿಯಾದಾಗ ಹಂಸಗಳಿಗೆ ಆಹಾರವಿಲ್ಲವೆಂದು ಟಿವಿಯಲ್ಲಿ ಪ್ರಸಾರ ವಾಯಿತಂತೆ. ತಕ್ಷಣ ಟನ್‌ಗಟ್ಟಲೇ ಆಹಾರ ತೆಗೆದುಕೊಂಡು ಜೀನಿವಾದ ಮಕ್ಕಳು ದೊಡ್ಡವರು ಸರೋವರದ ಬಳಿ ನೆರೆದರಂತೆ, ಅಲ್ಲಿಯ ಜನರು ಮನುಷ್ಯರಾಗಲಿ, ಪ್ರಾಣಿಗಳಿಗಾಗಲೀ ಅವುಗಳ ಪ್ರಾಣಕ್ಕೆ ತುಂಬಾ ಮಹತ್ವ ಕೊಡುತ್ತಾರೆ. ಯಾವುದರದೋ ಅಪಘಾತವಾಗಲಿ, ಯಾರೇ ಎಚ್ಚರ ತಪ್ಪಲಿ, ಏನೇ ಆದರೂ ತಕ್ಷಣ ಸ್ಪಂದಿಸುತ್ತಾರೆ. ಕೂಡಲೇ ಆಂಬುಲೆನ್ಸ್‌ಗೆ ಫೋನು ಮಾಡುತ್ತಾರೆ! ಕೂಡಲೇ ಅವರಿಗೆ ಟ್ರೇಟ್‌ಮೆಂಟು ಕೊಟ್ಟು ಅವರನ್ನು ಬದುಕಿಸಲು ಎಲ್ಲ ಪ್ರಯತ್ನವನ್ನು ಮಾಡುತ್ತಾರೆ. ಅವರ ಸಂಬಂಧಿಗಳೋ ಗೆಳೆಯರೋ ಬರುವವರೆಗೆ ಕಾಯುವುದಿಲ್ಲ. ಅದೇ ನಮ್ಮ ದೇಶದಲ್ಲಿ ಅಪಘಾತವಾಗಿ ಒದ್ದಾಡುತ್ತಾ ಬಿದ್ದರೂ ಯಾರೂ ಸಹಾ ಸಮಯಕ್ಕೆ ಬರುವುದಿಲ್ಲ. ಬದಲಾಗಿ ಮೊಬೈಲ್‌ನಲ್ಲಿ ವಿಡಿಯೋ ಫೋಟೋ ತೆಗೆಯುತ್ತಿರುತ್ತಾರೆ. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವುದು, ಹಸಿದವರಿಗೆ ಊಟ ಹಾಕುವುದು ಪುಣ್ಯದ ಕೆಲಸ.

ಆಗಸ್ಟ್ 11 – ಪ್ಯಾರಿಸ್

ಜೀನಿವಾದಿಂದ ಪ್ಯಾರಿಸ್ಸಿಗೆ ಸುಮಾರು ಹತ್ತು ಗಂಟೆಗಳ ಪಯಣ. ನಾವು ಜೀನಿವಾದ ಹೊರ ವಲಯದಲ್ಲಿರುವ ಹೋಟೆಲಿನಲ್ಲಿ ಉಳಿದುಕೊಂಡಿದ್ದೆವು. ಬೆಳಿಗ್ಗೆ ಎಂಟಕ್ಕೆ ಜೀನಿವಾ ಬಿಟ್ಟೆವು. ಪರ್ವತದ ಕಣಿವೆಗಳನ್ನು ಹಾದು ಫ್ರಾನ್ಸಿನ ಸಮತಟ್ಟು ಪ್ರದೇಶಕ್ಕೆ ಬರುತ್ತಿದ್ದ ಹಾಗೆಯೇ ಹವೆ ಬದಲಾವಣೆಯೂ ನಮಗೆ ಗೋಚರವಾಯಿತು. ಇಲ್ಲಿ ಸ್ವಿಡ್ಡರ್ಲೆಂಡಿನ ಚಳಿ. ಇಲ್ಲಿ ಬಿಸಿಲು ನಮ್ಮ ದೇಶದ ಹಾಗೆಯೇ.

ದಾರಿಯ ಇಕ್ಕೆಲಗಳಲ್ಲಿ ದ್ರಾಕ್ಷಿ, ಕಿತ್ತಳೆ, ಆಲಿವ್ ಮಲ್‌ಬರಿ ತೋಟಗಳು ಕಣ್ಣಿಗೆ ಬಿದ್ದವು. ಗೋದಿ ತೆನೆಗಳನ್ನು ಕಟ್ ಮಾಡಿ ರೌಂಡ್ ಆಗಿ ಸುರುಳಿ ಮಾಡಿ ಸುತ್ತಿ ಇಟ್ಟಿದ್ದರು. ಇಲ್ಲೂ ಕೂಡಾ ಹೊಲ ತೋಟಗಳ ಕೆಲಸ ಯಾಂತ್ರೀಕೃತಗೊಂಡಿರುವುದನ್ನು ಕಣ್ಣಾರೆ ಕಾಣಬಹುದಿತ್ತು.ದಾರಿ ಮಧ್ಯೆ ಒಂದು ಊರಿನಲ್ಲಿ ನಾವು ಊಟಕ್ಕಿಳಿದೆವು. ಅದೊಂದು ಮಾಲ್ ಆಗಿತ್ತು. ಅಲ್ಲಿ ನಾವು ಊಟ ಮಾಡಲಿಲ್ಲ. ಸ್ಯಾಂಡ್‌ವಿಚ್ ತಿಂದು ಜ್ಯೂಸ್ ಕುಡಿದೆವು. ವಾಶ್ ರೂಂ ಉಪಯೋಗಿಸಿಕೊಂಡು ನಮ್ಮ ಕೋಚ್ ಹತ್ತಿ ಹೊರಟೆವು. ಮುಂದೆ ಬಾರಿ ಹುಲ್ಲುಗಾವಲುಗಳು ಬಿಳಿ ಹಾಗೂ ಕಾವಿ ಬಣ್ಣದ ದೊಡ್ಡ ಹಸುಗಳು ಕಣ್ಣಿಗೆ ಬಿದ್ದವು. ಅದರಿಂದಲೇ ಇರಬೇಕು. ಫ್ರಾನ್ಸಿನಲ್ಲಿ ಮುನ್ನೂರು ಬಗ್ಗೆಯ ಚೀಸ್‌ಗಳಿವೆಯಂತೆ. ಅದೇ ರೀತಿ ಫ್ರೆಂಚ್ ರೆಡ್ ವೈನ್ ಸಹ ಅಷ್ಟೇ ಜಗತ್ ಪ್ರಸಿದ್ಧವಾದದ್ದು.

ನಾವು ಮುಂದೆ ಸಾಗುತ್ತಾ ದಾರಿಯಲ್ಲಿ ಹೋಗುವಾಗ ಅತಿ ಉದ್ದವಾದ ಸುರಂಗ ಮಾರ್ಗ ಸಿಗುತ್ತದೆ. ನನಗೆ ತಿಳಿದಮಟ್ಟಿಗೆ ಇದರ ಉದ್ದ ತುಂಬಾ ಇರಬೇಕು. ಆ ಉದ್ದವಾದ ಸುರಂಗದ ಮಧ್ಯೆ ಮಧ್ಯೆ ಟೆಲಿಪೋನ್‌ಗಳಿಟ್ಟಿದ್ದಾರೆ. ದಾರಿಹೋಕರಿಂದ
ದಾರಿ ಮಧ್ಯೆ ಏನಾದರೂ ತೊಂದರೆಯಾದರೆ, ಅಪಘಾತ ಸಂಭವಿಸಿದರೆ ಆ ಪೋನ್ ರಿಸೀವರನ್ನು ಎತ್ತಿಕೊಂಡರೆ ಸಾಕಂತೆ ಕೂಡಲೇ ಸಂಬಂಧಪಟ್ಟವರು. ನಮ್ಮ ಸಹಾಯಕ್ಕೆ ಧಾವಿಸಿ ಬರುತ್ತಾರಂತೆ. ಇದನ್ನು ಕೇಳಿ ತುಂಬಾ ಸಂತೋಷವಾಯಿತು. ಆ ಉದ್ದದ ಕತ್ತಲೆಯ ಸುರಂಗದಲ್ಲಿ ಸಾವಿರಾರು ವಿದ್ಯುತ್ ಬಲ್ಟ್ಗಳನ್ನು ಹಚ್ಚಿದ್ದಾರೆ. ನಾವು ಅಲ್ಲಿ `ಸಾಗುವಾಗ ಅತ್ಯಂತ ಅದ್ಭುತವಾದ ಅನುಭವವನ್ನು ಅನುಭವಿಸಿದೆವು.

ಮುಂದೆ ನಾವು ಸಾಗುತ್ತಿದ್ದಂತೆ ಸ್ವಿಡ್ಡರ್ಲೆಂಡಿನ ಗಡಿ ಮುಟ್ಟುತ್ತಿದ್ದಂತೆ ದೂರದಲ್ಲಿರುವ ಫ್ರಾನ್ಸಿನ ಗಡಿಭಾಗದ ಮಹಾದ್ವಾರ ಕಾಣುತ್ತಿತ್ತು. ನಿಜವಾಗಲೂ ಇದು ತುಂಬಾ ಕುತೂಹಲಕಾರಿಯಾಗಿತ್ತು. ಪ್ಯಾರಿಸ್ ಹತ್ತಿರ ಬರುತ್ತಿದ್ದಂತೆ ದಟ್ಟ ಕಾಡುಗಳು ಹಾಗೂ ಪುಟ್ಟ ಹಸಿರು ಗುಡ್ಡಗಳು ಕಾಣತೊಡಗಿದವು. ಫ್ರೆಂಚ್ ಜನರಿಗೆ ಈ ಹುಲ್ಲುಗಾವಲು ಗುಡ್ಡಗಾಡು ಇವುಗಳಲ್ಲಿ ಓಡಾಡುವುದೆಂದರೆ ಬಲುಪ್ರಿಯ. ಫ್ರಾನ್ಸಿನ ಕಲಾವಿದರು ಪ್ರಕೃತಿಯನ್ನು ತಮ್ಮ ಚಿತ್ರಗಳಲ್ಲಿ ಸೆರೆಹಿಡಿದಿದ್ದಾರೆ. ದೂರದಿಂದ ಪ್ಯಾರಿಸ್ ಕಾಣಿಸತೊಡಗಿದಾಗ ರಸ್ತೆಗಳು ವಿಶಾಲವಾದವು. ಒಂದೊಂದು ರಸ್ತೆಯೂ ನಾಲ್ಕು ವಾಹನಗಳು ಒಮ್ಮೆಲೇ ಚಲಿಸುವಷ್ಟು ಅಗಲವಾಗಿದೆ. ಪ್ಯಾರಿಸಿಗೆ ಹೋಗುವ ವಾಹನಗಳ ಹಾದಿ ಬಲಗಡೆಗೆ ಎಡಗಡೆಗೆ ಪ್ಯಾರಿಸಿನಿಂದ ಹೊರ ಹೋಗುವ ಮಾರ್ಗ. ವಾಹನಗಳ ಸಂಖ್ಯೆ ಎಣಿಸಲಸಾಧ್ಯ. ಪರಾರಿ, ಬೆಂಜು, BMW ಗಳಂತೆ ಭಾರಿ ಕಾರುಗಳು ಪ್ಯಾರಿಸ್ ಹೊರವಲಯದಲ್ಲಿ ವಾಹನ ತೆರಿಗೆ ಕಸ್ಟಮ್ಸ್ ಮುಂತಾದುವನ್ನು ಕೊಡಬೇಕು. ಅದರ ನಂತರವೇ ವಾಹನ ಮುಂದುವರಿಯುತ್ತದೆ.

ಪ್ಯಾರಿಸ್ ಯುರೋಪಿನಲ್ಲಿಯೇ ತುಂಬಾ ಸುಂದರವಾದ ನಗರ. ಬೃಹತ್ ಕಟ್ಟಡಗಳಿದ್ದರೂ ಸುವ್ಯವಸ್ಥಿತವಾಗಿ ರಚಿತವಾಗಿರುವ ರಸ್ತೆಗಳು ಪ್ರತಿ ರಸ್ತೆಗಳಲ್ಲೂ ಮರಗಳ ಸಾಲು. ನಗರದ ಮಧ್ಯೆ ಹರಿಯುವ ಗೇನ್ ನದಿ ಪ್ಯಾರಿಸ್‌ನ ಜೀವನಾಡಿ. ಇದ್ದ ಹಾಗೆ ಇದರ ನೀಲಿ ನೀರು ನಗರಕ್ಕೆ ಶೋಭೆ ಕೊಡುವುದು ಮಾತ್ರವಲ್ಲದೆ ಸಂಚಾರ ಮತ್ತು ಮನರಂಜನೆ ಇವುಗಳಿಗೂ ಉಪಯುಕ್ತವಾಗಿದೆ. ಈ ನದಿಗೆ ಅಪೂರ್ವ ಶೈಲಿಯಲ್ಲಿ 37 ಸೇತುವೆಗಳನ್ನು ನಿರ್ಮಿಸಿದ್ದಾರೆ.

ಪ್ಯಾರಿಸ್ ಒಂದು ಚಿಕ್ಕ ಚೊಕ್ಕದಾದ ನಗರ. ರಸ್ತೆಯಲ್ಲಿ ನಮ್ಮ ಬಸ್ ಚಲಿಸುತ್ತಿರುವಾಗ ಪಾರಂಪರಿಕ ಮಜಭೂತ ಕಟ್ಟಡಗಳು ಅದರ ಎದುರಿಗೆ ಆಯಾತಾಕಾರದ ಸಿಮೆಂಟಿನ ಹೂ ಕುಂಡಗಳೂ ಕುಂಡಗಳಲ್ಲಿ ಅರಳಿರುವ ಥರಾವರಿ ಬಣ್ಣದ ಮುದ್ದಾದ ಹೂಗಳು ನೋಡಿದಷ್ಟು ಮನಕ್ಕೆ ಮುದ ಕೊಡುತ್ತಿತ್ತು. ಈ ಸುಂದರ ನಗರದ ನಿರ್ಮಾಣದ ಯೋಜನೆಯನ್ನು ನೆಪೋಲಿಯನ್ ಬೋನಪಾರ್ಟಿ ಯೋಜಿಸಿದ್ದನಂತೆ. ಅವನ ಈ ಬುದ್ಧಿವಂತ ಯೋಚನೆ ಮತ್ತು ಪರಿಶ್ರಮದ ಪರಿಣಾಮ, ಈ ಅತ್ಯಂತ ಸಮರ್ಪಕ ನಗರ ನಿರ್ಮಾಣವಾಯಿತಂತೆ. ನಗರದ ಕೆಲವೊಂದು ಪ್ರದೇಶಗಳಲ್ಲಿ ಮಾತ್ರ ಜನಸಂದಣಿ ಇರುತ್ತದೆ.
ಬರೀ ಫ್ಯಾಶನ್ ಮಾತ್ರವಲ್ಲ ಕಲೆ, ಸಾಹಿತ್ಯ ವಿಚಾರಗಳಲ್ಲೂ ಸುಮಾರು ಹದಿನೆಂಟನೇ ಶತಮಾನದಿಂದಲೇ ಪ್ಯಾರಿಸ್ ಪ್ರಸಿದ್ಧ. ಪ್ಯಾರಿಸ್‌ನಲ್ಲಿ ಆರಂಭವಾದ ಫ್ಯಾಶನ್ ಜಗತ್ತಿನಲ್ಲೆಡೆ ಹಬ್ಬುತ್ತಿದ್ದ ಹಾಗೆ ಇಲ್ಲಿನ ಸಾಹಿತ್ಯ ಹಾಗೂ ಚಿಂತನೆಗಳು ಎಲ್ಲೆಡೆ ಪಸರಿಸುತ್ತಿದ್ದವು.

ನಾವು ಪ್ಯಾರಿಸ್ಸಿಗೆ ಸಾಯಂಕಾಲ ಮುಟ್ಟಿದ್ದೆವು. ಅಂದೇ ಸಂಜೆ ಐಫೇಲ್ ಟವರ್ ನೋಡಲು ಹೊರಟೆವು. ಪ್ಯಾರಿಸ್ ನಗರವೆಂದರೆ ಭೋಗ ವೈಭವಗಳ ರಾಜಧಾನಿ. ಬೆಡಗಿನ ಬೆಳಕಿನ ವಿಲಾಸಗಳ ಮಾಯಾನಗರಿ, ಸಾಹಿತಿಗಳ ಕಲಾವಿದರ ಶ್ರೀಮಂತರ ಕ್ರಾಂತಿಕಾರಿಗಳ ಬೀಡು.

By-ಶಾಲಿನಿ ಗಾಂವಕರ್

ಮುಂದಿನ ಭಾಗ ಓದಿ…

Leave a Comment

Comments

No comments yet. Why don’t you start the discussion?

    Leave a Reply